ವ್ಯಕ್ತಿ ಮನೋಸಾಮರ್ಥ್ಯಗಳ ಮೇಲೆ ಕೋವಿಡ್ ಪರಿಣಾಮ?

ಈಗಾಗಲೇ ಇಂತಹ ಪ್ರಶ್ನೆಗಳನ್ನು ಕೇಳಿರುವುದು, ಉತ್ತರಿಸಿರುವುದು ಆಗಿ ಹೋಗಿದೆ. ಆದರೂ ಈಗಲೂ ಕೆಲ ಸನ್ನಿವೇಶಗಳಲ್ಲಿ ಈ ಪ್ರಶ್ನೆಗಳನ್ನು ಕೇಳುವ ಅಗತ್ಯ ಎದ್ದು ಕಾಣಿಸುತ್ತದೆ. ಅದರಲ್ಲಿಯೂ ಮಕ್ಕಳ ಶಿಕ್ಷಣ, ವ್ಯಕ್ತಿತ್ವದ ವಿಕಾಸ ಮತ್ತು ಹದಿಹರೆಯತನದಿಂದ ಮುಂದಿನ ಹಂತವನ್ನು ಪ್ರವೇಶಿಸಿರುವ ಯುವಜನರ ಮನೋ ಸಾಮರ್ಥ್ಯಗಳು ವ್ಯಕ್ತಗೊಳ್ಳುತ್ತಿರುವ ರೀತಿಯಲ್ಲಿ ಅದ್ಯಾವುದೋ ವಿಧದ ಹೊಸತನ ಅತಿ ಸ್ಪಷ್ಟವಾಗಿ ಗೋಚರಿಸುತ್ತದೆ. ಎಲ್ಲರಿಗೂ ತಿಳಿದಿರುವಂತೆ ಕೋವಿಡ್ ಕಾಲಘಟ್ಟದ ವಿದ್ಯಮಾನಗಳಲ್ಲಿ ಹೊಚ್ಚಹೊಸತನವಾಗಿ ಹೊರಬಂದದ್ದು ವ್ಯಕ್ತಿಗಳ ನಡುವಿನ ಪರಸ್ಪರ ಸಂಪರ್ಕ ವಿಧಿಗಳು. ಅಂತರ ಕಾಪಾಡಿಕೊಳ್ಳಬೇಕೆಂಬ ಸರಕಾರಿ ನಿಯಮ, ನಿಯಂತ್ರಣಗಳು ಬಹಳಷ್ಟು ಜನರ ಮಾತುಕತೆಗಳ ರೀತಿಯ ಮೇಲೆ ಬೀರಿರುವುದರ ಪರಿಣಾಮ ಇಂದು ಗೋಚರಿಸುತ್ತಿದೆ. ಆ ಸಮಯದಲ್ಲಿ ತಂತ್ರಜ್ಞಾನದ ಸಲಕರಣೆಗಳು ಸಂಪರ್ಕ ಮಾಧ್ಯಮದ ಬಹುದೊಡ್ಡ ಏಜೆಂಟ್ ಆಗಿ ಪರಿವರ್ತನೆಗೊಂಡಿತು. ಕೋವಿಡ್ ದಿನಗಳು ಆತ್ಮೀಯತೆ ಎನ್ನುವ ಭಾವಗಳನ್ನು ನುಡಿ ಮೂಲಕ, ಬರಹದ ಮೂಲಕ ವ್ಯಕ್ತಪಡಿಸುವುದರೊಂದಿಗೆ ಗೋಪ್ಯತೆ, ಆಪ್ತತೆಗಳಿಗೊಂದು ಸಂವಹನದ ಹೆದ್ದಾರಿಯನ್ನು ಸೃಷ್ಟಿಸಿತು. ಕೊರೋನ ಸಾಂಕ್ರಾಮಿಕ ರೋಗ ಇದ್ದಲ್ಲೇ ಸುಖ, ದುಃಖ, ಮೋಹ, ವಾತ್ಸಲ್ಯ, ಹಗೆತನದ ಭಾವಗಳು ನಿರ್ಭಿಡೆಯಿಂದ ಕ್ಷಣಮಾತ್ರದಲ್ಲಿ ವ್ಯಕ್ತಿ ಮಾನಸಿಕ ಮಟ್ಟಕ್ಕೆ ತಕ್ಕುದಾದ ರೀತಿಯಲ್ಲಿ ಪ್ರಕಟಗೊಳ್ಳುವಂತೆಯೂ ಮಾಡಿತು. ವ್ಯಾಕರಣದ ಚಿಹ್ನೆಗಳಂತೆ ಸಂದೇಶದ ಚಿಹ್ನೆಗಳು ಮಾತುಕತೆಗಳನ್ನು ಭಾವಾಂತರಗೊಳಿಸಿದ ಸ್ಮೈಲಿ ಶೈಲಿ ಜನಪ್ರಿಯಗೊಳ್ಳುವಂತಾದದ್ದು ಇಂತಹ ಸಮಯದಲ್ಲಿಯೇ. ಸಂದರ್ಭಕ್ಕೆ ಅನುಗುಣವಾದ ಉಚಿತ, ಅನುಚಿತ ಸ್ಮೈಲಿ ಸೂಚಿಗಳು ಕಲಹ, ಕೋಲಾಹಲಗಳಿಗೂ ಕಾರಣವಾಗುತ್ತಿರುವುದುಂಟು. ಇಂತಹ ಸಂಪರ್ಕದ ಹೊಸತನಗಳು ವ್ಯಕ್ತಿತ್ವದ ಲಕ್ಷಣ, ಅವಲಕ್ಷಣಗಳನ್ನು ಮತ್ತಷ್ಟು ರೂಪ-ವಿರೂಪಗೊಳಿಸುವುದಕ್ಕೂ ಕಾರಣವಾಗುತ್ತಿರಬಹುದು ಎಂದೆನಿಸುತ್ತದೆ. ಬಹುಶಃ ಇದಿನ್ನೂ ಬಳಕೆದಾರರ ಪರಾಮರ್ಶೆಗೆ ಒಳಗಾಗಿಲ್ಲ.
ಯುವಜನರ ಮನದಲ್ಲಿ ತಕ್ಷಣದ ಅಸಹನೆ, ಆಕ್ರೋಶ ಹೊರಬರುವಂತೆ ಮಾಡುತ್ತಿರುವಲ್ಲಿ ಇದೂ ಒಂದು ಪ್ರೇರಣೆಯೇ. ಉದಾಹರಣೆಗೆ ಹೇಳಬೇಕೆಂದರೆ ವ್ಯಕ್ತಿಗಳು ತಮ್ಮ ಸಾಮಾಜಿಕ ಮಾಧ್ಯಮಗಳ ಖಾತೆಯಲ್ಲಿ ಉಡಾಯಿಸುವ ಚಿತ್ರ, ಅಭಿಪ್ರಾಯಗಳಿಗೆ ಕೆಳಮುಖಿ ಹೆಬ್ಬೆಟ್ಟು ಬಿದ್ದರೆ ದಿನವಿಡೀ ಬೇಸರ, ತಳಮಳ. ಅದೇ ಮೇಲ್ಮುಖಿ ಹೆಬ್ಬೆಟ್ಟು ಇಡೀ ದಿನ ಉಲ್ಲಾಸ, ಉತ್ಸಾಹಕ್ಕೆ ಕಾರಣವಾಗಬಲ್ಲದು. ಕೇವಲ ಹೆಬ್ಬೆಟ್ಟಿನ ಮೂಲಕ ವ್ಯಕ್ತಿಯೊಬ್ಬರ ಹತಾಶೆ ಖಿನ್ನತೆ, ಪ್ರಾಣಹಾನಿಗೂ ಕಾರಣವಾಗಿರುವ, ಕಾರಣವಾಗುತ್ತಿರುವ ಪ್ರಕರಣಗಳು ಇಂದಿಗೂ ಸಾಮಾನ್ಯವೆ. ಇವು ವ್ಯಾಪಕವಾಗಿರುವುದು ಕೋವಿಡ್ ಕಾಲ ಮುಗಿದ ನಂತರದಲ್ಲಿ. ಇಂತಹ ಪ್ರಕರಣಗಳ ಜೊತೆಯಲ್ಲಿಯೇ ವ್ಯಕ್ತಿ ಸೃಜನಶೀಲತೆಯ ಲಕ್ಷಣಗಳು ಏರುತ್ತಿವೆ. ಮುಕ್ತ ಮನಸ್ಸಿನ ವಿಚಾರ, ಚಿಂತನೆಗಳಿಗೂ ವೇದಿಕೆ ಸೃಷ್ಟಿಯಾಗುತ್ತಿರುವುದರ ಸೂಚಿಯು ನಾನಾ ವಿಧಗಳಲ್ಲಿ ಗೋಚರಿಸುತ್ತಿವೆ. ಹೊಸ ಪೀಳಿಗೆಯು ಸಂವಹನ ಮಾಧ್ಯಮಗಳ ಮೂಲಕ ತಮ್ಮ ಸೈದ್ಧಾಂತಿಕ, ರಾಜಕೀಯ, ವೈಜ್ಞಾನಿಕ, ಸಾಂಸ್ಕೃತಿಕ ಮನೋಭಾವಗಳನ್ನು ಮುಕ್ತವಾಗಿ ಹಂಚಿಕೊಳ್ಳುತ್ತಿರುವುದು ಗಮನಾರ್ಹ. ಮೂವತ್ತರ ಆಸುಪಾಸಿನಲ್ಲಿರುವ ಅದೆಷ್ಟೋ ಯುವಜನರ ಅಪ್ರತಿಮ ಎನ್ನಬಹುದಾದ ಪ್ರತಿಭೆಗಳು ಹಿಂದೆಂದೂ ವ್ಯಕ್ತಗೊಳ್ಳದ ರೀತಿಯಲ್ಲಿಂದು ಹೊರಬರುತ್ತಿವೆ. ಉದಾಹರಣೆಗೆ ಭೋಜಪುರಿ ಹಾಡುಗಾರ್ತಿ ನೇಹಾ ರಾಥೋಡ್ ಸಾಮಾನ್ಯರ ಮನಮುಟ್ಟುವ ರೀತಿಯಲ್ಲಿ ರಾಜಕೀಯ ಪ್ರಜ್ಞೆಯನ್ನು ಮೂಡಿಸುವ ಕಲಾಸಾಮರ್ಥ್ಯದ ಪ್ರೇರಕಗಳಲ್ಲಿ ಕೋವಿಡ್ ಕಾಲಘಟ್ಟದ ಪ್ರಭಾವವಿದೆ ಎಂದೆನಿಸುತ್ತದೆ. ಹಾಗೆಯೇ ಧ್ರುವ್‌ರಾಠಿಯ ವಾಕ್ ಪ್ರತಿಭೆ ಕೇವಲ ರಾಜಕೀಯ ವಿಚಾರಗಳಿಗಷ್ಟೇ ಸೀಮಿತವಾಗಿರದೆ ಜನಸಾಮಾನ್ಯರಲ್ಲಿ ಆಸಕ್ತಿ ಕೆರಳಿಸಬಲ್ಲ ಕ್ಷೇತ್ರಗಳ ಬಗ್ಗೆಯೂ ವಿಚಾರ ಮಂಡಿಸುವುದರ ಮೂಲಕ ಸಮೂಹ ಮಾಧ್ಯಮಗಳಿಂದ ಬಹುಖ್ಯಾತಿ ಪಡೆದಿದೆ. ಇದೇ ರೀತಿಯಲ್ಲಿ ಜನರ ವೈಚಾರಿಕ ಸಾಮರ್ಥ್ಯ, ಚಿಂತನಾಶೀಲತೆಯನ್ನು ಹೆಚ್ಚಿಸುತ್ತಿರುವ ಅದೆಷ್ಟೋ ಕಿಡಿಗಳು ಯುವಜನರ ಪ್ರಜ್ಞೆಗೆ ತಟ್ಟಿದ್ದು ಕೋವಿಡ್ ನಂತರದಲ್ಲಿಯೇ.
ಇದರೊಂದಿಗೆ ಜನತೆಯಲ್ಲಿ ಸಂಕುಚಿತ ಭಾವನೆಗಳು, ಇತಿಹಾಸದ ಪ್ರಮುಖ ಸತ್ಯಗಳನ್ನು ತಿರುಚಿ, ತುಂಡರಿಸಿ ಜನಮನದಲ್ಲಿ ತುರುಕುತ್ತಿರುವ ಯುವಜನರ ಸಂಖ್ಯೆಯೂ ದೊಡ್ಡದಾಗಿಯೇ ಬೆಳೆಯುವಂತೆ ಇದೇ ಕಾಲಘಟ್ಟ ಮಾಡಿದೆ. ಪ್ರೀತಿ, ಪ್ರೇಮದ ಹೆಸರಿನಲ್ಲಿ ಮಾನವೀಯತೆ ಮರೆಮಾಚಿ ನಡೆಯುವಂತೆ ಮಾಡುವ ದುಷ್ಟಶಕ್ತಿಯ ಪ್ರೇರಣೆಗಳಿಗೆ ಒಳಗಾಗುತ್ತಿರುವವರ ಕುಕೃತ್ಯಗಳು ಹೊಸಹೊಸ ವಿರೂಪಗಳ ಮೂಲಕ ಸಮಾಜದ ಮಾನಸಿಕತೆಗೆ ಸವಾಲಾಗಿ ಪರಿಣಮಿಸುತ್ತಿದೆ. ಮೋಹ, ಅತಿ ಮೋಹಕತೆಯತ್ತ ಮನಸ್ಸು ಹರಿಯುವುದಕ್ಕೂ ವಿಪರೀತದ ಗೋಪ್ಯತೆ, ಮಿತಿಮೀರಿದ ಆವೇಶಗಳನ್ನು ಪ್ರಕಟಿಸುವ, ಅನುಮೋದಿಸುವ ಮನಕ್ಕೂ ಒಂದೆರಡು ವರ್ಷಗಳ ರೋಗಪರಿಸ್ಥಿತಿಯು ಕಾರಣವಾಗಿರಬಹುದಲ್ಲವೆ?
ಈ ಸನ್ನಿವೇಶಕ್ಕೆ ಸೂಕ್ತವಾದ ಇನ್ನೊಂದು ಸಂಗತಿ ಎಂದರೆ ಇಂದಿನ ಹದಿಹರೆಯರ ಮನಸ್ಸನ್ನು ಚುರುಕುಗೊಳಿಸಬೇಕಿರುವ ಶೈಕ್ಷಣಿಕ ವಾತಾವರಣವು ಸಂಪೂರ್ಣವಾಗಿ ಯಂತ್ರಗಳನ್ನು ಅವಲಂಬಿಸಿರುವಂತೆ ಕಾಣಬರುತ್ತಿದೆ. ನನಗೆ ತಿಳಿದಿರುವ ಮಧ್ಯಮ ವಯಸ್ಸಿನ ಶಿಕ್ಷಕರೊಬ್ಬರೊಂದಿಗೆ ಮಾತಾಡುತ್ತಿದ್ದಾಗ ತಿಳಿದುಬಂದ ವಿಷಯವಿದು. ಈಕೆ ಬೆಂಗಳೂರಿನ ಶ್ರೀಮಂತರ ಬಡಾವಣೆಯಲ್ಲಿರುವ ಶಿಕ್ಷಣ ಸಂಸ್ಥೆಯೊಂದರಲ್ಲಿ ಮಾತೃಭಾಷೆಯ ಶಿಕ್ಷಕಿ. ಅತ್ಯಂತ ನಿಷ್ಠೆಯಿಂದ ತನ್ನ ವೃತ್ತಿಗೌರವ ಮತ್ತು ಸಾಮರ್ಥ್ಯವನ್ನು ಕಾಪಾಡಿಕೊಂಡು ಬಂದವರು. ಆದರೆ ‘‘ಕೋವಿಡ್ ದಿನಗಳಲ್ಲಿ ಆರಂಭವಾದ ಕಂಪ್ಯೂಟರ್ ಆಧಾರಿತ ಶಿಕ್ಷಣ ಮತ್ತು ಶೈಕ್ಷಣಿಕ ವ್ಯವಹಾರಗಳು ಮಕ್ಕಳ ಮನಸ್ಸಿನೊಂದಿಗೆ ಬೆರೆಯಲು ಅಡ್ಡವಾಗುತ್ತಿವೆ’’ ಎನ್ನುತ್ತಾರೆ. ‘‘ಮಕ್ಕಳ ಮನಸ್ಸನ್ನು ಗೆಲ್ಲುವ, ಬದಲಾಯಿಸುವುದರ ಬದಲಿಗೆ ಶಾಲೆಯ ಆಡಳಿತ ಮಂಡಳಿಯ ನಿರೀಕ್ಷೆ, ನಿರೂಪಣೆಗಳನ್ನು ಪೂರೈಸುವುದಕ್ಕೆ ಅತ್ಯುತ್ತಮ ಶಾಲಾ ಅವಧಿ ಹೋಗಿಬಿಡುತ್ತಿದೆ. ಶಿಕ್ಷಕರ ಮನಸ್ಸಿನ ಮೇಲೆ ಆಗುತ್ತಿರುವ ಈ ನಮೂನೆಯ ಒತ್ತಡದಿಂದಾಗಿ ಮಕ್ಕಳ ಮಾನಸಿಕ ಬೆಳವಣಿಗೆಯ ಕಡೆ ಅಗತ್ಯ ಗಮನಹರಿಸುವುದಕ್ಕೆ ಸಾಧ್ಯವಾಗುತ್ತಿರುವುದು ಆಗೊಮ್ಮೆ ಈಗೊಮ್ಮೆ ಮಾತ್ರ. ಹದಿಹರೆಯದ ಮಕ್ಕಳ ಮನಸ್ಸಿನೊಂದಿಗೆ ಬಹಳ ಸುಲಭವಾಗಿ ಮತ್ತು ಪರಿಣಾಮಕಾರಿಯಾಗಿ ಸಂಪರ್ಕಿಸಬಲ್ಲ ಶಕ್ತಿ ಹೇರಳವಾಗಿರುವುದು ಉತ್ತಮ ಶಿಕ್ಷಕರಲ್ಲಿ ಮಾತ್ರ. ಆದರೆ ಇಂದು ಅಂತಹುದಕ್ಕೆ ಸಮಯ ಮತ್ತು ಅವಕಾಶಗಳು ಕಡಿಮೆಯಾಗುತ್ತಿರುವುದು ನಿಜವಾಗಿಯೂ ಕಳವಳಕಾರಿ ಬೆಳವಣಿಗೆ ಎನ್ನುತ್ತಾರೆ’’ ಇನ್ನೊಂದು ಶಾಲೆಯ ಪ್ರಿನ್ಸಿಪಾಲರು.
ಇವೆಲ್ಲದರ ಜೊತೆಯಲ್ಲಿಯೇ ಪೋಷಕರು, ಶಿಕ್ಷಕರ ಸ್ವಭಾವಗಳೂ ಕೋವಿಡ್ ಪ್ರಭಾವಕ್ಕೆ ಒಳಗಾಗಿರುವುದು ಕಂಡುಬರುತ್ತಿವೆ. ಮನೆಯಿಂದ ಕೆಲಸ ಮಾಡುವವರು, ಮನೆಯ ಹೊರಗಡೆಯೇ ಇದ್ದು ಕೆಲಸಮಾಡುವವರು ಸಾಮಾಜಿಕ ಮಾಧ್ಯಮಗಳ ಮೂಲಕ ಪಡೆಯುತ್ತಿರುವ ಮಾಹಿತಿಗಳು ವೈಯಕ್ತಿಕ ಆಚರಣೆ, ಅನುಷ್ಠಾನದ ಮೇಲೂ ಎಡವಟ್ಟಿನ ಪರಿಣಾಮಗಳನ್ನು ಬೀರುತ್ತಿವೆ. ಗೆಳೆತನದ ಹೆಸರಲ್ಲಿ ವಂಚನೆ, ಅನೈತಿಕ ನಡೆನುಡಿಗಳು ಹಣಕಾಸಿನ ಅತಿಮೋಹ, ಅಸಹನೀಯ ಕಾಮುಖತನದ ಅವಾಂತರಗಳಿಗೆ ಸಿಕ್ಕಿಕೊಂಡು ಬಳಲುತ್ತಿರುವವರ ಕುಕೃತ್ಯಗಳು ಸಾಮಾಜಿಕ ಸ್ವಾಸ್ಥ್ಯ ಹದಗೆಡುತ್ತಿರಬಹುದೇ ಎನ್ನುವ ಸಂದೇಹವನ್ನು ಹೆಚ್ಚಿಸುತ್ತಿದೆ.
ಇವೆಲ್ಲವೂ ಎಂದಿನಿಂದಲೂ ಇದ್ದದ್ದೇ ಎನ್ನುವ ಅಭಿಪ್ರಾಯಗಳನ್ನು ಕಡೆಗಣಿಸಿ ಯುವಜನರ ಮನೋಬಲ, ವಿಚಾರ ಮಾಡುವ ಲಕ್ಷಣಗಳು ಕುತಂತ್ರಗಳಿಗೆ ಒಳಗಾಗದ ರೀತಿಯ ಅರಿವು ಹೆಚ್ಚಿಸಬೇಕಿದೆ. ತಂತ್ರಜ್ಞಾನದ ಸೌಲಭ್ಯಗಳು ಖಂಡಿತವಾಗಿಯೂ ವ್ಯಕ್ತಿ ಮಾನಸಿಕತೆಯನ್ನು ಉತ್ತಮಗೊಳಿಸುವುದಕ್ಕೆ ಬೆಂಬಲ ನೀಡುತ್ತಿರುವುದರಲ್ಲಿ ಯಾವ ಸಂದೇಹವೂ ಇರದು. ಆದರೆ ಇದೇ ಸೌಲಭ್ಯಗಳು, ಅನಾಚಾರ, ಪರಾವಲಂಬನೆ ಮತ್ತು ಅಂಧಶ್ರದ್ಧೆಯನ್ನು ಬಹುಗಾಢವಾಗಿ ಮೂಡಿಸಬಲ್ಲದು ಎನ್ನುವ ಸೂಕ್ತ ತಿಳಿವಳಿಕೆಯನ್ನು ಪ್ರತಿಯೊಬ್ಬ ವ್ಯಕ್ತಿಯಲ್ಲಿಯೂ ಮೂಡಿಸಬೇಕಿದೆ. ಸಾಮಾಜಿಕ ಜಾಲತಾಣಗಳು, ಸಮೂಹ ಮಾಧ್ಯಮಗಳಲ್ಲಿ ಹರಿದು ಬರುತ್ತಿರುವ ಸುದ್ದಿ, ಸಂಗತಿಗಳನ್ನು ಕೊಂಚವಾದರೂ ತಾಳ್ಮೆಯಿಂದ ಅವಲೋಕಿಸುವುದರಿಂದ ಉಡಾಫೆ ಮಾಹಿತಿಗಳಿಗೊಂದು ಕಡಿವಾಣ ಹಾಕಿದಂತೆ. ಇದರಿಂದಾಗಿಯೇ ವ್ಯಕ್ತಿ ಮಾನಸಿಕತೆ ಮತ್ತಷ್ಟು ಬಲಿಷ್ಠಗೊಳ್ಳಬಹುದು. ವ್ಯಕ್ತಿಯ ಮನಸ್ಸು ಆರೋಗ್ಯವಾಗಿದ್ದಲ್ಲಿ ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಕಷ್ಟಕರವಲ್ಲ. ಅಂತೆಯೇ ಸಮಾಜದ ಮಾನಸಿಕ ಸ್ವಾಸ್ಥ್ಯ ಉತ್ತಮವಾಗಿದ್ದಲ್ಲಿ ಎಲ್ಲರ ಜೀವನವೂ ಸುಗಮ.







