ಸಾಮುದಾಯಿಕ ಪೊಲೀಸ್ ವ್ಯವಸ್ಥೆ ಎಂದರೇನು? ಅದು ಹೇಗಿರಬೇಕು?

ದಕ್ಷಿಣ ಕನ್ನಡದಲ್ಲಿ ಇತ್ತೀಚೆಗೆ ನಡೆದ ಎರಡು ಭೀಕರ ಹತ್ಯೆ ಪ್ರಕರಣಗಳು ಇಡೀ ನಾಗರಿಕ ಸಮಾಜವನ್ನೇ ತಲ್ಲಣಗೊಳಿಸಿದವು. ಇದರ ಬೆನ್ನಿಗೇ, ರಾಜ್ಯ ಪೊಲೀಸ್ ವ್ಯವಸ್ಥೆ ಹಾಗೂ ಗೃಹ ಖಾತೆಯ ದಕ್ಷತೆ ವಿರುದ್ಧ ತೀವ್ರ ಸಾರ್ವತ್ರಿಕ ಆಕ್ರೋಶ ವ್ಯಕ್ತವಾಯಿತು. ಇದರಿಂದ ತನ್ನ ವರ್ಚಸ್ಸಿಗೆ ಧಕ್ಕೆಯಾಗುವುದನ್ನು ಮನಗಂಡ ರಾಜ್ಯ ಸರಕಾರ, ದಕ್ಷಿಣ ಕನ್ನಡದ ಪೊಲೀಸ್ ಆಯುಕ್ತ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನು ತಕ್ಷಣವೇ ವರ್ಗಾಯಿಸಿತು. ಅವರ ಜಾಗಕ್ಕೆ ನೂತನ ಪೊಲೀಸ್ ಅಧಿಕಾರಿಗಳನ್ನು ನಿಯೋಜಿಸಿತು. ಅಲ್ಲದೆ, ದಕ್ಷಿಣ ಕನ್ನಡದಲ್ಲಿ ಕೋಮು ಪ್ರಚೋದಕ ಹಾಗೂ ದ್ವೇಷ ಭಾಷಣ ಮಾಡಿದ ಆರೋಪ ಎದುರಿಸುತ್ತಿರುವ ಆರೋಪಿಗಳ ಮನೆಮನೆ ತಪಾಸಣಾ ಕಾರ್ಯ ಕೈಗೆತ್ತಿಕೊಂಡಿತು. ಈ ಪೈಕಿ ಕೆಲವು ಕೋಮು ಸೌಹಾರ್ದಕ್ಕೆ ಧಕ್ಕೆ ತಂದಿದ್ದ ಆರೋಪ ಎದುರಿಸುತ್ತಿರುವ ಆರೋಪಿಗಳನ್ನು ದಕ್ಷಿಣ ಕನ್ನಡದಿಂದ ಗಡಿಪಾರಿಗೆ ಮುಂದಾಯಿತು. ಇದಲ್ಲದೆ, ಕೋಮು ಹಿಂಸಾಚಾರ ನಿಗ್ರಹ ಪಡೆಯನ್ನೂ ಅಧಿಕೃತವಾಗಿ ಸ್ಥಾಪಿಸಿತು.
ಇದೀಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ರಾಜ್ಯ ಸರಕಾರ, ಮನೆಮನೆಗೆ ಪೊಲೀಸರನ್ನು ಕಳಿಸಿ, ಜನಸಾಮಾನ್ಯರಲ್ಲಿ ಆತ್ಮವಿಶ್ವಾಸ ತುಂಬುವ, ಸಮಾಜಘಾತುಕ ಶಕ್ತಿಗಳ ಕುರಿತು ಮಾಹಿತಿ ನೀಡುವಂತೆ ಅವರಲ್ಲಿ ಜಾಗೃತಿ ಮೂಡಿಸುವ ಮತ್ತು ಸಾಮುದಾಯಿಕ ಪೊಲೀಸ್ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ಕ್ರಮಕ್ಕೆ ಮುಂದಾಗಿದೆ. ವಾಸ್ತವವಾಗಿ ಇದು ಸ್ವಾಗತಾರ್ಹ ಕ್ರಮ. ಆದರೆ, ಸಾಮುದಾಯಿಕ ಪೊಲೀಸ್ ವ್ಯವಸ್ಥೆ ಯಶಸ್ವಿಯಾಗಬೇಕಿದ್ದರೆ, ಜನಸಾಮಾನ್ಯರಲ್ಲಿ ಪೊಲೀಸ್ ವ್ಯವಸ್ಥೆಯ ಬಗ್ಗೆ ಭರವಸೆ, ವಿಶ್ವಾಸ ಮೂಡಬೇಕಿರುವುದು ಈ ಹೊತ್ತಿನ ತುರ್ತು ಸಂಗತಿಯಾಗಿದೆ.
ಆದರೆ, ನೈಜ ವಾಸ್ತವ ಅದಕ್ಕಿಂತ ಭಿನ್ನವಾಗಿದೆ. ಪೊಲೀಸ್ ವ್ಯವಸ್ಥೆಯ ಬಗ್ಗೆ ಜನಸಾಮಾನ್ಯರಲ್ಲಿ ಭರವಸೆ, ವಿಶ್ವಾಸವಿರಬೇಕಾದ ಜಾಗದಲ್ಲಿ ತಿರಸ್ಕಾರ, ಅಪನಂಬಿಕೆ ಮನೆ ಮಾಡಿವೆ. ಅದಕ್ಕಿರುವ ಪ್ರಮುಖ ಕಾರಣ: ಪೊಲೀಸ್ ವ್ಯವಸ್ಥೆಯಲ್ಲಿ ಈಗಲೂ ಬ್ರಿಟಿಷರ ದಬ್ಬಾಳಿಕೆ ಮನಸ್ಥಿತಿ ಮನೆ ಮಾಡಿರುವುದು. ಹೀಗಾಗಿಯೇ, ದೂರು ತೆಗೆದುಕೊಂಡು ಠಾಣೆಗೆ ಬರುವ ಪ್ರತೀ ಸಂತ್ರಸ್ತರನ್ನೂ ಅವರು ಅಪರಾಧಿಗಳಂತೆಯೇ ನಡೆಸಿಕೊಳ್ಳುವುದು ಸಾಮಾನ್ಯ ಸಂಗತಿಯಾಗಿದೆ. ಇನ್ನು ಸಂತ್ರಸ್ತರು ನ್ಯಾಯ ಪಡೆಯಬೇಕಿದ್ದರೂ, ಲಂಚ-ರುಷುವತ್ತು ನೀಡಬೇಕಾದ ಪರಿಸ್ಥಿತಿ ಅನೂಚಾನವಾಗಿ ನಡೆದುಕೊಂಡು ಬಂದಿದೆ. ದೇಶಕ್ಕೆ ಸ್ವಾತಂತ್ರ್ಯ ಬಂದು 77 ವರ್ಷಗಳೇ ಆಗುತ್ತಿದ್ದರೂ, ಈ ಪರಿಸ್ಥಿತಿಯಲ್ಲಿ ಕೊಂಚವೂ ಸುಧಾರಣೆಯಾಗಿಲ್ಲ. ಬದಲಿಗೆ, ಮತ್ತಷ್ಟು ವಿಷಮಿಸುತ್ತಲೇ ಸಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಸಾಮುದಾಯಿಕ ಪೊಲೀಸ್ ವ್ಯವಸ್ಥೆ ಎಂಬ ಪರಿಕಲ್ಪನೆ ಮೇಲ್ನೋಟಕ್ಕೆ ಆಕರ್ಷಕವಾಗಿ ಕಂಡರೂ, ಆಳದಲ್ಲಿ ಬಹುಬೇಗ ವಿಫಲಗೊಳ್ಳುವ ಕುಲಾಂತರಿ ಬೀಜವನ್ನು ಅಡಗಿಸಿಟ್ಟುಕೊಂಡಿದೆ. ಯಾಕೆಂದರೆ, ಪೊಲೀಸ್ ವ್ಯವಸ್ಥೆಗೇ ಸಾಮುದಾಯಿಕ ಪೊಲೀಸ್ ವ್ಯವಸ್ಥೆ ಪರಿಣಾಮಕಾರಿಯಾಗಿ ಜಾರಿಯಾಗುವುದು ಬೇಡವಾಗಿರುವುದು.
ನಮ್ಮ ದೇಶದ ಕಾನೂನಿನ ಪ್ರಕಾರ, ಈ ದೇಶದ ಪ್ರತೀ ನಾಗರಿಕನೂ ಪೊಲೀಸನೇ. ತನ್ನ ಕಣ್ಣೆದುರು ಅಪರಾಧ ಘಟನೆಗಳು ನಡೆದಾಗ, ಅದನ್ನು ಪ್ರಶ್ನಿಸುವುದು ಹಾಗೂ ಅದರ ಕುರಿತು ಪೊಲೀಸರಿಗೆ ದೂರು ನೀಡುವುದು ಆತನ ಹಕ್ಕು ಮಾತ್ರವಲ್ಲ; ಕರ್ತವ್ಯ ಕೂಡಾ. ಆದರೆ, ಇಂತಹ ಸಾಮಾನ್ಯ ಕಾನೂನು ಜ್ಞಾನ ಈ ದೇಶದ ನಾಗರಿಕರಿಗೂ ಇಲ್ಲ; ಆ ಬಗ್ಗೆ ಜಾಗೃತಿ ಮೂಡಿಸುವ ಉಮೇದು ಪೊಲೀಸರಿಗೂ ಇಲ್ಲ. ಕಾರಣ: ಅಪರಾಧ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆಯಾದಷ್ಟೂ ಪೊಲೀಸರಿಗೆ ಲಾಭ ಹೆಚ್ಚಿದೆಯೇ ಹೊರತು, ನಷ್ಟವಲ್ಲ. ಅದು ಹೇಗೆ ಎಂಬುದನ್ನು ಬಿಡಿಸಿ ಹೇಳಬೇಕಾಗಿಯೂ ಇಲ್ಲ.
ಇದೀಗ ಮತ್ತೆ ಸಾಮುದಾಯಿಕ ಪೊಲೀಸ್ ವ್ಯವಸ್ಥೆಯನ್ನು ಜಾರಿಗೊಳಿಸುವ ಪ್ರಯತ್ನಕ್ಕೆ ರಾಜ್ಯ ಸರಕಾರ ಮುಂದಾಗಿದೆ. ಆದರೆ, ಇಂತಹ ಪ್ರಯತ್ನಕ್ಕೆ ಚಾಲನೆ ನೀಡುವುದಕ್ಕೂ ಮುನ್ನ, ಪ್ರತೀ ಪೊಲೀಸ್ ಠಾಣೆಗಳಲ್ಲೂ ಸ್ಥಾಪಿಸಲಾಗಿರುವ ಶಾಂತಿ ಸಮಿತಿಗಳ ಪರಿಸ್ಥಿತಿ ಏನಾಗಿದೆ ಎಂಬುದರತ್ತ ಸರಕಾರ ಒಮ್ಮೆ ಕಣ್ಣು ಹಾಯಿಸಬೇಕಾಗಿತ್ತು. ತಮಗೆ ಬೇಕಾದ ಹಾಗೂ ಸ್ಥಳೀಯ ಶಾಸಕನಿಗೆ ನಿಕಟವಾಗಿರುವವರು ಮಾತ್ರ ಈ ಶಾಂತಿ ಸಮಿತಿಗೆ ನೇಮಕವಾಗುತ್ತಿದ್ದು, ಈ ಶಾಂತಿ ಸಮಿತಿ ಸಭೆ ಸೇರುವುದೇ ಆಯಾ ಧರ್ಮಗಳ ಕೆಲವು ಹಬ್ಬಗಳ ಸಂದರ್ಭದಲ್ಲಿ. ಇದಾದ ನಂತರ ಈ ಸಮಿತಿಗಳನ್ನು ಸಂಪೂರ್ಣವಾಗಿ ನಿಷ್ಕ್ರಿಯಗೊಳಿಸಲಾಗುತ್ತಿದೆ. ವಾಸ್ತವವಾಗಿ ಸಾಮುದಾಯಿಕ ಪೊಲೀಸ್ ವ್ಯವಸ್ಥೆಯ ಮೊದಲ ಹಂತವೇ ಪ್ರತೀ ಪೊಲೀಸ್ ಠಾಣೆಗಳಲ್ಲಿ ಸ್ಥಾಪಿಸಲಾಗಿರುವ ಈ ಶಾಂತಿ ಸಮಿತಿಗಳು. ಈ ಶಾಂತಿ ಸಮಿತಿಗಳು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಿದ್ದರೆ, ಆ ಜಿಲ್ಲೆಯಿಂದು ಕೋಮು ಹಿಂಸಾಚಾರ, ದ್ವೇಷದಿಂದ ನಲುಗುತ್ತಿರಲಿಲ್ಲ. ಆದರೆ, ಅವನ್ನು ಕಾಟಾಚಾರಕ್ಕಾಗಿ ಸ್ಥಾಪಿಸಿರುವುದರಿಂದಾಗಿಯೇ, ಕೋಮು ಉದ್ವಿಗ್ನತೆ ದಕ್ಷಿಣ ಕನ್ನಡ ಮಾತ್ರವಲ್ಲದೆ ಇಡೀ ರಾಜ್ಯಾದ್ಯಂತ ವೇಗವಾಗಿ ಹಬ್ಬುತ್ತಿದೆ.
ಹಾಗಾದರೆ, ಸಾಮುದಾಯಿಕ ಪೊಲೀಸ್ ವ್ಯವಸ್ಥೆ ಯಶಸ್ವಿಯಾಗಲು ಇರುವ ದಾರಿಗಳೇನು? ತೀರಾ ಸರಳ: ಮೊದಲು ಪೊಲೀಸ್ ವ್ಯವಸ್ಥೆಯನ್ನು ಜನಮುಖಿ ಹಾಗೂ ಜನಪರಗೊಳಿಸುವುದು. ಎರಡನೆಯದು ಬ್ರಿಟಿಷರ ಕಾಲದಿಂದಲೂ ಪೊಲೀಸ್ ವ್ಯವಸ್ಥೆಯಲ್ಲಿ ಮೈಗೂಡಿರುವ ದಬ್ಬಾಳಿಕೆ ಮನಸ್ಥಿತಿಯನ್ನು ತೊಡೆದು ಹಾಕುವುದು.
ಮುಂದಿನ ಹಂತದಲ್ಲಿ, ಪ್ರತೀ ಪೊಲೀಸ್ ಠಾಣೆಯ ವ್ಯಾಪ್ತಿಗೆ ಒಳಪಡುವ ಪ್ರತೀ ಗ್ರಾಮದಲ್ಲೂ ಸಾಮುದಾಯಿಕ ಪೊಲೀಸ್ ಸಮಿತಿಗಳನ್ನು ಸ್ಥಾಪಿಸುವುದು. ಈ ಸಮಿತಿಯಲ್ಲಿ ಜನಸಂಖ್ಯಾವಾರು ಪ್ರಾತಿನಿಧ್ಯ (ಮುಖ್ಯವಾಗಿ, ಯಾವುದೇ ಗ್ರಾಮದಲ್ಲಿ ದಲಿತರು ಹಾಗೂ ದಮನಿತರ ಜನಸಂಖ್ಯೆ ತೀರಾ ಕಡಿಮೆಯಿದ್ದಾಗ, ಇಂತಹ ಸಮಿತಿಗಳಲ್ಲಿ ಅವರಿಗೆ ಗರಿಷ್ಠ ಪ್ರಾತಿನಿಧ್ಯ ನೀಡುವುದು. ಆಗ ಬಲಿಷ್ಠ ಜಾತಿಗಳು ದಲಿತರು ಹಾಗೂ ದಮನಿತರ ಮೇಲೆ ತಮ್ಮವರಿಂದ ನಡೆಯುವ ದೌರ್ಜನ್ಯಗಳ ಪರ ನಿಲ್ಲುವುದಕ್ಕೆ ಕಡಿವಾಣ ಬೀಳಲಿದೆ).
ಸಾಮುದಾಯಿಕ ಪೊಲೀಸ್ ವ್ಯವಸ್ಥೆ ಯಶಸ್ವಿಯಾಗಬೇಕಿದ್ದರೆ, ಮೊದಲು ಪೊಲೀಸ್ ವ್ಯವಸ್ಥೆಗೆ ತಾನಿರುವುದು ತನ್ನ ದೇಶವಾಸಿಗಳ ಹಿತರಕ್ಷಣೆಗಾಗಿ ಎಂಬ ಅರಿವು ಮೂಡಬೇಕಿರುವುದು ಈ ಹೊತ್ತಿನ ತುರ್ತು ಅನಿವಾರ್ಯತೆಯಾಗಿದೆ. ಅದು ಮೂಡದ ಹೊರತು ಜನಸಾಮಾನ್ಯರಲ್ಲಿ ಎಂದಿಗೂ ಪೊಲೀಸ್ ವ್ಯವಸ್ಥೆ ಬಗ್ಗೆ ಭರವಸೆ, ವಿಶ್ವಾಸ ಮೂಡುವುದಿಲ್ಲ.
ಯಾವುದೇ ಸಮಾಜವನ್ನು ಭಯಭೀತಗೊಳಿಸಿ ನಾಗರಿಕವನ್ನಾಗಿಸಲು ಸಾಧ್ಯವಿಲ್ಲ. ಪ್ರೀತಿ, ಸಹಾನುಭೂತಿ, ಕರುಣೆ ಹಾಗೂ ತಪ್ಪುಗಳ ತಿದ್ದುವಿಕೆಯಿಂದ ಮಾತ್ರ ಅದನ್ನು ಸರಿದಾರಿಗೆ ತರಲು ಸಾಧ್ಯ. ಇದನ್ನು ಪೊಲೀಸ್ ವ್ಯವಸ್ಥೆ ಮರೆತಿದ್ದರಿಂದಲೇ, ಸಮಾಜದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹಳಿ ತಪ್ಪಿರುವುದು, ಕೋಮು ಸೌಹಾರ್ದಕ್ಕೆ ಪದೇ ಪದೇ ಧಕ್ಕೆಯಾಗುತ್ತಿರುವುದು. ಇನ್ನಾದರೂ ಈ ತಪ್ಪನ್ನು ತಿದ್ದುಕೊಳ್ಳುವ ಕೆಲಸಕ್ಕೆ ಪೊಲೀಸ್ ವ್ಯವಸ್ಥೆ ಮುಂದಾದರೆ, ಸಾಮುದಾಯಿಕ ಪೊಲೀಸ್ ವ್ಯವಸ್ಥೆ ಕೂಡಾ ತನಗೆ ತಾನೇ ದೊಡ್ಡ ಯಶಸ್ಸನ್ನು ಸಾಧಿಸಲಿದೆ. ಈ ದಿಕ್ಕಿನತ್ತ ರಾಜ್ಯ ಸರಕಾರ, ಗೃಹ ಇಲಾಖೆ ಹಾಗೂ ಪೊಲೀಸ್ ವ್ಯವಸ್ಥೆಯೆಲ್ಲ ಕಾರ್ಯೋನ್ಮುಖವಾಗಲಿ.