ಉದ್ಯೋಗ ನೇಮಕಾತಿಯಲ್ಲಿ ಆಗುತ್ತಿರುವ ವಿಳಂಬ, ಭ್ರಷ್ಟಾಚಾರಕ್ಕೆ ತಡೆ ಎಂದು?

ಪ್ರಶ್ನೆ ಪತ್ರಿಕೆ ಸೋರಿಕೆ, ಪರೀಕ್ಷೆ ನಡೆಯುವ ಮುನ್ನವೇ ಹಣಕ್ಕಾಗಿ ಪ್ರಶ್ನೆ ಪತ್ರಿಕೆಗಳನ್ನು ಮಾರಾಟ ಮಾಡುವುದು, ಲಂಚ ಮತ್ತು ವಶೀಲಿಬಾಜಿ, ಯೋಗ್ಯತೆ ಇಲ್ಲದಿದ್ದರೂ ಪ್ರಭಾವಿ ವ್ಯಕ್ತಿಗಳ ಶಿಫಾರಸು ಅಥವಾ ಕೋಟ್ಯಂತರ ರೂಪಾಯಿ ಲಂಚ ನೀಡಿ ಹುದ್ದೆ ಗಿಟ್ಟಿಸಿಕೊಳ್ಳುವುದು, ಒಳಸಂಚು ಮತ್ತು ಮಧ್ಯವರ್ತಿಗಳು ನಕಲಿ ಅಭ್ಯರ್ಥಿಗಳನ್ನು ಪರೀಕ್ಷೆಗೆ ಕೂರಿಸುವುದು, ಒಎಂಆರ್ ಶೀಟ್‌ಗಳನ್ನು ತಿದ್ದಿ ಅಂಕಗಳನ್ನು ಹೆಚ್ಚಿಸುವುದು ಇಂತಹವುಗಳಿಂದಾಗಿ ಪ್ರತಿಭಾವಂತ ಪ್ರತಿಭೆಗಳಿಗೆ ಅನ್ಯಾಯವಾಗುತ್ತಿರುವುದರ ಜೊತೆಗೆ ಹಗಲಿರುಳು ಕಷ್ಟಪಟ್ಟು ಓದುವ ಬಡ ಮತ್ತು ಮಧ್ಯಮ ವರ್ಗದ ಪ್ರಾಮಾಣಿಕ ಅಭ್ಯರ್ಥಿಗಳು ನಿರಾಶರಾಗುತ್ತಿದ್ದಾರೆ.
ಭಾರತದಲ್ಲಿ ವಿದ್ಯಾವಂತ ನಿರುದ್ಯೋಗಿಗಳ ಪ್ರಮಾಣದ ದರ ಇತ್ತೀಚಿನ ಅಂಕಿ-ಅಂಶಗಳಾದ ಆವರ್ತಕ ಕಾರ್ಮಿಕ ಬಲ ಸಮೀಕ್ಷೆ (PLFS-2025) ಮತ್ತು ವಿವಿಧ ಉದ್ಯೋಗ ವರದಿಗಳ ಪ್ರಕಾರ, ದೇಶದಲ್ಲಿ ಶಿಕ್ಷಣದ ಮಟ್ಟ ಹೆಚ್ಚಾದಂತೆ ನಿರುದ್ಯೋಗದ ಪ್ರಮಾಣವೂ ಹೆಚ್ಚುತ್ತಿರುವುದು ಅತಿಯಾಗಿ ಕಂಡುಬಂದಿದೆ. ಒಟ್ಟಾರೆ ವಿದ್ಯಾವಂತ ನಿರುದ್ಯೋಗದ ದರ ಭಾರತದಲ್ಲಿ ದ್ವಿತೀಯ ಹಂತ (ಎಸೆಸೆಲ್ಸಿ) ಮತ್ತು ಅದಕ್ಕಿಂತ ಹೆಚ್ಚಿನ ವಿದ್ಯಾಭ್ಯಾಸ ಹೊಂದಿರುವ 15 ವರ್ಷ ಮೇಲ್ಪಟ್ಟ ವಯಸ್ಕರಲ್ಲಿ ನಿರುದ್ಯೋಗ ಪ್ರಮಾಣ ಶೇ. 6.5ರಷ್ಟಿದೆ. ಯುವ ಸಮೂಹದಲ್ಲಿ ನಿರುದ್ಯೋಗದ ಸಮಸ್ಯೆ ತೀವ್ರವಾಗಿದ್ದು, ಪದವೀಧರರಲ್ಲಿ ಇದರ ಪ್ರಮಾಣ ಸುಮಾರು ಶೇ. 29.1ರಷ್ಟಿದೆ. ಲಿಂಗ ಆಧಾರಿತ ವ್ಯತ್ಯಾಸ 15-29ರ ವಯೋಮಾನದ ಪದವೀಧರ ಪುರುಷರಲ್ಲಿ ನಿರುದ್ಯೋಗ ದರ ಶೇ. 19.2ರಷ್ಟಿದ್ದರೆ, ಮಹಿಳಾ ಪದವೀಧರರಲ್ಲಿ ಇದು ಶೇಕಡಾ 29.4ಕ್ಕೆ ಏರಿದೆ. ಅದೇ ರೀತಿಯಾಗಿ ಕರ್ನಾಟಕದಲ್ಲಿ ವಿದ್ಯಾವಂತ ನಿರುದ್ಯೋಗ ಪ್ರಮಾಣ ಒಟ್ಟಾರೆ ಯುವ ನಿರುದ್ಯೋಗ ದರ ಇತ್ತೀಚಿನ ವರದಿಗಳ ಪ್ರಕಾರ 15-29 ವರ್ಷದ ಯುವಜನರಲ್ಲಿ ಶೇ. 8.6ರಷ್ಟಿದೆ. ವಿದ್ಯಾವಂತ ಯುವ ನಿರುದ್ಯೋಗ ದರ ಕರ್ನಾಟಕದಲ್ಲಿ ದ್ವಿತೀಯ ಹಂತ ಅಥವಾ ಅದಕ್ಕಿಂತ ಹೆಚ್ಚಿನ ಶಿಕ್ಷಣ ಪಡೆದ ಯುವ ಜನಸಂಖ್ಯೆಯಲ್ಲಿ ನಿರುದ್ಯೋಗದ ಪ್ರಮಾಣ ಸುಮಾರು ಶೇ. 17.24 ರಷ್ಟಿದೆ. ಇದರಲ್ಲಿ ಪುರುಷರ ಪ್ರಮಾಣ ಶೇ. 17.03ರಷ್ಟಿದೆ. ಕರ್ನಾಟಕದಲ್ಲಿ ಉದ್ಯೋಗಕ್ಕಾಗಿ ಕಾಯುತ್ತಿರುವ ಯುವಜನರ (ನಿರುದ್ಯೋಗಿಗಳ) ಸಂಖ್ಯೆ ಮತ್ತು ಇತ್ತೀಚಿನ ಅಂಕಿ-ಅಂಶಗಳಾದ ‘ಕರ್ನಾಟಕ ರಾಜ್ಯ ಯುವ ಅವಕಾಶಗಳ ಕೈಪಿಡಿ’ ವರದಿಯ ಪ್ರಕಾರ, ರಾಜ್ಯದಲ್ಲಿ 35 ವರ್ಷದೊಳಗಿನ ಯುವ ಜನಸಂಖ್ಯೆಯ ಸುಮಾರು ಶೇ. 23ರಷ್ಟು ಯುವಕರು ಯಾವುದೇ ಉದ್ಯೋಗದಲ್ಲಿ ಇರದೆ ಮತ್ತು ಯಾವುದೇ ಶಿಕ್ಷಣ/ತರಬೇತಿಯನ್ನೂ ಪಡೆಯುತ್ತಿಲ್ಲ. ಪ್ರಸ್ತುತ ರಾಜ್ಯದ ಉದ್ಯೋಗಕ್ಕಾಗಿ ಕಾಯುತ್ತಿರುವವರಲ್ಲಿ ಸುಮಾರು 48,000ಕ್ಕೂ ಹೆಚ್ಚು ಜನರು ಇಂಜಿನಿಯರಿಂಗ್ ಪದವೀಧರರಾಗಿದ್ದಾರೆ. ಪ್ರತೀ ವರ್ಷ ತೇರ್ಗಡೆಯಾಗುವ 1 ಲಕ್ಷ ಇಂಜಿನಿಯರಿಂಗ್ ವಿದ್ಯಾರ್ಥಿಗಳಲ್ಲಿ ಕೇವಲ 20 ರಿಂದ 25 ಸಾವಿರ ಜನರಿಗೆ ಮಾತ್ರ ಉದ್ಯೋಗ ಸಿಗುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ. ಇತರ ಆರ್ಟ್ಸ್, ಸೈನ್ಸ್, ಕಾಮರ್ಸ್ ಮತ್ತು ಮ್ಯಾನೇಜ್‌ಮೆಂಟ್ ವಿಭಾಗದ ಸುಮಾರು 3 ಲಕ್ಷಕ್ಕೂ ಹೆಚ್ಚು ಪದವೀಧರರು ಉದ್ಯೋಗದ ನಿರೀಕ್ಷೆಯಲ್ಲಿದ್ದಾರೆ. ಕರ್ನಾಟಕ ಸರಕಾರದ ಯುವನಿಧಿ ಯೋಜನೆಯ ಅಡಿಯಲ್ಲಿ ನಿರುದ್ಯೋಗ ಭತ್ತೆಗಾಗಿ ಸುಮಾರು 3.79 ಲಕ್ಷ ಯುವಕರು ತಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ. ಇವರಲ್ಲಿ ಸುಮಾರು 2.98 ಲಕ್ಷ ಅಭ್ಯರ್ಥಿಗಳು ಭತ್ತೆ ಪಡೆಯಲು ಅರ್ಹರಾಗಿದ್ದಾರೆ. ಕರ್ನಾಟಕದಲ್ಲಿ ಉದ್ಯೋಗ ಸಿಗದೆ ಗರಿಷ್ಠ ವಯೋಮಿತಿ ಮೀರುತ್ತಿರುವ ನಿರುದ್ಯೋಗಿಗಳ ನಿಖರವಾದ ಒಟ್ಟು ಸಂಖ್ಯೆಯನ್ನು ಸರಕಾರ ಅಧಿಕೃತವಾಗಿ ಪ್ರತ್ಯೇಕವಾಗಿ ಬಿಡುಗಡೆ ಮಾಡಿಲ್ಲ. ಆದರೂ, ಇತ್ತೀಚಿನ ಅಂಕಿ-ಅಂಶಗಳು ಮತ್ತು ಸರಕಾರದ ಇಲಾಖೆಗಳ ಮಾಹಿತಿ ಪ್ರಕಾರ, ಲಕ್ಷಾಂತರ ಯುವಕರು ನೇಮಕಾತಿ ವಿಳಂಬದಿಂದಾಗಿ ವಯೋಮಿತಿ ಮೀರುವ ಆತಂಕದಲ್ಲಿದ್ದಾರೆ. ಒಟ್ಟು ನಿರುದ್ಯೋಗ ದರ: ಇತ್ತೀಚಿನ ಆವರ್ತಕ ಶ್ರಮಶಕ್ತಿ ಸಮೀಕ್ಷೆ ಪ್ರಕಾರ, ಕರ್ನಾಟಕದಲ್ಲಿ ಒಟ್ಟು ನಿರುದ್ಯೋಗ ದರವು ಶೇ. 2.8ರಷ್ಟಿದೆ. ಆದರೆ, ಪದವೀಧರರಲ್ಲಿ ಮತ್ತು ವೃತ್ತಿಪರ ಕೋರ್ಸ್ ಮುಗಿಸಿದವರಲ್ಲಿ (ಉದಾಹರಣೆಗೆ ಇಂಜಿನಿಯರಿಂಗ್ ಪದವೀಧರರು) ನಿರುದ್ಯೋಗದ ಪ್ರಮಾಣ ಹೆಚ್ಚಾಗಿದೆ. ಉದ್ಯೋಗ ವಿನಿಮಯ ಕೇಂದ್ರಗಳು: ರಾಜ್ಯದ ಅಧಿಕೃತ ಉದ್ಯೋಗ ವಿನಿಮಯ ಕೇಂದ್ರಗಳಲ್ಲಿ 34,617ಕ್ಕೂ ಹೆಚ್ಚು ಪದವೀಧರ ಮತ್ತು ಸ್ನಾತಕೋತ್ತರ ಪದವೀಧರರು ಕೆಲಸ ಹುಡುಕುತ್ತಿರುವುದಾಗಿ ನೋಂದಾಯಿಸಿಕೊಂಡಿದ್ದಾರೆ. ಈ ಸಮಸ್ಯೆಯ ತೀವ್ರತೆಯನ್ನು ಅರ್ಥಮಾಡಿಕೊಳ್ಳಲು ತುಂಬಾ ಕಠಿಣವಾಗಿ ಪರಿಣಮಿಸುತ್ತಿದೆ. ಇದೆಲ್ಲವನ್ನು ನೋಡಿದಾಗ ಲಕ್ಷಾಂತರ ಪದವೀಧರರು ನಿರುದ್ಯೋಗಿಗಳಾಗಿದ್ದಾರೆ. ಇನ್ನು ಲಕ್ಷಾಂತರ ಯುವಕರು ನೇಮಕಾತಿ ವಿಳಂಬದಿಂದಾಗಿ ವಯೋಮಿತಿ ಮೀರಿದ್ದಾರೆ ಮತ್ತು ಮೀರುತ್ತಿರುವುದು ನಮ್ಮ ಕಣ್ಣಿಗೆ ಸ್ಪಷ್ಟವಾಗಿ ಗೋಚರಿಸುತ್ತಿದೆ.
ನಿರುದ್ಯೋಗದ ಪ್ರಮಾಣವೂ ಹೆಚ್ಚುತ್ತಿರುವ ಸಮಸ್ಯೆ ಒಂದು ಕಡೆಯಾದರೆ ಉದ್ಯೋಗ ನೇಮಕಾತಿಯಲ್ಲಿ ಆಗುತ್ತಿರುವ ವಿಳಂಬ, ಉದ್ಯೋಗ ಕ್ಷೇತ್ರದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರವು ಅರ್ಹ ಯುವಕರ ಭವಿಷ್ಯವನ್ನು ಹಾಳು ಮಾಡುತ್ತಿವೆ. ಇದಲ್ಲದೆ ಇಂದಿನ ಸಮಾಜದಲ್ಲಿ ಅರ್ಹ ಮತ್ತು ಪ್ರತಿಭಾವಂತ ಅಭ್ಯರ್ಥಿಗಳ ಭವಿಷ್ಯವನ್ನು ಕಸಿದುಕೊಳ್ಳುತ್ತಿರುವ ಒಂದು ಗಂಭೀರ ಸಮಸ್ಯೆ ಭೂತವಾಗಿ ಬೆನ್ನತ್ತಿದೆ. ಪ್ರಶ್ನೆ ಪತ್ರಿಕೆ ಸೋರಿಕೆ, ಪರೀಕ್ಷೆ ನಡೆಯುವ ಮುನ್ನವೇ ಹಣಕ್ಕಾಗಿ ಪ್ರಶ್ನೆ ಪತ್ರಿಕೆಗಳನ್ನು ಮಾರಾಟ ಮಾಡುವುದು, ಲಂಚ ಮತ್ತು ವಶೀಲಿಬಾಜಿ, ಯೋಗ್ಯತೆ ಇಲ್ಲದಿದ್ದರೂ ಪ್ರಭಾವಿ ವ್ಯಕ್ತಿಗಳ ಶಿಫಾರಸು ಅಥವಾ ಕೋಟ್ಯಂತರ ರೂಪಾಯಿ ಲಂಚ ನೀಡಿ ಹುದ್ದೆ ಗಿಟ್ಟಿಸಿಕೊಳ್ಳುವುದು, ಒಳಸಂಚು ಮತ್ತು ಮಧ್ಯವರ್ತಿಗಳು ನಕಲಿ ಅಭ್ಯರ್ಥಿಗಳನ್ನು ಪರೀಕ್ಷೆಗೆ ಕೂರಿಸುವುದು, ಒಎಂಆರ್ ಶೀಟ್‌ಗಳನ್ನು ತಿದ್ದಿ ಅಂಕಗಳನ್ನು ಹೆಚ್ಚಿಸುವುದು ಇಂತಹವುಗಳಿಂದಾಗಿ ಪ್ರತಿಭಾವಂತ ಪ್ರತಿಭೆಗಳಿಗೆ ಅನ್ಯಾಯವಾಗುತ್ತಿರುವುದರ ಜೊತೆಗೆ ಹಗಲಿರುಳು ಕಷ್ಟಪಟ್ಟು ಓದುವ ಬಡ ಮತ್ತು ಮಧ್ಯಮ ವರ್ಗದ ಪ್ರಾಮಾಣಿಕ ಅಭ್ಯರ್ಥಿಗಳು ನಿರಾಶರಾಗುತ್ತಿದ್ದಾರೆ. ಈಗಿನ ವ್ಯವಸ್ಥೆಯ ಮೇಲಿನ ನಂಬಿಕೆ ಸಂಪೂರ್ಣ ನಾಶವಾಗುತ್ತಾ ಹೋಗಿ, ಯುವಜನತೆಗೆ ಸರಕಾರಿ ಪರೀಕ್ಷೆಗಳು ಮತ್ತು ನೇಮಕಾತಿ ಮಂಡಳಿಗಳ ಮೇಲಿನ ಭರವಸೆ ಇಲ್ಲದಂತಾಗುತ್ತಿದೆ. ಸದ್ಯದ ಪರಿಸ್ಥಿತಿಯಲ್ಲಿ ಲಂಚ ನೀಡಿ ಬರುವ ಅಸಮರ್ಥ ಅಧಿಕಾರಿಗಳಿಂದಾಗಿ ಇಡೀ ಆಡಳಿತ ವ್ಯವಸ್ಥೆಯ ಗುಣಮಟ್ಟ ಕುಸಿಯುತ್ತಿದೆ. ಜನ ಸಾಮಾನ್ಯರಲ್ಲಿ ಇತ್ತಿಚಿನ ಪರೀಕ್ಷೆಗಳು ನೇಮಕಾತಿಗಳ ವ್ಯವಸ್ಥೆ ಮತ್ತು ಕಾನೂನಿನ ಮೇಲೆ ಇರುವ ವಿಶ್ವಾಸ ಕುಸಿಯುತ್ತಿದೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ಬಿಡುಗಡೆ ಮಾಡಿರುವ ಇತ್ತೀಚಿನ ವರದಿಗಳ ಪ್ರಕಾರ, ಭಾರತದಲ್ಲಿ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ದಾಖಲಾದ ಒಟ್ಟು ಪ್ರಕರಣಗಳು ಮತ್ತು ಕರ್ನಾಟಕದ ಸ್ಥಿತಿಗತಿಯ ವಿವರಗಳು ನೋಡಿದರೆ ಭಾರತದಾದ್ಯಂತ ಒಟ್ಟು 4,053 ಭ್ರಷ್ಟಾಚಾರ ಪ್ರಕರಣಗಳು ದಾಖಲಾಗಿವೆ. ದೇಶದಲ್ಲೇ ಅತಿ ಹೆಚ್ಚು ಅಂದರೆ 721 ಪ್ರಕರಣಗಳು ಮಹಾರಾಷ್ಟ್ರದಲ್ಲಿ ದಾಖಲಾಗಿವೆ. ತಮಿಳುನಾಡು 374 ಪ್ರಕರಣಗಳೊಂದಿಗೆ ಎರಡನೇ ಸ್ಥಾನದಲ್ಲಿದೆ ಕರ್ನಾಟಕವು ದೇಶದಲ್ಲೇ 334 ಭ್ರಷ್ಟಾಚಾರ ಪ್ರಕರಣಗಳೊಂದಿಗೆ ಮೂರನೇ ಸ್ಥಾನದಲ್ಲಿದೆ. ಉದ್ಯೋಗದ ಹೆಸರಿನಲ್ಲಿ ನಡೆಯುವ ವಂಚನೆಗಳು, ವಂಚನೆ ಮತ್ತು ನಕಲಿ ದಾಖಲಾತಿ ಪ್ರಕರಣಗಳು ಆರ್ಥಿಕ ಅಪರಾಧಗಳ ಅಡಿಯಲ್ಲಿ ದಾಖಲಾಗುತ್ತವೆ. ದೇಶಾದ್ಯಂತ ಒಟ್ಟು 2,14,379 ಆರ್ಥಿಕ ಅಪರಾಧ ಪ್ರಕರಣಗಳು ದಾಖಲಾಗಿವೆ. ಇದರಲ್ಲಿ ನಕಲಿ ದಾಖಲೆ ಸೃಷ್ಟಿ, ಉದ್ಯೋಗದ ಆಮಿಷ ಒಡ್ಡಿ ವಂಚಿಸುವುದು ಸೇರಿ ಒಟ್ಟು 1,92,382 ಪ್ರಕರಣಗಳು ಸೇರಿವೆ.
ಉದ್ಯೋಗ ನೇಮಕಾತಿಯಲ್ಲಿ ಆಗುತ್ತಿರುವ ವಿಳಂಬ ಮತ್ತು ಭ್ರಷ್ಟಾಚಾರ ಯುವಜನರ ಭವಿಷ್ಯದೊಂದಿಗೆ ಆಟವಾಡುವ ಗಂಭೀರ ಸಮಸ್ಯೆಗಳಾಗಿವೆ. ವ್ಯವಸ್ಥೆಯಲ್ಲಿ ಆಳವಾಗಿ ಬೇರೂರಿರುವ ಈ ದೋಷಗಳಿಗೆ ಶಾಶ್ವತ ತಡೆ ಬೀಳಬೇಕಾದರೆ ಸರಕಾರಗಳು, ನೇಮಕಾತಿ ಸಂಸ್ಥೆಗಳು ಮತ್ತು ನಾಗರಿಕರು ಒಟ್ಟಾಗಿ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ. ಸರಕಾರವು ನೇಮಕಾತಿಯ ಪ್ರಕ್ರಿಯದ ಕಾಲದ ಮಿತಿಯನ್ನು ಅಧಿಸೂಚನೆ ಹೊರಬಿದ್ದ 6 ರಿಂದ 9 ತಿಂಗಳ ಒಳಗಾಗಿ ಇಡೀ ನೇಮಕಾತಿ ಪ್ರಕ್ರಿಯೆ ಮುಗಿಯುವಂತೆ ಕಡ್ಡಾಯ ಕಾನೂನು ಜಾರಿಗೆ ತರಬೇಕು. ಯುಪಿಎಸ್‌ಸಿ ವಾರ್ಷಿಕ ಕ್ಯಾಲೆಂಡರ್ ಮಾದರಿಯಲ್ಲಿ ಪ್ರತೀ ರಾಜ್ಯದ ನೇಮಕಾತಿ ಸಂಸ್ಥೆಗಳು (ಉದಾಹರಣೆಗೆ ಕೆಪಿಎಸ್‌ಸಿ) ವರ್ಷದ ಆರಂಭದಲ್ಲೇ ಪರೀಕ್ಷೆಗಳ ದಿನಾಂಕವನ್ನು ಪ್ರಕಟಿಸಬೇಕು. ಉದ್ಯೋಗ ನೇಮಕಾತಿಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರವನ್ನು ತಡೆಯಲು ಸರಕಾರ, ತಂತ್ರಜ್ಞಾನ ಮತ್ತು ಸಾರ್ವಜನಿಕರ ಜಂಟಿ ಹೋರಾಟವು ಅತ್ಯಗತ್ಯವಾಗಿದೆ. ಇದಕ್ಕೆ ಮುಖ್ಯವಾಗಿ ತಂತ್ರಜ್ಞಾನದ ಬಳಕೆ ಸಂಪೂರ್ಣ ಡಿಜಿಟಲೀಕರಣವಾಗಬೇಕಾಗಿದೆ. ಅರ್ಜಿ ಸಲ್ಲಿಕೆಯಿಂದ ಹಿಡಿದು ಫಲಿತಾಂಶ ಪ್ರಕಟಣೆಯವರೆಗೆ ಇಡೀ ಪ್ರಕ್ರಿಯೆಯನ್ನು ಆನ್‌ಲೈನ್ ಮಾಡುವುದು. ಕಂಪ್ಯೂಟರ್ ಆಧಾರಿತ ಪರೀಕ್ಷೆ (ಸಿಬಿಟಿ) ಹಸ್ತಚಾಲಿತ ಮೌಲ್ಯಮಾಪನವನ್ನು ತಪ್ಪಿಸಲು ಮತ್ತು ಪ್ರಶ್ನೆ ಪತ್ರಿಕೆ ಸೋರಿಕೆಯನ್ನು ತಡೆಯಲು ಆನ್‌ಲೈನ್ ಪರೀಕ್ಷೆಗಳನ್ನು ನಡೆಸುವುದು. ಬಯೋಮೆಟ್ರಿಕ್ ದೃಢೀಕರಣ: ಪರೀಕ್ಷಾ ಕೇಂದ್ರಗಳಲ್ಲಿ ನಕಲಿ ಅಭ್ಯರ್ಥಿಗಳನ್ನು ತಡೆಯಲು ಫಿಂಗರ್‌ಪ್ರಿಂಟ್ ಅಥವಾ ಫೇಸ್ ರೆಕಗ್ನಿಷನ್ ಕಡ್ಡಾಯಗೊಳಿಸುವುದು ಪ್ರಮುಖವಾದ ಪಾರದರ್ಶಕತೆಯು ಅವಶ್ಯಕವಾಗಿದೆ. ಗ್ರೂಪ್ ‘ಸಿ’ ಮತ್ತು ‘ಡಿ’ ಹುದ್ದೆಗಳಿಗೆ ಸಂದರ್ಶನಗಳನ್ನು ಸಂಪೂರ್ಣವಾಗಿ ರದ್ದುಗೊಳಿಸಬೇಕು. ಉನ್ನತ ಹುದ್ದೆಗಳ ಸಂದರ್ಶನಗಳನ್ನು ಕಡ್ಡಾಯವಾಗಿ ವೀಡಿಯೊ ರೆಕಾರ್ಡಿಂಗ್ ಮಾಡಬೇಕು. ನೇಮಕಾತಿ ಹಗರಣಗಳಿಗೆ ಸಂಬಂಧಿಸಿದ ಪ್ರಕರಣಗಳನ್ನು ಇತ್ಯರ್ಥಪಡಿಸಲು ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸಿ, ತಪ್ಪಿತಸ್ಥರಿಗೆ ತ್ವರಿತವಾಗಿ ಕಠಿಣ ಶಿಕ್ಷೆ ವಿಧಿಸಬೇಕು. ಭ್ರಷ್ಟಾಚಾರದಲ್ಲಿ ಭಾಗಿಯಾದ ಅಧಿಕಾರಿಗಳು ಮತ್ತು ಮಧ್ಯವರ್ತಿಗಳ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವ ಕಾನೂನು ತರಬೇಕು. ಪರೀಕ್ಷೆಗಳನ್ನು ನಡೆಸುವ ಖಾಸಗಿ ಏಜೆನ್ಸಿಗಳು ಅಕ್ರಮದಲ್ಲಿ ಭಾಗಿಯಾಗಿದ್ದರೆ ಅವುಗಳನ್ನು ಶಾಶ್ವತವಾಗಿ ಕಪ್ಪು ಪಟ್ಟಿಗೆ ಸೇರಿಸಬೇಕು. ಲೋಕಾಯುಕ್ತ ಅಥವಾ ಸಿಬಿಐನಂತಹ ಸಂಸ್ಥೆಗಳಿಗೆ ಹೆಚ್ಚಿನ ಸ್ವಾಯತ್ತೆ ನೀಡಿ, ಹಗರಣಗಳ ತನಿಖೆ ಯಾವುದೇ ರಾಜಕೀಯ ಪ್ರಭಾವವಿಲ್ಲದೆ ನಡೆಯುವಂತೆ ನೋಡಿಕೊಳ್ಳಬೇಕು. ಸಾರ್ವಜನಿಕ ಜಾಗೃತಿ ಮತ್ತು ದೂರು ವ್ಯವಸ್ಥೆ ಸುರಕ್ಷಿತ ಹೆಲ್ಪ್‌ಲೈನ್, ಲಂಚ ಕೇಳುವ ಭ್ರಷ್ಟರ ವಿರುದ್ಧ ಅಭ್ಯರ್ಥಿಗಳು ಭಯವಿಲ್ಲದೆ ದೂರು ನೀಡಲು ರಹಸ್ಯ ಹೆಲ್ಪ್‌ಲೈನ್ ಅಥವಾ ಆ್ಯಪ್‌ಗಳನ್ನು ಅಭಿವೃದ್ಧಿಪಡಿಸುವುದು. ಅಭ್ಯರ್ಥಿಗಳಿಗೆ ಕಾನೂನು ಕಠಿಣ ಕ್ರಮಗಳನ್ನು ಮತ್ತು ಶಿಕ್ಷೆಗಳ ಬಗ್ಗೆ ಜಾಗೃತಿಯನ್ನು ಮೂಡಿಸಿ, ಶಾರ್ಟ್‌ಕಟ್ ಅಥವಾ ಲಂಚದ ಮೂಲಕ ಕೆಲಸ ಗಿಟ್ಟಿಸಿಕೊಳ್ಳುವ ಪ್ರವೃತ್ತಿಯನ್ನು ಕೈ ಬಿಡುವಂತೆ ಅಭ್ಯರ್ಥಿಗಳು ಮತ್ತು ಪೋಷಕರಿಗೆ ಮನವರಿಕೆ ಮಾಡಿಕೊಡುವುದು ಅವಶ್ಯಕವಾಗಿದೆ. ಈ ಬದಲಾವಣೆಗಳು ಕೇವಲ ಕಾಗದದ ಮೇಲಿರದೆ, ರಾಜಕೀಯ ಇಚ್ಛಾಶಕ್ತಿ ಮತ್ತು ಆಡಳಿತಾತ್ಮಕ ದೃಢತೆಯೊಂದಿಗೆ ಜಾರಿಯಾದಾಗ ಮಾತ್ರ ಉದ್ಯೋಗ ನೇಮಕಾತಿಯಲ್ಲಿನ ವಿಳಂಬ ಮತ್ತು ಭ್ರಷ್ಟಾಚಾರಕ್ಕೆ ಶಾಶ್ವತ ತಡೆ ಬೀಳಲು ಸಾಧ್ಯ. ಅದೇ ರೀತಿಯಾಗಿ ಯುವ ಪೀಳಿಗೆಗೆ ನ್ಯಾಯ ಸಿಗಬೇಕಾದರೆ ವ್ಯವಸ್ಥೆಯ ಶುದ್ಧೀಕರಣವು ಅತ್ಯಗತ್ಯವಾಗಿದೆ.






