ಪಶ್ಚಿಮ ಬಂಗಾಳದ ಫಲಿತಾಂಶ ವಿರೋಧ ಪಕ್ಷಗಳಿಗೆ ಪಾಠವೇ?

ಪಶ್ಚಿಮ ಬಂಗಾಳದಲ್ಲಿ ಸಿಪಿಎಂ ಹಾಗೂ ಕಾಂಗ್ರೆಸ್ ನಾಯಕರು ತಾವೂ ಮುಳುಗಿದ್ದಲ್ಲದೆ, ಮಮತಾ ಅವರನ್ನೂ ಮುಳುಗಿಸಿದ್ದಾರೆ. ಟಿಎಂಸಿ ಜತೆ ಹೋಗಿದ್ದರೆ ಎಲ್ಲರೂ ದಡ ಸೇರುತ್ತಿದ್ದರು. ಟಿಎಂಸಿ ಸೋಲಿನಲ್ಲಿ ಚುನಾವಣಾ ಆಯೋಗ ಪಟ್ಟಿಯಿಂದ ತೆಗೆದಿರುವ 91 ಲಕ್ಷ ಮತಗಳ ಕೊಡುಗೆಯೂ ಇದೆ. 27 ಲಕ್ಷ ಮತಗಳು ಪರಿಶೀಲನೆ ಹಂತದಲ್ಲಿವೆ. ಎಲ್ಲರೂ ಸೇರಿಕೊಂಡು ಮಮತಾ ಅವರ ಬೆನ್ನಿಗೆ ಇರಿದಿದ್ದಾರೆ. ತಲೆ ಎತ್ತದಂತೆ ಮಾಡಿದ್ದಾರೆ.
ಇಡೀ ದೇಶದ ಜನರ ಗಮನ ಸೆಳೆದಿದ್ದ ವಿಧಾನಸಭೆ ಚುನಾವಣೆಗಳು ಮುಗಿದಿವೆ. ಫಲಿತಾಂಶ ಪ್ರಕಟವಾಗಿವೆ. ಪಶ್ಚಿಮ ಬಂಗಾಳ ಚುನಾವಣೆ ಪ್ರಜಾಪ್ರಭುತ್ವವನ್ನೇ ಅಣಕಿಸಿದೆ. ಭಾರತೀಯ ಜನತಾ ಪಕ್ಷ ಒಂದು ರೀತಿಯಲ್ಲಿ ಜಿದ್ದಿಗೆ ಬಿದ್ದು ಮಮತಾ ಬ್ಯಾನರ್ಜಿ ಅವರಿಂದ ರಾಜ್ಯವನ್ನು ‘ಕಿತ್ತು’ಕೊಂಡಿದೆ. ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹೇಳಿರುವಂತೆ, ‘ವೋಟ್ ಚೋರಿ’ ಅಗಿದೆಯೋ, ಇಲ್ಲವೋ ಗೊತ್ತಿಲ್ಲ. ಆದರೆ, ಚುನಾವಣಾ ಆಯೋಗ ಅವಸರ ಬಿದ್ದು ಮತದಾರರ ಪಟ್ಟಿ (ಎಸ್‌ಐಆರ್) ಪರಿಷ್ಕರಿಸಿದೆ. ಮತದಾರರ ಹೆಸರನ್ನು ಬೇಕಾಬಿಟ್ಟಿ ತೆಗೆದುಹಾಕಿದೆ.
ಹದಿನೈದು ವರ್ಷದ ಹಿಂದೆ ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಅಧಿಕಾರ ಹಿಡಿದಾಗ ಅದರ ಕೈಲಿ ಸಿಂಗೂರ್, ನಂದಿಗ್ರಾಮ ‘ರೈತ ಬಂಡಾಯದ ಅಸ್ತ್ರ’ವಿತ್ತು. ಸಿಂಗೂರ್‌ನಲ್ಲಿ ಟಾಟಾ ನ್ಯಾನೊ ಕಾರುಗಳ ತಯಾರಿಕಾ ಘಟಕ ಸ್ಥಾಪನೆಗೆ ಕೃಷಿ ಜಮೀನು ವಶಪಡಿಸಿಕೊಳ್ಳಲಾಗಿತ್ತು. ನಂದಿ ಗ್ರಾಮದಲ್ಲಿ ವಿಶೇಷ ಆರ್ಥಿಕ ವಲಯ ಸ್ಥಾಪನೆ ಪ್ರಸ್ತಾವವಿತ್ತು. ಆಗ ಎಡರಂಗ ಸರಕಾರವಿತ್ತು. ಮಮತಾ ಬ್ಯಾನರ್ಜಿ ಅದನ್ನೇ ‘ಗೆಲುವಿನ ಮೆಟ್ಟಿಲು’ ಮಾಡಿಕೊಂಡರು. ಆ ಚಳವಳಿಯಲ್ಲಿ ಮಮತಾ ಅವರ ಒಂದು ಕಾಲದ ‘ಆಪ್ತ’, ಬಿಜೆಪಿ ಮುಖಂಡ ಸುವೆಂದು ಅಧಿಕಾರಿ ಅವರೂ ಸಕ್ರಿಯರಾಗಿದ್ದರು. ರಾಜಕಾರಣವೇ ಹೀಗೆ, ಇಂದು ಮಿತ್ರರಿದ್ದವರು ನಾಳೆ ಶತ್ರುಗಳಾಗುತ್ತಾರೆ, ಶತ್ರುಗಳಿದ್ದವರು ಮಿತ್ರರಾಗುತ್ತಾರೆ. ಸದ್ಯ, ಮಮತಾ ಹಾಗೂ ಸುವೆಂದು ಅಧಿಕಾರಿ ಕಡು ವೈರಿಗಳು.
ಈಗ ರಾಜಕೀಯ ವಾತಾವರಣ ಬದಲಾಗಿದೆ. ರೈತ ಬಂಡಾಯದ ಬದಲಿಗೆ ‘ಎಸ್‌ಐಆರ್ ಅಸ್ತ್ರ’ ಬಿಜೆಪಿಗೆ ಸಿಕ್ಕಿತ್ತು. ಎಸ್‌ಐಆರ್‌ನಲ್ಲಿ ಬಿಜೆಪಿಯ ಪಾತ್ರ ಪ್ರತ್ಯಕ್ಷವಾಗಿ ಇಲ್ಲದಿರಬಹುದು. ಆದರೆ, ಚುನಾವಣಾ ಆಯೋಗವು ಬಿಜೆಪಿಗೆ ಅನುಕೂಲ ಮಾಡಲೆಂದೇ ಆತುರಕ್ಕೆ ಬಿದ್ದು ಎಸ್‌ಐಆರ್ ಪ್ರಕ್ರಿಯೆ ನಡೆಸಿದೆ ಎಂಬ ಆರೋಪವಿದೆ. ಮತದಾರ ಪಟ್ಟಿ ಕಾಲಕಾಲಕ್ಕೆ ಪರಿಷ್ಕರಣೆ ಆಗಬೇಕು. ಈ ಪ್ರಕ್ರಿಯೆ ನಡೆಸುವುದಕ್ಕೆ ಯಾರ ವಿರೋಧವೂ ಇಲ್ಲ. ಪರಿಷ್ಕರಣೆ ನಡೆಸಿದ ಸಮಯ ಮತ್ತು ವಿಧಾನ ಅನುಮಾನಕ್ಕೆ ಎಡೆ ಮಾಡಿರುವುದಂತೂ ದಿಟ.
ಪಶ್ಚಿಮ ಬಂಗಾಳದಲ್ಲಿ ಅವೈಜ್ಞಾನಿಕವಾಗಿ ಮತದಾರರ ಪಟ್ಟಿ ಪರಿಷ್ಕರಿಸಲಾಗಿದೆ. ಒಂದೇ ಮನೆಯಲ್ಲಿ ಕೆಲವರ ಹೆಸರಿದ್ದರೆ, ಕೆಲವರ ಹೆಸರನ್ನು ತೆಗೆಯಲಾಗಿದೆ. ತಂದೆಯ ಹೆಸರಿದ್ದರೆ ಮಕ್ಕಳ ಹೆಸರಿಲ್ಲ. ಅಣ್ಣನ ಹೆಸರಿದ್ದರೆ ತಮ್ಮನ ಹೆಸರಿಲ್ಲ. ತಂಗಿ ಹೆಸರಿದ್ದರೆ ಅಕ್ಕನ ಹೆಸರಿಲ್ಲ. ಅಜ್ಜ-ಅಜ್ಜಿ ಹೆಸರಿದ್ದರೆ ಮೊಮ್ಮಕ್ಕಳ ಹೆಸರಿಲ್ಲ. ಈ ಜನರಿಗೆ ಹಕ್ಕು ಪ್ರತಿಪಾದನೆಗೂ ಸಮಯ ಕೊಟ್ಟಿಲ್ಲ. ಮತದಾರರ ಪಟ್ಟಿಯಿಂದ ತೆಗೆದಿರುವ ಹೆಸರುಗಳು ಪರಿಶೀಲನೆಯಲ್ಲಿರುವಾಗಲೇ ಚುನಾವಣೆ ನಡೆಸಿರುವ ಆಯೋಗದ ನಡೆ ಪ್ರಶ್ನಾರ್ಹ. ‘ಯಾರಿಗೋ ಅನುಕೂಲ ಮಾಡುವ ಉದ್ದೇಶದಿಂದ ಹೀಗೆ ಮಾಡಲಾಗಿದೆ’ ಎಂಬ ಅನುಮಾನ ಹುಟ್ಟಿಸಿದೆ.
ಮುಸ್ಲಿಮರ ಸಂಖ್ಯೆ ಅಧಿಕವಾಗಿರುವ ಕಡೆಗಳಲ್ಲಿ ಮತದಾರರ ಪಟ್ಟಿಯಿಂದ ಅಧಿಕ ಹೆಸರು ತೆಗೆಯಲಾಗಿದೆ. ಮುಸ್ಲಿಮ್ ಮತಗಳು 2011ರಲ್ಲಿ ಎಡ ಪಕ್ಷಗಳಿಂದ ತೃಣಮೂಲ ಕಾಂಗ್ರೆಸ್ ಕಡೆಗೆ ಹೊರಳಿತ್ತು. ಈಗ ಹರಿದು ಹಂಚಿಹೋಗಿವೆ. ಶೇ. 50ಕ್ಕಿಂತ ಹೆಚ್ಚು ಮುಸ್ಲಿಮರಿರುವ ಮಾಲ್ಡಾ, ಮುರ್ಷಿದಾಬಾದ್ ಸೇರಿದಂತೆ ಕೆಲ ಜಿಲ್ಲೆಗಳಲ್ಲಿ ಹಿಂದೂಗಳನ್ನು ಒಗ್ಗೂಡಿಸುವಲ್ಲಿ ಬಿಜೆಪಿ ಯಶಸ್ವಿಯಾಗಿದೆ. ಅನೇಕ ಸೀಟುಗಳನ್ನು ಈ ಭಾಗಗಳಲ್ಲಿ ಪಡೆದಿದೆ. ಪ್ರತಿಯಾಗಿ ಅಲ್ಪ ಸಂಖ್ಯಾತ ಮತಗಳು ಏಕಮುಖವಾಗಿ ಟಿಎಂಸಿಗೆ ಬಿದ್ದಿಲ್ಲ. ಎಡಪಕ್ಷ, ಕಾಂಗ್ರೆಸ್, ಎಜೆಯುಪಿ ನಡುವೆ ಹಂಚಿ ಹೋಗಿವೆ. ಕೆಲವೆಡೆ ಈ ಪಕ್ಷಗಳು ಪಡೆದಿರುವ ಮತಗಳು ಟಿಎಂಸಿ ಸೋಲಿನ ಅಂತರಕ್ಕಿಂತ ಹೆಚ್ಚಿದೆ.
ಚುನಾವಣಾ ಆಯೋಗ ಸ್ವತಂತ್ರ, ಸ್ವಾಯತ್ತ ಸಂಸ್ಥೆ. ಪಾರದರ್ಶಕ ಹಾಗೂ ನಿಷ್ಪಕ್ಷಪಾತವಾಗಿ ನಡೆಯಬೇಕು. ಆದರೆ, ಸಂಶಯದ ಸುಳಿಯಲ್ಲಿ ಸಿಕ್ಕಿಕೊಂಡಿದೆ. ಈ ಸುಳಿಯಿಂದ ಹೊರಬರಲು ಎಷ್ಟು ಸಮಯ ಹಿಡಿಯುವುದೋ? ಅದಕ್ಕೆ ಮತ್ತೊಬ್ಬ ಟಿ.ಎನ್. ಶೇಷನ್ ಹುಟ್ಟಿ ಬರಬೇಕು. ಆಯೋಗದ ಮುಖ್ಯಸ್ಥರಾಗಿ ಶೇಷನ್ 1990-1996ರ ನಡುವೆ ಮಾಡಿದ ಕೆಲಸ ಮರೆಯಲಾಗದು. ರಾಜಕಾರಣಿಗಳಿಗೆ ಸಿಂಹಸ್ವಪ್ನವಾಗಿದ್ದರು. ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಅಧಿಕಾರದಲ್ಲಿ ಇರುವವರೆಗೆ ಶೇಷನ್ ಅವರಂಥ ದಕ್ಷ ಕಮಿಷನರ್ ಬರಲು ಸಾಧ್ಯವಿಲ್ಲ. ಅಲ್ಲದೆ, ಅದಕ್ಕೆ ಮುಖ್ಯ ಚುನಾವಣಾ ಕಮಿಷನರ್ ಮತ್ತು ಕಮಿಷನರ್‌ಗಳ ಆಯ್ಕೆ ಪ್ರಕ್ರಿಯೆ ಬದಲಾಗಬೇಕು. ಇದು ಸಾಧ್ಯವಿಲ್ಲದ ಮಾತು.
ಪಶ್ಚಿಮ ಬಂಗಾಳ ವಿಧಾನಸಭೆಯ ಒಟ್ಟು ಕ್ಷೇತ್ರಗಳು 294. ಚುನಾವಣೆ ನಡೆದಿರುವುದು 293 ಕ್ಷೇತ್ರಗಳಿಗೆ. ಬಿಜೆಪಿ 207, ಟಿಎಂಸಿ 80, ಕಾಂಗ್ರೆಸ್ 2, ಎಜೆಯು 2, ಸಿಪಿಎಂ 1, ಎಐಎಸ್‌ಎಫ್ 1 ಕ್ಷೇತ್ರಗಳಲ್ಲಿ ಗೆದ್ದಿವೆ. ಶೇಕಡಾವಾರು ಮತಗಳ ಪ್ರಮಾಣ ಗಮನಿಸಿದರೆ ಬಿಜೆಪಿ ಮತ್ತು ಟಿಎಂಸಿ ಮಧ್ಯೆ ಇರುವ ಅಂತರ ಬರೀ 5.4ರಷ್ಟು. ಬಿಜೆಪಿಗೆ ಬಿದ್ದಿರುವ ಮತಗಳು 2,92,24,804. ಟಿಎಂಸಿಗೆ 2,60,13,377. ವ್ಯತ್ಯಾಸ ಕೇವಲ 32 ಲಕ್ಷ. ಅಂದರೆ, 5.4 ಮತಗಳ ಅಂತರದಲ್ಲಿ ಮಮತಾ ಬ್ಯಾನರ್ಜಿ ಕಳೆದುಕೊಂಡ ಸ್ಥಾನಗಳು 127. ಒಂದು ಕ್ಷೇತ್ರದಲ್ಲಿ ಗೆದ್ದಿರುವ ಸಿಪಿಎಂ ಪಡೆದ ಶೇಕಡಾವಾರು ಮತಗಳು 4.25. (28,39,067 ಮತ), ಎರಡು ಕಡೆ ಮಾತ್ರ ಗೆದ್ದಿರುವ ಕಾಂಗ್ರೆಸ್ ಪಡೆದಿರುವ ಮತಗಳು 2.97 (18,90,858 ಮತ).
ಸಿಪಿಎಂ ಹಾಗೂ ಕಾಂಗ್ರೆಸ್ ನಾಯಕರು ತಾವೂ ಮುಳುಗಿದ್ದಲ್ಲದೆ, ಮಮತಾ ಅವರನ್ನೂ ಮುಳುಗಿಸಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಜತೆ ಹೋಗಿದ್ದರೆ ಎಲ್ಲರೂ ದಡ ಸೇರುತ್ತಿದ್ದರು. ಟಿಎಂಸಿ ಸೋಲಿನಲ್ಲಿ ಚುನಾವಣಾ ಆಯೋಗ ಪಟ್ಟಿಯಿಂದ ತೆಗೆದಿರುವ 91 ಲಕ್ಷ ಮತಗಳ ಕೊಡುಗೆಯೂ ಇದೆ. 27 ಲಕ್ಷ ಮತಗಳು ಪರಿಶೀಲನೆ ಹಂತದಲ್ಲಿವೆ. ಎಲ್ಲರೂ ಸೇರಿಕೊಂಡು ಮಮತಾ ಅವರ ಬೆನ್ನಿಗೆ ಇರಿದಿದ್ದಾರೆ. ತಲೆ ಎತ್ತದಂತೆ ಮಾಡಿದ್ದಾರೆ.
ಟಿಎಂಸಿ 2011ರಲ್ಲಿ ಮೊದಲ ಸಲ ರಾಜ್ಯದಲ್ಲಿ ಅಧಿಕಾರ ಹಿಡಿದಾಗ, ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಂಡು 227 ಸ್ಥಾನ ಗೆದ್ದಿತ್ತು. ಹೆಚ್ಚುಕಡಿಮೆ ಶೇ. 39ರಷ್ಟು ಮತ ಪಡೆದಿದ್ದ ಮಮತಾ ಪಕ್ಷದ ಪಾಲು 184. ಶೇ. 9.09ರಷ್ಟು ಮತ ಪಡೆದಿದ್ದ ಕಾಂಗ್ರೆಸ್ 42 ಕ್ಷೇತ್ರಗಳಲ್ಲಿ ಗೆಲುವು ಪಡೆದಿತ್ತು. ಶೇ. 30.8ರಷ್ಟು ಮತಗಳನ್ನು ಪಡೆದಿದ್ದ ಎಡರಂಗ ಗಳಿಸಿದ್ದು 62 ಸ್ಥಾನ. ಸಿಪಿಎಂ 40 ಕ್ಷೇತ್ರಗಳಲ್ಲಿ ಜಯ ಸಾಧಿಸಿತ್ತು. 2016ರ ಚುನಾವಣೆಯಲ್ಲಿ ಟಿಎಂಸಿ, ಕಾಂಗ್ರೆಸ್ ಬಲ ಹೆಚ್ಚಿತ್ತು. ಎಡ ಪಕ್ಷಗಳ ಬಲ ಕುಸಿಯಿತು. ಚುನಾವಣೆಯಿಂದ ಚುನಾವಣೆಗೆ ಟಿಎಂಸಿ ಗ್ರಾಫ್ ಏರುಗತಿಯಲ್ಲಿ ಸಾಗಿತು. 2021ರಲ್ಲಿ ಕಾಂಗ್ರೆಸ್ ಹಾಗೂ ಎಡ ಪಕ್ಷಗಳು ಮುಗ್ಗರಿಸಿದವು. ಈ ಚುನಾವಣೆಯಲ್ಲೂ ಎರಡು ಪಕ್ಷಗಳ ಮತ ಪ್ರಮಾಣ ಬಹುತೇಕ ಕಳೆದ ಚುನಾವಣೆಯಷ್ಟೇ ಇದೆ.
ಇನ್ನೊಂದೆಡೆ, 2016ರಿಂದ ಬಿಜೆಪಿ ಬಲ ಹೆಚ್ಚುತ್ತಾ ಹೋಗಿದೆ. 10 ವರ್ಷದ ಹಿಂದೆ ಅಂದರೆ, 2016ರಲ್ಲಿ ಶೇ. 10ಕ್ಕಿಂತ ಅಧಿಕ ಮತ ಪಡೆದು ಮೂರು ಕ್ಷೇತ್ರಗಳಲ್ಲಿ ಗೆದ್ದಿದ್ದ ಬಿಜೆಪಿ, ಕಳೆದ ಚುನಾವಣೆಯಲ್ಲಿ ಶೇ. 38ರಷ್ಟು ಮತ ಪಡೆದು 77 ಕ್ಷೇತ್ರಗಳಲ್ಲಿ ಗೆಲುವು ದಾಖಲಿಸಿತ್ತು. ಈ ಸಲ ಪಕ್ಕಾ ಲೆಕ್ಕಾಚಾರದೊಂದಿಗೆ ಕಣಕ್ಕಿಳಿದಿತ್ತು. ಚುನಾವಣೆ ಸಾಧಕ-ಬಾಧಕ ಯೋಚನೆ ಮಾಡಿಯೇ ಪ್ರತಿ ಹೆಜ್ಜೆ ಇಟ್ಟಿದೆ. ಹಿಂದೂ ಮತಗಳನ್ನು ಒಗ್ಗೂಡಿಸಿದೆ. ಮೇಲಿಂದ ಮೇಲೆ ಹಿಂದೂ-ಮುಸ್ಲಿಮ್ ಎಂದು ಹೇಳಿ ಜನರ ತಲೆಗೆ ಹುಳ ಬಿಟ್ಟಿದೆ. ಇದು ಒಂದು ದಿನಕ್ಕೆ ಮಾಡಿರುವ ಕೆಲಸವಲ್ಲ. 2016ರಿಂದಲೇ ನಡೆಸಿದ ತಯಾರಿ. ಅದೀಗ ಫಲ ಕೊಟ್ಟಿದೆ.
ಪಶ್ಚಿಮ ಬಂಗಾಳದಲ್ಲಿ ತುರ್ತು ಪರಿಸ್ಥಿತಿ ಬಳಿಕ ಕಾಂಗ್ರೆಸ್ ಸಂಪೂರ್ಣವಾಗಿ ನೆಲ ಕಚ್ಚಿದೆ. ಅಲ್ಲಿಂದಾಚೆಗೆ ಅದಕ್ಕೆ ಚೇತರಿಸಿಕೊಳ್ಳಲು ಆಗಿಲ್ಲ. ಪಕ್ಷ ಕಟ್ಟಿ ಬೆಳೆಸಲು ಸಾಮರ್ಥ್ಯವಿರುವ ನಾಯಕರೂ ಇಲ್ಲ. 1977ರಲ್ಲಿ ಪಶ್ಚಿಮ ಬಂಗಾಳದಲ್ಲಿ ಅಧಿಕಾರಕ್ಕೆ ಬಂದ ಎಡ ರಂಗಕ್ಕೆ ಹಿರಿಯ ಸಿಪಿಎಂ ನಾಯಕ ಜ್ಯೋತಿ ಬಸು 23 ವರ್ಷ ನಾಯಕತ್ವ ಕೊಟ್ಟಿದ್ದರು. ಆನಂತರ, ಬುದ್ಧದೇವ್ ಭಟ್ಟಾಚಾರ್ಯ ಅವರಿಗೆ ಹೊಣೆಗಾರಿಕೆ ವಹಿಸಲಾಗಿತ್ತು. ಪಶ್ಚಿಮ ಬಂಗಾಳದ ರಾಜಕೀಯ ಸ್ಥಿತಿಗತಿ ಗಮನಿಸಿದರೆ ಕಾಂಗ್ರೆಸ್, ಟಿಎಂಸಿ ಮತ್ತು ಎಡಪಕ್ಷಗಳು ಮೈಕೊಡವಿ ಮೇಲೇಳುವಂತೆ ಕಾಣುತ್ತಿಲ್ಲ. ಪಶ್ಚಿಮ ಬಂಗಾಳ ಬಿಜೆಪಿ ಪಾಲಿಗೆ ಮತ್ತೊಂದು ಗುಜರಾತ್ ಆಗಬಹುದು. ಅಂದರೆ, ಬಿಜೆಪಿ ಮಣಿಸಲು ಇನ್ನೆಷ್ಟು ವರ್ಷ ಬೇಕಾಗುವುದೋ?
ಮಮತಾ ಬ್ಯಾನರ್ಜಿ ಸತತ ಮೂರು ಅವಧಿಗೆ ಮುಖ್ಯಮಂತ್ರಿ ಆಗಿದ್ದರು. ಟಿಎಂಸಿ ಸೋಲಿಗೆ ಆಡಳಿತ ವಿರೋಧಿ ಅಲೆಯೂ ಕಾರಣ ಎಂದು ಹೇಳಲಾಗುತ್ತಿದೆ. ಯಾವುದೇ ಒಂದು ಪಕ್ಷ ಎರಡು, ಮೂರು ಅವಧಿಗೆ ಅಧಿಕಾರದಲ್ಲಿದ್ದರೆ ಆಡಳಿತ ವಿರೋಧಿ ಅಲೆ ಇದ್ದೇ ಇರುತ್ತದೆ. ವಿರೋಧ ಪಕ್ಷಗಳ ವಿಷಯದಲ್ಲಿ ಇದು ನಿಜ. ಕೇರಳ, ತಮಿಳುನಾಡಿನಲ್ಲಿ ಆಗಿದ್ದೂ ಇದೇ. ಆದರೆ, ಅಸ್ಸಾಂ, ಗುಜರಾತ್ ಸೇರಿದಂತೆ ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಿಗೆ ಈ ಮಾತು ಅನ್ವಯಿಸುವುದಿಲ್ಲ. ಅಲ್ಲಿ ಯಾವಾಗಲೂ ಆಡಳಿತ ಪರವಾದ ಅಲೆಯೇ ಇರುತ್ತದೆ. ಹೀಗಾಗಿ, ಹತ್ತು, ಹದಿನೈದು, ಇಪ್ಪತ್ತು ವರ್ಷ ಬಿಜೆಪಿ ಸರಕಾರ ಅಧಿಕಾರದಲ್ಲಿ ಮುಂದುವರಿಯುತ್ತದೆ.
ಮಮತಾ ಬ್ಯಾನರ್ಜಿ ಮುಖ್ಯಮಂತ್ರಿ ಆಗಿ ಬೇಕಾದಷ್ಟು ತಪ್ಪು ಹೆಜ್ಜೆ ಇಟ್ಟಿದ್ದಾರೆ. ಕಾನೂನು-ಸುವ್ಯವಸ್ಥೆ ಪಾಲನೆಯಲ್ಲಿ ಸೋತಿದ್ದಾರೆ. ಟಿಎಂಸಿ ಕಾರ್ಯಕರ್ತರ ದಬ್ಬಾಳಿಕೆ, ದೌರ್ಜನ್ಯ ನಿಯಂತ್ರಿಸಲು ವಿಫಲರಾಗಿದ್ದಾರೆ. ಇದಕ್ಕೆ ಸಂದೇಶ್ ಕಾಳಿ ಘಟನೆಯೇ ಸಾಕ್ಷಿ. ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ, ಜಮೀನು ಲಪಟಾಯಿಸಲು ಯತ್ನಿಸಿದ ಘಟನೆಯನ್ನು ಸರಿಯಾಗಿ ನಿಭಾಯಿಸಲಿಲ್ಲ ಎಂಬ ಆರೋಪ ಹೊತ್ತರು. ಆರ್.ಜಿ. ಕರ್ ಆಸ್ಪತ್ರೆಯ ಟ್ರೈನಿ ವೈದ್ಯೆ ಮೇಲೆ ಅತ್ಯಾಚಾರ ಎಸಗಿ, ಕೊಲೆ ಮಾಡಿದ ಪ್ರಕರಣದಲ್ಲೂ ಪರಿಣಾಮಕಾರಿ ಕ್ರಮಕ್ಕೆ ಮುಂದಾಗಲಿಲ್ಲ. ಇವೆಲ್ಲವೂ ಕೊರಳಿಗೆ ಸುತ್ತಿಕೊಂಡವು. ಭ್ರಷ್ಟಾಚಾರ, ಸ್ವಜನ ಪಕ್ಷಪಾತದ ದೂರುಗಳಿಗೂ ಲೆಕ್ಕವಿರಲಿಲ್ಲ. ಎರಡನೇ ಹಂತದ ನಾಯಕರನ್ನು ಬೆಳೆಸದೆ, ಸ್ವಜನ ಪಕ್ಷಪಾತ ಮಾಡಿದರು. ಮಮತಾ ಬ್ಯಾನರ್ಜಿ ಅವರ ಕ್ರಮಗಳು ಟಿಎಂಸಿ ಸೋಲಿಗೆ ಮುನ್ನುಡಿ ಬರೆದವು.
ಮಮತಾ ಅವರ ಕಟ್ಟಾ ಬೆಂಬಲಿಗರಾಗಿದ್ದ ಮಹಿಳೆಯರೂ ಅವರ ಕೈಬಿಟ್ಟರು. ಮಹಿಳೆಯರ ಸುರಕ್ಷತೆ, ಭ್ರಷ್ಟಾಚಾರ ಸ್ವಜನ ಪಕ್ಷಪಾತದ ಆರೋಪಗಳನ್ನು ಮುಂದಿಟ್ಟುಕೊಂಡು ಬಿಜೆಪಿ ನಾಯಕರು ಸಮರ್ಪಕವಾಗಿ ಪ್ರಚಾರ ಮಾಡಿದರು. ಈ ಆರೋಪಗಳನ್ನು ಟಿಎಂಸಿ ಸರಿಯಾಗಿ ಕೌಂಟರ್ ಮಾಡಲಿಲ್ಲ. ಪಶ್ಚಿಮ ಬಂಗಾಳದ ಚುನಾವಣೆಯಲ್ಲಿ ‘ಲೆವೆಲ್ ಪ್ಲೇಯಿಂಗ್ ಫೀಲ್ಡ್’ ಇರಲಿಲ್ಲ. ಒಂದು ರೀತಿ ಭಯದ ವಾತಾವರಣ ಸೃಷ್ಟಿಸಿ ಚುನಾವಣೆ ನಡೆಸಲಾಯಿತು. ಕೇಂದ್ರದ ಉಸ್ತುವಾರಿಯಲ್ಲೇ ಎಲ್ಲವೂ ನಡೆಯಿತು ಎಂದರೂ ತಪ್ಪಲ್ಲ. ಚುನಾವಣಾ ಆಯೋಗ ‘ನ್ಯೂಟ್ರಲ್ ಅಂಪೈರ್’ ಆಗಲಿಲ್ಲ.
ಇನ್ನು ತಮಿಳುನಾಡು ಚುನಾವಣೆಯಲ್ಲಿ ವಿಜಯ್ ಅವರ ಟಿವಿಕೆ ಪಕ್ಷದ ಗೆಲುವು ಅನಿರೀಕ್ಷಿತ. ಯಾರೂ ನಿರೀಕ್ಷೆ ಮಾಡಿರಲಿಲ್ಲ. ಯುವಕರು, ಮಹಿಳೆಯರು ವಿಜಯ್ ಅವರಿಗೆ ಏಕೆ ಒಂದು ಅವಕಾಶ ಕೊಡಬಾರದು ಎಂದು ಮಾತನಾಡುತ್ತಿದ್ದರು. ಅದರಂತೆ ಅವಕಾಶ ಕೊಟ್ಟಿದ್ದಾರೆ. ಆದರೆ, ಅವರ ಪಕ್ಷಕ್ಕೂ ಬಹುಮತ ಕೊಟ್ಟಿಲ್ಲ. ವಿಧಾನಸಭೆಯನ್ನು ಅತಂತ್ರ ಮಾಡಿದ್ದಾರೆ. 1967ರಿಂದ ಸತತವಾಗಿ ಕೈ ಬದಲಾಯಿಸಿಕೊಂಡು ಆಡಳಿತ ನಡೆಸಿಕೊಂಡು ಬಂದಿದ್ದ ದ್ರಾವಿಡ ಪಕ್ಷಗಳಾದ ಡಿಎಂಕೆ, ಅಣ್ಣಾ ಡಿಎಂಕೆಯನ್ನು ತಿರಸ್ಕರಿಸಿದ್ದಾರೆ. ಜಾತಿ, ಮತದ ಎಲ್ಲೆ ಮೀರಿ ವಿಜಯ್ ಅವರನ್ನು ಗೆಲ್ಲಿಸಿದ್ದಾರೆ. ಯಾರ ಜತೆ ಸೇರಿ ಸರಕಾರ ಮಾಡಲಿದ್ದಾರೆ ಎಂಬ ಕುತೂಹಲವಿದೆ.
ಕೇರಳದಲ್ಲಿ ನಿರೀಕ್ಷೆಯಂತೆ ಯುಡಿಎಫ್ ಜಯಭೇರಿ ಬಾರಿಸಿದೆ. ಯುಡಿಎಫ್ ಮತ್ತು ಎಲ್‌ಡಿಎಫ್ ನಡುವೆ ಇಷ್ಟೊಂದು ಅಂತರ ಇರಬಹುದು ಎಂದು ಊಹಿಸಿರಲಿಲ್ಲ. ಮತದಾರರು ‘ಭರಣಂ ಮಾರಣಂ’ಗೆ (ಪ್ರಭುತ್ವ ಬದಲಾವಣೆ) ತೀರ್ಮಾನಿಸಿದ್ದರು. ಅವರಂದುಕೊಂಡಂತೆ ಎಲ್ಲವೂ ನಡೆದಿದೆ.






