ಭಾರತದ ಆರ್ಥಿಕತೆಯ ನೈಜ ಚಿತ್ರಣವೇನು?

ಇತ್ತೀಚೆಗೆ ಕೇಂದ್ರ ಸರಕಾರದ ಸಾಂಖ್ಯಿಕ ಸಚಿವಾಲಯವು 2026-27ರ ಮೊದಲ ತ್ರೈಮಾಸಿಕದಲ್ಲಿ (ಎಪ್ರಿಲ್‌ನಿಂದ ಜೂನ್‌ವರೆಗೆ) ಭಾರತದ ಆರ್ಥಿಕತೆಯು ಶೇ. 7.8ರ ದರದಲ್ಲಿ ಬೆಳೆದಿದೆ ಎಂದು ಘೋಷಿಸಿತು. ಹೊರಗಿನ ಜಗತ್ತಿನಲ್ಲಿ ಯುದ್ಧ ನಡೆಯುತ್ತಿರುವಾಗ, ಪೆಟ್ರೋಲ್-ಡೀಸೆಲ್ ಕಚ್ಚಾ ತೈಲದ ಬೆಲೆ ಏರುತ್ತಿರುವಾಗ ಮತ್ತು ಮುಂಗಾರು ಮಳೆ ಕೈಕೊಟ್ಟಿರುವಾಗ ಭಾರತ ಈ ಮಟ್ಟದಲ್ಲಿ ಬೆಳೆದಿದೆ ಎಂಬುದು ಕಾಗದದ ಮೇಲೆ ದೊಡ್ಡ ಸಾಧನೆಯಾಗಿ ಕಾಣಿಸುತ್ತದೆ. ರಿಸರ್ವ್ ಬ್ಯಾಂಕ್ (ಆರ್‌ಬಿಐ) ಅಂದಾಜಿಸಿದ್ದ ಶೇ. 7ರ ಬೆಳವಣಿಗೆಯನ್ನೂ ಇದು ಮೀರಿಸಿದೆ. ಹಾಗಾಗಿ ಸಂದೇಹ ಸಹಜ.
ಈ ಘೋಷಣೆಯ ಬೆನ್ನಲ್ಲೇ ದೇಶದ ಹಿರಿಯ ಅರ್ಥಶಾಸ್ತ್ರಜ್ಞರು, ಮಾಜಿ ಅಧಿಕಾರಿಗಳು ಮತ್ತು ಸರಕಾರದ ನಡುವೆ ಭಾರೀ ಚರ್ಚೆ ಶುರುವಾಗಿದೆ. ಈ ಶೇ. 7.8 ನಿಜವಾದ ಬೆಳವಣಿಗೆಯೇ ಅಥವಾ ಲೆಕ್ಕಾಚಾರದ ವಿಧಾನ ಬದಲಾಯಿಸಿ ತೋರಿಸಿದ ಕಾಗದದ ಜಾದುವೇ? ಎಂಬುದು ಪ್ರಶ್ನೆ. ಈ ಇಡೀ ವಿವಾದದ ಹಿಂದಿನ ಸರಳ ಸತ್ಯವೇನು ಎಂಬುದನ್ನು ಅರ್ಥಮಾಡಿಕೊಳ್ಳೋಣ.
ಜಿಡಿಪಿಯ ಮೂರು ಸರಳ ಪರಿಕಲ್ಪನೆಗಳು
ಈ ಚರ್ಚೆಯನ್ನು ಸರಿಯಾಗಿ ಗ್ರಹಿಸಲು ಮೂರು ಮೂಲಭೂತ ವಿಷಯಗಳನ್ನು ಸುಲಭವಾಗಿ ತಿಳಿದುಕೊಳ್ಳಬೇಕು:
1. ನಾಮಮಾತ್ರದ ಜಿಡಿಪಿ (Nominal GDP - ಚಾಲ್ತಿ ಬೆಲೆಗಳಲ್ಲಿ):
ಅಂದರೆ, ದೇಶದಲ್ಲಿ ಈ ವರ್ಷ ಉತ್ಪಾದನೆಯಾದ ಎಲ್ಲ ಸರಕು-ಸೇವೆಗಳನ್ನು ಇಂದಿನ ಮಾರುಕಟ್ಟೆ ಬೆಲೆಯಲ್ಲಿ ಲೆಕ್ಕ ಹಾಕುವುದು. ಉದಾಹರಣೆಗೆ, ಹೋದ ವರ್ಷ 10 ಚೀಲ ಅಕ್ಕಿ ಬೆಳೆದು ಕೆಜಿಗೆ ರೂ. 40ರಂತೆ ಮಾರಿದ್ದರೆ ಒಟ್ಟು ರೂ. 400. ಈ ವರ್ಷವೂ ಅದೇ 10 ಚೀಲ ಅಕ್ಕಿ ಬೆಳೆದು, ಬೆಲೆ ಏರಿಕೆಯಾಗಿ ಕೆಜಿಗೆ ರೂ. 50ಕ್ಕೆ ಮಾರಿದರೆ ಒಟ್ಟು ರೂ. 500. ಇಲ್ಲಿ ನಿಜವಾಗಿ ಹೆಚ್ಚುವರಿ ಅಕ್ಕಿ ಉತ್ಪಾದನೆಯಾಗದಿದ್ದರೂ, ಬೆಲೆ ಏರಿಕೆಯಿಂದಾಗಿ ಒಟ್ಟು ಮೌಲ್ಯ ಜಾಸ್ತಿಯಾಗಿ ಕಾಣಿಸುತ್ತದೆ.
2. ನೈಜ ಜಿಡಿಪಿ (Real GDP -ಸ್ಥಿರ ಬೆಲೆಗಳಲ್ಲಿ):
ಬೆಲೆ ಏರಿಕೆಯ (ಹಣದುಬ್ಬರದ) ಪ್ರಭಾವವನ್ನು ತೆಗೆದುಹಾಕಿ, ಕೇವಲ ವಸ್ತುಗಳ ನೈಜ ಉತ್ಪಾದನೆ ಎಷ್ಟು ಹೆಚ್ಚಾಗಿದೆ ಎಂದು ಲೆಕ್ಕ ಹಾಕುವುದು. ಇದಕ್ಕಾಗಿ ಒಂದು ನಿರ್ದಿಷ್ಟ ವರ್ಷವನ್ನು ‘ಮೂಲ ವರ್ಷ’ (Base Year- ಪ್ರಸ್ತುತ 2022-23) ಎಂದು ಇಟ್ಟುಕೊಳ್ಳಲಾಗುತ್ತದೆ. ಈ ವರ್ಷ ಪ್ರಕಟವಾಗಿರುವ ಶೇ. 7.8 ಬೆಳವಣಿಗೆಯು ಇಂತಹ ನೈಜ ಜಿಡಿಪಿಯಾಗಿದೆ.
3. ಜಿಡಿಪಿ ಡಿಫ್ಲೇಟರ್ (GDP Deflator):
ಇದು ಆರ್ಥಿಕತೆಯಲ್ಲಿನ ಬೆಲೆ ಏರಿಕೆಯನ್ನು ಅಳೆಯುವ ಒಟ್ಟಾರೆ ಮಾಪಕ. ನಾಮಮಾತ್ರದ ಜಿಡಿಪಿಯನ್ನು ನೈಜ ಜಿಡಿಪಿಯಿಂದ ಭಾಗಿಸಿದಾಗ ಇದು ಸಿಗುತ್ತದೆ. ಸರಳವಾಗಿ ಹೇಳಬೇಕೆಂದರೆ, ಇಡೀ ದೇಶದ ಒಟ್ಟಾರೆ ಹಣದುಬ್ಬರ ಎಷ್ಟು ಎಂಬುದನ್ನು ಇದು ತೋರಿಸುತ್ತದೆ.
ಮೊದಲಿಗೆ ಸರಕಾರ ಪ್ರಕಟಿಸಿರುವ ಪ್ರಮುಖ ಅಂಕಿಅಂಶಗಳನ್ನು ಗಮನಿಸೋಣ (ಎಪ್ರಿಲ್-ಜೂನ್ 2026-27)
ನೈಜ ಜಿಡಿಪಿ: ಶೇ. 7.8 (ಕಳೆದ ವರ್ಷ ಇದೇ ಅವಧಿಯಲ್ಲಿ ಶೇ. 6.9 ಇತ್ತು). ನಾಮಮಾತ್ರದ ಜಿಡಿಪಿ: ಶೇ. 10.3 (ಕಳೆದ ವರ್ಷ ಶೇ. 8.1 ಇತ್ತು).
ಬಂಡವಾಳ ಹೂಡಿಕೆ (GFCF): ಶೇ. 11.9ರಷ್ಟು ಏರಿಕೆ (ಜಿಡಿಪಿಯಲ್ಲಿ ಇದರ ಪಾಲು ಶೇ. 34.4 ಕ್ಕೆ ಏರಿದೆ).
ಸರಕಾರದ ಬಂಡವಾಳ ವೆಚ್ಚ: ಸುಮಾರು ಶೇ. 24ರಿಂದ 25ರಷ್ಟು ಹೆಚ್ಚಳ.
ಕಾರ್ಖಾನೆಗಳ ಉತ್ಪಾದನೆ: ಶೇ. 9.2ರಷ್ಟು ಭರ್ಜರಿ ಏರಿಕೆ.
ಸೇವಾ ವಲಯ: ಶೇ. 10ರಷ್ಟು ಜಿಗಿತ (ಹಣಕಾಸು ಮತ್ತು ಐಟಿಯಲ್ಲಿ ಶೇ. 12.1).
ಕೃಷಿ ವಲಯ: ಕೇವಲ ಶೇ. 3.6 (ಕಳೆದ ವರ್ಷ ಶೇ. 4.4 ಇತ್ತು).
ಗಣಿಗಾರಿಕೆ: ಶೇ. -2.4 (ಕುಸಿತ ಕಂಡಿದೆ).
ಬ್ಯಾಂಕ್ ಸಾಲಗಳು: ಶೇ. 18.3ರಷ್ಟು ಏರಿಕೆ (ದೊಡ್ಡ ಕೈಗಾರಿಕೆಗಳಿಗೆ ಸಾಲದ ಬೆಳವಣಿಗೆ ಶೇ. 2ರಿಂದ ಶೇ. 16.6ಕ್ಕೆ ನೆಗೆದಿದೆ).
ಖಾಸಗಿ ಬಳಕೆ (PFCE): ಶೇ. 7.1ರಷ್ಟು ಬೆಳೆದಿದ್ದರೂ, ಜಿಡಿಪಿಯಲ್ಲಿ ಇದರ ಪಾಲು ಶೇ. 55.6ಕ್ಕೆ ಇಳಿದಿದೆ.
ವಿವಾದ 1: ಶೇ. 7.8 ಬೆಳವಣಿಗೆಯೇ ಅಥವಾ ಕೇವಲ ಶೇ. 2.6 ಮಾತ್ರವೇ?
ಈ ವಿವಾದವನ್ನು ಹುಟ್ಟುಹಾಕಿದ್ದು ಕೇಂದ್ರದ ಮಾಜಿ ಹಣಕಾಸು ಕಾರ್ಯದರ್ಶಿ ಸುಭಾಷ್ ಚಂದ್ರ ಗರ್ಗ್. ಅವರ ಸರಳ ವಾದ ಹೀಗಿದೆ: ಹಳೆಯ ಲೆಕ್ಕದ ಪ್ರಕಾರ, ಕಳೆದ ವರ್ಷದ ಮೊದಲ ತ್ರೈಮಾಸಿಕದ ಜಿಡಿಪಿ ರೂ. 86 ಲಕ್ಷ ಕೋಟಿ ಇತ್ತು. ಸರಕಾರ ಹೊಸ ಪದ್ಧತಿ (2022-23 ಮೂಲ ವರ್ಷ) ತಂದ ನಂತರ, ಹೋದ ವರ್ಷದ ಅದೇ ತ್ರೈಮಾಸಿಕದ ಜಿಡಿಪಿಯನ್ನು ದಿಢೀರನೆ ರೂ. 80 ಲಕ್ಷ ಕೋಟಿಗೆ ಇಳಿಸಿತು (ಅಂದರೆ ರೂ. 6 ಲಕ್ಷ ಕೋಟಿಯಷ್ಟು ಕಡಿತ). ಈ ವರ್ಷದ ಜಿಡಿಪಿ ರೂ. 88.3 ಲಕ್ಷ ಕೋಟಿ ಬಂದಿದೆ. ಸುಭಾಷ್ ಚಂದ್ರ ಗರ್ಗ್ ಅವರ ಪ್ರಶ್ನೆ: ಸರಕಾರ ಹೋದ ವರ್ಷದ ಸಂಖ್ಯೆಯನ್ನು ರೂ. 80 ಲಕ್ಷ ಕೋಟಿಗೆ ಇಳಿಸಿದ್ದರಿಂದ ರೂ. 88.3 ಲಕ್ಷ ಕೋಟಿಗೆ ಹೋಲಿಸಿದಾಗ ಬೆಳವಣಿಗೆ ದೊಡ್ಡದಾಗಿ (ಶೇ. 10.3 ನಾಮಮಾತ್ರ, ಶೇ. 7.8 ನೈಜ) ಕಾಣಿಸುತ್ತಿದೆ. ಒಂದು ವೇಳೆ ಹಳೆಯ ರೂ. 86 ಲಕ್ಷ ಕೋಟಿಗೆ ಹೋಲಿಸಿದರೆ, ನಿಜವಾದ ಬೆಳವಣಿಗೆ ಕೇವಲ ಶೇ. 2.6 ಮಾತ್ರವಲ್ಲವೇ?
ಸರಕಾರದ ಸಮರ್ಥನೆ: ಸಾಂಖ್ಯಿಕ ಸಚಿವಾಲಯದ ಕಾರ್ಯದರ್ಶಿ ಸೌರಭ್ ಗರ್ಗ್ ಮತ್ತು ಸರಕಾರದ ಮುಖ್ಯ ಆರ್ಥಿಕ ಸಲಹೆಗಾರ ವಿ. ಅನಂತ ನಾಗೇಶ್ವರನ್ ಇದನ್ನು ಸಂಪೂರ್ಣವಾಗಿ ತಳ್ಳಿಹಾಕಿದ್ದಾರೆ. ಹಳೆಯ ಅಳತೆಗೋಲಿನಿಂದ ಅಳೆದ ಸಂಖ್ಯೆಯನ್ನು ಹೊಸ ಅಳತೆಗೋಲಿನ ಸಂಖ್ಯೆಯ ಜೊತೆ ಹೋಲಿಸುವುದು ಸೇಬು ಮತ್ತು ಕಿತ್ತಳೆ ಹಣ್ಣನ್ನು ಹೋಲಿಸಿದಂತೆ ತಪ್ಪು. ಹೊಸ ಪದ್ಧತಿಯಲ್ಲಿ ಹೆಚ್ಚು ನಿಖರವಾದ ಕಾರ್ಪೊರೇಟ್ ಮತ್ತು ಜಿಎಸ್‌ಟಿ ದತ್ತಾಂಶಗಳಿವೆ. ನಾವು ಈ ಬದಲಾವಣೆಯನ್ನು ಫೆಬ್ರವರಿಯಲ್ಲೇ ಮಾಡಿದ್ದೆವು, ಈಗ ಬೆಳವಣಿಗೆಯನ್ನು ಹಿಗ್ಗಿಸಿ ತೋರಿಸಲು ಮಾಡಿದ್ದಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ತಜ್ಞ ಪ್ರಣಬ್ ಸೇನ್ ಅವರ ಅಭಿಪ್ರಾಯ: ಮಾಜಿ ಮುಖ್ಯ ಸಂಖ್ಯಾಶಾಸ್ತ್ರಜ್ಞ ಪ್ರಣಬ್ ಸೇನ್ ಅವರು ಈ ಬಗ್ಗೆ ಹೇಳುವುದೇನೆಂದರೆ: ಸರಕಾರ ಸಂಖ್ಯೆಗಳನ್ನು ತಿರುಚಿಲ್ಲ. ಆದರೆ, ಹೋದ ವರ್ಷದ ಜಿಡಿಪಿಯಲ್ಲಿ ಶೇ. 7ರಷ್ಟು ದೊಡ್ಡ ಕಡಿತವಾಗಿರುವುದು ಅಚ್ಚರಿಯ ವಿಷಯ. ಇದರರ್ಥ ಕಳೆದ 13-14 ವರ್ಷಗಳಿಂದ ಭಾರತದ ಆರ್ಥಿಕತೆಯ ಗಾತ್ರವನ್ನು ನಿರಂತರವಾಗಿ ಹೆಚ್ಚಾಗಿಯೇ ಅಂದಾಜಿಸಲಾಗುತ್ತಿತ್ತು. ತ್ರೈಮಾಸಿಕ ಜಿಡಿಪಿಯನ್ನು ಲೆಕ್ಕ ಹಾಕಲು ಕೇವಲ ದೊಡ್ಡ ಕಂಪೆನಿಗಳ ಲಾಭವನ್ನು ನೋಡಿ, ಇಡೀ ಅಸಂಘಟಿತ ವಲಯಕ್ಕೂ ಅಷ್ಟೇ ಬೆಳೆದಿದೆ ಎಂದು ಊಹಿಸುವುದೇ ಇಂತಹ ಏರುಪೇರುಗಳಿಗೆ ಕಾರಣ. ಸರಕಾರ ಈ ಹೊಸ ವಿಧಾನ ಮತ್ತು ಹಳೆಯ ವಿಧಾನ ಎರಡನ್ನೂ ಜನರ ಮುಂದೆ ಮುಕ್ತವಾಗಿ ಇಡಬೇಕಿತ್ತು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ವಿವಾದ 2: ಮೈನಸ್ ಶೇ. 1.5 ಡಿಫ್ಲೇಟರ್ ಒಗಟು (ಹಣದುಬ್ಬರದ ಗೊಂದಲ)
ಸಾಮಾನ್ಯ ಮಾರುಕಟ್ಟೆಯಲ್ಲಿ ಸಗಟು ಹಣದುಬ್ಬರ (WPI) ಶೇ. 9ಕ್ಕಿಂತ ಹೆಚ್ಚಿರುವಾಗ, ಸರಕಾರದ ಜಿಡಿಪಿ ಡಿಫ್ಲೇಟರ್ (ಒಟ್ಟಾರೆ ಬೆಲೆ ಏರಿಕೆ) ಕೇವಲ ಶೇ. 2.5ರಷ್ಟಿದೆ. ಇನ್ನೂ ವಿಚಿತ್ರವೆಂದರೆ, ತಯಾರಿಕಾ ವಲಯದಲ್ಲಿ ವಸ್ತುಗಳ ಬೆಲೆ ಏರಿಕೆಯಾಗುತ್ತಿದ್ದರೂ ಅಲ್ಲಿನ ಡಿಫ್ಲೇಟರ್ ಮೈನಸ್ ಶೇ. 1.5 (ಶೇ.-1.5) ಎಂದು ಬಂದಿದೆ!
ಸರಕಾರ ಇದಕ್ಕೆ ನೀಡುವ ವಿವರಣೆ: ನಾವು ‘ದ್ವಿ-ಕುಗ್ಗಿಸುವಿಕೆ’ (Double Deflation) ಎಂಬ ಹೊಸ ವಿಧಾನ ಬಳಸಿದ್ದೇವೆ. ತಯಾರಿಕಾ ಕಂಪೆನಿಗಳು ಮಾರುವ ವಸ್ತುವಿನ ಬೆಲೆಗಿಂತ, ಅವು ಬಳಸುವ ಕಚ್ಚಾ ವಸ್ತುಗಳ (ಲೋಹ, ತೈಲ, ಹತ್ತಿ) ಬೆಲೆ ಅತ್ಯಂತ ವೇಗವಾಗಿ ಏರಿದಾಗ, ನೈಜ ಉತ್ಪಾದನೆಯ ಮೌಲ್ಯವು ನಾಮಮಾತ್ರದ ಮೌಲ್ಯಕ್ಕಿಂತ ಜಾಸ್ತಿ ಕಾಣಿಸುತ್ತದೆ. ಆದರೆ, ಕಚ್ಚಾ ವಸ್ತುಗಳ ಬೆಲೆಯ ನಿಖರವಾದ ದತ್ತಾಂಶಗಳು ಭಾರತದಲ್ಲಿ ಸರಿಯಾಗಿ ಲಭ್ಯವಿಲ್ಲದಿರುವಾಗ ಈ ಹೊಸ ಲೆಕ್ಕಾಚಾರ ಎಷ್ಟು ನಂಬಿಕಾರ್ಹ ಎಂಬ ಆತಂಕವನ್ನು ಹಲವು ಅರ್ಥಶಾಸ್ತ್ರಜ್ಞರು ವ್ಯಕ್ತಪಡಿಸಿದ್ದಾರೆ. ಹಳೆಯ ಪದ್ಧತಿಯಂತೆ ಲೆಕ್ಕ ಹಾಕಿದರೆ ನೈಜ ಬೆಳವಣಿಗೆಯು ಶೇ. 7.8 ಇರಲು ಸಾಧ್ಯವೇ ಇಲ್ಲ, ಅದು ಕೇವಲ ಶೇ. 4ರಿಂದ ಶೇ. 4.5 ಮಾತ್ರ ಇರಬಹುದು ಎಂದು ಕೆಲವು ಮಾರುಕಟ್ಟೆ ವಿಶ್ಲೇಷಕರು ಹೇಳುತ್ತಾರೆ.
ಶೇ. 7.8 ಜಿಡಿಪಿಯನ್ನು ಸಮರ್ಥಿಸುವವರು ಅದಕ್ಕೆ ಪೂರಕವಾಗಿ ಆರ್ಥಿಕತೆಯಲ್ಲಿ ಆಗಿರುವ ಕೆಲವು ಬೆಳವಣಿಗೆಗಳನ್ನು ಉಲ್ಲೇಖಿಸುತ್ತಾರೆ.
ವಾಹನ ಮಾರಾಟದ ಭರಾಟೆ: ಕಾರುಗಳ ಮಾರಾಟ ಶೇ. 26, ವಾಣಿಜ್ಯ ವಾಹನಗಳು ಶೇ. 20.3 ಮತ್ತು ದ್ವಿಚಕ್ರ ವಾಹನಗಳು ಶೇ. 18.3 ರಷ್ಟು ಏರಿಕೆಯಾಗಿವೆ.
ಬ್ಯಾಂಕ್ ಸಾಲಗಳ ಏರಿಕೆ: ಬ್ಯಾಂಕುಗಳಿಂದ ಸಾಲ ಪಡೆಯುವ ಪ್ರಮಾಣ ಶೇ. 18.3ರಷ್ಟು ಹೆಚ್ಚಾಗಿದೆ. ವಿಶೇಷವಾಗಿ ದೊಡ್ಡ ಕಾರ್ಖಾನೆಗಳು ಸಾಲ ಪಡೆಯುವುದು ಶೇ. 2ರಿಂದ ಶೇ. 16.6 ಕ್ಕೆ ಜಿಗಿದಿದೆ.
ಕಾರ್ಪೊರೇಟ್ ಲಾಭ: 3,200ಕ್ಕೂ ಹೆಚ್ಚು ಖಾಸಗಿ ಕಂಪೆನಿಗಳ ಮಾರಾಟ ಶೇ. 19.4 ಮತ್ತು ಕಾರ್ಯಾಚರಣಾ ಲಾಭ ಶೇ. 19.3 ರಷ್ಟು ಹೆಚ್ಚಾಗಿದೆ.
ಹೊಸ ಯೋಜನೆಗಳು: ಕೃತಕ ಬುದ್ಧಿಮತ್ತೆ (ಎಐ), ಡೇಟಾ ಕೇಂದ್ರಗಳು ಮತ್ತು ಹಸಿರು ಇಂಧನ ಕ್ಷೇತ್ರದಲ್ಲಿ ರೂ. 17.9 ಲಕ್ಷ ಕೋಟಿ ಮೌಲ್ಯದ ಹೊಸ ಯೋಜನೆಗಳು ಘೋಷಣೆಯಾಗಿವೆ.
ಈ ಇಡೀ ಚರ್ಚೆಯಲ್ಲಿ ಅತ್ಯಂತ ಮಹತ್ವದ ತಿರುವು ನೀಡಿದ್ದು ರಿಸರ್ವ್ ಬ್ಯಾಂಕಿನ ಮಾಜಿ ಗವರ್ನರ್ ಡಾ. ರಘುರಾಮ್ ರಾಜನ್ ಅವರ ಅಭಿಪ್ರಾಯ. ಅವರು ಈ ವಿವಾದವನ್ನು ಅಂಕಿಅಂಶಗಳ ಆಚೆಗೆ ತಂದು ಸಾಮಾನ್ಯ ಜನರ ಬದುಕಿಗೆ ಬೆಸೆದಿದ್ದಾರೆ: ‘‘ನಾವು ಕಾಗದದ ಮೇಲಿನ ಅಂಕಿಅಂಶಗಳ ಬಗ್ಗೆ ಎಷ್ಟು ಬೇಕಾದರೂ ಚರ್ಚಿಸಬಹುದು. ಆದರೆ ದೇಶದಲ್ಲಿ ಶೇ. 7.8 ಬೆಳವಣಿಗೆ ಆಗುತ್ತಿದ್ದರೆ, ನಮ್ಮ ಕೋಟ್ಯಂತರ ಯುವಜನರಿಗೆ ಗುಣಮಟ್ಟದ, ನೆಮ್ಮದಿಯ ಉದ್ಯೋಗಗಳು ಏಕೆ ಸಿಗುತ್ತಿಲ್ಲ? ದೇಶದ ಉದ್ಯಮಿಗಳು ಹೊಸ ಕಾರ್ಖಾನೆಗಳನ್ನು ಕಟ್ಟಿ ಜನರಿಗೆ ಕೆಲಸ ಕೊಡಲು ಏಕೆ ಮುಂದೆ ಬರುತ್ತಿಲ್ಲ?’’ ರಾಜನ್ ಅವರು ಎತ್ತುತ್ತಿರುವ ಪ್ರಶ್ನೆಗಳು ಗಂಭೀರವಾದವುಗಳೇ.
1. ಕೈತಪ್ಪುತ್ತಿರುವ ಯುವಶಕ್ತಿಯ ಲಾಭ: ಭಾರತದಲ್ಲಿ ದುಡಿಯುವ ವಯಸ್ಸಿನ ಯುವಕರ ಸಂಖ್ಯೆ ಪ್ರಪಂಚದಲ್ಲೇ ಅತಿ ಹೆಚ್ಚಿದೆ. ಈ ಸಮಯದಲ್ಲಿ ಅವರಿಗೆ ಒಳ್ಳೆಯ ಉದ್ಯೋಗ, ಸೂಕ್ತ ವೇತನ ಸಿಗದಿದ್ದರೆ, ದೇಶವು ಶ್ರೀಮಂತವಾಗುವ ಮುನ್ನವೇ ವೃದ್ಧಾಪ್ಯ ಮತ್ತು ಬಡತನದ ಕೂಪಕ್ಕೆ ಬೀಳುವ ಅಪಾಯವಿದೆ.
2. ಖಾಸಗಿ ಹೂಡಿಕೆಯ ಹಿಂಜರಿಕೆ: ಕಂಪೆನಿಗಳು ಸಾಲ ತೀರಿಸಿಕೊಂಡು ಲಾಭ ಮಾಡಿಕೊಳ್ಳುತ್ತಿವೆಯೇ ಹೊರತು, ಹೊಸ ಕಾರ್ಖಾನೆಗಳನ್ನು ಕಟ್ಟಿ ಹೊಸಬರಿಗೆ ಕೆಲಸ ಕೊಡುವ ಗ್ರೀನ್‌ಫೀಲ್ಡ್ ಯೋಜನೆಗಳಿಗೆ ದೊಡ್ಡ ಮಟ್ಟದಲ್ಲಿ ಕೈಹಾಕುತ್ತಿಲ್ಲ.
ಮುಖ್ಯ ಆರ್ಥಿಕ ಸಲಹೆಗಾರರು ಇದಕ್ಕೆ ಉತ್ತರಿಸುತ್ತಾ, ಕೋವಿಡ್ ಮತ್ತು ಎಐ ತಂತ್ರಜ್ಞಾನದಿಂದಾಗಿ ಜಗತ್ತಿನಾದ್ಯಂತ ಉದ್ಯೋಗ ಸೃಷ್ಟಿ ಕಷ್ಟವಾಗಿದೆ; ಸರಕಾರ ಬಜೆಟ್‌ನಲ್ಲಿ ಉದ್ಯೋಗ ಮತ್ತು ಇಂಟರ್ನ್‌ಶಿಪ್‌ಗೆ ಪ್ರೋತ್ಸಾಹ ನೀಡುತ್ತಿದೆಯಾದರೂ, ನಿರುದ್ಯೋಗದ ತೀವ್ರತೆಯನ್ನು ಮಾತ್ರ ಯಾರೂ ಅಲ್ಲಗಳೆಯಲು ಸಾಧ್ಯವಾಗಿಲ್ಲ.
ಸಾಮಾನ್ಯ ನಾಗರಿಕನಿಗೆ ಎದುರಾಗುತ್ತಿರುವ 4 ದೊಡ್ಡ ಸವಾಲುಗಳು
ಶೇ. 7.8 ಬೆಳವಣಿಗೆಯ ಹೊರತಾಗಿಯೂ ಸಾಮಾನ್ಯ ಭಾರತೀಯನ ದೈನಂದಿನ ಬದುಕು ಸುಲಭವಾಗಿಲ್ಲದಿರಲು ಪ್ರಮುಖ ಕಾರಣಗಳು:
1. ಶ್ರೀಮಂತರ ಬೆಳವಣಿಗೆ, ಬಡವರ ಸ್ಥಗಿತತೆ (K-Shaped Economy): ದುಬಾರಿ ಕಾರುಗಳು, ವಿಮಾನ ಪ್ರಯಾಣ, ಐಷಾರಾಮಿ ಫ್ಲ್ಯಾಟ್‌ಗಳ ಮಾರಾಟ ಜೋರಾಗಿದೆ. ಆದರೆ ಸಾಮಾನ್ಯ ಜನರು ದಿನಬಳಕೆಯ ವಸ್ತುಗಳನ್ನು ಕೊಳ್ಳುವ ಪ್ರಮಾಣ (ಖಾಸಗಿ ಬಳಕೆ) ಇಳಿಕೆಯಾಗಿದೆ. ನಗರಗಳಲ್ಲಿ ಶೇ. 75ಕ್ಕೂ ಹೆಚ್ಚು ಕುಟುಂಬಗಳು ತಮ್ಮ ನೈಜ ಆದಾಯ ಹೆಚ್ಚಿಲ್ಲ ಎಂದು ಹೇಳಿವೆ.
2. ಗ್ರಾಮೀಣ ಕೂಲಿ ಕುಸಿತ ಮತ್ತು ನರೇಗಾ ಹಿನ್ನಡೆ: ಹಳ್ಳಿಗಳಲ್ಲಿ ಕೂಲಿ ಏರಿಕೆಯಾಗಿದ್ದರೂ, ದಿನಸಿ ಬೆಲೆ ಏರಿಕೆಯ ಮುಂದೆ ಅದು ಸಾಲುತ್ತಿಲ್ಲ. ನರೇಗಾ ಯೋಜನೆಯ ನೈಜ ಕೂಲಿ ದರ ಶೇ. -3.0ರಷ್ಟು ಕುಸಿದಿದೆ. ಜೊತೆಗೆ ಈ ಯೋಜನೆಯಲ್ಲಿ ಉದ್ಯೋಗಗಳ ಪ್ರಮಾಣವೂ ಕುಸಿಯುತ್ತಿದೆ.
3. ಕೃಷಿ ಸಂಕಷ್ಟ ಮತ್ತು ಎಲ್ ನಿನೋ ಮಳೆ ಕೊರತೆ: ಆಗಸ್ಟ್ ತಿಂಗಳಲ್ಲಿ ಶೇ. 16ರಷ್ಟು ಮಳೆ ಕೊರತೆಯಾಗಿದ್ದು, ಕೃಷಿ ಬೆಳವಣಿಗೆ ಕೇವಲ ಶೇ. 3.6ಕ್ಕೆ ಕುಸಿದಿದೆ. ತರಕಾರಿ, ಬೇಳೆಕಾಳುಗಳ ಬೆಲೆ ಏರಿಕೆಯಾಗುತ್ತಿದ್ದು, ಹಳ್ಳಿಗಳ ಜನರ ಖರೀದಿ ಶಕ್ತಿ ಕುಂದಿದೆ.
4. ಪೆಟ್ರೋಲ್, ಡೀಸೆಲ್ ಮತ್ತು ಹಣದುಬ್ಬರದ ಬರೆ: ಪಶ್ಚಿಮ ಏಶ್ಯದ ಯುದ್ಧದಿಂದಾಗಿ ಕಚ್ಚಾ ತೈಲ ದರ ಬ್ಯಾರೆಲ್‌ಗೆ 80-87 ರಷ್ಟೇ ಇದೆ. ಕಂಪೆನಿಗಳು ತಮ್ಮ ವೆಚ್ಚ ಹೆಚ್ಚಾದಾಗ ವಸ್ತುಗಳ ಬೆಲೆ ಏರಿಸುತ್ತಿವೆ. ಹಬ್ಬದ ದಿನಗಳಲ್ಲಿ ಹಣದುಬ್ಬರ ಶೇ. 5.9ಕ್ಕೆ ಏರಬಹುದು ಎಂದು ಆರ್‌ಬಿಐ ಹೇಳಿರುವುದು ಬಡ್ಡಿದರಗಳು ಇಳಿಯುವುದಿಲ್ಲ ಎಂಬ ಆತಂಕ ತಂದಿದೆ.
ಅಂಕಿಅಂಶಗಳ ಆಚೆಗೆ ಬೇಕಿರುವುದು ಏನು?
ಭಾರತದ ಡಿಜಿಟಲ್ ಪಾವತಿ ವ್ಯವಸ್ಥೆ ಮತ್ತು ಬ್ಯಾಂಕಿಂಗ್ ಕ್ಷೇತ್ರಗಳು ಬಲವಾಗಿವೆ. ಆದರೆ, ಕೇವಲ ಶೇ. 7.8 ಎಂಬ ಹೆಡ್‌ಲೈನ್ ಸಂಖ್ಯೆಯನ್ನು ನೋಡಿ ಸರಕಾರ ಮೈಮರೆಯಬಾರದು. ಮೊದಲನೆಯದಾಗಿ, ಸರಕಾರ ತನ್ನ ಅಂಕಿಅಂಶಗಳ ಲೆಕ್ಕಾಚಾರದಲ್ಲಿ ಪೂರ್ಣ ಪಾರದರ್ಶಕತೆ ಕಾಪಾಡಿಕೊಳ್ಳಬೇಕು; ಇಲ್ಲವಾದರೆ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ದೇಶದ ದತ್ತಾಂಶಗಳ ವಿಶ್ವಾಸಾರ್ಹತೆ ಕುಸಿಯುತ್ತದೆ.
ಎರಡನೆಯದಾಗಿ, ಕೇವಲ ಯಂತ್ರಗಳು ಮತ್ತು ಕಂಪ್ಯೂಟರ್ ಆಧಾರಿತ ಡೇಟಾ ಸೆಂಟರ್‌ಗಳ ಹೂಡಿಕೆಯಿಂದ ದೇಶದ ನಿರುದ್ಯೋಗ ನೀಗದು. ಬಟ್ಟೆ ನೇಯ್ಗೆ, ಪಾದರಕ್ಷೆ, ಕಟ್ಟಡ ನಿರ್ಮಾಣ, ಆಹಾರ ಸಂಸ್ಕರಣೆಯಂತಹ ಹೆಚ್ಚು ಜನರಿಗೆ ಕೈತುಂಬಾ ಕೆಲಸ ಕೊಡುವ ಕೈಗಾರಿಕೆಗಳಿಗೆ ಜೀವ ತುಂಬಬೇಕು.
ಮೂರನೆಯದಾಗಿ, ದೇಶದ ಅರ್ಧಕ್ಕೂ ಹೆಚ್ಚು ಜನರನ್ನು ಹೊಟ್ಟೆ ಹೊರೆಯುವ ಕೃಷಿ ಕ್ಷೇತ್ರವನ್ನು ಹವಾಮಾನ ವೈಪರೀತ್ಯಗಳಿಂದ ಕಾಪಾಡಬೇಕು.
ಆರ್ಥಿಕತೆಯ ಅಂತಿಮ ಪರೀಕ್ಷೆ ಇರುವುದು ಜಿಡಿಪಿ ಕೋಷ್ಟಕದ ಅಂಕಿಅಂಶಗಳಲ್ಲಲ್ಲ; ಅದು ಪ್ರತಿಯೊಬ್ಬ ನಾಗರಿಕನ ಕೈಯಲ್ಲಿರುವ ಉದ್ಯೋಗ, ಅವನ ಕೊಳ್ಳುವ ಶಕ್ತಿ ಮತ್ತು ಅಡುಗೆಮನೆಯ ನೆಮ್ಮದಿಯಲ್ಲಿದೆ.






