Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ನೆಲದನಿ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಮಾಹಿತಿ ಮಾರ್ಗದರ್ಶನ
    • ಆರೋಗ್ಯ
    • ಓ ಮೆಣಸೇ
    • ಕೃತಿ ಪರಿಚಯ
    • ಝಲಕ್
    • ಬುಡಬುಡಿಕೆ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಅಂತಿಮ ನ್ಯಾಯ ಯಾವುದು?

ಅಂತಿಮ ನ್ಯಾಯ ಯಾವುದು?

ನಾ. ದಿವಾಕರನಾ. ದಿವಾಕರ19 Oct 2026 10:36 AM IST
share
ಅಂತಿಮ ನ್ಯಾಯ ಯಾವುದು?

ಕಳೆದ ವರ್ಷ ಇತಿಹಾಸ ಪ್ರಸಿದ್ಧ ಮೈಸೂರು ದಸರಾ ಅದ್ಧೂರಿಯಾಗಿಯೇ ನಡೆದಿತ್ತು. ಸಾಂಸ್ಕೃತಿಕ ನಗರಿಯ ಸೌಂದರ್ಯವನ್ನು ಜಗತ್ತಿಗೇ ಪ್ರದರ್ಶಿಸುವ ಈ ನಾಡ ಹಬ್ಬ ಸಮಾಪ್ತಿಯಾಗುತ್ತಿರುವಂತೆಯೇ, ಮೈಸೂರು ಅರಮನೆಯಿಂದ ಕಣ್ಣಳತೆ ದೂರದಲ್ಲಿ ವಸ್ತುಪ್ರದರ್ಶನ ಮೈದಾನದಲ್ಲಿ ನಡೆದ ಒಂದು ಪೈಶಾಚಿಕ ಕೃತ್ಯ, ಅರಮನೆ ನಗರಿಯ ಸಾಮಾಜಿಕ ಸೌಂದರ್ಯವನ್ನೇ ಅಳಿಸಿಹಾಕಿತ್ತು. ದೂರದ ಉತ್ತರ ಕರ್ನಾಟಕದಿಂದ ದಸರಾ ಉತ್ಸವದಲ್ಲಿ ಬಲೂನು ಮಾರಿ ಜೀವನ ನಡೆಸಲು ಬಂದು ತನ್ನ ಕುಟುಂಬದೊಂದಿಗೆ ಜೋಪಡಿಯಲ್ಲಿ ನೆಲೆಸಿದ್ದ ಬಂದಿದ್ದ 10 ವರ್ಷದ ಬಾಲೆ ಭೀಕರ ಅತ್ಯಾಚಾರಕ್ಕೊಳಗಾಗಿ ಹತ್ಯೆಯಾಗಿದ್ದಳು. ಈ ಘಟನೆ ಅರಮನೆ ವಾಸಿಗಳಲ್ಲಾಗಲೀ, ರಾಜಕೀಯ ವಲಯದಲ್ಲಾಗಲೀ, ಸಾರ್ವಜನಿಕ ಸಂಘಟನೆಗಳ ನಡುವೆಯಾಗಲೀ ಅಷ್ಟೇನೂ ಸಂಚಲನ ಮೂಡಿಸಲಿಲ್ಲ. ಮಹಿಳಾ ಸಂಘಟನೆಗಳು ಮಾತ್ರ ಪ್ರತಿಭಟಿಸಿದ್ದವು.

ನಗರದಲ್ಲಿ ಸಕ್ರಿಯವಾಗಿರುವಂತೆ ಕಾಣುವ ಮೂರು ನಾಲ್ಕು ಮಾನವ ಹಕ್ಕು ಸಂಘಟನೆಗಳಿಗೂ ಈ ಘೋರ ಘಟನೆ ಮುಖ್ಯ ಎನಿಸಿರಲಿಲ್ಲ. ಆದರೆ ಸಹಜವಾಗಿ ಮಹಿಳಾ ಸಂಘಟನೆಗಳ ಜೋರು ಧ್ವನಿ ಆಡಳಿತ ವ್ಯವಸ್ಥೆಯನ್ನು ಎಚ್ಚರಿಸಿತ್ತು. ಲೌಕಿಕ ಬದುಕಿಗೆ ಕಣ್ತೆರೆಯುವ ಮುನ್ನವೇ ತಾನು ಹೊಟ್ಟೆ ಪಾಡಿಗಾಗಿ ಮಾರಾಟ ಮಾಡುತ್ತಿದ್ದ ಬಲೂನಿನಂತೆಯೇ (ಸದ್ದಿಲ್ಲದೆ) ಉಸಿರು ಕಳೆದುಕೊಂಡ ಈ ಬಾಲೆಗೆ ಮೈಸೂರಿನ ಪೊಕ್ಸೊ ಶೀಘ್ರಗತಿ ವಿಶೇಷ ನ್ಯಾಯಾಲಯ ಅಂತಿಮ ನ್ಯಾಯ ಒದಗಿಸಿದೆ. ನತದೃಷ್ಟ ಬಾಲೆಯ ಮೇಲೆ ರಾತ್ರಿ ವೇಳೆ ಅತ್ಯಾಚಾರ ಎಸಗಿ, ಆಕೆಯನ್ನು 29 ಬಾರಿ ಚಾಕುವಿನಿಂದ ಇರಿದು, ಹತ್ಯೆ ಮಾಡಿ ವಸ್ತುಪ್ರದರ್ಶನ ಮೈದಾನದ ಪಕ್ಕದಲ್ಲಿದ್ದ ಚರಂಡಿಗೆ ಎಸೆದು ಪರಾರಿಯಾಗಿದ್ದ ಆರೋಪಿಯನ್ನು 24 ಗಂಟೆಗಳ ಒಳಗೇ ಬಂಧಿಸಲಾಗಿತ್ತು. ಇದೀಗ ಈ ಅಪರಾಧಿ ಕಾರ್ತಿಕ್ ಎಂಬ ವಿಕೃತ ಕಾಮಿಗೆ ವಿಶೇಷ ನ್ಯಾಯಾಲಯ ಮರಣದಂಡನೆಯ ಶಿಕ್ಷೆ ವಿಧಿಸಿದೆ.

ಅಪರಾಧ ಮತ್ತು ಶಿಕ್ಷೆಯ ನಡುವೆಸಹಜವಾಗಿ ನ್ಯಾಯಕ್ಕಾಗಿ ಹೋರಾಡುವ ಮನಸ್ಸುಗಳಿಗೆ, ಅಂತಿಮ ನ್ಯಾಯಕ್ಕಾಗಿ ಹಪಹಪಿಸುವ ಸಂವೇದನಾಶೀಲ ಸಂಘಟನೆಗಳಿಗೆ ವಿಶೇಷ ನ್ಯಾಯಾಲಯದ ಈ ತೀರ್ಪು ಸಮಾಧಾನ ತಂದಿದೆ. ‘ಪ್ರಭುತ್ವಕ್ಕೆ ಅಥವಾ ವ್ಯವಸ್ಥೆಗೆ ಜೀವ ಕೊಡುವ ಜವಾಬ್ದಾರಿ ಇರುವುದೇ ಹೊರತು ಜೀವ ತೆಗೆಯುವ ಹಕ್ಕಿಲ್ಲ’ ಎಂಬ ಅಂತರ್‌ರಾಷ್ಟ್ರೀಯ ಮಾನವ ಹಕ್ಕು ಸಂಹಿತೆಯ ದೃಷ್ಟಿಯಿಂದ ಈ ಉಗ್ರ ಶಿಕ್ಷೆಗೆ ತಾತ್ವಿಕ ಆಕ್ಷೇಪ ಸಲ್ಲಿಸಬಹುದೇ ಹೊರತು, ಏನೂ ಅರಿಯದ ಹಸುಳೆಯ ಜೀವ ಹಿಸುಕಿದ ಕ್ರೌರ್ಯ ಮತ್ತು ಹಿಂಸೆಯ ದೃಷ್ಟಿಯಿಂದ ವಿರೋಧಿಸಲು ಸಾಧ್ಯವೇ ಇಲ್ಲ. ಮಾನವ ಹಕ್ಕು ಹೋರಾಟಗಳಲ್ಲಿ ಈ ಜಿಜ್ಞಾಸೆ ಸದಾ ಇದ್ದೇ ಇರುತ್ತದೆ. ಆದರೂ ತನ್ನ ಅಂತಿಮ ಗಳಿಗೆಯಲ್ಲಿ ಆ ಕೂಸು ಅನುಭವಿಸಿರಬಹುದಾದ ಯಾತನೆ, ನೋವು, ಉಸಿರುಗಟ್ಟಿದ ವೇದನೆ ಇವುಗಳನ್ನು ನೆನೆಸಿಕೊಂಡಾಗ ಅಪರಾಧಿ ಗಲ್ಲು ಶಿಕ್ಷೆಗೆ ಒಳಗಾದರೆ ತಪ್ಪೇನಿಲ್ಲ ಎನಿಸುತ್ತದೆ.

ನ್ಯಾಯಶಾಸ್ತ್ರದ ದೃಷ್ಟಿಯಿಂದ ಶಿಕ್ಷೆಗೊಳಗಾದ ವ್ಯಕ್ತಿಗೆ ಮೇಲ್ಮನವಿ ಸಲ್ಲಿಸುವ ಹಕ್ಕು ಇರುತ್ತದೆ. ಈ ಪ್ರಕರಣದಲ್ಲೂ ಅದು ಸಾಧ್ಯವಾಗಬಹುದು. ಮರಣದಂಡನೆಯನ್ನು ಜೀವಾವಧಿ ಶಿಕ್ಷೆಯಾಗಿ ಮಾರ್ಪಾಡು ಮಾಡಬಹುದು. ಅಂತಿಮ ನ್ಯಾಯದ ಪ್ರಶ್ನೆಯನ್ನು ಮುಂದಿಟ್ಟುಕೊಂಡು ಇಂತಹ ಪ್ರಕರಣಗಳನ್ನು ನೋಡಿದಾಗ, ಈ ಅಂತಿಮ ನ್ಯಾಯ ಸಂದಾಯವಾಗಬೇಕಾದ್ದು ಯಾರಿಗೆ ಎಂಬ ಪ್ರಶ್ನೆಯೂ ಮೂಡುತ್ತದೆ. ತಾನೇನು ಎಂಬ ಅರಿವು ಮೂಡುವ ಮುನ್ನವೇ ತನ್ನ ದೇಹವನ್ನು ಛಿದ್ರಗೊಳಿಸಿ, ಉಸಿರುಗಟ್ಟಿಸಿ ಗಟಾರಕ್ಕೆ ಎಸೆದ ವ್ಯಕ್ತಿಗೆ ಗಲ್ಲು ಶಿಕ್ಷೆಯಾಗುವುದು ಆ ನತದೃಷ್ಟ ಬಾಲೆಗೆ ತಿಳಿಯಲು ಸಾಧ್ಯವೇ? ಇದು ಭಾವಾತಿರೇಕ ಪ್ರಶ್ನೆಯಾದರೂ, ಪ್ರಜ್ಞಾವಂತ ಸಮಾಜ ಯೋಚಿಸಬೇಕಿರುವುದು ಇದೇ ದುರ್ಗತಿಗೆ ಒಳಗಾದ, ಒಳಗಾಗುತ್ತಿರುವ ಲಕ್ಷಾಂತರ ಬಾಲಕಿಯರ ಬಗ್ಗೆ. ಅಂತಿಮ ನ್ಯಾಯದ ಪ್ರಶ್ನೆ ಎದುರಾದಾಗ, ಬಲೂನು ಮಾರುವ ಬಾಲೆಯ ಪ್ರಕರಣದಲ್ಲೂ ಸಹ, ಶಿಕ್ಷೆಗೊಳಗಾಗಿರುವ ವ್ಯಕ್ತಿ ಈ ಹಿಂದೆ 2019ರಲ್ಲಿ ಬಾಲಕಿಯೊಬ್ಬಳ ಅತ್ಯಾಚಾರಕ್ಕೆ ಯತ್ನಿಸಿ ಆಕೆಯನ್ನು ನೀರಿನಲ್ಲಿ ಮುಳುಗಿಸಿ ಕೊಲ್ಲಲೆತ್ನಿಸಿದ್ದ. ಈ ಪ್ರಕರಣದಲ್ಲಿ ನಾಲ್ಕು ವರ್ಷ ಜೈಲು ಶಿಕ್ಷೆ ಅನುಭವಿಸಿ ಹೊರಬಂದ ಮೇಲೆ ಬಲೂನು ಮಾರುವ ಬಾಲೆ ಈತನ ವಿಕೃತಿಗೆ ಬಲಿಯಾಗಿದ್ದಳು.

ಸಾಮಾಜಿಕ ಚೌಕಟ್ಟಿನ ದ್ವಂದ್ವಗಳು

ಮೈಸೂರಿನ ಪ್ರಕರಣದಲ್ಲಿ ಅಂತಿಮ ತೀರ್ಪು ಪ್ರಕಟವಾಗುವ ದಿನ ಮೃತ ಬಾಲಕಿಯ ಕುಟುಂಬ ಸದಸ್ಯರು ನ್ಯಾಯಾಲಯದಲ್ಲಿ ಉಪಸ್ಥಿತರಿರಲಿಲ್ಲ. ಈ ಕುಟುಂಬ ನೂರಾರು ಕಿ.ಮೀ. ದೂರದಿಂದ ಪುನಃ ದಸರೆಯ ಜಾತ್ರೆಯಲ್ಲಿ ಬದುಕು ಕಟ್ಟಿಕೊಳ್ಳಲು ಬಂದಿರುವರೋ ಇಲ್ಲವೋ? ಹಾಗೆ ಬಂದಿದ್ದರೂ ತಮ್ಮ ಕುಟುಂಬದ ಸುಂದರ ಕುಡಿಯನ್ನು ಎಳೆಯ ಮೊಳಕೆಯಲ್ಲೇ ಕಳೆದುಕೊಂಡ ಪೋಷಕರಿಗೆ ಈ ಶಿಕ್ಷೆ ಸಾಂತ್ವನ ನೀಡಲು ಸಾಧ್ಯವೇ? ಭಾರತೀಯ ಸಂಸ್ಕೃತಿಯಲ್ಲಿ, ಧರ್ಮ ಸಂಹಿತೆಗಳಲ್ಲಿ ‘ಪುತ್ರ ಶೋಕಂ ನಿರಂತರಂ’ ಎಂಬ ನಾಣ್ಣುಡಿ ವ್ಯಾಪಕ ಬಳಕೆಯಲ್ಲಿದೆ. ಮಗನನ್ನು ಕಳೆದುಕೊಂಡ ತಂದೆ ತಾಯಿಯರ ನೋವು ಶಾಶ್ವತ ಎಂದು ಅರ್ಥೈಸಬಹುದಾದ ಈ ಪ್ರಾಚೀನ ತಿಳಿವಳಿಕೆಯಲ್ಲಿ ‘ಪುತ್ರಿ’ (ಮಗಳು) ಏಕಿಲ್ಲ ಎಂಬ ಪ್ರಶ್ನೆಗೆ ಸಮಾಜದಲ್ಲಿ ಉತ್ತರ ದೊರೆಯುತ್ತದೆ.

ಈ ಪಾರಂಪರಿಕ ತಾರತಮ್ಯವನ್ನು ವರ್ತಮಾನದಲ್ಲಿಟ್ಟು ನೋಡಿದಾಗ, ವೈಯಕ್ತಿಕವಾಗಿ, ವ್ಯಕ್ತಿಗತ ನೆಲೆಯಲ್ಲಿ ಹೆತ್ತವರಿಗೆ ಹೆಣ್ಣು ಮಕ್ಕಳನ್ನು ಕಳೆದುಕೊಂಡ ನೋವು ಎಷ್ಟೇ ಇದ್ದರೂ, ಬಾಲ್ಯಾವಸ್ಥೆಯಿಂದ ವೃದ್ಧಾಪ್ಯದವರೆಗೂ ಅತ್ಯಾಚಾರ, ಲೈಂಗಿಕ ಹಿಂಸೆ, ಕಿರುಕುಳ ಮತ್ತು ಕ್ರೂರ ಹತ್ಯೆಯನ್ನೂ ಎದುರಿಸುತ್ತಲೇ ಇರುವ ಹೆಣ್ಣು ಕುಲದ ಆಂತರ್ಯದ ವೇದನೆಗಳು ವಿಶಾಲ ಸಮಾಜದ ಪ್ರಜ್ಞೆಯನ್ನು ನಿರೀಕ್ಷಿತ ಮಟ್ಟದಲ್ಲಿ ಕದಡುತ್ತಿಲ್ಲ. ಬಲೂನು ಮಾರುವ ಬಾಲೆ ಎದುರಿಸಿದ ಹೃದಯ ಹಿಂಡುವ ವೇದನೆ ಸಾಂಸ್ಕೃತಿಕ ನಗರಿಯ ಸಮಾಜವನ್ನೂ ಅಷ್ಟಾಗಿ ಕದಡಲಿಲ್ಲ ಅಲ್ಲವೇ? ಈ ಸಾಮಾಜಿಕ ಮನೋಭಾವ ಮತ್ತು ಸಾಂಸ್ಕೃತಿಕ ಮನಸ್ಥಿತಿ ವಿಕಸಿತ ಭಾರತದ ಉದ್ದಗಲಕ್ಕೂ ಕಾಣಬಹುದಾದ ಕಟು ವಾಸ್ತವ. ದಿಲ್ಲಿಯ ಪೊಲೀಸರು ಪ್ರತಿಭಟನಾ ನಿರತ ಹೆಣ್ಣು ಮಕ್ಕಳನ್ನು ಹಿಂಸಿಸಲು ಕಂಡುಕೊಂಡಿರುವ ಹೊಸ ವಿಧಾನಗಳನ್ನು ಗಮನಿಸಿದಾಗ, ಈ ವ್ಯವಸ್ಥಿತ ಕ್ರೌರ್ಯ ಪರಿಚಯವಾಗುತ್ತದೆ.

ಹೆಣ್ಣು-ಅಪರಾಧ ಮತ್ತು ನ್ಯಾಯ

ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ಇತ್ತೀಚಿನ ವರದಿಯ ಅನುಸಾರ ಭಾರತದಲ್ಲಿ ಅತ್ಯಾಚಾರ ಪ್ರಕರಣಗಳಲ್ಲಿ ಶಿಕ್ಷೆ ವಿಧಿಸುವ ಪ್ರಮಾಣ: ಶೇ. 22.7ರಷ್ಟಿದೆ. ನ್ಯಾಯಾಲಯಗಳಲ್ಲಿ ವಿಚಾರಣೆಯಲ್ಲಿದ್ದ 2,03,067 ಪ್ರಕರಣಗಳ ಪೈಕಿ 4,464 ಪ್ರಕರಣಗಳಲ್ಲಿ ಶಿಕ್ಷೆ ವಿಧಿಸಲಾಗಿದೆ. ಕೊಲೆ ಪ್ರಕರಣಗಳಲ್ಲಿ ಶಿಕ್ಷೆ ವಿಧಿಸುವ ಪ್ರಮಾಣ: ಶೇ. 37.7ರಷ್ಟಿದ್ದು ವಿಚಾರಣೆಯಲ್ಲಿದ್ದ 2,72,198 ಪ್ರಕರಣಗಳ ಪೈಕಿ 7,181 ಪ್ರಕರಣಗಳಲ್ಲಿ ಶಿಕ್ಷೆ ವಿಧಿಸಲಾಗಿದೆ. ಇದು ಸಾಧ್ಯವಾಗಿರುವುದು ಕ್ಷಿಪ್ರಗತಿಯ ನ್ಯಾಯಾಲಯಗಳ ಸ್ಥಾಪನೆಯಿಂದ. ಇದೇ ಸಂಸ್ಥೆಯ ‘ಭಾರತದಲ್ಲಿ ಅಪರಾಧಗಳು’ ವರದಿಗಳು ಮತ್ತು ಇತ್ತೀಚಿನ ಸರಕಾರಿ ದತ್ತಾಂಶದ ಪ್ರಕಾರ, 2022ರಲ್ಲಿ 31,516 ಮತ್ತು 2023ರಲ್ಲಿ 29,670 ಅತ್ಯಾಚಾರ ಪ್ರಕರಣಗಳು ದಾಖಲಾಗಿದ್ದವು; ಇದಾದ ಬಳಿಕ, 2024ರಲ್ಲಿ ಭಾರತದಲ್ಲಿ 29,536 ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ. ಅಂದರೆ ಪ್ರತಿದಿನ ಸರಾಸರಿ 80ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗುತ್ತಿವೆ. 18 ವರ್ಷದೊಳಗಿನ ಬಾಲಕಿಯರ ಮೇಲಿನ ಅತ್ಯಾಚಾರ ಪ್ರಕರಣಗಳು ಕಳೆದ ದಶಕದಲ್ಲಿ ಗಣನೀಯವಾಗಿ ಏರಿಕೆಯಾಗಿದ್ದು, 2015ರಲ್ಲಿ 10,934ರಷ್ಟಿದ್ದ ಈ ಪ್ರಕರಣಗಳ ಸಂಖ್ಯೆ ಆನಂತರದ ದಶಕದಲ್ಲಿ, ಅಂದರೆ 2024ರಲ್ಲಿ 43,675ಕ್ಕೆ ತಲುಪಿದೆ.

ಸಾಂಸ್ಕೃತಿಕ ನಗರಿಯಲ್ಲಿ ಬಲಿಯಾದ ಬಲೂನು ಮಾರುವ ಬಾಲೆ ಈ ಸಾವಿರಾರು ಜೀವಗಳಲ್ಲಿ ಒಂದು. ಎನ್‌ಸಿಆರ್‌ಬಿ ಇತ್ತೀಚಿನ ವರದಿಯ ಪ್ರಕಾರ, ಇತ್ತೀಚಿನ ಒಂದು ವರ್ಷದಲ್ಲಿ ಮಹಿಳೆಯರ ವಿರುದ್ಧದ ಅಪರಾಧಗಳಿಗೆ ಸಂಬಂಧಿಸಿದ 4,45,256 ಪ್ರಕರಣಗಳು ದಾಖಲಾಗಿವೆ. ಇದು ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ.4ರಷ್ಟು ಹೆಚ್ಚಳವಾಗಿದೆ. ಇದರ ಪರಿಣಾಮವಾಗಿ, ಪ್ರಸ್ತುತ ರಾಷ್ಟ್ರೀಯ ಸರಾಸರಿಯು ಪ್ರತೀ ಗಂಟೆಗೆ ಸುಮಾರು 51 ಎಫ್‌ಐಆರ್‌ಗಳನ್ನು ಒಳಗೊಂಡಿದ್ದು, ಪ್ರತೀ ಒಂದು ಲಕ್ಷ ಮಹಿಳಾ ಜನಸಂಖ್ಯೆಗೆ 66.4 ಅಪರಾಧ ಪ್ರಕರಣಗಳ ದರವನ್ನು ಹೊಂದಿದೆ. ಎನ್‌ಸಿಆರ್‌ಬಿ ದತ್ತಾಂಶದ ಪ್ರಕಾರ, ಪತಿ ಅಥವಾ ಆತನ ಸಂಬಂಧಿಕರಿಂದ ಎಸಗಲಾದ ಕ್ರೌರ್ಯಕ್ಕೆ ಸಂಬಂಧಿಸಿದಂತೆ 1,33,000ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿವೆ; ಇದು ಮಹಿಳೆಯರ ವಿರುದ್ಧ ನಡೆಯುವ ಒಟ್ಟು ಅಪರಾಧಗಳಲ್ಲಿ ಸುಮಾರು ಶೇ. 31ರಷ್ಟಿದೆ. ದೇಶದ ಜಿಡಿಪಿ ವೃದ್ಧಿಗೆ ಹೋಲಿಸಿದರೆ ಇದನ್ನು Gross Domestic Attrocities (GOA) ಎಂದು ಲೆಕ್ಕ ಹಾಕಬಹುದು.

ವ್ಯವಸ್ಥೆಯ ಒಳಬಿರುಕುಗಳು

ಪಿತೃಪ್ರಧಾನತೆಯ ಬಿಗಿ ಹಿಡಿತ ಎಲ್ಲ ವಲಯಗಳಲ್ಲೂ ಮತ್ತಷ್ಟು ಬಿಗಿಯಾಗುತ್ತಿರುವ ಹೊತ್ತಿನಲ್ಲೇ ಹೆಣ್ಣು ಮಕ್ಕಳು ಹೆಚ್ಚಿನ ಪ್ರಮಾಣದಲ್ಲಿ ಅತ್ಯಾಚಾರ, ದೌರ್ಜನ್ಯಗಳಿಗೆ ಒಳಗಾಗುತ್ತಿರುವುದು ಭಾರತದ ಸಾಮಾಜಿಕ ಸಮೀಕರಣದಲ್ಲಿರುವ ಲಿಂಗಭೇದ ಮತ್ತು ಲಿಂಗತ್ವ ತಾರತಮ್ಯವನ್ನು ಎತ್ತಿ ತೋರಿಸುತ್ತಿದೆ. ಮೈಸೂರು ಪ್ರಕರಣದಲ್ಲಿ ಆರೋಪಿಗೆ ಗಲ್ಲು ಶಿಕ್ಷೆಯಾಗಿರುವುದನ್ನು ಸ್ವಾಗತಿಸುತ್ತಲೇ ನಮ್ಮ ಸಮಾಜ ಮಹಿಳಾ ದೌರ್ಜನ್ಯಗಳಿಗೆ ಸಂಬಂಧಿಸಿದಂತೆ ‘ಅಂತಿಮ ನ್ಯಾಯದ’ ಹಂತವನ್ನು ತಲುಪಿದೆಯೇ ಎಂದು ಯೋಚಿಸಬೇಕಿದೆ. ಧಾರ್ಮಿಕ, ಆಧ್ಯಾತ್ಮಿಕ, ರಾಜಕೀಯ, ಶೈಕ್ಷಣಿಕ ಹೀಗೆ ಎಲ್ಲ ಮಗ್ಗುಲುಗಳಲ್ಲೂ ಅತ್ಯಾಚಾರಿಗಳು-ದೌರ್ಜನ್ಯ ಎಸಗುವವರು ಪುರಾಣದ ರಕ್ತ ಬೀಜಾಸುರರ ಹಾಗೆ ಉಲ್ಬಣಿಸುತ್ತಲೇ ಇದ್ದಾರೆ. ಈ ವಿಪರ್ಯಾಸಗಳ ನಡುವೆ ಮೈಸೂರಿನ ಪೋಕ್ಸೋ ಶೀಘ್ರಗತಿ ವಿಶೇಷ ನ್ಯಾಯಾಲಯ ಒಂದು ಸಮಾಧಾನಕರ ತೀರ್ಪು ನೀಡಿರುವುದು ಸ್ವಾಗತಾರ್ಹ.

ತಮ್ಮ ಮನೆಯ ಹೆಣ್ಣು ಮಗುವಿನ ಕ್ರೂರ ಸಾವು ಮತ್ತು ಈ ಸಾವಿಗೆ ಕಾರಣನಾದ ವ್ಯಕ್ತಿಯ ಗಲ್ಲು ಶಿಕ್ಷೆ, ಇವೆರಡನ್ನೂ ಮಾನಸಿಕ ತಕ್ಕಡಿಯಲ್ಲಿಟ್ಟು ತೂಗಿದಾಗ, ಹೆತ್ತೊಡಲು ಹೇಗೆ ಯೋಚಿಸಬಹುದು? ಈ ಶಿಕ್ಷೆಯನ್ನು ಸಂಭ್ರಮಿಸುವುದೋ ಅಥವಾ ಕೂಸಿನ ಸಾವನ್ನು ನೆನೆದು ದುಃಖಿಸುತ್ತಲೇ ಇರುವುದೋ? ಇದೇ ಜಿಜ್ಞಾಸೆಯನ್ನು ಸಮಾಜ ಹೇಗೆ ಎದುರಿಸಬೇಕು ? ಭಾರತದಲ್ಲಿ ಏರುಗತಿಯಲ್ಲಿ ದೌರ್ಜನ್ಯಕ್ಕೊಳಗಾಗುತ್ತಿರುವ ಹೆಣ್ಣು ಮಕ್ಕಳ ಸಂಖ್ಯೆಯನ್ನು ಕಡಿಮೆ ಮಾಡುವುದು ಹೇಗೆ ಎಂದು ಗಂಭೀರವಾಗಿ ಯೋಚಿಸಬೇಕಿದೆ. ಸಾಂಸ್ಕೃತಿಕ ನಗರಿಯಲ್ಲಿ ಮತ್ತೊಂದು ಬಲೂನು ಮಾರುವ ಕೂಸು ಬಲಿಯಾಗದಿರುವಂತೆ ಎಚ್ಚರ ವಹಿಸಬೇಕಿದೆ. ಇದು ಪ್ರಜ್ಞಾವಂತ-ಪ್ರಬುದ್ಧ ಎನಿಸಿಕೊಳ್ಳುವ ಸಮಾಜದ ನೈತಿಕ ಜವಾಬ್ದಾರಿ.

(ಲೇಖಕರು: ಹಿರಿಯ ಬರಹಗಾರರು, ಸಾಮಾಜಿಕ ಹೋರಾಟಗಾರರು)

Tags

judgmentMysuru Dasaraculturalcrimerape case
share
ನಾ. ದಿವಾಕರ
ನಾ. ದಿವಾಕರ
Next Story
X