Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. 11 ವರ್ಷಗಳ ಅಧಿಕಾರದಲ್ಲಿ ಮೋದಿ ಸರಕಾರ...

11 ವರ್ಷಗಳ ಅಧಿಕಾರದಲ್ಲಿ ಮೋದಿ ಸರಕಾರ ಮಾಡಿದ ಸಾಧನೆಗಳೇನು?

ಎಸ್. ಸುದರ್ಶನ್ಎಸ್. ಸುದರ್ಶನ್11 Jun 2025 12:16 PM IST
share
11 ವರ್ಷಗಳ ಅಧಿಕಾರದಲ್ಲಿ ಮೋದಿ ಸರಕಾರ ಮಾಡಿದ ಸಾಧನೆಗಳೇನು?
ಮೋದಿ ಸರಕಾರ ಅಧಿಕಾರಕ್ಕೆ ಬಂದು 11 ವರ್ಷಗಳಾಗಿವೆ. ಈ ಸರಕಾರ ಬಂದ ಮೇಲೆಯೇ ದೇಶಕ್ಕೆ ಸ್ವಾತಂತ್ರ್ಯ ಬಂತು ಎಂಬಂತಹ ಪ್ರಚಾರ ಇಲ್ಲಿ ನಡೆದಿರುವಾಗ ಈ ಸರಕಾರದ ಪ್ರಮಾದಗಳೇನು ಎಂದು ಮಾತಾಡುವ ಮೀಡಿಯಾಗಳು ಇಲ್ಲಿ ಇಲ್ಲವೇ ಇಲ್ಲ ಎಂಬಷ್ಟು ಕಡಿಮೆ. ಹಾಗಿರುವಾಗ ಈ 11 ವರ್ಷಗಳಲ್ಲಿ ಮೋದಿ ಸರಕಾರ ಮಾಡಿರುವ ಪ್ರಮಾದಗಳು ಏನೇನು ಎಂಬುದನ್ನು ಈ ದೇಶದ ಜನತೆಯ ಮುಂದೆ ಇಡುವ ಪ್ರಯತ್ನ ಇಲ್ಲಿದೆ.

ಮೋದಿ ಸರಕಾರದ ಅತ್ಯಂತ ಪ್ರಮುಖ 11 ವೈಫಲ್ಯಗಳನ್ನು ಪಟ್ಟಿ ಮಾಡುವುದಾದರೆ,

1. ದೇಶಾದ್ಯಂತ ಹೆಚ್ಚುತ್ತಿರುವ ದ್ವೇಷ

2. ರಾಜತಾಂತ್ರಿಕ ವೈಫಲ್ಯ

3. ಭದ್ರತಾ ವೈಫಲ್ಯ

4. ನೋಟ್ ಬ್ಯಾನ್

5. ಜಿಎಸ್‌ಟಿ ಸಂಬಂಧಿತ ಸಮಸ್ಯೆಗಳು

6. ಚುನಾವಣಾ ಬಾಂಡ್, ರಫೇಲ್ ಸೇರಿದಂತೆ ಬ್ರಹ್ಮಾಂಡ ಭ್ರಷ್ಟಾಚಾರ

7. ಯುವಕರ ಪಾಲಿಗೆ ಭ್ರಮನಿರಸನ

8. ದೇಶದ ಒಕ್ಕೂಟ ರಚನೆಗೆ ಪೆಟ್ಟು

9. ದುರ್ಬಲಗೊಂಡ ಸ್ವಾಯತ್ತ ಸಂಸ್ಥೆಗಳು

10. ಮಾಧ್ಯಮದ ಮೇಲೆ ಆಕ್ರಮಣ

11. ಆಪರೇಷನ್ ಕಮಲ

ಇವುಗಳನ್ನು ಒಂದೊಂದಾಗಿ ನೋಡುವು ದಾದರೆ..

ಈ ಹನ್ನೊಂದು ವರ್ಷಗಳಲ್ಲಿ ದೇಶದಲ್ಲಿ ದ್ವೇಷ ಮತ್ತು ಕೋಮು ಧ್ರುವೀಕರಣ ಅತಿಯಾಗಿ ಏರಿದೆ. ಧಾರ್ಮಿಕ ಅಲ್ಪಸಂಖ್ಯಾತರನ್ನು ಸತತವಾಗಿ ಗುರಿಯಾಗಿಸಲಾಗಿದೆ.

ವಾಶಿಂಗ್ಟನ್ ಮೂಲದ ಇಂಡಿಯಾ ಹೇಟ್ ಲ್ಯಾಬ್ ಪ್ರಕಾರ, 2024ರಲ್ಲಿನ ಅಲ್ಪಸಂಖ್ಯಾತ ವಿರೋಧಿ ದ್ವೇಷ ಭಾಷಣ ಪ್ರಕರಣಗಳು 1,165. 2023ರಲ್ಲಿ ಇಂತಹ 668 ಪ್ರಕರಣಗಳು ದಾಖಲಾಗಿದ್ದವು. ಅಂದರೆ, ಒಂದು ವರ್ಷದಲ್ಲೇ ಎಷ್ಟೊಂದು ಹೆಚ್ಚಳವಾಗಿದೆ. ಕೋಮು ಸಾಮರಸ್ಯ ಎಂಬುದು ಎಷ್ಟು ತೀವ್ರವಾಗಿ ಕ್ಷೀಣಿಸುತ್ತಿದೆ ಎಂಬುದಕ್ಕೆ ಇಷ್ಟು ಸಾಕು.

ದ್ವೇಷ ಭಾಷಣ ಎಂದೊಡನೆ ಸಾಮಾನ್ಯವಾಗಿ ಅದು ಮುಸ್ಲಿಮರ ವಿರುದ್ಧವಾಗಿರುತ್ತದೆ. ದ್ವೇಷ ಭಾಷಣಗಳು ಮೇ 2024ರಲ್ಲಿ ತೀವ್ರವಾಗಿದ್ದವು. ಮತ್ತದು ಲೋಕಸಭೆ ಚುನಾವಣೆಗೆ ತಯಾರಿ ನಡೆದಿದ್ದ ಸಮಯವಾಗಿತ್ತು ಎಂಬುದನ್ನು ಗಮನಿಸಬೇಕು. ಬಿಜೆಪಿ ನಾಯಕರು, ಧಾರ್ಮಿಕ ಮುಖಂಡರು ಮತ್ತು ವಿಎಚ್‌ಪಿ, ಬಜರಂಗ ದಳದಂತಹ ಸಂಘಟನೆಗಳ ಮಂದಿ ಗಣನೀಯ ಸಂಖ್ಯೆಯಲ್ಲಿ ದ್ವೇಷ ಭಾಷಣ ಮಾಡಿದವರಾಗಿದ್ದರು.

ಸ್ವತಃ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ಅವರೂ ಇದರಲ್ಲಿ ಹಿಂದೆ ಬಿದ್ದಿರಲಿಲ್ಲ. ಹಿಂದೂಗಳ ಸಂಪತ್ತನ್ನು ಕಸಿದು ಮುಸ್ಲಿಮರಿಗೆ ಹಂಚಲಾಗುತ್ತದೆ ಎನ್ನುವಲ್ಲಿಯವರೆಗೂ ಜನರನ್ನು ಪ್ರಚೋದಿಸುವ ಕೆಲಸ ನಡೆಯಿತು.

ಮುಸ್ಲಿಮರನ್ನು ಕೊಲ್ಲುವಂತೆ ದಿಲ್ಲಿಯ ಬೀದಿಗಳಲ್ಲಿ ನಿಂತು ಕರೆ ಕೊಟ್ಟವರಿಗೇನು ಕಡಿಮೆಯಿರಲಿಲ್ಲ. ಮನೆಯಲ್ಲಿ ಆಯುಧ ಶೇಖರಿಸಿಕೊಳ್ಳಿ ಎಂದು ಜನಪ್ರತಿನಿಧಿಗಳೇ ಜನರಿಗೆ ಕರೆ ಕೊಡುವುದು ಕೂಡ ನಡೆಯಿತು.

ಮುಸ್ಲಿಮರು ಅಂಗಡಿ, ವ್ಯವಹಾರ ನಡೆಸದಂತೆ ಬೆದರಿಸುವುದು, ದಾಳಿ ಮಾಡುವುದು, ಊರನ್ನೇ ಬಿಟ್ಟು ಓಡುವಂತೆ ಮಾಡಿ, ಭಯದ ವಾತಾವರಣ ಸೃಷ್ಟಿಸುವುದು ಕೂಡ ನಡೆದವು.

ಮುಸ್ಲಿಮರ ಪ್ರಾರ್ಥನಾ ಸ್ಥಳಗಳ ವಿರುದ್ಧವೂ ಜನರನ್ನು ಪ್ರಚೋದಿಸುವ ಕೆಲಸ ನಡೆಯಿತು. ಎಲ್ಲ ತಪ್ಪುಗಳಿಗೂ, ಎಲ್ಲ ಅಪರಾಧಗಳಿಗೂ ಮುಸ್ಲಿಮರು ಕಾರಣ ಎಂಬ ವಾತಾವರಣ ಸೃಷ್ಟಿಸುವುದು ನಡೆಯಿತು. ಮುಸ್ಲಿಮರ ಹೆಸರು ಬಳಸಿ ತಪ್ಪು ಕೆಲಸಗಳನ್ನು ಮಾಡಿ, ಅವರ ಮೇಲೆ ಇನ್ನೂ ದ್ವೇಷ ಹೆಚ್ಚುವಂತೆ ಮಾಡುವ ಪಿತೂರಿಗಳೂ ಕಂಡವು.

ರಾಜತಾಂತ್ರಿಕ ವೈಫಲ್ಯ

ಇನ್ನು ರಾಜತಾಂತ್ರಿಕ ವೈಫಲ್ಯದ ಬಗ್ಗೆ ನೋಡುವುದಾದರೆ,

ದಕ್ಷಿಣ ಏಶ್ಯದ ದೇಶಗಳೊಂದಿಗೆ ಸಂಬಂಧಗಳಿಗೆ ಆದ್ಯತೆ ನೀಡುವ ನೇಬರ್‌ಹುಡ್ ಫಸ್ಟ್ ಎಂಬ ಘೋಷಣೆ ಏನಾಯಿತು? ಬಾಂಗ್ಲಾದೇಶದೊಂದಿಗಿನ ಭಾರತದ ಸಂಬಂಧ ಹಳಸಿರುವುದಂತೂ ರಾಜತಾಂತ್ರಿಕ ವೈಫಲ್ಯಕ್ಕೆ ಒಂದು ಮುಖ್ಯ ಉದಾಹರಣೆ. ನೇಪಾಳ, ಮಾಲ್ಡೀವ್ಸ್‌ಗಳ ಜೊತೆಗೂ ಸಂಬಂಧ ಅಷ್ಟಕ್ಕಷ್ಟೇ ಎಂಬಂತಿದೆ.

‘ಆಪರೇಷನ್ ಸಿಂಧೂರ’ದ ಬಳಿಕದ ಪರಿಸ್ಥಿತಿ ನೋಡುವುದಾದರೆ ಒಂದೇ ಒಂದು ಪ್ರಮುಖ ದೇಶ ಭಾರತದ ಜೊತೆ ಗಟ್ಟಿಯಾಗಿ ನಿಂತಿರುವುದು ಕಾಣುತ್ತಿಲ್ಲ. ಜಾಗತಿಕ ಶಕ್ತಿಗಳು ಭಾರತವನ್ನು ಬೆಂಬಲಿಸಿ ಮಾತಾಡಲಿಲ್ಲ. ಚೀನಾ ಅಂತೂ ಪಾಕಿಸ್ತಾನಕ್ಕೆ ಬೇಕಾದ ಎಲ್ಲ ನೆರವು ನೀಡಿತು. ಅಮೆರಿಕವು ಭಾರತ ಪಾಕಿಸ್ತಾನ ಎರಡೂ ಸಮಾನ ಎಂಬಂತೆ ಮಾತಾಡಿ ನಮ್ಮನ್ನು ಅವಮಾನಿಸಿತು.

ಮೋದಿ 150ಕ್ಕೂ ಹೆಚ್ಚು ದೇಶಗಳಿಗೆ ಹೋಗಿ ಬಂದು ದೇಶ ವಿಶ್ವಗುರು ಆಗಿದೆ ಎಂದು ಇಲ್ಲಿನ ಮಡಿಲ ಮೀಡಿಯಾಗಳು ಪ್ರಚಾರ ಮಾಡಿದ್ದೇ ಮಾಡಿದ್ದು. ಆದರೆ ಆ ಎಲ್ಲ ವಿದೇಶ ಪ್ರವಾಸಗಳಿಂದ ಏನೂ ಪ್ರಯೋಜನ ಆಗಲಿಲ್ಲ ಎಂಬುದು ಆಪರೇಷನ್ ಸಿಂಧೂರ ಸಂದರ್ಭದಲ್ಲಿ ಬಯಲಾಯಿತು. ಅದಕ್ಕಾಗಿಯೇ ಸರ್ವಪಕ್ಷಗಳ ನಿಯೋಗಗಳನ್ನು ಮೂವತ್ತೆರಡು ದೇಶಗಳಿಗೆ ಕಳುಹಿಸಬೇಕಾಯಿತು.

ಭದ್ರತಾ ವೈಫಲ್ಯ

ಭದ್ರತಾ ಸವಾಲುಗಳ ವಿಚಾರಕ್ಕೆ ಬಂದರೆ, ಜೂನ್ 2020ರಲ್ಲಿ ಗಾಲ್ವಾನ್ ಕಣಿವೆಯಲ್ಲಿ ಚೀನಾ ಮತ್ತು ಭಾರತದ ಸೈನಿಕರ ನಡುವೆ ಹಿಂಸಾತ್ಮಕ ಘರ್ಷಣೆಗಳು ನಡೆದವು. ಎರಡೂ ಕಡೆಗಳಲ್ಲಿ ಸಾವುನೋವುಗಳು ಸಂಭವಿಸಿದವು. ಆ ಘಟನೆ ದ್ವಿಪಕ್ಷೀಯ ಸಂಬಂಧಗಳ ತೀವ್ರ ಹದಗೆಡುವಿಕೆಗೆ ಕಾರಣವಾಯಿತು.

ಚೀನಾ ನಮ್ಮ ದೇಶದೊಳಗೆ ಸಾಕಷ್ಟು ಅತಿಕ್ರಮಣ ಮಾಡಿ ರಸ್ತೆ, ಗ್ರಾಮಗಳನ್ನೇ ನಿರ್ಮಿಸಿರುವ ವರದಿ ಬಂತು. ಆದರೆ ಪ್ರಧಾನಿ ಮಾತ್ರ ಹಾಗೇನೂ ಆಗೇ ಇಲ್ಲ ಎಂದು ಹೇಳಿ ಬಿಟ್ಟರು.

40 ಸಿಆರ್‌ಪಿಎಫ್ ಸಿಬ್ಬಂದಿಯನ್ನು ಬಲಿ ತೆಗೆದುಕೊಂಡ ಫೆಬ್ರವರಿ 2019ರ ಭಯಾನಕ ಪುಲ್ವಾಮಾ ಭಯೋತ್ಪಾದಕ ದಾಳಿ ಇಡೀ ದೇಶವನ್ನೇ ನಡುಗಿಸಿಬಿಟ್ಟಿತು. ಮೋದಿ ಸರಕಾರ ಬಂದ ಮೇಲೆ, ನೋಟ್ ಬ್ಯಾನ್ ಆದ ಮೇಲೆ ಭಯೋತ್ಪಾದನೆ ನಿರ್ಮೂಲನೆಯಾಗಿದೆ ಎಂಬ ಭರವಸೆಯನ್ನು ಹುಸಿ ಮಾಡಿತು. ಅಷ್ಟು ದೊಡ್ಡ ದಾಳಿ ಹೇಗೆ ನಡೆಯಿತು ಎಂಬುದಕ್ಕೆ ಇವತ್ತಿಗೂ ಉತ್ತರ ಸಿಕ್ಕಿಲ್ಲ. ಆದರೆ ಅದೇ ದಾಳಿಯ ಹೆಸರಲ್ಲಿ ಪ್ರಧಾನಿ ಮೋದಿ ಜನರಿಂದ ವೋಟು ಕೇಳಿ ಎರಡನೇ ಅವಧಿಗೆ ಅಧಿಕಾರ ಹಿಡಿದರು.

ಎಪ್ರಿಲ್ 2025ರಲ್ಲಿ ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ನಡೆದ ಭೀಕರ ಭಯೋತ್ಪಾದಕ ದಾಳಿಯಲ್ಲಿ 25 ಮಂದಿ ಭಾರತೀಯರು ಮತ್ತು ಒಬ್ಬ ನೇಪಾಳಿ ಪ್ರಜೆ ಸಾವನ್ನಪ್ಪಿದರು. ಅದು ಇಡೀ ದೇಶಕ್ಕೆ ಒಂದು ದೊಡ್ಡ ಶಾಕ್. ಸಾವಿರಾರು ಪ್ರವಾಸಿಗರು ಇರುವಲ್ಲಿ ಒಬ್ಬನೇ ಒಬ್ಬ ಸುರಕ್ಷತಾ ಸಿಬ್ಬಂದಿ ಇರಲಿಲ್ಲ. ಇದು 2008ರ ಮುಂಬೈ ದಾಳಿಯ ನಂತರ ಭಾರತದಲ್ಲಿ ನಾಗರಿಕರ ಮೇಲೆ ನಡೆದ ಅತ್ಯಂತ ಭೀಕರ ಘಟನೆಯಾಗಿದೆ.

ಭಾರತ ಮೇ 2025ರಲ್ಲಿ ಪಾಕಿಸ್ತಾನ ಮತ್ತು ಪಿಒಕೆಯಲ್ಲಿನ ಉಗ್ರಗಾಮಿ ತಾಣಗಳನ್ನು ಗುರಿಯಾಗಿಸಿ ಆಪರೇಷನ್ ಸಿಂಧೂರ ಕಾರ್ಯಾಚರಣೆ ನಡೆಸಿತು. ಆದರೆ ಪಹಲ್ಗಾಮ್ ಭಯೋತ್ಪಾದಕರು ಮಾತ್ರ ಇವತ್ತಿಗೂ ಪತ್ತೆಯಾಗಿಲ್ಲ. ಇನ್ನು ಉರಿ ಮತ್ತಿತರ ಭಯೋತ್ಪಾದಕ ದಾಳಿಗಳ ಸಂಖ್ಯೆ ಬೇಕಾದಷ್ಟಿದೆ.

ಈ ಸರಕಾರ ಬಂದ ಮೇಲೆ ಗಡಿಯಲ್ಲಿ ನುಸುಳುಕೋರರ ದಾಳಿ, ಸೈನಿಕರ ಮೇಲೆ ಭಯೋತ್ಪಾದಕರ ದಾಳಿ ಹೆಚ್ಚುತ್ತಲೇ ಹೋಗಿದೆ. ಆದರೆ ಪ್ರತೀ ಭಯೋತ್ಪಾದಕ ದಾಳಿ ಯಾಕೆ ನಡೆಯಿತು, ಯಾರ ವೈಫಲ್ಯದಿಂದ ನಡೆಯಿತು ಎಂದು ಈ ಸರಕಾರ ಹೇಳುವುದಿಲ್ಲ. ಬದಲಾಗಿ ಅದೇ ದಾಳಿಗೆ ಸೇನೆ ನೀಡಿದ ತಿರುಗೇಟನ್ನು ತನ್ನ ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತದೆ.

ನೋಟ್ ಬ್ಯಾನ್

ನೋಟ್ ಬ್ಯಾನ್ ಘೋಷಣೆಯನ್ನು ನವೆಂಬರ್ 8, 2016ರಂದು ಮಾಡಲಾಯಿತು. ಅಂದು ನಡುರಾತ್ರಿ ಪ್ರಧಾನಿ ಟಿ.ವಿ.ಯಲ್ಲಿ ಕಾಣಿಸಿಕೊಂಡು ದೊಡ್ಡ ದೊಡ್ಡ ಮಾತುಗಳನ್ನು ಆಡಿದರು. ಕಪ್ಪು ಹಣವೇ ಇರುವುದಿಲ್ಲ, ನಕಲಿ ನೋಟುಗಳ ಹಾವಳಿ, ಭಯೋತ್ಪಾದನೆ ಇಲ್ಲವಾಗುತ್ತದೆ ಎನ್ನಲಾಯಿತು. ಆದರೆ ಯಾವುದಾದರೂ ಆಯಿತೆ?

ಅದಕ್ಕಿಂತ ಹೆಚ್ಚಾಗಿ ಅದು ದೇಶದ ಜನಸಾಮಾನ್ಯರು, ಬಡವರು, ಸಣ್ಣ ವ್ಯಾಪಾರಸ್ಥರು, ಸಣ್ಣ ಉದ್ಯಮಿಗಳನ್ನು ನೋಟ್‌ಬ್ಯಾನ್ ತಿಂದುಹಾಕಿತು. ಬಡವರು, ದಿನಗೂಲಿ ನೌಕರರು ತಮ್ಮ ದೈನಂದಿನ ಜೀವನದಲ್ಲಿ ಅಪಾರ ತೊಂದರೆ ಎದುರಿಸಬೇಕಾಯಿತು. ಬ್ಯಾಂಕುಗಳು ಮತ್ತು ಎಟಿಎಂಗಳ ಹೊರಗೆ ವಾರಗಟ್ಟಲೆ ಉದ್ದನೆಯ ಸರತಿ ಸಾಲುಗಳು ಕಂಡವು. ನೂರಾರು ಜನರು ಸಾವನ್ನಪ್ಪಿದರು. ಆದರೆ ಇವತ್ತಿಗೂ ಕಪ್ಪು ಹಣದ ಆಟ ನಡೆದೇ ಇದೆ. ನಕಲಿ ನೋಟುಗಳು ಚಲಾವಣೆಯಾಗುತ್ತಲೇ ಇವೆ. ನೋಟ್ ಬ್ಯಾನ್ ಬಳಿಕ ಸರಕಾರ ತಂದ ಎರಡು ಸಾವಿರ ಮುಖಬೆಲೆಯ ಹೊಸ ನೋಟ್ ದೊಡ್ಡ ತಲೆನೋವಾಗಿ ಅದನ್ನೇ ಬಂದ್ ಮಾಡಬೇಕಾಯಿತು.

ಒಟ್ಟಾರೆ ನೋಟ್ ಬ್ಯಾನ್ ಎಂಬ ಆತುರದ ನಿರ್ಧಾರಕ್ಕಾಗಿ ಈ ದೇಶದ ಬಡವರು, ಯುವಜನರು ಹಾಗೂ ಸಣ್ಣ, ಮಧ್ಯಮ ವ್ಯಾಪಾರಿಗಳು ಬೆಲೆ ತೆರುತ್ತಲೇ ಇದ್ದಾರೆ.

ಕೋವಿಡ್ ಸಂದರ್ಭದಲ್ಲಿ ಹಿಂದೆ ಮುಂದೆ ಯೋಚಿಸದೆ ಘೋಷಿಸಿದ ತಿಂಗಳು ಗಟ್ಟಲೆ ಲಾಕ್‌ಡೌನ್ ಕೂಡ ಈ ದೇಶದ ಬೆನ್ನೆಲುಬನ್ನೇ ಮುರಿದು ಹಾಕಿತು. ಬಡವರು, ಕಾರ್ಮಿಕರು, ರೈತರು, ಸಣ್ಣ ವ್ಯಾಪಾರಿಗಳು ಬೀದಿ ಪಾಲಾಗಿ ಹೋದರು. ಕೋವಿಡ್‌ಗಿಂತ ಹಸಿವಿನಿಂದಲೇ ಹೆಚ್ಚು ಮಂದಿ ಬಲಿಯಾದರು.

ಜಿಎಸ್‌ಟಿ ಸಂಬಂಧಿತ ಸಮಸ್ಯೆಗಳು

ಇನ್ನು ಜಿಎಸ್‌ಟಿ ಕುರಿತ ನಿರ್ಧಾರ ಕೂಡ ಸೂಕ್ತ ತಯಾರಿ ಯಿಲ್ಲದೆ ಜಾರಿಗೆ ಬಂದ ಕಾರಣ ಅಧ್ವಾನಗಳನ್ನೇ ಸೃಷ್ಟಿಸಿದೆ.

ಜಿಎಸ್‌ಟಿ ಮರುಪಾವತಿಗಳ ಸಂಗ್ರಹದಲ್ಲಿ ದೋಷಗಳಿದ್ದವು.ಮಾತ್ರವಲ್ಲದೆ ಉದ್ದೇಶಪೂರ್ವಕ ವಂಚನೆ ಮತ್ತು ತೆರಿಗೆ ವಂಚನೆಗೂ ಕಾರಣವಾಯಿತು. ಡಿಸೆಂಬರ್ 2021ರ ಹೊತ್ತಿಗೆ, 40,000 ಕೋಟಿ ರೂ. ಮೊತ್ತದ ಜಿಎಸ್‌ಟಿ ವಂಚನೆ ಪತ್ತೆಯಾಗಿದೆ.

ಬ್ರಹ್ಮಾಂಡ ಭ್ರಷ್ಟಾಚಾರ

ಮೋದಿ ಸರಕಾರ ತಂದ ಚುನಾವಣಾ ಬಾಂಡ್ ಯೋಜನೆಯನ್ನು ಸುಪ್ರೀಂ ಕೋರ್ಟ್ ಅಸಾಂವಿಧಾನಿಕ ಎಂದು ಹೇಳಿ ರದ್ದು ಮಾಡಿತು. ರಾಜಕೀಯ ಪಕ್ಷಗಳಿಗೆ ದೇಣಿಗೆಯಾಗಿ ಬರುವ ಹಣದ ಮೂಲದ ಬಗ್ಗೆ ಪಾರದರ್ಶಕತೆ ಇಲ್ಲವಾಗುವುದಕ್ಕೆ ಅವಕಾಶ ಕೊಟ್ಟಿದ್ದ ಈ ಯೋಜನೆಯ ಬಹು ದೊಡ್ಡ ಫಲಾನುಭವಿ ಕೂಡ ಬಿಜೆಪಿಯೇ ಆಗಿತ್ತು. ಬಿಜೆಪಿ ಸರಕಾರದಲ್ಲಿ ದೊಡ್ಡ ದೊಡ್ಡ ಗುತ್ತಿಗೆಗಳನ್ನು ಪಡೆದ ಕಂಪೆನಿಗಳು ಬಿಜೆಪಿಗೆ ಭಾರೀ ಮೊತ್ತದ ದೇಣಿಗೆಯನ್ನು ಚುನಾವಣಾ ಬಾಂಡ್ ಮೂಲಕ ಕೊಟ್ಟದ್ದು ಬಯಲಾಗಿತ್ತು. ಚುನಾವಣಾ ಬಾಂಡ್ ಮೂಲಕ ಬಂದ ಹಣದಲ್ಲಿ ಅರ್ಧ ಪಾಲು ಬಿಜೆಪಿ ಒಂದಕ್ಕೇ ಸಿಕ್ಕಿತ್ತು.

ಇನ್ನು ರಫೇಲ್ ಹಗರಣ ಹೇಗೆ ಬಿಜೆಪಿ ರಕ್ಷಣಾ ಯೋಜನೆ ಹೆಸರಲ್ಲಿ ಆಟವಾಡುತ್ತ ಯಾವುದೋ ಹಿತಾಸಕ್ತಿಯನ್ನು ಸಾಕುತ್ತದೆ ಎಂಬುದಕ್ಕೆ ಒಂದು ಉದಾಹರಣೆ.

ಯುಪಿಎ ಸರಕಾರದ ಅವಧಿಯಲ್ಲಿ ರೂಪುಗೊಂಡ 126 ಯುದ್ಧವಿಮಾನಗಳ ಖರೀದಿ ವಿಚಾರ ಮೋದಿ ಸರಕಾರದ ಕಾರಣದಿಂದಾಗಿ ದಿಕ್ಕೆಟ್ಟಿತ್ತು.

ರಕ್ಷಣಾ ವ್ಯವಸ್ಥೆಯನ್ನು ಬಲಪಡಿಸಬೇಕಿದ್ದ ಮಹತ್ವದ ನಡೆಯೊಂದನ್ನು ಯಾರ್ಯಾರದೋ ಹಿತಾಸಕ್ತಿಗಾಗಿ ಬಲಿ ಕೊಡಲಾಯಿತು. 126ರ ಬದಲು 36 ಯುದ್ಧವಿಮಾನಗಳ ಖರೀದಿಗೆ ಮೋದಿ ಏಕಾಏಕಿ ನಿರ್ಧರಿಸಿದರು. ಈ ನಿರ್ಧಾರ ರಕ್ಷಣಾ ಸಚಿವರಿಗೂ ಗೊತ್ತಿಲ್ಲದಂತೆ ಮತ್ತು ಸಚಿವ ಸಂಪುಟದ ಭದ್ರತಾ ಸಮಿತಿಯ ಅನುಮೋದನೆಯೂ ಇಲ್ಲದೆ ತೆಗೆದುಕೊಂಡದ್ದಾಗಿತ್ತು. ಇದಕ್ಕೂ ಕೆಲದಿನಗಳ ಮೊದಲಷ್ಟೇ 126 ಯುದ್ಧವಿಮಾನಗಳ ಖರೀದಿ ಒಪ್ಪಂದ ಘೋಷಣೆಯಾಗಲಿರುವ ಬಗ್ಗೆ ಎಚ್‌ಎಎಲ್ ಹೇಳಿತ್ತು. ವಿದೇಶಾಂಗ ಕಾರ್ಯದರ್ಶಿ ಜೈಶಂಕರ್ ಕೂಡ ಅಂತಿಮ ಹಂತದ ಮಾತುಕತೆ ನಡೆಯುತ್ತಿರುವುದರ ಬಗ್ಗೆ ಹೇಳಿದ್ದರು. ಹೀಗಿರುವಾಗಲೇ ಮೋದಿ ನಿರ್ಧರಿಸಿದ್ದು ಬೇರೆಯೇ ಇತ್ತು. ಮೋದಿ ಜೊತೆ ಫ್ರಾನ್ಸ್‌ಗೆ ತೆರಳಿದ್ದ ನಿಯೋಗದಲ್ಲಿ ಎಚ್‌ಎಎಲ್ ಆಗಿನ ಅಧ್ಯಕ್ಷ ಸುವರ್ಣರಾಜು ಕೂಡ ಇದ್ದರು. ಆದರೆ ಫ್ರಾನ್ಸ್ ಅಧ್ಯಕ್ಷರನ್ನು ಭೇಟಿಯಾಗುವ ಹೊತ್ತಿಗೆ ಎಲ್ಲವೂ ಪಲ್ಲಟವಾಗಿತ್ತು. ಆ ಭೇಟಿಯ ವೇಳೆ ಸುವರ್ಣರಾಜು ಇರಲಿಲ್ಲ. ಬದಲಿಗೆ ಅನಿಲ್ ಅಂಬಾನಿಯಿದ್ದರು. ಅಂದರೆ ಒಪ್ಪಂದದ ಪಾಲುದಾರಿಕೆಯಲ್ಲಿ ಎಚ್‌ಎಎಲ್ ಬದಲಿಗೆ ರಿಲಯನ್ಸ್ ಬಂದಿತ್ತು.

ಅದಕ್ಕೂ ವಾರದ ಮುಂಚೆಯಷ್ಟೇ ನೋಂದಾಯಿತಗೊಂಡಿದ್ದ, ರಕ್ಷಣಾ ವಹಿವಾಟಿನಲ್ಲಿ ತೊಡಗಿಸಿಕೊಳ್ಳಲು ಸಾಕಷ್ಟು ಹಣವೂ ಇದ್ದಿರದ ಅನಿಲ್ ಅಂಬಾನಿಯ ರಿಲಯನ್ಸ್ ಡಿಫೆನ್ಸ್ ಕಂಪೆನಿ ರಫೇಲ್ ಖರೀದಿಯಲ್ಲಿ ಭಾರತೀಯ ಪಾಲುದಾರ ಕಂಪೆನಿಯಾಗಿ ಸೇರಿದ ಮ್ಯಾಜಿಕ್ ಒಂದು ನಡೆದುಹೋಯಿತು. ಇದೆಲ್ಲದರ ನಡುವೆ, ಮೊದಲು ನಿಗದಿಯಾಗಿದ್ದ ಬೆಲೆಗಿಂತ ಹೆಚ್ಚಿನ ಬೆಲೆಗೆ ಮೋದಿ ಒಪ್ಪಂದ ಘೋಷಣೆಯಾಗಿತ್ತು.

ಜನರು ಕಷ್ಟಪಟ್ಟು ಕಟ್ಟುವ ತೆರಿಗೆ ಇನ್ನಾವುದೋ ದೊಡ್ಡ ಕುಳಗಳನ್ನು ಸಾಕುತ್ತಿರುವುದಕ್ಕೆ ಬಳಕೆಯಾಗುತ್ತಿರುವ ವಿಪರ್ಯಾಸ ಕೂಡ ಇಲ್ಲಿ ಕಾಣುತ್ತಿದೆ. ಆದರೆ ರಫೇಲ್ ಹಗರಣದಲ್ಲಿ ಮೋದಿ ಸರಕಾರ ಸುಪ್ರೀಂ ಕೋರ್ಟ್‌ನಲ್ಲಿ ಬಚಾವಾಯಿತು.

ಯುವಕರ ಪಾಲಿಗೆ ಭ್ರಮನಿರಸನ

ಇನ್ನು ನಿರುದ್ಯೋಗವಂತೂ ಈ ದೇಶದ ಯುವಕರನ್ನು ಭ್ರಮನಿರಸನಗೊಳಿಸಿದೆ. ಇಂದು ಭಾರತದಲ್ಲಿ ಯುವಕರ ನಿರುದ್ಯೋಗ ಶೇ. 10.2ಕ್ಕಿಂತ ಹೆಚ್ಚಿದೆ. ಇದು ಕಾಲಕ್ರಮೇಣ ಹೆಚ್ಚುತ್ತಲೇ ಇದೆ.

ಉದ್ಯೋಗಗಳು ಕಡಿಮೆಯಾಗುತ್ತಿವೆ. ವಜಾಗೊಳಿಸುವಿಕೆ ಹೆಚ್ಚುತ್ತಿದೆ. ಸಂಬಳ ಹೆಚ್ಚಾಗುತ್ತಿಲ್ಲ. ನಿರುದ್ಯೋಗ ಹೆಚ್ಚುತ್ತಿದೆ. ಕಳೆದ ನಾಲ್ಕು ದಶಕಗಳಲ್ಲೇ ಅತಿ ಹೆಚ್ಚು ನಿರುದ್ಯೋಗವನ್ನು ಮೋದಿ ಸರಕಾರದಲ್ಲಿ ಈ ದೇಶ ಕಂಡಿತು.

ಯುವಕರಲ್ಲಿ ಇನ್ನೂ ಭ್ರಮೆಗಳನ್ನು ಸೃಷ್ಟಿಸಲಾಗುತ್ತಿದೆ. ಅವರಲ್ಲಿ ಧರ್ಮದ ಅಮಲು ತುಂಬಿ, ಅವರು ಪ್ರಶ್ನೆಯನ್ನೇ ಕೇಳದ ಹಾಗೆ ಮಾಡಲಾಗಿದೆ. ಅವರು ಬಿಜೆಪಿ ಪ್ರಚಾರದ ಸರಕುಗಳಾಗುತ್ತಿದ್ದಾರೆ. ಮೇಕ್ ಇನ್ ಇಂಡಿಯಾ, ಸ್ಕಿಲ್ ಇಂಡಿಯಾಗಳೆಲ್ಲ ಘೋಷಣೆಗಳು ಮಾತ್ರವೆಂಬಂತಾಗಿ ಇದ್ದಲ್ಲೇ ಉಳಿದುಬಿಟ್ಟಿವೆ. ಉದ್ಯಮದ ಅಗತ್ಯಗಳಿಗೆ ಹೊಂದಿಕೆಯಾಗದ ತರಬೇತಿ ಪಠ್ಯಕ್ರಮದಂಥ ಹಲವಾರು ದೋಷಗಳ ಕಾರಣದಿಂದಾಗಿ ಸ್ಕಿಲ್ ಇಂಡಿಯಾ ಏನೂ ಪರಿಣಾಮ ಬೀರದಂತಾಗಿದೆ.

ದೇಶದ ಒಕ್ಕೂಟ ರಚನೆಗೆ ಪೆಟ್ಟು

2014ರಲ್ಲಿ ಮೋದಿ ಸರಕಾರ ಬಂದಾಗಿನಿಂದಲೂ ಕೇಂದ್ರೀಕರಣದ ಯತ್ನಗಳೇ ಕಾಣಿಸುತ್ತಿವೆ. ಒಕ್ಕೂಟ ವ್ಯವಸ್ಥೆಗೆ ಹಲವು ನೆಲೆಗಳಿಂದ ಏಟು ಬಿಳುತ್ತಿದೆ. ಮೋದಿ ಸರಕಾರದ ನಡೆ ಭಾರತದ ಫೆಡರಲ್ ಸ್ವರೂಪವನ್ನು ದೊಡ್ಡ ಮಟ್ಟದಲ್ಲಿ ದುರ್ಬಲಗೊಳಿಸುತ್ತಿದೆ. ರಾಜ್ಯಗಳನ್ನು ಆಡಳಿತಾತ್ಮಕವಾಗಿ ಸ್ವಾಯತ್ತವಾಗಿರಿಸಲು ಬಯಸದೆ, ತನ್ನ ನೀತಿಗಳನ್ನು ಹೇರಲು ಕೇಂದ್ರ ಸರಕಾರ ಯತ್ನಿಸುತ್ತಲೇ ಇದೆ. ರಾಜ್ಯಪಾಲರುಗಳನ್ನು ಬಿಜೆಪಿಯೇತರ ಸರಕಾರಗಳಿರುವ ರಾಜ್ಯಗಳಲ್ಲಿ ತನ್ನ ಅಸ್ತ್ರದಂತೆ ಕೇಂದ್ರ ಸರಕಾರ ಬಳಸುತ್ತಿದೆ.

ರಾಜ್ಯ ಸರಕಾರಗಳು ಮತ್ತು ರಾಜ್ಯಪಾಲರ ನಡುವಿನ ಸಂಘರ್ಷವಂತೂ ಒಕ್ಕೂಟ ವ್ಯವಸ್ಥೆಯನ್ನು ಹಾಳುಗೆಡವಲು ಹೇಗೆ ಪ್ರಯತ್ನಿಸಲಾಗುತ್ತಿದೆ ಎಂಬುದಕ್ಕೆ ಕಣ್ಣೆದುರೇ ಇರುವ ಉದಾಹರಣೆಯಾಗಿದೆ.

ಒಂದು ರಾಷ್ಟ್ರ, ಒಂದು ಚುನಾವಣೆಯಂತಹ ಪ್ರಸ್ತಾವಗಳು ಚುನಾವಣಾ ಪ್ರಕ್ರಿಯೆಗಳನ್ನು ಕೇಂದ್ರೀಕರಿಸುವ, ಪ್ರಾದೇಶಿಕ ಸಮಸ್ಯೆಗಳ ಮಹತ್ವ ಕಡಿಮೆ ಮಾಡುವ, ರಾಜ್ಯಗಳ ಸ್ವಾಯತ್ತತೆ ಕಸಿಯುವ ಮತ್ತು ಪ್ರಾದೇಶಿಕ ರಾಜಕೀಯ ಪಕ್ಷಗಳನ್ನು ಅಂಚಿಗೆ ತಳ್ಳುವ ತಂತ್ರವೆಂದು ವಿಶ್ಲೇಷಕರು ಹೇಳುತ್ತಾರೆ.

ಸಹಕಾರಿ ಒಕ್ಕೂಟ ಕೂಡ ರಾಜ್ಯಗಳ ಸ್ವಾಯತ್ತತೆ ದುರ್ಬಲಗೊಳಿಸುವ ಉದ್ದೇಶದ್ದೇ ಆಗಿದೆ.

ದುರ್ಬಲಗೊಂಡ ಸ್ವಾಯತ್ತ ಸಂಸ್ಥೆಗಳು

ಇನ್ನು ದೇಶದ ಎಲ್ಲ ಸ್ವಾಯತ್ತ ಸಂಸ್ಥೆಗಳನ್ನು ಹೇಗೆ ಮೋದಿ ಸರಕಾರ ತನಗೆ ಬೇಕಾದಂತೆ ಬಳಸುತ್ತಿದೆ ಎನ್ನುವುದು ಈಗಾಗಲೇ ಬಹಿರಂಗವಾಗಿದೆ. ಈ.ಡಿ., ಸಿಬಿಐ ಸೇರಿದಂತೆ ಎಲ್ಲಾ ತನಿಖಾ ಸಂಸ್ಥೆಗಳು ಬಿಜೆಪಿಗೆ ಬೇಕಾದ ಹಾಗೆ, ವಿಪಕ್ಷಗಳನ್ನು, ವಿಪಕ್ಷ ನಾಯಕರನ್ನು ಗುರಿ ಮಾಡುವುದಕ್ಕೆ ಇಳಿದುಬಿಟ್ಟಿವೆ. ಅವುಗಳು ವಿಪಕ್ಷ ನಾಯಕರ ವಿರುದ್ಧ ಪ್ರಕರಣ ದಾಖಲಿಸುತ್ತಲೇ ಹೋಗುತ್ತವೆ. ಆದರೆ ಸಾಬೀತುಪಡಿಸಲಾಗದೆ, ಕೋರ್ಟ್‌ನಿಂದ ಛೀಮಾರಿ ಹಾಕಿಸಿಕೊಳ್ಳುತ್ತಲೇ ಇವೆ. ಚುನಾವಣೆ ಹೊತ್ತಲ್ಲಿ ವಿಪಕ್ಷ ನಾಯಕರನ್ನು ಜೈಲಿಗೆ ಅಟ್ಟಿ, ಸಾಧ್ಯವಾದಷ್ಟು ಸಮಯ ಅವರು ಜೈಲಿನಲ್ಲೇ ಇರುವಂತೆ ನೋಡಿಕೊಳ್ಳುವುದಷ್ಟೇ ಈ ತನಿಖಾ ಸಂಸ್ಥೆಗಳ ಕೆಲಸವಾಗಿಬಿಟ್ಟಂತಿದೆ.

ಇನ್ನು ಚುನಾವಣಾ ಆಯೋಗವಂತೂ ಮೋದಿ ಸರಕಾರದ ಹೌದಪ್ಪ ಸಂಸ್ಥೆಯಾಗಿದೆ ಎಂಬ ಆರೋಪ ವ್ಯಾಪಕವಾಗಿದೆ. ಅದು ಕೂಡ ವಿಪಕ್ಷಗಳನ್ನು ಟಾರ್ಗೆಟ್ ಮಾಡುತ್ತದೆ. ಚುನಾವಣಾ ಪ್ರಕ್ರಿಯೆಯಲ್ಲಿ ಬಿಜೆಪಿಗೆ ಅನುಕೂಲವಾಗುವಂತೆ ಅದರ ನಡವಳಿಕೆ ಇದೆ ಎಂಬುದು ದೊಡ್ಡ ಆರೋಪ. ಪ್ರತಿಪಕ್ಷಗಳ ದೂರಿನ ಬಗ್ಗೆಯೂ ಅದು ತಲೆಕೆಡಿಸಿಕೊಳ್ಳುವುದೇ ಇಲ್ಲ.

ಮತದಾರರ ಪಟ್ಟಿ ಅಕ್ರಮ, ನಕಲಿ ಮತದಾರರ ಸೇರ್ಪಡೆ, ಮತದಾನ ಪ್ರಮಾಣದಲ್ಲಿ ಇದ್ದಕ್ಕಿದ್ದಂತೆ ಹೆಚ್ಚಳ ತೋರಿಸುವ ಆಟ ಇಂಥ ಎಲ್ಲ ಗಂಭೀರ ಆರೋಪಗಳನ್ನು ಆಯೋಗದ ವಿರುದ್ಧ ಸದಾ ಮಾಡಲಾಗುತ್ತಿದೆ.

ಮಾಧ್ಯಮದ ಮೇಲೆ ಆಕ್ರಮಣ

ದೇಶದಲ್ಲಿ ಮಾಧ್ಯಮ ಸ್ವಾತಂತ್ರ್ಯವನ್ನಂತೂ ಮೋದಿ ಸರಕಾರ ಕಸಿಯುತ್ತಲೇ ಬಂದಿದೆ. ವಿಶ್ವ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕದಲ್ಲಿ ಭಾರತದ ಸ್ಥಾನ ಕುಸಿಯುತ್ತಲೇ ಇದೆ.

2014ರಲ್ಲಿ ಭಾರತ 140ನೇ ಸ್ಥಾನದಲ್ಲಿತ್ತು. 2025ರಲ್ಲಿ ಅದು 151ನೇ ಸ್ಥಾನಕ್ಕೆ ಬಂದು ತಲುಪಿದೆ. ದೇಶದಲ್ಲಿ ಪ್ರಾಮಾಣಿಕ ಪತ್ರಕರ್ತರು, ಸರಕಾರವನ್ನು ಪ್ರಶ್ನಿಸುವವರು ಸದಾ ಬೆದರಿಕೆ, ತನಿಖೆ, ಜೈಲು ಎಲ್ಲವನ್ನು ಎದುರಿಸಬೇಕಾಗಿದೆ. ಮೇ 2025ರಲ್ಲಿ ನ್ಯೂಸ್‌ಲಾಂಡ್ರಿ ವರದಿಯ ಪ್ರಕಾರ ಕನಿಷ್ಠ ಐದು ಪತ್ರಕರ್ತರು ಈ ವರ್ಷವೊಂದರಲ್ಲೇ ಕರ್ತವ್ಯನಿರತರಾಗಿರುವಾಗ ಹತ್ಯೆಯಾಗಿದ್ದಾರೆ. ಸುಮಾರು 24 ಪತ್ರಕರ್ತರ ಮೇಲೆ ಅವರ ವರದಿಗಾಗಿ ದಾಳಿಯಾಗಿವೆ. ಸರಕಾರ ತನ್ನನ್ನು ಟೀಕಿಸುವ ಮಾಧ್ಯಮ ಧ್ವನಿಗಳನ್ನು ಸತತವಾಗಿ ಗುರಿಯಾಗಿಸಿದೆ ಎಂಬ ಆರೋಪಗಳಿವೆ. ಜೊತೆಗೆ ಪತ್ರಕರ್ತರ ವಿರುದ್ಧ ಕಾನೂನು ನಿಬಂಧನೆಗಳನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಎಂಬ ಆರೋಪಗಳಿವೆ.

ಸರಕಾರವನ್ನು ಟೀಕಿಸುವ ಪತ್ರಕರ್ತರ ಬಾಯ್ಮುಚ್ಚಿಸಲು ಮಾನನಷ್ಟ, ದೇಶದ್ರೋಹ ಮೊದಲಾದ ಆರೋಪಗಳಡಿ ಪ್ರಕರಣ ದಾಖಲಿಸಲಾಗುತ್ತದೆ. ಆಗಾಗ ಅವರನ್ನು ರಾಷ್ಟ್ರವಿರೋಧಿ ಎಂದು ಬ್ರಾಂಡ್ ಮಾಡುವುದು ನಡೆದಿದೆ.

ಮೋದಿಯವರನ್ನು, ಅವರ ಸರಕಾರ ಹಾಗೂ ಪಕ್ಷವನ್ನು ಹೊಗಳುವ ಭಟ್ಟಂಗಿ ಆಂಕರ್‌ಗಳಿಗೆ ಎಲ್ಲ ಸ್ಥಾನಮಾನ, ಸವಲತ್ತುಗಳು ಸಿಗುತ್ತಿವೆ. ಅವರು ಮಾಧ್ಯಮ ಧರ್ಮವನ್ನು ಸಂಪೂರ್ಣ ಬದಿಗಿಟ್ಟು ಬರೀ ಮೋದಿ ಸರಕಾರದ ತುತ್ತೂರಿಯಾಗಿದ್ದಾರೆ. ದೇಶದ ಬಹುತೇಕ ಮುಖ್ಯವಾಹಿನಿ ಮಾಧ್ಯಮಗಳು ಸುಳ್ಳು ಹಾಗೂ ದ್ವೇಷ ಹರಡುವ ವೇದಿಕೆಗಳಾಗಿವೆ.

ಆಪರೇಷನ್ ಕಮಲ

ಇನ್ನು ಆಪರೇಷನ್ ಕಮಲ ಈ ಸರಕಾರದ ಅತಿ ಕೊಳಕಿನ ಅಧಿಕಾರ ತಂತ್ರವಾಗಿದೆ.

ಆಪರೇಷನ್ ಕಮಲ 2008ರಲ್ಲಿ ಕರ್ನಾಟಕ ರಾಜಕೀಯದ ಸಂದರ್ಭದಲ್ಲಿ ಯಡಿಯೂರಪ್ಪ ಅವರಿಂದ ಶುರುವಾಯಿತು.ಜನರಿಂದ ಆಯ್ಕೆಯಾದ ಸರಕಾರಗಳನ್ನು ಉರುಳಿಸಿ ಬಿಜೆಪಿ ಹಿಂಬಾಗಿಲಿನಿಂದ ಬರುವುದಕ್ಕೆ ಇದನ್ನು ಸತತವಾಗಿ ಬಳಸುತ್ತ ಬರಲಾಗಿದೆ.

ಕರ್ನಾಟಕದಲ್ಲಿ 2008 ಮತ್ತು 2019ರಲ್ಲಿ ಕಾಂಗ್ರೆಸ್ ಜೆಡಿಎಸ್ ಸಮ್ಮಿಶ್ರ ಸರಕಾರ ಉರುಳಿಸಲು ಆಪರೇಷನ್ ಕಮಲ ಮಾಡಲಾಯಿತು.

ಮಧ್ಯಪ್ರದೇಶದಲ್ಲಿ 2020ರಲ್ಲಿ ಹಿರಿಯ ಕಾಂಗ್ರೆಸ್ ನಾಯಕ ಜ್ಯೋತಿರಾದಿತ್ಯ ಸಿಂಧಿಯಾ ಮತ್ತು 21 ಶಾಸಕರು ಕಾಂಗ್ರೆಸ್‌ಗೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ ನಂತರ ಕಮಲ್ ನಾಥ್ ನೇತೃತ್ವದ ಕಾಂಗ್ರೆಸ್ ಸರಕಾರ ಪತನಗೊಂಡಿತು. ಬಿಜೆಪಿ ಅಲ್ಲಿ ಅಧಿಕಾರಕ್ಕೆ ಮರಳಲು ಅದು ಅವಕಾಶ ಮಾಡಿಕೊಟ್ಟಿತು.

ಮಹಾರಾಷ್ಟ್ರದಲ್ಲಿ ಶಿವಸೇನೆ ಹಾಗೂ ಎನ್‌ಸಿಪಿ ಎರಡೂ ಪಕ್ಷಗಳನ್ನು ಇಬ್ಭಾಗ ಮಾಡಲಾಯಿತು.

ಗೋವಾದಲ್ಲಿ 2019 ಮತ್ತು 2022ರಲ್ಲಿ ಬಿಜೆಪಿಯನ್ನು ಬಲಗೊಳಿಸುವ ಪಕ್ಷಾಂತರಗಳು ನಡೆದವು.

ಈಶಾನ್ಯ ಭಾರತದ ರಾಜ್ಯಗಳಲ್ಲೂ ಆಪರೇಷನ್ ಮೂಲಕವೇ ಬಿಜೆಪಿ ಸರಕಾರಗಳು ಬಂದವು.

ತಮಿಳು ನಾಡಿನಲ್ಲಿ ಆಪರೇಷನ್ ಕಮಲಕ್ಕೆ ಕೈ ಹಾಕಿದ ಬಿಜೆಪಿ ಮುಖಂಡರ ವಿರುದ್ಧ ಪ್ರಕರಣ ದಾಖಲಾಯಿತು.

ದಿಲ್ಲಿ ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ಬಿಜೆಪಿ ದೇಶಾದ್ಯಂತ 277 ಶಾಸಕರನ್ನು ಖರೀದಿಸಲು 6,500 ಕೋಟಿ ರೂ. ಖರ್ಚು ಮಾಡಿದೆ ಮತ್ತು ದಿಲ್ಲಿಯಲ್ಲಿ ಎಎಪಿ ಶಾಸಕರನ್ನು ತಲಾ 20 ಕೋಟಿ ರೂ. ನೀಡುವ ಮೂಲಕ ಖರೀದಿಸಲು ಯತ್ನಿಸುತ್ತಿದೆ ಎಂದು ಆರೋಪಿಸಿದ್ದರು.

ಆಪರೇಷನ್ ಕಮಲ ಅತಿ ಭಯಂಕರ ಪ್ರಜಾಪ್ರಭುತ್ವ ವಿರೋಧಿ ತಂತ್ರವೆಂಬುದಂತೂ ಸ್ಪಷ್ಟ. ಇದಲ್ಲದೆ ಹಣದುಬ್ಬರ, ಮಹಿಳಾ ಸುರಕ್ಷತೆ, ಪ್ರತೀ ವ್ಯಕ್ತಿಗೂ ಮನೆ, ಆರೋಗ್ಯ ಸವಲತ್ತು, ಹಸಿವು ನಿವಾರಣೆ ಎಲ್ಲದರಲ್ಲೂ ಮೋದಿ ಸರಕಾರ ನೆಲ ಕಚ್ಚಿದೆ.

ಇವುಗಳೇ ಅಚ್ಛೇ ದಿನ್ ಎಂದಾದರೆ ನಮಗೆ ಇಂತಹ ಅಚ್ಛೇ ದಿನ್ ಬೇಡವೇ ಬೇಡ ಎನ್ನುವಷ್ಟರ ಮಟ್ಟಿಗೆ ಮೋದಿ ಸರಕಾರದ 11 ವರ್ಷಗಳು ವೈಫಲ್ಯವಾಗಿ ಮಾರ್ಪಟ್ಟಿದೆ.

share
ಎಸ್. ಸುದರ್ಶನ್
ಎಸ್. ಸುದರ್ಶನ್
Next Story
X