ಗೋಕರ್ಣದಲ್ಲಿ ವಿಲೇವಾರಿಯಾಗದ ತ್ಯಾಜ್ಯ

ಗೋಕರ್ಣ: ಧಾರ್ಮಿಕ ಮತ್ತು ಐತಿಹಾಸಿಕ ತಾಣವಾಗಿರುವ ಗೋಕರ್ಣದಲ್ಲಿ ತ್ಯಾಜ್ಯ ತುಂಬಿ ತುಳುಕುತ್ತಿದ್ದು, ಇಲ್ಲಿಯ ಕೀರ್ತಿಗೆ ಧಕ್ಕೆ ಬರುವಂತಾಗಿದೆ. ಸಂಬಂಧಪಟ್ಟವರು ಗಮನಹರಿಸುವಂತೆ ಸಾರ್ವಜನಿಕರು, ಪ್ರವಾಸಿಗರು ಒತ್ತಾಯಿಸಿದ್ದಾರೆ.
ಗೋಕರ್ಣದ ಯಾವುದೇ ಭಾಗದಲ್ಲಿ ಗಮನಿಸಿದರೂ ಪ್ಲಾಸ್ಟಿಕ್ ಮತ್ತು ಬಟ್ಟೆಯ ತ್ಯಾಜ್ಯಗಳು ಕಂಡುಬರುತ್ತವೆ. ಕಡಲತೀರದ ಪಕ್ಕದಲ್ಲಿಯೇ ಕೆಲವು ದಿನಗಳಿಂದ ಸಂಗ್ರಹಿಸಿಡಲಾದ ತ್ಯಾಜ್ಯಗಳನ್ನು ಇದುವರೆಗೂ ವಿಲೇವಾರಿ ಮಾಡಿಲ್ಲ ಎಂದು ಜನರು ಆಕ್ರೋಶವ್ಯಕ್ತಪಡಿಸುತ್ತಿದ್ದಾರೆ.
ಗೋಕರ್ಣದಲ್ಲಿ ತ್ಯಾಜ್ಯ ವಿಲೇವಾರಿ ಘಟಕ ವಿದ್ದರೂ ಪಟ್ಟಣದಲ್ಲಿ ಸಮರ್ಪಕ ತ್ಯಾಜ್ಯ ವಿಲೇವಾರಿಯಾಗದೆ ರೋಗಗಳು ಹರಡುವ ಸಾಧ್ಯತೆ ಇದ್ದು ತಕ್ಷಣ ತ್ಯಾಜ್ಯ ವಿಲೇವಾರಿ ಮಾಡುವಂತೆ ಪ್ರವಾಸಿಗರು, ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.
ಮಂಜಗುಣಿ-ಗಂಗಾವಳಿ ಸೇತುವೆ ನಿರ್ಮಾ ಣಗೊಂಡ ನಂತರ ಸ್ಥಳೀಯರೂ ಹೆಚ್ಚಿನ ಪ್ರಮಾಣದಲ್ಲಿ ಗೋಕರ್ಣಕ್ಕೆ ತೆರಳುತ್ತಿದ್ದಾರೆ. ವಿವಿಧ ಧಾರ್ಮಿಕ ತಾಣಗಳಲ್ಲಿ ಸಾಕಷ್ಟು ಅಭಿವೃದ್ಧಿಯನ್ನು ಮಾಡಲಾಗುತ್ತಿದೆ. ಗೋಕರ್ಣದಲ್ಲೂ ಸಾಕಷ್ಟು ಪ್ರವಾಸಿ ಸ್ಥಳಗಳಿದ್ದು ಅಭಿವೃದ್ಧಿಯನ್ನು ಮಾಡಿದ್ದಲ್ಲಿ ಹೆಚ್ಚಿನ ಪ್ರವಾಸಿಗರು, ಭಕ್ತರು ಬರುವುದರ ಜೊತೆಗೆ ಹೆಚ್ಚಿನ ಉದ್ಯೋಗ ದೊರೆಯುವಂತಾಗಲಿದೆ.
ಸರಕಾರ ಈ ಬಗ್ಗೆ ಗಮನಹರಿಸಬೇಕಿದೆ. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಪ್ರವಾಸಿಗರು ಮತ್ತು ಭಕ್ತರು ಇಳಿಮುಖವಾಗುವ ಸಾಧ್ಯತೆಯಿದೆ. ಒಟ್ಟಿನಲ್ಲಿ ಕ್ಷೇತ್ರದ ಆಡಳಿತ ವ್ಯವಸ್ಥೆ ಇಲ್ಲಿಯ ಶುದ್ಧತೆಗೆ ಹೆಚ್ಚಿನ ಮಹತ್ವ ನೀಡಬೇಕಿದೆ ಎಂದು ಜನರು ಆಗ್ರಹಿಸುತ್ತಿದ್ದಾರೆ.







