ಆಲಮಟ್ಟಿಯ ಸುಂದರ ವನದಲ್ಲಿ ನೀರಿನ ಕೊರತೆ

ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಆಲಮಟ್ಟಿ ಜಲಾಶಯ ಹಾಗೂ ಸುತ್ತಮುತ್ತಲಿನ ಸುಂದರ ಉದ್ಯಾನ ವೀಕ್ಷಿಸಲು ಪ್ರತಿವರ್ಷ ಲಕ್ಷಾಂತರ ಪ್ರವಾಸಿಗರು ಆಗಮಿಸುತ್ತಾರೆ. ವಿಶೇಷವಾಗಿ ನವೆಂಬರ್, ಡಿಸೆಂಬರ್ ಮತ್ತು ಜನವರಿ ತಿಂಗಳಿನಲ್ಲಿ ಆಲಮಟ್ಟಿಗೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸಂಭ್ರಮಿಸುತ್ತಾರೆ.
ಈ ಅವಧಿಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ಜೊತೆಗೆ ಹೊರ ರಾಜ್ಯಗಳಿಂದಲೂ ಪ್ರವಾಸಿಗರು ಕುಟುಂಬ ಸಮೇತರಾಗಿ ಆಗಮಿಸುತ್ತಾರೆ. ಆದರೆ ಪ್ರವಾಸಿಗರಿಗೆ ಅಗತ್ಯವಿರುವ ಮೂಲಸೌಲಭ್ಯಗಳ ಕೊರತೆ ಸಮಸ್ಯೆಯಾಗಿ ಪರಿಣಮಿಸಿದೆ. ಉದ್ಯಾನದ ಬಲ ಭಾಗದಲ್ಲಿರುವ ಪಾರ್ಕಿಂಗ್ ಪ್ರದೇಶದಲ್ಲಿ ಸಾರ್ವಜನಿಕರಿಗಾಗಿ ಅಳವಡಿಸಲಾಗಿದ್ದ ಕುಡಿಯುವ ನೀರಿನ ಎರಡು ನಳಗಳು ಬಂದ್ ಆಗಿರುವುದು ಪ್ರವಾಸಿಗರ ಅಸಮಾಧಾನಕ್ಕೆ ಕಾರಣವಾಗಿದೆ.
ಬೇಸಿಗೆ ಆರಂಭದ ಹಂತದಲ್ಲೇ ನೀರಿನ ಸಮಸ್ಯೆ ಎದುರಾಗುತ್ತಿರುವುದರಿಂದ ಮಹಿಳೆಯರು, ಮಕ್ಕಳು ಹಾಗೂ ಹಿರಿಯ ನಾಗರಿಕರು ಹೆಚ್ಚಿನ ತೊಂದರೆ ಅನುಭವಿಸುತ್ತಾರೆ. ಕುಡಿಯುವ ನೀರಿಗಾಗಿ ಅಂಗಡಿಗಳನ್ನು ಅವಲಂಬಿಸಬೇಕಾದ ಪರಿಸ್ಥಿತಿಯಿದೆ ಎಂದು ಪ್ರವಾಸಿಗರು ದೂರಿದ್ದಾರೆ.
ಇಷ್ಟು ದೊಡ್ಡ ಪ್ರವಾಸಿ ಕೇಂದ್ರವಾಗಿರುವ ಆಲಮಟ್ಟಿಯಲ್ಲಿ ಕುಡಿಯುವ ನೀರಿನಂತಹ ಮೂಲಸೌಲಭ್ಯ ನಿರ್ವಹಣೆಗೆ ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಪ್ರವಾಸಿಗರು ಹಾಗೂ ಸ್ಥಳೀಯರು ಒತ್ತಾಯಿಸಿದ್ದಾರೆ. ಬಂದ್ ಆಗಿರುವ ನೀರಿನ ನಳಗಳನ್ನು ಶೀಘ್ರದಲ್ಲಿ ದುರಸ್ತಿ ಮಾಡಿ ಸಾರ್ವಜನಿಕ ಬಳಕೆಗೆ ಲಭ್ಯವಾಗುವಂತೆ ಮತ್ತು ಮ್ಯೂಸಿಯಂ ಟಿಕೆಟ್ ಕೌಂಟರ್ ಎದುರಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕೆಂಬುದು ಪ್ರವಾಸಿಗರು ಒತ್ತಾಯವಾಗಿದೆ.
ಪ್ರವಾಸಿಗರಿಗೆ ತೊಂದರೆ ಆಗದಂತೆ ಮ್ಯೂಸಿಯಂ ಮುಂದಗಡೆ ಕುಡಿಯುವ ನೀರಿನ ವ್ಯವಸ್ಥೆ ಮಾಡುತ್ತೇವೆ.
ಶಂಕ್ರಯ್ಯ ಮಠಪತಿ,ಸಹಾಯಕ ಇಂಜಿನಿಯರ್, ಆಲಮಟ್ಟಿ







