ಯುವಜನರು ಬೀದಿಗಿಳಿದಾಗ...
ಹೊಸ ಚಳವಳಿಗಳು, ಜೆನ್ ಝಿ ಮನಸ್ಥಿತಿ ಮತ್ತು ಜಾಗತಿಕ ಪ್ರಜಾಪ್ರಭುತ್ವದ ಪಾಠಗಳು

ಭಾಗ - 1
ಭಾರತದ ವಿದ್ಯಾರ್ಥಿ ಚಳವಳಿಗಳ ಇತಿಹಾಸವು ಕೇವಲ ಪ್ರತಿಭಟನೆಗಳ ಇತಿಹಾಸ ಮಾತ್ರ ಆಗಿರದೆ ಅದು ಭಾರತೀಯ ಸಮಾಜದ ಬದಲಾಗುತ್ತಿರುವ ಆದ್ಯತೆಗಳ ಇತಿಹಾಸವೂ ಆಗಿದೆ. ಪ್ರತಿಯೊಂದು ತಲೆಮಾರೂ ತನ್ನ ಕಾಲದ ಸಮಸ್ಯೆಗಳನ್ನು ತನ್ನದೇ ಆದ ಭಾಷೆಯಲ್ಲಿ ವ್ಯಕ್ತಪಡಿಸಿದೆ. ಆದರೆ ಒಂದು ವಿಷಯ ಮಾತ್ರ ಬದಲಾಗಿಲ್ಲ-ಭಾರತದಲ್ಲಿ ಯಾವುದೇ ದೊಡ್ಡ ಸಾಮಾಜಿಕ ಅಥವಾ ರಾಜಕೀಯ ಬದಲಾವಣೆ ಯುವಜನರ ಪಾಲ್ಗೊಳ್ಳುವಿಕೆಯಿಲ್ಲದೆ ಸಂಭವಿಸಿಲ್ಲ.
ಯಾವ ರಾಷ್ಟ್ರದ ಯುವಜನರು ಮೌನವಾಗಿರುತ್ತಾರೋ, ಆ ರಾಷ್ಟ್ರದ ಭವಿಷ್ಯವನ್ನು ಕೆಲವೇ ಜನರು ನಿರ್ಧರಿಸುತ್ತಾರೆ. ಆದರೆ ಯುವಜನರು ಪ್ರಶ್ನೆ ಕೇಳಲು ಆರಂಭಿಸಿದಾಗ, ಇತಿಹಾಸ ಹೊಸ ಅಧ್ಯಾಯವನ್ನು ಬರೆಯಲು ಆರಂಭಿಸುತ್ತದೆ. ಪ್ರಜಾಪ್ರಭುತ್ವದಲ್ಲಿ ಚುನಾವಣೆಗಳು ಅಧಿಕಾರವನ್ನು ಬದಲಾಯಿಸಿದರೆ ಚಳವಳಿಗಳು ಸಮಾಜದ ಚಿಂತನೆಯನ್ನೇ ಬದಲಾಯಿಸುತ್ತವೆ. ಭಾರತದ ಇತಿಹಾಸವನ್ನು ಗಮನಿಸಿದರೆ ಈ ಮಾತು ಮತ್ತಷ್ಟು ಸ್ಪಷ್ಟವಾಗುತ್ತದೆ. ಮಹಾತ್ಮಾ ಗಾಂಧಿಯವರ ಅಸಹಕಾರ ಚಳವಳಿ, ಭಾರತ ಬಿಟ್ಟು ತೊಲಗಿ ಚಳವಳಿ, ಅಂಬೇಡ್ಕರ್ ಅವರ ಸಮಾನತೆಗಾಗಿನ ಹೋರಾಟ, ವಿನೋಬಾರ ಭೂದಾನ ಆಂದೋಲನ, ಜಯಪ್ರಕಾಶ್ ನಾರಾಯಣ್ ಅವರ ಸಂಪೂರ್ಣ ಕ್ರಾಂತಿ, ಅಸ್ಸಾಂ ವಿದ್ಯಾರ್ಥಿ ಚಳವಳಿ, ನಿರ್ಭಯಾ ಚಳವಳಿ, ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧದ ಪ್ರತಿಭಟನೆಗಳು, 2020-21ರ ರೈತ ಚಳವಳಿ ಇವೆಲ್ಲವೂ ಭಾರತದ ರಾಜಕೀಯ ಮತ್ತು ಸಾಮಾಜಿಕ ಇತಿಹಾಸದ ದಿಕ್ಕನ್ನು ಬದಲಿಸಿದ ಜನಾಂದೋಲನಗಳಾಗಿವೆ. ಇವುಗಳಲ್ಲೆಲ್ಲ ಯುವಜನರ ಪಾಲ್ಗೊಳ್ಳುವಿಕೆ ಇರುವುದು ಒಂದು ಸಾಮಾನ್ಯ ಅಂಶವಾಗಿದೆ.
2026ರ ಭಾರತವೂ ಇದೇ ರೀತಿಯ ಮತ್ತೊಂದು ಸಂಕ್ರಮಣದ ಹಂತದಲ್ಲಿದೆ. ದೇಶದ ವಿವಿಧ ಭಾಗಗಳಲ್ಲಿ ನಡೆಯುತ್ತಿರುವ ಅನೇಕ ಚಳವಳಿಗಳು ರಾಷ್ಟ್ರೀಯ ಚರ್ಚೆಯ ಕೇಂದ್ರಬಿಂದುವಾಗಿವೆ. ಮಧ್ಯಪ್ರದೇಶದ ಛತ್ತರ್‌ಪುರ ಜಿಲ್ಲೆಯಲ್ಲಿ ನಡೆಯುತ್ತಿರುವ ಕೆನ್-ಬೇತ್ವಾ ನದಿ ಜೋಡಣೆಯ ವಿರೋಧಿ ಆಂದೋಲನ. ದಿಲ್ಲಿಯ ಜಂತರ್ ಮಂತರ್‌ನಲ್ಲಿ ಶಿಕ್ಷಣ, ಪರೀಕ್ಷಾ ಪಾರದರ್ಶಕತೆ ಮತ್ತು ವಿದ್ಯಾರ್ಥಿ ಹಕ್ಕುಗಳ ಕುರಿತ ಪ್ರತಿಭಟನೆಗಳು, ಭಾರತ-ಅಮೆರಿಕ ವ್ಯಾಪಾರ ಒಪ್ಪಂದದ ವಿರುದ್ಧ ಹರ್ಯಾಣ ಮತ್ತು ಪಂಜಾಬ್ ರೈತರ ಚಳವಳಿ, ಉತ್ತರಾಖಂಡದ ಮರಗಳನ್ನು ಉಳಿಸಿ ಚಳವಳಿ, ವಿಶಾಖಪಟ್ಟಣಂನ ಡೇಟಾ ಸೆಂಟರ್ ವಿರುದ್ಧದ ಚಳವಳಿ, ಮಣಿಪುರದ ಆಂದೋಲನ ಮತ್ತು ಇವುಗಳಲ್ಲದೆ ದೇಶದ ಅನೇಕ ಕಡೆ ನಡೆಯುತ್ತಿರುವ ಇತರ ಚಳವಳಿಗಳು ಗಮನ ಸೆಳೆಯುತ್ತಿವೆ.
ಈ ಎಲ್ಲಾ ಹೋರಾಟಗಳು ವಿಭಿನ್ನ ವಿಷಯಗಳನ್ನು ಪ್ರತಿನಿಧಿಸಿದರೂ, ಅವುಗಳನ್ನು ಒಗ್ಗೂಡಿಸುವ ಒಂದು ಸಾಮಾನ್ಯ ಎಳೆ ಏನೆಂದರೆ ಸರಕಾರದ ನೀತಿಗಳ ಬಗ್ಗೆ ಪ್ರಶ್ನೆ ಕೇಳುತ್ತಿರುವ ಹೊಸ ತಲೆಮಾರು. ಛತ್ತರ್‌ಪುರದ ಆಂದೋಲನವನ್ನು ನೋಡಿದರೆ ಅದು ಕೇವಲ ಭೂಸ್ವಾಧೀನದ ವಿರುದ್ಧದ ಹೋರಾಟವಲ್ಲ. ಅದು ಅಭಿವೃದ್ಧಿಯ ಅರ್ಥವನ್ನು ಮರುಪರಿಶೀಲಿಸುವ ಚಳವಳಿಯಾಗಿದೆ. ಅಭಿವೃದ್ಧಿ ಯಾರಿಗಾಗಿ? ಎಂಬ ಪ್ರಶ್ನೆಯನ್ನು ಈ ಚಳವಳಿ ಎತ್ತುತ್ತಿದೆ. ರಸ್ತೆ, ಅಣೆಕಟ್ಟು, ಕೈಗಾರಿಕೆಗಳು ದೇಶದ ಅಭಿವೃದ್ಧಿಗೆ ಅಗತ್ಯವೇ ಸರಿ; ಆದರೆ ಅದಕ್ಕಾಗಿ ಸಾವಿರಾರು ಕುಟುಂಬಗಳ ಜೀವನ, ಸಂಸ್ಕೃತಿ ಮತ್ತು ಭವಿಷ್ಯವನ್ನು ಬಲಿಕೊಡುವುದು ನ್ಯಾಯವೇ? ಈ ಪ್ರಶ್ನೆಗೆ ಉತ್ತರ ಹುಡುಕುವ ಪ್ರಯತ್ನವೇ ಈ ಚಳವಳಿಯ ಸಾರವಾಗಿದೆ. ಈ ಹೋರಾಟದಲ್ಲಿ ಪರಿಸರ ಹೋರಾಟಗಾರರು, ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಮತ್ತು ನಾಗರಿಕ ಸಮಾಜದ ಸಂಘಟನೆಗಳ ಬೆಂಬಲ ಕಾಣುತ್ತಿರುವುದು ಗಮನಾರ್ಹ.
ದಿಲ್ಲಿಯ ಜಂತರ್ ಮಂತರ್‌ನಲ್ಲಿ ನಡೆದ ವಿದ್ಯಾರ್ಥಿ ಚಳವಳಿ ಮತ್ತೊಂದು ಗಂಭೀರ ಸಂದೇಶವನ್ನು ನೀಡುತ್ತದೆ. ಪ್ರಶ್ನೆಪತ್ರಿಕೆ ಸೋರಿಕೆ, ನೇಮಕಾತಿಗಳ ವಿಳಂಬ, ಸ್ಪರ್ಧಾತ್ಮಕ ಪರೀಕ್ಷೆಗಳ ಮೇಲಿನ ವಿಶ್ವಾಸ ಕುಸಿತ ಮತ್ತು ನಿರುದ್ಯೋಗ ಇವು ಕೇವಲ ಆಡಳಿತದ ದೋಷಗಳಲ್ಲ; ಇವು ಯುವಜನರ ಕನಸುಗಳೊಂದಿಗೆ ನೇರವಾಗಿ ಸಂಬಂಧಿಸಿದ ಸಮಸ್ಯೆಗಳು. ಒಬ್ಬ ವಿದ್ಯಾರ್ಥಿ ಹತ್ತು-ಹದಿನೈದು ವರ್ಷಗಳ ಕಾಲ ಶಿಕ್ಷಣಕ್ಕಾಗಿ ಶ್ರಮಿಸಿ, ಕೊನೆಗೆ ಪರೀಕ್ಷಾ ವ್ಯವಸ್ಥೆಯ ಮೇಲೆಯೇ ವಿಶ್ವಾಸ ಕಳೆದುಕೊಂಡರೆ ಅದು ಕೇವಲ ವೈಯಕ್ತಿಕ ನೋವಾಗಿರುವುದಿಲ್ಲ; ಅದು ರಾಷ್ಟ್ರದ ಮಾನವ ಸಂಪನ್ಮೂಲದ ಮೇಲೆ ಬೀರುವ ದೊಡ್ಡ ಹೊಡೆತವಾಗುತ್ತದೆ. ಆದ್ದರಿಂದಲೇ ಈ ಚಳವಳಿಯಲ್ಲಿ ಭಾಗವಹಿಸುವ ಯುವಕರು ತಮ್ಮ ಭವಿಷ್ಯಕ್ಕಾಗಿ ಮಾತ್ರವಲ್ಲ, ವ್ಯವಸ್ಥೆಯ ವಿಶ್ವಾಸಾರ್ಹತೆಗಾಗಿ ಹೋರಾಡುತ್ತಿದ್ದಾರೆ.
ಇದೇ ಸಂದರ್ಭದಲ್ಲಿ ಪಂಜಾಬ್ ಮತ್ತು ಹರ್ಯಾಣದ ರೈತರ ಭಾರತ-ಅಮೆರಿಕ ವ್ಯಾಪಾರ ಒಪ್ಪಂದ ವಿರೋಧಿ ಹೋರಾಟವನ್ನು ಗಮನಿಸಿದರೆ, ಅದು ಜಾಗತೀಕರಣದ ಹೊಸ ಸವಾಲುಗಳನ್ನು ಪ್ರತಿಬಿಂಬಿಸುತ್ತದೆ. ಹಿಂದಿನ ರೈತ ಹೋರಾಟಗಳು ಹೆಚ್ಚಾಗಿ ಬೆಂಬಲ ಬೆಲೆ, ಕೃಷಿ ಕಾನೂನುಗಳು ಅಥವಾ ಸಾಲಮನ್ನಾದಂತಹ ವಿಷಯಗಳ ಸುತ್ತ ನಡೆದಿದ್ದವು. ಆದರೆ ಇಂದಿನ ಹೋರಾಟವು ಅಂತರ್‌ರಾಷ್ಟ್ರೀಯ ವ್ಯಾಪಾರ ಒಪ್ಪಂದಗಳ ಪರಿಣಾಮದ ಬಗ್ಗೆ ಎಚ್ಚರಿಕೆ ನೀಡುತ್ತಿದೆ. ವಿಶೇಷವೆಂದರೆ ಈ ಹೋರಾಟದಲ್ಲಿ ಹಿರಿಯ ರೈತರ ಜೊತೆಗೆ ಕೃಷಿ ಪದವೀಧರರು, ಗ್ರಾಮೀಣ ಯುವಕರು ಮತ್ತು ಸಾಮಾಜಿಕ ಮಾಧ್ಯಮಗಳ ಮೂಲಕ ಸಂಘಟಿತವಾಗಿರುವ ಹೊಸ ಪೀಳಿಗೆಯೂ ಸಕ್ರಿಯವಾಗಿದೆ. ಇದು ರೈತರ ಚಳವಳಿಯೂ ಹೊಸ ತಲೆಮಾರಿನ ಸ್ವರೂಪವನ್ನು ಪಡೆದುಕೊಳ್ಳುತ್ತಿರುವುದನ್ನು ಸೂಚಿಸುತ್ತದೆ.
ಈ ಎಲ್ಲಾ ಚಳವಳಿಗಳ ಬಹುತೇಕ ಸಂಘಟನೆ ಸಾಮಾಜಿಕ ಮಾಧ್ಯಮಗಳ ಮೂಲಕ ನಡೆದಿದೆ. ಒಂದು ಕಾಲದಲ್ಲಿ ಚಳವಳಿಗಳನ್ನು ಸಂಘಟಿಸಲು ತಿಂಗಳುಗಟ್ಟಲೆ ಸಭೆಗಳು ನಡೆಯುತ್ತಿದ್ದವು; ಈಗ ಕೆಲವೇ ಗಂಟೆಗಳಲ್ಲಿ ಲಕ್ಷಾಂತರ ಜನರಿಗೆ ಮಾಹಿತಿ ತಲುಪುತ್ತಿದೆ. ಈ ಡಿಜಿಟಲ್ ಕ್ರಾಂತಿಯು ಯುವಜನರನ್ನು ಅಭಿಪ್ರಾಯ ರೂಪಿಸುವ ಪ್ರಮುಖ ಶಕ್ತಿಯನ್ನಾಗಿ ಪರಿವರ್ತಿಸಿದೆ. ಆದರೆ ಡಿಜಿಟಲ್ ಮಾಧ್ಯಮಗಳು ಪ್ರಜಾಪ್ರಭುತ್ವವನ್ನು ಬಲಪಡಿಸುವಷ್ಟು ಶಕ್ತಿಯುತವಾಗಿದ್ದರೂ, ಅವು ತಪ್ಪು ಮಾಹಿತಿ, ಭಾವನಾತ್ಮಕ ಪ್ರಚೋದನೆ ಮತ್ತು ಸಮಾಜದ ಧ್ರುವೀಕರಣಕ್ಕೂ ಕಾರಣವಾಗಬಹುದು. ಇಂದಿನ ಯುವಜನರು ಹಿಂದಿನ ಯಾವುದೇ ತಲೆಮಾರಿಗಿಂತ ಹೆಚ್ಚು ಮಾಹಿತಿ ಹೊಂದಿದ್ದಾರೆ. ಅದೇ ಸಮಯದಲ್ಲಿ ಹೆಚ್ಚು ಗೊಂದಲಗಳನ್ನೂ ಎದುರಿಸುತ್ತಿದ್ದಾರೆ. ಏಕೆಂದರೆ, ಸತ್ಯ ಮತ್ತು ಸುಳ್ಳಿನ ನಡುವಿನ ಗಡಿ ಅನೇಕ ಬಾರಿ ಮಸುಕಾಗುತ್ತದೆ.
ಪ್ರತಿಯೊಂದು ಪೀಳಿಗೆಗೂ ತನ್ನದೇ ಆದ ಒಂದು ಐತಿಹಾಸಿಕ ಪ್ರಶ್ನೆ ಇರುತ್ತದೆ. 1940ರ ದಶಕದ ಯುವಜನರಿಗೆ ಸ್ವಾತಂತ್ರ್ಯ ಪ್ರಮುಖ ಪ್ರಶ್ನೆಯಾಗಿತ್ತು. 1970ರ ದಶಕದ ಯುವಕರಿಗೆ ಭ್ರಷ್ಟಾಚಾರ ಮತ್ತು ಆಡಳಿತ ಸುಧಾರಣೆ ಮುಖ್ಯವಾಗಿತ್ತು. 1990ರ ದಶಕದಲ್ಲಿ ಸಾಮಾಜಿಕ ನ್ಯಾಯ ಮತ್ತು ಮೀಸಲಾತಿ ಪ್ರಶ್ನೆಗಳು ಪ್ರಮುಖವಾಗಿದ್ದವು. 2010ರ ನಂತರದ ಯುವಜನರು ಮಹಿಳಾ ಸುರಕ್ಷತೆ, ಭ್ರಷ್ಟಾಚಾರ, ಪಾರದರ್ಶಕತೆ ಮತ್ತು ನಾಗರಿಕ ಹಕ್ಕುಗಳ ಬಗ್ಗೆ ಹೆಚ್ಚು ಧ್ವನಿ ಎತ್ತಿದರು. ಈಗ 2020ರ ದಶಕದ ಯುವಜನರ ಮುಂದೆ ಉದ್ಯೋಗ, ಶಿಕ್ಷಣದ ಗುಣಮಟ್ಟ, ಮಹಿಳಾ ಸಮಾನತೆ, ಸಾಂವಿಧಾನಿಕ ಮೌಲ್ಯಗಳ ಪುನರ್ ಸೃಷ್ಟಿ, ಡಿಜಿಟಲ್ ಸ್ವಾತಂತ್ರ್ಯ, ಹವಾಮಾನ ಬದಲಾವಣೆ, ಆರ್ಥಿಕ ಅಸಮಾನತೆ ಮತ್ತು ಜಾಗತಿಕ ಸ್ಪರ್ಧೆ ಎಂಬ ಹೊಸ ಪ್ರಶ್ನೆಗಳು ನಿಂತಿವೆ. ಆದ್ದರಿಂದ ಇಂದಿನ ಚಳವಳಿಗಳ ಸ್ವರೂಪವೂ ಹಿಂದಿನ ತಲೆಮಾರುಗಳಿಗಿಂತ ಭಿನ್ನವಾಗಿದೆ.
ಭಾರತದ ರಾಜಕೀಯ ಇತಿಹಾಸವನ್ನು ಓದಿದಾಗ ಒಂದು ಸಂಗತಿ ಸ್ಪಷ್ಟವಾಗಿ ಗೋಚರಿಸುತ್ತದೆ. ದೇಶದಲ್ಲಿ ಮಹತ್ವದ ತಿರುವುಗಳನ್ನು ತಂದ ಪ್ರತಿಯೊಂದು ಜನಾಂದೋಲನದಲ್ಲೂ ಯುವಜನರು ಮುಂಚೂಣಿಯಲ್ಲಿದ್ದರು. ಭಾರತದ ಸ್ವಾತಂತ್ರ್ಯ ಹೋರಾಟವೇ ಇದಕ್ಕೆ ಮೊದಲ ಸಾಕ್ಷಿ. 1905ರ ಬಂಗಾಳ ವಿಭಜನೆ ವಿರೋಧಿ ಸ್ವದೇಶಿ ಚಳವಳಿಯಿಂದ ಆರಂಭಿಸಿ 1920ರ ಅಸಹಕಾರ ಚಳವಳಿ, 1930ರ ಉಪ್ಪಿನ ಸತ್ಯಾಗ್ರಹ ಮತ್ತು 1942ರ ಭಾರತ ಬಿಟ್ಟು ತೊಲಗಿ ಚಳವಳಿಯವರೆಗೆ ಸಾವಿರಾರು ವಿದ್ಯಾರ್ಥಿಗಳು ಶಿಕ್ಷಣವನ್ನು ತಾತ್ಕಾಲಿಕವಾಗಿ ಬದಿಗಿಟ್ಟು ಬೀದಿಗಿಳಿದರು. ಮಹಾತ್ಮಾ ಗಾಂಧಿ ಅವರು ಯುವಜನರನ್ನು ಕೇವಲ ಹೋರಾಟಗಾರರನ್ನಾಗಿ ಮಾತ್ರವಲ್ಲದೆ, ಸಮಾಜ ಪರಿವರ್ತನೆಯ ಕಾರ್ಯಕರ್ತರನ್ನಾಗಿಯೂ ರೂಪಿಸಿದರು. ಅದೇ ಸಮಯದಲ್ಲಿ ಭಗತ್ ಸಿಂಗ್, ಸುಖದೇವ್, ರಾಜಗುರು, ಚಂದ್ರಶೇಖರ ಆಝಾದ್, ಖುದಿರಾಮ್ ಬೋಸ್ ಮುಂತಾದ ಯುವ ಕ್ರಾಂತಿಕಾರರು ದೇಶದ ಯುವ ಮನಸ್ಸಿನಲ್ಲಿ ದೇಶಭಕ್ತಿಯ ಹೊಸ ಚೈತನ್ಯವನ್ನು ಮೂಡಿಸಿದರು. ಇಪ್ಪತ್ತಮೂರು ವರ್ಷದ ಭಗತ್ ಸಿಂಗ್ ಬ್ರಿಟಿಷ್ ಸಾಮ್ರಾಜ್ಯಕ್ಕೆ ನೀಡಿದ ಸವಾಲು ಇಂದಿಗೂ ಯುವಶಕ್ತಿಯ ಸಂಕೇತವಾಗಿ ಉಳಿದಿದೆ.
ಸ್ವಾತಂತ್ರ್ಯದ ನಂತರವೂ ವಿದ್ಯಾರ್ಥಿ ಚಳವಳಿಗಳು ನಿಲ್ಲಲಿಲ್ಲ. 1973-74ರಲ್ಲಿ ಗುಜರಾತಿನಲ್ಲಿ ಆರಂಭವಾದ ನವ ನಿರ್ಮಾಣ ಚಳವಳಿ ಭ್ರಷ್ಟಾಚಾರ ಮತ್ತು ಬೆಲೆ ಏರಿಕೆಯ ವಿರುದ್ಧ ವಿದ್ಯಾರ್ಥಿಗಳು ನಡೆಸಿದ ಪ್ರತಿಭಟನೆಯಾಗಿತ್ತು. ಈ ಚಳವಳಿ ದೇಶಾದ್ಯಂತ ಚರ್ಚೆಗೆ ಗ್ರಾಸವಾಯಿತು. ಅದರ ಬೆನ್ನಲ್ಲೇ ಬಿಹಾರದಲ್ಲಿ ವಿದ್ಯಾರ್ಥಿಗಳು ಭ್ರಷ್ಟಾಚಾರ, ನಿರುದ್ಯೋಗ ಮತ್ತು ಆಡಳಿತದ ವಿರುದ್ಧ ಹೋರಾಟ ಆರಂಭಿಸಿದರು. ಈ ಹೋರಾಟಕ್ಕೆ ಸಮಾಜವಾದಿ ನಾಯಕ ಜಯಪ್ರಕಾಶ್ ನಾರಾಯಣ್ ನೇತೃತ್ವ ವಹಿಸಿದಾಗ ಅದು ‘ಸಂಪೂರ್ಣ ಕ್ರಾಂತಿ’ (Total Revolution) ಎಂಬ ರಾಷ್ಟ್ರೀಯ ಚಳವಳಿಯಾಗಿ ಬೆಳೆಯಿತು. 1974ರ ಈ ಚಳವಳಿಯಲ್ಲಿ ಸಾವಿರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಅವರ ಘೋಷಣೆ ಕೇವಲ ಸರಕಾರ ಬದಲಿಸುವುಕ್ಕೆ ಸೀಮಿತವಾಗಿರದೆ, ರಾಜಕೀಯ, ಶಿಕ್ಷಣ, ಆಡಳಿತ ಮತ್ತು ಸಮಾಜವನ್ನು ಪರಿವರ್ತಿಸುವುದಾಗಿತ್ತು. ಈ ಚಳವಳಿಯ ಪರಿಣಾಮವಾಗಿ ಭಾರತದ ರಾಜಕೀಯದಲ್ಲಿ ಮಹತ್ವದ ಬದಲಾವಣೆಗಳು ಸಂಭವಿಸಿದವು ಮತ್ತು 1975ರ ತುರ್ತು ಪರಿಸ್ಥಿತಿ ಹಾಗೂ ಅದರ ನಂತರದ ಬೆಳವಣಿಗೆಗಳಿಗೆ ಇದು ಪ್ರಮುಖ ಹಿನ್ನೆಲೆಯಾಯಿತು.
1980ರ ದಶಕದಲ್ಲಿ ಈಶಾನ್ಯ ಭಾರತ ಮತ್ತೊಂದು ದೊಡ್ಡ ವಿದ್ಯಾರ್ಥಿ ಚಳವಳಿಗೆ ಸಾಕ್ಷಿಯಾಯಿತು. ಆಲ್ ಅಸ್ಸಾಂ ಸ್ಟೂಡೆಂಟ್ಸ್ ಯೂನಿಯನ್ ನೇತೃತ್ವದಲ್ಲಿ ನಡೆದ ಅಸ್ಸಾಂ ಚಳವಳಿ (1979-1985) ಅಕ್ರಮ ವಲಸೆ, ಮತದಾರರ ಪಟ್ಟಿ ಮತ್ತು ಪ್ರಾದೇಶಿಕ ಅಸ್ತಿತ್ವದ ಪ್ರಶ್ನೆಗಳ ಸುತ್ತ ರೂಪುಗೊಂಡಿತು. ಈ ಚಳವಳಿಯಲ್ಲಿ ವಿದ್ಯಾರ್ಥಿಗಳು ಆರು ವರ್ಷಗಳ ಕಾಲ ನಿರಂತರ ಹೋರಾಟ ನಡೆಸಿದರು. ಅಂತಿಮವಾಗಿ 1985ರ ಅಸ್ಸಾಂ ಒಪ್ಪಂದ ಈ ಹೋರಾಟದ ಪ್ರಮುಖ ಫಲವಾಗಿ ಹೊರಹೊಮ್ಮಿತು. ಈ ಚಳವಳಿ ಭಾರತದ ಒಕ್ಕೂಟ ವ್ಯವಸ್ಥೆಯಲ್ಲಿ ವಿದ್ಯಾರ್ಥಿ ಸಂಘಟನೆಗಳು ಎಷ್ಟು ಪ್ರಭಾವಶಾಲಿಯಾಗಬಹುದು ಎಂಬುದನ್ನು ತೋರಿಸಿತು.
2012ರ ಡಿಸೆಂಬರ್‌ನಲ್ಲಿ ದಿಲ್ಲಿಯಲ್ಲಿ ನಡೆದ ನಿರ್ಭಯಾ ಅತ್ಯಾಚಾರ ಪ್ರಕರಣ ಭಾರತದ ಯುವಜನರ ಮನಸ್ಸನ್ನು ಆಳವಾಗಿ ಕಲುಕಿತು. ಯಾವುದೇ ರಾಜಕೀಯ ಪಕ್ಷದ ನೇತೃತ್ವವಿಲ್ಲದೆ ಸಾವಿರಾರು ವಿದ್ಯಾರ್ಥಿಗಳು, ಯುವತಿಯರು ಮತ್ತು ಯುವಕರು ಇಂಡಿಯಾ ಗೇಟ್ ಹಾಗೂ ರಾಜಪಥದಲ್ಲಿ ಸೇರಿ ಮಹಿಳಾ ಸುರಕ್ಷತೆಗಾಗಿ ಧ್ವನಿ ಎತ್ತಿದರು. ಈ ಚಳವಳಿಯು ಸರಕಾರವನ್ನು ಕಾನೂನು ತಿದ್ದುಪಡಿಗಳಿಗೆ ಒತ್ತಾಯಿಸಿತು. ಜಸ್ಟಿಸ್ ಜೆ.ಎಸ್. ವರ್ಮಾ ಸಮಿತಿ ರಚನೆಯಾಗಿ, 2013ರಲ್ಲಿ ಕ್ರಿಮಿನಲ್ ಕಾನೂನು ತಿದ್ದುಪಡಿ ಜಾರಿಯಾಯಿತು. ಈ ಘಟನೆ ಒಂದು ವಿಷಯವನ್ನು ಸ್ಪಷ್ಟಪಡಿಸಿತು. ಇಂದಿನ ಯುವಜನರು ಕೇವಲ ರಾಜಕೀಯ ವಿಷಯಗಳಿಗೆ ಮಾತ್ರ ಅಲ್ಲದೆ, ಸಾಮಾಜಿಕ ನ್ಯಾಯ ಮತ್ತು ಮಾನವ ಘನತೆಯ ಪ್ರಶ್ನೆಗಳಿಗೂ ಬೀದಿಗಿಳಿಯುತ್ತಾರೆ.
2019-20ರಲ್ಲಿ ಸಿಎಎ ಮತ್ತು ಎನ್‌ಆರ್‌ಸಿ ಕುರಿತ ಚರ್ಚೆಗಳು ದೇಶಾದ್ಯಂತ ವಿದ್ಯಾರ್ಥಿ ಚಳವಳಿಗಳಿಗೆ ಕಾರಣವಾ ದವು. ದಿಲ್ಲಿಯ ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ, ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯ, ಅಲಿಗಢ ಮುಸ್ಲಿಮ್ ವಿಶ್ವವಿದ್ಯಾನಿಲಯ ಸೇರಿದಂತೆ ಹಲವು ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ಈ ಚಳವಳಿಗೆ ಬೆಂಬಲವೂ ವ್ಯಕ್ತವಾಯಿತು, ವಿರೋಧವೂ ವ್ಯಕ್ತವಾಯಿತು. ಆದರೆ ಒಂದು ಸಂಗತಿ ಸ್ಪಷ್ಟವಾಗಿತ್ತು-ವಿದ್ಯಾರ್ಥಿಗಳು ಸಂವಿಧಾನ, ನಾಗರಿಕ ಹಕ್ಕುಗಳು ಮತ್ತು ಪ್ರಜಾಪ್ರಭುತ್ವದ ಪ್ರಶ್ನೆಗಳ ಬಗ್ಗೆ ಸಾರ್ವಜನಿಕ ಚರ್ಚೆಯ ಕೇಂದ್ರಬಿಂದುವಾಗಿದ್ದರು.
ಭಾರತದ ವಿದ್ಯಾರ್ಥಿ ಚಳವಳಿಗಳ ಇತಿಹಾಸವು ಕೇವಲ ಪ್ರತಿಭಟನೆಗಳ ಇತಿಹಾಸ ಮಾತ್ರ ಆಗಿರದೆ ಅದು ಭಾರತೀಯ ಸಮಾಜದ ಬದಲಾಗುತ್ತಿರುವ ಆದ್ಯತೆಗಳ ಇತಿಹಾಸವೂ ಆಗಿದೆ. ಪ್ರತಿಯೊಂದು ತಲೆಮಾರೂ ತನ್ನ ಕಾಲದ ಸಮಸ್ಯೆಗಳನ್ನು ತನ್ನದೇ ಆದ ಭಾಷೆಯಲ್ಲಿ ವ್ಯಕ್ತಪಡಿಸಿದೆ. ಆದರೆ ಒಂದು ವಿಷಯ ಮಾತ್ರ ಬದಲಾಗಿಲ್ಲ-ಭಾರತದಲ್ಲಿ ಯಾವುದೇ ದೊಡ್ಡ ಸಾಮಾಜಿಕ ಅಥವಾ ರಾಜಕೀಯ ಬದಲಾವಣೆ ಯುವಜನರ ಪಾಲ್ಗೊಳ್ಳುವಿಕೆಯಿಲ್ಲದೆ ಸಂಭವಿಸಿಲ್ಲ.
ಇಂದಿನ ಛತ್ತರ್‌ಪುರದ ಆಂದೋಲನವಾಗಲಿ, ಶಿಕ್ಷಣ ವ್ಯವಸ್ಥೆಯ ಸುಧಾರಣೆಗಾಗಿ ನಡೆಯುತ್ತಿರುವ ವಿದ್ಯಾರ್ಥಿ ಹೋರಾಟಗಳಾಗಲಿ ಅಥವಾ ರೈತರ ಹೊಸ ಪ್ರತಿಭಟನೆಗಳಾಗಲೀ ಅವುಗಳನ್ನು ಅರ್ಥಮಾಡಿಕೊಳ್ಳಲು ಭಾರತದ ಈ ಐತಿಹಾಸಿಕ ಪರಂಪರೆಯನ್ನು ಮರೆಯಲು ಸಾಧ್ಯವಿಲ್ಲ. ಏಕೆಂದರೆ ಇಂದಿನ ಯುವಜನರು ಹೊಸ ಪ್ರಶ್ನೆಗಳನ್ನು ಕೇಳುತ್ತಿದ್ದರೂ, ಅವರು ನಿಂತಿರುವ ನೆಲವನ್ನು ರೂಪಿಸಿದ್ದು ಹಿಂದಿನ ತಲೆಮಾರುಗಳ ಹೋರಾಟಗಳೇ.






