ಗಾಝಾದಲ್ಲಿ ಸೃಷ್ಟಿಯಾಗಿರುವ ಭೀಕರ ಬರ ಹಾಗೂ ಹಸಿವಿನ ಕ್ರೌರ್ಯಕ್ಕೆ ಯಾರೆಲ್ಲ ಕಾರಣ?

ಗಾಝಾ ಹಿಂಸೆ ಮತ್ತು ಹಸಿವಿನಿಂದ ನರಳುತ್ತ ವರ್ಷವೇ ಕಳೆದಿದೆ.
ಅಲ್ಲಿ ಬರ ತಲೆದೋರಿದೆ ಎಂದು ಈಗ ಅಧಿಕೃತವಾಗಿ ಘೋಷಿಸಲಾಗಿದೆ. ಇದಕ್ಕೆ ಇಸ್ರೇಲ್‌ನ ಅಮಾನವೀಯ ನಡೆಯೇ ಕಾರಣ ಎಂದು ವಿಶ್ವಸಂಸ್ಥೆ ಹೇಳಿದೆ.
ಗಾಝಾದಲ್ಲಿ ಹಸಿವಿನ ಪರಿಸ್ಥಿತಿ ಅದೆಷ್ಟು ಭಯಾನಕವಾಗಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು, ಹಿರಿಯ ಪತ್ರಕರ್ತ ಇಫ್ತಿಕಾರ್ ಗೀಲಾನಿ ಅವರ ಮಾತುಗಳು ಸಹಕಾರಿಯಾಗಬಲ್ಲವು.
ಅವರು ಹೇಳುವಂತೆ, ಇದು ಕೇವಲ ಯುದ್ಧದ ವರದಿಯಲ್ಲ, ಬದಲಿಗೆ ಮಾನವೀಯತೆಯ ಸಾವಿನ ಕಥನ.
‘‘ನನ್ನ ಲೇಖನಿ ಹಸಿವಿನಿಂದ ಮೂಕವಾಗಿದೆ. ತನ್ನ ಕಣ್ಣೆದುರೇ ಮಗುವು ಹೊಟ್ಟೆಗಿಲ್ಲದೆ ನಿತ್ರಾಣಗೊಳ್ಳುವುದನ್ನು ನೋಡುವ ತಂದೆಯ ನೋವನ್ನು, ಅಥವಾ ಒಂದು ಚೀಲ ಹಿಟ್ಟಿಗಾಗಿ ಗುಂಡೇಟು ತಿಂದು ಸಾಯುವ ಯುವಕನ ದುರಂತವನ್ನು ಯಾವ ಪದಗಳಲ್ಲಿ ಹಿಡಿದಿಡಲಿ?’’ ಎಂದು ಅವರು ಪ್ರಶ್ನಿಸುತ್ತಾರೆ.
ಭವಿಷ್ಯದ ಪೀಳಿಗೆಯು, ‘‘ಗಾಝಾ ಹಸಿವಿನಿಂದ ಸಾಯುತ್ತಿರುವಾಗ ಜಗತ್ತು ಹೇಗೆ ಆರಾಮವಾಗಿ ಭರ್ಜರಿ ಊಟ ಮಾಡುತ್ತಿತ್ತು?’’ ಎಂದು ಕೇಳುವಾಗ, ನಮ್ಮ ಬಳಿ ಉತ್ತರವಿಲ್ಲದ ಒಂದು ತೀವ್ರ ಮುಜುಗರದ ಸನ್ನಿವೇಶ ನಿರ್ಮಾಣ ವಾಗುತ್ತದೆ ಎಂದು ಇಫ್ತಿಕಾರ್ ಹೇಳುತ್ತಾರೆ.
ಗಾಝಾದಲ್ಲಿ ನಾವು ನೋಡುತ್ತಿರುವುದು ಕೇವಲ ಆಹಾರದ ಕೊರತೆಯಲ್ಲ, ಇದೊಂದು ಉದ್ದೇಶಪೂರ್ವಕವಾಗಿ ಸೃಷ್ಟಿಸಲಾದ ಮಾನವ ನಿರ್ಮಿತ ಬರಗಾಲ.
ಗಾಝಾ ನಗರ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳು ಬರಕ್ಕೆ ತುತ್ತಾಗಿರುವುದಾಗಿ ಸಮಗ್ರ ಆಹಾರ ಭದ್ರತಾ ವರ್ಗೀಕರಣ ಸಂಸ್ಥೆ, ಅಂದರೆ ಇಂಟಿಗ್ರೇಟೆಡ್ ಫುಡ್ ಸೆಕ್ಯುರಿಟಿ ಫೇಸ್ ಕ್ಲಾಸಿಫಿಕೇಶನ್ (ಐಪಿಸಿ) ಹೇಳಿದೆ.
ಇಸ್ರೇಲ್‌ನಿಂದ ಸತತ ಆಕ್ರಮಣ, ಆಹಾರ ಮತ್ತು ಮಾನವೀಯ ನೆರವಿಗೆ ಅಡ್ಡಿ ಉಂಟುಮಾಡಿದ್ದು, ವ್ಯಾಪಕ ಸ್ಥಳಾಂತರ, ಉತ್ಪಾದನೆ ಕುಸಿತ ಫೆಲೆಸ್ತೀನಿಯರನ್ನು ಹಸಿವಿಗೆ ತಳ್ಳಿವೆ ಎಂದು ಅದು ಹೇಳಿದೆ.
ಗಾಝಾದಲ್ಲಿ ಐದು ಲಕ್ಷಕ್ಕೂ ಹೆಚ್ಚು ಜನರು ಹಸಿವಿನಿಂದ ನರಳುತ್ತಿದ್ದಾರೆ. ಅನೇಕರು ಅಪೌಷ್ಟಿಕತೆಯಿಂದ ಸಾಯುವ ಹಂತ ಮುಟ್ಟಿದ್ದಾರೆ. ಸೆಪ್ಟಂಬರ್ ಕೊನೆಯ ಹೊತ್ತಿಗೆ ಇದು ಆರೂ ಮುಕ್ಕಾಲು ಲಕ್ಷದಷ್ಟಕ್ಕೆ ಏರಿಕೆಯಾಗಬಹುದು ಎಂದು ಆ ಸಂಸ್ಥೆ ಹೇಳಿದೆ.
ಕದನ ವಿರಾಮ ಘೋಷಣೆಯಾಗದೇ ಹೋದರೆ, ಮಾನವೀಯ ನೆರವಿಗೆ ಇರುವ ನಿರ್ಬಂಧವನ್ನು ತೆಗೆಯದೇ ಹೋದರೆ, ಇತರ ಪ್ರದೇಶಗಳಿಗೂ ಈ ಬರ ಹಬ್ಬಲಿದೆ ಎಂದು ಅದು ಎಚ್ಚರಿಸಿದೆ.
ಗಾಝಾ ಮೇಲೆ ಇಸ್ರೇಲ್ ಯುದ್ಧ ಶುರುವಾದಾಗಿನಿಂದ ಈವರೆಗಿನ ಕರಾಳತೆಯ ವರದಿಗಳನ್ನು ನೋಡುತ್ತಲೇ ಇದ್ದೇವೆ. ಗಾಝಾ ಮೇಲಿನ ಇಸ್ರೇಲ್ ಆಕ್ರಮಣ ಒಂದಿಡೀ ಜನಸಮೂಹವನ್ನೇ ನಾಶಗೊಳಿಸುವ ಉದ್ದೇಶದ್ದು ಎಂಬುದು ಮತ್ತೆ ಮತ್ತೆ ಸ್ಪಷ್ಟವಾಗುತ್ತಲೇ ಇದೆ. ಈಗ ಬರವನ್ನು ಅಧಿಕೃತವಾಗಿ ಘೋಷಿಸಲಾಗಿರುವ ಹೊತ್ತಿನಲ್ಲೂ ಅದು ಕಾಣಿಸುತ್ತಿದೆ.
ವಿಶ್ವಸಂಸ್ಥೆಯೇ ಹೇಳಿರುವ ಹಾಗೆ, ಅಲ್ಲಿ ಮಾನವೀಯ ನೆರವು ನೀಡಲು ಇಸ್ರೇಲ್ ವ್ಯವಸ್ಥಿತ ಅಡ್ಡಿಯನ್ನು ಉಂಟುಮಾಡಿದ್ದೇ ಈ ಘೋರ ಸ್ಥಿತಿಗೆ ಕಾರಣ. ಅಂದರೆ, ಅದು ಉದ್ದೇಶಪೂರ್ವಕವಾಗಿಯೇ ಗಾಝಾವನ್ನು ಬರಕ್ಕೆ ತುತ್ತಾಗಿಸಿದೆ.
ಇದು ನೈಸರ್ಗಿಕ ವಿಕೋಪವಲ್ಲ, ಮತ್ತಿದು ಪಿಡುಗು ಕೂಡ ಅಲ್ಲ.
ಗಾಝಾದಲ್ಲಿನ ಬರ ಮಾನವ ನಿರ್ಮಿತ ದುರಂತ ಎಂದು ವಿಶ್ವಸಂಸ್ಥೆಯೇ ಹೇಳಿದೆ. ಇದು ನೈತಿಕತೆಯ ಅಧಃಪತನ ಮತ್ತು ಮಾನವೀಯತೆಯ ವೈಫಲ್ಯ ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಂಟೋನಿಯೊ ಗುಟೆರೆಸ್ ಹೇಳಿದ್ದಾರೆ.
ಈ ಬರ ಆಕಸ್ಮಿಕವಲ್ಲ ಎಂಬುದು ಸ್ಪಷ್ಟ. ಇದು ಯುದ್ಧದ ದುರಂತವೂ ಅಲ್ಲ. ಇದನ್ನು ಬೇಕೆಂತಲೇ ಸೃಷ್ಟಿಸಲಾಗಿದೆ. ಉದ್ದೇಶಪೂರ್ವಕವಾಗಿಯೇ ಗಾಝಾವನ್ನು ಬರದ ಭೀಕರತೆಗೆ ತಳ್ಳಲಾಗಿದೆ. ಇದು ಇಸ್ರೇಲ್ ನೀತಿಯ ನೇರ ಪರಿಣಾಮವಾಗಿದೆ.
ಐಪಿಸಿ ಇದನ್ನು ಈಗ ಅಧಿಕೃತವಾಗಿ ಘೋಷಿಸಿರುವಾಗ, ಇದಕ್ಕಾಗಿ ಅದು ಅನುಸರಿಸುವ ಪ್ರಕ್ರಿಯೆ ಎಂಥದು ಎಂಬುದನ್ನು ಗಮನಿಸಿದರೆ, ಈ ಬರದ ಭೀಕರತೆ ಇನ್ನಷ್ಟು ಸ್ಪಷ್ಟವಾಗುತ್ತದೆ.
ಇಂಥ ಘೋಷಣೆ ಮಾಡುವಾಗ, ಅದು ಮೂರು ನಿರ್ಣಾಯಕ ಅಂಶಗಳನ್ನು ಗಮನಿಸುತ್ತದೆ.
ಮೊದಲನೆಯದು, ತೀವ್ರ ಆಹಾರ ಅಭಾವ. ಕನಿಷ್ಠ ಐದು ಮನೆಗಳಲ್ಲಿ ಒಂದು ಮನೆ ತೀವ್ರ ಆಹಾರ ಕೊರತೆ ಎದುರಿಸುತ್ತಿರುವ ಸ್ಥಿತಿ ಅದಾಗಿರುತ್ತದೆ.
ಎರಡನೆಯದು, ತೀವ್ರ ಅಪೌಷ್ಟಿಕತೆ. ಶೇ. 30ಕ್ಕೂ ಹೆಚ್ಚು ಮಕ್ಕಳು ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿರುವುದನ್ನು ಇಲ್ಲಿ ಪರಿಗಣಿಸಲಾಗುತ್ತದೆ.
ಮೂರನೆಯದಾಗಿ, ಹಸಿವಿನಿಂದ ಉಂಟಾಗುವ ಸಾವುಗಳು. ಇದು, ಪ್ರತಿದಿನ 10,000 ಜನರಲ್ಲಿ ಇಬ್ಬರಿಗಿಂತ ಹೆಚ್ಚು ಜನರು ಸಾವನ್ನಪ್ಪುವ ಸ್ಥಿತಿ.
ಇವೆಲ್ಲವೂ ಈಗ ಗಾಝಾದಲ್ಲಿ ಕಾಣಿಸುತ್ತಿವೆ.
ಅಲ್ಲಿಂದ ದಾಖಲಾಗುತ್ತಿರುವ ಸಂಖ್ಯೆಗಳು ಆಘಾತಕಾರಿಯಾಗಿವೆ.
ಗಾಝಾದಲ್ಲಿರುವ ಒಟ್ಟು ಜನಸಂಖ್ಯೆಯ ಕಾಲು ಭಾಗದಷ್ಟು ಜನರು, ಅಂದರೆ ಐದು ಲಕ್ಷಕ್ಕೂ ಹೆಚ್ಚು ಜನರು ಈಗ ಹಸಿವಿನಿಂದ ಬಳಲುತ್ತಿದ್ದಾರೆ.
ಮುಂಬರುವ ವಾರಗಳಲ್ಲಿ ಅದು 6,40,000ಕ್ಕಿಂತ ಹೆಚ್ಚಾಗುವುದಾಗಿ ಹೇಳಲಾಗಿದೆ. ಇನ್ನಷ್ಟು ಆಹಾರ ಬಿಕ್ಕಟ್ಟು ಉಂಟಾಗುವ ಬಗ್ಗೆ ಎಚ್ಚರಿಸಲಾಗಿದೆ.
ಇಂಥ ಹೊತ್ತಲ್ಲಿ ಇಸ್ರೇಲ್ ಎಷ್ಟು ಕ್ರೂರವಾಗಿ ನಡೆದುಕೊಳ್ಳುತ್ತಿದೆ ಎಂಬುದನ್ನು ಬೇರೆ ಹೇಳಬೇಕಿಲ್ಲ.
ಗಾಝಾವನ್ನು ಇಂಥ ಸ್ಥಿತಿಗೆ ತಳ್ಳಲೆಂದೇ ಕ್ರೌರ್ಯ ಮೆರೆಯುತ್ತಿರುವ ಅದು, ಜಗತ್ತಿನ ಕಣ್ಣುಗಳನ್ನು ಮಾತ್ರ ಸುಳ್ಳು ಕಥೆಗಳ ಮೂಲಕ ನಂಬಿಸಲು ಯತ್ನಿಸುತ್ತಿದೆ.
ಮಾತೆತ್ತಿದರೆ ಹಮಾಸ್ ವಿರುದ್ಧ ಹರಿಹಾಯುವ ಅದು, ಗಾಝಾದ ಜನರಿಗೆ ಸಾಕಷ್ಟು ಆಹಾರ ಒದಗಿಸುತ್ತಿರುವುದಾಗಿ ಅತಿದೊಡ್ಡ ಸುಳ್ಳನ್ನು ಹೇಳುತ್ತಿದೆ ಮತ್ತದು ಹಸಿ ಸುಳ್ಳು ಎಂಬುದು ಇಡೀ ಜಗತ್ತಿಗೇ ಗೊತ್ತಾಗಿಯೂ ಬಹಳ ಸಮಯವಾಗಿದೆ.
ಗಾಝಾದ ಮಕ್ಕಳ ಮೈ ಅಸ್ಥಿಪಂಜರದಂತಾಗಿರುವ ಸತ್ಯಗಳು ಕಾಣುತ್ತಲೇ ಇವೆ. ಒಂದು ಹಿಡಿ ಅಕ್ಕಿಗಾಗಿ ಅಲ್ಲಿ ಹತಾಶ ಹೋರಾಟ ನಡೆದಿದೆ.
ಅಲ್ಲಿ ನೆರವಿಗೆ ನಿಂತ ಸಂಸ್ಥೆಗಳೆಲ್ಲವೂ ಇಸ್ರೆಲ್‌ನ ಅಸಲೀ ಮುಖ ಏನೆಂಬುದನ್ನು ಬಯಲು ಮಾಡಿವೆ.
ಇಸ್ರೇಲ್‌ನ ವ್ಯವಸ್ಥಿತ ಅಡಚಣೆಯಿಂದಾಗಿ ಆಹಾರ ಸರಿಯಾಗಿ ತಲುಪುತ್ತಿಲ್ಲ ಎಂಬುದನ್ನು ಸ್ವತಃ ವಿಶ್ವಸಂಸ್ಥೆಯ ತುರ್ತು ಪರಿಹಾರ ಸಂಯೋಜಕ ಟಾಮ್ ಫ್ಲೆಚರ್ ಹೇಳಿದ್ದಾರೆ.
ಇಸ್ರೇಲ್ ಕ್ರೂರ ರೀತಿಯಲ್ಲಿ, ಹಂತಹಂತವಾಗಿ ಬರವನ್ನು ಸೃಷ್ಟಿಸಿದೆ.
ಮೊದಲನೆಯದಾಗಿ, ಅಲ್ಲಿ ಆಹಾರ ಉತ್ಪಾದಿಸುವ ಸಾಧ್ಯತೆಯನ್ನೇ ನಾಶಪಡಿಸಲಾಗಿದೆ. ಗಾಝಾದ ಸುಮಾರು ಶೇ. 98ರಷ್ಟು ಕೃಷಿ ಭೂಮಿ ಹಾನಿಗೊಳಗಾಗಿದೆ. ಅಲ್ಲೇನನ್ನೂ ಮಾಡುವ ಸ್ಥಿತಿ ಇಲ್ಲವಾಗಿದೆ.
ಈ ವಿಷಯವನ್ನು ವಿಶ್ವಸಂಸ್ಥೆಯೇ ವರದಿ ಮಾಡಿದೆ.
ಒಂದು ಕಾಲದಲ್ಲಿ ಸ್ವಾವಲಂಬನೆಗೆ ಕಾರಣವಾಗಿದ್ದ ಕೃಷಿ ವಲಯವನ್ನು ವ್ಯವಸ್ಥಿತವಾಗಿ ನಿರ್ನಾಮ ಮಾಡಲಾಗಿದೆ.
ಎರಡನೆಯದಾಗಿ, ಮಾನವೀಯ ನೆರವು ಸಿಗದಂತೆ ಕಟ್ಟುನಿಟ್ಟಿನ ನಿರ್ಬಂಧ ಹೇರಲಾಗಿದೆ. ಎಲ್ಲ ಪರಿಹಾರ ಪ್ರಯತ್ನಗಳನ್ನು ವ್ಯರ್ಥಗೊಳಿಸಲಾಗುತ್ತಿದೆ. ನೆರವು ಫೆಲೆಸ್ತೀನಿಯರನ್ನು ತಲುಪದಂತೆ ಮಾಡಲಾಗಿದೆ.
ಅಂತರ್‌ರಾಷ್ಟ್ರೀಯ ದಾನಿಗಳು ಕಳಿಸಿರುವ ಆಹಾರ ಮತ್ತು ಔಷಧಗಳೆಲ್ಲ ಗಡಿಯಲ್ಲಿ ಕೊಳೆಯುತ್ತಿವೆ ಮತ್ತು ಅಲ್ಲಿಂದ ಕೆಲವೇ ಮೈಲುಗಳಷ್ಟು ದೂರದಲ್ಲಿ ಗಾಝಾದ ಮಕ್ಕಳು ಹಸಿವಿನಿಂದ ಸಾಯುತ್ತಿದ್ದಾರೆ.
ಮೂರನೆಯದಾಗಿ, ಎಲ್ಲ ಮೂಲಭೂತ ಅಗತ್ಯದ ವ್ಯವಸ್ಥೆಗಳನ್ನೇ ಹಾಳುಗೆಡವಲಾಗಿದೆ.
ಉಳಿವಿಗೆ ಅಗತ್ಯವಾದ ವ್ಯವಸ್ಥೆಗಳನ್ನು ಉದ್ದೇಶ ಪೂರ್ವಕವಾಗಿ ನಾಶಗೊಳಿಸಲಾಗಿದೆ ಎಂದು ಗುಟೆರಸ್ ಅವರೇ ಉಲ್ಲೇಖಿಸಿದ್ದಾರೆ. ಇದರಿಂದಾಗಿಯೇ ಈಗ ಬರ ಇನ್ನಷ್ಟು ಜಟಿಲ ಸ್ಥಿತಿಯಾಗಿದೆ.
ಆರೋಗ್ಯ ರಕ್ಷಣೆ, ನೀರು ಮತ್ತು ನೈರ್ಮಲ್ಯದಂಥ ಮೂಲಸೌಕರ್ಯಗಳೆಲ್ಲವನ್ನೂ ಯುದ್ಧದ ವೇಳೆ ಉದ್ದೇಶಪೂರ್ವಕವಾಗಿಯೇ ಗುರಿ ಮಾಡಲಾಗಿತ್ತು.
ಜನರು ಹಸಿವಿನಿಂದ ಬಳಲುತ್ತಿರುವಾಗಲೇ, ಕಲುಷಿತ ನೀರನ್ನೇ ಕುಡಿಯುವ ಕರಾಳ ಸ್ಥಿತಿಯನ್ನೂ ಎದುರಿಸುತ್ತಿದ್ದಾರೆ.
ರೋಗಗಳಿಗೆ ವೈದ್ಯಕೀಯ ಆರೈಕೆ ಇಲ್ಲವಾಗಿದೆ.
ನಾಲ್ಕನೆಯದಾಗಿ, ನೆರವಿನ ಮೂಲಸೌಕರ್ಯದ ಮೇಲೆಯೇ ದಾಳಿ ಮಾಡಲಾಗಿದೆ.
ಎಲ್ಲ ನೆರವಿನ ಮೇಲೆಯೂ ನಿಷೇಧ ಹೇರಲಾಗಿದೆ ಮತ್ತಿದು ಸ್ಪಷ್ಟವಾಗಿ ಕಾನೂನುಬಾಹಿರವಾಗಿದೆ.
ಕಡೆಯದಾಗಿ, ನೆರವಿಗಾಗಿ ಕಾದು ನಿಂತವರನ್ನೇ ಇಸ್ರೇಲ್ ಕೊಂದು ಹಾಕುತ್ತಿದೆ.
ಹಸಿದವರಿಗಾಗಿ ಆಹಾರ ಬಂದಿರುವ ಹೊತ್ತಲ್ಲಿ, ಹಸಿವಿನಿಂದ ಬಳಲುತ್ತಿರುವ ಜನಸಮೂಹದ ಮೇಲೆಯೇ ಇಸ್ರೇಲ್ ಪಡೆಗಳು ಪದೇ ಪದೇ ಗುಂಡು ಹಾರಿಸಿವೆ.
ನೆರವು ವಿತರಣಾ ಸ್ಥಳಗಳಲ್ಲಿಯೇ ನಡೆಸಲಾಗಿರುವ ಈ ಹತ್ಯಾಕಾಂಡಗಳು ಅತ್ಯಂತ ಕಟುಕತನದ್ದು ಮಾತ್ರವಲ್ಲ, ಅವು ಇಸ್ರೇಲ್‌ನ ಈಗಿನ ನೀತಿಯ ಒಂದು ಭಾಗವೇ ಆಗಿವೆ.
ಕೊಲ್ಲುವುದಕ್ಕೆ ಅದು ನಿಂತುಬಿಟ್ಟಿದೆ. ಕ್ರೌರ್ಯದ ಪರಮಾವಧಿಯನ್ನು ಇಸ್ರೇಲ್ ಮೆರೆಯುತ್ತಿದೆ.
ಇದೆಲ್ಲದರ ಆಚೆಗೆ, ಇಸ್ರೇಲ್ ತನ್ನನ್ನು ತಾನು ಜಗತ್ತಿನ ಮುಂದೆ ಬೇರೆಯೇ ರೀತಿಯಲ್ಲಿ ತೋರಿಸಿಕೊಳ್ಳಲು ನೋಡುತ್ತಿದೆ.
ವಿದೇಶಿ ಮಾಧ್ಯಮಗಳು ಸ್ವತಂತ್ರವಾಗಿ ವರದಿ ಮಾಡುವುದನ್ನು ತಡೆಯುತ್ತದೆ. ಬಹುತೇಕ ಪ್ರಮುಖ ಮಾಧ್ಯಮಗಳು ಅವಕಾಶ ಇದ್ದರೂ ಸತ್ಯ ಹೇಳುವುದಿಲ್ಲ.
ಸಾವುಗಳು ಯುದ್ಧ ಅಥವಾ ಹಸಿವಿ ನಿಂದ ಸಂಭವಿಸಿಲ್ಲ ಎಂದು ಬಿಂಬಿಸುವುದು ವ್ಯವಸ್ಥಿತವಾಗಿ ನಡೆಯುತ್ತಿದೆ.
ಈಗ ಅಲ್ಲಿ ಬರದ ಘೋಷಣೆಯಾಗಿದೆ. ಇದು ಭೀಕರತೆಯ ಹಾದಿಯಲ್ಲಿ ಪರಿ ಹಾರದ ತಿರುವುಗಳೇ ಇರದ ಸ್ಥಿತಿಯಾಗಿದೆ.
ಈ ಬರ ಇಸ್ರೇಲಿ ನೀತಿಗಳ ನೇರ ಪರಿಣಾಮವಾಗಿರುವುದರಿಂದ, ಅದು ಯುದ್ಧಾಪರಾಧದ ಪರಿಣಾಮವಾಗ ಬಹುದು ಎಂದು ವಿಶ್ವಸಂಸ್ಥೆ ಮಾನವ ಹಕ್ಕುಗಳ ಮುಖ್ಯಸ್ಥ ವೋಲ್ಕರ್ ಟರ್ಕ್ ಹೇಳಿದ್ದಾರೆ. ಹಸಿವನ್ನು ಯುದ್ಧದ ವಿಧಾನವಾಗಿ ಬಳಸುವುದು ಯುದ್ಧಾಪ ರಾಧ ಎಂದು ಅವರು ಹೇಳಿದ್ದಾರೆ.
ಇದರ ಪರಿಣಾಮವಾಗಿ ಉಂಟಾಗುವ ಸಾವುಗಳು ಉದ್ದೇಶಪೂರ್ವಕ ಹತ್ಯೆಯ ಯುದ್ಧಾಪರಾಧದ ಭಾಗವೇ ಆಗಬಹುದು ಎಂದಿದ್ಧಾರೆ.
ಈ ಹೊತ್ತಿನಲ್ಲಿ ಅಂತರ್‌ರಾಷ್ಟ್ರೀಯ ಸಮುದಾಯ, ಅದರಲ್ಲೂ ಅಮೆರಿಕ, ಬ್ರಿಟನ್ ಮತ್ತು ಜರ್ಮನಿಯಂಥ ದೇಶಗಳು ಕಳವಳದ ನಾಟಕವಾಡುತ್ತ ಇದರ ಬಗೆಗಿನ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ.
ಅವು ಪೂರೈಸುವ ಶಸ್ತ್ರಾಸ್ತ್ರಗಳು, ಹಣಕಾಸು ನೆರವು ಮತ್ತು ರಾಜತಾಂತ್ರಿಕ ಬೆಂಬಲ -ಇವೆಲ್ಲವೂ ಗಾಝಾದಲ್ಲಿನ ದುರಂತವನ್ನು ಇನ್ನಷ್ಟು ಹೆಚ್ಚಿಸಿವೆ.
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿನ ಪ್ರತಿಯೊಂದು ವಿಟೋ, ಆತ್ಮರಕ್ಷಣೆ ಎಂಬ ಇಸ್ರೇಲ್‌ನ ವಾದವನ್ನು ಸಮರ್ಥಿಸುವ ಪೊಳ್ಳು ಹೇಳಿಕೆಗಳೆಲ್ಲವೂ ಗಾಝಾದಲ್ಲಿ ಸಾವುಗಳನ್ನೇ ಬರೆಯುತ್ತಿವೆ.
ಈ ಮಾನವ ನಿರ್ಮಿತ ಹಸಿವಿನ ಪಿಡುಗು ಹರಡುತ್ತಿರುವಾಗಲೂ, ಇಸ್ರೇಲ್ ತನ್ನ ಹಾದಿ ಬದಲಿಸುತ್ತಿಲ್ಲ. ಅದರ ಕ್ರೌರ್ಯ ಇನ್ನೂ ಹೆಚ್ಚುತ್ತಲೇ ಇದೆ. ಬರಕ್ಕೆ ತುತ್ತಾಗಿರುವ ಗಾಝಾ ನಗರದಲ್ಲಿ ಇಸ್ರೇಲ್ ಮತ್ತಷ್ಟು ದೊಡ್ಡ ಪ್ರಮಾಣದ ದಾಳಿಯ ಬೆದರಿಕೆ ಹಾಕುತ್ತಿದೆ.
ಈಗಾಗಲೇ ಹಸಿವಿನಿಂದ ಕಂಗೆಟ್ಟಿರುವ, ಸಾವಿನ ದವಡೆಯಲ್ಲಿರುವ ಆ ಜನರನ್ನು ಉಳಿಸಲು ಯಾವುದೇ ಸಮರ್ಥ ಯೋಜನೆ ಇಲ್ಲ.
ಲಕ್ಷಾಂತರ ಜನರನ್ನು ಮತ್ತೆ ಬಲವಂತವಾಗಿ ಸ್ಥಳಾಂತರಿಸುವ ಯತ್ನ ನಡೆದಿದೆ. ಹಾಗಾಗಿ, ಇದು ಶತ್ರುವನ್ನು ಸೋಲಿಸುವ ತಂತ್ರವಾಗಿರದೆ, ಜನರನ್ನೇ ಮುಗಿಸಿಹಾಕುವ ತಂತ್ರವಾಗಿದೆ.
ಗಾಝಾ ನಗರದ ಚಿತ್ರಗಳು ಈಗಾಗಲೇ ಭೀಕರವಾಗಿವೆ.
ಇನ್ನಷ್ಟು ಭೀಕರವಾಗಲಿವೆ.
ಈ ನಡುವೆ ಅಮೆರಿಕ, ಬ್ರಿಟನ್‌ನಂತಹ ದೇಶಗಳು ಹೇಗೂ ಇಸ್ರೇಲ್ ಜೊತೆ ನಿಂತಿವೆ.
ಮುಸ್ಲಿಮ್ ದೇಶಗಳು ಎಂಬ ಹೆಸರಿನ ಅರಬ್ ದೇಶಗಳೂ ತಮ್ಮ ಸಂಪೂರ್ಣ ನಿಷ್ಕ್ರಿಯತೆಯಿಂದಾಗಿ ಇಸ್ರೇಲ್‌ಗೇ ಸಹಕರಿಸುತ್ತಿವೆ. ಅವುಗಳು ತಮ್ಮ ವ್ಯವಹಾರ, ವಿಲಾಸಿ ಜೀವನ, ತಮ್ಮ ಅರಮನೆಗಳು, ಮೋಜು ಮಸ್ತಿಗಳಲ್ಲೇ ವ್ಯಸ್ತವಾಗಿವೆ.
ಈ ಅರಬ್ ದೇಶಗಳ ಮಹಾ ದ್ರೋಹವನ್ನೂ ಜಗತ್ತು ಎಂದಿಗೂ ಮರೆಯುವುದಿಲ್ಲ.
ಎಲ್ಲವು ಅಲ್ಲಿನ ಯುದ್ಧಾಪರಾಧದ ದುರಂತಕ್ಕೆ ಸಾಕ್ಷಿಯಾಗಿವೆ.
ತಿಂಗಳುಗಳಿಂದ ಜಗತ್ತಿಗೆ ಎಚ್ಚರಿಕೆ ನೀಡಲಾಗಿತ್ತು ಮತ್ತು ಈಗ ಎಚ್ಚರಿಕೆಯ ಸಮಯ ಮೀರಿಹೋಗಿದೆ.
ಈಗ, ಈ ಹಸಿವಿನ ವಿಪತ್ತು ಅಲ್ಲಿ ಒಂದು ಕರಾಳ ವಾಸ್ತವವೇ ಆಗಿದೆ.
ಗಾಝಾದಲ್ಲಿ ಬರವನ್ನು ಹೇಗೆ ತಡೆಯುವುದು ಎಂಬುದು ಜಗತ್ತಿನ ಪ್ರಶ್ನೆಯಲ್ಲ. ಇಡೀ ಅಲ್ಲಿನ ಜನರನ್ನು ಅದು ನುಂಗಿಹಾಕುವುದನ್ನು ಜಗತ್ತು ಸುಮ್ಮನೆ ನೋಡುತ್ತಿದೆಯೇ ಎಂಬುದು ಪ್ರಶ್ನೆ.
ಇದಕ್ಕೆ ಕಾರಣರಾದವರನ್ನು ಮಾನ ವೀಯತೆಯ ವಿರುದ್ಧದ ಈ ಅಪರಾಧಕ್ಕೆ ಹೊಣೆಗಾರರನ್ನಾಗಿ ಮಾಡಲಾಗುತ್ತದೆಯೇ ಎಂಬುದು ಪ್ರಶ್ನೆ.







