ಸಾಲದ ವಿಷವರ್ತುಲದಲ್ಲಿ ನಿರುದ್ಯೋಗಿ ಯುವಜನತೆ

ಭಾರತವು ಜಗತ್ತಿನಲ್ಲೇ ಅತಿ ಹೆಚ್ಚು ಯುವ ಜನಸಂಖ್ಯೆಯನ್ನು ಹೊಂದಿರುವ ‘ಯುವ ರಾಷ್ಟ್ರ’ ಎಂದು ಹೆಮ್ಮೆಯಿಂದ ಬೀಗುತ್ತಿದೆ. ಕರ್ನಾಟಕವಂತೂ ಜಾಗತಿಕ ಮಟ್ಟದಲ್ಲಿ ತಂತ್ರಜ್ಞಾನದ ಕೇಂದ್ರವಾಗಿ ಗುರುತಿಸಿಕೊಂಡಿದೆ. ಆದರೆ, ಈ ಹೊಳಪಿನ ಆಚೆಗಿನ ವಾಸ್ತವ ಅತ್ಯಂತ ಕರಾಳವಾಗಿದೆ. ರಾಜ್ಯದ ಲಕ್ಷಾಂತರ ಪದವೀಧರ ಯುವಕರು ಇಂದು ಸಾಲದ ವಿಷವರ್ತುಲದಲ್ಲಿ ಸಿಲುಕಿ ದಿಕ್ಕುಗಾಣದಂತಾಗಿದ್ದಾರೆ. ಕರ್ನಾಟಕ ಸರಕಾರ ಜಾರಿಗೆ ತಂದಿರುವ ‘ಯುವನಿಧಿ’ ಯೋಜನೆಯಡಿ ನಿರುದ್ಯೋಗಿಗಳಿಗೆ ಮಾಸಿಕ 3,000 ರೂಪಾಯಿ ನೀಡುತ್ತಿರುವುದು ಶ್ಲಾಘನೀಯವಾದರೂ, ಇಂದಿನ ಆರ್ಥಿಕ ಬಿಕ್ಕಟ್ಟಿನ ಮುಂದೆ ಇದು ಸಮುದ್ರಕ್ಕೆ ಸುರಿದ ಮಳೆಹನಿಯಂತಿದೆ. ಯುವ ಸಮುದಾಯ ಎದುರಿಸುತ್ತಿರುವ ಬೃಹತ್ ಸಂಕಷ್ಟಕ್ಕೆ ಕೇವಲ ಮಾಸಿಕ ಭತ್ತೆ ಪರಿಹಾರವಲ್ಲ; ಬದಲಾಗಿ ಯುವಜನತೆಯ ಶೈಕ್ಷಣಿಕ ಸಾಲದ ಸಂಪೂರ್ಣ ಮನ್ನಾ ಮತ್ತು ಉದ್ಯೋಗದ ಭರವಸೆಯಷ್ಟೇ ಅವರ ಭವಿಷ್ಯಕ್ಕೆ ಅಡಿಪಾಯವಾಗಬಲ್ಲದು.
ಸಾಲದ ಸುಳಿಗೆ ಬಲಿಯಾಗುತ್ತಿರುವ ಕನಸುಗಳು
ಕರ್ನಾಟಕದ ಪ್ರತೀ ಜಿಲ್ಲೆಯಲ್ಲೂ ಯುವಕರು ಅನುಭವಿಸುತ್ತಿರುವ ನೋವು ಒಂದೇ ರೀತಿಯದಾಗಿದೆ. ಮೈಸೂರು, ಹಾಸನ, ಮಂಡ್ಯ ಅಥವಾ ಉತ್ತರ ಕರ್ನಾಟಕದ ಬೆಳಗಾವಿ, ಕಲಬುರಗಿಯಂತಹ ಜಿಲ್ಲೆಗಳಲ್ಲಿ ಸಾಮಾನ್ಯ ಕೃಷಿಕ ಕುಟುಂಬದ ವಿದ್ಯಾರ್ಥಿ ಉನ್ನತ ಶಿಕ್ಷಣ ಪಡೆಯಬೇಕೆಂದರೆ ರಾಷ್ಟ್ರೀಕೃತ ಬ್ಯಾಂಕುಗಳೇ ಆಸರೆ.
ಮಂಡ್ಯ ಜಿಲ್ಲೆಯ ಒಬ್ಬ ವಿದ್ಯಾರ್ಥಿ ತಂದೆಯ ಕೃಷಿ ಆದಾಯವಿಲ್ಲದೆ ಸಾಲ ಮಾಡಿ ಇಂಜಿನಿಯರಿಂಗ್ ಮುಗಿಸಿದ್ದಾನೆ. ಈಗ 8 ಲಕ್ಷ ರೂಪಾಯಿ ಸಾಲದ ಹೊರೆ ಅವನ ಹೆಗಲ ಮೇಲಿದೆ. ಬೆಂಗಳೂರಿನಲ್ಲಿ ಕೆಲಸ ಹುಡುಕಲು ಹೋದರೆ ತಿಂಗಳಿಗೆ 15 ಸಾವಿರ ರೂಪಾಯಿ ಸಂಬಳ ಸಿಗುವುದು ಕಷ್ಟವಾಗಿದೆ. ಇತ್ತ ಬ್ಯಾಂಕಿನ ಬಡ್ಡಿ ಮಾತ್ರ ಪ್ರತೀ ತಿಂಗಳು ಏರುತ್ತಿದೆ. ಸಾಲ ತೀರಿಸಲು ಸಾಧ್ಯವಾಗದೆ, ಮನೆಯವರು ಜಮೀನು ಮಾರುವ ಪರಿಸ್ಥಿತಿ ಬಂದಿದೆ. ಈ ಯುವಕನಿಗೆ ಸರಕಾರ ನೀಡುವ 3,000 ರೂಪಾಯಿ ಅವನ ಸಾಲದ ಬಡ್ಡಿ ಕಟ್ಟಲಿಕ್ಕೂ ಸಾಲುತ್ತಿಲ್ಲ.
ಕಲಬುರಗಿ ಭಾಗದ ಬಡ ವಿದ್ಯಾರ್ಥಿಯೊಬ್ಬ ಬ್ಯಾಂಕ್ ಸಾಲ ಪಡೆದು ಪದವಿ ಮುಗಿಸಿದ್ದಾನೆ. ಬ್ಯಾಂಕ್ ಅಧಿಕಾರಿಗಳು ಸಾಲ ಮರುಪಾವತಿಸಲು ನೀಡುತ್ತಿರುವ ಕಿರುಕುಳದಿಂದಾಗಿ ಅವನ ತಂದೆ ಮಾನಸಿಕವಾಗಿ ಜರ್ಜರಿತರಾಗಿದ್ದಾರೆ. ಪ್ರತಿದಿನ ಬ್ಯಾಂಕ್‌ನಿಂದ ಬರುವ ಕರೆಗಳು ಆ ಕುಟುಂಬದ ನಿದ್ದೆ ಗೆಡಿಸಿವೆ.
ಇವು ಕೇವಲ ಎರಡು ಕಥೆಗಳಲ್ಲ, ಇಡೀ ರಾಜ್ಯದ ಯುವಜನತೆಯ ಮೌನ ರೋದನೆ.
ಬ್ಯಾಂಕ್ ಅಧಿಕಾರಿಗಳ ಅಮಾನವೀಯ ಕಿರುಕುಳ ಮತ್ತು ‘ಫೀಲ್ಡ್ ಆಫೀಸರ್’ಗಳ ದೌರ್ಜನ್ಯ
ರಾಷ್ಟ್ರೀಕೃತ ಬ್ಯಾಂಕುಗಳು ದೊಡ್ಡ ದೊಡ್ಡ ಉದ್ಯಮಿಗಳ ಸಾವಿರಾರು ಕೋಟಿ ರೂಪಾಯಿ ಸಾಲವನ್ನು ಮನ್ನಾ ಮಾಡುತ್ತವೆ ಅಥವಾ ವಸೂಲಾಗದ ಸಾಲ (ಎನ್‌ಪಿಎ) ಎಂದು ಕಡೆಗಣಿಸುತ್ತವೆ. ಆದರೆ, ಒಬ್ಬ ಬಡ ಪದವೀಧರನ 5-10 ಲಕ್ಷ ರೂ. ಸಾಲದ ವಿಷಯಕ್ಕೆ ಬಂದಾಗ ಬ್ಯಾಂಕುಗಳು ಕ್ರಿಮಿನಲ್‌ಗಳಂತೆ ವರ್ತಿಸುತ್ತಿವೆ.
ಸಾಲ ವಸೂಲಾತಿಗಾಗಿ ಬ್ಯಾಂಕುಗಳು ನೇಮಿಸಿಕೊಳ್ಳುತ್ತಿ ರುವ ‘ಫೀಲ್ಡ್ ಆಫೀಸರ್’ಗಳು ಯಾವುದೇ ಸೌಜನ್ಯವಿಲ್ಲದೆ ಮನೆ ಬಾಗಿಲಿಗೆ ಬಂದು ಅವಮಾನ ಮಾಡುತ್ತಿದ್ದಾರೆ. ನೆರೆಹೊರೆಯವರ ಮುಂದೆ ಕುಟುಂಬದ ಗೌರವ ಹರಾಜು ಹಾಕುವುದು ಇಂದಿನ ಸಾಮಾನ್ಯ ಪ್ರವೃತ್ತಿಯಾಗಿದೆ. ಈ ಅವಮಾನ ತಾಳಲಾರದೆ ಯುವಕರು ಖಿನ್ನತೆಗೆ ಒಳಗಾಗುತ್ತಿದ್ದಾರೆ ಅಥವಾ ಆತ್ಮಹತ್ಯೆಯಂತಹ ತೀವ್ರ ನಿರ್ಧಾರಗಳಿಗೆ ಮುಂದಾಗುತ್ತಿದ್ದಾರೆ. ಸರಕಾರಿ ಸ್ವಾಮ್ಯದ ಬ್ಯಾಂಕುಗಳು ಯುವಜನತೆಯ ಉಸಿರನ್ನು ಹೊಸಕುವ ಕೆಲಸಕ್ಕೆ ಕೈ ಹಾಕಿರುವುದು ಅತ್ಯಂತ ವಿಷಾದನೀಯ.
ಸ್ಕಿಲ್ ಡೆವಲಪ್‌ಮೆಂಟ್ ಎಂಬ ಹೆಸರಿನಲ್ಲಿ ನಡೆಯುತ್ತಿರುವ ಸುಲಿಗೆ
ಪದವಿ ಪಡೆದಿದ್ದರೂ ನಿಮಗೆ ಕೆಲಸಕ್ಕೆ ಬೇಕಾದ ಸ್ಕಿಲ್ ಇಲ್ಲ ಎಂಬ ನೆಪವನ್ನಿಟ್ಟುಕೊಂಡು ಇಂದು ರಾಜ್ಯಾದ್ಯಂತ ಖಾಸಗಿ ಸ್ಕಿಲ್ ಡೆವಲಪ್‌ಮೆಂಟ್ ಸೆಂಟರ್‌ಗಳು ಹಗಲು ದರೋಡೆ ಮಾಡುತ್ತಿವೆ.
1. ಐಟಿ-ಬಿಟಿ ಕ್ಷೇತ್ರದಲ್ಲಿ ಉದ್ಯೋಗ ಕೊಡಿಸುತ್ತೇವೆ ಎಂದು ನಂಬಿಸಿ 1 ಲಕ್ಷದಿಂದ 2 ಲಕ್ಷ ರೂ. ಗಳವರೆಗೆ ಶುಲ್ಕ ವಸೂಲಿ ಮಾಡಲಾಗುತ್ತಿದೆ. ಈಗಾಗಲೇ ಬ್ಯಾಂಕ್ ಸಾಲದ ಸುಳಿಯಲ್ಲಿರುವ ವಿದ್ಯಾರ್ಥಿಗಳು, ಹೇಗಾದರೂ ಉದ್ಯೋಗ ಸಿಗಲಿ ಎಂಬ ಕೊನೆಯ ಆಸೆಯಿಂದ ಅಕ್ಕಪಕ್ಕದವರಿಂದ ಅಥವಾ ಬಡ್ಡಿ ಲೇವಾದೇವಿದಾರರಿಂದ ಶೇ. 3 ರಿಂದ 5ರಷ್ಟು ಹೆಚ್ಚಿನ ಬಡ್ಡಿಗೆ ಹಣ ತಂದು ಈ ಕೇಂದ್ರಗಳಿಗೆ ಕಟ್ಟುತ್ತಿದ್ದಾರೆ.
ತರಬೇತಿ ಮುಗಿದ ನಂತರ ಈ ಸಂಸ್ಥೆಗಳು ಉದ್ಯೋಗ ಕೊಡಿಸುವಲ್ಲಿ ವಿಫಲವಾಗುತ್ತಿವೆ. ಇದು ಯುವಕರನ್ನು ಸಾಲದ ಮೇಲೆ ಸಾಲ ಮಾಡುವ ವಿಷವರ್ತುಲಕ್ಕೆ ತಳ್ಳುತ್ತಿದೆ.
ಉದ್ಯೋಗ ಮೇಳಗಳ ಕಟು ವಾಸ್ತವ
ಸರಕಾರ ಆಯೋಜಿಸುವ ಉದ್ಯೋಗ ಮೇಳಗಳು ಇಂದು ಕೇವಲ ರಾಜಕೀಯ ಪ್ರಚಾರದ ಸಾಧನಗಳಾಗಿವೆ. ಸಾವಿರಾರು ಯುವಕರು ಮೈಲುಗಟ್ಟಲೆ ಸಾಲಿನಲ್ಲಿ ನಿಂತು ತಮ್ಮ ರೆಸ್ಯೂಮ್ ನೀಡುತ್ತಾರೆ. ಆದರೆ ಅಲ್ಲಿ ಕಂಪೆನಿಗಳು ಕೇವಲ ಮಾಹಿತಿಯನ್ನು ಪಡೆದುಕೊಂಡು ಹೋಗುತ್ತವೆಯೇ ಹೊರತು, ಅರ್ಹತೆಗೆ ಅನುಗುಣವಾಗಿ ಸ್ಥಳದಲ್ಲೇ ಉದ್ಯೋಗ ನೀಡುತ್ತಿಲ್ಲ. ಇಂಜಿನಿಯರಿಂಗ್ ಮಾಡಿದ ವಿದ್ಯಾರ್ಥಿಗೆ 8-10 ಸಾವಿರ ಸಂಬಳದ ಕೆಲಸ ನೀಡುವುದು ವ್ಯವಸ್ಥೆ ಯುವಶಕ್ತಿಗೆ ಮಾಡುವ ಬಹುದೊಡ್ಡ ಅಪಚಾರ.
ವ್ಯವಸ್ಥೆಯ ಸುಧಾರಣೆಗೆ ಬೇಕಿರುವ ಕ್ರಾಂತಿಕಾರಿ ಕ್ರಮಗಳು
1. ರಾಷ್ಟ್ರೀಕೃತ ಬ್ಯಾಂಕುಗಳ ಸಾಲ ಮನ್ನಾ: ಸರಕಾರವು ತುರ್ತಾಗಿ ಒಂದು ಸಮಿತಿ ರಚಿಸಿ, ಉದ್ಯೋಗ ಸಿಗುವವರೆಗೆ ಪದವೀಧರರ ಸಾಲದ ಜವಾಬ್ದಾರಿಯನ್ನು ಹೊರಬೇಕು.
2. ಫೀಲ್ಡ್ ಆಫೀಸರ್ ಕಿರುಕುಳ ನಿಷೇಧ: ಬ್ಯಾಂಕುಗಳು ವಿದ್ಯಾರ್ಥಿಗಳ ಮನೆ ಬಾಗಿಲಿಗೆ ಹೋಗಿ ಅವಮಾನ ಮಾಡುವುದನ್ನು ಕಾನೂನುಬದ್ಧವಾಗಿ ನಿಷೇಧಿಸಬೇಕು.
3. ಸರಕಾರಿ ಸ್ಕಿಲ್ ಸೆಂಟರ್ ಸ್ಥಾಪನೆ: ಪ್ರತಿಯೊಂದು ತಾಲೂಕು ಕೇಂದ್ರಗಳಲ್ಲಿ ಆಧುನಿಕ ಜಗತ್ತಿನ ತಂತ್ರಜ್ಞಾನ ಕಲಿಸುವ ಉಚಿತ ಸರಕಾರಿ ಸಂಸ್ಥೆಗಳನ್ನು ಸ್ಥಾಪಿಸಬೇಕು.
4. ಖಾಸಗಿ ಸಂಸ್ಥೆಗಳ ಬೆಲೆ ನಿಗದಿ: ಖಾಸಗಿ ಸ್ಕಿಲ್ ಸೆಂಟರ್‌ಗಳಿಗೆ ಸರಕಾರವೇ ಶುಲ್ಕ ನಿಗದಿಪಡಿಸಬೇಕು ಮತ್ತು ನೂರಕ್ಕೆ ನೂರರಷ್ಟು ಕೆಲಸ ಕೊಡಿಸುವ ಸಂಸ್ಥೆಗಳಿಗೆ ಮಾತ್ರ ಪರವಾನಿಗೆ ನೀಡಬೇಕು.
5. ನೇರ ಉದ್ಯೋಗ ಮೇಳ: ಮೇಳಗಳಲ್ಲಿ ಕೇವಲ ರೆಸ್ಯೂಮ್ ಪಡೆಯುವ ಬದಲು, ಸ್ಥಳದಲ್ಲೇ ಅರ್ಹತೆ ಪರೀಕ್ಷಿಸಿ ಉದ್ಯೋಗ ನೀಡುವ ಪ್ರಕ್ರಿಯೆ ಜಾರಿಯಾಗಬೇಕು.
ಯುವಜನತೆ ದೇಶದ ಆಸ್ತಿ ಎಂಬುದು ಬರೀ ಭಾಷಣಕ್ಕೆ ಸೀಮಿತವಾಗಬಾರದು. ಇಂದು ನಮ್ಮ ರಾಜ್ಯದ ಯುವಕರು ಸಾಲದ ಬೆಂಕಿಯಲ್ಲಿ ಬೆಂದು ಹೋಗುತ್ತಿದ್ದಾರೆ. ಸರಕಾರ ಕೇವಲ 3,000 ರೂಪಾಯಿ ನೀಡಿ ತನ್ನ ಜವಾಬ್ದಾರಿಯನ್ನು ಮುಗಿಸಿದೆ ಎಂದು ಭಾವಿಸಬಾರದು. ಯುವಜನತೆಯ ಶೈಕ್ಷಣಿಕ ಸಾಲವನ್ನು ಸಂಪೂರ್ಣ ಮನ್ನಾ ಮಾಡುವುದರ ಮೂಲಕ ಮತ್ತು ಅವರಿಗೆ ಯೋಗ್ಯ ಉದ್ಯೋಗ ಒದಗಿಸುವುದರ ಮೂಲಕ ಅವರ ಭವಿಷ್ಯವನ್ನು ಉತ್ತಮಗೊಳಿಸಬೇಕಿದೆ. ಯುವಶಕ್ತಿಯ ಉಳಿವೇ ರಾಜ್ಯದ ಉಳಿವು.






