ಟ್ರಂಪ್ ಹಾಗೂ ಸೌದಿ ಯುವರಾಜರ ಗೆಳೆತನದ ಹಿಂದೆ ಯಾವ ಲೆಕ್ಕಾಚಾರವಿದೆ?

ಈ ಬಾಂಧವ್ಯವು ಇಸ್ರೇಲ್ - ಫೆಲೆಸ್ತೀನ್ ಸಂಘರ್ಷದ ಕುರಿತು ಸೌದಿ ಅರೇಬಿಯ ಇರಿಸಿರುವ ಷರತ್ತುಗಳನ್ನು ಅಮೆರಿಕ ಮತ್ತು ಇಸ್ರೇಲ್ ಹೇಗೆ ನಿಭಾಯಿಸುತ್ತವೆ ಎಂಬುದರ ಮೇಲೆ ಅವಲಂಬಿತವಾಗಿದೆ.
ಪ್ರಸ್ತುತ ಟ್ರಂಪ್ ಆಡಳಿತದಲ್ಲಿ, ಮಾನವ ಹಕ್ಕುಗಳು ಮತ್ತು ಸಂಕೀರ್ಣ ಪ್ರಾದೇಶಿಕ ಶಾಂತಿಗಿಂತ ಹಣ ಮತ್ತು ಮಿಲಿಟರಿ ಒಪ್ಪಂದಗಳು ಮೇಲುಗೈ ಸಾಧಿಸಿವೆ ಎಂಬುದು ಸ್ಪಷ್ಟ.
ಎಂಬಿಎಸ್ ಎಂದೇ ಕರೆಯಲ್ಪಡುವ ಸೌದಿ ಅರೇಬಿಯದ ರಾಜಕುಮಾರ ಮುಹಮ್ಮದ್ ಬಿನ್ ಸಲ್ಮಾನ್ ನವೆಂಬರ್ 18, 2025ರಂದು ಅಮೆರಿಕಕ್ಕೆ ಭೇಟಿ ನೀಡಿದ್ದು, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ನಡೆಸಿದ ಮಾತುಕತೆಗಳು ಜಾಗತಿಕ ರಾಜಕೀಯ ವಲಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.
ಎಂಬಿಎಸ್‌ಗೆ ಅಮೆರಿಕದಲ್ಲಿ ಕೆಂಪು ಹಾಸಿನ ಸ್ವಾಗತ ಮತ್ತು ಸೈನಿಕ ಬ್ಯಾಂಡ್‌ನೊಂದಿಗೆ ನೀಡಲಾದ ಅದ್ದೂರಿ ಆತಿಥ್ಯ, ಜಾಗತಿಕವಾಗಿ ಗಮನ ಸೆಳೆದಿದೆ.
ಈ ಭೇಟಿಯು ಕೇವಲ ವೈಯಕ್ತಿಕ ಸ್ನೇಹದ ವಿಸ್ತರಣೆಯೇ? ಇಲ್ಲವೇ ಇಸ್ರೇಲ್‌ನ ಭದ್ರತಾ ಹಿತಾಸಕ್ತಿಗಳನ್ನು ಬದಿಗೊತ್ತಿ ಎಮ್‌ಬಿಎಸ್ ಅವರಿಗೆ ಎಫ್-35 ಯುದ್ಧ ವಿಮಾನಗಳನ್ನು ಮಾರಾಟ ಮಾಡುವ ನಿರ್ಧಾರದ ಹಿಂದೆ ಅಮೆರಿಕದ ಹೊಸ ಮಧ್ಯಪ್ರಾಚ್ಯ ರಾಜತಾಂತ್ರಿಕತೆಯು ಅಡಗಿದೆಯೇ?
ಜಮಾಲ್ ಖಶೋಗಿ ಹತ್ಯೆಯಂತಹ ಮಾನವ ಹಕ್ಕುಗಳ ವಿಷಯಗಳನ್ನು ಟ್ರಂಪ್ ಏಕೆ ಸುಲಭವಾಗಿ ತಳ್ಳಿಹಾಕಿದರು?
ಮಧ್ಯಪ್ರಾಚ್ಯದಲ್ಲಿ ಶಾಂತಿ ಮತ್ತು ಪ್ರಾದೇಶಿಕ ಭದ್ರತೆಯನ್ನು ಖಾತರಿಪಡಿಸುವಲ್ಲಿ ಈ ವ್ಯಾಪಾರ ಕೇಂದ್ರಿತ ಬಾಂಧವ್ಯವು ನಿಜಕ್ಕೂ ಯಶಸ್ವಿಯಾಗಬಲ್ಲದೇ? ಇಂತಹ ವಿಮರ್ಶಾತ್ಮಕ ಪ್ರಶ್ನೆಗಳು ಈ ಭೇಟಿಯ ಫಲಿತಾಂಶಗಳನ್ನು ಮತ್ತು ಭವಿಷ್ಯದ ಪರಿಣಾಮಗಳನ್ನು ವಿಶ್ಲೇಷಿಸಲು ಅಗತ್ಯವಾಗಿದೆ.
ಈ ಶೃಂಗಸಭೆಯಲ್ಲಿ ಎರಡೂ ದೇಶಗಳ ನಡುವಿನ ಆರ್ಥಿಕ ಮತ್ತು ಮಿಲಿಟರಿ ಬಾಂಧವ್ಯವು ಗಟ್ಟಿಗೊಂಡಿತು.
ಎಂಬಿಎಸ್ ಅವರು ಅಮೆರಿಕದಲ್ಲಿನ ತಮ್ಮ ಆರಂಭಿಕ 600 ಬಿಲಿಯನ್ ಡಾಲರ್ ಹೂಡಿಕೆಯ ಭರವಸೆಯನ್ನು 1 ಟ್ರಿಲಿಯನ್ ಡಾಲರ್‌ಗೆ ಏರಿಸುವುದಾಗಿ ಘೋಷಿಸಿದರು.
ಅಮೆರಿಕದಲ್ಲಿ ಉದ್ಯೋಗ ಸೃಷ್ಟಿ ಮತ್ತು ಆರ್ಥಿಕ ಪುನಶ್ಚೇತನಕ್ಕಾಗಿ ಬಂಡವಾಳವನ್ನು ತರುವಂತೆ ಟ್ರಂಪ್ ಮೇಲೆ ಇದ್ದ ಒತ್ತಡಕ್ಕೆ ಇದು ದೊಡ್ಡ ರಾಜಕೀಯ ವಿಜಯವೆಂದು ಬಿಂಬಿತವಾಯಿತು.
ಇದರ ಜೊತೆಗೆ, ಭೇಟಿಯ ಅತ್ಯಂತ ಮಹತ್ವದ ಮತ್ತು ವಿವಾದಾತ್ಮಕ ನಿರ್ಧಾರವೆಂದರೆ ಎಫ್-35 ಫೈಟರ್ ಜೆಟ್‌ಗಳ ಮಾರಾಟವನ್ನು ಅಂತಿಮಗೊಳಿಸುವುದು.
ಇದುವರೆಗೆ ಅಮೆರಿಕವು ತನ್ನ ಮಿಲಿಟರಿ ತಂತ್ರಜ್ಞಾನದಲ್ಲಿ ಇಸ್ರೇಲ್‌ಗೆ ಇರುವ ಮಿಲಿಟರಿ ಆದ್ಯತೆಯನ್ನು ಉಳಿಸಿಕೊಳ್ಳಲು ಅತ್ಯಾಧುನಿಕ ವಿಮಾನಗಳನ್ನು ಮಧ್ಯಪ್ರಾಚ್ಯದ ಇತರ ದೇಶಗಳಿಗೆ ಮಾರಾಟ ಮಾಡುವುದನ್ನು ನಿರ್ಬಂಧಿಸಿತ್ತು. ಟ್ರಂಪ್ ಈ ನೀತಿಯನ್ನು ಬದಿಗೊತ್ತಿದ್ದು, ಇಸ್ರೇಲ್‌ನ ಆತಂಕಗಳ ಹೊರತಾಗಿಯೂ ಸೌದಿ ಅರೇಬಿಯಕ್ಕೆ ಎಫ್-35 ಜೆಟ್‌ಗಳನ್ನು ನೀಡುವುದಾಗಿ ಘೋಷಿಸಿದರು.
ಇದರ ಜೊತೆಗೆ, ಟ್ರಂಪ್ ಅವರು ಸೌದಿ ಅರೇಬಿಯವನ್ನು ಪ್ರಮುಖ ನೇಟೊ ಅಲ್ಲದ ಮಿತ್ರರಾಷ್ಟ್ರ ಅಂದರೆ MNNA ಎಂದು ಘೋಷಿಸಿದರು.
ಈ ಸ್ಥಾನಮಾನವು ಸೌದಿಗೆ ಅಮೆರಿಕದ ಮಿಲಿಟರಿ ಉಪಕರಣಗಳು ಮತ್ತು ತಂತ್ರಜ್ಞಾನವನ್ನು ಸುಲಭವಾಗಿ ಮತ್ತು ವೇಗವಾಗಿ ಪಡೆಯಲು ಅವಕಾಶ ನೀಡುತ್ತದೆ.
ದೀರ್ಘಕಾಲದ ಸೌದಿಯ ಬೇಡಿಕೆಯಂತೆ, ಅಮೆರಿಕವು ಸೌದಿ ಅರೇಬಿಯದಲ್ಲಿ ನಾಗರಿಕ ಪರಮಾಣು ವಿದ್ಯುತ್ ಸ್ಥಾವರ ಅಭಿವೃದ್ಧಿಗೆ ಸಹಾಯ ಮಾಡಲು ಒಪ್ಪಿಕೊಂಡಿತು.
ಈ ಎಲ್ಲಾ ಒಪ್ಪಂದಗಳು ಟ್ರಂಪ್ ಅವರ ಆಡಳಿತದ ಅಡಿಯಲ್ಲಿ ಸೌದಿ ಅರೇಬಿಯವು ಅಮೆರಿಕದ ಪ್ರಮುಖ ಕಾರ್ಯತಂತ್ರ ಪಾಲುದಾರನಾಗಿ ಹೊರಹೊಮ್ಮುತ್ತಿದೆ ಎಂಬುದನ್ನು ಸೂಚಿಸುತ್ತವೆ.
ಎರಡೂ ರಾಷ್ಟ್ರಗಳ ನಡುವಿನ ಬಾಂಧವ್ಯವನ್ನು ಮೂರು ಐತಿಹಾಸಿಕ ಹಂತಗಳಾಗಿ ವಿಂಗಡಿಸಬಹುದು.
ಮೊದಲ ಹಂತವು 1931ರಲ್ಲಿ ಔಪಚಾರಿಕ ಸ್ನೇಹದಿಂದ ಆರಂಭವಾಯಿತು ಮತ್ತು 1933ರಲ್ಲಿ ತೈಲ ರಿಯಾಯಿತಿ ಒಪ್ಪಂದದೊಂದಿಗೆ ಗಟ್ಟಿಯಾಯಿತು.
ಎರಡನೇ ಮಹತ್ವದ ಹಂತ 1945ರಲ್ಲಿ ಪ್ರಾರಂಭವಾಯಿತು. ಅಲ್ಲಿ ಅಧ್ಯಕ್ಷ ಫ್ರಾಂಕ್ಲಿನ್ ಡಿ. ರೂಸ್‌ವೆಲ್ಟ್ ಮತ್ತು ಕಿಂಗ್ ಅಬ್ದುಲ್ ಅಝೀಝ್ ನಡುವಿನ ಐತಿಹಾಸಿಕ ಸಭೆಯಲ್ಲಿ ‘ಆಯಿಲ್ ಫಾರ್ ಸೆಕ್ಯುರಿಟಿ’ ಸೂತ್ರಕ್ಕೆ ಅಡಿಪಾಯ ಹಾಕಲಾಯಿತು: ಅಮೆರಿಕಕ್ಕೆ ಸ್ಥಿರ ತೈಲ ಪೂರೈಕೆ, ಬದಲಿಗೆ ಸೌದಿ ಅರೇಬಿಯಕ್ಕೆ ಮಿಲಿಟರಿ ಭದ್ರತಾ ಖಾತರಿ.
ಇಂದಿನ ರಾಜಕೀಯಕ್ಕೆ ಪ್ರಸ್ತುತವಾದ ಮೂರನೇ ಹಂತವು 2015ರಲ್ಲಿ ಎಂಬಿಎಸ್ ಅವರ ಆಗಮನದೊಂದಿಗೆ ಪ್ರಾರಂಭವಾಯಿತು.
ಯುವ ರಾಜಕುಮಾರ ವಿಷನ್ 2030ರ ಅಡಿಯಲ್ಲಿ ಸೌದಿ ಅರೇಬಿಯವನ್ನು ಆಧುನೀಕರಿಸಲು, ಪ್ರಾದೇಶಿಕ ಭಯೋತ್ಪಾದನೆ ಮತ್ತು ಇರಾನ್‌ನ ಬೆದರಿಕೆಯನ್ನು ಎದುರಿಸಲು ಅಮೆರಿಕದ ಬೆಂಬಲ ಮತ್ತು ತಂತ್ರಜ್ಞಾನವನ್ನು ಪಡೆಯಲು ಪ್ರಯತ್ನಿಸುತ್ತಿದ್ದಾರೆ.
ಟ್ರಂಪ್ ಮತ್ತು ಎಂಬಿಎಸ್ ನಡುವಿನ ವೈಯಕ್ತಿಕ ಸ್ನೇಹ ಈ ರಾಜತಾಂತ್ರಿಕತೆಯನ್ನು ಮತ್ತಷ್ಟು ಬಲಪಡಿಸಿದೆ.
ಈ ಭೇಟಿಯ ವಿಶ್ಲೇಷಣೆಯು ಹಲವು ಮಹತ್ವದ ಅಂಶಗಳನ್ನು ತೆರೆದಿಟ್ಟಿದೆ.
ಅಬ್ರಹಾಂ ಒಪ್ಪಂದಗಳಿಗೆ ಸೌದಿಯನ್ನು ಸೇರಿಸಲು ಅಮೆರಿಕ ಪ್ರಯತ್ನಿಸುತ್ತಿದ್ದರೂ, ಎಂಬಿಎಸ್ ಅವರು ‘ಎರಡು ದೇಶಗಳ ಪರಿಹಾರ’ ಅಂದರೆ 1967ರ ಗಡಿಗಳು ಮತ್ತು ಪೂರ್ವ ಜೆರುಸಲೇಮ್ ಫೆಲೆಸ್ತೀನ್‌ನ ರಾಜಧಾನಿ ಎಂಬ ಷರತ್ತನ್ನು ವಿಧಿಸಿದ್ದಾರೆ.
ಇಸ್ರೇಲ್‌ನ ವಸಾಹತು ನೀತಿಗಳ ಬಗ್ಗೆ ಟ್ರಂಪ್ ಮೌನವಾಗಿರುವುದರಿಂದ, ಸೌದಿಯ ಈ ಬೇಡಿಕೆಗಳನ್ನು ತಕ್ಷಣಕ್ಕೆ ಈಡೇರಿಸುವುದು ಅಸಾಧ್ಯವಾಗಿದೆ.
ಇನ್ನೊಂದು ಪ್ರಮುಖ ವಿವಾದವೆಂದರೆ ಜಮಾಲ್ ಖಶೋಗಿ ಹತ್ಯೆ.
ಅಕ್ಟೋಬರ್ 2, 2018ರಂದು ತನ್ನ ಮದುವೆಗಾಗಿ ಕೆಲವು ದಾಖಲೆಗಳನ್ನು ಪಡೆಯಲು ತುರ್ಕಿಯದ ಸೌದಿ ರಾಯಭಾರ ಕಚೇರಿ ಒಳಗೆ ಹೋಗಿದ್ದ ಸೌದಿ ಮೂಲದ ಅಮೆರಿಕನ್ ಪತ್ರಕರ್ತ ಜಮಾಲ್ ಖಶೋಗಿ ಅಲ್ಲಿಂದ ವಾಪಸ್ ಬರಲೇ ಇಲ್ಲ. ಅವರನ್ನು ಅಲ್ಲೇ ಸೌದಿಯಿಂದ ಬಂದಿದ್ದ ವಿಶೇಷ ಹಂತಕರ ತಂಡವೊಂದು ಬರ್ಬರವಾಗಿ ಕೊಂದು ಮೃತ ದೇಹವನ್ನು ತುಂಡು ತುಂಡು ಮಾಡಿ ರಾಸಾಯನಿಕ ಬಳಸಿ ವಿಲೇವಾರಿ ಮಾಡಿದೆ ಎಂಬ ಗಂಭೀರ ಆರೋಪವಿದೆ.
ಸೌದಿ ರಾಜಕುಮಾರ ಎಂಬಿಎಸ್ ಅವರೇ ಈ ಹತ್ಯೆಗೆ ಆದೇಶ ನೀಡಿದ್ದರು ಎಂದು ಅಮೆರಿಕದ ಸಿಐಎ ಕೂಡ ಹೇಳಿತ್ತು.
ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಕೇಳಿದಾಗ ಟ್ರಂಪ್ ಆ ಹತ್ಯೆಯ ವಿಷಯವನ್ನು ಸಂಪೂರ್ಣವಾಗಿ ತಳ್ಳಿಹಾಕಿದರು ಮತ್ತು ಎಂಬಿಎಸ್ ಅವರನ್ನು ರಕ್ಷಿಸಲು ಮುಂದಾದರು.
ಈ ನಡೆಯು ಟ್ರಂಪ್ ಆಡಳಿತವು ಮಾನವ ಹಕ್ಕುಗಳಿಗಿಂತಲೂ ಸೌದಿ ಅರೇಬಿಯದೊಂದಿಗಿನ ವ್ಯಾಪಾರ ಮತ್ತು ಭದ್ರತಾ ವ್ಯವಹಾರಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತದೆ ಎಂಬುದನ್ನು ದೃಢಪಡಿಸಿತು.
ಎಫ್-35 ಜೆಟ್‌ಗಳ ಮಾರಾಟವು ಇಸ್ರೇಲ್‌ಗೆ ಅಮೆರಿಕ ಈವರೆಗೆ ಕೊಡುತ್ತಾ ಬಂದಿರುವ ಪ್ರಾದೇಶಿಕ ಮಿಲಿಟರಿ ಆದ್ಯತೆಯನ್ನು ನಿಲ್ಲಿಸುವ ಬಗ್ಗೆ ಕಳವಳವನ್ನುಂಟು ಮಾಡಿದೆ.
ಆದರೆ, ಸೌದಿ ಅರೇಬಿಯದ ಅತಿ ಹೆಚ್ಚು ಮಿಲಿಟರಿ ವೆಚ್ಚದ ಹೊರತಾಗಿಯೂ, ಅದರ ಮಿಲಿಟರಿ ಸಾಮರ್ಥ್ಯವು ಇಸ್ರೇಲ್‌ನ ಮಟ್ಟವನ್ನು ತಲುಪಿಲ್ಲ.
ಆದ್ದರಿಂದ, ಈ ಜೆಟ್‌ಗಳ ಮಾರಾಟವು ಹೆಚ್ಚಾಗಿ ಎಂಬಿಎಸ್ ಅವರು ತಮ್ಮ ಅಗಾಧ ಸಂಪತ್ತಿನ ಮೂಲಕ ಟ್ರಂಪ್‌ನಿಂದ ಪಡೆಯುತ್ತಿರುವ ರಾಜ ಕೀಯ ಪ್ರತಿಫಲವಾಗಿದೆ ಎಂಬ ವಿಶ್ಲೇಷಣೆ ಇದೆ.
ಅಂತಿಮವಾಗಿ, ಟ್ರಂಪ್ ಅವರು ಅಮೆರಿಕಕ್ಕೆ ತಂದ ಹೂಡಿಕೆಯ ಮೊತ್ತದ ಬಗ್ಗೆ ನೀಡಿರುವ ಹೇಳಿಕೆಗಳು ಅಮೆರಿಕದ ಮಾಧ್ಯಮಗಳ ಫ್ಯಾಕ್ಟ್ ಚೆಕ್‌ಗಳಲ್ಲಿ ಅತಿಶಯೋಕ್ತಿ ಎಂದು ಸಾಬೀತಾಗಿದೆ.
ವೈಟ್ ಹೌಸ್‌ನ ಅಧಿಕೃತ ಮಾಹಿತಿ ಪ್ರಕಾರ ಅದು ಸುಮಾರು 8.8 ಟ್ರಿಲಿಯನ್ ಡಾಲರ್ ಮಾತ್ರ ಆಗಿದೆ. ಇದು ಟ್ರಂಪ್ ಅವರ ಹೇಳಿಕೆಯ ಅರ್ಧಕ್ಕಿಂತ ಕಡಿಮೆ.
ಟ್ರಂಪ್-ಎಂಬಿಎಸ್ ಭೇಟಿಯು ಅಮೆರಿಕದ ಮಧ್ಯಪ್ರಾಚ್ಯ ನೀತಿಯಲ್ಲಿನ ಮಹತ್ವದ ಬದಲಾವಣೆಯನ್ನು ಸೂಚಿಸುತ್ತದೆ.
ಸಾಂಪ್ರದಾಯಿಕವಾಗಿ ಇಸ್ರೇಲ್‌ನ ಭದ್ರತೆಗೆ ಆದ್ಯತೆ ನೀಡುತ್ತಿದ್ದ ಅಮೆರಿಕ, ಈಗ ಸೌದಿ ಅರೇಬಿಯದೊಂದಿಗೆ ವ್ಯವಹಾರ ಆಧಾರಿತ ಸಂಬಂಧವನ್ನು ನಿರ್ಮಿಸುತ್ತಿದೆ. ಈ ಬಾಂಧವ್ಯವು ಹಳೆಯ ಭದ್ರತೆಗಾಗಿ ತೈಲ ಸೂತ್ರದಿಂದ ಭದ್ರತೆ ಮತ್ತು ತಂತ್ರಜ್ಞಾನಕ್ಕಾಗಿ ಬೃಹತ್ ಹೂಡಿಕೆ ಎಂಬ ಹೊಸ ಸೂತ್ರಕ್ಕೆ ವಿಕಸನಗೊಳ್ಳುತ್ತಿದೆ.
ಎಂಬಿಎಸ್ ಅವರ ಆಶಯದಂತೆ ಅಮೆರಿಕದ ಮಿಲಿಟರಿ ಮತ್ತು ತಂತ್ರಜ್ಞಾನದ ಬೆಂಬಲವನ್ನು ಪಡೆಯುವ ಮೂಲಕ ಸೌದಿ ಅರೇಬಿಯವು ಪ್ರಾದೇಶಿಕ ನಾಯಕನಾಗಿ ತನ್ನ ಪಾತ್ರವನ್ನು ಬಲಪಡಿಸಲು ಹೊರಟಿದೆ.
ಟ್ರಂಪ್ ಅವರ ಮುಖ್ಯ ಗುರಿ ಮಧ್ಯಪ್ರಾಚ್ಯದಲ್ಲಿ ತೈಲ ಸರಬರಾಜುಗಳನ್ನು ರಕ್ಷಿಸಲು ಅಮೆರಿಕದ ಮೇಲಿನ ವೆಚ್ಚವನ್ನು ಕಡಿಮೆ ಮಾಡುವುದು ಮತ್ತು ಆ ಜವಾಬ್ದಾರಿಯನ್ನು ಸೌದಿಯಂತಹ ಮಿತ್ರರಾಷ್ಟ್ರಗಳ ಮೇಲೆ ವರ್ಗಾಯಿಸುವುದು.
ಸೌದಿ ಅರೇಬಿಯವನ್ನು ಎಂ.ಎನ್.ಎನ್.ಎ. ಸ್ಥಾನಮಾನಕ್ಕೆ ಏರಿಸುವುದು ಮತ್ತು ಎಫ್-35 ಜೆಟ್‌ಗಳನ್ನು ನೀಡುವುದು ಈ ವಲಯದಲ್ಲಿನ ಅಧಿಕಾರದ ಸಮತೋಲನವನ್ನು ಬದಲಾಯಿಸದಿದ್ದರೂ, ಸೌದಿ ಅರೇಬಿಯಕ್ಕೆ ಭಾರೀ ರಾಜಕೀಯ ಮತ್ತು ತಾಂತ್ರಿಕ ಬಲವನ್ನು ನೀಡುತ್ತದೆ.
ಅಂತಿಮವಾಗಿ, ಈ ಬಾಂಧವ್ಯವು ಇಸ್ರೇಲ್ - ಫೆಲೆಸ್ತೀನ್ ಸಂಘರ್ಷದ ಕುರಿತು ಸೌದಿ ಅರೇಬಿಯ ಇರಿಸಿರುವ ಷರತ್ತುಗಳನ್ನು ಅಮೆರಿಕ ಮತ್ತು ಇಸ್ರೇಲ್ ಹೇಗೆ ನಿಭಾಯಿಸುತ್ತವೆ ಎಂಬುದರ ಮೇಲೆ ಅವಲಂಬಿತವಾಗಿದೆ.
ಪ್ರಸ್ತುತ ಟ್ರಂಪ್ ಆಡಳಿತದಲ್ಲಿ, ಮಾನವ ಹಕ್ಕುಗಳು ಮತ್ತು ಸಂಕೀರ್ಣ ಪ್ರಾದೇಶಿಕ ಶಾಂತಿಗಿಂತ ಹಣ ಮತ್ತು ಮಿಲಿಟರಿ ಒಪ್ಪಂದಗಳು ಮೇಲುಗೈ ಸಾಧಿಸಿವೆ ಎಂಬುದು ಸ್ಪಷ್ಟ.







