‘Tr.’ ಬಳಸಲು ಯಾರೆಲ್ಲ ಅರ್ಹರು?

ಕರ್ನಾಟಕ ಸರಕಾರವು ‘Tr.’ ಗೌರವಸೂಚಕ ಪದವನ್ನು ಬಳಸಲು ಅರ್ಹರಾದ ಶಿಕ್ಷಕರ ಕುರಿತು ಸ್ಪಷ್ಟ, ಪಾರದರ್ಶಕ, ಕಾನೂನುಬದ್ಧ ಹಾಗೂ ವರ್ಗವಾರು ಮಾರ್ಗಸೂಚಿಯನ್ನು ತಕ್ಷಣ ಪ್ರಕಟಿಸಬೇಕು ಎಂದು ಕರ್ನಾಟಕ ರಾಜ್ಯ Sಆಒಅ ಸಮನ್ವಯ ಕೇಂದ್ರ ವೇದಿಕೆ (ರಿ.) ಆಗ್ರಹಿಸುತ್ತದೆ. ಇದು ಶಿಕ್ಷಕರ ವಿರೋಧದ ನಿಲುವಲ್ಲ. ಇದು ಶಿಕ್ಷಕರ ಗೌರವವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುವ ನಿಲುವು. ಇದು ಮಕ್ಕಳ ಹಕ್ಕು ಮತ್ತು ಗುಣಮಟ್ಟದ ಶಿಕ್ಷಣದ ಪರವಾದ ನಿಲುವು.
ಶಿಕ್ಷಕರ ದಿನಾಚರಣೆಯ ಸಂದರ್ಭದಲ್ಲಿ ಕರ್ನಾಟಕದ ಶಿಕ್ಷಕರು ತಮ್ಮ ಹೆಸರಿನ ಮುಂದೆ ‘Tr.’ ಎಂಬ ಗೌರವಸೂಚಕ ಪದವನ್ನು ಬಳಸಬಹುದೆಂದು ರಾಜ್ಯ ಸರಕಾರ ಘೋಷಿಸಿರುವುದನ್ನು ಕರ್ನಾಟಕ ರಾಜ್ಯ SDMC ಸಮನ್ವಯ ಕೇಂದ್ರ ವೇದಿಕೆ ಹೃತ್ಪೂರ್ವಕವಾಗಿ ಸ್ವಾಗತಿಸುತ್ತದೆ. ಶಿಕ್ಷಕರ ವೃತ್ತಿಗೆ ಸಾಮಾಜಿಕ ಗೌರವ ಮತ್ತು ವೃತ್ತಿಪರ ಗುರುತನ್ನು ನೀಡುವ ಉದ್ದೇಶದ ಈ ಕ್ರಮವನ್ನು ಎಸ್‌ಡಿಎಂಸಿ ಕೇಂದ್ರ ವೇದಿಕೆ ಅಭಿನಂದಿಸುತ್ತದೆ.
ರಾಷ್ಟ್ರವನ್ನು ಕಟ್ಟುವ ಪ್ರತಿಯೊಬ್ಬ ವ್ಯಕ್ತಿಯ ಹಿಂದೆ, ಆ ವ್ಯಕ್ತಿಯನ್ನು ರೂಪಿಸಿದ ಒಬ್ಬ ಶಿಕ್ಷಕರಿರುತ್ತಾರೆ. ವೈದ್ಯರು, ಇಂಜಿನಿಯರ್‌ಗಳು, ರೈತರು, ಅಧಿಕಾರಿಗಳು, ಉದ್ಯಮಿಗಳು, ವಿಜ್ಞಾನಿಗಳು ಹಾಗೂ ಸಮಾಜವನ್ನು ಮುನ್ನಡೆಸುವ ನಾಯಕರು ಸೇರಿದಂತೆ ಪ್ರತಿಯೊಬ್ಬರ ಬದುಕಿನ ಹಿಂದೆ ಶಿಕ್ಷಕರ ಶ್ರಮವಿದೆ. ಮಕ್ಕಳ ಸಾಮರ್ಥ್ಯವನ್ನು ಮೊದಲು ಗುರುತಿಸಿ, ಅವರಲ್ಲಿ ಆತ್ಮವಿಶ್ವಾಸ ತುಂಬಿ, ‘ನೀನು ಸಾಧಿಸಬಲ್ಲೆ’ ಎಂದು ಪ್ರೇರೇಪಿಸುವ ಶಿಕ್ಷಕರ ಸೇವೆ ನಿಜಕ್ಕೂ ಅಮೂಲ್ಯವಾದುದು. ಆದ್ದರಿಂದ ಶಿಕ್ಷಕರಿಗೆ ‘Tr.’ ಎಂಬ ಗೌರವಸೂಚಕ ಪದ ನೀಡುವ ನಿರ್ಧಾರವನ್ನು ನಾವು ಸ್ವಾಗತಿಸುತ್ತೇವೆ. ಆದರೆ, ಈ ಘೋಷಣೆಯೊಂದಿಗೆ ಸರಕಾರವು ತಕ್ಷಣವೇ ಸ್ಪಷ್ಟಪಡಿಸಬೇಕಾದ ಅತ್ಯಂತ ಪ್ರಮುಖ ಪ್ರಶ್ನೆಯೊಂದಿದೆ: ‘Tr.’ ಎಂಬ ಗೌರವಸೂಚಕ ಪದವನ್ನು ಯಾರೆಲ್ಲ ಬಳಸಬಹುದು?
ಈ ಪ್ರಶ್ನೆಗೆ ಸ್ಪಷ್ಟವಾದ, ಕಾನೂನುಬದ್ಧವಾದ, ಪಾರದರ್ಶಕವಾದ ಹಾಗೂ ಎಲ್ಲರಿಗೂ ಸಮಾನವಾಗಿ ಅನ್ವಯವಾಗುವ ಮಾನದಂಡವನ್ನು ಸರಕಾರ ಪ್ರಕಟಿಸಬೇಕು.
ಒಂದು ಸರಕಾರಿ ಪ್ರಾಥಮಿಕ ಅಥವಾ ಪ್ರೌಢಶಾಲೆಯನ್ನು ತೆಗೆದುಕೊಂಡರೆ ಅಲ್ಲಿ PST, TGT, GPT ಸೇರಿದಂತೆ ವಿವಿಧ ಹುದ್ದೆಗಳ ನಿಯಮಿತ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ. ಅದೇ ಶಾಲೆಗಳಲ್ಲಿ ಮಕ್ಕಳಿಗೆ ಪಾಠ ಮಾಡುತ್ತಿರುವ ಸುಮಾರು 51,000 ಅತಿಥಿ ಶಿಕ್ಷಕರೂ ಇದ್ದಾರೆ. ಇವರು ಕೂಡ ಪ್ರತಿದಿನ ಮಕ್ಕಳ ಮುಂದೆ ನಿಂತು ಪಠ್ಯಕ್ರಮ ಬೋಧಿಸುತ್ತಿದ್ದಾರೆ, ಮಕ್ಕಳ ಕಲಿಕೆಯನ್ನು ಸುಧಾರಿಸುತ್ತಿದ್ದಾರೆ ಹಾಗೂ ಶಾಲೆಯ ಶೈಕ್ಷಣಿಕ ಚಟುವಟಿಕೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಹಾಗಾದರೆ, ಅತಿಥಿ ಶಿಕ್ಷಕರಿಗೂ ‘Tr.’ ಬಳಸಲು ಅವಕಾಶವಿದೆಯೇ? ಸರಕಾರ ಇದನ್ನು ಸ್ಪಷ್ಟಪಡಿಸಬೇಕು. ECCE ಶಿಕ್ಷಕರ ವಿಚಾರವೂ ಸ್ಪಷ್ಟವಾಗಬೇಕು
ಸರಕಾರಿ ಶಾಲೆಗಳಲ್ಲಿ ಪುಟ್ಟ ಪುಟ್ಟ ಮಕ್ಕಳಿಗೆ ಪೂರ್ವಪ್ರಾಥಮಿಕ ಶಿಕ್ಷಣ ನೀಡುತ್ತಿರುವ ECCE ಶಿಕ್ಷಕರು ಕೂಡ ಇದ್ದಾರೆ. ಅವರಲ್ಲಿ ವಿವಿಧ ಶೈಕ್ಷಣಿಕ ಮತ್ತು ತರಬೇತಿ ಅರ್ಹತೆಗಳನ್ನು ಹೊಂದಿರುವವರಿದ್ದಾರೆ. ಕೆಲವರು TET ಉತ್ತೀರ್ಣರಾಗಿರುವವರೂ ಇದ್ದಾರೆ. ಹಾಗಾದರೆ, ಇಅಅಇ ಶಿಕ್ಷಕರಿಗೂ ‘Tr.’ ಅನ್ವಯವಾಗುತ್ತದೆಯೇ?
ECCE ಕುರಿತು ಸುಪ್ರೀಂ ಕೋರ್ಟ್‌ನ ನಿಲುವನ್ನು ಪರಿಗಣಿಸಬೇಕು. ‘Tr.’ ಎಂಬ ಗೌರವಸೂಚಕ ಪದದ ಮಾನದಂಡ ರೂಪಿಸುವ ಸಂದರ್ಭದಲ್ಲಿ RTE Act, 2009, NCTE ನಿಯಮಗಳು ಹಾಗೂ ಶಿಕ್ಷಕರ ಕನಿಷ್ಠ ಅರ್ಹತೆಗಳಿಗೆ ಸಂಬಂಧಿಸಿದ ಸುಪ್ರೀಂ ಕೋರ್ಟ್‌ನ ತೀರ್ಪುಗಳನ್ನು ಸರಕಾರ ಪರಿಗಣಿಸಬೇಕು.
ವಿಶೇಷವಾಗಿ TETಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಶಿಕ್ಷಕರ ಕನಿಷ್ಠ ಅರ್ಹತೆಯ ವಿಷಯದಲ್ಲಿ ಮಹತ್ವದ ನಿಲುವು ವ್ಯಕ್ತಪಡಿಸಿದೆ. ಆದ್ದರಿಂದ TET ವ್ಯವಸ್ಥೆಯನ್ನೇ ಪ್ರಶ್ನಿಸುವುದು ಅಥವಾ RTE ಕಾಯ್ದೆಯಡಿ ನಿಗದಿಪಡಿಸಿರುವ ಶಿಕ್ಷಕರ ಕನಿಷ್ಠ ಅರ್ಹತಾ ವ್ಯವಸ್ಥೆಯನ್ನು ಕಡೆಗಣಿಸುವ ಪ್ರಯತ್ನಗಳು ಮಕ್ಕಳ ಗುಣಮಟ್ಟದ ಶಿಕ್ಷಣದ ಹಕ್ಕಿನ ದೃಷ್ಟಿಯಿಂದ ಗಂಭೀರವಾಗಿ ಪರಿಗಣಿಸಬೇಕಾದ ವಿಚಾರವಾಗಿದೆ.
TET ಎನ್ನುವುದು ಶಿಕ್ಷಕರನ್ನು ಅವಮಾನಿಸುವ ಪರೀಕ್ಷೆಯಲ್ಲ. ಅದು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಒದಗಿಸಲು ಶಿಕ್ಷಕರ ಕನಿಷ್ಠ ವೃತ್ತಿಪರ ಸಾಮರ್ಥ್ಯವನ್ನು ಖಚಿತಪಡಿಸುವ ವ್ಯವಸ್ಥೆಯಾಗಿದೆ. ಶಿಕ್ಷಕರಿಗೆ ಗೌರವ ನೀಡುವುದರ ಜೊತೆಗೆ ಶಿಕ್ಷಕರ ವೃತ್ತಿಪರ ಅರ್ಹತೆಯನ್ನೂ ಕಾಪಾಡುವುದು ಅತ್ಯಗತ್ಯ. ಶಿಕ್ಷಕರ ಗೌರವವೂ ಬೇಕು, ಮಕ್ಕಳ ಗುಣಮಟ್ಟದ ಶಿಕ್ಷಣದ ಹಕ್ಕಿನ ರಕ್ಷಣೆಯೂ ಬೇಕು.
ಶಿಕ್ಷಕರ ಅರ್ಹತೆಯಲ್ಲಿ ಇರುವ ವ್ಯತ್ಯಾಸಕ್ಕೆ ಸರಕಾರ ಮಾನದಂಡ ರೂಪಿಸಬೇಕು. ಇಂದು ಶಿಕ್ಷಣ ಕ್ಷೇತ್ರದಲ್ಲಿ ವಿವಿಧ ಶೈಕ್ಷಣಿಕ ಅರ್ಹತೆ ಮತ್ತು ತರಬೇತಿ ಹೊಂದಿರುವವರು ಮಕ್ಕಳಿಗೆ ಬೋಧಿಸುತ್ತಿದ್ದಾರೆ. ಒಂದು ಕಡೆ SSLC/PUC ನಂತರ TCH/D.Ed. ಮುಂತಾದ ಶಿಕ್ಷಕರ ತರಬೇತಿ ಪಡೆದವರು ಇದ್ದಾರೆ. ಮತ್ತೊಂದು ಕಡೆ ಪದವಿ +B.Ed+TET ಹೊಂದಿರುವ ಶಿಕ್ಷಕರಿದ್ದಾರೆ.
ಇನ್ನೊಂದು ಕಡೆ ಸ್ನಾತಕೋತ್ತರ ಪದವಿ +B.Ed+TET ಹೊಂದಿರುವ ಶಿಕ್ಷಕರಿದ್ದಾರೆ. ಮತ್ತೊಂದು ಕಡೆ ECCE/ನರ್ಸರಿ ತರಬೇತಿ ಹೊಂದಿ ಪುಟ್ಟ ಮಕ್ಕಳಿಗೆ ಶಿಕ್ಷಣ ನೀಡುತ್ತಿರುವ ಶಿಕ್ಷಕರಿದ್ದಾರೆ. ಇದರ ಜೊತೆಗೆ ಕಂಪ್ಯೂಟರ್ ಶಿಕ್ಷಕರು, ಎಐ ಶಿಕ್ಷಣ ನೀಡುವವರು, ದೈಹಿಕ ಶಿಕ್ಷಣ ಶಿಕ್ಷಕರು, ಸಂಗೀತ ಶಿಕ್ಷಕರು, ಚಿತ್ರಕಲೆ ಶಿಕ್ಷಕರು, ನೃತ್ಯ ಶಿಕ್ಷಕರು, ಕ್ರೀಡಾ ತರಬೇತುದಾರರು, ವಿವಿಧ ಚಟುವಟಿಕೆ ಆಧಾರಿತ ಶಿಕ್ಷಣ ನೀಡುವವರು ಇವರೂ ಸೇರಿದಂತೆ ಹಲವು ವಿಭಾಗದವರು ಮಕ್ಕಳ ಶಿಕ್ಷಣದಲ್ಲಿ ತಮ್ಮದೇ ಆದ ಕೊಡುಗೆ ನೀಡುತ್ತಿದ್ದಾರೆ. ಹಾಗೆಯೇ ಸರಕಾರಿ ಶಾಲೆಗಳ ಶಿಕ್ಷಕರು, ಅತಿಥಿ ಶಿಕ್ಷಕರು, ಗೌರವ ಶಿಕ್ಷಕರು, ಅನುದಾನಿತ ಶಾಲೆಗಳ ಶಿಕ್ಷಕರು, ಮಾನ್ಯತೆ ಪಡೆದ ಖಾಸಗಿ ಶಾಲೆಗಳ ಶಿಕ್ಷಕರು, ಇತರ ಶಿಕ್ಷಣ ಸಂಸ್ಥೆಗಳ ಶಿಕ್ಷಕರು, ಟ್ಯೂಷನ್ ಮತ್ತು ಕೋಚಿಂಗ್ ಕೇಂದ್ರಗಳಲ್ಲಿ ಬೋಧಿಸುವವರು ಎಂಬ ಹಲವು ವರ್ಗಗಳಿವೆ. ಹೀಗಿರುವಾಗ ‘Tr.’ ಎಂಬ ಗೌರವಸೂಚಕ ಪದದ ವ್ಯಾಪ್ತಿಯನ್ನು ಸರಕಾರ ಹೇಗೆ ನಿರ್ಧರಿಸಲಿದೆ? ಇದು ಸ್ಪಷ್ಟವಾಗಲೇಬೇಕು.
‘Tr.’ ಗೌರವಕ್ಕೆ ಮಾನದಂಡ ಅಗತ್ಯ ಎನ್ನುವುದು ಯಾರನ್ನೂ ಅವಮಾನಿಸುವ ಉದ್ದೇಶವಿಲ್ಲ, ಆದರೆ ಯಾರಿಗೆ ಈ ಗೌರವ ಕೊಡಬೇಕು ಎನ್ನುವುದರ ಸ್ಪಷ್ಟತೆ ಬೇಕು. ಕರ್ನಾಟಕ ರಾಜ್ಯ SDMC ಸಮನ್ವಯ ಕೇಂದ್ರ ವೇದಿಕೆ ಯಾವುದೇ ವರ್ಗದ ಶಿಕ್ಷಕರ ಸೇವೆಯನ್ನು ಕಡಿಮೆ ಮಾಡಲು ಈ ಪ್ರಶ್ನೆಯನ್ನು ಕೇಳುತ್ತಿಲ್ಲ. ಅತಿಥಿ ಶಿಕ್ಷಕರ ಸೇವೆಯನ್ನೂ ನಾವು ಗೌರವಿಸುತ್ತೇವೆ. ECCE ಶಿಕ್ಷಕರ ಸೇವೆಯನ್ನೂ ಗೌರವಿಸುತ್ತೇವೆ. ಸರಕಾರಿ, ಅನುದಾನಿತ ಹಾಗೂ ಮಾನ್ಯತೆ ಪಡೆದ ಖಾಸಗಿ ಶಾಲೆಗಳ ಶಿಕ್ಷಕರ ಸೇವೆಯನ್ನೂ ಗೌರವಿಸುತ್ತೇವೆ. ಮಕ್ಕಳಿಗೆ ಜ್ಞಾನ, ಕೌಶಲ್ಯಮತ್ತು ಮೌಲ್ಯಗಳನ್ನು ನೀಡುವ ಪ್ರತಿಯೊಬ್ಬರ ಸೇವೆಯನ್ನೂ ನಾವು ಗೌರವಿಸುತ್ತೇವೆ. ಆದರೆ ‘Tr.’ ಎಂಬುದು ಸರಕಾರದಿಂದ ಅಧಿಕೃತವಾಗಿ ಗುರುತಿಸಲ್ಪಡುವ ಗೌರವಸೂಚಕ ಪದವಾಗಿರುವುದರಿಂದ, ಅದನ್ನು ಬಳಸುವ ಅರ್ಹತೆಗೆ ಸ್ಪಷ್ಟ ಮಾನದಂಡ ಇರಲೇಬೇಕು. ಇಲ್ಲವಾದರೆ ಮುಂದೆ ಯಾರು ಶಿಕ್ಷಕರು? ಯಾವ ಅರ್ಹತೆಯ ಆಧಾರದ ಮೇಲೆ ಶಿಕ್ಷಕರು? ಯಾವ ಸಂಸ್ಥೆಯಲ್ಲಿ ಸೇವೆ ಸಲ್ಲಿಸುವವರು ಶಿಕ್ಷಕರು? TET ಅಗತ್ಯವಿದೆಯೇ? ಯಾವ ಶಿಕ್ಷಕರಿಗೆ ‘Tr.’ ಅನ್ವಯಿಸುತ್ತದೆ? ಎಂಬ ಪ್ರಶ್ನೆಗಳಿಗೆ ಉತ್ತರವೇ ಇಲ್ಲದ ಪರಿಸ್ಥಿತಿ ಉಂಟಾಗಬಹುದು.
ಕರ್ನಾಟಕ ಸರಕಾರ ಕೂಡಲೇ ಅಧಿಕೃತ ಮಾರ್ಗಸೂಚಿ ಅಥವಾ ಆದೇಶ ಹೊರಡಿಸಿ ‘Tr.’ ಬಳಸಬಹುದಾದ ಶಿಕ್ಷಕರ ವ್ಯಾಖ್ಯಾನವನ್ನು ಸ್ಪಷ್ಟಪಡಿಸಬೇಕು. ಕನಿಷ್ಠ ಶೈಕ್ಷಣಿಕ ಅರ್ಹತೆಯನ್ನು ನಿಗದಿಪಡಿಸಬೇಕು. ಶಿಕ್ಷಕರ ತರಬೇತಿ ಅರ್ಹತೆಗಳ ಮಾನದಂಡವನ್ನು ಪ್ರಕಟಿಸಬೇಕು. RTE Act ಮತ್ತು ಸುಪ್ರೀಂ ಕೋರ್ಟ್‌ನ ನಿರ್ದೇಶನಗಳ ಹಿನ್ನೆಲೆಯಲ್ಲಿ TETಗೆ ಅನ್ವಯಿಸುವ ನಿಯಮವನ್ನು ಸ್ಪಷ್ಟಪಡಿಸಬೇಕು. ಸರಕಾರಿ ಶಾಲೆಗಳ ಅತಿಥಿ ಶಿಕ್ಷಕರಿಗೆ ‘Tr.’ ಅನ್ವಯಿಸುವುದೇ ಎಂಬುದನ್ನು ತಿಳಿಸಬೇಕು. ಗೌರವ ಶಿಕ್ಷಕರ ಬಗ್ಗೆ ಕೂಡ ತಿಳಿಸಬೇಕು. ECCE ಶಿಕ್ಷಕರಿಗೆ ಅನ್ವಯಿಸುವ ನಿಯಮವನ್ನು ಪ್ರತ್ಯೇಕವಾಗಿ ಸ್ಪಷ್ಟಪಡಿಸಬೇಕು. ಕಂಪ್ಯೂಟರ್, ಎಐ, ಸಂಗೀತ, ಕಲೆ, ಕ್ರೀಡೆ, ನೃತ್ಯ ಹಾಗೂ ಇತರ ವಿಶೇಷ ವಿಷಯ ಬೋಧಕರಿಗೆ ಅನ್ವಯಿಸುವ ನಿಯಮವನ್ನು ಪ್ರಕಟಿಸಬೇಕು. ಅನುದಾನಿತ ಹಾಗೂ ಮಾನ್ಯತೆ ಪಡೆದ ಖಾಸಗಿ ಶಾಲೆಗಳ ಶಿಕ್ಷಕರಿಗೆ ಅನ್ವಯಿಸುವ ವ್ಯಾಪ್ತಿಯನ್ನು ತಿಳಿಸಬೇಕು. ಮಾನ್ಯತೆ ಇಲ್ಲದ ಶಿಕ್ಷಣ ಸಂಸ್ಥೆಗಳಲ್ಲಿ ಬೋಧಿಸುವವರಿಗೆ ‘Tr.’ ಬಳಸುವ ಹಕ್ಕು ಇದೆಯೇ ಎಂಬುದನ್ನು ಸ್ಪಷ್ಟಪಡಿಸಬೇಕು. ಟ್ಯೂಷನ್ ಮತ್ತು ಕೋಚಿಂಗ್ ಕೇಂದ್ರಗಳಲ್ಲಿ ಬೋಧಿಸುವವರನ್ನು ‘Tr.’ ವ್ಯಾಪ್ತಿಗೆ ಸೇರಿಸಲಾಗುತ್ತದೆಯೇ ಎಂಬುದನ್ನು ಪ್ರತ್ಯೇಕವಾಗಿ ನಿರ್ಧರಿಸಬೇಕು.
ನಮ್ಮ ದೃಷ್ಟಿಯಲ್ಲಿ ‘Tr.’ ಕೇವಲ ಹೆಸರಿನ ಮುಂದೆ ಹಾಕಿಕೊಳ್ಳುವ ಎರಡು ಅಕ್ಷರಗಳಾಗಬಾರದು. ಅದು ಶಿಕ್ಷಕರ ಅರ್ಹತೆಯ ಸಂಕೇತವಾಗಬೇಕು. ವೃತ್ತಿಪರ ಜವಾಬ್ದಾರಿಯ ಸಂಕೇತವಾಗಬೇಕು. ಮಕ್ಕಳ ಮೇಲಿನ ಕರ್ತವ್ಯದ ಸಂಕೇತವಾಗಬೇಕು. ಸಮಾಜ ಶಿಕ್ಷಕರ ಮೇಲೆ ಇಟ್ಟಿರುವ ವಿಶ್ವಾಸದ ಸಂಕೇತವಾಗಬೇಕು. ‘Dr.’ ಅಥವಾ ಇತರ ವೃತ್ತಿಪರ ಗೌರವಸೂಚಕ ಪದಗಳಿಗೆ ನಿರ್ದಿಷ್ಟ ವೃತ್ತಿಪರ ನೆಲೆ ಇರುವಂತೆ, ‘Tr.’ಗೂ ಕನಿಷ್ಠ ಅರ್ಹತೆ ಮತ್ತು ಮಾನ್ಯತೆಯ ಸ್ಪಷ್ಟ ಮಾನದಂಡ ಇರಬೇಕು. ‘Teacher’ ಎಂಬ ಗುರುತಿಗೆ ಅರ್ಹತೆಯೂ ಇರಬೇಕು. ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಭರವಸೆಯೂ ಇರಬೇಕು. RTE Act ಮತ್ತು ನ್ಯಾಯಾಲಯದ ನಿರ್ದೇಶನಗಳಿಗೆ ಗೌರವವೂ ಇರಬೇಕು.
ಆದ್ದರಿಂದ ಕರ್ನಾಟಕ ಸರಕಾರವು ‘Tr.’ ಗೌರವಸೂಚಕ ಪದವನ್ನು ಬಳಸಲು ಅರ್ಹರಾದ ಶಿಕ್ಷಕರ ಕುರಿತು ಸ್ಪಷ್ಟ, ಪಾರದರ್ಶಕ, ಕಾನೂನುಬದ್ಧ ಹಾಗೂ ವರ್ಗವಾರು ಮಾರ್ಗಸೂಚಿಯನ್ನು ತಕ್ಷಣ ಪ್ರಕಟಿಸಬೇಕು ಎಂದು ಕರ್ನಾಟಕ ರಾಜ್ಯ Sಆಒಅ ಸಮನ್ವಯ ಕೇಂದ್ರ ವೇದಿಕೆ (ರಿ.) ಆಗ್ರಹಿಸುತ್ತದೆ. ಇದು ಶಿಕ್ಷಕರ ವಿರೋಧದ ನಿಲುವಲ್ಲ. ಇದು ಶಿಕ್ಷಕರ ಗೌರವವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುವ ನಿಲುವು. ಇದು ಮಕ್ಕಳ ಹಕ್ಕು ಮತ್ತು ಗುಣಮಟ್ಟದ ಶಿಕ್ಷಣದ ಪರವಾದ ನಿಲುವು.
ಶಿಕ್ಷಕರಿಗೆ ಗೌರವ ನೀಡಿ-ಆದರೆ ಆ ಗೌರವಕ್ಕೆ ಸ್ಪಷ್ಟ ಮಾನದಂಡ ರೂಪಿಸಿ. ಮಕ್ಕಳ ಹಕ್ಕುಗಳನ್ನು ರಕ್ಷಿಸಿ-ಗುಣಮಟ್ಟದ ಶಿಕ್ಷಣವನ್ನು ಖಚಿತಪಡಿಸಿ. ‘Tr.’ ಗೌರವಸೂಚಕ ಪದಕ್ಕೆ ಕಾನೂನುಬದ್ಧ ಹಾಗೂ ಪಾರದರ್ಶಕ ಮಾನದಂಡ ರೂಪಿಸಿ.






