‘ಸ್ಟಾರ್ಟ್ ಅಪ್ ಇಂಡಿಯಾ’ ಸ್ಟಾರ್ಟ್ ಯಾವಾಗ?

ಈಗ ನಾವು ದೇಶವಾಸಿಗಳು ಬಳಸುತ್ತಿರುವ ಫೇಸ್‌ಬುಕ್ ನಮ್ಮದಲ್ಲ, ವಾಟ್ಸ್‌ಆ್ಯಪ್ ನಮ್ಮದಲ್ಲ, ಇನ್‌ಸ್ಟಾಗ್ರಾಮ್ ನಮ್ಮದಲ್ಲ, ಟೆಲಿಗ್ರಾಮ್ ನಮ್ಮದಲ್ಲ, ಅಷ್ಟೇ ಏಕೆ ಅತಿರಥ-ಮಹಾರಥರೇ ಬಳಸಲ್ಪಡುತ್ತಿರುವ ಟ್ವಿಟರ್(ಎಕ್ಸ್) ಕೂಡ ನಮ್ಮದಲ್ಲ, ಲಿಂಕ್ಡ್‌ಇನ್, ಗೂಗಲ್, ಯೂಟ್ಯೂಬ್‌ಗಳು ಕೂಡ ನಮ್ಮದಲ್ಲವೇ ಅಲ್ಲ. ಹಾಗಾದರೆ ನಮ್ಮ ಸ್ವಂತಿಕೆಯದ್ದು ಏನು? ನಮ್ಮ ದೇಶದ ಐಐಟಿ-ಐಐಎಂಗಳ ಬುದ್ಧಿವಂತ ಶಿಖಾಮಣಿಗಳು, ಘಟಾನುಘಟಿ ಉದ್ಯಮಿಗಳು, ರಾಜಕಾರಣಿಗಳೆಲ್ಲಾ ಏನು ಮಾಡುತ್ತಿದ್ದಾರೆ? 150 ಕೋಟಿಗೂ ಅಧಿಕ ಜನಸಂಖ್ಯೆಯುಳ್ಳ ದೇಶದಲ್ಲಿ ಸಂವಹನಕ್ಕಾಗಿ ಸ್ವಂತಿಕೆಯುಳ್ಳ ಒಂದೇ ಒಂದು ಸಾಮಾಜಿಕ ಜಾಲತಾಣಗಳ ಆ್ಯಪ್‌ಗಳು ಸಿದ್ಧವಾಗಿಲ್ಲ ಎನ್ನುವುದಾದರೆ ಮೋದಿ ಸರಕಾರದ ‘ಸ್ಟಾರ್ಟ್ ಅಪ್ ಇಂಡಿಯಾ’ ಸ್ಟಾರ್ಟ್ ಆಗಿರುವುದಾದರೂ ಎಲ್ಲಿ? ಆಗಿಲ್ಲವಾದರೆ ಆಗುವುದಾದರೂ ಯಾವಾಗ? ಯಾರಿಂದ?
ದೇಶದ ಕೋಟ್ಯಂತರ ಯುವ ಸಮೂಹ ದಿನನಿತ್ಯ ವಿವಿಧ ಕಾರಣಗಳಿಗೆ ಬಳಸಲ್ಪಡುತ್ತಿರುವ ಎಲ್ಲ ಸಾಮಾಜಿಕ ಜಾಲತಾಣಗಳು ವಿದೇಶಿಗರ ಮಾಲಕತ್ವಕ್ಕೆ ಒಳಪಟ್ಟಿವೆ. ಆದರೂ ನಮ್ಮ ದೇಶ ವಿಶ್ವಗುರು ಪಟ್ಟಕ್ಕೇರಿದೆ ಎಂಬುದೇ ವಿಪರ್ಯಾಸ. ಫೇಸ್‌ಬುಕ್ ಬಳಸುವವರಲ್ಲಿ ಭಾರತೀಯರೇ ನಂ.1. ಭಾರತದಲ್ಲಿ ಫೇಸ್‌ಬುಕ್ ಆ್ಯಪ್ ಬಳಸುವವರ ಸಂಖ್ಯೆ 373.2 ಮಿಲಿಯನ್ ಗಡಿ ದಾಟಿದೆ. ನಂತರದ ಸ್ಥಾನ ಅಮೆರಿಕನರದ್ದು 192.7 ಮಿಲಿಯನ್. ಇನ್ನು ಭಾರತದಲ್ಲಿ ಇನ್‌ಸ್ಟಾಗ್ರಾಮ್ ಬಳಕೆದಾರರ ಸಂಖ್ಯೆ 385.35 ಮಿಲಿಯನ್ ದಾಟಿದೆ. ಜಗತ್ತಿನಲ್ಲಿ ಇನ್‌ಸ್ಟಾಗ್ರಾಮ್ ಬಳಸುವವರಲ್ಲಿ ಭಾರತಕ್ಕೆ ಪ್ರಥಮ ಸ್ಥಾನ. ನಂತರದ ಸ್ಥಾನ ಅಮೆರಿಕನರದ್ದು 169.45 ಮಿಲಿಯನ್.
ಬೆಳಗ್ಗೆ ಎದ್ದು ಮೊಬೈಲ್ ಕೈಯಲ್ಲಿ ಹಿಡಿದುಕೊಳ್ಳುತ್ತಿದ್ದಂತೆ ಮೊದಲು ಬೆರಳು ತಾಗಿಸುವುದೇ ವಾಟ್ಸ್‌ಆ್ಯಪ್‌ನತ್ತ. ಗುಡ್ ಮಾರ್ನಿಂಗ್‌ನಿಂದ ಹಿಡಿದು ರಾತ್ರಿ ಮಲಗುವವರೆಗಿನ ಒಳ್ಳೆಯದ್ದು, ಕೆಟ್ಟದ್ದು, ಖಾಸಗಿ, ಅತೀ ಖಾಸಗಿ, ದೇಶ ಪ್ರೇಮ, ಸ್ವದೇಶಿ ಚಳವಳಿಯ ಪುಂಗೀ ಭಾಷಣಗಳು, ಪ್ರಚೋದನಕಾರಿ ಸಂದೇಶಗಳುಳ್ಳ ಫೋಟೊ, ವೀಡಿಯೋ ಸೇರಿದಂತೆ ಸರ್ವವೂ ವಾಟ್ಸ್‌ಆ್ಯಪ್ ಮೇಲೆಯೇ ನಿರ್ಧರಿತವಾಗಿದೆ. ಸ್ನೇಹಿತರು, ಕುಟುಂಬಸ್ಥರ ನಡುವಿನ ಸಂವಹನಕ್ಕಷ್ಟೇ ಅಲ್ಲದೆ ರಾಷ್ಟ್ರೀಯ-ಅಂತರ್‌ರಾಷ್ಟ್ರೀಯ ಕಂಪೆನಿಗಳ ಉದ್ಯೋಗಿಗಳ ಸಂವಹನಕ್ಕೂ ವಾಟ್ಸ್‌ಆ್ಯಪ್ ಪ್ರಮುಖ ದಲ್ಲಾಳಿ ವೇದಿಕೆ. ಹಾಗಾಗಿಯೇ ವಿಶ್ವದಲ್ಲಿಯೇ ಭಾರತೀಯರು ವಾಟ್ಸ್‌ಆ್ಯಪ್ ಬಳಕೆದಾರರ ಪಟ್ಟಿಯಲ್ಲಿ ನಂ.1 ಸ್ಥಾನ ಪಡೆದಿದ್ದು, ಸಂಖ್ಯೆ ಭಾರತದಲ್ಲಿ 535.8 ಮಿಲಿಯನ್ ದಾಟಿದೆ. ವಾಟ್ಸ್‌ಆ್ಯಪ್ ಬಳಸುವವರ ಪಟ್ಟಿಯಲ್ಲಿ ಭಾರತದ ನಂತರದ ಎರಡನೇ ಸ್ಥಾನ ಬ್ರೆಝಿಲ್‌ನದ್ದು. ಬ್ರೆಝಿಲ್‌ನ 139.3 ಮಿಲಿಯನ್ ಮಂದಿ ವಾಟ್ಸ್ ಆ್ಯಪ್ ಬಳಸುತ್ತಿದ್ದಾರೆ.
ನಮ್ಮ ನೆಲದ ಜನಪ್ರತಿನಿಧಿಗಳ ಬೇಜವಾಬ್ದಾರಿ, ಹೊಣೆಗೇಡಿತನಕ್ಕೆ ಸೂಕ್ತ ಉದಾಹರಣೆಯಾಗಿ ಟ್ವಿಟರ್(ಎಕ್ಸ್) ಆ್ಯಪ್‌ನ್ನೇ ಜನರ ಮುಂದಿಡಬಹುದು. ಮಾತು-ಮಾತಿಗೂ ಸ್ವದೇಶಿ-ಸ್ವದೇಶಿ ಎಂದು ಬೊಂಬಡ ಬಿಡುವ ಬಿಜೆಪಿಯ ನಾಯಕರು ಪ್ರತಿನಿತ್ಯ ತಮ್ಮ ಅಭಿಪ್ರಾಯಗಳನ್ನು ಮಂಡಿಸುವುದು, ವಿರೋಧಿಗಳ ಕಾಲೆಳೆಯುವುದು ಟ್ವಿಟರ್(ಎಕ್ಸ್)ನಲ್ಲಿಯೇ. ದೇಶದ ಪ್ರಧಾನಮಂತ್ರಿಯಿಂದ ಹಿಡಿದು ಗ್ರಾಮ ಪಂಚಾಯತ್ ಸದಸ್ಯನವರೆಗೂ, ಸಾಮಾನ್ಯ ಉದ್ಯಮಿಯಿಂದ ಹಿಡಿದು ದೇಶದ ನಂ.1 ಶ್ರೀಮಂತ ಉದ್ಯಮಿಗಳವರೆಗೂ ವಿದೇಶಿ ನಿರ್ಮಾಣದ ಟ್ವಿಟರ್ ಆ್ಯಪ್ ಮೇಲೆ ಅವಲಂಬಿತರಾಗಿದ್ದಾರೆ. ಅಷ್ಟರಮಟ್ಟಿಗೆ ದೇಶದಲ್ಲಿ ಟ್ವಿಟರ್ ಬಳಕೆದಾರರ ಸಂಖ್ಯೆ 25 ಮಿಲಿಯನ್ ದಾಟಿದೆ. ಜಗತ್ತಿನಲ್ಲಿ ಅತೀ ಹೆಚ್ಚು ಬಳಕೆದಾರರಲ್ಲಿ ಭಾರತಕ್ಕೆ ಮೂರನೇ ಸ್ಥಾನ. ಅಮೆರಿಕ 102.1 ಮಿಲಿಯನ್ ಬಳಕೆದಾರರನ್ನು ಹೊಂದಿದ್ದು ಪ್ರಥಮ ಸ್ಥಾನದಲ್ಲಿದ್ದರೆ, ಜಪಾನ್ 69.5 ಮಿಲಿಯನ್ ಬಳಕೆದಾರರನ್ನು ಹೊಂದಿದ್ದು ಎರಡನೇ ಸ್ಥಾನದಲ್ಲಿದೆ. ಆದರೆ ಇತರೆಲ್ಲ ಜಾಲತಾಣಗಳ ವೇದಿಕೆಗಳು ಶ್ರೀಸಾಮಾನ್ಯನ ವೇದಿಕೆಗಳಾದರೆ ಟ್ವಿಟರ್(ಎಕ್ಸ್) ಮಾತ್ರ ಘಟಾನುಘಟಿಗಳ ವೇದಿಕೆ. ಇಂತಹ ಘಟಾನುಘಟಿಗಳಿಗೆ ಆತ್ಮಾಭಿಮಾನ ಕೆರಳಿ ನಿಂತಿಲ್ಲವೆಂದಾದರೆ ಶ್ರೀಸಾಮಾನ್ಯ ನಿಗಾದರೂ ಹೇಗೆ ಆತ್ಮಾಭಿಮಾನ ಕೆರಳಲು ಸಾಧ್ಯ?
ಟೆಲಿಗ್ರಾಮ್ ಕೂಡ ಭಾರತದಲ್ಲಿ ಪರಸ್ಪರ ಸಂವಹನಕ್ಕಾಗಿ ಬಳಸಲ್ಪಡುತ್ತಿರುವ ಮತ್ತೊಂದು ಪ್ರಮುಖ ಸಾಮಾಜಿಕ ಜಾಲತಾಣ. ದೇಶದಲ್ಲಿ ಟೆಲಿಗ್ರಾಮ್ ಬಳಕೆದಾರರ ಸಂಖ್ಯೆ 87 ಮಿಲಿಯನ್ ದಾಟಿದೆ. ಜಗತ್ತಿನಲ್ಲಿಯೇ ಅತೀ ಹೆಚ್ಚು ಟೆಲಿಗ್ರಾಮ್ ಬಳಸುವವರ ಪಟ್ಟಿಯಲ್ಲಿ ಭಾರತಕ್ಕೆ ಪ್ರಥಮ ಸ್ಥಾನ. ರಶ್ಯ 35.6 ಮಿಲಿಯನ್ ಬಳಕೆದಾರರನ್ನು ಹೊಂದಿದ್ದು 2ನೇ ಸ್ಥಾನದಲ್ಲಿದ್ದರೆ ಅಮೆರಿಕ 29.92 ಮಿಲಿಯನ್ ಬಳಕೆದಾರರ ಮೂಲಕ ಮೂರನೇ ಸ್ಥಾನದಲ್ಲಿದೆ. ಉದ್ಯೋಗಾಕಾಂಕ್ಷಿಗಳ ಮೆಚ್ಚಿನ ಸ್ವೀಟ್‌ಹಾರ್ಟ್ ಎಂದೇ ಖ್ಯಾತಿ ಹೊಂದಿರುವ ಲಿಂಕ್ಡ್‌ಇನ್ ಬಳಕೆದಾರರ ಸಂಖ್ಯೆ 130 ಮಿಲಿಯನ್ ದಾಟಿದೆ. ಜಗತ್ತಿನಲ್ಲಿ ಅತೀ ಹೆಚ್ಚು ಲಿಂಕ್ಡ್ ಇನ್ ಬಳಕೆದಾರರ ಪಟ್ಟಿಯಲ್ಲಿ ಭಾರತಕ್ಕೆ ಎರಡನೇ ಸ್ಥಾನ. ಅಮೆರಿಕ 230 ಮಿಲಿಯನ್ ಲಿಂಕ್ಡ್‌ಇನ್ ಬಳಕೆದಾರರನ್ನು ಹೊಂದಿದ್ದು 1ನೇ ಸ್ಥಾನದಲ್ಲಿದ್ದರೆ ಬ್ರೆಝಿಲ್ 71 ಮಿಲಿಯನ್ ಬಳಕೆದಾರರ ಮೂಲಕ ಮೂರನೇ ಸ್ಥಾನದಲ್ಲಿದೆ.
ಭಾರತದಲ್ಲಿ ಮೊಬೈಲ್ ಬಳಸುವ ಪ್ರತಿಯೊಬ್ಬ ಪ್ರಜೆಯೂ ನಿತ್ಯ ಒಂದು ಬಾರಿಯಾದರೂ ಯೂಟ್ಯೂಬ್, ಗೂಗಲ್‌ನತ್ತ ಕಣ್ಣಾಡಿಸಿಯೇ ದಿನ ಮುಗಿಸುತ್ತಾರೆ. ಅಷ್ಟರ ಮಟ್ಟಿಗೆ ಇವೆರಡು ಹೆಸರುವಾಸಿ. ತಿನ್ನುವ ಆಹಾರ, ಧರಿಸುವ ಬಟ್ಟೆ, ಇಷ್ಟಪಡುವ ನಟ-ನಟಿಯರು, ರಾಜಕಾರಣಿಗಳು, ಮಹಾನ್ ವ್ಯಕ್ತಿ-ವ್ಯಕ್ತಿತ್ವಗಳು, ಪ್ರಾಣಿ-ಪಕ್ಷಿಗಳು, ಬೆಟ್ಟಗುಡ್ಡಗಳಿಂದ ಹಿಡಿದು ಮಣ್ಣಿನ ಧೂಳಿನವರೆಗೂ ಮಾಹಿತಿಗಾಗಿ, ಮನರಂಜನೆಗಾಗಿ ಗೂಗಲ್‌ನತ್ತ, ನಂತರ ಯೂಟ್ಯೂಬ್‌ನತ್ತ ನಮ್ಮ ಗಮನ ಹರಿಯುತ್ತದೆ. ಇಂತಹ ಬಹುಮುಖ್ಯ ಆ್ಯಪ್‌ಗಳು ಕೂಡ ನಮ್ಮ ನೆಲದವಲ್ಲ ಬದಲಾಗಿ ಎರವಲು. ಇಂತಹ ಎರವಲು ವೇದಿಕೆಯಾದ ಯೂಟ್ಯೂಬ್ ಬಳಕೆದಾರರ ಸಂಖ್ಯೆ ದೇಶದಲ್ಲಿ 637.1 ಮಿಲಿಯನ್ ದಾಟಿದೆ. ಜಗತ್ತಿನಲ್ಲಿ ಅತೀ ಹೆಚ್ಚು ಯೂಟ್ಯೂಬ್ ಬಳಕೆದಾರರ ಪಟ್ಟಿಯಲ್ಲಿ ಭಾರತಕ್ಕೆ ಮೊದಲ ಸ್ಥಾನ. ಅಮೆರಿಕ 238 ಮಿಲಿಯನ್ ಬಳಕೆದಾರರನ್ನು ಹೊಂದಿದ್ದು 2ನೇ ಸ್ಥಾನದಲ್ಲಿದ್ದರೆ, ಬ್ರೆಝಿಲ್ 147 ಮಿಲಿಯನ್ ಬಳಕೆದಾರರ ಮೂಲಕ ಮೂರನೇ ಸ್ಥಾನದಲ್ಲಿದೆ. ಪ್ರಪಂಚದಾದ್ಯಂತ ವಿವಿಧ ಕಾರಣಕ್ಕಾಗಿ ಗೂಗಲ್‌ಗೆ ಲಗ್ಗೆ ಇಡುವವರಲ್ಲಿ ಅಮೆರಿಕನ್ನರು ಮೊದಲಿಗರು. ಒಟ್ಟು ಬಳಕೆದಾರರಲ್ಲಿ ಶೇ. 19.58 ಅಮೆರಿಕನ್ನರೇ ಆಗಿದ್ದರೆ, ನಂತರದ ಎರಡನೇ ಸ್ಥಾನದಲ್ಲಿ ಶೇ. 8.24 ಭಾರತೀಯರಿದ್ದಾರೆ. ಬ್ರೆಝಿಲ್ ಶೇ. 5.86, ಜಪಾನ್ ಶೇ. 5.82 ಬಳಕೆದಾರರನ್ನು ಹೊಂದಿವೆ.
‘ಸ್ಟಾರ್ಟ್ ಅಪ್’ ‘ಆನ್’ ಆಗದಿರುವುದ್ಯಾಕೆ?
2014ರಲ್ಲಿ ಕೇಂದ್ರದಲ್ಲಿ ಅಧಿಕಾರದ ಗದ್ದುಗೆ ಹಿಡಿದ ಮೋದಿ ನೇತೃತ್ವದ ಕೇಂದ್ರ ಸರಕಾರ ಬಂದ ನಂತರ ದೇಶದ್ಯಾಂತ ಸದ್ದು ಮಾಡಿದ್ದು ‘ಸ್ಟಾರ್ಟ್ ಅಪ್ ಇಂಡಿಯಾ’ ಮತ್ತು ಸ್ವದೇಶಿ ಚಳವಳಿ. ಸ್ವದೇಶಿಗೆ ಒತ್ತು ಕೊಡಿ ವಿದೇಶಿ ವಸ್ತುಗಳನ್ನು ತಿರಸ್ಕರಿಸಿ ಎಂದು ವಿದೇಶಿ ಆ್ಯಪ್‌ಗಳಲ್ಲಿ ಮೈ ಪರಚಿಕೊಂಡಿದ್ದೇ ಹೊರತು ಯಾವ ಬದಲಾವಣೆಯೂ ನಡೆಯಲಿಲ್ಲ. ದೇಶದ ಯಾವುದೇ ಬಝಾರ್ ಹೊಕ್ಕಿ ನೋಡಿದ್ರು ಎಲ್ಲೆಲ್ಲೂ ಮೇಡ್ ಇನ್ ಚೀನಾ, ಮೇಡ್ ಇನ್ ಜಪಾನ್, ಮೇಡ್ ಇನ್ ಅಮೆರಿಕ, ಮೇಡ್ ಇನ್ ವಿದೇಶಗಳೇ ಕಣ್ಣಿಗೆ ಬೀಳುತ್ತಿವೆ. ಅದರಲ್ಲೂ ದೇಶದ ಸಾಮಾನ್ಯ ಜನರಿಂದ ಹಿಡಿದು ಪ್ರಧಾನಿ, ರಾಷ್ಟ್ರಪತಿಗಳವರೆಗೂ ಪರಸ್ಪರ ಸಂವಹನಕ್ಕಾಗಿ ವಿದೇಶಿ ನಿರ್ಮಿತ ಆ್ಯಪ್‌ಗಳ ಮೇಲೆಯೇ ಅವಲಂಬಿತರಾಗಿದ್ದಾರೆ ಎಂಬ ವಿಷಯವೇ ಬೆಚ್ಚಿ ಬೀಳುವಂತೆ ಮಾಡಿದೆ.
ಒಡ ಹುಟ್ಟಿದ ಅಣ್ಣ-ತಮ್ಮ, ಅಕ್ಕ-ತಂಗಿಯರು, ನೆರೆಹೊರೆಯವರು, ಬಂಧು-ಬಾಂಧವರು ಹಾಗೂ ಸ್ನೇಹಿತರ ನಡುವೆಯೇ ಸಣ್ಣ-ಸಣ್ಣ ವಿಷಯಕ್ಕೂ ಮನಸ್ತಾಪಗಳು, ಭಿನ್ನಾಭಿಪ್ರಾಯಗಳು, ಹೊಡೆದಾಟ-ಬಡಿದಾಟಗಳು ನಡೆಯುತ್ತಿವೆ. ಕೇವಲ ಪ್ರತಿಷ್ಠೆಯ ಕಾರಣಕ್ಕಾಗಿಯೇ ದೇಶದ ಪೊಲೀಸ್ ಠಾಣೆಗಳು, ಕೋರ್ಟ್‌ಗಳು ತುಂಬಿ ತುಳುಕುತ್ತಿವೆ. ಹತ್ತಿರದವರ ಮೇಲಿನ ಪ್ರತಿಷ್ಠೆಗಾಗಿಯೇ ಜನ ಯೋಗ್ಯತೆಗೆ ಮೀರಿದ, ಅಸಾಧ್ಯವಾದ ಪ್ರಯತ್ನಗಳಿಗೆ ಧುಮುಕಿ ಬಿಡುತ್ತಿದ್ದಾರೆ. ಶ್ರೀಸಾಮಾನ್ಯನಿಗೆ ಇರುವ ಆತ್ಮಾಭಿಮಾನ, ಪ್ರತಿಷ್ಠೆ ಇದುವರೆಗೂ ದೇಶದ ಯಾವೊಬ್ಬ ಜನಪ್ರತಿನಿಧಿಗೂ ಸೃಷ್ಟಿಯಾಗದೆ ಹೋದದ್ದು ಏಕೆ? ನಮ್ಮವರ ನಡುವಿನ ಸಂವಹನಕ್ಕಾಗಿ ಸ್ವಂತಿಕೆಯುಳ್ಳ ಆ್ಯಪ್‌ಗಳನ್ನು ನಿರ್ಮಿಸುವ ಪ್ರಯತ್ನಕ್ಕೆ ದೇಶದ ಬುದ್ಧಿವಂತರಿಗೆ, ಶ್ರೀಮಂತ ಉದ್ಯಮಿಗಳಿಗೆ ಪ್ರೇರೆಪಿಸುವಲ್ಲಿ ವಿಫಲವಾದದ್ದು ಏಕೆ? ಉತ್ತರ ಮಾತ್ರ ಸಿಗುತ್ತಿಲ್ಲ. ದೇಶದ ನಂ.1...2...3... ಶ್ರೀಮಂತರು, ಮಕ್ಕಳ ಪ್ರತಿಷ್ಠೆಯ ಮದುವೆಗಾಗಿ ಸಾವಿರಾರು ಕೋಟಿ ಹಣ ಖರ್ಚು ಮಾಡುವ ನಮ್ಮ ನೆಲದ ನೇತಾರರು ಕನಿಷ್ಠ ದೇಶದ ಶ್ರೀಸಾಮಾನ್ಯರ ನಡುವಿನ ಪರಸ್ಪರ ಸಂವಹನಕ್ಕಾಗಿ ಸಾಮಾಜಿಕ ಜಾಲತಾಣದ ಆ್ಯಪ್‌ಗಳನ್ನು ನಿರ್ಮಿಸಲು ಪ್ರಯತ್ನಿಸದಿರುವುದು ಆಶ್ಚರ್ಯಕರ ಸಂಗತಿ.
ಅಮೆರಿಕದ ಹಾಲಿ ಅಧ್ಯಕ್ಷ ಟ್ರಂಪ್ ಭಾರತದ ಅಕ್ರಮ ವಲಸಿಗರನ್ನು ಕೈಕೋಳ ತೊಡಿಸಿ ದೇಶದಿಂದ ಹೊರದಬ್ಬಿದಂತೆ ನಾಳೆ ಏನಾದರೂ ಅಂತರ್‌ರಾಷ್ಟ್ರೀಯ ವಿವಾದಗಳ ಕಾರಣಕ್ಕಾಗಿಯೋ, ತಾನೆಷ್ಟು ಶಕ್ತಿಶಾಲಿ ದೇಶ ಎಂದೂ ಸಾಬೀತು ಪಡಿಸುವುದಕ್ಕೋ ವಿದೇಶಿ ಸರಕಾರಗಳು ತಮ್ಮದೇ ದೇಶಿ ಆ್ಯಪ್ ಕಂಪೆನಿಗಳಿಂದ ಭಾರತದಾದ್ಯಂತ ಸಾಮಾಜಿಕ ಜಾಲತಾಣಗಳ ಆ್ಯಪ್‌ಗಳ ಸೇವೆಯನ್ನು ದಿಢೀರ್ ರದ್ದುಗೊಳಿಸಿಬಿಟ್ಟರೆ ಭಾರತದ ಸಂಪೂರ್ಣ ಸಂವಹನವೇ ಕಡಿತಗೊಳ್ಳುತ್ತದೆ. ಟಿವಿ ಮಾಧ್ಯಮಗಳು, ಮುದ್ರಣ ಮಾಧ್ಯಮಗಳ ಕಡೆಯೇ ಮಾಹಿತಿಗಾಗಿ ಕಾಯುವಂತಾಗುವುದಲ್ಲದೆ ಪ್ರತಿಯೊಬ್ಬರಿಗೂ ಸುಲಭವಾಗಿ ಸಿಗುತ್ತಿರುವ ವಾಕ್ ಸ್ವಾತಂತ್ರ್ಯದ ವೇದಿಕೆಯೇ ಕುಸಿದು ಪಾತಾಳ ಸೇರಲಿದೆ ಎಂಬ ಕನಿಷ್ಠ ಅರಿವು ಆಳುವ ಸರಕಾರಗಳಿಗೆ ಇಲ್ಲದಾಯಿತೇ?
ಭಾರತದ ಶ್ರೀಸಾಮಾನ್ಯನ ಸವಿ ನೆನಪುಗಳು, ಆಚಾರ-ವಿಚಾರಗಳು, ಉಡುಗೆ-ತೊಡುಗೆ, ಊಟ-ಉಪಚಾರಗಳ ವೈವಿಧ್ಯತೆ, ಸಂಸ್ಕಾರ, ಸಂಸ್ಕೃತಿ, ವ್ಯಕ್ತಿ-ವ್ಯಕ್ತಿತ್ವಗಳು, ನಾಡು, ನುಡಿ, ಜಲ ಸೇರಿದಂತೆ ಇನ್ನಿತರ ದಾಖಲೆಗಳು ಸರ್ವವೂ, ಸಕಲವೂ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ವಾಟ್ಸ್‌ಆ್ಯಪ್, ಟ್ವಿಟರ್(ಎಕ್ಸ್), ಲಿಂಕ್ಡ್‌ಇನ್, ಗೂಗಲ್, ಯೂಟ್ಯೂಬ್‌ಗಳಲ್ಲಿಯೇ ಜಾಗ ಪಡೆದಿವೆ. ದಿನ ಬೆಳಗಾದರೆ ವಿದೇಶಿ ಆ್ಯಪ್‌ಗಳಲ್ಲಿ ಬರುವ ಪೋಸ್ಟ್‌ಗಳು ಅದಕ್ಕೆ ಸಿಗುವ ಲೈಕ್, ಕಾಮೆಂಟ್ಸ್, ಶೇರ್‌ಗಳು ಅದರಿಂದ ಬರುವ ಆದಾಯದ ಬಗ್ಗೆಯೇ ಚರ್ಚೆ ನಡೆಯುತ್ತಿದೆಯೇ ಹೊರತು ಇಂತಹದ್ದೇ ಆ್ಯಪ್‌ಗಳನ್ನು ನಾವೇ ನಿರ್ಮಿಸುವ, ನಮ್ಮ ನೆಲದ ತಂತ್ರಜ್ಞಾನದ ತಾಕತ್ತನ್ನು ವಿದೇಶಗಳಿಗೂ ವಿಸ್ತರಿಸುವ ಅತ್ಮಾಭಿಮಾನ ಮಾತ್ರ ಯಾರಲ್ಲೂ ಕಂಡು ಬರುತ್ತಿಲ್ಲ. ದೇಶದ ಪ್ರಥಮ ಪ್ರಜೆಯಿಂದ ಹಿಡಿದು ಕುಗ್ರಾಮದ ಸಾಮಾನ್ಯ ಪ್ರಜೆಗಳವರೆಗೂ ವಿದೇಶಿ ವೇದಿಕೆ ಮೇಲೆ ನಿಂತು ಸ್ವದೇಶಿ ಚಳವಳಿ ಭಾಷಣ ಬಿಗಿಯುತ್ತಿದ್ದಾರೆ ಅಷ್ಟೇ.







