ರೋಲ್‌ಬ್ಯಾಕ್ ಆಯ್ಕೆಯೇ ಗೊತ್ತಿಲ್ಲ: ಸೂಕ್ಷ್ಮ ಪ್ರದೇಶಗಳ ಮತದಾರರಿಗೆ ಮಾಹಿತಿ ತಲುಪಿಸುವಲ್ಲಿ ಚುನಾವಣಾ ಆಯೋಗದ ವೈಫಲ್ಯ

ಬೆಂಗಳೂರು : ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯಲ್ಲಿ ಎಎಸ್‌ಡಿಡಿಒ ಪಟ್ಟಿಗೆ ಸೇರ್ಪಡೆಯಾದ ಅರ್ಹ ಮತದಾರರ ಹೆಸರುಗಳನ್ನು ಪರಿಶೀಲಿಸಿ, ತಪ್ಪಾಗಿ ವರ್ಗೀಕರಿಸಿದ್ದರೆ ಮರಳಿ ಡಿಜಿಟಲೀಕರಣ ಮಾಡುವ ಅವಕಾಶ ಇದ್ದರೂ, ಆ ‘ರೋಲ್‌ಬ್ಯಾಕ್’ ಆಯ್ಕೆಯೇ ಚಿಕ್ಕಮಗಳೂರು, ಕೊಡಗು ಆದಿವಾಸಿ ಪ್ರದೇಶಗಳಲ್ಲಿರುವ ಹಲವು ಮತದಾರರಿಗೆ ಅರಿವೇ ಇಲ್ಲ. ಹೀಗಾಗಿ ರಾಜ್ಯದ ಎಲ್ಲ ಅರ್ಹ ಮತದಾರರಿಗೆ ಅಗತ್ಯ ಮಾಹಿತಿ ತಲುಪಿಸುವಲ್ಲಿ ಚುನಾವಣಾ ಆಯೋಗ ವೈಫಲ್ಯವನ್ನು ಎದುರಿಸುತ್ತಿದೆ.
ಗಣತಿ ನಮೂನೆ ಪಡೆದು ಭರ್ತಿ ಮಾಡಿ ಬಿಎಲ್‌ಒಗಳಿಗೆ ನೀಡಿದ್ದರೂ, ಹಲವರದ್ದು ತಪ್ಪು ತಪ್ಪಾಗಿ ಮಾಹಿತಿ ನಮೂದಾಗಿದೆ. ಈ ತಪ್ಪುಗಳನ್ನು ಸರಿಪಡಿಸಿಕೊಳ್ಳುವುದು ಸೇರಿದಂತೆ ಹಲವು ಕಾರಣಗಳಿಗೆ ಚುನಾವಣಾ ಆಯೋಗ ಗಣತಿ ನಮೂನೆಯ ಮೊದಲ ಹಂತದ ಪ್ರಕ್ರಿಯೆಯನ್ನು ಆ.17ರವರೆಗೂ ವಿಸ್ತರಿಸಿದೆ. ಬಿಎಲ್‌ಒಗಳು ಮತದಾರರ ಮಾಹಿತಿಯನ್ನು ತಪ್ಪಾಗಿ ಎಎಸ್‌ಡಿಡಿಒ ವರ್ಗಕ್ಕೆ ಸೇರಿಸಿದ್ದರೆ, ಸೂಕ್ತ ದಾಖಲೆಗಳನ್ನು ಬಿಎಲ್‌ಒಗಳಿಗೆ ನೀಡಿ, ಬಿಎಲ್‌ಒ ಆ್ಯಪ್‌ನಲ್ಲಿ ರೋಲ್‌ಬ್ಯಾಕ್ ಆಯ್ಕೆಯ ಮೂಲಕ ಮಾಹಿತಿಯನ್ನು ಸರಿಪಡಿಸಿಕೊಳ್ಳಬಹುದು.
ಇಂತಹ ವ್ಯವಸ್ಥೆ ಒಂದಿದೆ ಎಂಬುದು ಬಿಎಲ್‌ಒ, ಚುನಾವಣಾ ಅಧಿಕಾರಿಗಳಿಗೆ ಮಾತ್ರ ತಿಳಿದಿದ್ದರೆ ಸಾಕೇ? ಎಎಸ್‌ಡಿಡಿಒ ಪಟ್ಟಿಯಲ್ಲಿ ಹೆಸರು ಬಂದ ಮತದಾರರಿಗೆ ‘ನಿಮ್ಮ ಹೆಸರು ಈ ಪಟ್ಟಿಯಲ್ಲಿದೆ’ ಎಂಬುದು ಎಲ್ಲ ಮತದಾರರಿಗೂ ಹೇಗೆ ತಿಳಿಯಬೇಕು? ಎಎಸ್‌ಡಿಡಿಒ ಪಟ್ಟಿಯಲ್ಲಿರುವ ಮಾಹಿತಿಯನ್ನು ಹೇಗೆ ರೋಲ್‌ಬ್ಯಾಕ್ ಮಾಡಿಸಿಕೊಳ್ಳಬೇಕು? ವಿದ್ಯಾವಂತರಿಗೆ, ಮೊಬೈಲ್, ಇಂಟರ್‌ನೆಟ್ ಬಳಕೆ ಮಾಡುವರಿಗೆ ಮಾತ್ರ ತಮ್ಮ ಹೆಸರನ್ನು ಎಎಸ್‌ಡಿಡಿಒ ಪಟ್ಟಿಯಲ್ಲಿರುವುದನ್ನು ಪರಿಶೀಲನೆ ಮಾಡಿಕೊಳ್ಳಲು ಅರ್ಥವಾಗುತ್ತದೆ. ಅವಿದ್ಯಾವಂತರು ಸೇರಿದಂತೆ ಉಳಿದವರ ಕಥೆ ಏನು? ಎಂದು ಕರ್ನಾಟಕ ಜನಶಕ್ತಿಯ ಕೆ.ಎಲ್.ಅಶೋಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚುನಾವಣಾ ಪ್ರಕ್ರಿಯೆ ಡಿಜಿಟಲ್ ಆಗುತ್ತಿರುವ ಸಂದರ್ಭದಲ್ಲಿ, ಡಿಜಿಟಲ್ ಸೌಲಭ್ಯವೇ ಇಲ್ಲದ ಜನರಿಗೆ ಮಾಹಿತಿ ತಲುಪಿಸುವ ಹೊಣೆಗಾರಿಕೆಯೂ ಚುನಾವಣಾ ವ್ಯವಸ್ಥೆಯದ್ದೇ ಆಗಿದೆ. ಕಾಡಿನೊಳಗಿನ ಮನೆಗೆ ಇಂಟರ್‌ನೆಟ್ ತಲುಪದಿದ್ದರೂ, ಚುನಾವಣಾ ಮಾಹಿತಿ ತಲುಪಬೇಕು. ವೆಬ್‌ಸೈಟ್‌ನಲ್ಲಿ ಪಟ್ಟಿ ಹಾಕುವುದಕ್ಕಿಂತ, ಇಂತಹ ಪ್ರದೇಶಗಳಲ್ಲಿ ಮನೆಮನೆಗೆ ತೆರಳಿ ಎಎಸ್‌ಡಿಡಿಒ ಪಟ್ಟಿಯಲ್ಲಿರುವವರನ್ನು ಗುರುತಿಸಿ, ಅವರ ಹೆಸರು ಏಕೆ ಸೇರಿದೆ ಮತ್ತು ಅದನ್ನು ಹೇಗೆ ಸರಿಪಡಿಸಿಕೊಳ್ಳಬೇಕು ಎಂಬುದನ್ನು ಸ್ಥಳೀಯ ಭಾಷೆಯಲ್ಲಿ ತಿಳಿಸುವ ವ್ಯವಸ್ಥೆ ಅಗತ್ಯವಾಗಿ ಮಾಡಬೇಕು ಎಂದು ಅಶೋಕ್ ಒತ್ತಾಯಿಸಿದ್ದಾರೆ.
ಮಲೆನಾಡಿನ ಕಾಡಂಚು, ಗುಡ್ಡಗಾಡು ಪ್ರದೇಶಗಳಲ್ಲಿ ವಾಸಿಸುವ ಆದಿವಾಸಿ ಸಮುದಾಯಗಳ ಮತದಾರರಿಗೆ ಎಸ್‌ಐಆರ್ ಪ್ರಕ್ರಿಯೆ ಎನ್ನುವುದೇ ದೊಡ್ಡ ಸವಾಲು. ಅದರಲ್ಲೂ ರೋಲ್‌ಬ್ಯಾಕ್ ವ್ಯವಸ್ಥೆ ಒಂದು ಇದೆ ಎಂದು ನನ್ನನ್ನು ಒಳಗೊಂಡಂತೆ ಹಲವರಿಗೆ ಮಾಹಿತಿಯೇ ಇಲ್ಲ. ಮತದಾರರ ಪಟ್ಟಿ ಆನ್‌ಲೈನ್‌ನಲ್ಲಿ ಪ್ರಕಟಿಸಲಾಗಿದೆ, ಎಎಸ್‌ಡಿಡಿಒ ಪಟ್ಟಿಯಲ್ಲಿ ಹೆಸರು ಪರಿಶೀಲಿಸಿಕೊಳ್ಳಿ, ತಪ್ಪಿದ್ದರೆ ಬಿಎಲ್‌ಒರನ್ನು ಸಂಪರ್ಕಿಸಿ ಎನ್ನುವ ಮಾಹಿತಿ ನಗರ ಪ್ರದೇಶದ ಜನರಿಗೆ ಸುಲಭವಾಗಿ ತಲುಪಬಹುದು. ಆದರೆ ಮಲೆನಾಡಿನ ಹಲವು ದೂರದ ಪ್ರದೇಶಗಳಲ್ಲಿ ಮೊಬೈಲ್ ನೆಟ್‌ವರ್ಕ್ ಇಲ್ಲ, ಇಂಟರ್‌ನೆಟ್ ಸೌಲಭ್ಯವಿಲ್ಲ, ಕೆಲವೆಡೆ ವಿದ್ಯುತ್ ಸಂಪರ್ಕವೂ ಸೀಮಿತ. ಇಂತಹ ಪರಿಸ್ಥಿತಿಯಲ್ಲಿ ಆನ್‌ಲೈನ್ ಪಟ್ಟಿಯನ್ನು ಪರಿಶೀಲಿಸುವುದೇ ಸಾಧ್ಯವೇ?.
-ವೆಂಕಟೇಶ್, ಆದಿವಾಸಿ ಹೋರಾಟಗಾರ, ಶೃಂಗೇರಿ
ಹಲವು ವರ್ಷಗಳಿಂದ ಒಂದೇ ಜಾಗದಲ್ಲಿ ವಾಸ ಮಾಡುತ್ತಿದ್ದರೂ ಮೊದಲಿಗೆ ನಮಗೆ ಗಣತಿ ನಮೂನೆ ನೀಡುವುದಕ್ಕೆಯೇ ಬಿಎಲ್‌ಒಗಳು ಹಿಂದೆ ಸರಿದಿದ್ದರು. ಕೊನೆಗೆ ನಾಗರಿಕ ಮತಕಾವಲು ಸಮಿತಿ ಸಹಾಯದೊಂದಿಗೆ ನಾವು ನಮೂನೆ ಪಡೆದುಕೊಂಡವು. ಈಗ ನಮ್ಮ ಹೆಸರು ಎಎಸ್‌ಡಿಡಿಒ ಪಟ್ಟಿಯಲ್ಲಿ ಬಂದಿದೆ ಎಂದರೇ ಏನು ಅನ್ನುವುದೇ ಗೊತ್ತಿಲ್ಲ. ಈಗ ಅದನ್ನು ತಿಳಿದುಕೊಳ್ಳುವುದಾದರೂ ಹೇಗೆ. ನಾವು ವಾಸಿಸುವ ಮನೆಗಳಲ್ಲಿ ಕರೆಂಟ್ ವ್ಯವಸ್ಥೆಯೂ ಇಲ್ಲ, ಮೊಬೈಲ್‌ಗಳು ಇಲ್ಲ. ಇದ್ದವರಿಗೆ ಇಂಟರ್‌ನೆಟ್ ಬಳಕೆ ಮಾಡುವುದು ಸರಿಯಾಗಿ ಗೊತ್ತಿಲ್ಲ. ನಮಗೆ ಆನ್‌ಲೈನ್‌ನಲ್ಲಿ ಹುಡುಕಿ, ರೋಲ್‌ಬ್ಯಾಕ್ ಮಾಡಿಕೊಳ್ಳಿ ಎನ್ನುವುದಕ್ಕಿಂತ, ಅಧಿಕಾರಿಗಳು ನಮ್ಮ ಮನೆಗಳಿಗೇ ಬಂದು ಸಮಸ್ಯೆ ಏನು ಎಂದು ತಿಳಿಸಿ ಪರಿಹಾರ ನೀಡಬೇಕು.
-ಸವಿತಾ, ಮತದಾರರು, ಕೊಡಗು
ಚುನಾವಣಾ ಆಯೋಗವು ವಿಧಾನಸಭಾ ಕ್ಷೇತ್ರ ಮತ್ತು ಮತಗಟ್ಟೆವಾರು ಎಎಸ್‌ಡಿಡಿಒ ಪಟ್ಟಿಯನ್ನು ಆನ್‌ಲೈನ್‌ನಲ್ಲಿ ಪ್ರಕಟಿಸಿದೆ. ಮತದಾರರು ತಮ್ಮ ಹೆಸರು ಪರಿಶೀಲಿಸಿ, ತಪ್ಪಾಗಿ ವರ್ಗೀ ಕರಿಸಿದ್ದರೆ ಬಿಎಲ್‌ಒ ಅಥವಾ ಎಇಆರ್‌ಒ ಅವರನ್ನು ಸಂಪರ್ಕಿಸಬಹುದು ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ ಇಂಟರ್‌ನೆಟ್ ಬಳಕೆಯ ಅರಿವು ಇಲ್ಲದವರು, ಸ್ಮಾರ್ಟ್‌ಫೋನ್ ಇಲ್ಲದವರು, ವೃದ್ಧರು ಅಥವಾ ನಿರಂತರವಾಗಿ ಕೆಲಸಕ್ಕಾಗಿ ಸ್ಥಳಾಂತರಗೊಳ್ಳುವ ಕಾರ್ಮಿಕರು ಈ ಪಟ್ಟಿಯನ್ನು ಹೇಗೆ ಪರಿಶೀಲಿಸಬೇಕು. ಮೊದಲು ಎಲ್ಲ ಮತದಾರರಿಗೂ ಸ್ಪಷ್ಟ ಮಾಹಿತಿ ನೀಡಿ, ಈ ಪಟ್ಟಿಯಲ್ಲಿರುವ ಮತದಾರರು ಮಾಹಿತಿ ಸರಿಪಡಿಸಿಕೊಳ್ಳಲು ಕನಿಷ್ಠ ಸೆಪ್ಟಂಬರ್ ಕೊನೆವರೆಗೂ ಕಾಲಾವಕಾಶ ವಿಸ್ತರಿಸಬೇಕು.
-ಕೆ.ಎಲ್.ಅಶೋಕ್, ರಾಜ್ಯ ಕಾರ್ಯದರ್ಶಿ, ಕರ್ನಾಟಕ ಜನಶಕ್ತಿ






