ಕದನ ವಿರಾಮದ ಹಿಂದಿನ ಅಸಲಿ ಕಾರಣಗಳೇನು?
ಪ್ರಧಾನಿ ಮೋದಿಗೆ ಪ್ರಜೆಯೊಬ್ಬನ ಹನ್ನೊಂದು ಪ್ರಶ್ನೆಗಳು...

File Photo: PTI
ಪಾಕಿಸ್ತಾನದವರೇ ಕದನ ವಿರಾಮ ಕೇಳಿದ್ದು ಹೌದು ಎಂದಾದರೆ...
1. ಅವರು ಕೇಳಿದ ತಕ್ಷಣ ಬೇಷರತ್ತಾಗಿ ನೀವು ಒಪ್ಪಿಕೊಂಡಿದ್ದು ಏಕೆ?
2. ಕದನವಿರಾಮ ಘೋಷಿಸಲು ಪಾಕಿಸ್ತಾನದ ಫೋನ್ ಕರೆ ಮಾತ್ರ ಸಾಕಾಗಿದ್ದರೆ ಇಡೀ ದೇಶಕ್ಕೆ ಯುದ್ಧದ ಸನ್ನಿ ಹಿಡಿಸಿದ್ದೇಕೆ? ಪಾಕಿಸ್ತಾನ ಫೋನ್ ಮಾಡಿದ ತಕ್ಷಣ, ಕನಿಷ್ಠ ಪೆಹಾಲ್ಗಮ್ ದಾಳಿಗೆ ಕಾರಣರಾದವರನ್ನು ಪತ್ತೆ ಹಚ್ಚುವ ಷರತ್ತನ್ನು ಒಡ್ಡದೇ ಅಷ್ಟು ಅವಸರವಾಗಿ ಕದನ ವಿರಾಮ ಘೋಷಿಸಿದ್ದೇಕೆ?
3. ಕದನ ವಿರಾಮಕ್ಕೆ ಮುನ್ನ ಭಾರತ ಕಳೆದುಕೊಂಡ "ಅತ್ಯಾಧುನಿಕ, ಅತೀ ದುಬಾರಿ" ರಫೇಲ್ ಜೆಟ್ ವಿಮಾನಗಳು ಎಷ್ಟು ಎಂದು ಯಾಕೆ ಬಹಿರಂಗಗೊಳಿಸುತ್ತಿಲ್ಲ?
4. ಆಪರೇಷನ್ ಸಿಂಧೂರ್ ನಲ್ಲಿ ಭಾರತದ ಕನಿಷ್ಠ ಮೂರು ರಫೆಲ್ ಫೈಟರ್ ವಿಮಾನಗಳನ್ನು ಚೀನಾ ಸರಬರಾಜು ಮಾಡಿದ ವಿಮಾನ ಹಾಗೂ ಕ್ಷಿಪಣಿಗಳನ್ನು ಬಳಸಿ ಪಾಕಿಸ್ತಾನ ನೆಲಕುರುಳಿಸಿದೆ ಎಂದೂ ಮಿತ್ರ ರಾಷ್ಟ್ರಗಳ ಅಧಿಕೃತ ಪತ್ರಿಕೆಗಳೇ ಪ್ರಕಟಿಸುತ್ತಿದ್ದರೂ ಭಾರತ ಸರ್ಕಾರ ನಿರಾಕರಿಸುತ್ತಿಲ್ಲವೇಕೆ?
5. ಚೀನಾ-ಪಾಕಿಸ್ತಾನ ಮಿತ್ರ ರಾಷ್ಟ್ರಗಲೆಂದೂ, ಪಾಕಿಸ್ತಾನಕ್ಕೆ ಚೀನಾ ಸೈನಿಕ ಸಹಕಾರ ನೀಡಿದಲ್ಲಿ ಕದನವು ಸುಲಭವಲ್ಲವೆಂದೂ ಕದನ ಪ್ರಾರಂಭಿಸುವ ಮುನ್ನ ತಮ್ಮ ಸರ್ಕಾರಕ್ಕೆ ತಿಳಿದಿರಲಿಲ್ಲವೇ?ಪಾಕಿಸ್ತಾನ ಅಮೆರಿಕಕ್ಕೂ ಆಪ್ತಮಿತ್ರಾನಾಗಿರುವುದರಿಂದ ಅಮೆರಿಕಾದ ಸಹಾಯವೂ ದೊರೆಯುವುದಿಲ್ಲ ಎಂಬ ರಾಜತಾಂತ್ರಿಕ ಅಂದಾಜಿರಲಿಲ್ಲವೇ?
ಈ ಎಲ್ಲಾ ನಿರೀಕ್ಷಿತಾ ಅನಿರೀಕ್ಷಿತಗಳೇ ದುಡುಕಿನ ಯುದ್ಧದ ನಿಲುಗಡೆಗೂ, ಅವಸರದ ಕದನ ವಿರಾಮಕ್ಕೆ ಕಾರಣವಾದವೇ?
6. ಮೋದಿ ಸರ್ಕಾರ ತನ್ನ ಆಪ್ತ ಮಿತ್ರ ಎಂದು ಕೊಚ್ಚಿಕೊಳ್ಳುವ ಟ್ರಂಪ್ ನ ಅಮೆರಿಕ ಹಾಗೂ ರಷ್ಯಾವನ್ನೂ ಒಳಗೊಂಡಂತೆ ಜಗತ್ತಿನ ಎಲ್ಲಾ ರಾಷ್ಟ್ರಗಳು ಪೆಹಾಲ್ಗಮ್ ದಾಳಿಗೆ ಅನುಕಂಪ ವ್ಯಕ್ತಪಡಿಸಿದವೇ ವಿನಾ, ಆಪರೇಷನ್ ಸಿಂಧೂರಕ್ಕೆ ಬೆಂಬಲವನ್ನೇಕೆ ಕೊಡಲಿಲ್ಲ?
7.ಪಾಕಿಸ್ತಾನವನ್ನು ಭಯೋತ್ಪಾದನೆಯನ್ನು ಬೆಂಬಲಿಸುವ ರಾಷ್ಟ್ರ ಎಂಬ ಮೋದಿ ಸರ್ಕಾರದ ಪ್ರತಿಪಾದನೆಯನ್ನು ಜಗತ್ತು ಪುರಸ್ಕರಿಸುವುದರ ಬದಲಿಗೆ ಅಮೇರಿಕ, ವಿಶ್ವಸಂಸ್ಥೆ, IMF, ADB ಪಾಕಿಸ್ತಾನದ ಬೆಂಬಲವನ್ನು ಬೇಷರತ್ತಾಗಿ ಮುಂದುವರೆಸಿರುವುದರ ಅರ್ಥವೇನು?
8.ರಾಷ್ಟ್ರ ಹಿತಾಸಕ್ತಿ ಎಂಬ ಮೋದಿ ಸರ್ಕಾರದ ಹುಸಿ ಉನ್ಮದದ ವ್ಯಹತಂತ್ರಕ್ಕೆ ವಿರೋಧ ಪಕ್ಷಗಳ ನಾಯಕರು ಕೈಗೊಡಿಸಿ, ಜಗತ್ತಿನದ್ಯಾತ ಪಾಕಿಸ್ತಾನದ ದುರುದ್ದೇಶವನ್ನು ಬಯಲುಗೊಳಿಸುವ ಪ್ರವಾಸ ಮಾಡಿ ವಾಪಸ್ ಮರಳುವ ಮುನ್ನವೇ, ವಿಶ್ವಸಂಸ್ಥೆ ಪಾಕಿಸ್ತಾನವನ್ನು ಭಯೋತ್ಪಾದನೇ ವಿರೋಧಿ ಕೋಶದ ಮುಖ್ಯಸ್ಥರಾನ್ನಾಗಿ ನೇಮಿಸಿದ್ದೆಕೆ? ಪಾಕಿಸ್ತಾನದ ಸೇನಾ ಮುಖ್ಯಸ್ಥರನ್ನು ಮಾತ್ರ ಅಮೆರಿಕಾದ ಅಧ್ಯಕ್ಷ ಔತಣ ಕೂಟಕ್ಕೆ ಕರೆದಿದ್ದೇಕೆ? ಅದು ಬಯಲಾದ ನಂತರವೇ ಮೋದಿಯವರು ಅಮೆರಿಕಾದ ಅಧ್ಯಕ್ಷರ ಆಹ್ವಾನ ತಿರಸ್ಕರಿಸಿದರು ಎಂಬ ಸುದ್ದಿ ಸೋರಿಕೆ ಮಾಡಿದ್ದೇಕೆ?
9. ಅಮೆರಿಕಾದ ಅಧ್ಯಕ್ಷ ಟ್ರಂಪ್ 12 ಸಾರಿ ತನ್ನಿಂದಾಗಿಯೇ ಭಾರತ ಪಾಕ್ ಯುದ್ಧ ನಿಲ್ಲಿತೆಂದು ಹೇಳಿದರೂ, ಅಮೆರಿಕಾದ ಕೋರ್ಟಿನಲ್ಲೂ ಕೂಡ ಅದನ್ನು ಅಧಿಕೃತ ಹೇಳಿಕೆಯಾಗಿ ದಾಖಲಿಸಿದ್ದರೂ ಮೋದಿ ಸರ್ಕಾರ ಈವರೆಗೆ ಅದನ್ನು ಖಂಡಿಸದೆ ಸುಮ್ಮನಿದ್ದಿದ್ದು ಏಕೆ?
10. ಪಾಕಿಸ್ತಾನ ಕೋರಿದ್ದಕ್ಕೆ ಕದನ ವಿರಾಮ ಮಾಡಿದೆವು ಎಂದು ಮೋದಿ ಟ್ರಂಪಿಗೆ ಫೋನಿನಲ್ಲಿ ಹೇಳಿದರು ಎಂದು ಭಾರತದ ಪತ್ರಿಕೆಗಳು ಹೇಳುತ್ತಿದ್ದರೂ, ಟ್ರಂಪಾಗಲೀ, ಅಮೆರಿಕಾದ ಪತ್ರಿಕೆಗಳಗಲ್ಲಿ ಇದುವರೆಗೆ ಅದನ್ನು ಪುಷ್ಟೀಕರಿಸುತ್ತಿಲ್ಲವೇಕೆ?
11. ಎಲ್ಲಕ್ಕಿಂತ ಮುಖ್ಯವಾಗಿ ಪೆಹಾಲ್ಗಮಿನ ಭಯೋತ್ಪಾದಕರ ಪತ್ತೆಗೆ ಕನಿಷ್ಠ ಸಹಕಾರದ ಷರತ್ತನ್ನೂ ಒಡ್ಡದೇ, ಒಂದು ಫೋನ್ ಕರೆಗೆ ಕಾಯುತ್ತಿದ್ದಂತೆ ಅವಸರ ಅವಸರವಾಗಿ ಕದನ ವಿರಾಮ ಘೋಷಿಸಿದ್ದೇಕೆ?
ಹೀಗಾಗಿ ಕೊನೆಗೂ ಉಳಿಯುವ ಪ್ರಶ್ನೆ ಏನೆಂದರೆ ಕದನ ವಿರಾಮ ಘೋಷಿಸಿದ್ದಕ್ಕೆ ಅಸಲು ಕಾರಣಗಳೇನು? ಯಾರು? ನಿಜವನ್ನು ಅರಿಯುವ ಅಧಿಕಾರ ಭಾರತದ ಜನರಿಗಿಲ್ಲವೇ? ಭಾರತೀಯರಿಗೆ, ಮೋದಿ ಸುಳ್ಳುಗಳಿಗೆ ಮತ್ತು ಅದು ಸೃಷ್ಟಿಸುವ ಯುದ್ಧ ಸನ್ನಿಗಳಿಗೆ ಬಲಿಯಾಗದರುವ ಹಕ್ಕಿಲ್ಲವೇ?
ಜಸ್ಟ್ ಆಸ್ಕಿಂಗ್
-ಶಿವಸುಂದರ್







