ಉಡುಪಿ ಜಿಲ್ಲೆಯ ಪ್ರಥಮ ಮಂಗಳಮುಖಿ ಶಿಕ್ಷಕಿ ಮಣಿಪಾಲದ ಕೃಷ್ಟಿಕಾ!
ಲಿಂಗ ತಾರತಮ್ಯ ಮೀರಿದ ಸಾಧನೆ ತೋರಿದ ತೃತೀಯ ಲಿಂಗಿ

ಮಣಿಪಾಲ: ಲಿಂಗತ್ವ ಯಾವತ್ತೂ ಸಾಧನೆಗೆ ಅಡ್ಡಿ ಅಲ್ಲ. ಅದನ್ನು ಮೀರಿ ಸಾಧಿಸಬಹುದು ಎಂಬುದನ್ನು ಬಹಳಷ್ಟು ಮಂದಿ ತೋರಿಸಿಕೊಟ್ಟಿದ್ದಾರೆ. ಆದರೆ ತೃತೀಯ ಲಿಂಗಿಯಾಗಿ ಈ ಸಮಾಜದಲ್ಲಿ ಬದುಕು ಕಟ್ಟುವುದು ಅಷ್ಟು ಸುಲಭದ ಮಾತಲ್ಲ. ಸಮಾಜದಲ್ಲಿ ಅವರನ್ನು ನೋಡುವ ಮನಸ್ಥಿತಿ ಇಂದಿಗೂ ಬದಲಾಗಿಲ್ಲ. ಇಂತಹ ಸಮಯದಲ್ಲಿ ಲಿಂಗ ತಾರತಮ್ಯದ ಅಡೆತಡೆಗಳನ್ನು ಮೀರಿ ತೃತೀಯ ಲಿಂಗಿಯೊಬ್ಬಳು ಸಮಾಜದ ಮುಖ್ಯವಾಹಿನಿಗೆ ಬಂದು ಸಾಧನೆ ಮಾಡಿ ತೋರಿಸಿದ್ದಾರೆ. ಉಡುಪಿ ಜಿಲ್ಲೆಯ ಮಣಿಪಾಲದ ಕೃಷ್ಟಿಕಾ ಜೀವನದಲ್ಲಿ ಎದುರಾದ ಎಲ್ಲ ಸವಾಲುಗಳನ್ನು ಮೆಟ್ಟಿ ನಿಂತು ಸಾಧನೆ ಮಾಡಿದ್ದಾರೆ.
30ರ ಹರೆಯದ ಕೃಷ್ಟಿಕಾ ಉಡುಪಿ ಜಿಲ್ಲೆಯ ಮೊದಲ ಮಂಗಳಮುಖಿ ಶಿಕ್ಷಕಿಯಾಗಿ ಕಾರ್ಕಳ ತಾಲೂಕಿನ ಬೈಲೂರಿನಲ್ಲಿರುವ ಖಾಸಗಿ ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಕಷ್ಟಪಟ್ಟು ಉನ್ನತ ಶಿಕ್ಷಣ ಪಡೆದು ಇದೀಗ ಶಿಕ್ಷಕಿಯಾಗಿರುವ ಕೃಷ್ಟಿಕಾ ಸಮಾಜದಲ್ಲಿನ ಇತರರಿಗೂ ಮಾದರಿಯಾಗಿದ್ದಾರೆ.
ಮಂಗಳಮುಖಿಯರನ್ನು ಸಮಾಜದಲ್ಲಿ ಬೇರೆಯದೇ ದೃಷ್ಟಿಯಲ್ಲಿ ನೋಡಲಾಗುತ್ತದೆ. ಅವರಿಗೆ ಇಂದಿಗೂ ಸರಿಯಾದ ಗೌರವ ಸಿಗುತ್ತಿಲ್ಲ. ಅವರ ಬಗ್ಗೆ ಬಹುತೇಕ ಮಂದಿಗೆ ಕೀಳರಿಮೆ ಇದೆ. ಇಂತಹ ಅವಮಾನ, ತಾತ್ಸಾರ ಭಾವನೆಯ ಮಧ್ಯೆಯೂ ಕೃಷ್ಟಿಕಾ ಎಲ್ಲರಿಗೂ ಸಮಾನವಾಗಿ ಬದುಕನ್ನು ಕಟ್ಟಿಕೊಳ್ಳುತ್ತಿದ್ದಾರೆ. ಆ ಮೂಲಕ ಸಮಾಜವೇ ಇವರನ್ನು ಗೌರವ ಭಾವದಿಂದ ನೋಡುವ ರೀತಿ ಬದಲಾವಣೆ ಗಾಳಿ ಬೀಸುತ್ತಿದೆ.
ಡಿಎಡ್ ಪದವೀಧರೆ: ಇವರು ಮಣಿಪಾಲದಲ್ಲೇ ಪ್ರಾಥಮಿಕ, ಪ್ರೌಢ ಶಿಕ್ಷಣ ಪೂರೈಸಿ, ಉನ್ನತ ಶಿಕ್ಷಣವನ್ನೂ ಪಡೆದಿದ್ದಾರೆ. ಮಣಿಪಾಲದ ಮಾಧವ ಪೈ ಮೆಮೋರಿಯಲ್ ಕಾಲೇಜಿನಲ್ಲಿ ಬಿಕಾಂ. ಪದವಿ ಪಡೆದು, ಮಣಿಪಾಲ ಮಾಹೆ ವಿ.ವಿ.ಯಲ್ಲಿ ಎಂಕಾಂ. ಸ್ನಾತಕೋತ್ತರ ಪದವಿಯನ್ನು ಪೂರೈಸಿದ್ದಾರೆ. ಬಾಲ್ಯದಿಂದಲೂ ಶಿಕ್ಷಕಿಯಾಗುವ ಕನಸಿನ ಗುರಿಯೊಂದಿಗೆ ಧಾರವಾಡ ವಿ.ವಿ. ಭಟ್ಕಳದಲ್ಲಿ ಡಿಎಡ್ ಪದವಿಯನ್ನೂ ಪಡೆದಿದ್ದಾರೆ. ಆ ಮೂಲಕ ಅವರು ತನ್ನ ಬಾಲ್ಯದ ಕನಸನ್ನು ನನಸು ಮಾಡಿಕೊಂಡಿದ್ದಾರೆ.
ಪುರುಷನಾಗಿ ಹುಟ್ಟಿದ ಕೃಷ್ಟಿಕಾ ಬೆಳೆಯುತ್ತ ತಾನು ಹೆಣ್ಣು ಎಂಬ ಅರಿವಿಗೆ ಬಂದು ಶಸ್ತ್ರಚಿಕಿತ್ಸೆಗೆ ಒಳಗಾದರು. ತಾನು ಇತರ ಮಂಗಳಮುಖಿಯರಂತೆ ಬದುಕದೇ ಉನ್ನತ ವ್ಯಾಸಂಗ ಮಾಡಿ ಶಿಕ್ಷಕಿಯಾಗುವ ಗುರಿಯೊಂದಿಗೆ ಹೆಜ್ಜೆ ಇಟ್ಟರು. ಇವರಿಗೆ ಶಿಕ್ಷಣ ಕ್ಷೇತ್ರ ಬಹಳ ಅಚ್ಚುಮೆಚ್ಚು. ಇವರೀಗ ಒಂದರಿಂದ ಎಂಟನೇ ತರಗತಿಯವರೆಗೆ ಮಕ್ಕಳಿಗೆ ಪಾಠ ಮಾಡುತ್ತಿದ್ದಾರೆ. ಇಂಗ್ಲಿಷ್ ವಿಷಯವನ್ನು ಬೋಧಿಸುವ ಈಕೆ ಶಿಕ್ಷಕಿಯಾಗಿಯೂ ಸೈ ಎನಿಸಿಕೊಂಡಿದ್ದಾರೆ.
‘ಸಾಮಾನ್ಯವಾಗಿ ಮಂಗಳಮುಖಿ ಅಂದರೆ ಎಲ್ಲರಿಗೂ ಕೀಳು ಭಾವನೆ ಇದೆ. ಆದರೆ ನಾನು ಆ ರೀತಿಯ ಅಲ್ಲ ಎಂಬುದು ತೋರಿಸಬೇಕಿತ್ತು. ಅದನ್ನು ಮಾಡಿ ತೋರಿಸಿದ್ದೇನೆ. ನನ್ನ ಸಾಧನೆ ಬಗ್ಗೆ ನನಗೆಯೇ ತುಂಬಾ ಹೆಮ್ಮೆ ಎನಿಸುತ್ತದೆ. ನನ್ನ ಗೆಳೆಯರು ಕೂಡ ತುಂಬಾ ಖುಷಿ ಪಡುತ್ತಿದ್ದಾರೆ. ಇಂತಹ ಅವಕಾಶ ಸಿಕ್ಕಿದ್ದರೆ ಅವರೂ ಸಾಧನೆ ಮಾಡುತ್ತಿದ್ದರು. ಈ ಕೊರಗು ಅವರೆಲ್ಲರಲ್ಲೂ ಇದೆ’ ಎಂದು ಕೃಷ್ಟಿಕಾ ತಿಳಿಸಿದರು.
ಬಹುತೇಕ ಸಂಸ್ಥೆಗಳು ಕೆಲಸ ನೀಡಲಿಲ್ಲ!
ಕೃಷ್ಟಿಕಾ ಎಂ.ಕಾಂ ಮುಗಿದ ಬಳಿಕ ಶಿಕ್ಷಕಿ ವೃತ್ತಿ ಮಾಡಿಕೊಂಡಿದ್ದರು. ಅವರು ಬಿಎಡ್ ಮುಗಿಸಿ, ಪುರುಷನಾಗಿಯೇ ಮತ್ತೆ ಎರಡು ವರ್ಷ ಶಿಕ್ಷಕನಾಗಿ ಕೆಲಸ ಮಾಡಿದ್ದರು. ಬಳಿಕ ಶಸ್ತ್ರಚಿಕಿತ್ಸೆ ಮಾಡಿಕೊಂಡು ಮಂಗಳಮುಖಿಯಾದರು. ಮುಂದೆಯೂ ತಾನು ಶಿಕ್ಷಣ ಕ್ಷೇತ್ರದಲ್ಲೇ ಇರಬೇಕು ಎಂಬುದು ಅವರ ಆಸೆಯಾಗಿತ್ತು.
‘ಮಂಗಳಮುಖಿಯರೆಂದರೆ ಭಿಕ್ಷೆ ಬೇಡುತ್ತಾರೆ ಅಥವಾ ಲೈಂಗಿಕ ಕಾರ್ಯಕರ್ತರಾಗಿರುತ್ತಾರೆ ಎಂಬುದೇ ಎಲ್ಲರ ಭಾವನೆ. ಅದನ್ನು ದೂರ ಮಾಡಲು ನಾನು ಮಂಗಳಮುಖಿ ಶಿಕ್ಷಕಿಯಾಗಿ ಕೆಲಸ ಮಾಡಲು ನಿರ್ಧರಿಸಿದೆ. ಕೆಲಸ ಹುಡುಕುವಾಗ ಹಲವು ಸಂಸ್ಥೆಗಳು ನಾನು ಮಂಗಳಮುಖಿ ಎಂಬ ಕಾರಣಕ್ಕೆ ತಿರಸ್ಕರಿಸಿದವು. ಆದರೆ ಕಾರ್ಕಳದ ಬೈಲೂರು ಶಾಲೆ ನನಗೆ ಕೆಲಸ ಕೊಟ್ಟಿತು. ಪ್ರಸಕ್ತ ಕಾರ್ಯನಿರ್ವಹಿಸುವ ಶಿಕ್ಷಣ ಸಂಸ್ಥೆ ಆಡಳಿತ ಮಂಡಳಿ, ಮುಖ್ಯ ಶಿಕ್ಷಕರು, ಸಹ ಶಿಕ್ಷಕರು ಅಗತ್ಯ ಪ್ರೋತ್ಸಾಹ, ಮಾರ್ಗದರ್ಶನ ನೀಡುತ್ತಿದ್ದಾರೆ’ ಎನ್ನುತ್ತಾರೆ ಕೃಷ್ಟಿಕಾ
ಮಂಗಳಮುಖಿಯರಿಗೆ ಸಮಾಜದಲ್ಲಿ ಸಮಾನ ಅವಕಾಶಗಳು ಲಭ್ಯವಾದರೆ ಎಲ್ಲರೂ ಮುಖ್ಯವಾಹಿನಿಗೆ ಬರಲು ಸಾಧ್ಯವಾಗುತ್ತದೆ. ಆದುದರಿಂದ ಸಮಾಜ ಮಂಗಳಮುಖಿಯರ ಕುರಿತ ಭಾವನೆಯನ್ನು ಬದಲಾಯಿಸಿ ಅವರಿಗೂ ಅವಕಾಶ ನೀಡಬೇಕು. ನನಗೆ ಮುಂದಿನ ದಿನಗಳಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಮತ್ತಷ್ಟು ಸಾಧನೆ ಮಾಡಬೇಕೆಂಬ ಗುರಿ ಇದೆ. ಅದಕ್ಕೆ ಎಲ್ಲರ ಸಹಕಾರ ಬೇಕು.
-ಕೃಷ್ಟಿಕಾ, ಮಂಗಳಮುಖಿ ಶಿಕ್ಷಕಿ







