ಗುಜರಾತ್ ಮಾದರಿಯ ವಾಸ್ತವವೇನು?

ಇಡೀ ದೇಶಕ್ಕೆ ಮಾರಾಟವಾದ ಗುಜರಾತ್ ಮಾದರಿ ಕೇವಲ ರಾಜಕೀಯ ಬ್ರ್ಯಾಂಡಿಂಗ್ ಆಗಿ ಮಾರ್ಪಟ್ಟಿದೆ. ಎಚ್ಚರಿಕೆಯಿಂದ ನಿರ್ಮಿಸಲಾದ ನಿರೂಪಣೆ, ಚುನಾವಣಾ ಅವಶ್ಯಕತೆಯಿಂದ ಹುಟ್ಟಿದ ಕಥೆ ಅದು. ಆದರೆ ವಾಸ್ತವವೇನು ಎಂದು ನೋಡಿದಾಗ, ಅಭಿವೃದ್ಧಿ ಬರೀ ಸಂಖ್ಯೆಯಲ್ಲಿದೆಯೇ ಹೊರತು ಜನರ ಅಭಿವೃದ್ಧಿಯಾಗಿಲ್ಲ ಎಂಬುದು ಸ್ಪಷ್ಟವಾಗುತ್ತದೆ.
ಹೀಗಿರುವಾಗಲೇ, ಈಗ ಪಶ್ಚಿಮ ಬಂಗಾಳ ಕೂಡ ಗುಜರಾತ್ ಆಗಲಿದೆ ಎಂದು ಹೇಳಲಾಗುತ್ತಿದೆ. ಮತ್ತೊಂದು ಸುಳ್ಳಿನ ಕಂತೆಗೆ ಈ ಮಾತು ನಾಂದಿ ಹಾಡಿರುವಂತಿದೆ.
ಬಂಗಾಳದಲ್ಲಿ ಬಿಜೆಪಿ ಗೆಲುವಿನ ನಂತರ, ಪ್ರಧಾನಿ ನರೇಂದ್ರ ಮೋದಿ ಅವರು ಮತ್ತೊಮ್ಮೆ ಗುಜರಾತ್ ಮಾದರಿಯನ್ನು ಪ್ರಗತಿಯ ಮಾನದಂಡವಾಗಿ ಮುಂದಿಟ್ಟಿದ್ದಾರೆ. ಬಂಗಾಳ ಈಗ ಗುಜರಾತ್ ಆಗುತ್ತದೆ, ಗುಜರಾತ್ ಮಾದರಿ ಬಂಗಾಳದಲ್ಲಿ ಕಾಣಿಸುತ್ತದೆ ಎಂದಿದ್ದಾರೆ.
ಅದರೆ ಗುಜರಾತ್ ಮಾದರಿಯ ವಾಸ್ತವವೇನು?
ಗುಜರಾತ್ ಮಾದರಿಯ ನಿರಂತರ ಪ್ರಚಾರದ ಹೊರತಾಗಿಯೂ, ಗುಜರಾತ್ ಏನಾಗಿದೆ ಎಂದು ಕೇಳಬೇಕಾಗಿದೆ.
ಗುಜರಾತ್ ಮಾದರಿ ಎಂಬ ಬ್ರ್ಯಾಂಡಿಂಗ್ ಮತ್ತು ವಾಸ್ತವದ ನಡುವಿನ ಅಂತರವೇನು ಎಂಬ ಪ್ರಶ್ನೆ ಬಹಳ ಸಮಯದಿಂದಲೂ ಇದೆ.
ಗುಜರಾತ್ ಮಾದರಿಯನ್ನು ರಾಜಕೀಯ ಬ್ರ್ಯಾಂಡಿಂಗ್, ಮಾಧ್ಯಮ ನಿರೂಪಣೆಗಳು ಮತ್ತು ವೈಬ್ರಂಟ್ ಗುಜರಾತ್‌ನಂತಹ ಕಾರ್ಪೊರೇಟ್ ಶೃಂಗಸಭೆಗಳ ಮೂಲಕ ನಿರ್ಮಿಸಲಾಯಿತು.
ಗುಜರಾತ್ ಗಲಭೆ ನಂತರ ಮೋದಿ ವಿರುದ್ಧ ಅಂತರ್‌ರಾಷ್ಟ್ರೀಯ ಟೀಕೆಗಳು ಬರುವ ವಾತಾವರಣ ಸೃಷ್ಟಿಯಾಯಿತು. ಆಗ ಮೋದಿಯವರಿಗೆ ಹೊಸ ಇಮೇಜ್ ಅಗತ್ಯವಿತ್ತು. ಅಂಥ ಇಮೇಜ್ ಅನ್ನು ಸೃಷ್ಟಿಸುವಲ್ಲಿ ವೈಬ್ರಂಟ್ ಗುಜರಾತ್ ಶೃಂಗಸಭೆ ಪ್ರಮುಖ ಪಾತ್ರ ವಹಿಸಿದೆ.
ಪ್ರಮುಖ ಕೈಗಾರಿಕೋದ್ಯಮಿಗಳು ಭೇಟಿ ನೀಡುತ್ತಿದ್ದರು, ಒಪ್ಪಂದಗಳಿಗೆ ಸಹಿ ಹಾಕಲಾಗುತ್ತಿತ್ತು, ಗುಜರಾತ್‌ನಲ್ಲಿ ಶತಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡಲಾಗುವ ಬಗ್ಗೆ ಮಾಧ್ಯಮಗಳು ಬೊಬ್ಬೆ ಹೊಡೆಯಲು ಶುರು ಮಾಡಿದವು. ಆದರೆ ನಿಜವಾದ ಆಟ 2013-14ರಲ್ಲಿ ಪ್ರಾರಂಭವಾಯಿತು. ಆಗ ಲೋಕಸಭಾ ಚುನಾವಣೆಗೆ ಸಿದ್ಧತೆಗಳು ನಡೆದಿದ್ದಾಗ, ಗುಜರಾತ್ ಮಾದರಿಯನ್ನು ರಾಷ್ಟ್ರೀಯ ಚುನಾವಣಾ ಅಜೆಂಡಾ ಮಾಡಲಾಯಿತು.
ಸತ್ಯವೇನೆಂದರೆ, ಗುಜರಾತ್ ಮಾದರಿಯನ್ನು ವರ್ಷಗಳ ರಾಜಕೀಯ ಬ್ರ್ಯಾಂಡಿಂಗ್ ಮೇಲೆ ನಿರ್ಮಿಸಲಾಗಿತ್ತು. ಅದನ್ನು ಡೇಟಾದ ಆಧಾರದ ಮೇಲೆ ಪರೀಕ್ಷಿಸಬೇಕಾಗಿತ್ತು. ಆದರೆ ಮುಖ್ಯವಾಹಿನಿಯ ಮಾಧ್ಯಮಗಳು ಅಥವಾ ಹೆಚ್ಚಿನ ಅರ್ಥಶಾಸ್ತ್ರಜ್ಞರು ಆ ಕೆಲಸ ಮಾಡಲಿಲ್ಲ.
ಗುಜರಾತ್ ಮಾದರಿಯನ್ನು ಹೊಗಳಿದಾಗಲೆಲ್ಲಾ, ಮೊದಲು ನೆನಪಿಗೆ ಬರುವುದು ಜಿಡಿಪಿ ದರ. ಗುಜರಾತ್‌ನ ಆರ್ಥಿಕತೆ ದೇಶದಲ್ಲಿಯೇ ಅತ್ಯಂತ ವೇಗವಾಗಿ ಬೆಳೆಯುತ್ತಿದೆ, ಅದರ ಜಿಡಿಪಿ ಇತರ ರಾಜ್ಯಗಳನ್ನು ಮೀರಿಸಿದೆ ಎಂದು ಹೇಳಲಾಗುತ್ತದೆ. ಆದರೆ ವಾಸ್ತವ ಬೇರೆಯೇ ಇದೆ.
ಜಿಡಿಪಿಯಲ್ಲಿ ಗುಜರಾತ್‌ನ ಪಾಲನ್ನು ನೋಡಿದರೆ, 1993-94ರಿಂದ 2011-12ರವರೆಗಿನ ಅಂಕಿಅಂಶಗಳಲ್ಲಿ, ದೇಶದ ಒಟ್ಟು ಜಿಡಿಪಿಯಲ್ಲಿ ಗುಜರಾತ್‌ನ ಪಾಲು ಶೇ. 7 ಮತ್ತು 8ರ ನಡುವೆ ಇದೆ. ಇದು ಪ್ರಮುಖ ಜಿಗಿತವಲ್ಲ, ಐತಿಹಾಸಿಕ ಏರಿಕೆಯಲ್ಲ. ವಾಸ್ತವವಾಗಿ, ಮೊದಲ ದಶಕದ ಕೆಲ ವರ್ಷಗಳಲ್ಲಿ ಈ ಪಾಲು ಶೇ. 7ಕ್ಕಿಂತ ಕಡಿಮೆಯಾಗಿದೆ ಮತ್ತು 2011-12ರಲ್ಲಿ ಕಂಡುಬರುವ ಶೇ. 8ರ ಪ್ರಮಾಣ 1996-1997ರಲ್ಲಿ ಇದ್ದುದೇ ಆಗಿತ್ತು.
ಅಂದರೆ, ಗುಜರಾತ್ 15 ವರ್ಷಗಳ ಕಾಲ ಇದ್ದ ಸ್ಥಳದಲ್ಲೇ ಉಳಿದಿತ್ತು.
ಗುಜರಾತ್ ಅಸಾಧಾರಣ ಬೆಳವಣಿಗೆ ಕಂಡಿದೆ ಎಂದು ಹೇಳುತ್ತಿದ್ದುದೆಲ್ಲ ಸುಳ್ಳು ಎಂಬುದಕ್ಕೆ ಇದೊಂದೇ ಸಂಗತಿ ಸಾಕು.
ಎರಡನೆಯದಾಗಿ, ತಲಾ ಆದಾಯದ ಶ್ರೇಯಾಂಕ ಒಂದು ರಾಜ್ಯದ ನಿಜವಾದ ಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ಬಹುಶಃ ಸ್ಪಷ್ಟವಾದ ಮಾರ್ಗ.
ಗುಜರಾತ್ ನಿಜವಾಗಿಯೂ ಇತರ ರಾಜ್ಯಗಳಿಗಿಂತ ಮುಂದಿದ್ದರೆ, ಅದರ ತಲಾ ಆದಾಯದ ಶ್ರೇಯಾಂಕ ಸುಧಾರಿಸಬೇಕಿತ್ತು. ಆದರೆ ಗುಜರಾತ್ 1993-94ರಲ್ಲಿ 9ನೇ ಸ್ಥಾನದಲ್ಲಿತ್ತು. 2011-12ರಲ್ಲಿಯೂ ಅದೇ 9ನೇ ಸ್ಥಾನದಲ್ಲೇ ಇತ್ತು. ಹಾಗಾದರೆ, ಬೆಳವಣಿಗೆಯ ಬಗ್ಗೆ ಅಬ್ಬರದ ಹೇಳಿಕೆಗಳನ್ನು ಏಕೆ ನೀಡಲಾಯಿತು?
ಒಂದೇ ವರ್ಷದ ಅಥವಾ ಕಡಿಮೆ ಅವಧಿಯ ಬೆಳವಣಿಗೆಯ ದರವನ್ನು ಬಳಸಿ, ಜಿಡಿಪಿ ಸಿಕ್ಕಾಪಟ್ಟೆ ಏರಿದೆ ಎಂದು ಹೇಳಲಾಯಿತು. ಆದರೆ ಅದರ ಆಚೀಚಿನ ನಿಜವಾಗಿಯೂ ಕುಸಿತದ ಅಂಕಿಅಂಶವನ್ನು ಬೇಕೆಂತಲೇ ಮರೆಮಾಚಲಾಯಿತು.
ಬೆಳವಣಿಗೆಯ ದರದ ಬದಲು, ದೀರ್ಘಕಾಲದವರೆಗೆ ಶ್ರೇಯಾಂಕ ಮತ್ತು ಹಂಚಿಕೆಯನ್ನು ನೋಡಿದಾಗ, ಎಲ್ಲಾ ಮ್ಯಾಜಿಕ್ ಕಣ್ಮರೆಯಾಗುತ್ತದೆ.
ಗುಜರಾತ್ ರಾಷ್ಟ್ರೀಯ ಸರಾಸರಿಗಿಂತ ವೇಗವಾಗಿ ಬೆಳೆಯಲಿಲ್ಲ. ಅದರ ಶ್ರೇಯಾಂಕದಲ್ಲಿ ಯಾವುದೇ ಗಮನಾರ್ಹ ಸುಧಾರಣೆ ಇರಲಿಲ್ಲ. ಕಂಡುಬಂದಿದ್ದೆಲ್ಲವೂ ರಾಜ್ಯದ ಬೆಳವಣಿಗೆಯ ದರ ಮತ್ತು ಅದು ಮೊದಲು ಕೂಡ ಇತ್ತು.
ಇನ್ನೊಂದು ಪ್ರಮುಖ ವಿಷಯವೆಂದರೆ, ಗುಜರಾತ್ ಈಗಾಗಲೇ ಶ್ರೀಮಂತ ರಾಜ್ಯವಾಗಿತ್ತು. ದೇಶದ ಒಟ್ಟು ಜನಸಂಖ್ಯೆಯ ಕೇವಲ ಶೇ. 4.9 ಹೊಂದಿದ್ದರೂ, ಅದು ದೇಶದ ಒಟ್ಟು ಜಿಡಿಪಿಗೆ ಶೇ. 7.9 ಕೊಡುಗೆ ನೀಡಿದೆ. ಜನಸಂಖ್ಯೆಯ ಶೇ. 42ಕ್ಕಿಂತ ಹೆಚ್ಚು ನಗರವಾಸಿಗಳಾಗಿದ್ದರು. ಇದು ರಾಷ್ಟ್ರೀಯ ಸರಾಸರಿಗಿಂತ ಹೆಚ್ಚಿದೆ.
ಅಂದರೆ, ಗುಜರಾತ್ ಇದ್ದಕ್ಕಿದ್ದಂತೆ ಎತ್ತರಕ್ಕೇರಿದ ಹಿಂದುಳಿದ ರಾಜ್ಯವಾಗಿರಲಿಲ್ಲ. ಅದು ಈಗಾಗಲೇ ಮುಂದಿತ್ತು. ಆದರೆ, ಅದರ ಈಗಾಗಲೇ ಇದ್ದ ಬೆಳವಣಿಗೆಯನ್ನು ಮೋದಿ ನಾಯಕತ್ವದ ಪವಾಡ ಎಂದು ಬಿಂಬಿಸಲಾಯಿತು.
ಗುಜರಾತನ್ನು ಕೈಗಾರಿಕಾ ಶಕ್ತಿ ಕೇಂದ್ರ ಎಂದು ಕರೆಯಲಾಗುತ್ತದೆ.
ಗುಜರಾತ್‌ನ ಆರ್ಥಿಕತೆಯ ಶೇ. 37ರಷ್ಟು ಉದ್ಯಮದಿಂದ ಬರುತ್ತದೆ.
ಆದರೆ ರಾಷ್ಟ್ರೀಯ ಸರಾಸರಿ ಶೇ. 27.5ರಷ್ಟು ಮಾತ್ರ.
ಗುಜರಾತ್ ಉತ್ಪಾದನೆಯಲ್ಲಿ ಎರಡನೇ ಸ್ಥಾನದಲ್ಲಿದೆ, ಮಹಾರಾಷ್ಟ್ರದ ನಂತರ ಮತ್ತು ಅದರ ನೋಂದಾಯಿತ ಉತ್ಪಾದನೆಯ ಪಾಲು 1993-94 ರಲ್ಲಿ ಶೇ. 11ರಿಂದ 2011-12ರಲ್ಲಿ ಶೇ. 16ಕ್ಕೆ ಏರಿದೆ.
ಆದರೆ ವಾಸ್ತವ ಏನೆಂದರೆ, ಈ ಕೈಗಾರಿಕಾ ಬೆಳವಣಿಗೆಯ ಗಮನಾರ್ಹ ಭಾಗ ವಾಸ್ತವವಾಗಿ ಕೇವಲ ಎರಡು ಸಂಸ್ಕರಣಾಗಾರಗಳಿಗೆ ಸಂಬಂಧಿಸಿದೆ.
ಅವು ಜಾಮ್‌ನಗರದಲ್ಲಿರುವ ರಿಲಯನ್ಸ್‌ನ ಸಂಸ್ಕರಣಾಗಾರ ಮತ್ತು ಎಸ್ಸಾರ್ ಸಂಸ್ಕರಣಾಗಾರ. ಈ ಎರಡು ಕಾರ್ಖಾನೆಗಳು ಮಾತ್ರ ಗುಜರಾತ್‌ನಲ್ಲಿ ನೋಂದಾಯಿತ ಉತ್ಪಾದನೆಯ ಸಂಪೂರ್ಣ ಚಿತ್ರವನ್ನು ಕೊಡುತ್ತವೆ.
2000-2001ರಲ್ಲಿ, ಗುಜರಾತ್‌ನ ನೋಂದಾಯಿತ ಉತ್ಪಾದನೆಯಲ್ಲಿ ಪೆಟ್ರೋಲಿಯಂ ಸಂಸ್ಕರಣೆ ಪಾಲು ಕೇವಲ ಶೇ. 4 ಆಗಿತ್ತು. 2004ರ ಹೊತ್ತಿಗೆ ಅದು ಶೇ. 26.7ಕ್ಕೆ ಏರಿತು. ಐದು ವರ್ಷಗಳಲ್ಲಿ, ಒಂದು ಉದ್ಯಮ ಇಡೀ ಉತ್ಪಾದನಾ ಸನ್ನಿವೇಶವನ್ನು ಪರಿವರ್ತಿಸಿತು ಮತ್ತು ಈ ಪ್ರವೃತ್ತಿ ಮುಂದುವರಿಯಿತು. 2005ರ ಹೊತ್ತಿಗೆ ಈ ಪಾಲು ಶೇ. 32 ತಲುಪಿತು.
ಎರಡು ಸಂಸ್ಕರಣಾಗಾರಗಳ ಕಾರಣದಿಂದಾಗಿ ಒಂದು ರಾಜ್ಯವನ್ನು ಕೈಗಾರಿಕಾ ಶಕ್ತಿ ಕೇಂದ್ರ ಎಂದು ತಪ್ಪಾಗಿ ಬಿಂಬಿಸಲಾಗುತ್ತಿತ್ತು.
ಪೆಟ್ರೋಲಿಯಂ ಸಂಸ್ಕರಣೆ ಆಮದು ಅವಲಂಬಿತ ಉದ್ಯಮ. ಕಚ್ಚಾ ತೈಲ ಸಮುದ್ರದ ಮೂಲಕ ಬರುತ್ತದೆ ಮತ್ತು ಇಲ್ಲಿ ಸಂಸ್ಕರಿಸಿ ನಂತರ ರಫ್ತು ಮಾಡಲಾಗುತ್ತದೆ. ಇದಕ್ಕೆ ಸಾಕಷ್ಟು ಬಂಡವಾಳ ಮತ್ತು ಬಹಳಷ್ಟು ಯಂತ್ರೋಪಕರಣಗಳು ಬೇಕಾಗುತ್ತವೆ.
ಗುಜರಾತ್‌ನ ಉಳಿದ ಆರ್ಥಿಕತೆಯೊಂದಿಗೆ ಅದರ ಸಂಪರ್ಕ ಕಡಿಮೆ.
ಈ ಉದ್ಯಮ ಸ್ಥಳೀಯ ಕಚ್ಚಾ ವಸ್ತುಗಳ ಮೇಲೆ ಅವಲಂಬಿತವಾಗಿಲ್ಲ ಅಥವಾ ಇದು ಗುಜರಾತ್ ಜನರು ಬಳಸುವ ಉತ್ಪಾದನೆಯಲ್ಲ. ಇದು ರಾಜ್ಯದೊಳಗೆ ಇದ್ದರೂ, ರಾಜ್ಯಕ್ಕೆ ಇದರ ಸಂಪರ್ಕವಿಲ್ಲ.
ಪೆಟ್ರೋಲಿಯಂ ಅನ್ನು ತೆಗೆದುಹಾಕಿದರೆ, ಗುಜರಾತ್‌ನ ಇತರ ಉತ್ಪಾದನಾ ಕೈಗಾರಿಕೆಗಳ ಪಾಲು ವಾಸ್ತವವಾಗಿ ಕಡಿಮೆಯಾಗಿದೆ. ಅಂದರೆ, ದಾಖಲೆಗಳಲ್ಲಿ ದೊಡ್ಡದಾಗಿ ತೋರಿಸಲಾದ ಕೈಗಾರಿಕಾ ಬೆಳವಣಿಗೆ ಒಂದೇ ಉದ್ಯಮಕ್ಕೆ ಸಂಬಂಧಿಸಿದೆ ಮತ್ತು ಜವಳಿ, ರಾಸಾಯನಿಕಗಳು, ಔಷಧಗಳು ಮತ್ತು ಇಂಜಿನಿಯರಿಂಗ್ ಸರಕುಗಳಂಥ ಇತರ ಎಲ್ಲ ಉದ್ಯಮಗಳ ಕೊಡುಗೆ ಕಡಿಮೆಯಾಗಿದೆ.
ಗುಜರಾತ್ ಮಾದರಿ ಬಗ್ಗೆ ಬೊಬ್ಬೆ ಹೊಡೆಯುವಾಗ, ಗುಜರಾತ್ ಕೃಷಿಯಲ್ಲಿಯೂ ಗಮನಾರ್ಹ ಯಶಸ್ಸನ್ನು ಸಾಧಿಸಿದೆ ಎನ್ನಲಾಗುತ್ತದೆ.
2000ದ ದಶಕದಲ್ಲಿ ಗುಜರಾತ್‌ನ ಕೃಷಿ ಬೆಳವಣಿಗೆ ಇಡೀ ದೇಶವನ್ನು ಅಚ್ಚರಿಗೊಳಿಸಿತು ಎಂದು ಹೇಳಲಾಗುತ್ತದೆ. ಬಿಟಿ ಹತ್ತಿ ಕ್ರಾಂತಿ, ಸುಧಾರಿತ ನೀರಿನ ಬಳಕೆ ಮತ್ತು ಹೆಚ್ಚಿದ ರೈತರ ಆದಾಯದ ಬಗ್ಗೆ ಹೇಳಲಾಗುತ್ತದೆ.
ಆದರೆ ಇದು ಕೂಡ ಪೂರ್ಣ ಸತ್ಯವಲ್ಲ. 2001-02ರಿಂದ 2011-12 ರ ಅವಧಿಯಲ್ಲಿ ಕೃಷಿ ಜಿಡಿಪಿಯಲ್ಲಿ ಗುಜರಾತ್‌ನ ಪಾಲು ವಾಸ್ತವವಾಗಿ ಸುಮಾರು ಶೇ. 5ರಿಂದ 7ಕ್ಕೆ ಏರಿತು. ಇದನ್ನು ಹೆಚ್ಚಾಗಿ ಕೃಷಿ ಕ್ಷೇತ್ರದಲ್ಲಿನ ಪವಾಡ ಎಂದು ಹೇಳಲಾಗುತ್ತದೆ.
1990ರ ದಶಕದಲ್ಲಿ ಗುಜರಾತ್‌ನ ಕೃಷಿ ತೀವ್ರ ಕುಸಿತ ಕಂಡಿದೆ.
ಬರ, ಪ್ರವಾಹ ಮತ್ತು ನೀತಿ ನಿರ್ಲಕ್ಷ್ಯ ಆ ದಶಕದಲ್ಲಿ ರಾಜ್ಯದ ಕೃಷಿಗೆ ತೀವ್ರ ಹಾನಿ ಉಂಟುಮಾಡಿತು. 2000ದ ನಂತರ ಕಂಡುಬಂದ ಏರಿಕೆ ವಾಸ್ತವವಾಗಿ ಆ ಕುಸಿತಕ್ಕೆ ಪರಿಹಾರವಾಗಿತ್ತು. ಕಳೆದುಹೋದದ್ದನ್ನು ಮರಳಿ ಪಡೆಯಲಾಯಿತೇ ಹೊರತು, ಹೊಸದೇನನ್ನು ಸಾಧಿಸಲಿಲ್ಲ. ಆದರೆ ಇದನ್ನು ಪವಾಡ ಎಂದು ಬಿಂಬಿಸಲಾಯಿತು.
ಹತ್ತಿಗೆ ಸಂಬಂಧಿಸಿದಂತೆ, 2000ದ ನಂತರ ಗುಜರಾತ್‌ನಲ್ಲಿ ಬಿಟಿ ಹತ್ತಿ ವೇಗವಾಗಿ ಹರಡಿ ಹತ್ತಿ ಉತ್ಪಾದನೆ ಹೆಚ್ಚಿತು ಎಂಬುದು ನಿಜ. ಆದರೆ, ಇಲ್ಲಿ ಇನ್ನೊಂದು ಬದಿಯನ್ನು ಹೆಚ್ಚಾಗಿ ಕಡೆಗಣಿಸಲಾಗುತ್ತದೆ.
ಬಿಟಿ ಹತ್ತಿ ಬೆಳೆಯಲು ನೀರಿನ ಅವಶ್ಯಕತೆ ಬಹಳ ಇದೆ. ಗುಜರಾತ್‌ನಲ್ಲಿ ಇದಕ್ಕಾಗಿ ಅಂತರ್ಜಲ ಬರಿದು ಮಾಡಲಾಯಿತು. ಅನೇಕ ಪ್ರದೇಶಗಳಲ್ಲಿ ಅಂತರ್ಜಲ ಮಟ್ಟ ಅಪಾಯಕಾರಿ ಮಟ್ಟಕ್ಕೆ ಇಳಿಯಿತು.
2001ರಲ್ಲಿ ಮೋದಿ ಗುಜರಾತ್ ಮುಖ್ಯಮಂತ್ರಿಯಾದಾಗ, ರಾಜ್ಯದ ಒಟ್ಟು ಸಾಲ ಸುಮಾರು ರೂ. 53,000 ಕೋಟಿಗಳಷ್ಟಿತ್ತು.
2014ರಲ್ಲಿ ಅವರು ಪ್ರಧಾನಿಯಾಗಿ ದಿಲ್ಲಿಗೆ ಹೋದಾಗ, ರೂ. 1,65,000 ಕೋಟಿಗಳ ಸಾಲ ಗುಜರಾತ್ ಮೇಲಿತ್ತು.
ಅಂದರೆ, ಗುಜರಾತ್‌ನ ಸಾಲ 13 ವರ್ಷಗಳಲ್ಲಿ ಮೂರು ಪಟ್ಟು ಹೆಚ್ಚಾಗಿತ್ತು.
ಗುಜರಾತ್ ಮಾದರಿ ಇಷ್ಟೊಂದು ಯಶಸ್ವಿಯಾದರೆ, ಹೂಡಿಕೆಗಳು ಇಷ್ಟೊಂದು ಸುರಿಯುತ್ತಿದ್ದರೆ, ಕೈಗಾರಿಕೆಗಳು ಇಷ್ಟೊಂದು ಅಭಿವೃದ್ಧಿ ಹೊಂದುತ್ತಿದ್ದರೆ, ರಾಜ್ಯದ ಖಜಾನೆ ತುಂಬಬೇಕಿತ್ತು. ಆದರೆ ಅದರ ಬದಲಾಗಿ ಸಾಲ ಬೆಳೆದಿತ್ತು. ಅಂದರೆ ಅಭಿವೃದ್ಧಿ ಎಂದು ಸುಮ್ಮನೆ ಬೊಗಳೆ ಬಿಟ್ಟು, ಅದರ ಅಸಲಿ ಬಿಲ್ ಅನ್ನು ಜನಸಾಮಾನ್ಯರ ಮೇಲೆ ಹೊರಿಸಲಾಗಿತ್ತು.
ದೊಡ್ಡ ಕಾರ್ಪೊರೇಟ್‌ಗಳಿಗೆ ಅಗ್ಗದ ಭೂಮಿ, ಅಗ್ಗದ ನೀರು, ತೆರಿಗೆ ವಿನಾಯಿತಿ ನೀಡಲಾಯಿತು ಮತ್ತು ಇದೆಲ್ಲವನ್ನೂ ಸರಿದೂಗಿಸಲು, ಸರಕಾರ ಸಾಲ ಮಾಡುತ್ತಲೇ ಇತ್ತು.
ದೊಡ್ಡ ಕೈಗಾರಿಕೋದ್ಯಮಿಗಳನ್ನು ರೆಡ್ ಕಾರ್ಪೆಟ್ ಮೂಲಕ ವೈಬ್ರಂಟ್ ಗುಜರಾತ್ ಶೃಂಗಸಭೆಗೆ ಆಹ್ವಾನಿಸಲಾಯಿತು. ಭೂಮಿಯನ್ನು ಕಡಿಮೆ ಬೆಲೆಗೆ ನೀಡಲಾಯಿತು. ನೀರಿನಂತಹ ಸಂಪನ್ಮೂಲಗಳನ್ನು ಕೈಗಾರಿಕೆಗಳಿಗೆ ನೀಡಲಾಯಿತು. ಪರಿಸರ ನಿಯಮಗಳನ್ನು ನಿರ್ಲಕ್ಷಿಸಲಾಯಿತು ಮತ್ತು ಇದಕ್ಕೆಲ್ಲಾ ಪ್ರತಿಯಾಗಿ ಜನರಿಗೆ ಸಿಕ್ಕಿದ್ದು ಏನೂ ಇಲ್ಲ.
ಗುಜರಾತ್‌ನಲ್ಲಿ ನಿರುದ್ಯೋಗ ದರ ರಾಷ್ಟ್ರೀಯ ಸರಾಸರಿಗಿಂತ ಹೆಚ್ಚಿತ್ತು. ಶೇ. 80 ಇಂಜಿನಿಯರಿಂಗ್ ಪದವೀಧರರು ಸೇರಿದಂತೆ 60 ಲಕ್ಷ ಯುವಕರು ನಿರುದ್ಯೋಗಿಗಳಾದರು.
ಒಂದೆಡೆ ವೈಬ್ರಂಟ್ ಗುಜರಾತ್‌ನಲ್ಲಿ ಶತಕೋಟಿ ಒಪ್ಪಂದಗಳ ಅಬ್ಬರವಿದ್ದಾಗ, ಕೈಗಾರಿಕಾ ಶಕ್ತಿ ಕೇಂದ್ರ ಎಂದು ಕರೆದುಕೊಳ್ಳುವ ರಾಜ್ಯದಲ್ಲಿ ಇಂಜಿನಿಯರಿಂಗ್ ಪದವೀಧರರು ನಿರುದ್ಯೋಗಿಗಳಾಗಿದ್ದಾರೆ.
ಈ ವಿರೋಧಾಭಾಸ ಗುಜರಾತ್ ಮಾದರಿಯ ಅತಿದೊಡ್ಡ ವಿಪರ್ಯಾಸ ಮತ್ತು ಕಟುವಾಸ್ತವ.
ಅಷ್ಟೇ ಅಲ್ಲ, ಅದರೊಂದಿಗೆ ಸಣ್ಣ ಕೈಗಾರಿಕೆಗಳ ನಾಶವೂ ನಡೆದಿದೆ.
ಯಾವಾಗಲೂ ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ಗುಜರಾತ್ ಹೆಸರಾಗಿತ್ತು. ಸೂರತ್‌ನ ಜವಳಿ ಉದ್ಯಮ, ರಾಜ್‌ಕೋಟ್‌ನ ಇಂಜಿನಿಯರಿಂಗ್ ಘಟಕಗಳು ಮತ್ತು ಅಹಮದಾಬಾದ್‌ನ ಸಣ್ಣ ಕಾರ್ಖಾನೆಗಳು ಗುಜರಾತ್‌ನ ನಿಜವಾದ ಆರ್ಥಿಕ ಬೆನ್ನೆಲುಬಾಗಿದ್ದವು.
ಆದರೆ ಗುಜರಾತ್ ಮಾದರಿಯ ಸಮಯದಲ್ಲಿ ಅವುಗಳನ್ನು ನಿರ್ಲಕ್ಷಿಸಲಾಯಿತು. ಎಲ್ಲಾ ಗಮನವನ್ನು ದೊಡ್ಡ ಕಾರ್ಪೊರೇಟ್‌ಗಳ ಕಡೆ ನೀಡಲಾಯಿತು.
2016ರಲ್ಲಿ ನೋಟ್ ಬ್ಯಾನ್ ಮತ್ತು ನಂತರದ ಜಿಎಸ್‌ಟಿ ಅನುಷ್ಠಾನದಲ್ಲಿ ವಿಫಲವಾದಾಗ, ಈ ಸಣ್ಣ ಕೈಗಾರಿಕೆಗಳು ತೀವ್ರ ಹೊಡೆತ ತಿಂದವು. ಪರಿಣಾಮವಾಗಿ, 10 ವರ್ಷಗಳಲ್ಲಿ, ಗುಜರಾತ್ 60 ಸಾವಿರಕ್ಕೂ ಹೆಚ್ಚು ಸಣ್ಣ ಉದ್ಯಮಗಳು ಮುಚ್ಚಿವೆ. ಲಕ್ಷಾಂತರ ಕಾರ್ಮಿಕರು ಉದ್ಯೋಗ ಕಳೆದುಕೊಂಡಿದ್ದಾರೆ.
ಅಭಿವೃದ್ಧಿ ಹೊಂದಿದ ಗುಜರಾತ್‌ನಲ್ಲಿ 2,57,000 ಕ್ಕೂ ಹೆಚ್ಚು ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಜಿಡಿಪಿ ಬೆಳೆಯುತ್ತಿತ್ತು ಎನ್ನಲಾಗುವ ಹೊತ್ತಲ್ಲೇ ಗುಜರಾತ್‌ನಲ್ಲಿ ಮಕ್ಕಳು ಪೌಷ್ಟಿಕ ಆಹಾರವಿಲ್ಲದೆ ಬಳಲುತ್ತಿದ್ದರು.
ಇದು ಕೇವಲ ನೀತಿ ವೈಫಲ್ಯವಲ್ಲ; ಇದು ನೈತಿಕ ವೈಫಲ್ಯವೂ ಆಗಿದೆ.
ಗುಜರಾತ್ ಮಾದರಿಯ ಬೆಳವಣಿಗೆ ಸಾಮಾನ್ಯ ಜನರನ್ನು ತಲುಪಿಲ್ಲ ಎಂಬುದಕ್ಕೆ ಇದಕ್ಕಿಂತ ಸ್ಪಷ್ಟ ಪುರಾವೆ ಬೇಕಿಲ್ಲ.
ಪೌಷ್ಟಿಕಾಂಶ ದರ, ಶಿಶು ಮರಣ ದರ ಮತ್ತು ಜೀವಿತಾವಧಿ ಈ ಮೂರು ಅಂಶಗಳು ಒಂದು ರಾಜ್ಯದ ಸರಾಸರಿ ವ್ಯಕ್ತಿಯ ಜೀವನದ ಗುಣಮಟ್ಟವನ್ನು ಸೂಚಿಸುತ್ತವೆ. ಇದನ್ನು ದೈಹಿಕ ಜೀವನ ಗುಣಮಟ್ಟ ಸೂಚ್ಯಂಕ PಕಿಐI ಎನ್ನಲಾಗುತ್ತದೆ.
2001ರಲ್ಲಿ 17 ದೊಡ್ಡ ರಾಜ್ಯಗಳಲ್ಲಿ ಗುಜರಾತ್ 7ನೇ ಸ್ಥಾನದಲ್ಲಿತ್ತು ಮತ್ತು 2012ರಲ್ಲಿಯೂ 7ನೇ ಸ್ಥಾನದಲ್ಲೇ ಇತ್ತು. 10 ವರ್ಷಗಳಲ್ಲಿ ಒಂದೇ ಒಂದು ಸ್ಥಾನ ಬದಲಾಗಿರಲಿಲ್ಲ.
ಗುಜರಾತ್ ಮಾದರಿಯನ್ನು ಹೆಚ್ಚು ಪ್ರಚಾರ ಮಾಡಿದ ದಶಕದಲ್ಲಿ, ಗುಜರಾತ್‌ನ ಸರಾಸರಿ ವ್ಯಕ್ತಿಯ ಜೀವನ ಮಟ್ಟ ಇದ್ದಲ್ಲೇ ಇತ್ತು.
ದೇಶದ ಅತ್ಯಂತ ಶ್ರೀಮಂತ ರಾಜ್ಯಗಳಲ್ಲಿ ಒಂದೆಂದು ಪರಿಗಣಿಸಲಾದ ಗುಜರಾತ್, PಕಿಐIಯಲ್ಲಿ ಉತ್ತಮ ಸ್ಥಾನದಲ್ಲಿರಬೇಕಿತ್ತು.
ಕೇರಳ ಮೊದಲ ಸ್ಥಾನದಲ್ಲಿದೆ ಮತ್ತು ಕೇರಳದ ತಲಾ ಆದಾಯ ಗುಜರಾತ್‌ಗಿಂತ ಕಡಿಮೆ. ಇದರರ್ಥ ಗುಜರಾತ್‌ಗಿಂತ ಕಡಿಮೆ ಶ್ರೀಮಂತವಾಗಿರುವ ಅನೇಕ ರಾಜ್ಯಗಳು ತಮ್ಮ ನಾಗರಿಕರ ಜೀವನ ಗುಣಮಟ್ಟದ ವಿಷಯದಲ್ಲಿ ಗುಜರಾತ್‌ಗಿಂತ ಮುಂದಿವೆ.
2011ರಲ್ಲಿ ಗುಜರಾತ್‌ನ ಸಾಕ್ಷರತಾ ಪ್ರಮಾಣ ಸುಮಾರು ಶೇ. 79 ಆಗಿತ್ತು. ರಾಷ್ಟ್ರೀಯ ಸರಾಸರಿ ಶೇ. 74 ಇತ್ತು. ಉತ್ತಮ ಮಟ್ಟವೆನ್ನಿಸಿದರೂ, ಅಭಿವೃದ್ಧಿ ಹೊಂದಿದ ರಾಜ್ಯ ಹೊಂದಿರಬೇಕಾದ ಮಟ್ಟ ಇದಲ್ಲ.
ಅದೇ ಸಮಯದಲ್ಲಿ ಕೇರಳದ ಸಾಕ್ಷರತಾ ಪ್ರಮಾಣ ಶೇ. 94 ಆಗಿತ್ತು.
ಅಂದರೆ, ಇಡೀ ದೇಶಕ್ಕೆ ಮಾರಾಟವಾದ ಗುಜರಾತ್ ಮಾದರಿ ಕೇವಲ ರಾಜಕೀಯ ಬ್ರ್ಯಾಂಡಿಂಗ್ ಆಗಿ ಮಾರ್ಪಟ್ಟಿದೆ. ಎಚ್ಚರಿಕೆಯಿಂದ ನಿರ್ಮಿಸಲಾದ ನಿರೂಪಣೆ, ಚುನಾವಣಾ ಅವಶ್ಯಕತೆಯಿಂದ ಹುಟ್ಟಿದ ಕಥೆ ಅದು. ಆದರೆ ವಾಸ್ತವವೇನು ಎಂದು ನೋಡಿದಾಗ, ಅಭಿವೃದ್ಧಿ ಬರೀ ಸಂಖ್ಯೆಯಲ್ಲಿದೆಯೇ ಹೊರತು ಜನರ ಅಭಿವೃದ್ಧಿಯಾಗಿಲ್ಲ ಎಂಬುದು ಸ್ಪಷ್ಟವಾಗುತ್ತದೆ.
ಹೀಗಿರುವಾಗಲೇ, ಈಗ ಪಶ್ಚಿಮ ಬಂಗಾಳ ಕೂಡ ಗುಜರಾತ್ ಆಗಲಿದೆ ಎಂದು ಹೇಳಲಾಗುತ್ತಿದೆ. ಮತ್ತೊಂದು ಸುಳ್ಳಿನ ಕಂತೆಗೆ ಈ ಮಾತು ನಾಂದಿ ಹಾಡಿರುವಂತಿದೆ.






