ಇಥೆನಾಲ್ ಮಿಶ್ರಿತ ಪೆಟ್ರೋಲ್ ಬಳಕೆಯಿಂದ ಯಾರಿಗೆ ಲಾಭ?

ಮಾಲಿನ್ಯ ತಗ್ಗಿಸುವುದು ಮತ್ತು ವಿದೇಶಿ ವಿನಿಮಯ ಉಳಿಸುವುದು ಸರಕಾರದ ಗುರಿಯಾದರೆ, ಅದರ ಲಾಭ ಜನಸಾಮಾನ್ಯರಿಗೆ ಏಕೆ ವರ್ಗಾವಣೆಯಾಗುತ್ತಿಲ್ಲ?
ಇಥೆನಾಲ್ ಬಳಕೆಯಿಂದ ತೈಲ ಆಮದು ಕಡಿಮೆಯಾಗುವುದರಿಂದ ಸರಕಾರದ ಖಜಾನೆಗೆ ಹಣ ಉಳಿಯುತ್ತಿದೆ. ಆದರೆ, ಕಡಿಮೆ ಮೈಲೇಜ್‌ನಿಂದಾಗಿ ಹೆಚ್ಚು ಪೆಟ್ರೋಲ್ ಹಾಕಿಸುವ ಮತ್ತು ಸಂಭಾವ್ಯ ದುರಸ್ತಿ ವೆಚ್ಚವನ್ನು ಎದುರಿಸುತ್ತಿರುವ ಗ್ರಾಹಕನಿಗೆ ಯಾವುದೇ ರಿಯಾಯಿತಿ ಸಿಗುತ್ತಿಲ್ಲ.
ಇ20 ಪೆಟ್ರೋಲ್ ಎಂದರೆ, ಪ್ರತೀ ಲೀಟರ್‌ನಲ್ಲಿ 200 ಎಂಎಲ್ ಇಥೆನಾಲ್ ಬೆರೆಸಲಾಗುವ ಪೆಟ್ರೋಲ್.
ದೇಶದಲ್ಲೀಗ ಹೆಚ್ಚಿನ ಪೆಟ್ರೋಲ್ ಬಂಕ್‌ಗಳಲ್ಲಿ ಇ20 ಪೆಟ್ರೋಲ್ ಮಾತ್ರ ಸಿಗುತ್ತದೆ.
ಇದರ ಬಳಕೆಯಿಂದ ವಾಹನಗಳು ಬಹಳ ಬೇಗ ಕೆಡುತ್ತದೆ ಎನ್ನಲಾಗುತ್ತಿದೆ.
ವಾಹನ ಕಂಪೆನಿಗಳು ಸಹ ಈ ವಿಷಯದಲ್ಲಿ ಬಾಳಿಕೆಯ ಖಾತರಿಯನ್ನು ಕೊಡುವುದಿಲ್ಲ.
ಮಾಲಿನ್ಯ ಕಡಿಮೆಯಾಗುತ್ತದೆ ಎಂಬುದು ಸರಕಾರ ಇಥೆನಾಲ್ ಬೆರೆಸಿದ ಪೆಟ್ರೋಲ್ ಮಾರಾಟಕ್ಕೆ ವಿಶೇಷ ಉತ್ತೇಜನ ನೀಡಲು ಒಂದು ಕಾರಣ. ಇದರಿಂದ ತೈಲ ಆಮದು ತಗ್ಗಿಸಬಹುದು ಎಂಬುದು ಮತ್ತೊಂದು ಕಾರಣ.ಅಂದರೆ ಹಣ ಉಳಿತಾಯವಾಗುತ್ತಿದೆ ಎಂದರ್ಥ.
ಮಾಲಿನ್ಯ ತಗ್ಗುತ್ತದೆ ಎಂದು ಹೇಳುತ್ತಿರುವಾಗಲೇ, ಇಂಜಿನ್ ಬಗ್ಗೆ ಕಳವಳಗಳು ಶುರುವಾಗಿವೆ.
ಹಾಗಾದರೆ, ಇಥೆನಾಲ್ ಮಿಶ್ರಿತ ಪೆಟ್ರೋಲ್‌ನಿಂದ ಇಂಜಿನ್ ಮೇಲೆ ಏನು ಪರಿಣಾಮವಾಗುತ್ತದೆ?
ಇಂಜಿನ್‌ಗೆ ಇಥೆನಾಲ್ ಪೆಟ್ರೋಲ್‌ಗಿಂತ ಹೆಚ್ಚು ನಾಶಕಾರಿ ಎನ್ನಲಾಗುತ್ತದೆ.
ಅಂದರೆ, ಅದರ ಜೊತೆಗಿರುವ ವಸ್ತುಗಳು ನಿಧಾನವಾಗಿ ಹಾಳಾಗ ತೊಡಗುತ್ತವೆ. ಅದರಲ್ಲೂ, ಪ್ಲಾಸ್ಟಿಕ್ ಮತ್ತು ರಬ್ಬರ್‌ನಿಂದ ಮಾಡಿದ ವಸ್ತುಗಳು ಇದರ ಸಂಪರ್ಕದಲ್ಲಿ ಹೆಚ್ಚು ಹಾಳಾಗುತ್ತವೆ.
ಇಂಧನ ಪೈಪ್‌ನಲ್ಲಿ ಬಿರುಕು ಕಾಣಿಸಿ ಕೊಳ್ಳಬಹುದು. ಸಿಲಿಂಡರ್ ಗ್ಯಾಸ್ಕೆಟ್ ಸುಟ್ಟುಹೋಗಬಹುದು.
ಇನ್ನು ಇಥೆನಾಲ್ ಶಕ್ತಿ ಪೆಟ್ರೋಲ್‌ಗೆ ಹೋಲಿಸಿದರೆ ಕಡಿಮೆ. ಆದ್ದರಿಂದ ಇಥೆನಾಲ್ ಅನ್ನು ಪೆಟ್ರೋಲ್‌ನೊಂದಿಗೆ ಬೆರೆಸಿ ವಾಹನ ಓಡಿಸುವಾಗ, ಕಡಿಮೆ ಶಕ್ತಿ ಸಿಗುತ್ತದೆ. ಮೈಲೇಜ್ ಕಡಿಮೆಯಾಗುತ್ತದೆ.
ಮೈಲೇಜ್ ಕಡಿಮೆಯಾಗಬಹುದು ಎಂಬುದನ್ನು ಸರಕಾರವೂ ಒಪ್ಪಿಕೊಂಡಿದೆ. ಇಥೆನಾಲ್ ಮಿಶ್ರಿತ ಇಂಧನ ಬಳಸುವ ವಾಹನಗಳನ್ನು ಪರೀಕ್ಷಿಸಿದಾಗ, ಇಂಧನ ದಕ್ಷತೆ ಶೇ.6ರಷ್ಟು ಕಡಿಮೆಯಾಗಿದೆ ಎಂಬುದನ್ನು ನೀತಿ ಆಯೋಗವೇ ಹೇಳಿದೆ.
ಇಲ್ಲಿ ಗಮನಿಸಬೇಕಾದ ಇನ್ನೊಂದು ಅಂಶವೆಂದರೆ, ಈ ಮೈಲೇಜ್ ತಗ್ಗುವಿಕೆ ವಾಹನದಿಂದ ವಾಹನಕ್ಕೆ ಬದಲಾಗುತ್ತದೆ.
ವಾಹನ ಕಂಪೆನಿಗಳಿಗೆ ಇದರ ಬಗ್ಗೆ ತಿಳಿದಿರಲಿಲ್ಲ ಎಂದಲ್ಲ. ಆದರೆ, ವಾಹನ ಕಂಪೆನಿಗಳು ಹಲವು ವರ್ಷಗಳಿಂದ ಇ10ಗೆ ಹೊಂದುವಂಥ ವಾಹನಗಳನ್ನು ತಯಾರಿಸುತ್ತಿವೆ.
ಇಥೆನಾಲ್‌ನಿಂದ ಉಂಟಾಗುವ ತುಕ್ಕು ತಪ್ಪಿಸಲು, ಕಂಪೆನಿಗಳು ಇಂಧನಕ್ಕೆ ನೇರ ಸಂಪರ್ಕದಲ್ಲಿರುವ ವಾಹನಗಳ ಪ್ರತಿಯೊಂದು ಭಾಗವನ್ನು ಬದಲಾಯಿಸಿವೆ ಅಥವಾ ಅದಕ್ಕೆ ತುಕ್ಕು ನಿರೋಧಕ ಲೇಪನ ಮಾಡಿವೆ.
ಇಂಧನ ಟ್ಯಾಂಕ್, ಗ್ಯಾಸ್ಕೆಟ್, ಸೀಲುಗಳು, ಇಂಧನ ಸ್ಲೈಡ್‌ನಂಥವುಗಳ ಮೇಲೆ ಇದು ಪರಿಣಾಮ ಬೀರುವುದನ್ನು ತಪ್ಪಿಸಲು ಹಾಗೆ ಮಾಡಲಾಗಿದೆ.ಇದಲ್ಲದೆ ಇಂಜಿನ್‌ನಲ್ಲಿ ಕೂಡ ಕೆಲವು ಬದಲಾವಣೆಗಳನ್ನು ಇದಕ್ಕೆ ಪುರಕವಾಗಿ ಅಳವಡಿಸಲಾಗಿದೆ.
2023ರಲ್ಲಿ ಇ20 ಮಿಶ್ರಿತ ಪೆಟ್ರೋಲ್‌ಗಾಗಿ ವಾಹನಗಳನ್ನು ತಯಾರಿಸುವುದು ಕಡ್ಡಾಯವಾಯಿತು. ಹಾಗಾಗಿ, 2023ರ ನಂತರ ತಯಾರಿಸಿದ ವಾಹನಗಳು ಇ20 ಪೆಟ್ರೋಲ್ ಬಳಕೆಗೆ ಸಿದ್ಧವಾಗಿವೆ.
ಆದರೆ ಅದಕ್ಕಿಂತ ಮೊದಲಿನ ವಾಹನಗಳು ಹಾಗಿಲ್ಲ.
ಇ20 ಪೆಟ್ರೋಲ್ ಅನ್ನು ಹಳೆಯ ವಾಹನಗಳಲ್ಲಿ ಹಾಕಿದರೆ, ಕ್ರಮೇಣ ಇಂಜಿನ್ ಅಥವಾ ಇಂಧನ ಪೂರೈಕೆ ಪೈಪ್‌ನಲ್ಲಿ ಕೆಲ ಸಮಸ್ಯೆಗಳು ತಲೆದೋರುತ್ತವೆ.
ಆಟೊಮೊಬೈಲ್ ಕಂಪೆನಿಗಳು ಸಹ ಇದನ್ನು ಒಪ್ಪಿಕೊಂಡಿವೆ.
ಎಪ್ರಿಲ್ 2023ಕ್ಕಿಂತ ಮೊದಲು ತಯಾರಿಸಿದ ವಾಹನಗಳಲ್ಲಿ ಇ20 ಪೆಟ್ರೋಲ್ ಬಳಸಬೇಕಾದರೆ, ಇಂಜಿನ್‌ನಲ್ಲಿ ಹಲವು ಬದಲಾವಣೆಗಳನ್ನು ಮಾಡಬೇಕಾಗುತ್ತದೆ ಎಂದು ಹೇಳಲಾಗಿದೆ.
ಇಥೆನಾಲ್ ಮಿಶ್ರಿತ ಇಂಧನ ಬಳಕೆಯಿಂದ ಮೈಲೇಜ್ ಕಡಿಮೆಯಾಗುವ ಬಗ್ಗೆ ಈಗಾಗಲೇ ಹಲವು ಕಂಪೆನಿಗಳು ಹೇಳಿವೆ ಮತ್ತು ಹೀಗೆ ಹಾಳಾಗುವುದಕ್ಕೆ ಸಂಬಂಧಿಸಿ ಕಂಪೆನಿಗಳು ವಾರಂಟಿ ಕೊಡಲು ತಯಾರಿಲ್ಲ.
ಅಂದರೆ, ಇಥೆನಾಲ್ ಮಿಶ್ರಿತ ಪೆಟ್ರೋಲ್ ಬಳಕೆಯಿಂದ ಆಗುವ ಹಾನಿಯ ಬಗ್ಗೆ ಕಂಪೆನಿಗಳು ತಲೆಕೆಡಿಸಿಕೊಳ್ಳುವುದಿಲ್ಲ. ಹಾಗಾದರೆ, ಇ20 ಪೆಟ್ರೋಲ್ ಬಳಸಲು ಹೊಂದಿಸಲಾಗದ ಹಳೆಯ ಲಕ್ಷಾಂತರ ವಾಹನಗಳ ಕಥೆಯೇನು? ಕೇವಲ ದಿಲ್ಲಿಯಲ್ಲಿಯೇ 10 ಅಥವಾ 15 ವರ್ಷ ಹಳೆಯದಾದ 80 ಲಕ್ಷ ವಾಹನಗಳಿವೆ ಎಂಬ ಮಾಹಿತಿಯಿದೆ.
ಮೈಲೇಜ್ ಇಳಿಕೆ ಅತ್ಯಲ್ಪ ಎಂದು ಸರಕಾರ ಹೇಳಿದೆ.
ಇಥೆನಾಲ್ ಮಿಶ್ರಿತ ಪೆಟ್ರೋಲ್‌ನಿಂದ ವಾಹನಗಳು ಹಾನಿಗೊಳಗಾಗುತ್ತಿವೆ ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಹೇಳಿದ್ದಕ್ಕೂ ಸ್ಪಷ್ಟನೆ ನಿಡಲಾಗಿದ್ದು, ಈ ಹೇಳಿಕೆ ಸತ್ಯವಲ್ಲ ಎನ್ನಲಾಗಿದೆ.
ಕೆಲ ರಬ್ಬರ್ ಭಾಗಗಳು ಅಥವಾ ಗ್ಯಾಸ್ಕೆಟ್‌ಗಳನ್ನು ಬದಲಿಸಬೇಕಾಗಬಹುದು ಮತ್ತು ಇದು ಹೆಚ್ಚಿನ ಖರ್ಚಿನದ್ದಲ್ಲ ಎಂಬುದು ಸರಕಾರದ ವಾದ.
ಇದೇ ವೇಳೆ ಮತ್ತೊಂದು ಸಮಸ್ಯೆಯೆಂದರೆ, ರೈತರು ಇಥೆನಾಲ್ ಉತ್ಪಾದನೆಯಿಂದ ಲಾಭ ಪಡೆದಿದ್ದರೂ, ಇದಕ್ಕಾಗಿ ಬಳಕೆಯಾಗುವ ಮೆಕ್ಕೆಜೋಳ ಮತ್ತು ಸೋಯಾಬೀನ್‌ನಂತಹ ಬೆಳೆಗಳ ಬೆಲೆಗಳು ಚಿಲ್ಲರೆ ಮಾರುಕಟ್ಟೆಯಲ್ಲಿ ಹೆಚ್ಚಿವೆ.
ಇನ್ನೊಂದು ಮುಖ್ಯ ಸಂಗತಿಯೆಂದರೆ, ಇಥೆನಾಲ್ ಮಿಶ್ರಿತ ಪೆಟ್ರೋಲ್ ಬೆಲೆಯಾದರೂ ಏಕೆ ಅಗ್ಗವಾಗಿಲ್ಲ ಎಂಬುದು.
ಇಥೆನಾಲ್ ಮಿಶ್ರಿತ ಪೆಟ್ರೋಲ್ ಬಳಕೆ ಉತ್ತೇಜಿಸುವ ಮೂಲಕ ತೈಲ ಆಮದು ತಗ್ಗಿಸುವುದಾದರೆ, ಆಮದು ಬಿಲ್‌ನಲ್ಲಿ ಬಹಳಷ್ಟು ಉಳಿಸುತ್ತಿದ್ದರೆ, ಜನಸಾಮಾನ್ಯರಿಗೆ ಅದರ ಲಾಭ ಏಕೆ ಸಿಗುತ್ತಿಲ್ಲ?
ಅಂಥ ಪೆಟ್ರೋಲ್ ಬೆಲೆ ಸಾಮಾನ್ಯ ಪೆಟ್ರೋಲ್‌ಗಿಂತ ಕಡಿಮೆಯಿರಬೇಕು.ಇಥೆನಾಲ್‌ಗೆ ತೆರಿಗೆ ವಿನಾಯಿತಿಗಳನ್ನು ನೀಡಬೇಕು ಎಂದು ನೀತಿ ಆಯೋಗವೂ ಹೇಳುತ್ತದೆ.
ಬಹಳಷ್ಟು ನಗರಗಳಲ್ಲಿ ಲೀಟರ್ ಪೆಟ್ರೋಲ್‌ಗೆ 100 ರೂ. ವರೆಗೂ ಪಾವತಿಸಬೇಕಾಗಿದೆ. ಇಥೆನಾಲ್ ಮಿಶ್ರಿತ ಪೆಟ್ರೋಲ್ ಬಳಕೆಯಿಂದ ಮೈಲೇಜ್ ಕೂಡ ಕಡಿಮೆಯಾಗುವಾಗ, ಅದು ಕಡಿಮೆ ಬೆಲೆಗೂ ಸಿಗುತ್ತಿಲ್ಲ ಅಂದರೆ ಏನರ್ಥ?
ಆದರೆ ಇಂತಹ ಪ್ರಶ್ನೆಗಳು ಏಳುತ್ತಿದ್ದಂತೆ, ಅದನ್ನು ಪೆಟ್ರೋಲ್ ಲಾಬಿಯ ಮೊಂಡುತನ ಎಂದು ಹೇಳಲಾಗುತ್ತದೆ.
ಆದರೆ ಇದು ಪೆಟ್ರೋಲ್ ಲಾಬಿಯ ಮೊಂಡುತನವಲ್ಲ. ಇದು ಜನರನ್ನು ಗೊಂದಲಗೊಳಿಸುವ ಒಂದು ರೀತಿಯಾಗಿದೆ ಎಂಬ ವಾದವೂ ಇದೆ.
ಹೀಗೆಲ್ಲ ಇರುವಾಗ, ದುಡಿಮೆಯಿಂದ ಉಳಿಸಿದ ದುಡ್ಡು ಹಾಕಿ ವಾಹನ ಖರೀದಿಸಿದ ಮಧ್ಯಮ ವರ್ಗದ ಜನರ ಸ್ಥಿತಿಯೇನು ಎಂಬ ಪ್ರಶ್ನೆ ಹಾಗೆಯೇ ಉಳಿಯುತ್ತದೆ.
ದೇಶದ ಲಕ್ಷಾಂತರ ವಾಹನ ಮಾಲಕರು, ವಿಶೇಷವಾಗಿ ಮಧ್ಯಮ ವರ್ಗದವರು, ಈಗ ಗೊಂದಲ ಮತ್ತು ಆತಂಕವನ್ನು ಎದುರಿಸುತ್ತಿದ್ದಾರೆ.
ಸರಕಾರವು ಮಾಲಿನ್ಯ ನಿಯಂತ್ರಣ ಮತ್ತು ತೈಲ ಆಮದು ತಗ್ಗಿಸುವಂತಹ ಬೃಹತ್ ರಾಷ್ಟ್ರೀಯ ಗುರಿಗಳನ್ನು ಮುಂದಿಡುತ್ತಿದೆ.
ಇವು ಶ್ಲಾಘನೀಯ ಉದ್ದೇಶಗಳೇ ಹೌದು.
ಆದರೆ, ಈ ಗುರಿಗಳನ್ನು ಸಾಧಿಸುವ ಹಾದಿಯಲ್ಲಿ, ತಮ್ಮದೇ ನಾಗರಿಕರ, ಅದರಲ್ಲೂ ವಿಶೇಷವಾಗಿ ತಮ್ಮ ಆದಾಯದ ಬಹುದೊಡ್ಡ ಭಾಗವನ್ನು ವ್ಯಯಿಸಿ ವಾಹನ ಖರೀದಿಸಿದ ಮಧ್ಯಮ ವರ್ಗದ ಜನರ ಹಿತಾಸಕ್ತಿಯನ್ನು ಕಡೆಗಣಿಸಲಾಗಿದೆಯೇ ಎಂಬ ಪ್ರಶ್ನೆ ಉದ್ಭವಿಸುತ್ತದೆ.
2023ಕ್ಕಿಂತ ಮೊದಲು ಖರೀದಿಸಿದ ವಾಹನಗಳು ಇ20 ಪೆಟ್ರೋಲ್‌ಗೆ ಹೊಂದುವುದಿಲ್ಲ ಎಂದು ಸ್ವತಃ ವಾಹನ ತಯಾರಿಕಾ ಕಂಪೆನಿಗಳೇ ಒಪ್ಪಿಕೊಳ್ಳುತ್ತಿವೆ
ಹಾಗಿರುವಾಗ, ದೇಶದಾದ್ಯಂತ ಅದೇ ಇಂಧನವನ್ನು ಲಭ್ಯವಾಗುವಂತೆ ಮಾಡಿರುವುದು, ಕೋಟ್ಯಂತರ ವಾಹನ ಮಾಲಕರನ್ನು ಒಂದು ಅನಿಶ್ಚಿತ ಪ್ರಯೋಗಕ್ಕೆ ಒಡ್ಡಿದಂತೆ ಅಲ್ಲವೇ?
ಹಾನಿಯಾದರೆ ಯಾರು ಹೊಣೆ? ಎಂಬ ಪ್ರಶ್ನೆಗೆ ಸರಕಾರದಿಂದಾಗಲಿ, ಕಂಪೆನಿಗಳಿಂದಾಗಲಿ ಯಾವುದೇ ಸ್ಪಷ್ಟವಾದ, ಭರವಸೆಯ ಉತ್ತರ ಸಿಗುತ್ತಿಲ್ಲ. ವಾರಂಟಿ ಅನ್ವಯಿಸುವುದಿಲ್ಲ ಎಂದು ಕಂಪೆನಿಗಳು ಕೈತೊಳೆದುಕೊಳ್ಳುತ್ತವೆ. ಹಾನಿ ಅಷ್ಟೇನೂ ದೊಡ್ಡದಲ್ಲ, ಸಣ್ಣಪುಟ್ಟ ಭಾಗ ಬದಲಿಸಿದರೆ ಸಾಕು ಎಂದು ಸರಕಾರ ಸುಲಭವಾಗಿ ಹೇಳಿಕೆ ನೀಡುತ್ತದೆ.
ಆದರೆ, ಈ ‘ಸಣ್ಣಪುಟ್ಟ’ ಖರ್ಚು ಕೂಡ ಮಧ್ಯಮ ವರ್ಗದ ಕುಟುಂಬದ ಮಾಸಿಕ ಬಜೆಟ್ ಮೇಲೆ ಪರಿಣಾಮ ಬೀರುತ್ತದೆ.
ಎಲ್ಲಕ್ಕಿಂತ ಹೆಚ್ಚಾಗಿ, ಕಷ್ಟಪಟ್ಟು ದುಡಿದು ಖರೀದಿಸಿದ ತನ್ನ ವಾಹನದ ಇಂಜಿನ್‌ಗೆ ದೀರ್ಘಕಾಲೀನ ಹಾನಿಯಾಗಬಹುದು ಎಂಬ ಆತಂಕ ವಾಹನ ಮಾಲೀಕರನ್ನು ನಿರಂತರವಾಗಿ ಕಾಡುತ್ತದೆ.
ಇಂತಹ ದೊಡ್ಡ ನೀತಿಯನ್ನು ಜಾರಿಗೆ ತರುವ ಮೊದಲು, ಸಾರ್ವಜನಿಕವಾಗಿ ವ್ಯಾಪಕ ಚರ್ಚೆ ನಡೆಯಬೇಕಿತ್ತು.
ಹಳೆಯ ವಾಹನಗಳ ಮಾಲಕರಿಗೆ ಏನು ಪರಿಹಾರ? ಅವರ ವಾಹನಗಳನ್ನು ಇ20-ಹೊಂದಾಣಿಕೆಯಾಗುವಂತೆ ಪರಿವರ್ತಿಸಲು ತಗಲುವ ವೆಚ್ಚವನ್ನು ಯಾರು ಭರಿಸಬೇಕು? ಈ ಪರಿವರ್ತನೆಗೆ ಅಧಿಕೃತ ಮಾರ್ಗಸೂಚಿಗಳೇನು?
ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡದೆ, ಏಕಾಏಕಿ ನೀತಿ ಜಾರಿಗೊಳಿಸಿದ್ದರಿಂದ ಜನರಲ್ಲಿ ಸರಕಾರದ ಉದ್ದೇಶದ ಬಗ್ಗೆಯೇ ಅನುಮಾನ ಮೂಡಲು ಕಾರಣವಾಗಿದೆ.
ಮಾಲಿನ್ಯ ತಗ್ಗಿಸುವುದು ಮತ್ತು ವಿದೇಶಿ ವಿನಿಮಯ ಉಳಿಸುವುದು ಸರಕಾರದ ಗುರಿಯಾದರೆ, ಅದರ ಲಾಭ ಜನಸಾಮಾನ್ಯರಿಗೆ ಏಕೆ ವರ್ಗಾವಣೆಯಾಗುತ್ತಿಲ್ಲ?
ಇಥೆನಾಲ್ ಬಳಕೆಯಿಂದ ತೈಲ ಆಮದು ಕಡಿಮೆಯಾಗುವುದರಿಂದ ಸರಕಾರದ ಖಜಾನೆಗೆ ಹಣ ಉಳಿಯುತ್ತಿದೆ. ಆದರೆ, ಕಡಿಮೆ ಮೈಲೇಜ್‌ನಿಂದಾಗಿ ಹೆಚ್ಚು ಪೆಟ್ರೋಲ್ ಹಾಕಿಸುವ ಮತ್ತು ಸಂಭಾವ್ಯ ದುರಸ್ತಿ ವೆಚ್ಚವನ್ನು ಎದುರಿಸುತ್ತಿರುವ ಗ್ರಾಹಕನಿಗೆ ಯಾವುದೇ ರಿಯಾಯಿತಿ ಸಿಗುತ್ತಿಲ್ಲ.
ಇದು ಸಹಜವಾಗಿಯೇ, ಈ ನೀತಿಯು ಕಾರ್ಪೊರೇಟ್ ವಲಯದ ಹಿತಾಸಕ್ತಿಯನ್ನು ಕಾಪಾಡುತ್ತಾ, ಅದರ ಭಾರವನ್ನು ಜನಸಾಮಾನ್ಯರ ಮೇಲೆ ಹೊರಿಸಲಾಗುತ್ತಿದೆ ಎಂಬ ಆರೋಪಕ್ಕೆ ಪುಷ್ಟಿ ನೀಡುತ್ತದೆ.
ಸರಕಾರ ಹೇಳುವ ಉದ್ದೇಶಗಳು ಉತ್ತಮವಾಗಿದ್ದರೂ, ಅದರ ಅನುಷ್ಠಾನದಲ್ಲಿನ ಗಂಭೀರ ಲೋಪಗಳು, ಪಾರದರ್ಶಕತೆಯ ಕೊರತೆ ಮತ್ತು ಸಾಮಾನ್ಯ ನಾಗರಿಕರ ಮೇಲಿನ ಪರಿಣಾಮಗಳನ್ನು ಕಡೆಗಣಿಸಿರುವುದು ಈ ಯೋಜನೆಯ ಬಗ್ಗೆ ವ್ಯಾಪಕ ಅಸಮಾಧಾನಕ್ಕೆ ಕಾರಣವಾಗಿದೆ.







