ಗುಮ್ಮಟಗಳ ನಗರ ವಿಜಯಪುರ

ಐತಿಹಾಸಿಕ ಎಂಬ ಶಬ್ದ ಬಂದಾಗ ಥಟ್ಟನೆ ನೆನಪಾಗುವುದು ಗುಮ್ಮಟ ನಗರಿ ವಿಜಯಪುರ ಜಿಲ್ಲೆ. ನೂರಾರು ವೈಶಿಷ್ಟ್ಯಪೂರ್ಣ ಸ್ಮಾರಕಗಳನ್ನು ತನ್ನ ಒಡಲಲ್ಲಿರಿಸಿಕೊಂಡಿರುವ ವಿಜಯಪುರ ಸ್ಮಾರಕಗಳ ನಗರ. ಸ್ಮಾರಕಗಳ ರಾಜಧಾನಿ ಎಂದರೂ ತಪ್ಪಾಗಲಾರದು. ರೋಮ್ ನಗರದಲ್ಲಿರುವ ಸ್ಮಾರಕಗಳಂತೆ ವಿಜಯಪುರದಲ್ಲಿಯೂ ಅಮೋಘ ಸ್ಮಾರಕಗಳಿವೆ. ಹೀಗಾಗಿ ರೋಮ್ ನಗರಕ್ಕೆ ವಿಜಯಪುರವನ್ನು ಹೋಲಿಕೆ ಮಾಡಿದ ಉದಾಹರಣೆಗಳಿವೆ. ಅಲ್ಲದೆ ಶರಣರು, ಸೂಫಿ ಸಂತರ ಬೀಡು. ಸಮಬಾಳು, ಸಮಪಾಲು ತತ್ವವನ್ನು ವಿಶ್ವಕ್ಕೆ ಸಾರಿದ, ಕಾಯಕವೇ ಕೈಲಾಸವೆಂದು ಜಗತ್ತಿಗೆ ತೋರಿಸಿಕೊಟ್ಟ ವಿಶ್ವಗುರು ಬಸವಣ್ಣನವರಿಗೆ ಜನ್ಮ ನೀಡಿದ ಪುಣ್ಯಭೂಮಿ. ಐತಿಹಾಸಿಕ ಸ್ಮಾರಕಗಳ ತವರೂರು.
ಗೋಳಗುಮ್ಮಟ..!
ಗೋಳಗುಮ್ಮಟ ಅರ್ಧ ಗೋಲಾಕಾರದ ಬೃಹತ್ ರಚನೆಯಾಗಿದ್ದು, ಆದಿಲ್ ಶಾಹಿ ಸುಲ್ತಾನನ ಸಮಾಧಿ ಸ್ಮಾರಕವಾಗಿದೆ. ಆದಿಲ್ ಶಾಹಿ ಹಿಂದೆ ವಿಜಯಪುರ ಆಳುತ್ತಿದ್ದ ಶಾಹಿ ಸಾಮ್ರಾಜ್ಯದ ಏಳನೆಯ ದೊರೆಯಾಗಿದ್ದ. ಸರಳ ಹಾಗೂ ಅಷ್ಟೇ ಪರಿಣಾಮಕಾರಿಯಾದ ರಚನೆಯು 1656ರಲ್ಲಿ ದಾಬೂಲ್ ಪ್ರದೇಶದ ಯಾಕೂಬ್ ಎಂಬ ವಾಸ್ತುಶಿಲ್ಪಿಯಿಂದ ಕಟ್ಟಲಾಯಿತು.
ಗೋಲಗುಮ್ಮಟದ ಗೋಲವು ಆಂತರಿಕವಾಗಿ 37.92 ಮೀ. ವ್ಯಾಸ, 44 ಮೀ. ಬಾಹ್ಯ ವ್ಯಾಸ ಹೊಂದಿದೆ. ಇನ್ನು ಗೋಲದ ದಪ್ಪವು ಕೆಳಗೆ 3.05 ಮೀ., ಮೇಲೆ 2.74 ಮೀ.ಗಳಷ್ಟಿದೆ. ಇದು ಗುಮ್ಮಟವು ವಿಶಾಲವಾಗಿದೆ ಎಂಬುದನ್ನು ತಿಳಿಸುವ ಮಾನದಂಡವಾಗಿದೆ.
ಚೌಕಾಕಾರದ ಸ್ಮಾರಕದ ನಾಲ್ಕು ಮೂಲೆಗಳಲ್ಲಿ ಅಷ್ಟಭುಜಾಕೃತಿಯ ಎತ್ತರವಾದ ಮಿನಾರು(ಗೋಪುರ)ಗಳಿವೆ. ಈ ಗೋಪುರಗಳಲ್ಲಿ ಮೆಟ್ಟಿಲುಗಳಿದ್ದು, ಇದರ ಮೂಲಕ ಸ್ಮಾರಕದ ನೆಲದಿಂದ 33 ಮೀ. ಎತ್ತರದಲ್ಲಿರುವ ‘ವಿಸ್ಟರಿಂಗ್ ಗ್ಯಾಲರಿ’ಗೆ ( ಪಿಸುಮಾತಿನ ಸಭಾಂಗಣ) ಭೇಟಿ ನೀಡಬಹುದು. ವಿಸ್ಟರಿಂಗ್ ಗ್ಯಾಲರಿಯು ಛಾವಣಿ ಗೋಲಾಕಾರವಾಗಿದೆ. ಇನ್ನೂ ಇದು ಶಬ್ಧ ಅಥವಾ ಧ್ವನಿ ವಿಜ್ಞಾನಕ್ಕೆ ಒಂದು ಅದ್ಭುತ ಉದಾಹರಣೆಯಾಗಿದೆ. ಈ ಗ್ಯಾಲರಿಯಲ್ಲಿ ನಿಂತು ಒಮ್ಮೆ ಚಪ್ಪಾಳೆ ತಟ್ಟಿದರೆ ಕನಿಷ್ಠ ಪಕ್ಷ ಆ ಚಪ್ಪಾಳೆಯ ಧ್ವನಿಯು ಏಳು ಬಾರಿಯಾದರೂ ಪ್ರತಿಧ್ವನಿಸುತ್ತದೆ.
ಇಬ್ರಾಹಿಂ ರೋಜಾ
ನಗರದಲ್ಲಿರುವ ಈ ಸ್ಮಾರಕವನ್ನು ಎರಡನೇ ಇಬ್ರಾಹಿಮ್ ಆದಿಲ್ ಶಾಹ್ ನಿರ್ಮಿಸಿದ್ದಾನೆ. ವಾಸ್ತುಶಿಲ್ಪದ ದೃಷ್ಟಿಯಿಂದಲೂ ಇಬ್ರಾಹಿಂ ರೋಜಾ ಅತ್ಯಂತ ಅಪರೂಪದ ಕಟ್ಟಡ. ಮಸೀದಿಯ ಎದುರಿಗಿರುವ 2ನೇ ಇಬ್ರಾಹಿಂ ಆದಿಲ್ ಶಾಹಿಯ ಗೋರಿಯ ಮುಂಭಾಗದಲ್ಲಿ ಕಲ್ಲಿನ ಸರಪಳಿಗಳನ್ನು ಇಳಿಬಿಡಲಾಗಿದೆ. ಇದು ದಖನಿ ಶೈಲಿಯ ಅತ್ಯಂತ ಕುಶಲ, ಸೂಕ್ಷ್ಮ, ಶ್ರೀಮಂತ ವಾಸ್ತುಶಿಲ್ಪ. ಮಸೀದಿ ಹಾಗೂ ಗೋರಿಗಳನ್ನು ಎದುರುಬದುರಾಗಿ ಹೊಂದಿರುವ ಅಪರೂಪದ ಸುಂದರ ವಾಸ್ತುಕಲಾ ಸಂಕೀರ್ಣ. ಇಲ್ಲಿನ ಮಸೀದಿ ಹಾಗೂ ಗೋರಿ ಒಂದು ದೊಡ್ಡ ಚಿಲುಮೆ ಮತ್ತು ಜಲಾಶಯದಿಂದ ಪ್ರತ್ಯೇಕಿಸಲ್ಪಟ್ಟಿವೆ. ಈ ಕಲಾಕೃತಿಗಳ ಗುಂಪು ಎತ್ತರವಾದ ಜಗಲಿಯ ಮೇಲೆ 400 ಚದರ ಅಡಿ ಆಯತಾಕಾರದ ಆವರಣದೊಳಗಿವೆೆ. ನಾಲ್ಕು ಭವ್ಯ ಮಿನಾರುಗಳಿವೆ. ಉತ್ತರ ಬದಿಯ ಮಧ್ಯದಲ್ಲಿ 54 ಚದರ ಅಡಿಯ ಕೋಣೆ ಇದ್ದು, 4 ಕಡೆಗೆ ತೆರೆದ ಕಂಬಗಳ ಮೊಗಸಾಲೆಯಿದೆ. ಈ ಕಂಬಗಳ ಸಾಲಿನ ವಾಸ್ತುಶಿಲ್ಪದ ಸ್ಮಾರಕದಲ್ಲಿ ಆಯತಾಕಾರದ ಪ್ರಾರ್ಥನಾ ಮಂದಿರ ಇದೆ. ಮಸೀದಿಯ ಪ್ರತಿಯೊಂದು ಮೂಲೆಯಲ್ಲಿಯೂ ಕೋನಾಕಾರದ ಮಿನಾರಗಳು ಚಿತ್ತಾಕರ್ಷಕವಾಗಿವೆ. ಪ್ರತಿ ಮಿನಾರವನ್ನು ಆವರಿಸಿ 6 ಕಿರು ಮಿನಾರಗಳಿವೆ. ಗಾರೆ-ಗಚ್ಚಿನಿಂದ ಇವುಗಳನ್ನು ಭವ್ಯವಾಗಿ ಅಲಂಕರಿಸಲಾಗಿದೆ.
ಬಾರಾ ಕಮಾನ್
ಐತಿಹಾಸಿಕ ಸ್ಮಾರಕ ಬಾರಾ ಕಮಾನನ್ನು 1656ರಿಂದ 1686ರವರೆಗೆ ಆಳಿದ ಬಿಜಾಪುರದ ಸುಲ್ತಾನ್ ಅಲಿ ಆದಿಲ್ಶಾಹಿ ಅವರ ಅಪೂರ್ಣ ಸಮಾಧಿ. ಸಮಾಧಿಯ ಸುತ್ತಲೂ ಲಂಬವಾಗಿ ಮತ್ತು ಅಡ್ಡಲಾಗಿ ಒಟ್ಟು ಹನ್ನೆರಡು ಕಮಾನುಗಳಿವೆ.1672ರಲ್ಲಿ ಅಲಿ ಎರಡನೇ ಆದಿಲ್ ಶಾಹಿ ಬಾರಾ ಕಮಾನ್ ನಿರ್ಮಿಸಿದನು. ಆದರೆ ಬಾರಾ ಕಾಮನ್ ಪೂರ್ಣಗೊಳ್ಳುವ ಮೊದಲು, ಅವನ ಸ್ವಂತ ತಂದೆ ಮುಹಮ್ಮದ್ ಆದಿಲ್ ಶಾ ಕೊಲೆ ಮಾಡಿದನು. ಬಾರಾ ಕಮಾನ್ ನಿರ್ಮಾಣವಾದರೆ, ಗೋಲ್ ಗುಂಬಜ್ ವಾಸ್ತುಶಿಲ್ಪದ ವೈಭವ ಕಡಿಮೆಯಾಗುತ್ತದೆ ಎಂದು ಭಾವಿಸಿದ ತನ್ನ ತಂದೆಯಿಂದಲೇ ಎರಡನೇ ಆದಿಲ್ ಶಾಹಿ ಕೊಲ್ಲಲ್ಪಟ್ಟನು. ಇದರಿಂದ ಸಮಾಧಿ ಮತ್ತು ಕಮಾನುಗಳು ಅಪೂರ್ಣವಾದವು ಎಂದು ಹೇಳಲಾಗುತ್ತದೆ.
ಬಾರಾ ಕಮಾನ್ ಎರಡನೇ ಅಲಿ ಆದಿಲ್ ಶಾ, ಅವನ ಪತ್ನಿ ಚಾಂದ್ ಬೀಬಿ ಮತ್ತು ಉಪಪತ್ನಿಯರು ಹಾಗೂ ಅವರ ಹೆಣ್ಣುಮಕ್ಕಳ ಸಮಾಧಿಗಳನ್ನು ಒಳಗೊಂಡಿದೆ. ಇದೊಂದು ಸಂಪೂರ್ಣಗೊಳ್ಳದ ಎರಡನೇ ಅಲಿ ಆದಿಲ್ ಶಾಹಿಯ ಭವ್ಯ ಸಮಾಧಿ. ಅಲಿ ಆದಿಲ್ ಶಾಹಿಯು ಭವ್ಯವಾಗಿ ನಿರ್ಮಿಸಲು ಆಶಿಸಿದ್ದನು. ಯೋಜನೆಯ ಪ್ರಕಾರ, 12 (ಹಿಂದಿಯಲ್ಲಿ ಬಾರಾ ಎಂದರೆ 12) ಕಮಾನುಗಳನ್ನು ಉದ್ದವಾಗಿಯೂ ಅಗಲವಾಗಿಯೂ ನಿರ್ಮಿಸಬೇಕಾಗಿತ್ತು. ಆದರೆ ಅದರ ನಿರ್ಮಾಣ ಕಾರ್ಯವು ಸಂಪೂರ್ಣಗೊಳ್ಳಲಿಲ್ಲ.
ಆಸರ್ ಮಹಲ್
ಮೊಹಮ್ಮದ್ ಆದಿಲ್ ಶಾಹ್‌ನಿಂದ 1646ರಲ್ಲಿ ನಿರ್ಮಿಸಲಾದ ಆಸರ್ ಮಹಲ್ ನ್ಯಾಯ ಬಗೆಹರಿಸುವ ಆಲಯವಾಗಿತ್ತು. ಇಲ್ಲಿ ಮೂರು ಹೊಂಡಗಳಿವೆ. ಮಧ್ಯದಲ್ಲಿರುವ ಹೊಂಡವು 15 ಅಡಿ ಆಳ ಹೊಂದಿದ್ದು, ಉಳಿದೆರಡು ಹೊಂಡಗಳಿಗಿಂತ ದೊಡ್ಡದಾಗಿದೆ. ಇಲ್ಲಿ ಪ್ರವಾದಿ ಮಹಮ್ಮದ್ ಪೈಗಂಬರ್ ಅವರ ಕೇಶಗಳನ್ನು ಇರಿಸಲಾಗಿದೆ. ಆಸಾರ್ ಮಹಲ್‌ನಲ್ಲಿ ಮೀಲಾದುನ್ನಬಿ ಪ್ರಯುಕ್ತ ಉರೂಸ್ ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯುತ್ತದೆ.
ಸ್ಮಾರಕದ ಛಾವಣಿಗಳ ಮೇಲೆ ಮೂಡಿ ಬಂದ ಸುಂದರ ವಿನ್ಯಾಸದ ರಚನೆಗಳು ಇಂದಿನ ಹಾಗೆ ಅತ್ಯಾಧುನಿಕ ಯಾವ ಸಲಕರಣೆಗಳಿಲ್ಲದೆಯೂ ಕರಾರುವಕ್ಕಾಗಿಸಿದ ಅಂದಿನ ಶಿಲ್ಪಿಗಳ ನೈಪುಣ್ಯ ತೋರಿಸುತ್ತವೆ.
ಜಾಮಿಯಾ ಮಸೀದಿ ದಕ್ಷಿಣ ಭಾರತದ ಅತಿದೊಡ್ಡ ಮಸೀದಿಯಾಗಿದೆ. 1578ರಲ್ಲಿ ಒಂದನೇ ಅಲಿ ಆದಿಲ್ ಶಾ ಜಾಮಿಯಾ ಮಸೀದಿ ಕಟ್ಟಿಸಿದ. 1,16,300 ಚ.ಮೀ. ವಿಸ್ತಾರವಾದ ಆವರಣ ಹೊಂದಿದೆ. 2250 ಜನ ಒಟ್ಟಾಗಿ ಕುಳಿತು ಪ್ರಾರ್ಥಿಸುವ ಸಾಮರ್ಥ್ಯದ ಮಸೀದಿಯಲ್ಲಿ ಸುವರ್ಣ ಅಕ್ಷರಗಳಲ್ಲಿ ಖುರಾನ್ ಬರಹ ಬರೆಯಲಾಗಿದೆ. ಕುರಾನ್ ಜಾಮಿಯಾ ಮಸೀದಿಯ ಒಳಭಾಗದಲ್ಲಿ ಕೆತ್ತಲಾಗಿದೆ.
ಜಾಮಿಯಾ ಮಸೀದಿ ಆವರಣದಲ್ಲಿ ದೊಡ್ಡ ಪ್ರಾಂಗಣ, ನೀರಿನ ತೊಟ್ಟಿ ಮತ್ತು ಆಸನ ವ್ಯವಸ್ಥೆ ಇವೆ. ಮಸೀದಿ ಕಟ್ಟಡವು 170 ಮೀಟರ್ ಉದ್ದ, 70 ಮೀಟರ್ ಅಗಲವಿದೆ. ಒಂಬತ್ತು ದೊಡ್ಡ ಕಮಾನುಗಳು, ಪ್ರಭಾವಶಾಲಿ ಗುಮ್ಮಟ, 2250 ಆಯತಾಕಾರದ ಅಂಚುಗಳು ಜಾಮಿಯಾ ಮಸೀದಿಯ ಕೆಲವು ವಿಶಿಷ್ಟ ಲಕ್ಷಣಗಳಾಗಿವೆ.
ಉಪ್ಪಲಿ ಬುರುಜ
95 ಅಡಿಯ ಉಪ್ಪಲಿ ಬುರುಜನ್ನು 1583ರಲ್ಲಿ ಅಲಿ ಆದಿಲ್‌ಶಾಹನ ಕಾಲದಲ್ಲಿ ದಂಡಾಧಿಕಾರಿಯಾಗಿದ್ದ ಹೈದರ್ ಖಾನ್‌ನಿಂದ ನಿರ್ಮಿತವಾಗಿದೆ. 95 ಅಡಿ ಎತ್ತರವಿದ್ದು, ಮೆಟ್ಟಿಲುಗಳನ್ನು ಹೊಂದಿದೆ. ಇಲ್ಲಿ ಎರಡು ತೋಪುಗಳಿವೆ. ಒಂದು 30 ಅಡಿ 8 ಇಂಚಿನದಾಗಿದೆ. ಇನ್ನೊಂದು 19 ಅಡಿ 8 ಇಂಚಿನದಾಗಿದೆ. ಈ ಬುರುಜ ಕಾವಲುಗಾರರಿಗಾಗಿ ಕಟ್ಟಿಸಿದ್ದಾಗಿದೆ. ಗೋಪುರದ ಮೇಲ್ಭಾಗವು ನಗರದ ಒಂದು ವಿಹಂಗಮ ನೋಟ ನೀಡುತ್ತದೆ. ಗೋಪುರದ ಮೇಲೆ ದೊಡ್ಡ ಗಾತ್ರದ ಎರಡು ಬಂದೂಕುಗಳಿವೆ. ಮೇಲ್ವಿಚಾರಣೆ ಉದ್ದೇಶಗಳಿಗಾಗಿ ಬಳಸಲಾದ ಈ ಗೋಪುರವು ಈಗ ಬೇಲಿಯಿಂದ ಸುತ್ತುವರಿದಿದೆ. ಉಪಲಿ ಬುರುಜ್‌ನ ಮೇಲಕ್ಕೆ ತಲುಪಲು ವೃತ್ತಾಕಾರದ ಮೆಟ್ಟಿಲು ನಿರ್ಮಿಸಲಾಗಿದೆ.
ಸುಂದರ ತಾಜ ಬಾವಡಿ..!
ಬಿಜಾಪುರದ ದೊರೆ ಎರಡನೆಯ ಇಬ್ರಾಹಿಮನ ಮೊದಲನೇ ಪತ್ನಿಯಾದ ತಾಜ್ ಸುಲ್ತಾನಾಳ ಗೌರವಾರ್ಥ ಈ ಕೊಳ ನಿರ್ಮಿಸಲಾಯಿತು. ಅಷ್ಟ ಭುಜಗಳುಳ್ಳ ಎರಡು ರಚನೆಗಳಿದ್ದು, ಇದರ ಪೂರ್ವ ಹಾಗೂ ಪಶ್ಚಿಮಕ್ಕೆ ವಿರಮಿಸಲು ನಿರ್ಮಿಸಲಾದ ವಿಶಾಲವಾದ ಕೊಠಡಿಗಳಿವೆ.
ಸಂಗೀತ ಸಭೆ ಸಂಗೀತ ಮಹಲ್
ಇದು ವಿಜಯಪುರದ ಪಶ್ಚಿಮಕ್ಕೆ ಸುಮಾರು 8 ಕಿ.ಮೀ. ದೂರದಲ್ಲಿರುವ ತೊರವಿ ಗ್ರಾಮದಲ್ಲಿದೆ. ಎರಡನೇ ಇಬ್ರಾಹಿಂ ಆದಿಲ್‌ಶಾಹಿ ಕಟ್ಟಿಸಿದ ಈ ಮಹಲ್‌ನಲ್ಲಿ 16ನೆ ಶತಮಾನದ ವಿಶ್ವದ ಅತಿ ದೊಡ್ಡ ಅಡಿಟೋರಿಯಂ, ದೇಶ-ವಿದೇಶದ ಪ್ರಖ್ಯಾತ ಕಲಾವಿದರು ಇಲ್ಲಿಗೆ ಬಂದು ಗಾಯನ ಪ್ರದರ್ಶನ ನೀಡುತ್ತಿದ್ದರು. ಅಲ್ಲದೆ ಇದೇ ಸ್ಥಳದಲ್ಲಿ ಪ್ರತಿ ವರ್ಷ ಜನವರಿ, ಫೆಬ್ರವರಿ ತಿಂಗಳಲ್ಲಿ ಪ್ರಸಿದ್ಧ ನವರಸಪುರ ಸಂಗೀತ ಉತ್ಸವ ಆಯೋಜಿಸಲಾಗುತ್ತದೆ.
ಗಗನ್ ಮಹಲ್
ಅರಕಿಲ್ಲೆ ವ್ಯಾಪ್ತಿಯಲ್ಲಿ ಅತ್ಯುತ್ತಮ ಕಟ್ಟಡವೆಂದರೆ ಗಗನ ಮಹಲ್. 1561ರ ಆಸುಪಾಸಿನಲ್ಲಿ ಸುಲ್ತಾನರ ಅರಮನೆ ಮತ್ತು ದರ್ಬಾರ್ ಹಾಲ್ ಎಂದು ಕರೆಯಲ್ಪಡುತ್ತಿತ್ತು. ಇದನ್ನು ಗುಮ್ಮಟ, ಮಿನಾರಗಳಿಲ್ಲದೆ ನಿರ್ಮಿಸಲಾಗಿದೆ. ಕೇವಲ ಕಮಾನುಗಳನ್ನು ಒಳಗೊಂಡಿದೆ. ರಾಜ ತನ್ನ ಬಿಡುವಿನ ವೇಳೆಯಲ್ಲಿ ಇಲ್ಲಿ ಕಲಾಕೃತಿ ಚಿತ್ರಿಸುತ್ತಿದ್ದ ಎಂಬ ಪ್ರತೀತಿ ಇದೆ.
ಕಥೆ ಹೇಳುವ ಸಾಥ್ ಕಬರ್
ಸಾತ್ ಕಬರ್ ಎಂದರೆ 60 ಸಮಾಧಿಗಳು ಎಂದರ್ಥ. 1659ರಲ್ಲಿ ಆಲಿ ಆದಿಲ್ ಶಾಹನ ಆಸ್ಥಾನದಲ್ಲಿದ್ದ ದಳಪತಿಗಳಲ್ಲೊಬ್ಬ ಅಫೈಲ್ ಖಾನನು ತನ್ನ 60 ಪತ್ನಿಯರನ್ನು ಬಾವಿಗೆ ತಳ್ಳಿ ಕೊಂದು ಅವರಿಗಾಗಿ ನಿರ್ಮಿಸಿದ ಸಮಾಧಿ ಎಂದು ಹೇಳಲಾಗುತ್ತಿದೆ. ಇದು ಬಿಜಾಪುರದಿಂದ ಸುಮಾರು 5 ಕಿ.ಮೀ. ದೂರದಲ್ಲಿರುವ ನವರಸಪುರದಲ್ಲಿದೆ.
ಮಲಿಕ್-ಎ- ಮೈದಾನ್
1549ರಲ್ಲಿ ಅಹ್ಮದ್ನಗರದ ನಿಜಾಮಶಾಹಿಗಳು ನಿರ್ಮಿಸಿದ ಈ ತೋಪನ್ನು ವಿಜಯಪುರಕ್ಕೆ ತರಲಾಯಿತು. ಭೂಪ್ರದೇಶದ ಒಡೆಯ ಎಂಬ ಅಕ್ಷರಶಃ ಅರ್ಥ ಕೊಡುವ ಇದು ಒಂದು ಬೃಹತ್ತಾದ ಸಿಡಿಮದ್ದಿನ ತೋಪು. 4 ಮೀ. ಉದ್ದ, 1.5 ಮೀ. ವ್ಯಾಸ ಹೊಂದಿರುವ ಈ ತೋಪು 55 ಟನ್‌ತೂಗುತ್ತದೆ. 400 ಎತ್ತುಗಳು, 10 ಆನೆಗಳು ಹಾಗೂ ಹಲವು ಯೋಧರು ಪಾಲ್ಗೊಂಡಿದ್ದ ಯುದ್ಧದಲ್ಲಿ ಜಯಗಳಿಸಿದ ನಂತರ ವಿಜಯಪುರಕ್ಕೆ ತರಲಾಯಿತು.
17ನೇ ಶತಮಾನದಲ್ಲಿ ಮೊಘಲ ಬಾದಷಾ ಔರಂಗಜೇಬ್ ವಿಜಯಪುರದ ಮೇಲೆ ದಂಡೆತ್ತಿ ಬಂದು ದಾಳಿ ಮಾಡಿದಾಗ ಮುಹಮ್ಮದ್ ಆದಿಲ್ಶಾಹಿ ಈ ತೋಪನ್ನು ಯುದ್ಧದಲ್ಲಿ ಬಳಸಿದ್ದ ಎಂದು ಇತಿಹಾಸ ಹೇಳುತ್ತದೆ.
85 ಅಡಿ ಎತ್ತರದ ಶಿವನ ಮೂರ್ತಿ
ವಿಜಯಪುರದ ಹೊರವಲಯದಲ್ಲಿ 5 ಕಿ.ಮೀ. ದೂರದಲ್ಲಿ ಉಕ್ಕಲಿ ರಸ್ತೆ ಪಕ್ಕದಲ್ಲಿ 85 ಅಡಿ ಎತ್ತರದ ಶಿವನ ಮೂರ್ತಿ ಪ್ರತಿಷ್ಠಾಪಿಸ
ಲಾಗಿದೆ. ದೇಶದಲ್ಲಿ ಅತಿ ಎತ್ತರದ ಎರಡನೇ ಶಿವನ ಮೂರ್ತಿ ಇದಾಗಿದೆ. ಮುರ್ಡೇಶ್ವರದಲ್ಲಿ 102 ಅಡಿ ಎತ್ತರದ ಮೊದಲ ಶಿವನಮೂರ್ತಿಯ ನಂತರ ಇದು ಎರಡನೆಯದು. ಇದು 1500 ಟನ್ ತೂಕದ್ದಾಗಿದೆ. ಶಿವನ ಮೂರ್ತಿ ಕೊರಳಲ್ಲಿ ಇರುವ ಪ್ರತಿಯೊಂದು ರುದ್ರಾಕ್ಷಿ 50 ಕೆ.ಜಿ. ತೂಕದ್ದು ಹಾಗೂ 15 ಅಡಿ ವ್ಯಾಸವುಳ್ಳದ್ದಾಗಿದೆ. ಶಿವನ ಕೊರಳಲ್ಲಿ ಆಸೀನವಾದ ಸರ್ಪವು 145 ಅಡಿ ಉದ್ದವಿದೆ. 5.20 ಎಕರೆ ವಿಶಾಲವಾದ ಪ್ರದೇಶದಲ್ಲಿ ಉದ್ಯಾನ, ಚಿಕ್ಕ ಮಕ್ಕಳ ರೈಲು ಸೇರಿದಂತೆ ಇತರ ಆಟಿಕೆ ಸಾಮಗ್ರಿಗಳಿವೆ. ಉಚಿತ ಅನ್ನ ಪ್ರಸಾದ, ಉಚಿತ ಪಾರ್ಕಿಂಗ್ ವ್ಯವಸ್ಥೆ ಇದೆ.
ಗೋಳ ಗುಮ್ಮಟದಲ್ಲಿದೆ ಪಿಸುಮಾತಿನ ಗ್ಯಾಲರಿ
ಗ್ಯಾಲರಿಯ ಒಂದು ಬದಿಯ ಗೋಡೆಗೆ ಮುಖಮಾಡಿ ಪಿಸುಧ್ವನಿಯಲ್ಲಿ ಮಾತಾಡಿದರೆ ಅಥವಾ ಕೈಗಡಿಯಾರವನ್ನು ಗೋಡೆಗೆ ತಾಕಿಸಿದರೆ, ಆ ಗೋಡೆಯ ವಿರುದ್ಧ ದಿಕ್ಕಿನಲ್ಲಿರುವ ಗೋಡೆಯಲ್ಲಿ ಕಿವಿಯನ್ನು ಗೋಡೆಗೆ ತಾಗಿಸಿದರೆ ಆ ಪಿಸುಮಾತು ಅಥವಾ ಗಡಿಯಾರದ ಟಿಕ್‌ಟಿಕ್ ಶಬ್ದ ಕೇಳಬಹುದು. ಇದು ಗೋಳಗುಮ್ಮಟದ ಗೋಡೆಗಳ ಮೇಲೆ ಕಂಡುಬರುವ ಮನಸೆಳೆವ ಅದ್ಭುತ ಸಂಗತಿ. ಗೋಲಗುಮ್ಮಟದ ಒಳ ಪ್ರವೇಶಿಸಲು ಬೃಹತ್ ಕಮಾನಿನ ಆಕೃತಿಯ ಗೋಡೆಯಲ್ಲಿ ಸುಂದರವಾಗಿ ನಿರ್ಮಿಸಲ್ಪಟ್ಟ ದ್ವಾರ. ನಕ್ಕ ಖಾನಾ ಎಂಬುದೊಂದು ಅರಮನೆಯ ಎದುರಿಗೆ ನಿರ್ಮಿಸಲಾಗುವ ಮನರಂಜನಾ ಚಟುವಟಿಕೆಗಳು ನಡೆಯುವ ಸ್ಥಳ. 400ಕ್ಕೂ ಹೆಚ್ಚು ವರ್ಷ ಸದೃಢವಾಗಿ ನಿಂತಿದೆ. ಇದು ವಿಶ್ವದಲ್ಲಿ ಅಧಿಕ ಜನಪ್ರಿಯತೆ ಪಡೆಯಬೇಕಾಗಿದ್ದರೂ ಎಲೆಮರೆಯ ಕಾಯಿಯಂತೆ ಕರ್ನಾಟಕದಲ್ಲಿ ಪ್ರಶಾಂತವಾಗಿ ನೆಲೆಸಿದೆ. ಈ ಅದ್ಭುತ ಸ್ಮಾರಕವವನ್ನು ಜೀವನದಲ್ಲಿ ಒಂದೊಮ್ಮೆಯಾದರೂ ಭೇಟಿ ನೀಡಲೇಬೇಕಾದ ಆಕರ್ಷಣೆಯ ಪ್ರವಾಸಿ ತಾಣವಾಗಿಇತಿಹಾಸದಲ್ಲಿ ಹಿರಿಮೆ ಹೊಂದಿದೆ.







