ರಾಯಚೂರು ಏಮ್ಸ್ ಹೋರಾಟಕ್ಕೆ ವಿಮೋಚನೆ ಎಂದು?

ಭಾರತದ ಜನಸಂಖ್ಯೆ ಮತ್ತು ವಿಸ್ತೀರ್ಣದ ಅಗ್ರ 10 ರಾಜ್ಯಗಳಲ್ಲಿ ಕರ್ನಾಟಕವೇ ಏಮ್ಸ್ ಇಲ್ಲದ ಏಕೈಕ ರಾಜ್ಯ. ಉಳಿದ 9 ರಾಜ್ಯಗಳು ಈಗಾಗಲೇ ಏಮ್ಸ್ ಹೊಂದಿವೆ ಅಥವಾ ಏಮ್ಸ್ ಮಂಜೂರುಗೊಂಡಿದೆ. ಕರ್ನಾಟಕವು ಏಮ್ಸ್‌ನಂತಹ ಪ್ರತಿಷ್ಠಿತ ರಾಷ್ಟ್ರೀಯ ಆರೋಗ್ಯ ಮೂಲ ಸೌಕರ್ಯದಿಂದ ಇನ್ನೂ ವಂಚಿತವಾಗಿದೆ. ಹೆಚ್ಚು ಕಡಿಮೆ ಎಲ್ಲಾ ಕ್ಷೇತ್ರಗಳಲ್ಲಿ ಸಧೃಡವಾಗಿದೆ ಎಂಬ ಕಾರಣಕ್ಕೆ ಏಮ್ಸ್ ವಿಚಾರದಲ್ಲಿ ಕರ್ನಾಟಕವನ್ನು ನಿರ್ಲಕ್ಷಿಸಲಾಗುತ್ತಿದೆಯೇ? ಕರ್ನಾಟಕವು ವಿವಿಧ ಕ್ಷೇತ್ರಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವುದು ಸತ್ಯವಾಗಿದ್ದರೂ ರಾಜ್ಯದಲ್ಲಿನ ಪ್ರದೇಶವಾರು ಪರಿಸ್ಥಿತಿ ಒಂದೇ ರೀತಿಯಿಲ್ಲ ಎಂಬುದು 2002ರ ಡಾ. ಡಿ.ಎಂ. ನಂಜುಂಡಪ್ಪ ಹಾಗೂ ಇತ್ತೀಚಿನ ಡಾ. ಗೋವಿಂದ್‌ರಾವ್ ಅವರ ಕರ್ನಾಟಕ ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿಯ ಅಧ್ಯಯನಗಳಿಂದ ರುಜುವಾತಾಗಿದೆ.
ಶಿಕ್ಷಣ ಕ್ಷೇತ್ರ ಒಂದನ್ನೇ ಉದಾಹರಣೆಯನ್ನಾಗಿ ತೆಗೆದುಕೊಳ್ಳುವುದಾದರೆ 2011ರ ಜನಗಣತಿಯ ಪ್ರಕಾರ ಕಲ್ಯಾಣ ಕರ್ನಾಟಕ ಭಾಗದ ಕೆಲ ಜಿಲ್ಲೆಗಳ ಸಾಕ್ಷರತಾ ದರವು ಬಿಹಾರ ರಾಜ್ಯಕ್ಕೆ ಹೋಲಿಕೆಯಾಗುತ್ತದೆ. ಹೀಗಾಗಿ ಅತ್ಯಂತ ಮುಂದುವರಿದ ರಾಜ್ಯಗಳಲ್ಲಿ ಒಂದಾಗಿರುವ ಕರ್ನಾಟಕಕ್ಕೆ ಏಮ್ಸ್ ಅಗತ್ಯವಿದೆಯೇ ಎಂಬ ಪ್ರಶ್ನೆ ಇಂದು ಪ್ರಸ್ತುತವಲ್ಲ; ಬದಲಾಗಿ, ಅದನ್ನು ಕರ್ನಾಟಕದ ಯಾವ ಭಾಗದಲ್ಲಿ ಸ್ಥಾಪಿಸಬೇಕು ಎಂಬ ಪ್ರಶ್ನೆಯೇ ಇಂದು ಪ್ರಸ್ತುತವಾಗಬೇಕು.
ರಾಯಚೂರಿನಲ್ಲಿ ಏಮ್ಸ್ ಸ್ಥಾಪನೆಗಾಗಿ ನಡೆಯುತ್ತಿರುವ ಹೋರಾಟವು 1580 ದಿನಗಳನ್ನು ದಾಟಿದೆ. ಶ್ರೀ ಬಸವರಾಜ ಕಳಸಾ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಈ ಹೋರಾಟವನ್ನು ಕೇವಲ ಒಂದು ಸಾಮಾನ್ಯ ಪ್ರಾದೇಶಿಕ ಬೇಡಿಕೆಯನ್ನಾಗಿ ನೋಡುವುದು ಸಮಂಜಸವೆನಿಸುವುದಿಲ್ಲ, ಬದಲಾಗಿ ಇದನ್ನು ಆರೋಗ್ಯ ವ್ಯವಸ್ಥೆಯಲ್ಲಿನ ಭೌಗೋಳಿಕ ಅಸಮಾನತೆ, ಜನರ ಸಾವು ಮತ್ತು ಬದುಕಿನ ನಡುವಿನ ವ್ಯತ್ಯಾಸವನ್ನು ನಿರ್ಧರಿಸುವ ಪರಿಸ್ಥಿತಿಯನ್ನು ಆಳುವ ವರ್ಗಕ್ಕೆ ಕಟ್ಟಿಕೊಡುವ ಪ್ರಯತ್ನದ ಭಾಗವಾಗಿ ನೋಡಬೇಕಾಗಿದೆ. ಇದು ಕಲ್ಯಾಣ ಕರ್ನಾಟಕ ಪ್ರದೇಶವು ದಶಕಗಳಿಂದ ಎದುರಿಸುತ್ತಿರುವ ರಾಜಕೀಯ, ಆರ್ಥಿಕ, ಸಾಮಾಜಿಕ, ರಚನಾತ್ಮಕ ಹಾಗೂ ಸಾಂಸ್ಥಿಕ ನಿರ್ಲಕ್ಷ್ಯವನ್ನು ಸರಿಪಡಿಸಲು ಅಗತ್ಯವಿರುವ ಪ್ರಮುಖ ಆರೋಗ್ಯ ಹಕ್ಕಿನ ಬೇಡಿಕೆಯಾಗಿದೆ. ಮೂಲಸೌಕರ್ಯ ಕೊರತೆಯಿಂದ ಬಳಲುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ರಾಯಚೂರು ಜಿಲ್ಲೆಯನ್ನು ‘ಆಕಾಂಕ್ಷಿ ಜಿಲ್ಲೆ’ ಎಂದು ಗುರುತಿಸಿದೆ.
NFHS-5 ಮತ್ತು NFHS-6 ರ ಅಂಕಿ-ಅಂಶಗಳನ್ನು ಅವಲೋಕಿಸಿದಾಗ ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಕುಂಠಿತ ಬೆಳವಣಿಗೆ ಶೇ.39.8 ರಿಂದ ಶೇ.46.3ಕ್ಕೆ, ಹಾಗೂ ಕಡಿಮೆ ತೂಕದ ಮಕ್ಕಳ ಪ್ರಮಾಣ ಶೇ.40.7 ರಿಂದ ಶೇ.49.5ಕ್ಕೆ ಏರಿಕೆಯಾಗಿರುವುದು ಕಂಡುಬಂದಿದೆ. ಅಲ್ಲದೇ, 6-23 ತಿಂಗಳ ಮಕ್ಕಳಿಗೆ ಅಗತ್ಯವಾದ ಸಮರ್ಪಕ ಆಹಾರ ದೊರೆಯುವ ಪ್ರಮಾಣವೂ ಶೇ.15.2ರಿಂದ ಶೇ.11.1ಕ್ಕೆ ಇಳಿದಿದೆ. ಮಹಿಳೆಯರಲ್ಲಿ ಸಾಮಾನ್ಯಕ್ಕಿಂತ ಕಡಿಮೆ ಬಿಎಂಐ ಹೊಂದಿರುವವರ ಪ್ರಮಾಣ ಶೇ.23.3ರಿಂದ ಶೇ.26.2ಕ್ಕೆ ಹೆಚ್ಚಾಗಿದೆ. ಖಾಸಗಿ ಆರೋಗ್ಯ ಸಂಸ್ಥೆಗಳಲ್ಲಿ ಸಿಸೇರಿಯನ್ ಮೂಲಕ ನಡೆದ ಹೆರಿಗೆಗಳ ಪ್ರಮಾಣ ಶೇ.45.6ರಿಂದ ಶೇ.61.5ಕ್ಕೆ ಏರಿದೆ. ಒಟ್ಟಾರೆಯಾಗಿ, ರಾಯಚೂರಿನಲ್ಲಿ ಮಕ್ಕಳ ಅಪೌಷ್ಟಿಕತೆ ಮತ್ತು ಮಹಿಳೆಯರ ಪೌಷ್ಟಿಕ ಸ್ಥಿತಿಗೆ ಸಂಬಂಧಿಸಿದ ಸಮಸ್ಯೆಗಳು ಇನ್ನೂ ಗಂಭೀರವಾಗಿದ್ದು, ಕೆಲವು ಸೂಚಕಗಳಲ್ಲಿ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿರುವುದನ್ನು ಈ ಅಂಕಿಅಂಶಗಳು ಸೂಚಿಸುತ್ತವೆ.
NHSRC Health Dossier 2021ರ ಪ್ರಕಾರ, ಕರ್ನಾಟಕದಲ್ಲಿ ಪ.ಪಂಗಡಕ್ಕೆ ಸೇರಿದ ಜನಸಂಖ್ಯೆ ಹೆಚ್ಚಿರುವ ಜಿಲ್ಲೆಗಳಲ್ಲಿ ರಾಯಚೂರು ಮೊದಲ ಸ್ಥಾನದಲ್ಲಿದ್ದು, ಎಸ್‌ಟಿ ಜನಸಂಖ್ಯೆಯ ಪ್ರಮಾಣ ಶೇ.19.03ರಷ್ಟಿದೆ. 2011ರ ಜನಗಣತಿಯ ಪ್ರಕಾರ ಜಿಲ್ಲೆಯಲ್ಲಿರುವ ಪರಿಶಿಷ್ಟ ಜಾತಿಯ ಜನಸಂಖ್ಯೆಯು ಶೇ. 20 ರಷ್ಟಿದೆ. ಹೀಗಾಗಿ ಆರೋಗ್ಯ ಮೂಲಸೌಕರ್ಯಗಳ ಪ್ರಾದೇಶಿಕ ಅಸಮತೋಲನೆಯ ಕೆಟ್ಟ ಪರಿಣಾಮವನ್ನು ಆರ್ಥಿಕ ಹಾಗೂ ಸಾಮಾಜಿಕವಾಗಿ ಅಂಚಿಗೆ ತಳ್ಳಲ್ಪಟ್ಟಿರುವ ವರ್ಗದ ಜನರೇ ನೇರವಾಗಿ ಅನುಭವಿಸುತ್ತಾರೆ.
ಜಿಲ್ಲೆಯ ಶೇ. 75 ರಷ್ಟು ಜನಸಂಖ್ಯೆಯು ಗ್ರಾಮೀಣ ಪ್ರದೇಶದಲ್ಲಿ ವಾಸಿಸುತ್ತಿದೆ. ಶೇ. 60ಕ್ಕೂ ಹೆಚ್ಚಿನ ಜನಸಂಖ್ಯೆಯು ಅಹಿಂದ ವರ್ಗಕ್ಕೆ ಸೇರಿದೆ. ಸಮರ್ಪಕ ಆರೋಗ್ಯ ಸೇವೆಗಳ ಕೊರತೆಯಿಂದ ಇಲ್ಲಿನ ಕುಟುಂಬಗಳು ಸ್ವಂತ ಖರ್ಚಿನಲ್ಲಿ ಚಿಕಿತ್ಸೆ ಪಡೆಯಬೇಕಾಗುತ್ತದೆ. ದೂರದ ನಗರಗಳಿಗೆ ಚಿಕಿತ್ಸೆಗಾಗಿ ತೆರಳುವುದರಿಂದ ಆಸ್ಪತ್ರೆ ವೆಚ್ಚದ ಜೊತೆಗೆ ಪ್ರಯಾಣ, ವಸತಿ ಹಾಗೂದಿನಗೂಲಿ ನಷ್ಟದ ಹೆಚ್ಚುವರಿ ಹೊರೆ ಕುಟುಂಬಗಳ ಮೇಲೆ ಬೀಳುತ್ತದೆ. ಹೀಗಾಗಿ ಆರೋಗ್ಯ ವೆಚ್ಚವು ಬಡತನದ ವಿಷವರ್ತುಲಕ್ಕೆ ಕುಟುಂಬಗಳನ್ನು ತಳ್ಳುವ ಅಪಾಯವಿದೆ.
ಬಹಳಷ್ಟು ಸಂದರ್ಭಗಳಲ್ಲಿ ದೂರದ ನಗರಗಳಲ್ಲಿ ಆಸ್ಪತ್ರೆ ಹಾಸಿಗೆ ಪಡೆಯಲು ಚುನಾಯಿತ ಪ್ರತಿನಿಧಿಗಳ ಶಿಫಾರಸುಗಳನ್ನೇ ಅವಲಂಬಿಸುವ ಪರಿಸ್ಥಿತಿಯೂ ಇದೆ. ರಾಯಚೂರಿನಲ್ಲಿ ಏಮ್ಸ್ ಸ್ಥಾಪನೆಯಾದರೆ ರಾಜಕೀಯ ಆಶ್ರಿತ ವ್ಯವಸ್ಥೆಯ ಆರೋಗ್ಯ ಸೌಲಭ್ಯದಿಂದ ಮುಕ್ತಿ ಪಡೆದು ಸ್ಥಳೀಯ ಹಕ್ಕಿನ ರೂಪದ ಆರೋಗ್ಯ ಸೌಲಭ್ಯವನ್ನು ಪಡೆಯಲು ಸಾಧ್ಯವಾಗುತ್ತದೆ.
ಏಮ್ಸ್ ಹೋರಾಟ ಸಮಿತಿಯ ಚಳವಳಿಯು ಕನ್ನಡ ಸಂಘಟನೆಗಳು, ದಲಿತ ಸಂಘಟನೆಗಳು, ವಿದ್ಯಾರ್ಥಿ ಸಂಘಗಳು ಮತ್ತು ವೃತ್ತಿಪರ ಸಂಸ್ಥೆಗಳನ್ನು ಒಗ್ಗೂಡಿಸಿದೆ. ಬಿಜೆಪಿ, ಕಾಂಗ್ರೆಸ್ ಎನ್ನದೇ ರಾಜ್ಯದ ಎಲ್ಲಾ ಪಕ್ಷಗಳ ನಾಯಕರು ಜಿಲ್ಲೆಯ ಬೇಡಿಕೆಗೆ ಬೆಂಬಲಿಸಿದ್ದಾರೆ. ರಾಜ್ಯ ಸಭೆಯಲ್ಲಿ ಡಾ. ಸುಧಾ ಮೂರ್ತಿ ಕೂಡಾ ರಾಯಚೂರಿಗೆ ಏಮ್ಸ್ ನೀಡಬೇಕೆಂಬುದರ ಕುರಿತು ಪ್ರಸ್ತಾಪಿಸಿದ್ದಾರೆ. ಐಐಟಿ ವಿಚಾರದಲ್ಲಿ ರಾಯಚೂರು ಜಿಲ್ಲೆಗೆ ಆಗಿರುವ ಐತಿಹಾಸಿಕ ಅನ್ಯಾಯದ ಕುರಿತು ಇರುವ ಅನುಕಂಪವೇ ಏಮ್ಸ್ ವಿಚಾರದಲ್ಲಿ ಈ ರೀತಿಯ ಒಮ್ಮತ ಮೂಡಲು ಕಾರಣವಾಗಿದೆ.
ಪ್ರಧಾನ ಮಂತ್ರಿ ಸ್ವಾಸ್ಥ್ಯ ಸುರಕ್ಷಾ ಯೋಜನೆಯ ಉದ್ದೇಶವೇ ಆರೋಗ್ಯ ಸೇವೆಗಳಲ್ಲಿನ ಪ್ರಾದೇಶಿಕ ಅಸಮತೋಲನೆಗಳನ್ನು ಸರಿಪಡಿಸುವುದು ಮತ್ತು ವೈದ್ಯಕೀಯ ಪರಿಣತಿಯನ್ನು ದೇಶದ ವಿವಿಧ ಭಾಗಗಳಿಗೆ ವಿಕೇಂದ್ರೀಕರಿಸುವುದು. ರಾಯಚೂರಿನಲ್ಲಿ ಏಮ್ಸ್ ಸ್ಥಾಪನೆ ಈ ರಾಷ್ಟ್ರೀಯ ಉದ್ದೇಶವನ್ನು ನೇರವಾಗಿ ನೆರವೇರಿಸಬಲ್ಲದು. ಇದು ಗ್ರಾಮೀಣ, ಆದಿವಾಸಿ ಹಾಗೂ ಬಡ ಜನರಿಗೆ ಉನ್ನತ ವೈದ್ಯಕೀಯ ಚಿಕಿತ್ಸೆಯನ್ನು ಸ್ಥಳೀಯವಾಗಿ ಒದಗಿಸುವುದರ ಜೊತೆಗೆ, ದೂರದ ನಗರಗಳಿಗೆ ಪ್ರಯಾಣಿಸುವ ಅಗತ್ಯವನ್ನು ಕಡಿಮೆ ಮಾಡುತ್ತದೆ.
ವಿಶ್ವ ಆರೋಗ್ಯ ಸಂಸ್ಥೆಯ ಗೋಲ್ಡನ್ ಫಿನಿಶಿಂಗ್ ಲೈನ್ ಅನ್ನು ಭಾರತವು ಸಾಧಿಸಿದ್ದರೂ ಸಹ ಇತರೆ ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಸಾಲಿಗೆ ಸೇರಲು ಭಾರತವು ಪ್ರತಿಸಾವಿರ ಜನರಿಗೆ ಕನಿಷ್ಠ ಮೂರು ಜನ ವೈದ್ಯರನ್ನು ಹೊಂದುವಂತಾಗಬೇಕು. ಏಮ್ಸ್ ಅಂತಹ ಸಂಸ್ಥೆಗಳನ್ನು ಸ್ಥಾಪಿಸುವುದರಿಂದ ಸ್ಥಳೀಯವಾಗಿ ವೈದ್ಯಕೀಯ ಶಿಕ್ಷಣದ ಅವಕಾಶಗಳನ್ನು ಹೆಚ್ಚಿಸಲು ಅನುಕೂಲವಾಗುತ್ತದೆ. ಅಲ್ಲದೆ, ಪ್ರಾದೇಶಿಕ ವೈದ್ಯಕೀಯ ಕಾಲೇಜುಗಳಲ್ಲಿನ ಬೋಧಕ ಸಿಬ್ಬಂದಿ ಕೊರತೆಯನ್ನು ಪರಿಹರಿಸುವಲ್ಲಿಯೂ ಸಹಾಯಕವಾಗುತ್ತದೆ. ಏಮ್ಸ್ ಸ್ಥಾಪನೆಯು ಕಲ್ಯಾಣ ಕರ್ನಾಟಕದ ವಿಶಿಷ್ಟ ಹವಾಮಾನ, ಪರಿಸರ ಮತ್ತು ಆರೋಗ್ಯ ಸಮಸ್ಯೆ
ಗಳಿಗೆ ಸಂಬಂಧಿಸಿದ ಸ್ಥಳೀಯ ವೈದ್ಯಕೀಯ ಸಂಶೋಧನೆಗೂ ಅವಕಾಶ ಒದಗಿಸಿಕೊಡುತ್ತದೆ. ಅಲ್ಲದೆ, ಸ್ಥಳೀಯ ಜನಸಂಖ್ಯೆಗೆ ಹೊಂದಿಕೊಳ್ಳುವ ಸಾಕ್ಷ್ಯಾಧಾರಿತ ಚಿಕಿತ್ಸಾ ಕ್ರಮಗಳನ್ನು ರೂಪಿಸುವಲ್ಲಿಯೂ ಸಹಕಾರಿಯಾಗುತ್ತದೆ. ಮುಖ್ಯವಾಗಿ, ಸ್ಥಳೀಯವಾಗಿ ಉನ್ನತ ಮಟ್ಟದ ವೈದ್ಯಕೀಯ ಮತ್ತು ಸಂಶೋಧನಾ ಅವಕಾಶಗಳನ್ನು ಸೃಷ್ಟಿಸುತ್ತದೆ. ಜಿಲ್ಲೆಯಿಂದ ರೋಗಿಗಳು ಚಿಕಿತ್ಸೆಗಾಗಿ ಹೊರಪ್ರದೇಶಗಳಿಗೆ ಹೋಗುವ ಪರಿಸ್ಥಿತಿಯಿಂದ, ಕಲ್ಯಾಣ ಕರ್ನಾಟಕಕ್ಕೆ ರೋಗಿಗಳು, ವೈದ್ಯಕೀಯ ವೃತ್ತಿಪರರು, ವಿದ್ಯಾರ್ಥಿಗಳು ಬರುವಂತಹ ಸನ್ನಿವೇಶ ನಿರ್ಮಾಣವಾಗಲಿದೆ. ಮಾತ್ರವಲ್ಲದೇ ರಾಯಚೂರನ್ನು ಸಂಶೋಧನೆ ಮತ್ತು ಹೂಡಿಕೆಗಳನ್ನು ಆಕರ್ಷಿಸುವ ಪ್ರಾದೇಶಿಕ ಕೇಂದ್ರವಾಗಿ ಪರಿವರ್ತಿಸಬಹುದು.
ರಾಯಚೂರಿನಲ್ಲಿ ಏಮ್ಸ್ ಸ್ಥಾಪನೆಯ ಬೇಡಿಕೆಯು ಅಂಕಿಅಂಶಗಳು, ಆರ್ಥಿಕ ಅಗತ್ಯ ಮತ್ತು ಸಾಮಾಜಿಕ ನ್ಯಾಯದ ಆಧಾರದ ಮೇಲೆ ನಿಂತಿದೆ. ಆರೋಗ್ಯ ಸೌಕರ್ಯವೆಂಬುದು ದಯೆಯ ರೂಪದಲ್ಲಿ ಮುಂದೂಡಬಹುದಾದ ವಿಷಯವಲ್ಲ; ಅದು ಬದುಕುವ ಹಕ್ಕಿಗೆ ಸಂಬಂಧಿಸಿದ ಮೂಲಭೂತ ಹಕ್ಕಾಗಿದೆ. ಆದ್ದರಿಂದ ಕೇಂದ್ರ ಆರೋಗ್ಯ ಸಚಿವಾಲಯ ಮತ್ತು ಹಣಕಾಸು ಸಚಿವಾಲಯಗಳು ರಾಯಚೂರಿನಲ್ಲಿ ಏಮ್ಸ್ ಸ್ಥಾಪನೆಗೆ ಅಧಿಕೃತ ಬಜೆಟ್ ಅನುಮೋದನೆ ನೀಡಬೇಕು. ಕಲ್ಯಾಣ ಕರ್ನಾಟಕದ ಜನರಿಗೆ ‘ಎಲ್ಲರಿಗೂ ಆರೋಗ್ಯ’ ಎಂಬ ಭರವಸೆಯನ್ನು ವಾಸ್ತವಿಕತೆಯಾಗಿ ಪರಿವರ್ತಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಬೇಕು.
NFHS-5 ಮತ್ತು NFHS-6 ರ ಅಂಕಿ- ಅಂಶಗಳು ರಾಯಚೂರು ಜಿಲ್ಲೆಯಲ್ಲಿ ತಾಯಿ ಮತ್ತು ಮಕ್ಕಳ ಆರೋಗ್ಯ ಹಾಗೂ ಪೌಷ್ಟಿಕತೆಯ ಕ್ಷೇತ್ರದಲ್ಲಿ ಗಂಭೀರ ಸವಾಲುಗಳು ಮುಂದುವರಿದಿರುವುದನ್ನು ತೋರಿಸುತ್ತವೆ. ಓಈಊS-5ರ ಪ್ರಕಾರ, 6-59 ತಿಂಗಳ ಮಕ್ಕಳಲ್ಲಿ ಶೇ.73.6ರಷ್ಟು (ಶೇ.65.5 ರಾಜ್ಯ ಸರಾಸರಿ) ಮತ್ತು 15-49 ವರ್ಷದ ಮಹಿಳೆಯರಲ್ಲಿ ಶೇ.60.4ರಷ್ಟು (ಶೇ.47.8 ರಾಜ್ಯ ಸರಾಸರಿ) ರಕ್ತಹೀನತೆ ಕಂಡುಬಂದಿದೆ.






