ವಂದೇ ಮಾತರಂ: ಹಾಡಲೇ ಬೇಕೆಂದಿಲ್ಲ!

ಸರಕಾರದ ಕಾರ್ಯಕ್ರಮಗಳಲ್ಲಿ ‘ವಂದೇ ಮಾತರಂನ ಮೊದಲ ಎರಡು ಚರಣಗಳನ್ನು ಮಾತ್ರ ಹಾಡಬೇಕು’ ಎಂದು ಕರ್ನಾಟಕ ಸರಕಾರ ನಿರ್ಧರಿಸಿದೆ. ‘ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನ ಮಂತ್ರಿ ಮತ್ತು ರಾಜ್ಯಪಾಲರು ಉಪಸ್ಥಿತರಿರುವ ಕಾರ್ಯಕ್ರಮಗಳನ್ನು ಹೊರತು ಪಡಿಸಿ’ ಎಂಬ ಅವಕಾಶವನ್ನು ಕೊಟ್ಟುಕೊಂಡಿದ್ದರೂ ಸರಕಾರದ ಈ ನಿರ್ಣಯ ರಾಜ್ಯದ ಮಟ್ಟಿಗೆ ಸ್ವಾಗತಾರ್ಹ. ಕೇರಳಂ ಸರಕಾರವೂ ಇದೇ ಮಾರ್ಗವನ್ನು ಅನುಸರಿಸಿದೆ.
ವಂದೇ ಮಾತರಂ ಗೀತೆಯ ರಚನೆಯ 150ನೇ ವಾರ್ಷಿಕೋತ್ಸವನ್ನು ನವೆಂಬರ್ 7, 2025ರಿಂದ ಒಂದು ವರ್ಷವಿಡೀ ಆಚರಿಸಬೇಕು ಎಂದು ಒಕ್ಕೂಟ ಸರಕಾರವು ತೀರ್ಮಾನಿಸಿತು. ಈಗಾಗಲೇ ಇದ್ದ, ‘ರಾಷ್ಟ್ರೀಯ ಗೌರವಗಳಿಗೆ ಅವಮಾನ ತಡೆಗಟ್ಟುವಿಕೆ ಅಧಿನಿಯಮ, 1971’ಕ್ಕೆ ‘ರಾಷ್ಟ್ರೀಯ ಗೌರವ (ತಿದ್ದುಪಡಿ) ಮಸೂದೆ, 2026’ನ್ನು ಸಂಸತ್ತಿನಲ್ಲಿ ಮಂಡಿಸಿತು. ವಿಪಕ್ಷಗಳ ವ್ಯಾಪಕ ವಿರೋಧದ ಹೊರತಾಗಿಯೂ ಈ ವಿಧೇಯಕ ಪಾಸಾಗಿ ಕಾನೂನಾಗಿದೆ. 1971ರ ಮೂಲ ಅಧಿನಿಯಮದ ಪ್ರಕಾರ ರಾಷ್ಟ್ರಗೀತೆ ಜನ ಗಣ ಮನ ‘ಹಾಡುವುದಕ್ಕೆ ಉದ್ದೇಶಪೂರ್ವಕ ಅಡ್ಡಿಯನ್ನುಂಟು ಮಾಡುವುದು, ಅದನ್ನು ಹಾಡುತ್ತಿರುವ ಯಾವುದೇ ಸಮಾವೇಶದಲ್ಲಿ ತೊಂದರೆಯನ್ನು ಉಂಟುಮಾಡುವುದು’ ಶಿಕ್ಷಾರ್ಹ ಅಪರಾಧವಾಗಿದೆ. ಅಂಥವರಿಗೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು/ಅಥವಾ ದಂಡವನ್ನು ವಿಧಿಸಲಾಗುತ್ತದೆ. ಪ್ರಸ್ತುತ 2026ರ ತಿದ್ದುಪಡಿ ಅಧಿನಿಯಮವು ಇದೇ ನಿಬಂಧನೆಗಳನ್ನು ವಂದೇ ಮಾತರಂಗೂ ವಿಸ್ತರಿಸುವ ಉದ್ದೇಶವನ್ನು ಹೊಂದಿದೆ. ಆದರೆ, ಈ ವಿಧೇಯಕಕ್ಕೆ ವಿಪಕ್ಷಗಳು, ಮುಖ್ಯವಾಗಿ ಕಾಂಗ್ರೆಸ್ ಪಕ್ಷ ವಿರೋಧವನ್ನು ವ್ಯಕ್ತಪಡಿಸಿತ್ತು. ಇದಕ್ಕೆ ಕಾರಣವೇನು?
ಸ್ವಾತಂತ್ರ್ಯ ಚಳವಳಿಯ ದೇಶವ್ಯಾಪಿಯಾಗಿ ಹರಡುತ್ತಿದ್ದ ಕಾಲಘಟ್ಟದಲ್ಲಿ 1905ರಲ್ಲಿ, ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಬಂಕಿಮ ಚಂದ್ರ ಚಟರ್ಜಿ ವಿರಚಿತ ಈ ‘ವಂದೇ ಮಾತರಂ’ ಕವಿತೆಯನ್ನು ಅಖಿಲ ಭಾರತದ ರಾಷ್ಟ್ರೀಯತಾವಾದಿ ವಂದನೆಯನ್ನಾಗಿ ಅಧಿಕೃತವಾಗಿ ಅಳವಡಿಸಿಕೊಂಡಿತು. ಮುಂದೆ ಇದು ಬೃಹತ್ ಜನಾಂದೋಲನವಾಗಿ ಮಾರ್ಪಟ್ಟು ಭಾರತದ ವಿವಿಧ ಜಾತಿ, ಧರ್ಮದವರು ಇದರಲ್ಲಿ ಭಾಗವಹಿಸಲು ತೊಡಗಿದರು. ಆಗ, ವಂದೇ ಮಾತರಂ ಕವಿತೆಯ ಮೊದಲ ಎರಡು ಚರಣಗಳು, ಯಾವುದೇ ಧಾರ್ಮಿಕ ಭಾವಾರ್ಥವಿಲ್ಲದೆ, ತಾಯಿ ಮತ್ತು ಮಾತೃಭೂಮಿಯನ್ನು ಅಮೂರ್ತವಾಗಿ ಉಲ್ಲೇಖಿಸುತ್ತವೆ. ಆದರೆ, ನಂತರದ ಪದ್ಯಗಳು ದುರ್ಗೆ, ಲಕ್ಷ್ಮಿ, ಸರಸ್ವತಿಯಂಥ ಹಿಂದೂ ದೇವತೆಗಳ ಸ್ಪಷ್ಟ ಸ್ತುತಿ ಇದೆ. ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸುತ್ತಿದ್ದ ಕೆಲವು ಧಾರ್ಮಿಕ ಹಿನ್ನೆಲೆಯ ವ್ಯಕ್ತಿಗಳಿಗೆ ಇದು ಸ್ವಲ್ಪ ಮುಜುಗರದ ಸಂಗತಿಯಾಗಿದ್ದು, 1937ರ ಹೊತ್ತಿಗೆ ಇದು ವಿವಾದದ ವಿಷಯವಾಯಿತು. ಆದರೆ, ಇಂಥ ಒಂದು ಭಾವನಾತ್ಮಕ ಸಂಗತಿ ಸ್ವಾತಂತ್ರ್ಯ ಆಂದೋಲನದ ಒಗ್ಗಟ್ಟಿಗೆ ಮಾರಕವಾಗಬಾರದು ಎಂಬ ಪ್ರಾಮಾಣಿಕ ಆತಂಕ ಅಂದಿನ ರಾಷ್ಟ್ರೀಯ ನಾಯಕರಿಗೆ ಇತ್ತು. ಮಹಾತ್ಮಾ ಗಾಂಧಿ, ರವೀಂದ್ರನಾಥ ಟಾಗೋರ್, ಸುಭಾಶ್ ಚಂದ್ರಬೋಸ್, ರಾಜೇಂದ್ರಪ್ರಸಾದ್, ನೆಹರೂ, ಮೌಲಾನಾ ಆಝಾದ್, ಆಚಾರ್ಯ ದೇವ್ ಮುಂತಾದ ಹಿರಿಯರು ಈ ಕುರಿತು ವಿಷದವಾಗಿ ಚರ್ಚಿಸಿ, ಎಲ್ಲರನ್ನೂ ಒಳಗೊಳ್ಳುವ ಹಾಗೆ ವಂದೇ ಮಾತರಂನ ಮೊದಲ ಎರಡು ಚರಣಗಳನ್ನು ಮಾತ್ರ ಅಂಗೀಕರಿಸಲಾಯಿತು. ಈ ಕುರಿತು ಈ ವರೆಗೆ ಹೆಚ್ಚಿನ ಭಿನ್ನಾಭಿಪ್ರಾಯವಿರಲಿಲ್ಲ.
ಆದರೆ, ಬಿಜೆಪಿ ಸರಕಾರಕ್ಕೆ ಹೀಗೆಲ್ಲಾ ಜನ ಸೌಹಾರ್ದ, ಶಾಂತಿಯಿಂದ ಬದುಕುವುದು ಇಷ್ಟವಾಗುವುದಿಲ್ಲವಲ್ಲ! ಸ್ವಾತಂತ್ರ್ಯ ಹೋರಾಟದಲ್ಲಿ ದೇಶವನ್ನು ಒಂದುಗೂಡಿಸಿದ್ದ ವಂದೇ ಮಾತರಂನ 150 ವಾರ್ಷಿಕೋತ್ಸವದ ಆಚರಣೆಯನ್ನು ದೇಶದ ಜನರನ್ನು ಧರ್ಮಗಳ ನೆಲೆಯಲ್ಲಿ ಒಡೆಯಲು ಬಳಸುವ ಹುನ್ನಾರವನ್ನು ಮಾಡಿತು. ಕೇಂದ್ರದ ಗೃಹ ಇಲಾಖೆ, ಇದೇ ಜುಲೈ 9ರಂದು ಗಾಯನದ ಕುರಿತು ಎಲ್ಲಾ ರಾಜ್ಯಗಳಿಗೆ ಕಳಿಸಿದ ನಿರ್ದೇಶನದಲ್ಲಿ ಗೀತೆಯ ಆರೂ ಚರಣಗಳನ್ನು ಹಾಡುವುದನ್ನು ಕಡ್ಡಾಯಗೊಳಿಸಿದೆ. ಇದು ಮತ್ತೊಮ್ಮೆ, ಮುಖ್ಯವಾಗಿ ಏಕದೇವಾರಾಧಕರಾದ, ಮೂರ್ತಿಪೂಜಕರಲ್ಲದ ಮುಸ್ಲಿಮ್ ಸಮುದಾಯದಲ್ಲಿ, ಹಾಗೆಯೇ ತಮ್ಮ ತಮ್ಮ ವಿಶಿಷ್ಟ ಆರಾಧನಾ ವಿಧಾನವನ್ನು ಹೊಂದಿರುವ ಕ್ರೈಸ್ತ, ಬೌದ್ಧ, ಸಿಖ್, ಜೈನ, ಪಾರ್ಸಿ ಜನರು ಮತ್ತು ವಿಚಾರವಾದಿ, ನಾಸ್ತಿಕ ನಾಗರಿಕರಿಗೂ ದುರ್ಗೆ, ಸರಸ್ವತಿ, ಲಕ್ಷ್ಮಿಯಂಥ ಹಿಂದೂ ದೇವತೆಗಳ ಸ್ತುತಿಯನ್ನು ಮಾಡುವಂತೆ ಒತ್ತಾಯ ಹೇರಿದಂತಾಗಿದೆ. ಇದು, ಕಾಂಗ್ರೆಸ್ ಸೇರಿದಂತೆ ಕೆಲವು ಪ್ರಗತಿಪರ ಪಕ್ಷಗಳ, ಸಂಘಸಂಸ್ಥೆಗಳ ಪ್ರತಿಭಟನೆಯ ಮೂಲ.
ಇಲ್ಲಿ ಬಹುದೊಡ್ಡ ವಿಡಂಬನೆಯೆಂದರೆ, ವಂದೇ ಮಾತರಂನ 150ನೇ ವಾರ್ಷಿಕೋತ್ಸವವನ್ನು ಆಚರಿಸಿ ‘ದೇಶಭಕ್ತಿ’ಯನ್ನು ಮೆರೆಯಲು ನೋಡಿ, ಗೀತೆಯನ್ನು ಪೂರ್ಣ ರೂಪದಲ್ಲಿ ಹಾಡದೇ ಇದ್ದರೆ ‘ದೇಶದ್ರೋಹಿ’ ಎಂಬಂತೆ ಬಿಂಬಿಸಲು ನೋಡುತ್ತಿರುವ ಬಿಜೆಪಿ ಮುಖಂಡರ ಘೋರ ಅಜ್ಞಾನ. 2025ಕ್ಕೆ 150 ವರ್ಷ ತುಂಬಿರುವುದು, ಬಂಕಿಮ ಚಂದ್ರರು 1875ರಲ್ಲಿ ರಚಿಸಿದ್ದ ವಂದೇ ಮಾತರಂ ಗೀತೆಗೆ. ಅಗ ಈ ಗೀತೆಯಲ್ಲಿ ಇದ್ದದ್ದು ಮೊದಲ ಎರಡು ಚರಣಗಳೇ! ಹೆಚ್ಚಿನ ನಾಲ್ಕು ಚರಣಗಳನ್ನು ಅವರು ಗೀತೆಗೆ ಸೇರಿಸಿದ್ದು 1882ರಲ್ಲಿ, ಬಂಗಾಲದ ಸನ್ಯಾಸಿ ದಂಗೆಯ ಹಿನ್ನೆಲೆಯಲ್ಲಿ ಬರೆದ ತಮ್ಮ ‘ಆನಂದಮಠ’ ಎಂಬ ಕ್ರಾಂತಿಕಾರಿ ಕಾದಂಬರಿಯಲ್ಲಿ. ಎಂದರೆ, ಅರು ಚರಣಗಳ ವಂದೇ ಮಾತರಂಗೆ 150 ತುಂಬಬೇಕು ಎಂದರೆ, 2032ರವರೆಗೆ ಕಾಯಬೇಕಾಗಿತ್ತು. ಆದರೆ ಈ ‘ಅಮೃತ ಕಾಲ’ದಲ್ಲಿ ಸುಳ್ಳುಗಳನ್ನೇ ಸತ್ಯ ಎಂದು ಸಾರುವುದು ಬಿಜೆಪಿಯ ದುರಭ್ಯಾಸವಲ್ಲವೇ?
ನಮ್ಮಲ್ಲಿ ಹೆಚ್ಚಿನವರಿಗೆ ಮೊದಲ ಎರಡು ಚರಣಗಳನ್ನೇ ಸ್ವತಃ ಹಾಡಲು ಬರುವುದಿಲ್ಲ. ಇನ್ನು ಕಠಿಣ ಸಂಸ್ಕೃತಭೂಯಿಷ್ಠ ಸಾಹಿತ್ಯವಿರುವ ಮುಂದಿನ ನಾಲ್ಕನ್ನು ಹಾಡಲು ಸಾಧ್ಯವೇ ಇಲ್ಲ. ಧ್ವನಿ ಮುದ್ರಿತ ಗೀತೆಯನ್ನು ವಾದಿಸುತ್ತಾರೆ, ಉಳಿದವರು ಗೌರವಪೂರ್ವಕ ಎದ್ದುನಿಲ್ಲುತ್ತಾರೆ. ಇದೆಲ್ಲದರ ಹೊರತಾಗಿ, ಹೊಸದಾಗಿ ಜಾರಿಯಾಗಿರುವ ಕಾನೂನಿನಲ್ಲಿಯೂ, ಮೂರು ವರ್ಷದ ಶಿಕ್ಷೆ, ದಂಡ ವಿಧಿಸಿರುವುದು, ವಂದೇಮಾತರಂನ್ನು ಹಾಡದೇ ಇರುವುದಕ್ಕಲ್ಲ; ಬದಲಿಗೆ ಹಾಡುವುದಕ್ಕೆ ಅಡ್ಡಿಪಡಿಸಿದರೆ ಮಾತ್ರ. ಸರಿ, ಗೀತೆಯನ್ನು ವಾದಿಸುವ ಸಮಾರಂಭಗಳಲ್ಲಿ ಇದ್ದರೆ ನಾವೂ ಮೌನವಾಗಿ ಎದ್ದುನಿಂತರಾಯಿತು!
(ಲೇಖಕರು: ಹಿರಿಯ ಬೋಧಕರು, ಬರಹಗಾರರು ಮತ್ತು ಭಾಷಾ ತರಬೇತಿ ತಜ್ಞರು)






