ಸಸ್ಯಾಹಾರ-ಮಾಂಸಾಹಾರ ಎಂಬ ನೈತಿಕ ರಾಜಕೀಯ ಮತ್ತು ಸಮಗ್ರಾಹಾರ

ಆಹಾರ ಎಂದರೆ ಕೇವಲ ಅನ್ನವಲ್ಲದೆ ಅಸ್ಮಿತೆಯ ಪ್ರಶ್ನೆ ಕೂಡ. ಆಹಾರದ ಮೂಲಕ ಸಮಾಜದಲ್ಲಿ ಮನುಷ್ಯರನ್ನ ಮೇಲು ಕೀಳು ಮಾಡುವ, ತಾವು ತಿನ್ನುತ್ತಿರುವುದು ಅಸಹ್ಯ, ಪಾಪಕರ ಎಂಬ ಮಾನಸಿಕ ಸಾಮಾಜಿಕ ವಾತಾವರಣ ನಿರ್ಮಿಸುವುದು ನಮ್ಮ ದೇಶದ ಅಪೂರ್ವವಾದ, ಸಮೃದ್ಧವಾದ ಹಿನ್ನೆಲೆಗೆ ತಕ್ಕುದಲ್ಲ. ಮಾನವನ ನಾಗರಿಕತೆಯನ್ನು ಆಹಾರವೇ ನಿರ್ಮಿಸಿದೆ ಎಂಬ ವಾಸ್ತವ ತಿಳಿದ ಮೇಲೂ ಅದೇ ಆಹಾರವನ್ನು ನಾವು ಮಾನವರನ್ನು ವಿಭಜಿಸಲು ಬಳಸಬಾರದು.
ಮಾನವ ಇತಿಹಾಸವನ್ನು ನಾವು ಸಾಮಾನ್ಯವಾಗಿ ರಾಜರು, ಯುದ್ಧಗಳು, ಧರ್ಮಗಳು ಅಥವಾ ತತ್ವಶಾಸ್ತ್ರಗಳ ಮೂಲಕ ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತೇವೆ. ಆದರೆ ಈ ಎಲ್ಲ ವ್ಯವಸ್ಥೆಗಳ ಹಿಂದಿನ ಮೂಲಭೂತ ಚಲನೆ ಆಹಾರ. ಮಾನವ ದೇಹದ ವಿಕಾಸದಿಂದ ಹಿಡಿದು, ಮೆದುಳಿನ ಬೆಳವಣಿಗೆ, ಸಮಾಜದ ಸಂಘಟನೆ, ಜಾತಿ ವ್ಯವಸ್ಥೆಯ ಉದಯ ಮತ್ತು ಆಧುನಿಕ ರಾಷ್ಟ್ರದ ರಾಜಕೀಯ, ಎಲ್ಲವೂ ಆಹಾರದ ಸುತ್ತಲೇ ರೂಪುಗೊಂಡಿದೆ. ಆಹಾರ ಎಂದರೆ ಕೇವಲ ಹೊಟ್ಟೆ ತುಂಬಿಸುವ ವಸ್ತುವಷ್ಟೇ ಆಗಿರದೆ ಅದು ಯಾರು, ಯಾರಿಗೆ ಗೌರವ ಮತ್ತು ಅಧಿಕಾರ ಕೊಡಬೇಕು ಎಂಬುದನ್ನು ನಿರ್ಧರಿಸುವ ಒಂದು ಸಂಕೇತಾತ್ಮಕ ವ್ಯವಸ್ಥೆಯಾಗಿದೆ. ಹಾಗಾಗಿಯೇ ಮಂಡ್ಯದ ಸಾಹಿತ್ಯ ಸಮ್ಮೇಳನದಲ್ಲಿ ಆಹಾರದ ಪ್ರಶ್ನೆ ಬಂತು. ಅಂತೆಯೇ ಎಲ್ಲರನ್ನು ಒಳಗೊಳ್ಳುವ ‘ಬಹುರೂಪಿ’ಯಂತಹ ಕಾರ್ಯಕ್ರಮಗಳಲ್ಲಿ, ವಿಶ್ವವಿದ್ಯಾನಿಲಯಗಳ, ಸರಕಾರದ ಕಾರ್ಯಕ್ರಮಗಳಲ್ಲಿ ಅಥವಾ ಕ್ಯಾಂಟೀನುಗಳಲ್ಲಿ ಕೇವಲ ಸಸ್ಯಾಹಾರ ಮಾತ್ರ ದೊರೆಯುತ್ತದೆ.
ಮಾನವನ ಪೂರ್ವಜರು ಪ್ರಾರಂಭದಲ್ಲಿ ಕೇವಲ ಹಣ್ಣು, ಗೆಡ್ಡೆ, ಬೇರುಗಳು ಮತ್ತು ಸಣ್ಣ ಜೀವಿಗಳನ್ನು ತಿನ್ನುತ್ತಿದ್ದ ಪ್ರಾಣಿಗಳಾಗಿದ್ದರು. ಆದರೆ ಸುಮಾರು 25 ಲಕ್ಷ ವರ್ಷಗಳ ಹಿಂದೆ ಹೋಮೋ ಹಾಬಿಲಸ್ ಮತ್ತು ನಂತರ ಹೋಮೊ ಎರೆಕ್ಟಸ್ ಪ್ರಭೇದಗಳು ಮಾಂಸವನ್ನು ತಿನ್ನಲಾರಂಭಿಸಿದಾಗ ಮಾನವ ದೇಹದಲ್ಲಿ ಮಹತ್ವದ ಬದಲಾವಣೆಗಳು ಆರಂಭವಾಯಿತು. ಮಾಂಸವು ಹೆಚ್ಚಿನ ಕ್ಯಾಲರಿ, ಪ್ರೊಟೀನ್ ಮತ್ತು ಕೊಬ್ಬನ್ನು ನೀಡಿತು. ಇವು ದೇಹದ ಶಕ್ತಿಯ ಮಟ್ಟವನ್ನು ಹೆಚ್ಚಿಸಿದವು, ಇದರ ಮಹತ್ವದ ಪರಿಣಾಮ ಮೆದುಳಿನ ಮೇಲೆ ಆಯಿತು. ಮಾನವನ ಮೆದುಳು ದೇಹದ ಕೇವಲ ಎರಡು ಶೇಕಡಾ ತೂಕವಿದ್ದರೂ ದೇಹದ ಒಟ್ಟು ಶಕ್ತಿಯ ಸುಮಾರು ನಾಲ್ಕನೇ ಭಾಗವನ್ನು ಬಳಸುತ್ತದೆ. ಈ ಶಕ್ತಿಯ ಅಗತ್ಯವನ್ನು ಪೂರೈಸಿದ ಮಾಂಸಾಹಾರವೇ ಮಾನವ ಮೆದುಳನ್ನು ದೊಡ್ಡದಾಗಿಸಿ, ಭಾಷೆ, ನೆನಪು, ಕಲ್ಪನೆ ಮತ್ತು ಸಂಕೀರ್ಣ ಸಾಮಾಜಿಕ ಸಂಬಂಧಗಳನ್ನು ರೂಪಿಸಲು ಸಹಾಯ ಮಾಡಿತು. ಬೆಂಕಿಯಲ್ಲಿ ಆಹಾರವನ್ನು ಬೇಯಿಸುವ ಪದ್ಧತಿ ಬಂದ ಮೇಲೆ ಈ ಪ್ರಕ್ರಿಯೆ ಇನ್ನಷ್ಟು ವೇಗವಾಯಿತು. ಬೇಯಿಸಿದ ಆಹಾರ ಸುಲಭವಾಗಿ ಜೀರ್ಣವಾಗಿ, ದೇಹದ ಜೀರ್ಣಾಂಗಗಳಿಗೆ ಶ್ರಮ ಕಡಿಮೆಯಾಯಿತು. ಇದರಿಂದ ಮೆದುಳಿನ ಶಕ್ತಿ ಹೆಚ್ಚಿ ಕಲೆ, ಸಂಗೀತ, ಧರ್ಮ, ತತ್ವ ಮೊದಲಾದವು ಸಾಧ್ಯವಾದವು. ಆದುದರಿಂದಲೇ ಮಾನವ ನಾಗರಿಕತೆಯ ಬೇರುಗಳು ಪ್ರಾರಂಭವಾಗಿದ್ದು ಹೊಟ್ಟೆಯಲ್ಲಿ ಎನ್ನಲಾಗುತ್ತದೆ.
ಸುಮಾರು ಹತ್ತು ಸಾವಿರ ವರ್ಷಗಳ ಹಿಂದೆ ಕೃಷಿಯ ಆರಂಭವಾಗಿದ್ದು ಮಾನವ ಇತಿಹಾಸದಲ್ಲಿ ಎರಡನೇ ದೊಡ್ಡ ಆಹಾರ ಕ್ರಾಂತಿ. ಬೇಟೆಗಾರ ಸಮಾಜದಿಂದ ಕೃಷಿಕ ಸಮಾಜಕ್ಕೆ ಬರುವುದು ಎಂದರೆ ಆಹಾರವನ್ನು ಸಂಗ್ರಹಿಸಬಹುದು, ಉಳಿಸಬಹುದು, ವಿನಿಮಯ ಮಾಡಬಹುದು ಎಂಬ ಅರ್ಥ. ಧಾನ್ಯಗಳು ಸಂಗ್ರಹಕ್ಕೆ ಸೂಕ್ತವಾಗಿದ್ದರಿಂದ ಊರುಗಳು, ಪಟ್ಟಣಗಳು ಮತ್ತು ನಗರಗಳು ಹುಟ್ಟಿದವು. ಸಂಗ್ರಹದಿಂದ ಆಸ್ತಿ, ಆಸ್ತಿಯಿಂದ ಅಧಿಕಾರ, ಅಧಿಕಾರದಿಂದ ರಾಜ್ಯ, ತೆರಿಗೆ ಮತ್ತು ಸೇನೆಗಳ ಉದಯವಾಯಿತು. ಆಹಾರ ಈಗ ಜೀವಿಸುವ ಸಾಧನವಷ್ಟೇ ಆಗಿರದೆ ಆಳುವ ಸಾಧನವಾಯಿತು, ಆದರೆ ಇದರಿಂದ ಅಸಮಾನತೆ ಹುಟ್ಟಿತು. ಯಾರು ಸಂಗ್ರಹವನ್ನು ನಿಯಂತ್ರಿಸಿದರೋ ಅವರು ಮೇಲ್ವರ್ಗವೆಂದೂ, ಯಾರು ದುಡಿದು ಶ್ರಮ ಮಾಡಿದರೋ ಅವರು ಕೆಳವರ್ಗ ಎಂಬ ವರ್ಗ ವ್ಯವಸ್ಥೆ ರೂಪುಗೊಂಡಿತು. ಭಾರತದಲ್ಲಿ ಈ ಪ್ರಕ್ರಿಯೆ ಒಂದು ವಿಭಿನ್ನ ಮಾರ್ಗ ಹಿಡಿಯಿತು. ಇಲ್ಲಿ ಆಹಾರ ಕೇವಲ ವರ್ಗದ ಗುರುತಾಗದೆ ಜಾತಿಯ ಗುರುತಾಯಿತು. ಜಾತಿವ್ಯವಸ್ಥೆ ಆಹಾರವನ್ನು ಪೌಷ್ಟಿಕತೆ ಅಥವಾ ಆರೋಗ್ಯದ ಆಧಾರದಲ್ಲದೆ ಶುದ್ಧತೆ ಮತ್ತು ಅಶುದ್ಧತೆ ಎಂಬ ನೈತಿಕ ಭಾಷೆಯಲ್ಲಿ ವರ್ಗೀಕರಿಸಿತು. ಹಾಲು, ತುಪ್ಪ, ಅಕ್ಕಿ, ತರಕಾರಿ ಶುದ್ಧವೂ ಮೀನು, ಮೊಟ್ಟೆ, ಮಾಂಸ ಕೀಳು,ಅಶುದ್ಧವೂ ಆದವು. ಈ ವರ್ಗೀಕರಣ ಜೈವಿಕವಾದುದಲ್ಲದೆ ಅಧಿಕಾರದ ಸಂಸ್ಕೃತಿಯಾಯಿತು.
ಬ್ರಾಹ್ಮಣ ಮತ್ತಿತರ ಸಸ್ಯಾಹಾರಿ ಜಾತಿಗಳು ಮೊದಲಿನಿಂದಲೂ ಸಸ್ಯಾಹಾರಿಗಳಾಗಿರಲಿಲ್ಲ. ಪ್ರಾರಂಭಿಕ ವೇದಗಳ ಕಾಲದಲ್ಲಿ ಯಜ್ಞಗಳಲ್ಲಿ ಪ್ರಾಣಿ ಬಲಿ ಸಾಮಾನ್ಯವಾಗಿತ್ತು. ಮಧುಪರ್ಕ ಎಂಬ ಆತಿಥ್ಯ ಸಂಸ್ಕೃತಿಯಲ್ಲೂ ಮಾಂಸ ಇದ್ದಿತು. ಅಂದರೆ ಸಸ್ಯಾಹಾರ ಬ್ರಾಹ್ಮಣೀಯ ಪರಂಪರೆಯ ಮೂಲವಲ್ಲ.ಬದಲಾವಣೆ ಆರಂಭವಾದುದು ಕ್ರಿ.ಪೂ. 600-300ರ ನಡುವೆ. ಈ ಸಮಯದಲ್ಲಿ ಬೌದ್ಧ ಮತ್ತು ಜೈನ ಚಿಂತನೆಗಳು ಪ್ರಧಾನವಾಗಿ, ಇವು ಹಿಂಸಾತ್ಮಕ ಯಜ್ಞಗಳನ್ನು ಪ್ರಶ್ನಿಸಿದವು ಮತ್ತು ಅಹಿಂಸಾ ತತ್ವವನ್ನು ಮುಂದಿಟ್ಟವು. ಈ ಕಾಲಘಟ್ಟದಲ್ಲಿ ದೊಡ್ಡ ಪ್ರಮಾಣದಲ್ಲಿ ಯಜ್ಞಗಳು ನಡೆಯುವುದು ಕಡಿಮೆಯಾಯಿತು. ಕೃಷಿ ಆಧಾರಿತ ಸಮಾಜದ ಸ್ಥಿರೀಕರಣವಾಗಿ ಪಶುಗಳನ್ನು ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ರೈತಾಪಿ ಜನರಿಗೆ ಉಂಟಾಯಿತು. ಈ ಹಂತದಲ್ಲಿ ಯಜ್ಞಯಾಗಗಳನ್ನು ನಡೆಸುವ ಸಮುದಾಯಗಳು ಒಂದು ಸಂಕಷ್ಟಕ್ಕೆ ಸಿಲುಕಿದವು, ಅದೇನೆಂದರೆ ಯಜ್ಞವಿಲ್ಲದೆ ತಮ್ಮ ನೈತಿಕ ಮತ್ತು ಸಾಮಾಜಿಕ ಅಧಿಕಾರವನ್ನು ಉಳಿಸಿಕೊಳ್ಳುವುದು ಹೇಗೆ? ಎನ್ನುವುದು. ಇದಕ್ಕೆ ಉತ್ತರವಾಗಿ ಆಹಾರವನ್ನು ನೈತಿಕತೆಯಾಗಿ ಪರಿವರ್ತಿಸಲಾಯಿತು. ಪ್ರಾಣಿ ಬಲಿ ಹೋದರೂ ಜಾತಿ ವ್ಯವಸ್ಥೆ ಹೋಗಲಿಲ್ಲ. ಸಸ್ಯಾಹಾರವನ್ನು ‘ಆಧ್ಯಾತ್ಮಿಕತೆ’ಯ ಚಿಹ್ನೆಯಾಗಿ ಚಾಲ್ತಿಗೆ ತರಲಾಯಿತು. ಆದರಿದು ಆಯ್ಕೆಯ ನೈತಿಕತೆಯಾಯಿತು.
ದುಡಿಯುವ ವರ್ಗಗಳು ತಾವು ವಿಕಾಸದ ಕಾಲದಿಂದ ಅನುಸರಿಸಿದ್ದ, ಸಹಜ ನಡೆ ಅನುಸರಿಸಿದರೆ ಬ್ರಾಹ್ಮಣ ಮೊದಲಾದ ಜಾತಿಗಳು ಸಸ್ಯಾಹಾರ ಅನುಸರಿಸಿ ದೇಹಶ್ರಮದಿಂದ ದೂರ ಉಳಿದವು. ಆದರೆ ಈ ಸಸ್ಯಾಹಾರ ಮನಸ್ಥಿತಿಯು ಕರುಣೆಯಿಂದ ಹುಟ್ಟಿದ ನೈತಿಕತೆ ಆಗದೆ, ಅದು ಶ್ರಮಿಕ ಸಮಾಜದಿಂದ ದೂರ ಉಳಿಯುವ ಸಾಮಾಜಿಕ ತಂತ್ರವಾಗಿ ಬದಲಾಯಿತು. ಶುದ್ಧತೆಯ ಹೆಸರಿನಲ್ಲಿ ಅಧಿಕಾರವನ್ನು ಸ್ಥಿರಗೊಳಿಸಿದ ಕ್ರಮವಾಗಿ ಬೆಳೆಯಿತು. ಆಹಾರಕ್ಕೆ ಧರ್ಮ-ಕರ್ಮಗಳನ್ನು, ಪಾಪ-ಪುಣ್ಯಗಳನ್ನು ಜೋಡಿಸುವ ಮೂಲಕ ಸಾವಿರಾರು ವರ್ಷಗಳ ಸಹಜ ಜೀವನವನ್ನು ಕದಡಲಾಯಿತು. ಆದರೆ ಇದರರ್ಥ ಸಸ್ಯಾಹಾರಿಗಳೆಲ್ಲರೂ ಸಾತ್ವಿಕರೂ, ಮಾಂಸಾಹಾರಿಗಳೆಲ್ಲರೂ ಕ್ರೂರಿಗಳೂ ಆಗಿದ್ದಾರೆಯೆ?
ಈ ಶುದ್ಧ ಅಶುದ್ಧತೆಯ ತತ್ವವು ನೈತಿಕ ತಂತ್ರವಾಗಿದ್ದು ಶೂದ್ರರು, ದಲಿತರು, ಆದಿವಾಸಿಗಳು ಮೊದಲಾದವರ ಶ್ರಮದ ಮೇಲೆ ಬೆಳೆದ ಸಮಾಜವು ತನ್ನನ್ನು ‘ಅಹಿಂಸಕ’ ಎಂದು ಘೋಷಿಸಿಕೊಂಡು ಮಾಂಸಾಹಾರವನ್ನು ರಾಕ್ಷಸೀಯ ಎಂಬಂತೆ ಬಿಂಬಿಸುವುದು ಸಾಮಾಜಿಕ ಶೋಷಣೆಯೇ ಆಗುತ್ತದೆ. ಭಾರತದ ಹೊರಗೆ ಇತರ ದೇಶಗಳಲ್ಲಿ ಈ ರೀತಿಯ ಶುದ್ಧತೆ-ಅಶುದ್ಧತೆ ಆಧಾರಿತ ಆಹಾರ ರಾಜಕೀಯ ಇಲ್ಲ. ಯೂರೋಪ್, ಅಮೆರಿಕ, ಪೂರ್ವ ಏಶ್ಯ, ಆಫ್ರಿಕಾ ಮೊದಲಾದ ಕಡೆ ಆಹಾರವನ್ನು ಪೌಷ್ಟಿಕತೆ, ರುಚಿ, ಹವಾಮಾನ ಮತ್ತು ಲಭ್ಯತೆ ಆಧಾರದಲ್ಲಿ ವರ್ಗೀಕರಿಸುತ್ತವೆ. ಯಾರಾದರೂ ಸಸ್ಯಾಹಾರಿ ಆದರೆ ಅದು ವೈಯಕ್ತಿಕ ಆಯ್ಕೆ. ಅದರಿಂದ ಅವನು ಮೇಲ್ವರ್ಗವಾಗುವುದಿಲ್ಲ. ಇಸ್ಲಾಮಿಕ್ ಅಥವಾ ಯಹೂದಿ ಸಂಸ್ಕೃತಿಯಲ್ಲಿ ಹಲಾಲ್ ಅಥವಾ ಕೋಷರ್ ನಿಯಮಗಳಿವೆ, ಆದರೆ ಅಲ್ಲಿ ಮಾಂಸ ಅಶುದ್ಧವಲ್ಲ; ಆ ನಿಯಮಗಳು ಕೇವಲ ಹೇಗೆ ಕೊಲ್ಲಬೇಕು ಎಂಬುದರ ಬಗ್ಗೆ ಮಾತ್ರವಿದ್ದರೆ, ಭಾರತದಲ್ಲಿ ಮಾತ್ರ ‘ಯಾರು ತಿನ್ನುತ್ತಾರೆ’ ಎಂಬುದರ ಮೇಲೆ ನಿಂತಿದೆ.
ಸಸ್ಯಾಹಾರವನ್ನು ‘ಅಹಿಂಸೆ’ ಎಂದು ಬಿಂಬಿಸುತ್ತಿರುವುದು ತಮಾಷೆಯಷ್ಟೇ ಆಗಿದೆ. ಗಮನಿಸಿದರೆ ಕೃಷಿಯೂ ಹಿಂಸೆಯೇ. ಕೃಷಿಯು ನಿಸರ್ಗದ ಅನೇಕ ಜೀವಿಗಳನ್ನು ಕೊಲ್ಲುತ್ತದೆ, ಉಳುಮೆ ಮೊದಲಾದ ಚಟುವಟಿಕೆಗಳು ಪಶುಗಳ ಶ್ರಮದಿಂದ ನಡೆಯುತ್ತವೆ. ಹಾಲು ಕರೆಯುವುದು ಸಹ ಪಶುಗಳ ಮೇಲಿನ ದೌರ್ಜನ್ಯವೆಂದು ಈಗಿನ ವೇಗನ್‌ಗಳು ವಾದಿಸುತ್ತಾರೆ. ಹೀಗಾಗಿ ‘ಹಿಂಸೆಯಿಲ್ಲದ ಆಹಾರ’ ಎಂಬುದು ಭ್ರಮೆ. ಮತ್ತಿಂದು ನಾವು ಎಲ್ಲೆಡೆ ಬಳಸುವ ‘ಮಾಂಸಾಹಾರ’ ಪದವೂ ಸಹ ಸಮಸ್ಯಾತ್ಮಕವಾಗಿದೆ. ಈ ಪದವು ಒಂದು ಸಂಪೂರ್ಣ, ಸಮಗ್ರ ಆಹಾರ ಸಂಸ್ಕೃತಿಯನ್ನು ಅಂದರೆ ಧಾನ್ಯ, ತರಕಾರಿ, ಹಾಲು, ಮಾಂಸ, ಮೀನು ಎಲ್ಲವನ್ನೂ ಒಳಗೊಂಡ ಸಂಪೂರ್ಣ ಆಹಾರವನ್ನು ಕೇವಲ ‘ಮಾಂಸ’ ಎಂಬ ಒಂದು ಪದಕ್ಕೆ ಕುಗ್ಗಿಸಿ ನೈತಿಕವಾಗಿ ಕೀಳಾಗಿಸುತ್ತದೆ. ವಾಸ್ತವವಾಗಿ ಇದು ‘ಸಮಗ್ರ ಆಹಾರ’ ಅಥವಾ ‘ಸಹಜ ಆಹಾರ’. ಮಾನವ ದೇಹ ಸರ್ವಭಕ್ಷಕವಾಗಿದ್ದು ಅವನು ಎಲ್ಲವನ್ನೂ ಜೀರ್ಣಿಸಲು ರೂಪುಗೊಂಡಿದ್ದಾನೆ. ‘ಮಾಂಸಾಹಾರ’ ಎಂಬ ಪದ ವೈಜ್ಞಾನಿಕವಾಗಿರದೆ ನೈತಿಕ ಪದವಾಗಿದೆ. ಮಾಂಸಾಹಾರಿ ಎಂಬ ಪದವನ್ನು ಕ್ರೌರ್ಯಕ್ಕೆ, ಜಾತಿಗೆ ಸಂಬಂಧಿಸಿದಂತೆ ಬಳಸಲಾಗುತ್ತದೆ. ಆದುದರಿಂದಲೇ ‘ಸಮಗ್ರಾಹಾರ’ ಎಂಬ ಪದ ಬಳಕೆ ಸೂಕ್ತ. ಅಂತೆಯೇ ಎಲ್ಲೆಡೆ ಸ್ವಚ್ಫ ಪರಿಸರದಲ್ಲಿ ಮಾಂಸಾಹಾರ ಮತ್ತು ಅದರ ಲಭ್ಯತೆ ದೊರೆಯುವಂತೆ ಮಾಡುವುದು ಸೂಕ್ತ. ಭಾರತದಲ್ಲಿ ಬಹುತೇಕ ಕಡೆ ಮಾಂಸ ಮಾರಾಟದ ಸ್ಥಳಗಳು ಕೆಟ್ಟದಾಗಿರುವುದನ್ನೂ ತಳ್ಳಿಹಾಕಲಾಗುವುದಿಲ್ಲ.
ಈಗ ಕಚೇರಿಗಳು, ವಿಶ್ವವಿದ್ಯಾನಿಲಯಗಳು, ಸಮ್ಮೇಳನಗಳು ಸಸ್ಯಾಹಾರವನ್ನು ಮಾತ್ರ ನೀಡುತ್ತವೆ. ಇದರರ್ಥ ಈ ಸ್ಥಳವು ಒಂದು ನಿರ್ದಿಷ್ಟ ಸಂಸ್ಕೃತಿಯ ಸ್ಥಳ ಎನ್ನುವುದಾಗುತ್ತದೆ. ಶೇ. 80ರಷ್ಟು ಜನರು ಸಮಗ್ರಾಹಾರವನ್ನು ತಿನ್ನುತ್ತಿದ್ದರೂ, ಅವರ ಆಹಾರ ಸಂಸ್ಕೃತಿಯನ್ನು ಸಾರ್ವಜನಿಕ ಸ್ಥಳದಿಂದ ಹೊರಗುಳಿಸಲಾಗುತ್ತದೆ. ವಿವಿಧ ಕಾರಣಗಳಿಗೆ ಮಾಂಸಾಹಾರವನ್ನು ಕೆಲವು ದಿನಗಳಂದು ನಿಷೇಧಿಸಲಾಗುತ್ತದೆ ಮತ್ತು ತಿನ್ನುವವರು ತಮ್ಮ ತಟ್ಟೆಗಳ ಮುಂದೆ ಪಾಪಪ್ರಜ್ಞೆಯಿಂದ ಕೀಳರಿಮೆಯಿಂದ ಕೂರುವಂತೆ ಮಾಡಲಾಗುತ್ತದೆ. ಇದು ಸಾವಿರಾರು ವರ್ಷಗಳ ಕಾಲ ಸಮಗ್ರಾಹಾರವನ್ನು ಪೋಷಿಸಿದ, ಆಯುರ್ವೇದದಂತಹ ಔಷಧ ವಿಧಾನಗಳಲ್ಲೂ ಯಾವ ಪ್ರಾಣಿಯ ಮಾಂಸ ಯಾವುದಕ್ಕೆ ಮದ್ದು ಎಂದು ಸಂಶೋಧನೆ ನಡೆಸಿದ್ದ ದೇಶದ ಹಿಮ್ಮುಖ ಚಲನೆಯಾಗಿ ಕಾಣುತ್ತದೆ.
ಹಾಗಾಗಿ, ಆಹಾರ ಎಂದರೆ ಕೇವಲ ಅನ್ನವಲ್ಲದೆ ಅಸ್ಮಿತೆಯ ಪ್ರಶ್ನೆ ಕೂಡ. ಆಹಾರದ ಮೂಲಕ ಸಮಾಜದಲ್ಲಿ ಮನುಷ್ಯರನ್ನು ಮೇಲು ಕೀಳು ಮಾಡುವ, ತಾವು ತಿನ್ನುತ್ತಿರುವುದು ಅಸಹ್ಯ, ಪಾಪಕರ ಎಂಬ ಮಾನಸಿಕ ಸಾಮಾಜಿಕ ವಾತಾವರಣ ನಿರ್ಮಿಸುವುದು ನಮ್ಮ ದೇಶದ ಅಪೂರ್ವವಾದ, ಸಮೃದ್ಧವಾದ ಹಿನ್ನೆಲೆಗೆ ತಕ್ಕುದಲ್ಲ. ಮಾನವನ ನಾಗರಿಕತೆಯನ್ನು ಆಹಾರವೇ ನಿರ್ಮಿಸಿದೆ ಎಂಬ ವಾಸ್ತವ ತಿಳಿದ ಮೇಲೂ ಅದೇ ಆಹಾರವನ್ನು ನಾವು ಮಾನವರನ್ನು ವಿಭಜಿಸಲು ಬಳಸಬಾರದು.







