ಅತಿಥಿ ಶಿಕ್ಷಕರಿಗೆ ನ್ಯಾಯ ಎಲ್ಲಿದೆ?

ಸಂಡೂರು : ಕಳೆದ ಶೈಕ್ಷಣಿಕ ವರ್ಷ 2025-26ರಲ್ಲಿ ರಾಜ್ಯದ ಸರಕಾರಿ ಶಾಲೆಗಳಲ್ಲಿ ಸುಮಾರು 51 ಸಾವಿರಕ್ಕೂ ಹೆಚ್ಚು ಅತಿಥಿ ಶಿಕ್ಷಕರು ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣದ ಅಡಿಪಾಯವನ್ನು ಬಲಪಡಿಸುವಲ್ಲಿ ಮಹತ್ವದ ಪಾತ್ರವಹಿಸಿದ್ದರೂ, ಅವರ ಬದುಕಿನ ಸ್ಥಿತಿ ಇನ್ನೂ ಅನಿಶ್ಚಿತತೆಯಲ್ಲಿಯೇ ಉಳಿದಿದೆ ಎಂದು ಅಸಮಾಧಾನ ವ್ಯಕ್ತವಾಗಿದೆ. ಶಿಕ್ಷಕರ ನೇಮಕಾತಿಗೆ ಅಗತ್ಯ ಸಿದ್ಧತೆ ಮಾಡಿಕೊಂಡಿದ್ದೇವೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹಲವು ಬಾರಿ ಹೇಳಿಕೆ ನೀಡಿದರೂ, ಇದುವರೆಗೂ ಯಾವುದೇ ಸ್ಪಷ್ಟ ನೇಮಕಾತಿ ಪ್ರಕ್ರಿಯೆ ಆರಂಭವಾಗಿಲ್ಲ ಎಂದು ಅತಿಥಿ ಶಿಕ್ಷಕರು ಆರೋಪಿಸಿದ್ದಾರೆ.
ರಾಜ್ಯಮಟ್ಟದಲ್ಲಿ ಫ್ರೀಡಂ ಪಾರ್ಕ್ ಹಾಗೂ ಸುವರ್ಣಸೌಧ ಮುಂಭಾಗದಲ್ಲಿ ಅತಿಥಿ ಶಿಕ್ಷಕರು ಹಲವು ಬಾರಿ ಹೋರಾಟ ನಡೆಸಿದ್ದಾರೆ. ಜಿಲ್ಲಾ ಮಟ್ಟದಲ್ಲಿಯೂ ಅನೇಕ ಬಾರಿ ಪ್ರತಿಭಟನೆಗಳು ನಡೆದಿವೆ. ಆದಾಗ್ಯೂ, ಈ ಹೋರಾಟಗಳಿಗೆ ಸ್ಪಷ್ಟ ಫಲಿತಾಂಶ ದೊರಕಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಹೋರಾಟಗಳ ಪರಿಣಾಮವಾಗಿ ಸರಕಾರ ಕೇವಲ 1000ರೂ.-2000ರೂ. ಅಷ್ಟು ವೇತನ ಹೆಚ್ಚಳ ಮಾಡಿರುವುದು ‘ಮೂಗಿಗೆ ತುಪ್ಪ ಸವರಿಸುವ’ ಕ್ರಮವಾಗಿದೆ ಎಂದು ಶಿಕ್ಷಕರು ಟೀಕಿಸಿದ್ದಾರೆ. ಹತ್ತರಿಂದ ಹದಿನೈದು ವರ್ಷಗಳವರೆಗೆ ಸೇವೆ ಸಲ್ಲಿಸಿರುವ ಶಿಕ್ಷಕರ ಅನುಭವವನ್ನು ಪರಿಗಣಿಸದೆ, ಪ್ರತಿ ವರ್ಷ ಮೆರಿಟ್ ಆಧಾರಿತ ನೇಮಕಾತಿ ಪದ್ಧತಿ ಅನುಸರಿಸಲಾಗುತ್ತಿದೆ. ಇದರಿಂದ ಅನೇಕರು ಉದ್ಯೋಗದಿಂದ ಹೊರಗುಳಿಯುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ತಿಳಿಸಿದ್ದಾರೆ.
ತಿಂಗಳಿಗೆ ಕೇವಲ 12,000ರೂ. ಸಂಬಳದಲ್ಲಿ, ವರ್ಷದಲ್ಲಿ 10 ತಿಂಗಳು ಮಾತ್ರ ಕರ್ತವ್ಯ ನಿರ್ವಹಿಸುವ ಒಪ್ಪಂದ ವ್ಯವಸ್ಥೆ ಅವರ ಜೀವನವನ್ನು ಸಂಕಷ್ಟಕರವಾಗಿಸಿದೆ. 2026-27ನೇ ಶೈಕ್ಷಣಿಕ ವರ್ಷದಲ್ಲಿ ವಿಶೇಷವಾಗಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ದ್ವಿಭಾಷಾ ಮಾಧ್ಯಮ ಶಾಲೆಗಳ ಆರಂಭದಿಂದ ಶಿಕ್ಷಕರ ಬೇಡಿಕೆ ಹೆಚ್ಚಾಗುವ ಸಾಧ್ಯತೆ ಇದೆ. ಆದರೆ ಪ್ರಾಥಮಿಕ ಶಾಲೆಗಳ ಶಿಕ್ಷಕರ ನೇಮಕಾತಿಗೆ ತಡೆ ನೀಡಲಾಗಿದ್ದು, ಇನ್ನೂ ನಾಲ್ಕರಿಂದ ಐದು ವರ್ಷಗಳವರೆಗೆ ನೇಮಕಾತಿ ನಡೆಯುವುದಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ. ಆರ್ಥಿಕ ಇಲಾಖೆಯಿಂದ ಅನುಮೋದನೆಗೊಂಡ 4264 ಶಿಕ್ಷಕರ ನೇಮಕಾತಿ ನೋಟಿಫಿಕೇಶನ್ ರದ್ದುಪಡಿಸಿರುವುದು ಆತಂಕಕ್ಕೆ ಕಾರಣವಾಗಿದೆ.
ಸರಕಾರ ಅತಿಥಿ ಶಿಕ್ಷಕರ ಸೇವೆಯನ್ನು ಬಳಸಿಕೊಳ್ಳುತ್ತಿದ್ದರೂ, ಕನಿಷ್ಠ ವೇತನ, ಸೇವಾ ಭದ್ರತೆ ಅಥವಾ ಸಾಮಾಜಿಕ ಭದ್ರತೆ ನೀಡದಿರುವುದು ಟೀಕೆಗೆ ಗುರಿಯಾಗಿದೆ. ಸುಪ್ರೀಂ ಕೋರ್ಟ್ ಸೂಚಿಸಿರುವ ‘ಸಮಾನ ಕೆಲಸಕ್ಕೆ ಸಮಾನ ವೇತನ’ ಎಂಬ ಹಕ್ಕು ಕೂಡ ಇವರಿಗೆ ಲಭ್ಯವಾಗುತ್ತಿಲ್ಲ ಎಂದು ಆರೋಪಿಸಲಾಗಿದೆ. ಕಾರ್ಮಿಕ ಸಚಿವ ಸಂತೋಷ್ ಲಾಡ್ ಎಲ್ಲ ಕ್ಷೇತ್ರಗಳಲ್ಲಿ ಕನಿಷ್ಠ ವೇತನ ಜಾರಿಗೆ ತರಲಾಗುವುದು ಎಂದು ಹೇಳಿದ್ದರೂ, ಶಿಕ್ಷಣ ಇಲಾಖೆಯ ಅತಿಥಿ ಶಿಕ್ಷಕರಿಗೆ ಅದು ಅನ್ವಯವಾಗದಿರುವುದು ಪ್ರಶ್ನೆಗೆ ಕಾರಣವಾಗಿದೆ.
ಸೇವಾ ಭದ್ರತೆ ಇಲ್ಲದೆ, ರಜೆ ಸೌಲಭ್ಯಗಳಿಲ್ಲದೆ, ಕಡಿಮೆ ವೇತನದಲ್ಲಿ ಕಾರ್ಯನಿರ್ವಹಿಸುತ್ತಿದ್ದರೂ ಅತಿಥಿ ಶಿಕ್ಷಕರು ಶಾಲೆಗಳಲ್ಲಿ ಉತ್ತಮ ಫಲಿತಾಂಶ ತರುವಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದಾರೆ. ಅವರ ಸೇವೆಯನ್ನು ಗುರುತಿಸಿ, ಗೌರವಯುತ ಬದುಕಿಗೆ ಅಗತ್ಯವಾದ ವೇತನ, ಖಾಯಂ ಸೇವಾ ಭದ್ರತೆ ಹಾಗೂ ಸರಕಾರದ ಎಲ್ಲಾ ಸೌಲಭ್ಯಗಳನ್ನು ತಕ್ಷಣ ಕಲ್ಪಿಸಬೇಕು ಎಂದು ಒತ್ತಾಯಿಸಲಾಗಿದೆ.
‘‘ಸಮಾನ ಕೆಲಸಕ್ಕೆ ಸಮಾನ ವೇತನ ಎಂಬ ಹಕ್ಕು ಕೂಡ ನಮಗೆ ಸಿಗುತ್ತಿಲ್ಲ. ದೀರ್ಘಕಾಲ ಸೇವೆ ಸಲ್ಲಿಸಿದ ಶಿಕ್ಷಕರ ಅನುಭವವನ್ನು ಪರಿಗಣಿಸಿ, ಕನಿಷ್ಠ ವೇತನ, ಸೇವಾ ಭದ್ರತೆ ಮತ್ತು ಮಾನವೀಯ ಸೌಲಭ್ಯಗಳನ್ನು ಸರಕಾರ ಒದಗಿಸಬೇಕು,’’ ಎಂದು ರಾಜ್ಯಾಧ್ಯಕ್ಷೆ ಚಿತ್ರಲೇಖ ಆಗ್ರಹಿಸಿದರು.
ಒಟ್ಟಾರೆ, ರಾಜ್ಯದ ಶಿಕ್ಷಣ ವ್ಯವಸ್ಥೆಗೆ ಬೆನ್ನೆಲುಬಾಗಿರುವ ಅತಿಥಿ ಶಿಕ್ಷಕರ ಸಮಸ್ಯೆಗಳನ್ನು ಸರಕಾರ ಗಂಭೀರವಾಗಿ ಪರಿಗಣಿಸಿ, ಶಾಶ್ವತ ಪರಿಹಾರ ಒದಗಿಸುವ ಅಗತ್ಯತೆ ಎದುರಾಗಿದೆ.






