ಗ್ರಾಮೀಣ ಭಾಗದಲ್ಲಿ ಕಂಡು ಬಾರದ ‘ಮತದಾರರ ಸಹಾಯ ಕೇಂದ್ರಗಳು’

ಬೆಂಗಳೂರು : ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ(ಎಸ್‌ಐಆರ್) ಪ್ರಕ್ರಿಯೆಯಲ್ಲಿ ಸಾರ್ವಜನಿಕರಿಗೆ ನೆರವಾಗಲು ರಾಜ್ಯಾದ್ಯಂತ 37,464 ಮತದಾರ ಸೌಲಭ್ಯ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಎಂದು ಕರ್ನಾಟಕದ ಮುಖ್ಯ ಚುನಾವಣಾಧಿಕಾರಿ ಅನ್ಬುಕುಮಾರ್ ಮಾಹಿತಿ ನೀಡಿದ್ದರು. ಇದರಂತೆ ಬೂತ್ ಮಟ್ಟದಲ್ಲಿ ಈ ಕೇಂದ್ರಗಳ ವ್ಯವಸ್ಥೆ ಇದೆ ಎಂದು ಅಧಿಕೃತ ವೆಬ್‌ಸೈಟ್‌ನಲ್ಲೂ ಉಲ್ಲೇಖಿಸಲಾಗಿದೆ.
ರಾಜ್ಯಾದ್ಯಂತ ವಿವಿಧ ಮತಕ್ಷೇತ್ರಗಳ ಬೂತ್‌ಮಟ್ಟದಲ್ಲಿ ಸ್ಥಳ ಪರಿಶೀಲನೆ ನಡೆಸಿದಾಗ ಬೆಂಗಳೂರು ನಗರ ಮತ್ತು ಕೆಲವು ಜಿಲ್ಲಾ ನಗರ ಕೇಂದ್ರಗಳಲ್ಲಿ ಕಂಡು ಬಂದಿದೆ. ಆದರೆ ತಾಲೂಕು ಮತಗಟ್ಟೆಗಳಲ್ಲಿ ಮತದಾರ ಸೌಲಭ್ಯ ಕೇಂದ್ರಗಳು ಇರುವ ಬಗ್ಗೆ ಯಾವುದೇ ಸೂಚನಾ ಫಲಕಗಳಾಗಲಿ, ಹೆಲ್ಫ್ ಡೆಸ್ಕ್ ಗಳಾಗಲಿ ಇನ್ನಿತರ ನೆರವಿನ ಕೇಂದ್ರಗಳ ಸೂಚನಾ ಫಲಕಗಳು ಯಾವುದು ಕಾಣಿಸುತ್ತಿಲ್ಲ. ಕೆಲವೆಡೆ ಮತದಾರರು ಹಾಗೂ ಸ್ಥಳೀಯ ನಿವಾಸಿಗಳಿಗೆ ಇಂತಹ ಕೇಂದ್ರಗಳ ಅಸ್ತಿತ್ವದ ಬಗ್ಗೆಯೇ ಮಾಹಿತಿ ಇಲ್ಲ ಎನ್ನುವುದು ಆಶ್ಚರ್ಯಕರವಾಗಿದೆ.
ಎಸ್‌ಐಆರ್ ಪ್ರಕ್ರಿಯೆಯಲ್ಲಿ ಅರ್ಜಿ ಭರ್ತಿ, ದಾಖಲೆಗಳ ಪರಿಶೀಲನೆ, ಅನುಮಾನಗಳ ನಿವಾರಣೆ ಮತ್ತು ಇತರ ನೆರವು ಪಡೆಯಲು ಈ ಕೇಂದ್ರಗಳು ಪ್ರಮುಖವಾಗಿವೆ. ಆದರೆ ಕೇಂದ್ರಗಳು ಎಲ್ಲಿ ಕಾರ್ಯನಿರ್ವಹಿಸುತ್ತಿವೆ? ಯಾವ ಸಮಯದಲ್ಲಿ ತೆರೆದಿರುತ್ತವೆ? ಯಾರನ್ನು ಸಂಪರ್ಕಿಸಬೇಕು? ಎಂಬ ಮಾಹಿತಿಯ ಕೊರತೆಯಿಂದ ಮತದಾರರು ಗಣತಿ ನಮೂನೆ ತುಂಬುವುದು ಸೇರಿದಂತೆ ಇತರ ಸಮಸ್ಯೆಗಳನ್ನು ಬಗೆಹರೆಸಲು ಅಲೆದಾಡುವಂತ ಪರಿಸ್ಥಿತಿ ಉಂಟಾಗುತ್ತಿರುವುದು ತಿಳಿದು ಬಂದಿದೆ.
ಚುನಾವಣಾ ಆಯೋಗದ ಉದ್ದೇಶ ಮತದಾರರಿಗೆ ಸುಲಭ ಸೇವೆ ಒದಗಿಸುವುದೇ ಆಗಿದ್ದರೆ, ಘೋಷಿಸಲಾದ ಪ್ರತಿಯೊಂದು ಮತದಾರ ಸೌಲಭ್ಯ ಕೇಂದ್ರಗಳು ನಿಖರವಾಗಿ ಕಾರ್ಯನಿರ್ವಹಿಸುತ್ತಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಜೊತೆಗೆ ಕೇಂದ್ರಗಳ ಸ್ಥಳ, ಸಮಯ ಮತ್ತು ಸಂಪರ್ಕ ವಿವರಗಳನ್ನು ಸಾರ್ವಜನಿಕರಿಗೆ ಸ್ಪಷ್ಟವಾಗಿ ತಲುಪಿಸುವ ವ್ಯವಸ್ಥೆಯನ್ನು ಮಾಡಬೇಕು ಎಂದು ಸಕಲೇಶಪುರ ಕ್ಷೇತ್ರದ ಮತದಾರ ಹೇಮಂತ್ ಎಂಬವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮತದಾರ ಸೌಲಭ್ಯ ಕೇಂದ್ರಗಳು ಚಾಲನೆಯಲ್ಲಿವೆ. ಯಾವ ಕ್ಷೇತ್ರದಲ್ಲಿ ಎಲ್ಲಿ ಮಾಡುತ್ತಿದ್ದಾರೆ ಎಂದು ಮುಖ್ಯ ಚುನಾವಣಾಧಿಕಾರಿಯ ಅಧಿಕೃತ ವೆಬ್‌ಸೈಟ್…(https://ceokarnataka.gov.in/vfc/details/)ನಲ್ಲಿ ತಿಳಿಸಲಾಗಿದೆ. ನಾನು ಬೆಂಗಳೂರಿನ ಕೆಲವು ಕ್ಷೇತ್ರಗಳಿಗೆ ಭೇಟಿ ನೀಡಿದ್ದಾಗ ಹಲವು ಕಡೆ ಚಾಲ್ತಿಯಲ್ಲಿವೆ. ಅಲ್ಲಿಗೆ ಸಾಕಷ್ಟು ಜನರು ಬಂದು ತಮ್ಮ ಗೊಂದಲ, ಸಮಸ್ಯೆಗಳನ್ನು ಬಗೆಹರೆಸಿಕೊಳ್ಳುತ್ತಿದ್ದಾರೆ. ಗ್ರಾಮ ಪಂಚಾಯತ್ ಬೂತ್‌ಮಟ್ಟದಲ್ಲಿ ಮತದಾರ ಸೌಲಭ್ಯ ಕೇಂದ್ರಗಳಲ್ಲಿ ಬೂತ್‌ಮಟ್ಟದ ಅಧಿಕಾರಿಗಳೇ ಅದನ್ನು ನಡೆಸುತ್ತಾರೆ. ಅಲ್ಲಿ ಹೇಗೆ ಮಾಡಬೇಕೆಂದು ಚುನಾವಣಾ ನೋಂದಣಾಧಿಕಾರಿ ತೀರ್ಮಾನಿಸುತ್ತಾರೆ. ಈಗ ಗಣತಿ ನಮೂನೆಗಳನ್ನು ಮನೆಮನೆಗೆ ಹೋಗಿ ಮತದಾರರಿಗೆ ತಲುಪಿಸುತ್ತಿರುವುದರಿಂದ ಕೇಂದ್ರಗಳು ಚಾಲನೆಯಲ್ಲಿ ಇರದೇ ಇರಬಹುದು. ಆದರೆ ಎಲ್ಲಿ ಈ ಕೇಂದ್ರಗಳು ಚಾಲ್ತಿಯಲ್ಲಿಲ್ಲವೋ ಅದನ್ನು ನಮ್ಮ ಗಮನಕ್ಕೆ ತಂದರೆ ನಾವು ಬಗೆಹರಿಸುತ್ತೇವೆ ಎಂದು ಚುನಾವಣಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನಾನು ಚನ್ನಗಿರಿ ಮತಕ್ಷೇತ್ರದ ಮತದಾರ. ಇಂಜಿನಿಯರಿಂಗ್ ಓದಿದ ನನಗೆ ಗಣತಿ ನಮೂನೆ ಬಗ್ಗೆ ಸಾಕಷ್ಟು ಗೊಂದಲವಾಗಿತ್ತು. ಇನ್ನು ಓದು-ಬರಹ ಗೊತ್ತಿಲ್ಲದ ಜನಸಾಮಾನ್ಯರ ಪರಿಸ್ಥಿತಿ ಏನು? ಮುಖ್ಯ ಚುನಾವಣಾ ಅಧಿಕಾರಿ ಸ್ಥಾಪಿಸಲಾಗಿದೆ ಎನ್ನಲಾದ ಮತದಾರ ಸೌಲಭ್ಯ ಕೇಂದ್ರವೂ ನಮ್ಮ ಬೂತ್‌ನಲ್ಲಿ ಚಾಲನೆಯಲ್ಲಿಲ್ಲ. ಇಂತಹದೊಂದು ನೆರವಿನ ಕೇಂದ್ರ ಇದೆ ಎಂದು ನಮ್ಮ ಹಳ್ಳಿ ಜನರಿಗೆ ಗೊತ್ತೇ ಇಲ್ಲ. ನಮ್ಮ ಊರಿನ ಜನ ಗಣತಿ ನಮೂನೆ ಭರ್ತಿ ಮಾಡಲು ಸಹಾಯಕ್ಕಾಗಿ ನನಗೆ ಕರೆ ಮಾಡುತ್ತಾರೆ. ನೆರವಿನ ಕೇಂದ್ರ ಪ್ರಾರಂಭವಾಗಿದ್ದರೆ, ಜನ ಆ ಸ್ಥಳಕ್ಕೆ ಹೋಗಿ ಗೊಂದಲಗಳನ್ನು ನಿವಾರಿಸಿಕೊಳ್ಳುತ್ತಿದ್ದರು.
-ಸರೋವರ್ ಬೆಂಕಿಕೆರೆ, ನಾಗರಿಕ ಮತಕಾವಲು ಸಮಿತಿ






