ನೀರಿಲ್ಲದ ಮೇಲೆ ಚಿನ್ನದ ಸೂರಿದ್ದರೇನು ?

ನೀರು... ಈ ಭುವಿಯ ಸಕಲ ಜೀವ ಸಂಕುಲಗಳ ಬದುಕಿನ ಚೇತನಾ ಶಕ್ತಿ, ಆದರೂ ನೀರಿನ ಬಗ್ಗೆ ನಿರಾಸಕ್ತಿ! ನೀರೆಂದರೆ ಕ್ಷುಲ್ಲಕ. ಇನ್ನು ಕೇವಲ 20 ವರುಷದಲ್ಲಿ ಜಗತ್ತಿನ ಕೋಟ್ಯಂತರ ಜನರಿಗೆ ಕುಡಿಯಲು ಶುದ್ಧ ನೀರಿಲ್ಲದೇ ಭೀಕರ ಬರಗಾಲದ ಛಾಯೆ ವಿಶ್ವವನ್ನು ಆವರಿಸುತ್ತಿದೆ.
ಈಗಿನ ಯುವ ಸಮೂಹ ಕೋಕಾ ಕೋಲ, ಸ್ಪ್ರೈಟ್‌ಗೆ ನೀಡುವ ಮಹತ್ವವನ್ನು ನೀರಿಗೆ ಕೊಡುತ್ತಾ ಇಲ್ಲ.
ಹಿಂದೊಮ್ಮೆ ಮಾತು ಹೀಗಿತ್ತು, ಮುಂದೆ 3 ನೇ ಮಹಾಯುದ್ಧ ಆದರೆ ಅದು ನೀರಿಗಾಗಿ ಎಂದು?! ಆಗ ಈ ಮಾತಿಗೆ ಗೇಲಿ ಮಾಡಿದವರೂ ಇದ್ದಾರೆ. ಆದರೆ ನೀರಿಗಾಗಿ ಯುದ್ಧ ಅಗೋಚರವಾಗಿ ಬಹಳಷ್ಟು ವರುಷಗಳ ಹಿಂದೆಯೇ ಆರಂಭವಾಗಿ ಬಿಟ್ಟಿದೆ. ಸಿಂಧೂ ನದಿಗೆ ನಮ್ಮ ದೇಶ ಮತ್ತು ಪಾಕಿಸ್ತಾನಕ್ಕೆ, ಅದೇ ರೀತಿ ಬ್ರಹ್ಮ ಪುತ್ರ ನದಿಗೆ ನಮ್ಮ ಮತ್ತು ಚೀನಾ ದೇಶದ ನಡುವೆ ದ್ವೇಷದ ವಿವಾದವಿದೆ. ಕಾವೇರಿ ನದಿಗೆ ಕರ್ನಾಟಕ - ತಮಿಳು ನಾಡು, ಮುನ್ನ ಪೆರಿಯಾರ್ ನದಿಗೆ ಕೇರಳ - ತಮಿಳುನಾಡು, ಮಹಾದಾಯಿ ನದಿಗೆ ಕರ್ನಾಟಕ - ಗೋವಾ, ನರ್ಮದಾ ನದಿಗೆ ಮಹಾರಾಷ್ಟ - ಗುಜರಾತ್, ನಡುವೆ ನದಿ ನೀರಿನ ವ್ಯಾಜ್ಯಗಳಿವೆ. ಪೂಜ್ಯ ಭಾವನೆಯಿಂದ ಗೌರವಿಸಬೇಕಾದ ನದಿಗಳಲ್ಲಿ ವ್ಯಾಜ್ಯ ಹುಟ್ಟಿಸುತ್ತಾ ಇದ್ದೇವೆ ಮತ್ತು ತ್ಯಾಜ್ಯಗಳನ್ನು ಎಸೆದು ಮಲಿನ ಮಾಡುತ್ತಿರುವ ಜನತೆ ಮತ್ತು ರಾಜಕೀಯ ವ್ಯವಸ್ಥೆಗೆ ನದಿಗಳ ಮಹತ್ವ ಮತ್ತು ಅಗತ್ಯಗಳ ಬಗ್ಗೆ ಅರ್ಥವೇ ಆಗುವುದಿಲ್ಲ, ಅರ್ಥ ಆದರೂ ಅರ್ಥ ಆಗದವರಂತೆ ‘ಅರ್ಥ’ ಮಾಡುವವರ ನಡುವೆ ಮೌನವಾಗಿರುವುದೇ ನಮ್ಮ ದೊಡ್ಡ ದುರಂತ!?!
ಒಬ್ಬ ವ್ಯಕ್ತಿ ಬೆಳಗ್ಗೆ ಎದ್ದು ಹಲ್ಲುಜ್ಜುವಲ್ಲಿಂದ ರಾತ್ರಿ ಮಲಗುವ ತನಕ 100 ಲೀಟರ್ ನೀರನ್ನು ಬಳಸಿಕೊಳ್ಳುತ್ತಾನೆ. ಈ ಭುವಿಯ ಇಂಗುವ 3 ಪಟ್ಟು ಹೆಚ್ಚು ನೀರನ್ನು ಮನುಜ ಸಾಮ್ರಾಜ್ಯ ಬಳಸಿಕೊಳ್ಳುವುದರಿಂದಲೇ ಇಂದು ನೀರಿನ ಸಮಸ್ಯೆ ಹೆಚ್ಚಾಗುತ್ತಿರುವುದು.
ಈಗಿನ ರಾಜಕೀಯದ ನೀರಾತಿoಡಿಡಿಥಿ ವ್ಯವಸ್ಥೆ ಹೇಗಿದೆಯೆಂದರೆ ‘ಅಭಿವೃದ್ಧಿ’ ಎಂಬ ನೆಪದಲ್ಲಿ ಯಾವ ನದಿಯಲ್ಲಿ ಎಷ್ಟು ನೀರಿದೆ? ಯಾವ ನದಿಗೆ ಯಾವ ಯೋಜನೆ ಮಾಡಿದರೆ ಅದರ ಮೂಲ ಸ್ಥಾನಕ್ಕೆ ಯಾವ ರೀತಿಯ ಏಟು ಬೀಳಬಹುದು? ಯಾವ ಅಣೆಕಟ್ಟು ಕಟ್ಟಿದರೆ ನದಿಯ ಜೀವಂತಿಕೆಗೆ ಮಾರಣಾಂತಿಕ ಗಾಯ ಆಗಬಹುದು? ಎಂಬ ಯಾವ ಲೆಕ್ಕಾಚಾರವನ್ನೂ ಇಟ್ಟುಕೊಳ್ಳದೆ ನೀರು ಹರಿಸುತ್ತೇವೆ ಎನ್ನುವುದೇ ಈಗಿನ ನೀರಿನ ಸಮಸ್ಯೆಗಳಿಗೆ ಕಾರಣವಾಗುವುದು.
ನಗರಗಳು ಬಹಳ ವೇಗದಿಂದ ಬೆಳೆಯುತ್ತಿವೆ, ನಗರ ಬೆಳೆದಷ್ಟೋ ನೀರಿನ ಬೇಡಿಕೆ ಹೆಚ್ಚಾಗುತ್ತಿದೆ. ಇಲ್ಲಿ ನೀರಿನ ಅಸಮತೋಲನ ಆಗುತ್ತಿರುವುದೆಲ್ಲಿ ಅಂದರೆ ನದಿ ನೀರಿನ ಬೇಡಿಕೆ ಹೆಚ್ಚಾದಂತೆ ನೀರಾವರಿ ಯೋಜನೆ, ಕಾಮಗಾರಿ, ನೀರು ಶೇಖರಣೆ ಹೆಚ್ಚಾಗುತ್ತದೆ. ಆದರೆ ನದಿಗಳ ಮೂಲಸ್ಥಾನಗಳು ವರ್ಷದಿಂದ ವರ್ಷಕ್ಕೆ ಬಡಕಲಾಗುತ್ತಿವೆ, ನೀರಿನ ಹರಿವು ಕಡಿಮೆಯಾಗುತ್ತಿದೆ. ನದಿ ನೀರಿನ ಸೂಕ್ಷ್ಮ ಪ್ರದೇಶಗಳಲ್ಲಿ ಭೂ ಕುಸಿತ, ಮಣ್ಣಿನ ಸವಕಳಿ, ಕಾಡ್ಗಿಚ್ಚು ಗಳಾಗಿ ನದಿ ಮೂಲಕ್ಕೆ ಗೀರು ಗಾಯಗಳಾಗಿ ನದಿಗಳ ಮೆದುಳಿಗೇ ಏಟು ಬೀಳುತ್ತಿವೆ.
ವಿದ್ಯುತ್ ಉತ್ಪಾದನೆಗಾಗಿ ನದಿಗಳ ಅಲ್ಲಲ್ಲಿ ಮಿನಿ ಜಲ ವಿದ್ಯುತ್ ಯೋಜನೆಗಳನ್ನು ಮಾಡಿ ಗೀರು ಗಾಯಕ್ಕೆ ಮತ್ತೆ ಗಾಯವಾದಂತಾಯಿತು.
ನೀರಾವರಿ ಎಂಬ ‘ಬ್ರಾಂಡ್’ ಲೇಪನದಿಂದ ಕಳೆದ 14 ವರುಷಗಳಿಂದ ಕೇವಲ ಓಟು - ನೋಟು - ಸೀಟು ಎಂಬ ದೃಷ್ಟಿ ಕೋನದಲ್ಲಿ 25 ಸಾವಿರ ಕೋಟಿ ರೂ. ವೆಚ್ಚದ ಎತ್ತಿನಹೊಳೆ ಯೋಜನೆಯನ್ನೇ ಗಮನಿಸಿ. ಕೇವಲ ಯೋಜನೆಯ ಕಾಮಗಾರಿ ಮತ್ತು ಬಜೆಟ್ ನಲ್ಲಿ ದೊಡ್ಡ ಮೊತ್ತದ ಹಣದ ಹರಿವಿಗೆ ಪ್ರಾಧಾನ್ಯತೆ ನೀಡುವುದೇ ಹೊರತು ನೀರಿನ ಹರಿವಿನ ಬಗ್ಗೆ ಯಾವ ಚಿಂತನೆಯನ್ನೇ ಇಟ್ಟುಕೊಳ್ಳದ ನಮ್ಮ ವ್ಯವಸ್ಥೆ ನೀರಾವರಿ ಅಂತ ಹೇಳಿ ಇನ್ನೆಷ್ಟು ನದಿಗಳನ್ನು ಹಂತ, ಹಂತವಾಗಿ ನಿರ್ಜೀವ ಮಾಡಲಿದ್ದಾರೋ? ಇತ್ತ ನೇತ್ರಾವತಿ ನದಿಗೆ ಎತ್ತಿನ ಹೊಳೆ ಯೋಜನೆ ಬಲವಾದ ಏಟು ನೀಡುತ್ತಿದ್ದಂತೆಯೇ ಅತ್ತ ಅಘನಾಷಿನಿ, ಶರಾವತಿ, ಹೇಮಾವತಿ, ಗಂಗಾವಳಿ ಎಲ್ಲಾ ನದಿಗಳೂ ನಮ್ಮ ವ್ಯವಸ್ಥೆಯ ಅಸಂಬದ್ಧ ಯೋಜನೆಗಳಿಗೆ ಬಲಿಪಶು ವಾಗಿ ಕಣ್ಣೀರು ಹಾಕುತ್ತಿದ್ದು ಆ ಕಣ್ಣೀರು ನದಿ ನೀರಿನ ಜೊತೆ ಕಾಣದಂತೆ ಮಾಯವಾಗುತ್ತಿದೆ.
ಪಶ್ಚಿಮ ಘಟ್ಟದ ಅತೀ ಸೂಕ್ಷ್ಮ ತಾಣಗಳಾದ ನದಿ ಮೂಲ, ಹುಲ್ಲುಗಾವಲು, ಮಳೆಕಾಡನ್ನು ಸಂರಕ್ಷಣೆ ಮಾಡದೇ ಹೋದರೆ ಮುಂದೊಂದು ದಿನ ನಮ್ಮ ರಾಜ್ಯದ ಬಹುತೇಕ ನದಿಗಳು ಅತ್ತ ಜೀವನೂ ಇರದೇ ಇತ್ತ ಸಾಯಲೂ ಆಗದೇ ಸಂದಿಗ್ಧ ಪರಿಸ್ಥಿತಿಯಲ್ಲಿ ಮೌನವಾದರೆ ಎಂತಹ ಭೀಕರ ಬರಗಾಲದ ದುರಂತವನ್ನು ನಾವು ಅನುಭವಿಸಬೇಕಾಗುತ್ತದೆ.
ಇನ್ನು ನದಿಯ ಫಲಾನುಭವಿಗಳಾದ ಜನತೆ ನದಿಯನ್ನು ಕೇವಲ ತುಚ್ಛವಾಗಿ ನೋಡುವುದೆಂದರೆ ನದಿ ಎಷ್ಟು ನೆಮ್ಮದಿಯಾಗಿ ಉಳಿದೀತು? ನದಿಗಳೆಂದರೆ ಕಸದ ತೊಟ್ಟಿ. ತ್ಯಾಜ್ಯ ಎಸೆಯಲು, ಕೊಳಚೆ ನೀರು, ನಗರದ ಚರಂಡಿ ಬಿಡಲು ನದಿಗಳೇ ಬೇಕು ಅದೇ ನದಿಯ ನೀರು ಧಾರ್ಮಿಕ ಶ್ರದ್ಧಾ ಕೇಂದ್ರಗಳಲ್ಲಿ ದೇವರ ಅಭಿಷೇಕ, ತೀರ್ಥಕ್ಕೂ ಉಪಯೋಗವಾಗುವುದು ಎಂದು ಅದೇ ತೀರ್ಥ ಕುಡಿದ ಬುದ್ಧಿವಂತರಿಗೂ ಅರ್ಥವಾಗುವುದಿಲ್ಲ.
ಹೋದ ಮಳೆಗಾಲ ಅತೀ ಮಳೆ ಸುರಿದಿದ್ದು ಇಂದಿಗೂ ಮಳೆ ಬರುತ್ತಲೇ ಇದೆ. ಆದರೆ ಇಷ್ಟೆಲ್ಲಾ ಧಾರಾಳ ಮಳೆ ಬಂದಿದ್ದರೂ ಈಗ 40 ಡಿಗ್ರಿಗಿಂತಲೂ ತಾಪ ಹೆಚ್ಚಾಗುತ್ತಾ, ಇಡೀ ದೇಶವೇ ಬರಗಾಲದ ಹೊದಿಕೆಯನ್ನು ಮುಚ್ಚಿ ಕೊಂಡಿದೆ. ಹಾಗಾದರೆ ಇಷ್ಟೆಲ್ಲಾ ಮಳೆಯಾಗಿಯೂ ತಾಪ, ಬರಗಾಲದ ಕೊಡುಗೆ ಪಡೆದ ನಾವು ಮಳೆ ನೀರು ಹರಿದು ಹೋಗುವ ಮತ್ತು ಮಳೆ ನೀರು ಶೇಖರಣೆ (ಅಂತರ್ಜಲ)
ಆಗುವ ಪ್ರದೇಶಗಳನ್ನು ಕಾಂಕ್ರಿಟ್, ಕಾಮಗಾರಿ, ಕಡಿತ ಅಂತ ಹೇಳಿ ಕೆಡಿಸಿ ಬಿಟ್ಟಿದ್ದೇವೆ. ನದಿಗಳನ್ನು ಸಂರಕ್ಷಣೆ ಮಾಡುವ ಕಿಂಚಿತ್ ಯೋಚನೆಯಾದರೂ ಉಳಿದರೆ ಮುಂದಿನ ದಿನಗಳಲ್ಲಿ ಅಷ್ಟೊಂದು ಆಗದಿದ್ದರೂ, ಇಷ್ಟೊಂದು ಆಗುವುದನ್ನು ಮಾಡಿ ಈ ಭುವಿಯ ಹಸಿರು ಚಾದರ ಮತ್ತು ಹಂದರವನ್ನು ಕಟ್ಟಿಕೊಂಡು ಭದ್ರವಾಗಿರಬಹುದು.
ಕಟ್ಟ ಕಡೆಯದಾಗಿ ನೀರಿನ ರಕ್ಷಣೆಗೆ ಒಂದೇ ಒಂದು ಪರಿಹಾರ ಅದೇನೆಂದರೆ ನದಿ ಮೂಲಗಳನ್ನು ಅದರ ಪಾಡಿಗೆ ಬಿಟ್ಟು ಬಿಡಿ, ಅಲ್ಲಿ ಯಾವ ಮಾನವ ಹಸ್ತಕ್ಷೇಪವೂ ಆಗದಿರಲಿ.






