ಏಡಿ ಸಾಕಣೆಗೆ ‘ವರ್ಟಿಕಲ್ ಬಾಕ್ಸ್’ ತಂತ್ರಜ್ಞಾನ!

ಮಂಗಳೂರು: ಮೀನು ಸಾಕಣೆ ಎಂದಾಕ್ಷಣ ಭಾರೀ ಪ್ರಮಾಣದ ನೀರು, ಜಾಗದ ಅಗತ್ಯವಿದೆ ಎಂಬ ಮಾತನ್ನು ಸುಳ್ಳಾಗಿಸಿದ್ದಾರೆ ಕರಾವಳಿಯ ಯುವಕ ಭರತ್ ಕುಮಾರ್. ಕಡಿಮೆ ಜಾಗದಲ್ಲಿಯೂ ಆಧುನಿಕ ತಂತ್ರಜ್ಞಾನ ಬಳಸಿ ಮೀನು ಸಾಕುವ ಮೂಲಕ ಉತ್ತಮ ಆದಾಯವನ್ನು ಗಳಿಸಿಬಹುದು ಎಂಬುದನ್ನು ಸಾಬೀತುಪಡಿಸಿದ್ದಾರೆ. ಅಲ್ಲದೇ ಸ್ವ ಉದ್ಯೋಗಕ್ಕೆ ಹಲವು ಯುವಕರಿಗೂ ಅವರು ಪ್ರೇರಣೆಯಾಗಿದ್ದಾರೆ.
ಕುಳಾಯಿಯ ತಮ್ಮ ಮನೆಯ ಟೆರೇಸ್ ಮೇಲೆ ‘ವರ್ಟಿಕಲ್ ಕ್ರಾಬ್ ಫಾರ್ಮಿಂಗ್’ ಪದ್ಧತಿಯನ್ನು ಅಳವಡಿಸಿಕೊಂಡು ಏಡಿ ಸಾಕುತ್ತಿರುವ ಭರತ್ ಕುಮಾರ್, 2013ರಿಂದ 2018ರ ಅವಧಿಯಲ್ಲಿ ಅತ್ಲೆಟಿಕ್ಸ್‌ನಲ್ಲಿ ಮಿಂಚಿದ್ದರು. ಬಳಿಕ ತಮ್ಮ ಕುಟುಂಬದ ಸಾಂಪ್ರದಾಯಿಕ ಮೀನುಗಾರಿಕೆ ಮತ್ತು ಬೋಟ್ ವ್ಯವಹಾರದತ್ತ ಆಸಕ್ತಿ ಬೆಳೆಸಿಕೊಂಡ ಭರತ್, ಎರಡು ಬೋಟ್‌ಗಳನ್ನು ನಿರ್ವಹಿಸುತ್ತಿದ್ದಾರೆ. ಈ ನಡುವೆ ಸ್ವಂತ ಉದ್ದಿಮೆಯ ಆಲೋಚನೆ ಮಾಡಿದಾಗ ಅವರಿಗೆ ಪ್ರೇರಣೆ ದೊರಕಿದ್ದು, ಮಲೇಶ್ಯಾದ ವರ್ಟಿಕಲ್ ಏಡಿ ಸಾಕಣೆ ವಿಧಾನ.
ಸ್ವ ಆಸಕ್ತಿಯೊಂದಿಗೆ ಈ ಪದ್ಧತಿಯ ಬಗ್ಗೆ ತಿಳಿದುಕೊಂಡು, ಮೀನುಗಾರಿಕಾ ಇಲಾಖೆಯ ಅಧಿಕಾರಿಗಳು ಹಾಗೂ ಮಂಗಳೂರು ಮೀನುಗಾರಿಕಾ ಕಾಲೇಜಿನ ಪ್ರಮುಖ ಮಾರ್ಗದರ್ಶನದೊಂದಿಗೆ 2025ರ ಜೂನ್‌ನಲ್ಲಿ ತಮ್ಮ ಮನೆಯ ಟೆರೇಸ್ ಮೇಲೆಯೇ ಏಡಿ ಸಾಕಣೆಗೆ ಮುಂದಾದರು. ಆರಂಭದಲ್ಲಿ ಕೆಲವೊಂದು ಸಮಸ್ಯೆಗಳು ಎದುರಾದರೂ ಆ ಸಮಸ್ಯೆಗಳಿಗೆ ಪರಿಹಾರಗಳನ್ನು ಹುಡುಕಿಕೊಂಡು ಸಾಗಿದ ಇವರ ಹೊಸ ಉದ್ಯಮ ಇಂದು ತಿಂಗಳೊಂದಕ್ಕೆ ಸರಿ ಸುಮಾರು 75,000 ರೂ. ಆದಾಯವನ್ನು ಗಳಿಸುವತ್ತ ತಲುಪಿದೆ.
ಏನಿದು ವರ್ಟಿಕಲ್ ಬಾಕ್ಸ್ ಪದ್ಧತಿ? :
ಅಂತರ್‌ರಾಷ್ಟ್ರೀಯವಾಗಿ ಏಡಿ ಕೃಷಿ ಪದ್ಧತಿಯ ಪ್ರಚಲಿತ ಪದ್ಧತಿ ವರ್ಟಿಕಲ್ ಬಾಕ್ಸ್. ಉಪ್ಪು ನೀರಿನ ಏಡಿಗಳನ್ನು ಪ್ಲಾಸ್ಟಿಕ್ ಬಕೆಟ್ ಅಥವಾ ಬಾಕ್ಸ್‌ಗಳಲ್ಲಿ ಸಾಕುವುದು ಸುಲಭದ ಕೆಲಸವಲ್ಲ. ಈ ವರ್ಟಿಕಲ್ ಬಾಕ್ಸ್ ಪದ್ಧತಿಯಡಿ (ಒಂದರ ಮೇಲೊಂದರಂತೆ ಆಯತಾಕಾರದ ಬಾಕ್ಸ್‌ಗಳ ಜೋಡಣೆ) ಏಡಿಗಳನ್ನು ಅತ್ಯಂತ ಜತನದಿಂದ ಕಾಯ್ದುಕೊಂಡು ಸಾಕಬಹುದಾಗಿದೆ. ಪ್ಲಾಸ್ಟಿಕ್ ಕಂಟೈನರ್‌ಗಳನ್ನು ಬಟ್ಟಲುಗಳಂತೆ ಲಂಬವಾಗಿ ಒಂದರ ಮೇಲೊಂದರಂತೆ ಈ ಪದ್ಧತಿಯಡಿ ಜೋಡಿಸಲಾಗುತ್ತದೆ.
ಪ್ರತಿಯೊಂದು ಬಾಕ್ಸ್‌ನಲ್ಲಿಯೂ ಕೇವಲ ಒಂದೇ ಏಡಿಯನ್ನು ಇಟ್ಟು ಸಾಕಲಾಗುತ್ತದೆ. ಇದರಿಂದ ಏಡಿಗಳ ಸುರಕ್ಷತೆ ಮತ್ತು ಬೆಳವಣಿಗೆ ಉತ್ತಮವಾಗಿರುತ್ತದೆ ಎನ್ನುತ್ತಾರೆ ಭರತ್.
ಏಡಿ ಸಾಕಾಣಿಕೆ ತಂತ್ರಜ್ಞಾನದ ಬಗ್ಗೆ ಆಸಕ್ತರಿಗೆ ತರಬೇತಿಯನ್ನೂ ನೀಡುತ್ತಾರೆ. ಈವರೆಗೆ 120ಕ್ಕೂ ಅಧಿಕ ಮಂದಿಗೆ ತರಬೇತಿ ನೀಡಿದ್ದು, ಅವರಲ್ಲಿ ಕೆಲವರು ಈ ಏಡಿ ಸಾಕಣೆ ಆರಂಭಿಸಿದ್ದಾರೆ ಎನ್ನುತ್ತಾರೆ ಭರತ್.
ಅಂತರ್‌ರಾಷ್ಟ್ರೀಯವಾಗಿ ಈ ವರ್ಟಿಕಲ್ ಏಡಿ ಸಾಕಣೆ ಸಾಕಷ್ಟು ಪ್ರಚಲಿತದಲ್ಲಿದೆ. ಆದರೆ ಸ್ಥಳೀಯವಾಗಿ ಈ ತಂತ್ರಜ್ಞಾನವನ್ನು ಅಳವಡಿಸಿಕೊಂಡು ದೊಡ್ಡ ಮಟ್ಟದಲ್ಲಿ ಈ ಏಡಿ ಕೃಷಿ ಮಾಡಿಕೊಂಡು ಪ್ರತಿಫಲ ಪಡೆಯಬೇಕಾದರೆ ಸ್ವಲ್ಪ ಸಮಯ ಹಿಡಿಯಿತು. ತಂತ್ರಜ್ಞಾನದ ಅಳವಡಿಕೆಯ ಜ್ಞಾನದ ಜೊತೆಗೆ ಈ ಏಡಿಗಳಿಗೆ ಅಗತ್ಯವಿರುವ ವಾತಾವರಣ, ಉಪ್ಪು ನೀರಿನ ವ್ಯವಸ್ಥೆಯನ್ನು ಮಾಡುವುದು ಅಗತ್ಯವಾಗಿರುತ್ತದೆ. ಕಡಿಮೆ ಜಾಗದಲ್ಲಿ ಮಾಡಬಹುದಾದ ಏಡಿ ಕೃಷಿ ಇದಾಗಿದ್ದು, ಸ್ವಂತ ಉದ್ದಿಮೆಗೆ ವಿಫುಲ ಅವಕಾಶವಿದೆ. ಈ ಕೃಷಿಯ ಬಗ್ಗೆ ನಾನು ನಿರಂತರವಾಗಿ ಮಾಹಿತಿಯನ್ನು ಕಲೆಹಾಕಿಕೊಳ್ಳುವ ಜೊತೆಗೆ ಹೊಸ ವಿಷಯಗಳನ್ನು ಅರಿತುಕೊಳ್ಳುತ್ತಿದ್ದೇನೆ. ಈ ಕೃಷಿಯನ್ನು ಇನ್ನಷ್ಟು ಉನ್ನತ ಮಟ್ಟಕ್ಕೆ ವಿಸ್ತರಿಸುವ ನಿಟ್ಟಿ ನಲ್ಲಿ ಸಿಂಗಾಪುರ ಮತ್ತು ಥಾಯ್ಲೆಂಡ್‌ಗೆ ಭೇಟಿ ನೀಡಿ ಅಲ್ಲಿನ ತಂತ್ರಜ್ಞಾನಗಳನ್ನು ಅರಿತುಕೊಳ್ಳುವ ಯೋಜನೆಯೂ ಇದೆ.
-ಭರತ್ ಕುಮಾರ್, ಏಡಿ ಕೃಷಿಕ






