ಮಹಾರಾಷ್ಟ್ರ ಕಾಂಗ್ರೆಸ್ ಸೋಲಿಗೆ ಹೊಣೆ ಯಾರು?
ಸಿದ್ದರಾಮಯ್ಯ-ಡಿಕೆಶಿಗೆ ಸಮಾನ ಖುಷಿ, ಪ್ರಿಯಾಂಕಾ ಗಾಂಧಿ ಮೇಲೆ ಅಪಾರ ನಿರೀಕ್ಷೆ!
ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋತಿರುವುದನ್ನು ರಾಜಕೀಯ ಪಂಡಿತರು ನಾನಾ ರೀತಿ ವ್ಯಾಖ್ಯಾನ ಮಾಡಿದ್ದಾರೆ. ಕೆಲವರು ರಾಹುಲ್ ಗಾಂಧಿ ಅವರೇ ಕಾರಣ, ರಾಹುಲ್ ಗಾಂಧಿ ಆರೆಸ್ಸೆಸ್ ಬಗ್ಗೆ ಕಟುವಾಗಿ ಮಾತನಾಡಿದ್ದೇ ಕಾರಣ ಎಂದು ಕುಂಟು ನೆಪ ತೆಗೆದಿದ್ದಾರೆ. ‘ಇಂಡಿಯಾ’ ಮೈತ್ರಿಕೂಟದ ಟಿಎಂಸಿ ಮತ್ತು ಆಮ್ ಆದ್ಮಿ ಪಕ್ಷಗಳು ‘ಕಾಂಗ್ರೆಸ್ ಸಹವಾಸವೇ ಸಾಕು’ ಎಂದು ನುಣುಚಿಕೊಳ್ಳುತ್ತಿವೆ. ಈ ಎಲ್ಲದರ ನಡುವೆ ಕಾಂಗ್ರೆಸ್ ನಾಯಕರು ಬೇರೆ ಘನ ಕಾರಣವೊಂದನ್ನು ಹುಡುಕಿದ್ದಾರೆ.
ತಪ್ಪುಗಳನ್ನು ಒಪ್ಪಿಕೊಳ್ಳುವುದು, ತಿದ್ದಿಕೊಳ್ಳುವುದು ಕಾಂಗ್ರೆಸ್ ನಾಯಕರಿಗೆ ಆಗಿಬರುವುದಿಲ್ಲ. ಅವರಿಗೆ ಗೊತ್ತಿರುವುದು ಬೇರೆಯವರನ್ನು ದೂರುವುದು ಮಾತ್ರ. ತಮ್ಮ ಸೋಲಿಗೆ ಮಾಧ್ಯಮಗಳನ್ನು, ಇವಿಎಂಗಳನ್ನು ದೂರುತ್ತಲೇ ಇರುತ್ತಾರೆ. ಹರ್ಯಾಣದ ಸೋಲಿಗೆ ಅತಿಯಾದ ಆತ್ಮವಿಶ್ವಾಸ, ಸೂಕ್ತವಲ್ಲದ ಜಾತಿ ಸಮೀಕರಣ ಮತ್ತು ಒಳಜಗಳಗಳು ಕಾರಣ ಎನ್ನುವುದು ಜಗತ್ತಿಗೆ ಗೊತ್ತಿರುವ ವಿಷಯಗಳು. ಈ ಪ್ರಮಾದಗಳನ್ನು ಮಹಾರಾಷ್ಟ್ರ ಚುನಾವಣೆಯಲ್ಲಿ ತಿದ್ದಿಕೊಂಡಿದ್ದರೆ ಪಕ್ಷ ಇಷ್ಟು ಹೀನಾಯವಾಗಿ ಸೋಲುತ್ತಿರಲಿಲ್ಲ.
ಮಹಾರಾಷ್ಟ್ರದಲ್ಲಿ ಮತ್ತದೇ ತಪ್ಪುಗಳನ್ನು ಮಾಡಿತು. ಐದು ವರ್ಷಗಳ ರಾಜಕೀಯ ಅನಿಶ್ಚಿತತೆ ಮತ್ತು ಆಡಳಿತ ವೈಫಲ್ಯವನ್ನು ಎತ್ತಿಹಿಡಿಯುವುದರಲ್ಲಿ, ಸೂಕ್ತವಾದ ಸೋಷಿಯಲ್ ಇಂಜಿನಿಯರಿಂಗ್ ಮಾಡುವುದರಲ್ಲಿ, ದಲಿತ ಮತ್ತು ಹಿಂದುಳಿದ ಮತಗಳನ್ನು ಕ್ರೋಡೀಕರಿಸುವುದರಲ್ಲಿ ಕಾಂಗ್ರೆಸ್ ಸೋತಿತು. ಲೋಕಸಭಾ ಚುನಾವಣೆಯಲ್ಲಿ ಸಂವಿಧಾನದ ಬಗ್ಗೆ ಅಷ್ಟೆಲ್ಲಾ ಮಾತನಾಡಿದ್ದ ನಾಯಕರು ವಿಧಾನಸಭಾ ಚುನಾವಣೆಯಲ್ಲಿ ಸಾಂಕೇತಿಕವಾದ ಭಾಷಣಗಳನ್ನು ಮಾಡಿದರು. ‘ಜಾತಿ ಜನಗಣತಿ ಮೂಲಕ ಕಾಂಗ್ರೆಸ್ ಹಿಂದೂಗಳನ್ನು ಒಡೆಯುತ್ತಿದೆ- ಏಕ್ ಹೈ ಥೋ ಸೇಫ್ ಹೈ’ ಎಂದು ಬಿಜೆಪಿ ಪ್ರೊಪಗಂಡಾ ಮಾಡಿದಾಗಲೂ ಕಾಂಗ್ರೆಸ್ ನಾಯಕರು ಪ್ರತಿಯಾದ ಕಾರ್ಯತಂತ್ರ ರೂಪಿಸಲಿಲ್ಲ. ನಾಯಕರ ನಡುವೆ ಒಗ್ಗಟ್ಟಿರಲಿಲ್ಲ. ಹೀಗೆ ಸಾಲು ಸಾಲು ತಪ್ಪೆಸಗಿ ಈಗ ಸೋಲಿಗೆ ಚುನಾವಣಾ ತಂತ್ರಜ್ಞ ಸುನಿಲ್ ಕನಗೋಳು ಕಾರಣ ಎಂದು ಗೋಳಾಡುತ್ತಿದ್ದಾರೆ. ಹೋಗಲಿ, ಅದನ್ನಾದರೂ ನೇರವಾಗಿ ರಾಹುಲ್ ಗಾಂಧಿ ಬಳಿ ಚರ್ಚೆ ಮಾಡುತ್ತಾರೆಯೇ? ಅದೂ ಇಲ್ಲ, ಸುನಿಲ್ ಕನಗೋಳು, ರಾಹುಲ್ ಗಾಂಧಿ ಅವರಿಗೆ ಆಪ್ತರು ಎನ್ನುವ ಕಾರಣಕ್ಕೆ ಎಐಸಿಸಿ ಪಡಸಾಲೆಯಲ್ಲಿ ಗೊಣಗಿಕೊಳ್ಳುತ್ತಾರೆಯಷ್ಟೇ.
ವೋಟ್ ಬೇಸ್ ಕಳೆದುಕೊಂಡ ಕಾಂಗ್ರೆಸ್
ಮಹಾರಾಷ್ಟ್ರ ಚುನಾವಣೆಯಲ್ಲಿ ಕಾಂಗ್ರೆಸ್ ಸೋತಿದೆ ಎನ್ನುವುದಕ್ಕಿಂತಲೂ ತನ್ನ ಪ್ರಮುಖ ವೋಟ್ ಬೇಸ್ ಕಳೆದುಕೊಂಡಿದೆ ಎನ್ನುವುದು ಆ ಪಕ್ಷವನ್ನು ಹೆಚ್ಚು ಆತಂಕಕ್ಕೀಡು ಮಾಡಿರುವ ಸಂಗತಿ. ವಿದರ್ಭ ಅಥವಾ ಮರಾಠವಾಡದಲ್ಲಿ ಕಾಂಗ್ರೆಸ್ ಎಂದೂ ತನ್ನ ಅಸ್ತಿತ್ವ ಕಳೆದುಕೊಂಡಿರಲಿಲ್ಲ. ಹತ್ತಿ, ಈರುಳ್ಳಿ ಮತ್ತು ಸೋಯಾಬೀನ್ ರೈತರು ಲಗಾಯತ್ತಿನಿಂದಲೂ ಕಾಂಗ್ರೆಸ್ ಪರವಾಗಿದ್ದರು. ಸೋತರೂ ಈ ಗ್ಯಾರಂಟಿ ಮತದಾರರನ್ನು ಕಾಂಗ್ರೆಸ್ ಉಳಿಸಿಕೊಳ್ಳಬಹುದಿತ್ತು. ಏಕೆಂದರೆ ರೈತರ ಸಮಸ್ಯೆಗಳು ಅಷ್ಟಿದ್ದವು. ಆದರೆ ರೈತರ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ಸೂಕ್ತ ರೀತಿಯಲ್ಲಿ ದನಿ ಎತ್ತದೆ ಕೈಸುಟ್ಟುಕೊಂಡಿದೆ. ಇದೇ ರೀತಿ ದಲಿತ ಮತಗಳನ್ನೂ ಕಳೆದುಕೊಂಡಿದೆ. ಪ್ರಕಾಶ್ ಅಂಬೇಡ್ಕರ್ ಅವರ ಜೊತೆ ಚುನಾವಣೆಗೂ ಮುನ್ನ ಮಾತನಾಡಿ ಅವರ ಪಕ್ಷವನ್ನು ಮಹಾ ವಿಕಾಸ್ ಅಘಾಡಿ ವ್ಯಾಪ್ತಿಗೆ ತಂದಿದ್ದರೆ ಕನಿಷ್ಠ ಇನ್ನಿಪ್ಪತ್ತು ಸ್ಥಾನಗಳನ್ನಾದರೂ ಗೆಲ್ಲಬಹುದಿತ್ತು. ರೈತರು ಮತ್ತು ದಲಿತರು ದೂರವಾಗಿರುವುದರಿಂದ ಮಹಾರಾಷ್ಟ್ರದಲ್ಲೂ ಈಗ ಪಕ್ಷಕ್ಕೆ ಉತ್ತರಪ್ರದೇಶ, ಬಿಹಾರದ ಪರಿಸ್ಥಿತಿ ಬಂದೊದಗಬಹುದು ಎನ್ನುವುದು ಕೆಲ ನಾಯಕರ ಆತಂಕ.
ಕಾಂಗ್ರೆಸ್ ಮುಕ್ತವಾಯ್ತೆ?
2014ರಲ್ಲಿ ಮೊದಲ ಬಾರಿಗೆ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನಂತರ ಬಿಜೆಪಿ ನಾಯಕರು ‘ಕಾಂಗ್ರೆಸ್ ಮುಕ್ತ ಭಾರತ’ ಮಾಡುತ್ತೇವೆ ಎಂದು ಸಾರಿ ಸಾರಿ ಹೇಳಿದರು. ಅಮಿತ್ ಷಾ ಕನಿಷ್ಠ ನೂರು ಬಾರಿ ‘ಕಾಂಗ್ರೆಸ್ ಮುಕ್ತ ಭಾರತ’ದ ಮಂತ್ರ ಪಠಿಸಿದ್ದಾರೆ. ಆದರೆ ಕಾಂಗ್ರೆಸ್ ಮುಕ್ತ ಮಾಡುತ್ತೇವೆ ಎಂದವರ ಕಾಲದಲ್ಲೇ ಗಾಂಧಿ ಕುಟುಂಬದ ಮೂವರು ಸಂಸತ್ತಿನಲ್ಲಿ ಇರುವಂತಾಗಿದೆ. ಗಾಂಧಿ ಕುಟುಂಬದ ಸಹೋದರ ಸಹೋದರಿಯರು ಉತ್ತರ-ದಕ್ಷಿಣಗಳೆರಡನ್ನೂ ಪ್ರತಿನಿಧಿಸುತ್ತಿದ್ದಾರೆ. ಗಾಂಧಿ ಕುಟುಂಬದ ಕ್ಷೇತ್ರಗಳೆಂದೇ ಕರೆಯಲಾಗುತ್ತಿದ್ದ ಅಮೇಠಿ ಮತ್ತು ರಾಯ್‌ಬರೇಲಿಗಳೆರಡೂ ಮತ್ತೆ ಕಾಂಗ್ರೆಸ್ ತೆಕ್ಕೆಗೆ ಬಂದಿವೆ. ರಾಜಕಾರಣ ನಿಂತ ನೀರಲ್ಲ, ಯಾರೂ ಇಲ್ಲಿ ಶಾಶ್ವತವಲ್ಲ ಎಂದು ಹೇಳುವುದು ಇದಕ್ಕೇ ಇರಬೇಕು.
ಪ್ರಿಯಾಂಕಾ ಗಾಂಧಿ ಮೇಲೆ ಅಪಾರ ನಿರೀಕ್ಷೆ!
ಮಹಾರಾಷ್ಟ್ರದ ಸೋಲಿನ ಕಾರಣಕ್ಕೆ ಸಂಭ್ರಮಾಚರಣೆ ಕಾಣಿಸುತ್ತಿಲ್ಲವಾದರೂ ಪ್ರಿಯಾಂಕಾ ಗಾಂಧಿ ಗೆಲುವು ಕಾಂಗ್ರೆಸ್ ಪಾಳೆಯದಲ್ಲಿ ಪಾಸಿಟಿವ್ ವೈಬ್ ಸೃಷ್ಟಿಸಿದೆ. ರಾಹುಲ್ ಗಾಂಧಿ ಬದಲಾಗಿದ್ದಾರೆ, ಈಗವರು ಮೋದಿ ಸೇರಿದಂತೆ ಬಿಜೆಪಿಯ ಯಾವುದೇ ನಾಯಕರಿಗೆ, ಯಾವುದೇ ವಿಷಯಕ್ಕೆ ಸಂಬಂಧಿಸಿದಂತೆ ತಕ್ಕ ಉತ್ತರ ನೀಡುತ್ತಾರೆ. ಆದರೂ ಅವರು ಪ್ರಿಯಾಂಕಾ ಗಾಂಧಿ ಅವರಷ್ಟು ಸ್ಪಾಂಟೇನಿಯಸ್ ಅಲ್ಲ. ಹಾಗಾಗಿ ಪ್ರಿಯಾಂಕಾ ಗಾಂಧಿ ಸಂಸತ್ತಿನಲ್ಲಿರುವುದು ಕಾಂಗ್ರೆಸಿಗೆ ಆನೆ ಬಲ ಎನ್ನುತ್ತಾರೆ ಆ ಪಕ್ಷದ ಮುಖಂಡರು.
ಪ್ರಿಯಾಂಕಾ ಗಾಂಧಿ ಉತ್ತರ ಪ್ರದೇಶದಲ್ಲಿ ಅಷ್ಟೆಲ್ಲಾ ಶ್ರಮ ಪಟ್ಟರು ಸಕ್ಸಸ್ ಸಿಗಲಿಲ್ಲ. ಅದೇ ಶ್ರಮವನ್ನು ದಕ್ಷಿಣ ಭಾರತದಲ್ಲಿ ಹಾಕಿದರೆ ಖಂಡಿತಕ್ಕೂ ಕಾಂಗ್ರೆಸ್ ಪಕ್ಷಕ್ಕೆ ದಕ್ಷಿಣದಿಂದ ಇನ್ನೂ ಹೆಚ್ಚಿನ ಶಕ್ತಿ ಸಿಗುತ್ತದೆ. ರಾಹುಲ್ ಗಾಂಧಿ ಉತ್ತರ ಮತ್ತು ಪ್ರಿಯಾಂಕಾ ಗಾಂಧಿ ದಕ್ಷಿಣ ನೋಡಿಕೊಂಡರೆ ಕಾಂಗ್ರೆಸ್ ಪುಟಿದೇಳುವುದರಲ್ಲಿ ಅನುಮಾನವೇ ಇಲ್ಲ ಎನ್ನುತ್ತಾರೆ ಕಾಂಗ್ರೆಸ್ ನಾಯಕರು. ಕಾಂಗ್ರೆಸ್ ನಾಯಕರು ಹೀಗೆ ಉತ್ಸಾಹಭರಿತವಾಗಿ ಮಾತನಾಡುವುದು ಹೊಸದೇನಲ್ಲ. ಈ ಜೋಷ್ ಎಷ್ಟು ದಿನ ಇರುತ್ತದೆ ಎನ್ನುವುದನ್ನು ಕಾದುನೋಡಬೇಕು.
ಮಹಿಳಾ ಮತಗಳ ಮೇಲೆ ಆಪ್ ನಿಗಾ!
ಬಿಜೆಪಿ ಮಧ್ಯಪ್ರದೇಶದಲ್ಲಿ ಗೆಲ್ಲಲು ‘ಲಾಡ್ಲಿ ಬೆಹನ್’ ಯೋಜನೆ, ಮಹಾರಾಷ್ಟ್ರದಲ್ಲಿ ಗೆಲ್ಲಲು ‘ಲಾಡಕಿ ಬಹೀಣ’ ಯೋಜನೆಗಳು ಕಾರಣ ಎಂಬುದು ಈಗ ಜಗಜ್ಜಾಹೀರು.
ಈ ಎರಡು ಯೋಜನೆಗಳ ಮೂಲಕ ಸೋಲುವ ಸ್ಥಿತಿಯಲ್ಲಿದ್ದ ಎರಡು ರಾಜ್ಯಗಳನ್ನು ಬಿಜೆಪಿ ಗೆದ್ದುಕೊಂಡಿದೆ. ಹಾಗಾಗಿ ಮುಂಬರುವ ಚುನಾವಣೆಗಳಲ್ಲೂ ಬಿಜೆಪಿ ಮಹಿಳಾ ಮತದಾರರ ಮೇಲೆ ವಿಶೇಷ ನಿಗಾ ಇಡಲಿದೆ ಎನ್ನುವ ಗುಮಾನಿ ಆಮ್ ಆದ್ಮಿ ಪಕ್ಷದ್ದು. ಈ ಹಿನ್ನೆಲೆಯಲ್ಲಿ ದಿಲ್ಲಿ ಚುನಾವಣೆಗೆ ತಯಾರಾಗುತ್ತಿರುವ ಆಮ್ ಆದ್ಮಿ ಪಕ್ಷ ಮಹಿಳಾ ಮತದಾರರ ಮನ ಗೆಲ್ಲಲು ಏನು ಮಾಡಬೇಕಂದು ಯೋಚಿಸುತ್ತಿದೆಯಂತೆ. ಕಳೆದ ಬಾರಿ ಜನಪರ ಕಾರ್ಯಕ್ರಮಗಳಿಂದಾಗಿ ಮಹಿಳಾ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಆಮ್ ಆದ್ಮಿ ಪಕ್ಷಕ್ಕೆ ಮತ ನೀಡಿದ್ದರು. ಹಾಗಂತ ಅವರು ಈ ಬಾರಿಯೂ ಆಮ್ ಆದ್ಮಿ ಪಕ್ಷಕ್ಕೆ ಮತ ನೀಡುತ್ತಾರೆ ಎನ್ನುವ ಗ್ಯಾರಂಟಿ ಇಲ್ಲ. ಅದರಿಂದಾಗಿಯೇ ಆಮ್ ಆದ್ಮಿ ಪಕ್ಷಕ್ಕೀಗ ಮಹಿಳಾ ಮತದಾರರ ಚಿಂತೆ.
ಸಿದ್ದು-ಡಿಕೆಶಿಗೆ ಸಮಾನ ಖುಷಿ
ರಾಜ್ಯದಲ್ಲಿ ಉಪ ಚುನಾವಣೆ ನಡೆದ 3 ಕ್ಷೇತ್ರಗಳಲ್ಲೂ ಕಾಂಗ್ರೆಸ್ ಗೆಲ್ಲುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ಎಲ್ಲರ ನಿರೀಕ್ಷೆ ಸುಳ್ಳಾಗಿಸಿ ಕಾಂಗ್ರೆಸ್ 3 ಕ್ಷೇತ್ರಗಳನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿರುವುದು ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ಸಮಾನ ಖುಷಿ ತಂದಿದೆ. ಅಹಿಂದ ಮತಗಳು ನಮ್ಮ ಕೈಹಿಡಿದಿವೆ, ಸಂಡೂರು ಮತ್ತು ಶಿಗ್ಗಾಂವಿ ಜಯಕ್ಕೆ ತಾನೇ ಕಾರಣ ಎಂದು ಸಿದ್ದರಾಮಯ್ಯ ಬೀಗುತ್ತಿದ್ದಾರೆ. ಚನ್ನಪಟ್ಟಣದ ಗೆಲುವು ತನ್ನದು ಎಂದು ಡಿಕೆಶಿ ಹಿರಿಹಿರಿ ಹಿಗ್ಗುತ್ತಿದ್ದಾರೆ. ಮುಡಾ ಮತ್ತು ವಾಲ್ಮೀಕಿ ನಿಗಮದ ಹಗರಣಗಳ ವಿಷಯದಲ್ಲಿ ವಿರೋಧ ಪಕ್ಷಗಳು ದಿನವೂ ಸಿದ್ದರಾಮಯ್ಯ ರಾಜೀನಾಮೆ ಕೇಳುತ್ತಿದ್ದವು. ಇದೀಗ ‘ವಿಪಕ್ಷಗಳಿಗೆ ಜನರೇ ತಕ್ಕ ಉತ್ತರ ನೀಡಿದ್ದಾರೆ’ ಎಂದು ಸಿದ್ದರಾಮಯ್ಯ ಹೆಗಲಮೇಲಿನ ಶಲ್ಯವನ್ನು ನಿವಾಳಿಸಿಕೊಳ್ಳುತ್ತಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಸಹೋದರ ಡಿ.ಕೆ. ಸುರೇಶ್ ಸೋಲಿನಿಂದ ಕಪ್ಪಿಟ್ಟಿದ್ದ ಡಿಕೆಶಿ ಮುಖದಲ್ಲಿ ಈಗ ಮೊದಲಿನ ಮಿಂಚು ಕಾಣಿಸಿಕೊಂಡಿದೆ. ಇಬ್ಬರೂ ಖುಷಿಖುಷಿಯಾಗಿ ದಿಲ್ಲಿಗೆ ಹೋಗಿದ್ದಾರೆ. ಇಬ್ಬರ ಅಜೆಂಡಾಗಳ ಬಗ್ಗೆ ಸದ್ಯಕ್ಕೆ ಯಾರಿಗೂ ಅಂದಾಜಿಲ್ಲ. ಇಬ್ಬರಿಗೂ ಸಂಪುಟ ಪುನರ್ ರಚನೆ ಬೇಕಾಗಿಲ್ಲ. ಈ ನಡುವೆ ಮಹಾರಾಷ್ಟ್ರ ಸೋಲಿನ ಆಘಾತದಿಂದ ಚೇತರಿಸಿಕೊಂಡಿಲ್ಲದ ಹೈಕಮಾಂಡ್ ಸಿದ್ದು-ಡಿ.ಕೆ. ಜೋಡಿಗೆ ಏನು ಹೇಳಿಕಳಿಸುತ್ತದೆ ಎಂಬುದೂ ಗೊತ್ತಿಲ್ಲ.