Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಹಿಂದುತ್ವದಲ್ಲಿ ಕುಕ್ಕೆ...

ಹಿಂದುತ್ವದಲ್ಲಿ ಕುಕ್ಕೆ ಸುಬ್ರಹ್ಮಣ್ಯಕ್ಕೊಂದು ನ್ಯಾಯ, ಧರ್ಮಸ್ಥಳಕ್ಕೊಂದು ನ್ಯಾಯವೇ?

ನವೀನ್ ಸೂರಿಂಜೆನವೀನ್ ಸೂರಿಂಜೆ20 Aug 2025 4:52 PM IST
share
ಹಿಂದುತ್ವದಲ್ಲಿ ಕುಕ್ಕೆ ಸುಬ್ರಹ್ಮಣ್ಯಕ್ಕೊಂದು ನ್ಯಾಯ, ಧರ್ಮಸ್ಥಳಕ್ಕೊಂದು ನ್ಯಾಯವೇ?
ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವಿರುದ್ಧ ಸಮರ ಸಾರಿದ್ದ ಬಿ.ಎಸ್. ಯಡಿಯೂರಪ್ಪ!

ಕುಕ್ಕೆ ಸುಬ್ರಹ್ಮಣ್ಯ ದೇಶದ ಪ್ರಮುಖ ದೇವಸ್ಥಾನಗಳಲ್ಲಿ ಒಂದು. ಹಿಂದೂ ಸಮುದಾಯದಲ್ಲಿ ಕುಕ್ಕೆ ಸುಬ್ರಹ್ಮಣ್ಯದ ‘ಭಕ್ತಿ ವ್ಯಾಪ್ತಿ’ ಧರ್ಮಸ್ಥಳಕ್ಕಿಂತ ವಿಸ್ತಾರವಾದುದು. ಧರ್ಮಸ್ಥಳ ಮಂಜುನಾಥೇಶ್ವರ ದೇವಸ್ಥಾನ ಎನ್ನುವುದು ‘ಐಚ್ಛಿಕ ಭಕ್ತಿ’ಯ ಕೇಂದ್ರ. ಇಷ್ಟಾರ್ಥ ಸಿದ್ದಿಯ ನಂಬಿಕೆಯಿಂದ ಪುರುಸೊತ್ತಿದ್ದವರು, ಪುರುಸೊತ್ತಾದಾಗ ಧರ್ಮಸ್ಥಳ ಮಂಜುನಾಥ ದೇವಸ್ಥಾನವನ್ನು ಭೇಟಿಯಾಗಿ ಪ್ರಾರ್ಥಿಸಬಹುದು. ಆದರೆ ಕುಕ್ಕೆ ಸುಬ್ರಹ್ಮಣ್ಯ ಹಾಗಲ್ಲ, ಕೋಟ್ಯಾಂತರ ಹಿಂದೂಗಳಿಗೆ ಹಲವು ‘ಕಡ್ಡಾಯವೆನಿಸಿಕೊಂಡ ಪೂಜಾ ವಿಧಿವಿಧಾನ’ಗಳನ್ನು ನೆರವೇರಿಸುವ ದೇವಸ್ಥಾನವದು.

ಸರ್ಪಸಂಸ್ಕಾರ-ನಾಗಪ್ರತಿಷ್ಠೆ, ಆಶ್ಲೇಷ ಬಲಿ, ಆಶ್ಲೇಷ ಉದ್ಯಾಪನೆ, ಷಷ್ಠಿವ್ರತ ಉದ್ಯಾಪನೆ, ಚವಲ (ಸ್ಥಳ ಕಾಣಿಕೆ), ನಾಗಪ್ರತಿಷ್ಠೆ, ತ್ರಿಶತಿ ಅರ್ಚನೆ, ಡೋಲೋತ್ಸವ, ಮಂಟಪೋತ್ಸವ, ಮಡೆಸ್ನಾನ/ಎಡೆಸ್ನಾನ ಸೇವೆಗಳು ಕೋಟ್ಯಾಂತರ (ಸಂಬಂಧಪಟ್ಟ) ಹಿಂದೂಗಳು ಕಡ್ಡಾಯ ನೆರವೇರಿಸಲೇಬೇಕಾದ ಪೂಜಾವಿಧಾನಗಳಾಗಿವೆ. ಹಾಗಾಗಿ ಕುಕ್ಕೆ ಸುಬ್ರಹ್ಮಣ್ಯ ದೇಗುಲ ಕರ್ನಾಟಕ ರಾಜ್ಯದ ನಂಬರ್ ಒನ್ ಶ್ರೀಮಂತ ದೇವಸ್ಥಾನವಾಗಿದೆ. ಮಧ್ವಾಚಾರ್ಯಾರು, ಶಂಕರಾಚಾರ್ಯರ ಗ್ರಂಥಗಳಲ್ಲೂ ಉಲ್ಲೇಖಗೊಂಡಿರುವ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಪುರಾತನ ದೇವಸ್ಥಾನ ಎಂಬುದರಲ್ಲಿ ಎರಡು ಮಾತಿಲ್ಲ. ಇಂತಹ ದೇವಸ್ಥಾನದ ವಿರುದ್ಧ ಬಿಜೆಪಿ ಸಮರ ಸಾರಿತ್ತು. ‘ಯಡಿಯೂರಪ್ಪ ಗುಡುಗಿದರೆ ವಿಧಾನಸೌಧ ನಡುಗುವುದು’ ಎಂಬ ಮಾತಿದ್ದ ದಿನಗಳಲ್ಲೇ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಡೆಯುವ ಅನಾಚಾರ, ಭ್ರಷ್ಟಾಚಾರಗಳ ವಿರುದ್ಧ ವಿಧಾನಸೌಧದಲ್ಲಿ ಗುಡುಗಿದ್ದರು. ಧರ್ಮಸ್ಥಳ ಮಂಜುನಾಥೇಶ್ವರ ದೇವಸ್ಥಾನದ ಆಡಳಿತ ಮಂಡಳಿ/ಟ್ರಸ್ಟ್ ಸದಸ್ಯರ ವಿರುದ್ಧ ಮಾತನಾಡಿದರೆ ಹಿಂದೂ ಧರ್ಮದ ನಿಂದನೆಯಾಗುವುದಾದರೆ, ಕುಕ್ಕೆ ಸುಬ್ರಹ್ಮಣ್ಯದ ಅವ್ಯವಹಾರ, ಭ್ರಷ್ಟಾಚಾರ, ಹುಂಡಿ ಕಾಸಿನ ಲೆಕ್ಕ, ದೌರ್ಜನ್ಯಗಳ ಬಗ್ಗೆ ಮಾತನಾಡಿದರೆ ಹಿಂದೂ ಧರ್ಮದ ನಿಂದನೆಯಾಗುವುದಿಲ್ಲವೇ ?

12.07.1990 ರಂದು ವಿಧಾನಸಭೆ ಅಧಿವೇಶನದಲ್ಲಿ ಬಿಜೆಪಿಯ ಶಾಸಕ ಬಿ ಎಸ್ ಯಡಿಯೂರಪ್ಪನವರು ಕುಕ್ಕೆ ಸುಬ್ರಹ್ಮಣ್ಯದ ವಿರುದ್ಧ ನಡೆಸಿದ ಚರ್ಚೆಯ ಆಯ್ದ ಸಾರಾಂಶ ಇಲ್ಲಿದೆ :

ಬಿ.ಎಸ್. ಯಡಿಯೂರಪ್ಪ: ಅತ್ಯಂತ ಪ್ರತಿಷ್ಠಿತವಾದ, ಕರ್ನಾಟಕದ ಹೆಮ್ಮೆಯ ದೇವಸ್ಥಾನವಾದ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಡೆದಿರುವಂತಹ ಅವ್ಯವಹಾರಗಳ ಬಗ್ಗೆ ಸರ್ಕಾರದ ಉತ್ತರದಲ್ಲಿಯೇ ಸಾಕಷ್ಟು ಸಾಕ್ಷಾಧಾರ ದೊರೆತಿದೆ. ನಾನು ಸರ್ಕಾರಕ್ಕೆ ಒತ್ತಾಯ ಮಾಡುವಂಥಾದ್ದು ಏನೆಂದರೆ, ಅಧಿಕಾರಿಗಳು ಈ ದೇವಸ್ಥಾನಕ್ಕೆ ಹೋಗಿ ತಪಾಸಣೆ ಮಾಡುವುದು, ಅಕ್ರಮ- ಅವ್ಯವಹಾರವಾಗಿದ್ದರೆ ಕ್ರಮ ತೆಗೆದುಕೊಳ್ಳುವಂತಹ ಪ್ರಯತ್ನ ಮಾಡಿದ್ದರೆ ಈ ರೀತಿ ಅಡಿಟ್ ವರದಿಯಲ್ಲಿ ಲಕ್ಷಾಂತರ ರೂಪಾಯಿಗಳ ದುರುಪಯೋಗ ಆಗಿದೆ ಎಂದು ಬರುತ್ತಿರಲಿಲ್ಲ. ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಪ್ರತಿದಿನ ಬರುವಂತಹ ಸಾವಿರಾರು ಜನರ ಭಕ್ತಾದಿಗಳು ಕಾಣಿಕೆ ಡಬ್ಬಿಗೆ ದುಡ್ಡನ್ನು ಹಾಕುತ್ತಾರೆ. ಇದರ ಮೂಲಕ ಅಲ್ಲಿನ ಟ್ರಸ್ಟಿಗಳು ಬೇರೆ ಬೇರೆ ಶಾಲಾ ಕಾಲೇಜುಗಳನ್ನು, ಬೇರೆ ಬೇರೆ ಛತ್ರಗಳನ್ನು ನಡೆಸುತ್ತಿದ್ದಾರೆ. ಇದರ ಮೂಲಕ ಭಕ್ತಾದಿಗಳು ಕೊಟ್ಟಂತಹ ಹಣವನ್ನು ದುರುಪಯೋಗ ಮಾಡಿಕೊಂಡು ಅವರು ಶ್ರೀಮಂತರಾಗುವಂತಹ ಅನೇಕ ಉದಾಹರಣೆಗಳು ಇಲ್ಲಿ ಸಾಬೀತು ಆಗಿವೆ. ನನಗೆ ಗೊತ್ತಿರುವ ಪ್ರಕಾರ ಈ ದೇವಸ್ಥಾನದಲ್ಲಿ ಲಕ್ಷಾಂತರ ರೂಪಾಯಿಗಳ ದುರುಪಯೋಗ ಆಗಿದೆ. ಅಡಿಟ್ ವರದಿ ಇನ್ನೂ ಅನೇಕ ವಿವರಗಳನ್ನೂ ಒಳಗೊಂಡಿದೆ.

ಇದಲ್ಲದೆ, ಇನ್ನೂ ಎರಡು ಮೂರು ಅಂಶಗಳ ಬಗ್ಗೆ ನನಗೆ ಗೊತ್ತಿರುವ ಸತ್ಯವಾದ ಮಾಹಿತಿಯನ್ನು ತಮ್ಮ ಗಮನಕ್ಕೆ ತರುತ್ತೇನೆ. ನ್ಯಾಯ ಸಿಗಬೇಕು ಎಂದರೆ ಇದರ ಬಗ್ಗೆ ತಕ್ಷಣ ಸಿ.ಒ.ಡಿ. ತನಿಖೆ ಮಾಡಿಸಿ. ಇದರ ಪರಿಣಾಮ ಬೇರೆಯವರ ಮೇಲೂ ಆಗುತ್ತದೆ. ಈ ರೀತಿ ಭಕ್ತರ ಹುಂಡಿ ಹಣವನ್ನು ಟ್ರಸ್ಟಿಗಳು ಹಣ ದುರುಪಯೋಗ ಮಾಡಿಕೊಳ್ಳುವುದಕ್ಕೆ ಬಿಡಬಾರದು. ಇಂತಹ ಟ್ರಸ್ಟಿಗಳನ್ನು ನಾವು ಶಿಕ್ಷೆಗೆ ಒಳಪಡಿಸಬೇಕಾಗುತ್ತದೆ. ಭಕ್ತರ ಹಣದಲ್ಲಿ ಶಾಲೆ ಕಾಲೇಜು ನಡೆಸಿ ಶ್ರೀಮಂತರಾಗಿರುವ ಟ್ರಸ್ಟಿಗಳು ಜೈಲುವಾಸ ಅನುಭವಿಸಬೇಕಾಗುತ್ತದೆ ಎನ್ನುವ ವಾತಾವರಣ ನಿರ್ಮಾಣ ಮಾಡಿದರೆ ಬೇರೆ ಬೇರೆ ದೇವಸ್ಥಾನಗಳಲ್ಲಿನ ಟ್ರಸ್ಟಿಗಳು ಈ ರೀತಿ ದುರುಪಯೋಗ ಮಾಡಿಕೊಳ್ಳುವುದಕ್ಕೆ ಭಯದ ವಾತಾವರಣ ಮೂಡುತ್ತದೆ. ಹಾಗಾಗಿ ಸಿ.ಒ.ಡಿ ತನಿಖೆ ಮಾಡಬೇಕೆಂದು ನಾನು ಒತ್ತಾಯ ಮಾಡುತ್ತೇನೆ.

ಇನ್ನೂ ಒಂದೆರಡು ಅಂಶ ಗಳನ್ನು ತಮ್ಮ ಗಮನಕ್ಕೆ ತರುತ್ತೇನೆ. ಈ ದೇವಸ್ಥಾನದ ವತಿಯಿಂದ ಪ್ರಥಮ ದರ್ಜೆ ಕಾಲೇಜನ್ನು ನಡೆಸಲಾಗುತ್ತಿದೆ. ಹಿಂದೆ ಈ ಕಾಲೇಜು ಕಟ್ಟಡದ ಗೌಂಡ್ ಫ್ಲೋರ್ ಕಟ್ಟುವಂತಹ ಸಂದರ್ಭದಲ್ಲಿ ಒಬ್ಬ ಕಂಟ್ರಾಕ್ಟ್ರರಿಗೆ ಕೆಲಸ ಕೊಟ್ಟು 6 ಲಕ್ಷ 30 ಸಾವಿರ ರೂಪಾಯಿಗಳಲ್ಲಿ ಅದನ್ನು ಕಂಪ್ಲಿಟ್ ಮಾಡಿದರು. ಫಸ್ಟ್ ಫ್ಲೋರ್ ಕಟ್ಟಿಸುವುದರಲ್ಲಿ 7 ಲಕ್ಷ 11 ಸಾವಿರ ರೂಪಾಯಿ ಗಳನ್ನು ಖರ್ಚು ಮಾಡಿದ್ದಾರೆ. ನಮಗೆಲ್ಲಾ ಗೊತ್ತಿರುವ ಹಾಗೆ, ಗ್ರೌಂಡ್ ಫ್ಲೋರ್ ಕಟ್ಟುವುದಕ್ಕೆ ಜಾಸ್ತಿ ದುಡ್ಡು ಖರ್ಚಾಗುತ್ತದೆ. ಫಸ್ಟ್ ಫ್ಲೋರ್ ಗೆ ಅಷ್ಟು ದುಡ್ಡು ಬೇಕಾಗಿಲ್ಲ. ಈ ರೀತಿ ಸುಮಾರು ಒಂದೂವರೆ ಲಕ್ಷರೂಪಾಯಿಗಳ ವ್ಯತ್ಯಾಸ ಇದೆ. ಟೆಂಡರ್ ಕರೆಯದೇ ಈ ಒಂದು ವಸತಿಗೃಹಕ್ಕೆ ದೊಡ್ಡ ಪ್ರಮಾಣದಲ್ಲಿ ಮೇಜು ಕುರ್ಚಿಗಳನ್ನು ತಂದಿದ್ದಾರೆ. ಅದರಲ್ಲಿ ಹಣ ದುರುಪಯೋಗ ಆಗಿದೆ. ರವೀಂದ್ರನಾಥ ಶೆಟ್ಟಿ ಎಂಬ ಒಬ್ಬರು ಟ್ರಸ್ಟಿಯ ಅವಧಿ ಮುಗಿದ ಮೇಲೆ 67.500 ರೂಪಾಯಿಗಳನ್ನು ಡ್ರಾಮಾಡಿ, ಆ ಹಣವನ್ನು ಇಂಡಿಯನ್ ಓವರ್ ಸೀಸ್ ಬ್ಯಾಂಕ್ ನ ತಮ್ಮ ಪರ್ಸನಲ್ ಅಕೌಂಟ್ ನಲ್ಲಿ ಇಟ್ಟುಕೊಂಡಿದ್ದಾರೆ. ಬಹುಶಃ ಇದಕ್ಕಿಂತ ದೊಡ್ಡ ಭ್ರಷ್ಟಾಚಾರ ನಡೆಯುವುದಕ್ಕೆ ಸಾಧ್ಯ ಇಲ್ಲ. ಅಲ್ಲಿ ಪ್ರಫುಲ್ಲ ಚಂದ್ರ ರೈ ಎನ್ನುವವರು ಅವರ ಸ್ವಂತ ಆಡಳಿತಕ್ಕೆ ಒಳಪಟ್ಟಿರುವ ಉಮಾಮಹೇಶ್ವರಿ ದೇವಸ್ಥಾನಕ್ಕೆ ಈ ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಸುಮಾರು 60 ಸಾವಿರ ಹಣವನ್ನು ಡ್ರಾ ಮಾಡಿದ್ದಾರೆ. ಇದು ಅದು ಕಾನೂನುಬಾಹಿರವಾದಂಥದ್ದು. ಇದಲ್ಲದೆ ಸಿಂಡಿಕೇಟ್ ಬ್ಯಾಂಕ್ ನಲ್ಲಿ ಫಿಕ್ಸೆಡ್ ಠೇವಣಿ ಹಣ ಇದೆ. ಹಾಗಾಗಿ ದೇವಸ್ಥಾನದ ಟ್ರಸ್ಟಿಗಳ ವಿರುದ್ಧ ಸಿ.ಒ.ಡಿ, ತನಿಖೆ ಮಾಡಿಸಿ, ಅವರನ್ನು ಶಿಕ್ಷೆಗೆ ಒಳಪಡಿಸುವಂಥ ಪ್ರಯತ್ನವನ್ನು ತಾವು ಮಾಡಬೇಕು.

ಇನ್ನೊಂದು ಪ್ರಮುಖವಾಗಿರುವ ವಿಷಯ ಏನೆಂದರೆ, ದೇವಸ್ಥಾನದಲ್ಲಿರುವ ಗೋಲಕಗಳಲ್ಲಿ ಭಕ್ತಾದಿಗಳು ದುಡ್ಡನ್ನು ಹಾಕುತ್ತಿದ್ದಾರೆ. ತುಂಬಿರುವ ನೋಟುಗಳನ್ನು ತೆಗೆಯದಿದ್ದುದರ ಪರಿಣಾಮವಾಗಿ ಗೋಲಕಕ್ಕೆ ಹಾಕಿದಂಥ ನೋಟುಗಳು ನೆಲಕ್ಕೆ ಬೀಳುತ್ತಿವೆ. ಒಂದು ಗೋಲಕ ತುಂಬಿದ್ದರಿಂದ ಇನ್ನೊಂದು ಗೋಲಕವನ್ನು ಬೇರೆಕಡೆಯಿಂದ ತಂದಿದ್ದಾರೆ. ಅದೂ ತುಂಬಿದೆ. ಆ ಗೋಲಕವನ್ನು ತೆರೆದಿಲ್ಲ, ದುಡ್ಡನ್ನು ಎಣಿಸಿಲ್ಲ. ಅದಕ್ಕೋಸ್ಕರ ಎಂಡೋ ಮೆಂಟ್ ಕಮಿಷನರ್ ಹೋಗಿ ಅಲ್ಲಿ ಲಕ್ಷಾಂತರ ರೂಪಾಯಿ ಇರುವುದರಿಂದ ಆ ಗೋಲಕದ ದುಡ್ಡನ್ನು ತೆಗೆದು ಹೊಸ ಗೋಲಕವನ್ನು ಇಡುವಂತಹ ಪ್ರಯತ್ನ ಮಾಡಿ, ಸರಿಯಾದ ಬಿಗಿಯಾದ ನಿಲುವನ್ನು ತೆಗೆದುಕೊಂಡರೆ ಈ ರೀತಿ ಅನೇಕ ಕಡೆ ಭಕ್ತಾಧಿಗಳು ಭಕ್ತಿಯಿಂದ ಕೊಡುವಂಥ ಲಕ್ಷಾಂತರ ರೂಪಾಯಿ ದುರುಪಯೋಗ ಆಗುವುದನ್ನು ತಡೆಯುವುದಕ್ಕೆ ಸಾಧ್ಯವಾಗುತ್ತದೆ. ಇದನ್ನು ಸ್ಪೆಷಲ್ ಕೇಸ್ ಎಂದು ತಾವು ಪರಿಗಣಿಸಿ ಸಿಒಡಿ ತನಿಖೆಯನ್ನು ಮಾಡಬೇಕು ಎಂದು ತಮ್ಮನ್ನು ಅಗ್ರಹ ಮಾಡುತ್ತಾ ಇದ್ದೇನೆ.

ಕೆ. ಎಚ್. ಪಾಟೀಲ್ (ಕಂದಾಯ ಸಚಿವರು) : ಮಾನ್ಯ ಸದಸ್ಯರ ಮನೋವೇದನೆಯನ್ನು ನಾನು ಪೂರ್ಣವಾಗಿ ಅರ್ಥ ಮಾಡಿಕೊಂಡಿದ್ದೇನೆ. ನನ್ನ ಹೇಳಿಕೆಯಲ್ಲಿ ಸಹಿತ ಸಾಕಷ್ಟು ವಿವರಣೆಯನ್ನು ಕೊಟ್ಟಿದ್ದೇನೆ. ದೇವಸ್ಥಾನದಲ್ಲಿ ಅವ್ಯವಹಾರವಾಗಿದೆ, ದುರುಪಯೋಗವಾಗಿದೆ, ಕಾನೂನು ವಿರುದ್ದ ಕಾರ್ಯ ಆಗಿದೆ. ನಾವು ತನಿಖೆಗೆ ಆದೇಶಿಸಿದ್ದೆವು. ಟ್ರಸ್ಟಿಗಳು ಹೈಕೋರ್ಟಿಗೆ ಹೋಗಿ ಸ್ಟೇ ತಂದಿದ್ದರ ಪರಿಣಾಮವಾಗಿ ಡಿಲೇ ಆಗಿದೆ. ದೇವಸ್ಥಾನದಲ್ಲಿ ಈಗ ಎರಡನೆಯ ಹುಂಡಿ ಇಟ್ಟಿದ್ದಾರೆ. ಆದರೆ ಅಲ್ಲಿ ಹಣತುಂಬಿ ಬೀಳುತ್ತಾ ಇಲ್ಲ. ಮತ್ತೊಂದು ಹುಂಡಿ ಇಟ್ಟಿದ್ದಾರೆ. ಮೊದಲನೆಯದನ್ನು ತೆಗೆಯಲಿಕ್ಕೆ ಕೋರ್ಟ್ ತಗಾದೆ ಇದುದ್ದರಿಂದ ಎರಡನೆಯ ಹುಂಡಿ ಇಟ್ಟು ಆ ಹುಂಡಿಯಲ್ಲಿ ಭಕ್ತರು ಹಣ ಹಾಕಬೇಕು ಎಂದು ಮಾಡಿದ್ದಾರೆ. ಈ ಪ್ರಕರಣವನ್ನು ಸಿಒಡಿ ಗೆ ವಹಿಸುತ್ತೇನೆ ಎಂದು ನಾನು ಈಗಾಗಲೆ ಹೇಳಿದ್ದೇನೆ. ಎಲ್ಲೆಲ್ಲಿ ದೇವಸ್ಥಾನಗಳಿವೆಯೋ ಆ ದೇವಸ್ಥಾನಗಳಲ್ಲಿ ಆಗುವ ಅವ್ಯವಹಾರಗಳನ್ನು, ಅಪವ್ಯಯ ಆಗುವುದನ್ನು ತಡೆಹಿಡಿಯಲಿಕ್ಕೆ ಸರ್ಕಾರ ಅತ್ಯಂತ ಉಗ್ರವಾದ ಕಾರ್ಯಕ್ರಮವನ್ನು ತೆಗೆದುಕೊಳ್ಳುತ್ತದೆ. ದೇವಾಲಯದ ಹಣದಿಂದ ಅನೇಕ ಕಡೆಗಳಲ್ಲಿ ಸ್ಕೂಲು, ಕಾಲೇಜುಗಳನ್ನು ತೆಗೆಯುತ್ತೇವೆಂದು ಹಣವನ್ನು ವ್ಯಯ ಮಾಡುವಂಥ ದುರ್ಬುದ್ದಿ ಸಹಿತ ಹುಟ್ಟಿದೆ. ಅದಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲ. ಆದರೂ ಸಹ ಅವರು ಮಾಡಿಕೊಂಡು ಕ್ಯಾಪಿಟೇಷನ ಪ್ರಭಾವದಿಂದ ಈ ಹಣವನ್ನುದುರುಪಯೋಗ ಮಾಡಲಿಕ್ಕೆ ದೇವಾಲಯಗಳವರು ಮುಂದೆ ಬರುತ್ತಾ ಇದ್ದಾರೆಂದು ನನ್ನ ಗಮನಕ್ಕೆ ಬಂದಿದೆ.

ಎ. ರುಕ್ಕಯ್ಯ ಪೂಜಾರಿ(ಶಾಸಕರು): ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ ಕೇವಲ ದಕ್ಷಿಣ ಕನ್ನಡ ಜಿಲ್ಲೆಗೆ ಮಾತ್ರ ಸಂಬಂಧಪಟ್ಟಿದ್ದಲ್ಲ. ಅಲ್ಲಿಗೆ ಇಡೀ ರಾಜ್ಯಾದ್ಯಂತ ಭಕ್ತಾಧಿಗಳು ಬರುತ್ತಾರೆ. ದೇವಸ್ಥಾನದಲ್ಲಿ ದಿನನಿತ್ಯ ದೇವರ ದರ್ಶನ ಮಾಡಿ ಕೃತಾರ್ಥರಾಗುತ್ತಾರೆ. ದಿನಂಪ್ರತಿ ಸಾವಿರಾರು, ಲಕ್ಷಾಂತರ ರೂಪಾಯಿಗಳಷ್ಟು ಹಣ ಕಾಣಿಕೆ ಡಬ್ಬಿಯಲ್ಲಿ ಸಂಗ್ರಹಣೆಯಾಗುತ್ತದೆ. 5- 6 ತಿಂಗಳಿಂದ ಆ ಡಬ್ಬಿಯನ್ನು ತೆರೆದಿಲ್ಲ. ನಮ್ಮ ಅಂದಾಜು ಪ್ರಕಾರ ಲಕ್ಷಾಂತರ ರೂಪಾಯಿ ಹಣ ಅದರಲ್ಲಿ ಸಂಗ್ರಹವಾಗಿದೆ. ನಾನು ಏಕೆ ಇದನ್ನು ಹೇಳುತ್ತಿದ್ದೇನೆಂದರೆ, ಈಗ ಮಳೆಗಾಲ, ಮಳೆ ಬರುತ್ತಾ ಇದೆ. ಮಳೆ ಹನಿ ಬಿದ್ದು ಅದರಲ್ಲಿರುವ ನೋಟುಗಳು ಹಾಳಾಗುವಂಥ ಪರಿಸ್ಥಿತಿ ಇದೆ. ಆದ್ದರಿಂದ ಆದಷ್ಟು ಶೀಘ್ರವಾಗಿ ಆ ಡಬ್ಬಿಯನ್ನು ಹೊಡೆಯುವಂಥ ವ್ಯವಸ್ಥೆ ಮಾಡಬೇಕು. ಆಡಿಟ್ ವರದಿಯಲ್ಲಿ ಲಕ್ಷಾಂತರ ರೂಪಾಯಿ ದುರುಪಯೋಗವಾಗಿದೆ ಎಂದು ಹೇಳಿದ್ದಾರೆ

ಅಧ್ಯಕ್ಷರು : ಸಿ.ಒ.ಡಿ ತನಿಖೆ ಮಾಡಿಸುತ್ತೇನೆ ಎಂದು ಹೇಳಿದ್ದಾರೆ.

ಕೆ. ಎಚ್. ಪಾಟೀಲ್ : ಸದಸ್ಯರಿಗೆ ಎಷ್ಟು ಕಳಕಳಿ ಇದೆಯೋ ಅದಕ್ಕಿಂತ ಹೆಚ್ಚಿನ ಕಳಕಳಿ ಸರ್ಕಾರಕ್ಕೂ ಇದೆ. ಅವರ ನಿರೀಕ್ಷೆಗೆ ಮೀರಿ ಕುಕ್ಕೆ ಸುಬ್ರಹ್ಮಣ್ಯದ ದೇವಸ್ಥಾನದ ಬಗ್ಗೆ ಸಿಒಡಿ ತನಿಖೆ ಮಾಡಿಸುತ್ತೇನೆ

ಕೆ ಕುಶಲ : ಕಳೆದ ಮೂರು ಅಧಿವೇಶನದಲ್ಲಿಯೂ ಈ ಪ್ರಶ್ನೆಯನ್ನು ಹಾಕಿದ್ದೆ. ಬಹುಶಃ ಇಷ್ಟರ ತನಕ ಅದಕ್ಕೆ ಅವಕಾಶ ಆಗಲಿಲ್ಲ. ತಾವು ಈಗ ಅವಕಾಶ ಕೊಟ್ಟಿದ್ದೀರಿ. ಗಮನಸೆಳೆಯುವ ಸೂಚನೆ ಹಾಕಿದ್ದೆ. ಆರು ತಿಂಗಳ ಹಿಂದೆ ಅದರ ಬಗ್ಗೆ ಸಿ.ಒ.ಡಿ ತನಿಖೆ ಮಾಡಲು ಭರವಸೆಯನ್ನು ಆಗಿನ ಮಂತ್ರಿಗಳಾದ ಅಜೀತ್ ಶೇಠ್ ರವರು ನೀಡಿದ್ದರು. ಆದರೆ, ಆದರೆ ಉದ್ದೇಶ ಪೂರ್ವಕವಾಗಿ......

ಅಧ್ಯಕ್ಷರು : The hon. Minister might kindly that note of the point rised by Hon. Member Shri Kushala, Earlier, this question had come up before the House and the then Revenue Minister had, according to him, agreed for a COD enquiry in this case. You will have to look into as to why. if the earler Minister had given an assurance , that an enquiry would not be held , what came in the way ?

ಕೆ. ಕುಶಾಲ : ಎರಡು ತಿಂಗಳಿಂದ ಗೃಹ ಇಲಾಖೆಯಲ್ಲಿ ಈ ಕಡತ ಬಾಕಿಯಾಗಿದೆ.

ಬಿ. ಎಸ್. ಯಡಿಯೂರಪ್ಪ : ದೇವಸ್ಥಾನದಲ್ಲಿ ಅವ್ಯವಹಾರ, ಅಕ್ರಮ ನಡೆದಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ತನಿಖೆ ಮಾಡಿಸುತ್ತೇನೆಂದು ತಾವು ಹೇಳಿದ್ದಿರಿ. ಅದಕ್ಕಿಂತಲೂ ಮುಖ್ಯವಾಗಿ, ಇಷ್ಟೊಂದು ದುರ್ವ್ಯವಹಾರ, ಅಕ್ರಮಗಳು ಆಗಬೇಕಾದರೆ, ನಿಮ್ಮ ಇಲಾಖೆಯ ಅಧಿಕಾರಿಗಳು ಏನು ಮಾಡುತ್ತಿದ್ದರು? ಈ ರೀತಿಯ ದೌರ್ಜನ್ಯ, ಅನಾಚಾರ, ಅವ್ಯವಹಾರ ಪ್ರಕರಣಗಳು ಕೇವಲ ಕುಕ್ಕೆ ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನಕ್ಕೆ ಸೀಮಿತವಾಗಿಲ್ಲ. ಎಲ್ಲ ದೇವಸ್ಥಾನಗಳಲ್ಲಿಯೂ ದುರ್ವ್ಯವಹಾರ ನಡೆದಿದೆ. ಇಲಾಖೆಯ ಅಧಿಕಾರಿಗಳು ಮಾಮೂಲು ತೆಗೆದುಕೊಂಡು ಅವ್ಯವಹಾರಕ್ಕೆ ಪರೋಕ್ಷವಾಗಿ ಬೆಂಬಲ ಕೊಡುತ್ತಾರೆ. ಇಂಥ ಅಧಿಕಾರಿಗಳ ಮೇಲೆ ಏನು ಕ್ರಮ ತೆಗೆದುಕೊಳ್ಳುತ್ತಿರಿ ?

ಕೆ. ಎಚ್. ಪಾಟೀಲ್ : ತನಿಖೆ ಮಾಡಿಸುವುದು ಏಕೆಂದರೆ, ಇದರಲ್ಲಿ ಯಡಿಯರಪ್ಪ ನವರ ಸಂಬಂಧ ಇದೆಯೇ? ಕೆ ಎಚ್ ಪಾಟೀಲರ ಸಂಬಂಧ ಇದೆಯೇ?, ಅಧಿಕಾರಿಗಳ ಸಂಬಂಧ ಇದೆಯೇ ಎಂದು ತಿಳಿದುಕೊಳ್ಳುವುದಕ್ಕಾಗಿಯೇ. ಹಾಗಾಗಿ ಯಾರನ್ನೂ ಬಿಡುವುದಿಲ್ಲ. ಅಧಿಕಾರಿಗಳು ಭಾಗಿಯಾಗಿದ್ದರೆ ಅವರ ಮೇಲೂ ಕ್ರಮವಾಗುತ್ತದೆ.

ಕೆ. ಕುಶಾಲ: ದೇವಸ್ಥಾನದ ಲಕ್ಷಾಂತರ ರೂಪಾಯಿಗಳನ್ನು ದೇವಸ್ಥಾನದ ಟ್ರಸ್ಟಿಯವರು ಹಗಲು ದರೋಡೆ ಮಾಡಿ ಪೂಜೆಯ ಭಟ್ಟರಿಂದ ಹಣವನ್ನು ಕದ್ದುಕೊಂಡು ಬಂದಿದ್ದಾರೆ. ಇದು ಗೊತ್ತಿದ್ದೂ ಪೋಲೀಸ್ ಇಲಾಖೆಯವರು ಮುಚ್ಚಿಟ್ಟಿದ್ದರು.

(ಗೊಂದಲ)

1990 ಜುಲೈ 12 ರಂದು ನಡೆದ ಸದನ ಕಲಾಪದಲ್ಲಿ ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಡೆದ ಹುಂಡಿ ಕಾಸಿನ ಹಣದ ಅವ್ಯವಹಾರ, ಸ್ಕೂಲ್ ಕಾಲೇಜುಗಳ ಹೆಸರಿನಲ್ಲಿ ನಡೆಯುವ ದಂಧೆ, ಅಕ್ರಮ, ದುರ್ವ್ಯವಹಾರ, ಟ್ರಸ್ಟಿನ ಸದಸ್ಯರ ಶ್ರೀಮಂತಿಕೆಗಳ ಬಗ್ಗೆ ಬಿಎಸ್ ಯಡಿಯೂರಪ್ಪನವರು ವಿಧಾನಸಭೆಯಲ್ಲಿ ಪ್ರಸ್ತಾಪಿಸುತ್ತಾರೆ. ಧರ್ಮಸ್ಥಳ ದೇವಸ್ಥಾನದ ಟ್ರಸ್ಟಿ/ಸಮಿತಿ ಸದಸ್ಯರ ಬಗ್ಗೆ ಮಾತನಾಡಿದರೆ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಅಪಚಾರ, ಹಿಂದೂ ಧರ್ಮದ ಮೇಲಿನ ದಾಳಿ ಎಂದು ಹೇಳುವ ಬಿಜೆಪಿಯು, ಹಾಗಿದ್ದರೆ ಕುಕ್ಕೆ ಸುಬ್ರಹ್ಮಣ್ಯದ ಅವ್ಯವಹಾರ, ಭ್ರಷ್ಟಾಚಾರ, ಹುಂಡಿ ಕಾಸಿನ ಲೆಕ್ಕ, ದೌರ್ಜನ್ಯಗಳ ಬಗ್ಗೆ ಮಾತನಾಡಿ ಹಿಂದೂ ಧರ್ಮದ ಮೇಲೆ ದಾಳಿ ನಡೆಸಿತ್ತೆ ? ಬಿಜೆಪಿಯ ಹಿಂದುತ್ವದಲ್ಲಿ ಧರ್ಮಸ್ಥಳಕ್ಕೊಂದು ನ್ಯಾಯ, ಕುಕ್ಕೆ ಸುಬ್ರಹ್ಮಣ್ಯಕ್ಕೊಂದು ನ್ಯಾಯವೇ ?

share
ನವೀನ್ ಸೂರಿಂಜೆ
ನವೀನ್ ಸೂರಿಂಜೆ
Next Story
X