ಸಂವಿಧಾನ ರಚಿಸಿದ್ದು ಅಂಬೇಡ್ಕರ್ ಅಲ್ಲವೇ?

ರಚನಾ ಸಭೆಯ ನಿರ್ದೇಶನದ ಮೇಲೆ ವಿದೇಶದ ಕಾನೂನುಗಳನ್ನು ಹೆಕ್ಕಿತಂದು, ಇಲ್ಲಿನ ಕಾನೂನು ಪರಿಭಾಷೆಗೆ ಒಳಪಡಿಸಿ, ಸಂಗ್ರಹಿಸಿ ಕೊಟ್ಟ ಮಾತ್ರಕ್ಕೇ ಬಿ.ಎನ್. ರಾವ್ ಅವರನ್ನು ಭಾರತದ ಸಂವಿಧಾನ ಶಿಲ್ಪಿ ಎನ್ನುವುದಾದರೆ, ಬರ್ಮಾ ದೇಶಕ್ಕೂ ಇದೇ ಕೆಲಸ ಮಾಡಿಕೊಟ್ಟ ಅವರನ್ನು ಬರ್ಮಾದ ಸಂವಿಧಾನ ಶಿಲ್ಪಿ ಎಂದೂ ಕರೆಯಬೇಕಲ್ಲವೇ?
ಭಾರತದ ರಚನಾ ಸಭೆಯ ನಿರ್ದೇಶನದಂತೆ ಕಾರ್ಯನಿರ್ವಹಿಸಿದ ನಂತರ, ಸಂವಿಧಾನ ರಚನಾ ಕಲಾಪದಿಂದ ಅವರು ಸಂಪೂರ್ಣ ದೂರ ಉಳಿದರು ಎಂಬುದಕ್ಕೆ ಅದೇ ಅವಧಿಯಲ್ಲಿ ಅವರು ಬರ್ಮಾ ಸಂವಿಧಾನ ರಚನೆ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದೇ ಸಾಕ್ಷಿ. ರಾವ್ ಅವರು ಭಾರತದ ಸಂವಿಧಾನ ರಚನೆಯಲ್ಲಿ ಅಷ್ಟು ಆಳವಾಗಿ, ಗಂಭೀರವಾಗಿ ತಲ್ಲೀನರಾಗಿದ್ದೇ ಆಗಿದ್ದಲ್ಲಿ, ಅದರ ಕಾರ್ಯ ಮುಗಿಯುವುದಕ್ಕೂ ಮೊದಲೇ ಮತ್ತೊಂದು ದೇಶದ ಸಂವಿಧಾನ ರಚನೆಯಲ್ಲಿ ಹೇಗೆ ಭಾಗವಹಿಸುತ್ತಿದ್ದರು?
ಭಾಗ - 1
ಸಂವಿಧಾನ ಮತ್ತು ಅಂಬೇಡ್ಕರ್, ಭಾರತದ ಮನುವಾದಿಗಳ ಪಾಲಿಗೆ ಇವತ್ತಿಗೂ ಜೀರ್ಣಿಸಿಕೊಳ್ಳಲು ಆಗದಿರುವ ಎರಡು ಹೆಸರುಗಳಿವು. ಹಾಗಾಗಿ ಆಗಾಗ ಇವೆರಡರ ಮೇಲೆ ದಾಳಿಗಳನ್ನು ನಡೆಸುತ್ತಾ ಬರುತ್ತಿದ್ದಾರೆ. ಅಂಬೇಡ್ಕರ್‌ರನ್ನು ಬ್ರಿಟಿಷರ ಗುಲಾಮ ಎಂದು ಲೇವಡಿ ಮಾಡಿದರು; ಅವರು ರಚಿಸಿದ ಸಂವಿಧಾನದಲ್ಲಿ ನಮ್ಮ ಭಾರತೀಯತೆಯೇ ಇಲ್ಲವೆಂದು ಸಂಪಾದಕೀಯ ಬರೆದರು. ತಮ್ಮ ಕೇಡನ್ನೆಲ್ಲ ಅಂಬೇಡ್ಕರ್ ಪ್ರತಿಮೆಗಳ ಮೇಲೆ ತೀರಿಸಿಕೊಂಡರು. ಅಂಬೇಡ್ಕರ್ ರಚಿಸಿದ ಸಂವಿಧಾನವನ್ನು ಬದಲಿಸುವುದೇ ನಮ್ಮ ಪರಮಗುರಿಯೆಂದು ಘೋಷಿಸಿದರು. ಈಗ, ಸಂವಿಧಾನವನ್ನು ರಚಿಸಿದ್ದು ಅಂಬೇಡ್ಕರ್ ಅಲ್ಲವೇ ಅಲ್ಲ ಎನ್ನುವ ಕುತರ್ಕವನ್ನು ಮುನ್ನೆಲೆಗೆ ತರುತ್ತಿದ್ದಾರೆ. ಅದಕ್ಕಾಗಿ ಬಿ.ಎನ್. ರಾವ್ ಎಂಬ ಹೆಸರನ್ನು ಬಳಸಿಕೊಳ್ಳುತ್ತಿದ್ದಾರೆ. ನಿಜವಾದ ಸಂವಿಧಾನ ಶಿಲ್ಪಿ ಬೆನಗಲ್ ನರಸಿಂಗರಾವ್ ಅವರೇ ಹೊರತು ಅಂಬೇಡ್ಕರ್ ಅಲ್ಲ ಎಂದು ಪುಕಾರೆಬ್ಬಿಸುತ್ತಿದ್ದಾರೆ.
ಇದು ಸತ್ಯವೇ? ಯಾರು ಈ ಬಿ.ಎನ್. ರಾವ್? ಸಂವಿಧಾನ ರಚನೆಯಲ್ಲಿ ಅವರ ಪಾತ್ರವೇನು? ಭಾರತದ ಸಂವಿಧಾನ ನಿಜಕ್ಕೂ ರಚನೆಯಾದದ್ದು ಹೇಗೆ? ನೂರಾರು ಜನರ ಕೊಡುಗೆಗಳಲ್ಲಿ ರೂಪುಗೊಂಡರೂ ಅಂಬೇಡ್ಕರ್ ಅವರನ್ನೇ ಯಾಕೆ ನಾವು ಸಂವಿಧಾನಶಿಲ್ಪಿ ಎಂದು ಆದರಿಸುತ್ತೇವೆ? ಈ ಪ್ರಶ್ನೆಗಳು ನಮಗೆ ಇತಿಹಾಸವನ್ನು ವಸ್ತುನಿಷ್ಠವಾಗಿ ತೆರೆದಿಡುತ್ತಾ ಸಾಗುತ್ತವೆ.
ಮೊದಲಿಗೆ, ಭಾರತದ ಸಂವಿಧಾನ ರಚನೆಯಾದದ್ದು ಹೇಗೆ? ಅನ್ನೋದನ್ನು ನೋಡೋಣ. ಬಹುಶಃ ಈ ಉತ್ತರದಲ್ಲಿ, ಉಳಿದೆಲ್ಲ ಪ್ರಶ್ನೆಗಳಿಗೆ ಉತ್ತರಗಳು ಅನಾವರಣಗೊಳ್ಳುತ್ತವೆ. ಬಾಹ್ಯಶಕ್ತಿಗಳ ಹಸ್ತಕ್ಷೇಪವಿಲ್ಲದೆ ಭಾರತ ತನ್ನದೇ ಆದ ಸ್ವತಂತ್ರ ಸಂವಿಧಾನವನ್ನು ರಚಿಸಿಕೊಳ್ಳಬೇಕು ಎಂಬ ಪರಿಕಲ್ಪನೆಯನ್ನು ಮೊದಲ ಬಾರಿ ಪ್ರಸ್ತಾಪಿಸಿದ್ದು ಕಮ್ಯುನಿಸ್ಟ್ ನಾಯಕರಾಗಿದ್ದ ಎಂ.ಎನ್. ರಾಯ್, 1934ರಲ್ಲಿ. ಮರುವರ್ಷವೇ ಕಾಂಗ್ರೆಸ್ ಪಕ್ಷ ಅದನ್ನು ತನ್ನ ಅಧಿಕೃತ ಒತ್ತಾಯವಾಗಿ ಬ್ರಿಟಿಷರ ಮುಂದಿಡುತ್ತದೆ. 1938ರಲ್ಲಿ ನೆಹರೂ ಅವರು, ‘‘ವಯಸ್ಕ ಮತದಾರರಿಂದ ಚುನಾಯಿತವಾದ ಅಸೆಂಬ್ಲಿಯ ಮೂಲಕ ಭಾರತವು ತನ್ನ ಸ್ವಂತ ಸಂವಿಧಾನ ರಚಿಸಿಕೊಳ್ಳಲು ಅವಕಾಶ ನೀಡಬೇಕು. ಇದರಲ್ಲಿ ಬಾಹ್ಯಶಕ್ತಿಗಳ ಹಸ್ತಕ್ಷೇಪವಿರಬಾರದು’’ ಎಂದು ಘೋಷಿಸುತ್ತಾರೆ. ಆರಂಭದಲ್ಲಿ ಇದಕ್ಕೆ ಬ್ರಿಟಿಷರು ಒಪ್ಪುವುದಿಲ್ಲವಾದರೂ ಎರಡನೇ ವಿಶ್ವಯುದ್ಧದಲ್ಲಿ ಆರ್ಥಿಕವಾಗಿ ಹೈರಾಣಾದ ಇಂಗ್ಲೆಂಡ್ ಆಧಿಪತ್ಯಕ್ಕೆ ಒಪ್ಪದೆ ದಾರಿ ಉಳಿಯುವುದಿಲ್ಲ. ಸಮ್ಮತಿಸುತ್ತದೆ. 1946ರಲ್ಲಿ ಭಾರತಕ್ಕೆ ಬಂದ ಕ್ಯಾಬಿನೆಟ್ ಮಿಷನ್‌ನ ಮುಖ್ಯ ಉದ್ದೇಶವೇ ಸಂವಿಧಾನ ರಚನಾ ಸಭೆಗೆ ಪೂರಕ ವಾತಾವರಣ ಸೃಷ್ಟಿಸುವುದು.
1946ರ ಜುಲೈ-ಆಗಸ್ಟ್‌ನಲ್ಲಿ ನಡೆದ ಪ್ರಾಂತೀಯ ಚುನಾವಣೆಗಳ ಆಧಾರದಲ್ಲಿ ಸಂವಿಧಾನ ರಚನಾ ಸಭೆಯು ಅನುಷ್ಠಾನಕ್ಕೆ ಬರುತ್ತದೆ ಮತ್ತು ಡಿಸೆಂಬರ್ 9, 1946ರಲ್ಲಿ ಮೊತ್ತಮೊದಲ ಬಾರಿಗೆ ಸಭೆ ಸೇರುತ್ತದೆ. ಸಭೆಯ ಅತ್ಯಂತ ಹಿರಿಯ ಸದಸ್ಯರಾಗಿದ್ದ ಡಾ. ಸಚ್ಚಿದಾನಂದ ಸಿನ್ಹಾ ಅವರು ಹಂಗಾಮಿ ಅಧ್ಯಕ್ಷರಾಗಿ ಆಯ್ಕೆಯಾಗುತ್ತಾರಾದರೂ, ನಂತರ ಡಾ. ಬಾಬು ರಾಜೇಂದ್ರ ಪ್ರಸಾದ್ ಅವರು ಪೂರ್ಣಾವಧಿ ಅಧ್ಯಕ್ಷರಾಗಿ ನೇಮಕಗೊಳ್ಳುತ್ತಾರೆ. ಅಂದರೆ ಇವತ್ತಿನ ಪಾರ್ಲಿಮೆಂಟ್ ಮತ್ತು ಅದಕ್ಕೊಬ್ಬರು ಸ್ಪೀಕರ್ ನಿಗದಿಯಾದಂತೆ.
ನಿಜವಾದ ಸವಾಲು ಎದುರಾಗುವುದು ಈಗ. ಬ್ರಿಟಿಷರ ಹಸ್ತಕ್ಷೇಪವಿಲ್ಲದೆ ಸಂವಿಧಾನವನ್ನು ರಚಿಸಿಕೊಳ್ಳುವುದು ಹೇಗೆ? ಆಗ ನಮ್ಮ ರಾಷ್ಟ್ರೀಯ ನಾಯಕರು ಇಡೀ ಪ್ರಕ್ರಿಯೆಯನ್ನು 6 ಹಂತಗಳಾಗಿ ವಿಂಗಡಿಸಿಕೊಳ್ಳುತ್ತಾರೆ.
ಮೊದಲನೆಯ ಹಂತ: ಶಿಫಾರಸು ವರದಿ ಸಲ್ಲಿಕೆ ವಿವಿಧ ದೇಶಗಳಲ್ಲಿನ ಆಡಳಿತ ಚೌಕಟ್ಟುಗಳ ಅಧ್ಯಯನದ ನಂತರ ಭಾರತದಲ್ಲಿ ಸರಕಾರದ ಸ್ವರೂಪ ಹೇಗಿರಬೇಕು, ಮೂಲಭೂತ ಹಕ್ಕುಗಳ ವ್ಯಾಪ್ತಿ ಏನು ಎಂಬಂತಹ ಸಂಗತಿಗಳನ್ನು ಶಿಫಾರಸು ಮಾಡಲು ಪ್ರತ್ಯೇಕ ಸಮಿತಿಗಳನ್ನು ರಚಿಸಲಾಯಿತು. ನೆಹರೂ, ಸರ್ದಾರ್ ಪಟೇಲ್ ಮೊದಲಾದವರು ಈ ಸಮಿತಿಗಳ ಅಧ್ಯಕ್ಷರಾಗಿದ್ದರು.
ಎರಡನೆಯ ಹಂತ: ಸಭೆಯಲ್ಲಿ ಚರ್ಚೆ ಈ ಶಿಫಾರಸುಗಳನ್ನು ಆಧರಿಸಿ, ರಚನಾ ಸಭೆಯಲ್ಲಿ ಚರ್ಚೆ ನಡೆದು, ನಮ್ಮ ದೇಶದ ಸಂವಿಧಾನದ ಮೂಲ-ಅಡಿಪಾಯ ಹೇಗಿರಬೇಕು ಎನ್ನುವುದನ್ನು ಅಂಗೀಕರಿಸಲಾಗುತ್ತದೆ.
ಮೂರನೆಯ ಹಂತ: ತಾಂತ್ರಿಕ ನಿರೂಪಣೆ ಸಂವಿಧಾನ ರಚನಾ ಸಭೆ ನಿರ್ಧರಿಸಿದ ಅಡಿಪಾಯದ ಆಧಾರದ ಮೇಲೆ ವಿವಿಧ ದೇಶಗಳ ಮತ್ತು ಜಾಗತಿಕ ನ್ಯಾಯವ್ಯವಸ್ಥೆಯ ಚೌಕಟ್ಟಿಗೆ ಒಳಪಟ್ಟಂತೆ ಕಾನೂನು ಅವಕಾಶಗಳನ್ನು ಹೆಕ್ಕಿತಂದು, ಭಾರತದ ಈ ಆಶಯಗಳಿಗೆ ಕಾನೂನು ಪರಿಭಾಷೆಯ ಚೌಕಟ್ಟು ನೀಡಲಾಗುತ್ತದೆ.
ನಾಲ್ಕನೆಯ ಹಂತ: ಪರಾಮರ್ಶೆ ಭಾರತದ ಆಶಯಗಳಿಗೆ ಪೂರಕವಾಗಿ ಹೆಕ್ಕಿತಂದು ನಿರೂಪಿಸಲಾದ ಕಾನೂನು ಪರಿಭಾಷೆಗಳನ್ನು ಅಧ್ಯಯನ ಮಾಡಿ, ಭಾರತದ ಸಾಮಾಜಿಕ, ರಾಜಕೀಯ ಅಗತ್ಯಕ್ಕೆ ತಕ್ಕಂತೆ ಆ ಪರಿಭಾಷೆಗಳನ್ನು ತಿದ್ದುಪಡಿಯ ಮೂಲಕ ಮರುರೂಪಿಸುವುದು ಮತ್ತು ಅದನ್ನು ರಚನಾ ಸಭೆಯಲ್ಲಿ ಚರ್ಚಿಸಿ, ಆ ನಿಯಮಗಳ ಅಗತ್ಯಗಳನ್ನು ಸದಸ್ಯರಿಗೆ ಮನವರಿಕೆ ಮಾಡಿಕೊಡುವುದು. ಚರ್ಚೆಯ ನಂತರ ಅಗತ್ಯವಿದ್ದರೆ ಸೂಕ್ಷ್ಮ ಮರುನಿರೂಪಣೆಗೆ ಒಳಪಡಿಸುವುದು.
ಐದನೆಯ ಹಂತ: ಸಾರ್ವಜನಿಕ ಆಕ್ಷೇಪಗಳ ಸ್ವೀಕಾರ ಸಾರ್ವಜನಿಕ ಪತ್ರಿಕಾ ಪ್ರಕಟಣೆಗಳ ಮೂಲಕ ಅನುಮೋದಿತ ಕರಡು ಪ್ರತಿಯನ್ನು ಜನರ ಅವಗಾಹನೆಗೆ ಮುಕ್ತವಾಗಿಸಿ, ಆಕ್ಷೇಪಗಳನ್ನು ಸ್ವೀಕರಿಸುವುದು.
ಆರನೆಯ ಹಂತ: ಅಂತಿಮ ಪ್ರಸ್ತುತಿ - ಸಾರ್ವಜನಿಕ ಅವಗಾಹನೆಗಳನ್ನೂ ಪರಿಗಣಿಸಿ, ಸೂಕ್ತ ಮಾರ್ಪಾಟುಗಳೊಂದಿಗೆ ಅಂತಿಮ ಕರಡು ಪ್ರತಿಯನ್ನು ಅನುಮೋದಿಸುವುದು.
ಈ ಆರೂ ಪ್ರಕ್ರಿಯೆಯಲ್ಲಿ ಸಂವಿಧಾನ ರಚನಾ ಸಭೆಯ ಚುನಾಯಿತ ಮತ್ತು ನಾಮನಿರ್ದೇಶಿತ ಸದಸ್ಯರುಗಳು ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಭಾಗವಹಿಸಿದ್ದರು. ವಿವಿಧ ಸಮಿತಿಗಳ ಮುಖ್ಯಸ್ಥರಾಗಿ, ಸದಸ್ಯರಾಗಿ, ಪರಾಮರ್ಶನ ಮಾರ್ಗದರ್ಶಕರಾಗಿ ಹಾಗೂ ಸಭೆಯಲ್ಲಿ ನಡೆದ ನಿಷ್ಕರ್ಷ ಚರ್ಚೆಯಲ್ಲಿ ಭಾಗಿಯಾಗುವ ಮೂಲಕ ಅವರೆಲ್ಲ ಪಾಲ್ಗೊಳ್ಳುತ್ತಾರೆ. ಇಂತಹ ಸುಮಾರು 8 ಪ್ರಧಾನ ಸಮಿತಿ ಹಾಗೂ 14 ಉಪಸಮಿತಿಗಳನ್ನು ರಚಿಸಲಾಗಿತ್ತು. ಈ ಸಮಿತಿಗಳು ಮತ್ತು ರಚನಾ ಸಭೆಯ ಕಾರ್ಯಕಲಾಪಗಳನ್ನು ಸುಗಮಗೊಳಿಸಲು ಹಾಗೂ ಸಹಕರಿಸಲು Constituent Assembly Secretariat (CAS) ಎಂಬ ವಿಶೇಷ ಅಧಿಕಾರಿಗಳ ಸಚಿವಾಲಯವನ್ನು ಬ್ರಿಟಿಷ್ ವೈಸ್‌ರಾಯ್ ಲಾರ್ಡ್ ವೇವೆಲ್ ಸ್ಥಾಪಿಸಿದ್ದರು. ಬ್ರಿಟಿಷ್ ಸರಕಾರದ ಉನ್ನತ ಸಿವಿಲ್ ಸರ್ವಿಸ್ ಹುದ್ದೆಯಲ್ಲಿ ಕೆಲಸ ಮಾಡುತ್ತಿದ್ದ ಅಧಿಕಾರಿಗಳನ್ನು ಇಲ್ಲಿಗೆ ನಿಯುಕ್ತಿ ಮಾಡಲಾಯಿತು. ಅಂತಹುದೇ ಒಂದು ಹೊಣೆಹೊತ್ತು ಲಾರ್ಡ್ ವೇವಲ್‌ರಿಂದ ನೇಮಕವಾದವರು ಬಿ.ಎನ್. ರಾವ್. ಅವರೊಬ್ಬರು ಮಾತ್ರವಲ್ಲದೆ, ಎಸ್.ಎನ್. ಮುಖರ್ಜಿ, ಎಚ್.ವಿ.ಆರ್ ಅಯ್ಯಂಗಾರ್, ಕೆ.ವಿ. ಪದ್ಮನಾಭನ್, ಪಿ ಎಸ್ ಸುಬ್ರಮಣಿಯನ್, ಎ.ಎ. ಅಬಿದಿ, ಬ್ರಿಜ್‌ಭೂಷಣ್ ತರಹದ ಹಿರಿಯ ಸೆಕ್ರೆಟರೇಟ್ ಅಧಿಕಾರಿಗಳಿಗೆ ಇಂತಹ ಹೊಣೆಯನ್ನು ಹೊರಿಸಲಾಗಿತ್ತು. ಅವರೆಲ್ಲರ ಪೈಕಿ ಬಿ.ಎನ್. ರಾವ್ ಅವರಿಗೆ ಇದ್ದ ಜವಾಬ್ದಾರಿಯೆಂದರೆ, ಭಾರತದ ಉದ್ದೇಶಿತ ಸಂವಿಧಾನ ಮೂಲ-ಅಡಿಪಾಯಕ್ಕೆ ಅನುಗುಣವಾಗುವಂತೆ ವಿದೇಶಿ ಸಂವಿಧಾನಗಳ ಕಾನೂನು ಅವಕಾಶಗಳನ್ನು ಹೆಕ್ಕಿತಂದು, ಅವುಗಳನ್ನು ಒಂದುಕಡೆ ಸಂಗ್ರಹಿಸಿ ಕರಡು ರಚನಾ ಸಮಿತಿಯ ಮುಂದಿಡುವುದು. ಅವುಗಳ ಪೈಕಿ ಯಾವುದು ಉಪಯುಕ್ತ, ಯಾವುದು ಅನಗತ್ಯ ಅಥವಾ ಯಾವುದನ್ನು ಭಾರತದ ಅಗತ್ಯಕ್ಕೆ ತಕ್ಕಂತೆ ಹೇಗೆಲ್ಲಾ ತಿದ್ದುಪಡಿ ಮಾಡಿ ಮರುರೂಪಿಸಿಕೊಳ್ಳಬೇಕು, ಯಾವುದನ್ನು ವಿಸ್ತರಿಸಿ ಅಳವಡಿಸಬೇಕು ಎಂಬುದನ್ನು ನಿರ್ಧರಿಸುವುದು ಕರಡು ರಚನಾ ಸಮಿತಿಯ ಹೊಣೆ. ಈ ಕರಡು ರಚನಾ ಸಮಿತಿಗೆ ಅಧ್ಯಕ್ಷರಾಗಿದ್ದವರು ಅಂಬೇಡ್ಕರ್.
ಅಂದರೆ, ಈ ಆರು ಪ್ರಕ್ರಿಯೆಗಳ ಪೈಕಿ ಬಿ.ಎನ್. ರಾವ್ ಪಾತ್ರ ಸೀಮಿತಗೊಳ್ಳುವುದು ಮೂರನೇ ಹಂತವಾದ ಕಾನೂನಾತ್ಮಕ ತಾಂತ್ರಿಕ ನಿರೂಪಣೆಗೆ ಮಾತ್ರ. ಒಂದು ಮತ್ತು ಎರಡನೇ ಹಂತದಲ್ಲಿ ಅವರಿಗೆ ಯಾವುದೇ ಪಾತ್ರವಿರಲಿಲ್ಲ. ಮೂರನೇ ಹಂತದಿಂದಾಚೆಗೆ ಅವರಿಗೆ ಸಂವಿಧಾನ ರಚನಾ ಸಭೆಯ ಚರ್ಚೆಯಲ್ಲಿ ಭಾಗವಹಿಸಲೂ ಅವಕಾಶವಿರಲಿಲ್ಲ, ಚರ್ಚೆಯನ್ನು ಆಧರಿಸಿ ಕಾನೂನುಗಳನ್ನು ಮರುನಿರೂಪಿಸುವ ಕಾರ್ಯದಲ್ಲೂ ಅವಕಾಶವಿರಲಿಲ್ಲ. Constituent Assembly Secretariat (CAS)ನ ಭಾಗವಾಗಿ ಬೇರೆಲ್ಲ ಹಿರಿಯ ಅಧಿಕಾರಿಗಳು ತಮ್ಮ ಕೆಲಸವನ್ನು ಹೇಗೆ ನಿಭಾಯಿಸಿದರೋ, ಬಿ.ಎನ್. ರಾವ್ ಕೂಡಾ ಹಾಗೇ ನಿಭಾಯಿಸಿದರು. ಬ್ರಿಟಿಷರು Government of India Act 1935 ಅನ್ನು ರೂಪಿಸಿ, ಅನುಷ್ಠಾನಕ್ಕೆ ತರುವಲ್ಲಿ ಬಿ.ಎನ್. ರಾವ್ ಅವರ ಕಾನೂನು ಅನುಭವವನ್ನು ಪರಿಗಣಿಸಿ ಮತ್ತು 1946ರ ಆರಂಭದಲ್ಲಿ ಅವರು ಬರೆದಿದ್ದ ‘‘Outline of a New Constitution’ ಎಂಬ ಪ್ರಬಂಧದಿಂದ ಪ್ರಭಾವಿತರಾಗಿ ಲಾರ್ಡ್ ವೇವಲ್ ಅವರನ್ನು ನೇಮಕ ಮಾಡಿದ್ದ. ಬೇರೆಲ್ಲ ಅಧಿಕಾರಿಗಳಿಗಿಂತ ಬಿ.ಎನ್. ರಾವ್ ಭಿನ್ನವಾಗುವುದು ಕೇವಲ ಒಂದು ಕಾರಣಕ್ಕೆ ಮಾತ್ರ. ಏನೆಂದರೆ, ತಮ್ಮ ಈ ಕಾಯಕವನ್ನು ಅವರು ಸರಕಾರದಿಂದ ವೇತನ ಪಡೆಯದೆ ದೇಶದ ಸೇವೆಯ ಭಾಗವೆಂದು ಮಾಡುತ್ತಿದ್ದೇನೆ ಎಂದಿದ್ದರು. ಇಂಗ್ಲೆಂಡ್‌ನಲ್ಲಿ ಅಧ್ಯಯನ ಮಾಡಿ ಬಂದಿದ್ದ ರಾವ್ ಅವರಿಗೆ ಜಸ್ಟೀಸ್ ಫೆಲಿಕ್ಸ್ ಫ್ರಾಂಕ್‌ಫರ್ಟರ್ (ಅಮೆರಿಕ), ಜಸ್ಟೀಸ್ ಲರ್ನಡ್ ಹ್ಯಾಂಡ್, ಸರ್ ಸಿಸಿಲ್ ಕಾರ್ (ಇಂಗ್ಲೆಂಡ್) ತರಹದ ವಿದೇಶಿ ಕಾನೂನು ಕಾನೂನು ತಜ್ಞರ ಜೊತೆ ನಿಕಟ ಸಂಪರ್ಕವಿತ್ತು. ಅದರಿಂದಾಗಿ ವಿದೇಶಿ ಸಂವಿಧಾನಗಳ ಕಾನೂನು ಅವಕಾಶಗಳನ್ನು ಸಂಗ್ರಹಿಸಲು ಅನುಕೂಲವಾಗಲಿದೆ ಎಂಬ ದೃಷ್ಟಿಯಿಂದ ಅವರನ್ನು ಆ ಕೆಲಸಕ್ಕೆ ನೇಮಕ ಮಾಡಲಾಗಿತ್ತು.
ಕೇವಲ ಭಾರತ ಮಾತ್ರವಲ್ಲ, ಬರ್ಮಾ (ಇಂದಿನ ಮ್ಯಾನ್ಮಾರ್) ದೇಶದ ಸಂವಿಧಾನ ರಚನೆಯಲ್ಲೂ ಬಿ.ಎನ್. ರಾವ್ ಇಂತಹದ್ದೇ ಪಾತ್ರ ನಿಭಾಯಿಸಿದ್ದರು. ಆಧುನಿಕ ಬರ್ಮಾ ನಿರ್ಮಾತೃ ಎಂದು ಕರೆಯಲಾಗುವ ಬೋಗ್ಯೋಕೆ ಆಂಗ್ ಸಾನ್ ಅವರ ಕೋರಿಕೆಯ ಮೇಲೆ ಅಲ್ಲಿನ ಸಂವಿಧಾನ ರಚನಾ ಸಲಹೆಕಾರನಾದ ಚಾನ್ ಹ್ಟೂನ್ ಅವರ ಜೊತೆಗೂಡಿ ವಿವಿಧ ದೇಶಗಳ ಸಂವಿಧಾನಗಳಿಂದ ಬರ್ಮಾಕ್ಕೆ ಬೇಕಾದ ಅಗತ್ಯ ಕಾನೂನು ಅವಕಾಶಗಳನ್ನು ಹೆಕ್ಕಿ ತೆಗೆದುಕೊಟ್ಟಿದ್ದರು. ಆ ಕಾನೂನು ಅವಕಾಶಗಳನ್ನು ಆಧಾರವಾಗಿಟ್ಟುಕೊಂಡು ಬರ್ಮಾ ರಚನಾ ಸಭೆ ವಿಸ್ತೃತ ಚರ್ಚೆ ನಡೆಸಿ ತನ್ನ ಸಂವಿಧಾನ ರಚಿಸಿಕೊಂಡು ಸೆಪ್ಟಂಬರ್ 24, 1947ರಲ್ಲಿ ಅಂಗೀಕರಿಸಿಕೊಂಡಿತು.
ರಚನಾ ಸಭೆಯ ನಿರ್ದೇಶನದ ಮೇಲೆ ವಿದೇಶದ ಕಾನೂನುಗಳನ್ನು ಹೆಕ್ಕಿತಂದು, ಇಲ್ಲಿನ ಕಾನೂನು ಪರಿಭಾಷೆಗೆ ಒಳಪಡಿಸಿ, ಸಂಗ್ರಹಿಸಿ ಕೊಟ್ಟ ಮಾತ್ರಕ್ಕೇ ಬಿ.ಎನ್. ರಾವ್ ಅವರನ್ನು ಭಾರತದ ಸಂವಿಧಾನ ಶಿಲ್ಪಿ ಎನ್ನುವುದಾದರೆ, ಬರ್ಮಾ ದೇಶಕ್ಕೂ ಇದೇ ಕೆಲಸ ಮಾಡಿಕೊಟ್ಟ ಅವರನ್ನು ಬರ್ಮಾದ ಸಂವಿಧಾನ ಶಿಲ್ಪಿ ಎಂದೂ ಕರೆಯಬೇಕಲ್ಲವೇ?
ಭಾರತದ ರಚನಾ ಸಭೆಯ ನಿರ್ದೇಶನದಂತೆ ಕಾರ್ಯನಿರ್ವಹಿಸಿದ ನಂತರ, ಸಂವಿಧಾನ ರಚನಾ ಕಲಾಪದಿಂದ ಅವರು ಸಂಪೂರ್ಣ ದೂರ ಉಳಿದರು ಎಂಬುದಕ್ಕೆ ಅದೇ ಅವಧಿಯಲ್ಲಿ ಅವರು ಬರ್ಮಾ ಸಂವಿಧಾನ ರಚನೆ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದೇ ಸಾಕ್ಷಿ. ರಾವ್ ಅವರು ಭಾರತದ ಸಂವಿಧಾನ ರಚನೆಯಲ್ಲಿ ಅಷ್ಟು ಆಳವಾಗಿ, ಗಂಭೀರವಾಗಿ ತಲ್ಲೀನರಾಗಿದ್ದೇ ಆಗಿದ್ದಲ್ಲಿ, ಅದರ ಕಾರ್ಯ ಮುಗಿಯುವುದಕ್ಕೂ ಮೊದಲೇ ಮತ್ತೊಂದು ದೇಶದ ಸಂವಿಧಾನ ರಚನೆಯಲ್ಲಿ ಹೇಗೆ ಭಾಗವಹಿಸುತ್ತಿದ್ದರು? ಆಂಗ್ಲರ ಕೋರಿಕೆಯ ಮೇರೆಗೆ ಅವರೊಬ್ಬ Professional legal expert ಆಗಿ ಕೆಲಸ ಮಾಡುತ್ತಿದ್ದರೇ ಹೊರತು, ಒಂದು ದೇಶದ ಸಂವಿಧಾನವನ್ನು ರಚಿಸಲು ಬೇಕಾಗುವ ಸಮಾಜಶಾಸ್ತ್ರೀಯ ಅಧ್ಯಯನ, ರಾಜಕೀಯ ಬದ್ಧತೆ ಅವರಿಗಿರಲಿಲ್ಲ ಅಥವಾ ಅವರಿಗೆ ಬೇಕಾಗಿರಲಿಲ್ಲ ಎಂಬುದು ಇಲ್ಲಿ ಸಾಬೀತಾಗುತ್ತದೆ.







