ವಿಜಯನಗರ: ದರ ಹೆಚ್ಚಳಕ್ಕೆ ಹೋಟೆಲ್ಗಳ ಹಿಂಜರಿಕೆ

Photo: x.com/i/grok
ವಿಜಯನಗರ: ವಾಣಿಜ್ಯ ಅಡುಗೆ ಅನಿಲ (19 ಕೆಜಿ ಸಿಲಿಂಡರ್) ದರದಲ್ಲಿ ಉಂಟಾದ ಭಾರೀ ಏರಿಕೆ ಹೋಟೆಲ್ ಉದ್ಯಮಕ್ಕೆ ದೊಡ್ಡ ಹೊರೆ ತಂದಿದ್ದರೂ, ಸದ್ಯಕ್ಕೆ ತಿಂಡಿ ಹಾಗೂ ಊಟದ ದರ ಹೆಚ್ಚಿಸದೇ ‘ಕಾದು ನೋಡುವ’ ತಂತ್ರ ಅನುಸರಿಸಲು ಜಿಲ್ಲೆಯ ಹೋಟೆಲ್ ಮಾಲಕರು ನಿರ್ಧರಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ವಾಣಿಜ್ಯ ಗ್ಯಾಸ್ ಸಿಲಿಂಡರ್ ದರವು ಸುಮಾರು ರೂ. 2200ರಿಂದ ರೂ. 3200ಕ್ಕೆ ಏರಿಕೆಯಾಗಿದೆ. ಇದರಿಂದ ಸಣ್ಣ ಹಾಗೂ ಮದ್ಯಮ ಹೋಟೆಲ್ ಉದ್ಯಮಿಗಳು ಆರ್ಥಿಕ ಒತ್ತಡಕ್ಕೆ ಸಿಲುಕಿದ್ದಾರೆ. ಅಡುಗೆ ವೆಚ್ಚ, ಕಾರ್ಮಿಕರ ವೇತನ, ತರಕಾರಿ ಹಾಗೂ ದಿನಸಿ ವಸ್ತುಗಳ ಬೆಲೆ ಏರಿಕೆಯ ನಡುವೆಯೇ ಗ್ಯಾಸ್ ದರ ಏರಿಕೆ ಮತ್ತೊಂದು ಹೊಡೆತ ನೀಡಿದೆ.
ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಅಮೆರಿಕ, ಇರಾನ್ ಹಾಗೂ ಇಸ್ರೇಲ್ ನಡುವಿನ ಉದ್ವಿಗ್ನತೆ ಮತ್ತು ಯುದ್ಧ ಪರಿಸ್ಥಿತಿಯ ಪರಿಣಾಮವಾಗಿ ಇಂಧನ ಮಾರುಕಟ್ಟೆಯಲ್ಲಿ ಅಸ್ಥಿರತೆ ಉಂಟಾಗಿದ್ದು, ಅದರ ಪರಿಣಾಮ ದೇಶೀಯ ಅನಿಲ ದರಗಳ ಮೇಲೂ ಬಿದ್ದಿದೆ ಎಂದು ಉದ್ಯಮಿಗಳು ಅಭಿಪ್ರಾಯಪಟ್ಟಿದ್ದಾರೆ.
ಆದರೆ ವಿಶ್ವ ಪ್ರಸಿದ್ಧ ಪ್ರವಾಸಿ ತಾಣಗಳಾದ ಹಂಪಿ ಹಾಗೂ ತುಂಗಭದ್ರಾ ಜಲಾಶಯ ಪ್ರದೇಶಗಳಿಗೆ ವಾರಾಂತ್ಯ ಮತ್ತು ರಜಾ ದಿನಗಳಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಸಾವಿರಾರು ಪ್ರವಾಸಿಗರು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ, ಪ್ರವಾಸಿಗರಿಗೆ ಯಾವುದೇ ತೊಂದರೆ ಆಗಬಾರದು ಎಂಬ ಉದ್ದೇಶದಿಂದ ಸದ್ಯಕ್ಕೆ ತಿಂಡಿ ಮತ್ತು ಊಟದ ದರ ಹೆಚ್ಚಿಸದಿರಲು ಹೋಟೆಲ್ ಮಾಲೀಕರು ತೀರ್ಮಾನಿಸಿದ್ದಾರೆ.
ಹೋಟೆಲ್ ಉದ್ಯಮಿಗಳು ಈಗಾಗಲೇ ಕಡಿಮೆ ಲಾಭದಲ್ಲಿ ವ್ಯವಹಾರ ನಡೆಸುತ್ತಿದ್ದು, ಬೆಲೆ ಏರಿಕೆ ಮಾಡಿದರೆ ಗ್ರಾಹಕರ ಸಂಖ್ಯೆ ಕುಸಿಯುವ ಆತಂಕವೂ ಎದುರಾಗಿದೆ. ಹೀಗಾಗಿ ತಕ್ಷಣ ದರ ಹೆಚ್ಚಳ ಮಾಡುವ ಬದಲು ಪರಿಸ್ಥಿತಿಯನ್ನು ಅವಲೋಕಿಸಿ ಮುಂದಿನ ನಿರ್ಧಾರ ಕೈಗೊಳ್ಳುವ ಚಿಂತನೆ ನಡೆದಿದೆ.
ಇನ್ನೊಂದೆಡೆ ನಿರಂತರವಾಗಿ ಏರುತ್ತಿರುವ ವಾಣಿಜ್ಯ ಗ್ಯಾಸ್ ದರ ನಿಯಂತ್ರಣಕ್ಕೆ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಯಾವ ಕ್ರಮ ಕೈಗೊಳ್ಳಲಿವೆ ಎಂಬುದನ್ನು ಉದ್ಯಮಿಗಳು ಕಾದು ನೋಡುತ್ತಿದ್ದಾರೆ. ತೆರಿಗೆ ಸಡಿಲಿಕೆ, ಸಬ್ಸಿಡಿ ಅಥವಾ ದರ ನಿಯಂತ್ರಣದಂತಹ ಕ್ರಮಗಳನ್ನು ಸರಕಾರ ಕೈಗೊಳ್ಳಬೇಕು ಎಂಬ ಒತ್ತಾಯವೂ ಕೇಳಿಬರುತ್ತಿದೆ.
ಒಟ್ಟಾರೆ, ಗ್ಯಾಸ್ ದರ ಏರಿಕೆಯಿಂದ ಹೋಟೆಲ್ ಉದ್ಯಮ ಸಂಕಷ್ಟಕ್ಕೆ ಸಿಲುಕಿದ್ದರೂ, ಗ್ರಾಹಕರ ಹಿತದೃಷ್ಟಿಯಿಂದ ತಕ್ಷಣ ಬೆಲೆ ಏರಿಕೆ ಮಾಡದೆ ಉದ್ಯಮಿಗಳು ತಾಳ್ಮೆಯ ನಡೆ ಅನುಸರಿಸುತ್ತಿರುವುದು ಗಮನಾರ್ಹವಾಗಿದೆ.
ವಾಣಿಜ್ಯ ಗ್ಯಾಸ್ ಸಿಲಿಂಡರ್ ದರ ಏರಿಕೆ ನಮ್ಮ ಉದ್ಯಮಕ್ಕೆ ಭಾರೀ ಹೊರೆ ತಂದಿದೆ. ಮೊದಲು ರೂ. 2200 ಇದ್ದ ಸಿಲಿಂಡರ್ ಈಗ ರೂ. 3200ಕ್ಕಿಂತ ಹೆಚ್ಚು ಆಗಿದೆ. ಆದರೂ ಹಂಪಿ ಹಾಗೂ ತುಂಗಭದ್ರಾ ಭಾಗಕ್ಕೆ ಬರುವ ಪ್ರವಾಸಿಗರಿಗೆ ತೊಂದರೆ ಆಗಬಾರದು ಎಂಬ ಕಾರಣಕ್ಕೆ ಸದ್ಯಕ್ಕೆ ತಿಂಡಿ, ಊಟದ ದರ ಹೆಚ್ಚಿಸಿಲ್ಲ. ಮುಂದಿನ ದಿನಗಳಲ್ಲಿ ಗ್ಯಾಸ್ ದರ ಮತ್ತಷ್ಟು ಏರಿದರೆ ಸಂಘದ ಸಭೆ ನಡೆಸಿ ದರ ಪರಿಷ್ಕರಣೆ ಕುರಿತು ತೀರ್ಮಾನ ಕೈಗೊಳ್ಳಬೇಕಾದ ಪರಿಸ್ಥಿತಿ ಬರಬಹುದು.
<ಶ್ರೀಪಾದ್, ಹೋಟೆಲ್ ಮಾಲಕರು
ವಾಣಿಜ್ಯ ಗ್ಯಾಸ್ ದರ ಏರಿಕೆಯಾದರೂ ವಿಜಯನಗರ ಜಿಲ್ಲೆಯ ಯಾವುದೇ ಹೋಟೆಲ್ಗಳಲ್ಲಿ ತಕ್ಷಣ ತಿಂಡಿ ಮತ್ತು ಊಟದ ದರ ಹೆಚ್ಚಳ ಮಾಡಿಲ್ಲ ಎಂಬ ಮಾಹಿತಿ ಇದೆ. ಆಹಾರ ಪದಾರ್ಥಗಳ ಬೆಲೆ ನಿಗದಿ ಮಾಡುವಾಗ ಒಟ್ಟಾರೆ ಉತ್ಪಾದನಾ ವೆಚ್ಚವನ್ನು ಪರಿಗಣಿಸಿ ಹೋಟೆಲ್ ಮಾಲೀಕರು ದರ ನಿಗದಿಪಡಿಸಬಹುದು. ಆದರೆ ಗ್ಯಾಸ್ ದರ ಏರಿಕೆಯಾಗಿದೆ ಎಂದು ಪ್ರತ್ಯೇಕವಾಗಿ ಬಿಲ್ಲಿನಲ್ಲಿ ಹೆಚ್ಚುವರಿ ಶುಲ್ಕ ಸೇರಿಸುವುದು ನಿಯಮಾನುಸಾರ ಸರಿಯಲ್ಲ. ಒಂದು ವೇಳೆ ಆಹಾರ ಉತ್ಪಾದನಾ ವೆಚ್ಚದಲ್ಲಿ ಒಟ್ಟಾರೆ ಏರಿಕೆ ಕಂಡುಬಂದರೆ, ಅದರ ಆಧಾರದ ಮೇಲೆ ಮಾತ್ರ ದರ ಪರಿಷ್ಕರಣೆ ಮಾಡುವ ಅವಕಾಶ ಇರುತ್ತದೆ.
<ರಿಯಾಝ್, ಉಪ ನಿರ್ದೇಶಕ, ಆಹಾರ ಸರಬರಾಜು ಇಲಾಖೆ






