ಚುನಾವಣಾ ಆಯೋಗ ಸೂಚಿಸಿರುವ ಒಂದೂ ದಾಖಲೆ ಹೊಂದಿರದ ಅರ್ಹ ಮತದಾರರ ಗತಿ ಏನು?

ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯ ಕುರಿತು ನಡೆಯುತ್ತಿರುವ ಚರ್ಚೆಗಳ ನಡುವೆ ಬಹುತೇಕ ಎಲ್ಲರ ಗಮನವು ಮನೆಮನೆ ಭೇಟಿ, ದಾಖಲೆಗಳ ಸಲ್ಲಿಕೆ ಹಾಗೂ ಮತದಾರರ ಪಟ್ಟಿಯ ಪರಿಷ್ಕರಣೆಯತ್ತ ಕೇಂದ್ರೀಕೃತವಾಗಿದೆ. ಆದರೆ ಈ ಪ್ರಕ್ರಿಯೆಯ ಅತ್ಯಂತ ಸಂಕೀರ್ಣ ಮತ್ತು ಮಾನವೀಯ ಪ್ರಶ್ನೆಯೊಂದಕ್ಕೆ ಇನ್ನೂ ಸ್ಪಷ್ಟ ಉತ್ತರಕ್ಕಾಗಿ ಕಾಯುತ್ತಿದೆ. ಅದು ‘2002ರ ಮತದಾರರ ಪಟ್ಟಿಯಲ್ಲಿ ತನ್ನ ಹೆಸರು ಇಲ್ಲದಿದ್ದರೆ ಅಥವಾ ತಂದೆ-ತಾಯಿಯ ಹೆಸರು ಇಲ್ಲದಿದ್ದರೆ, ಜೊತೆಗೆ ಚುನಾವಣಾ ಆಯೋಗ ಸೂಚಿಸಿರುವ 11 ದಾಖಲೆಗಳಲ್ಲಿ ಒಂದನ್ನೂ ಹೊಂದಿರದ ಓರ್ವ ಅರ್ಹ ಮತದಾರನ ಗತಿ ಏನು?’ ಎಂಬುದು.
ಎಸ್‌ಐಆರ್ ಪ್ರಕ್ರಿಯೆಯಲ್ಲಿ 2002 ಮತ್ತು 2025ರ ಮತದಾರರ ಪಟ್ಟಿಯಲ್ಲಿ ಹೆಸರು ಇದ್ದರೂ, ಕಾಗುಣಿತ ದೋಷ, ವಯಸ್ಸಿನ ವ್ಯತ್ಯಾಸ, ತಂದೆ/ಪತಿ ಹೆಸರಿನ ತಪ್ಪು, ವಿಳಾಸದ ಬದಲಾವಣೆ ಅಥವಾ ಇತರ ಆಡಳಿತಾತ್ಮಕ ಲೋಪಗಳಿಂದ ಕೆಲವು ಮತದಾರರ ಹೆಸರುಗಳು ಮ್ಯಾಪಿಂಗ್ ಆಗದೆ ಉಳಿಯುವ ಸಾಧ್ಯತೆಯಿದೆ. ಇಂತಹ ದೋಷಗಳು ಮತದಾರರಿಂದ ಉಂಟಾಗಿರುವುದಲ್ಲ; ಹಲವು ವರ್ಷಗಳ ಆಡಳಿತಾತ್ಮಕ ದಾಖಲೆ ನಿರ್ವಹಣೆಯ ಲೋಪಗಳಿಂದಲೂ ಆಗಿರಬಹುದು. ಇಂತಹ ಸಂದರ್ಭಗಳಲ್ಲಿ ಚುನಾವಣಾ ಆಯೋಗದ ಮಾರ್ಗ ಸೂಚಿಗಳ ಪ್ರಕಾರ ಇಆರ್‌ಒ ನೋಟಿಸ್ ನೀಡಿ ದಾಖಲೆಗಳನ್ನು ಸಲ್ಲಿಸಲು ಅವಕಾಶ ನೀಡುತ್ತಾರೆ. ನಂತರ ದಾಖಲೆಗಳು ಮತ್ತು ವಿವರಣೆಯನ್ನು ಪರಿಶೀಲಿಸಿ ನಿರ್ಧಾರ ಕೈಗೊಳ್ಳುತ್ತಾರೆ.
ಆದರೆ ಇಲ್ಲಿಯೇ ಮತ್ತೊಂದು ಮೂಲಭೂತ ಪ್ರಶ್ನೆ ಉದ್ಭವಿಸುತ್ತದೆ. ಚುನಾವಣಾ ಆಯೋಗವು ಜನನ ಪ್ರಮಾಣಪತ್ರ, ಪಾಸ್‌ಪೋರ್ಟ್, ಭೂ ದಾಖಲೆ, ಡೊಮಿಸೈಲ್ ಪ್ರಮಾಣಪತ್ರ, ಅರಣ್ಯ ಹಕ್ಕು ಪತ್ರ, ಜಾತಿ ಪ್ರಮಾಣಪತ್ರ, ಶಿಕ್ಷಣ ದಾಖಲೆ ಸೇರಿದಂತೆ 11 ದಾಖಲೆಗಳಲ್ಲಿ ಯಾವುದಾದರೂ ಒಂದನ್ನು ಸಲ್ಲಿಸುವಂತೆ ಸೂಚಿಸಿದೆ. ಆದರೆ ಈ ದಾಖಲೆಗಳು ಪ್ರತಿಯೊಬ್ಬ ನಾಗರಿಕರ ಬಳಿಯೂ ಇರುವುದಿಲ್ಲ. ಗ್ರಾಮೀಣ ಪ್ರದೇಶಗಳಲ್ಲಿ ದಶಕಗಳ ಹಿಂದೆ ಜನಿಸಿದ ಅನೇಕ ಜನರ ಬಳಿ ಜನನ ಪ್ರಮಾಣಪತ್ರವೇ ಇಲ್ಲ. ಭೂಹೀನ ಕೃಷಿ ಕಾರ್ಮಿಕರಿಗೆ ಭೂ ದಾಖಲೆಗಳಿಲ್ಲ. ಬಾಡಿಗೆ ಮನೆಯಲ್ಲಿ ವಾಸಿಸುವವರ ಬಳಿ ಆಸ್ತಿ ದಾಖಲೆಗಳಿಲ್ಲ. ಪಾಸ್‌ಪೋರ್ಟ್ ವಿದೇಶ ಪ್ರಯಾಣ ಮಾಡುವ ಕೆಲವರ ಬಳಿಯಷ್ಟೇ ಇರುತ್ತದೆ. ಡೊಮಿಸೈಲ್ ಪ್ರಮಾಣಪತ್ರವನ್ನು ಬಹುತೇಕ ಜನರು ಮಾಡಿಸಿಕೊಂಡಿರುವುದಿಲ್ಲ. ನಿರಕ್ಷರರು ಅಥವಾ ಬಾಲ್ಯದಲ್ಲಿಯೇ ಶಿಕ್ಷಣ ತೊರೆದವರ ಬಳಿ ಶಿಕ್ಷಣ ಪ್ರಮಾಣಪತ್ರವೂ ಇರುವುದಿಲ್ಲ.
ಇದರ ಜೊತೆಗೆ ಅಲೆಮಾರಿ ಸಮುದಾಯಗಳು, ಪದೇಪದೇ ಬಾಡಿಗೆ ಮನೆ ಬದಲಾಯಿಸುವವರು, ಖಾಸಗಿ ಉದ್ಯೋಗದ ಕಾರಣದಿಂದ ನಿರಂತರವಾಗಿ ಸ್ಥಳಾಂತರಗೊಳ್ಳುವವರು, ಭೂಹೀನ ಕೃಷಿ ಕಾರ್ಮಿಕರು, ವಲಸೆ ಕಾರ್ಮಿಕರು, ಮೀನುಗಾರರು, ಆದಿವಾಸಿಗಳು ಹಾಗೂ ಬಾಲ್ಯದಲ್ಲಿಯೇ ತಂದೆ-ತಾಯಿಯನ್ನು ಕಳೆದುಕೊಂಡು ದಾಖಲೆಗಳಿಂದ ವಂಚಿತರಾದ ಅನಾಥರ ಪರಿಸ್ಥಿತಿ ಇನ್ನಷ್ಟು ಸಂಕೀರ್ಣವಾಗಿದೆ. ಇವರಲ್ಲಿ ಹಲವರ ಬಳಿ ಶಾಶ್ವತ ವಿಳಾಸವೇ ಇಲ್ಲ. ಕೆಲವರ ಕುಟುಂಬದ ದಾಖಲೆಗಳು ಕಳೆದುಹೋಗಿವೆ. ಮತ್ತೆ ಕೆಲವರಿಗೆ ಅಗತ್ಯ ದಾಖಲೆಗಳನ್ನು ಎಂದಿಗೂ ಮಾಡಿಸಿಕೊಳ್ಳುವ ಅವಕಾಶವೇ ದೊರೆತಿಲ್ಲ. ಇದು ಅವರ ನಿರ್ಲಕ್ಷ್ಯದಿಂದ ಉಂಟಾದ ಪರಿಸ್ಥಿತಿಯಲ್ಲ; ಅವರ ಜೀವನ ಪರಿಸ್ಥಿತಿ ಮತ್ತು ಸಾಮಾಜಿಕ-ಆರ್ಥಿಕ ಹಿನ್ನೆಲೆಯ ಪರಿಣಾಮವಾಗಿದೆ.
ಈ ಸಂದರ್ಭದಲ್ಲಿ ಹಲವರು Form 6, Form 7 ಮತ್ತು Form 8ಗಳನ್ನು ಪರಿಹಾರವೆಂದು ಭಾವಿಸುತ್ತಾರೆ. ಆದರೆ ಈ ನಮೂನೆಗಳ ಪಾತ್ರವನ್ನು ಸರಿಯಾಗಿ ಅರ್ಥಮಾಡಿಕೊಳ್ಳಬೇಕು. Form 6 ಹೊಸ ಮತದಾರರ ನೋಂದಣಿ ಅಥವಾ ಹೊಸ ಕ್ಷೇತ್ರದಲ್ಲಿ ಹೆಸರು ಸೇರಿಸಲು, Form 7 ಆಕ್ಷೇಪಣೆ ಸಲ್ಲಿಸಲು ಹಾಗೂ Form 8 ಹೆಸರು, ವಯಸ್ಸು, ವಿಳಾಸ ಸೇರಿದಂತೆ ಇತರ ವಿವರಗಳ ತಿದ್ದುಪಡಿಗಾಗಿ ಬಳಸಲಾಗುತ್ತದೆ. ಇವು ಕಾನೂನುಬದ್ಧ ಪರಿಹಾರದ ಮಾರ್ಗಗಳೇ ಹೊರತು, ದಾಖಲೆಗಳೇ ಇಲ್ಲದ ವ್ಯಕ್ತಿಗೆ ಹೊಸ ದಾಖಲೆಗಳನ್ನು ಸೃಷ್ಟಿಸುವ ವ್ಯವಸ್ಥೆಗಳಲ್ಲ.
ಲಭ್ಯವಿರುವ ಎಸ್‌ಐಆರ್ FAQ ಪ್ರಕಾರ, ಹಿಂದಿನ ದಾಖಲೆಗಳೊಂದಿಗೆ ಮಾಹಿತಿ ಹೊಂದಿಕೆಯಾಗದಿದ್ದರೆ ಇಆರ್‌ಒ ನೋಟಿಸ್ ನೀಡುತ್ತಾರೆ, ದಾಖಲೆಗಳನ್ನು ಸ್ವೀಕರಿಸುತ್ತಾರೆ ಮತ್ತು ಪ್ರಕರಣವನ್ನು ಪರಿಶೀಲಿಸಿ ನಿರ್ಧಾರ ಕೈಗೊಳ್ಳುತ್ತಾರೆ. ಆದರೆ 11 ದಾಖಲೆಗಳಲ್ಲಿ ಒಂದನ್ನೂ ಸಲ್ಲಿಸಲು ಸಾಧ್ಯವಾಗದ ಮತದಾರನಿಗೆ ಯಾವ ಪರ್ಯಾಯ ಸಾಕ್ಷ್ಯವನ್ನು ಅಂಗೀಕರಿಸಲಾಗುತ್ತದೆ? ಅಲೆಮಾರಿ ಸಮುದಾಯದ ವ್ಯಕ್ತಿಗೆ ಯಾವ ವಿಧಾನ? ಅನಾಥನಿಗೆ ಯಾವ ವಿಧಾನ? ಭೂಹೀನ ಕೃಷಿ ಕಾರ್ಮಿಕನಿಗೆ ಯಾವ ವಿಧಾನ? ವಲಸೆ ಕಾರ್ಮಿಕ ಅಥವಾ ಪದೇಪದೇ ಸ್ಥಳಾಂತರಗೊಳ್ಳುವ ಉದ್ಯೋಗಿಗೆ ಯಾವ ವಿಧಾನ? ಎಂಬ ಪ್ರಶ್ನೆಗಳಿಗೆ ಸಾರ್ವಜನಿಕವಾಗಿ ಲಭ್ಯವಿರುವ FAQನಲ್ಲಿ ಸ್ಪಷ್ಟ, ಏಕರೂಪದ ಉತ್ತರ ಕಾಣಿಸುವುದಿಲ್ಲ.
ಈ ಹಿನ್ನೆಲೆಯಲ್ಲಿ ಮತ್ತೊಂದು ಮಹತ್ವದ ಕಾನೂನು ಬೆಳವಣಿಗೆಯನ್ನೂ ಗಮನಿಸಬೇಕಾಗಿದೆ. 2023ರ ಮುಖ್ಯ ಚುನಾವಣಾ ಆಯುಕ್ತ ಮತ್ತು ಇತರ ಚುನಾವಣಾ ಆಯುಕ್ತರ (ನೇಮಕಾತಿ, ಸೇವಾ ಷರತ್ತುಗಳು ಮತ್ತು ಅಧಿಕಾರಾವಧಿ) ಕಾಯ್ದೆಯ ಸೆಕ್ಷನ್ 16ರ ಪ್ರಕಾರ, ಮುಖ್ಯ ಚುನಾವಣಾ ಆಯುಕ್ತರು ಮತ್ತು ಚುನಾವಣಾ ಆಯುಕ್ತರು ತಮ್ಮ ಅಧಿಕೃತ ಕರ್ತವ್ಯ ನಿರ್ವಹಿಸುವ ಸಂದರ್ಭದಲ್ಲಿ ಮಾಡಿದ ಕಾರ್ಯ, ತೆಗೆದುಕೊಂಡ ನಿರ್ಧಾರ ಅಥವಾ ಹೇಳಿದ ಮಾತುಗಳಿಗೆ ಸಂಬಂಧಿಸಿ, ಅವರು ಹುದ್ದೆಯಲ್ಲಿದ್ದಾಗಲೂ ಹಾಗೂ ನಿವೃತ್ತರಾದ ನಂತರವೂ ಅವರ ವಿರುದ್ಧ ನಾಗರಿಕ ಅಥವಾ ಕ್ರಿಮಿನಲ್ ಮೊಕದ್ದಮೆಗಳನ್ನು ನ್ಯಾಯಾಲಯಗಳು ಸ್ವೀಕರಿಸಲು ಅಥವಾ ಮುಂದುವರಿಸಲು ನಿರ್ಬಂಧವಿದೆ. ಈ ವಿಧಾನದ ಸಂವಿಧಾನಬದ್ಧತೆಯನ್ನು ಪ್ರಸ್ತುತ ಸುಪ್ರೀಂ ಕೋರ್ಟ್ ಪರಿಶೀಲಿಸುತ್ತಿದೆ.
ನನ್ನ ಅಭಿಪ್ರಾಯದಲ್ಲಿ, ಇಲ್ಲಿಯೇ ಇನ್ನೊಂದು ಪ್ರಶ್ನೆ ಸಹಜವಾಗಿ ಉದ್ಭವಿಸುತ್ತದೆ. ತಪ್ಪು ಮಾಡದೆ, ಕಾನೂನಿನ ಚೌಕಟ್ಟಿನೊಳಗೆ ಕಾರ್ಯನಿರ್ವಹಿಸುವ ಯಾವುದೇ ಅಧಿಕಾರಿಗೆ ಇಂತಹ ವಿಶೇಷ ಕಾನೂನು ರಕ್ಷಣೆಯನ್ನು ನೀಡುವ ಅಗತ್ಯ ಏಕೆ ಉಂಟಾಯಿತು? ಸಾಮಾನ್ಯವಾಗಿ ಸಾರ್ವಜನಿಕ ಹುದ್ದೆಯಲ್ಲಿರುವ ಪ್ರತಿಯೊಬ್ಬ ಅಧಿಕಾರಿಯೂ ತನ್ನ ನಿರ್ಧಾರಗಳಿಗೆ ಕಾನೂನು ಮತ್ತು ನ್ಯಾಯಾಂಗದ ಪರಿಶೀಲನೆಗೆ ಒಳಪಡುವ ಉತ್ತರದಾಯಿತ್ವವನ್ನು ಹೊಂದಿರುತ್ತಾನೆ. ಹಾಗಿದ್ದರೆ ಚುನಾವಣಾ ಆಯುಕ್ತರಿಗೆ ಮಾತ್ರ ಈ ರೀತಿಯ ವಿಶೇಷ ರಕ್ಷಣೆ ನೀಡಿರುವ ಹಿಂದಿನ ಸಾರ್ವಜನಿಕ ಹಿತಾಸಕ್ತಿ ಏನು ಎಂಬುದನ್ನು ಸರಕಾರ ಮತ್ತು ಚುನಾವಣಾ ಆಯೋಗ ಸ್ಪಷ್ಟಪಡಿಸಬೇಕಾಗಿದೆ.
ಈ ಪ್ರಶ್ನೆಗೆ ಸಮರ್ಪಕ ಉತ್ತರ ದೊರೆಯದಿರುವುದು ಸಹಜವಾಗಿಯೇ ಕೆಲವು ಅನುಮಾನಗಳಿಗೆ ಕಾರಣವಾಗುತ್ತದೆ. ತಪ್ಪು ನಿರ್ಧಾರಗಳು ಅಥವಾ ವಿವಾದಾತ್ಮಕ ಕ್ರಮಗಳಿಂದ ಗೊಂದಲ ಉಂಟಾದರೂ, ಆ ಗೊಂದಲದ ನಡುವೆ ಅಧಿಕಾರವನ್ನು ನಿರಾತಂಕವಾಗಿ ಮುಂದುವರಿಸಲು ಅವಕಾಶ ಕಲ್ಪಿಸುವ ಉದ್ದೇಶದಿಂದಲೇ ಈ ರೀತಿಯ ಕಾನೂನು ತಿದ್ದುಪಡಿ ತರಲಾಗಿದೆಯೇ ಎಂಬ ಅನುಮಾನ ನನ್ನಲ್ಲಿ ಮೂಡುತ್ತಿದೆ. ಈ ಅನುಮಾನವನ್ನು ನಾನು ವಾಸ್ತವಾಂಶವಾಗಿ ಅಲ್ಲ, ಸಾರ್ವಜನಿಕ ಹಿತಾಸಕ್ತಿಯ ದೃಷ್ಟಿಯಿಂದ ಉದ್ಭವಿಸುವ ಪ್ರಶ್ನೆಯಾಗಿ ವ್ಯಕ್ತಪಡಿಸುತ್ತಿದ್ದೇನೆ. ಇಂತಹ ಅನುಮಾನಗಳಿಗೆ ತೆರೆ ಎಳೆಯುವ ಜವಾಬ್ದಾರಿ ಸರಕಾರ ಮತ್ತು ಚುನಾವಣಾ ಆಯೋಗದ ಮೇಲಿದೆ.
ಅದೇ ಸಂದರ್ಭದಲ್ಲಿ, ನನ್ನ ರಾಜಕೀಯ ವಿಶ್ಲೇಷಣೆಯ ಪ್ರಕಾರ, ಪಶ್ಚಿಮ ಬಂಗಾಳ ಮತ್ತು ಬಿಹಾರದಲ್ಲಿ ನಡೆದ ಎಸ್‌ಐಆರ್ ಪ್ರಕ್ರಿಯೆಯನ್ನು ಗಮನಿಸಿದಾಗ ಈ ಅಭಿಯಾನದ ಉದ್ದೇಶ ಹಾಗೂ ಪರಿಣಾಮಗಳ ಬಗ್ಗೆ ಗಂಭೀರ ಪ್ರಶ್ನೆಗಳು ಉದ್ಭವಿಸುತ್ತವೆ. ಈ ಪ್ರಕ್ರಿಯೆಯ ಮೂಲಕ ಸಾಧ್ಯವಾದಷ್ಟು ಹೆಚ್ಚು ಮತದಾರರನ್ನು ಪಟ್ಟಿಯಿಂದ ಹೊರಗಿಡುವ ಪ್ರಯತ್ನ ನಡೆಯುತ್ತಿದೆಯೇ?, ಅದರ ಮೂಲಕ ವಲಸಿಗರ ಪ್ರಶ್ನೆಯನ್ನು ರಾಜಕೀಯವಾಗಿ ಬಳಸುವ ಹಾಗೂ ಹಿಂದೂ-ಮುಸ್ಲಿಮ್ ಧ್ರುವೀಕರಣದ ರಾಜಕಾರಣವನ್ನು ಮುಂದುವರಿಸುವ ಪ್ರಯತ್ನ ಇದೆಯೇ? ಎಂಬ ಪ್ರಶ್ನೆಗಳೂ ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿವೆ. ಈ ಪ್ರಶ್ನೆಗಳಿಗೆ ಚುನಾವಣಾ ಆಯೋಗವು ಪಾರದರ್ಶಕ, ವಾಸ್ತವಾಧಾರಿತ ಮತ್ತು ವಿಶ್ವಾಸಾರ್ಹ ಉತ್ತರ ನೀಡಬೇಕು.
ಪ್ರಜಾಪ್ರಭುತ್ವದಲ್ಲಿ ಮತದಾನದ ಹಕ್ಕು ದಾಖಲೆಗಳನ್ನು ಹೊಂದಿರುವವರಿಗೆ ಮಾತ್ರ ಮೀಸಲಾದ ಹಕ್ಕಲ್ಲ; ಅದು ಪ್ರತಿಯೊಬ್ಬ ಅರ್ಹ ನಾಗರಿಕನ ಮೂಲಭೂತ ಹಕ್ಕು. ಚುನಾವಣಾ ಇಲಾಖೆಯ ಹಿಂದಿನ ಆಡಳಿತಾತ್ಮಕ ಲೋಪಗಳು, ದಾಖಲೆಗಳ ಕೊರತೆ ಅಥವಾ ಜೀವನ ಪರಿಸ್ಥಿತಿಗಳ ಕಾರಣದಿಂದ ಯಾವುದೇ ಅರ್ಹ ಮತದಾರನ ಮತದಾನದ ಹಕ್ಕಿಗೆ ಧಕ್ಕೆಯಾಗಬಾರದು. ಎಸ್‌ಐಆರ್ ಪ್ರಕ್ರಿಯೆಯ ಯಶಸ್ಸು ಎಷ್ಟು ಹೆಸರುಗಳನ್ನು ತೆಗೆದುಹಾಕಲಾಗಿದೆ ಎಂಬುದರಿಂದಲ್ಲ; ಒಬ್ಬರೂ ಅರ್ಹ ಮತದಾರ ಅನ್ಯಾಯವಾಗಿ ಮತದಾನದ ಹಕ್ಕಿನಿಂದ ವಂಚಿತರಾಗದಂತೆ ಎಷ್ಟು ಪರಿಣಾಮಕಾರಿಯಾಗಿ ರಕ್ಷಿಸಲಾಗಿದೆ ಎಂಬುದರಿಂದಲೇ ಅಳೆಯಲ್ಪಡಬೇಕು. ಆದ್ದರಿಂದ ಚುನಾವಣಾ ಆಯೋಗವು 11 ದಾಖಲೆಗಳಲ್ಲಿ ಒಂದನ್ನೂ ಹೊಂದಿರದ ಅರ್ಹ ಮತದಾರರಿಗಾಗಿ ಪರ್ಯಾಯ ದಾಖಲಾತಿ ವಿಧಾನ, ಪರ್ಯಾಯ ಸಾಕ್ಷ್ಯದ ಮಾನದಂಡ ಮತ್ತು ದೇಶಾದ್ಯಂತ ಏಕರೂಪವಾಗಿ ಅನುಸರಿಸಬೇಕಾದ ಸ್ಪಷ್ಟ ಮಾರ್ಗಸೂಚಿಯನ್ನು ಸಾರ್ವಜನಿಕವಾಗಿ ಪ್ರಕಟಿಸಬೇಕಾಗಿದೆ.






