ರೈತ ಕೃಷ್ಣಮೂರ್ತಿ ಸಾವಿಗೆ ಹೊಣೆ ಯಾರು?
ಬಫರ್ಝೋನ್ ವಿವಾದ, ರೈಲ್ವೆ ಬ್ಯಾರಿಕೇಡ್ ಕಾಮಗಾರಿ ಸ್ಥಗಿತ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಿರ್ಲಕ್ಷ್ಯದ ವಿರುದ್ಧ ಆಕ್ರೋಶ

Photo: thehindu
ನರಸಿಂಹರಾಜಪುರ: ತಾಲ್ಲೂಕಿನ ಹೆನ್ನಂಗಿಯಲ್ಲಿ ಕಾಡಾನೆ ದಾಳಿಗೆ ಬಲಿಯಾದ ರೈತ ಕೃಷ್ಣಮೂರ್ತಿ ಅವರ ಸಾವಿಗೆ ಯಾರು ಹೊಣೆ? ಜನಪ್ರತಿನಿಧಿಗಳೇ, ಅರಣ್ಯ ಇಲಾಖೆಯೇ, ರಾಜ್ಯ ಸರ್ಕಾರವೇ ಅಥವಾ ಕೇಂದ್ರ ಸರ್ಕಾರವೇ? ಎಂಬ ಪ್ರಶ್ನೆ ಇದೀಗ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಕೃಷ್ಣಮೂರ್ತಿ ಅವರ ಸಾವಿಗೆ ಸಂಬಂಧಿಸಿದಂತೆ ಹಲವು ಆಡಳಿತಾತ್ಮಕ ನಿರ್ಧಾರಗಳು ಹಾಗೂ ಅರಣ್ಯ ಇಲಾಖೆಯ ಕಾರ್ಯವೈಖರಿಯನ್ನು ಪ್ರಶ್ನಿಸಿರುವ ಹೋರಾಟಗಾರರು, ಈ ಘಟನೆಗೆ ದೀರ್ಘಕಾಲದಿಂದ ಮುಂದುವರಿದಿರುವ ಮಾನವ–ಆನೆ ಸಂಘರ್ಷವೇ ಪ್ರಮುಖ ಹಿನ್ನೆಲೆಯಾಗಿದೆ ಎಂದು ಆರೋಪಿಸಿದ್ದಾರೆ.
2011ರಲ್ಲಿ ಹೆನ್ನಂಗಿ ಸೇರಿದಂತೆ ನರಸಿಂಹರಾಜಪುರ, ಮೂಡಿಗೆರೆ ಹಾಗೂ ಶೃಂಗೇರಿ ತಾಲ್ಲೂಕಿನ ಹಲವು ಗ್ರಾಮಗಳ ಜನವಸತಿ ಪ್ರದೇಶಗಳನ್ನು ಭದ್ರಾ ಅಭಯಾರಣ್ಯದ ಬಫರ್ಝೋನ್ ವ್ಯಾಪ್ತಿಗೆ ಸೇರಿಸಿರುವ ನಿರ್ಧಾರ ಅವೈಜ್ಞಾನಿಕವಾಗಿತ್ತು ಎಂಬುದು ಅವರ ಪ್ರಮುಖ ಆಕ್ಷೇಪವಾಗಿದೆ.
ಹೆನ್ನಂಗಿ ಸಮೀಪ ಆನೆಗಳ ಸಂಚಾರ ತಡೆಗಟ್ಟಲು ರೈಲ್ವೆ ಬ್ಯಾರಿಕೇಡ್ ನಿರ್ಮಿಸುವ ಉದ್ದೇಶದಿಂದ ಅರಣ್ಯ ಇಲಾಖೆ ಡಿಪಿಆರ್ ಸಿದ್ಧಪಡಿಸಿ ಟೆಂಡರ್ ಹಂತಕ್ಕೆ ತಲುಪಿತ್ತು. ಆದರೆ, ಈ ಪ್ರದೇಶ ಭದ್ರಾ ಅಭಯಾರಣ್ಯದ ಬಫರ್ಝೋನ್ ವ್ಯಾಪ್ತಿಗೆ ಬರುವ ಹಿನ್ನೆಲೆಯಲ್ಲಿ ಕಾಮಗಾರಿಗೆ ಅನುಮತಿ ದೊರೆಯದೆ ಯೋಜನೆ ಸ್ಥಗಿತಗೊಂಡಿತ್ತು ಎಂದು ಆರೋಪಿಸಲಾಗಿದೆ. ರೈಲ್ವೆ ಬ್ಯಾರಿಕೇಡ್ ನಿರ್ಮಾಣವಾಗಿದ್ದರೆ ಆನೆಗಳ ಹಾವಳಿಯನ್ನು ನಿಯಂತ್ರಿಸಲು ಸಾಧ್ಯವಾಗುತ್ತಿತ್ತು ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.
ಇನ್ನೊಂದೆಡೆ, ರಾಜ್ಯ ಸರ್ಕಾರ ಭದ್ರಾ ಅಭಯಾರಣ್ಯದ ಬಫರ್ಝೋನ್ ವ್ಯಾಪ್ತಿಯನ್ನು ಒಂದು ಕಿಲೋಮೀಟರ್ಗೆ ಸೀಮಿತಗೊಳಿಸುವ ಪ್ರಸ್ತಾವನೆಯನ್ನು ಕೇಂದ್ರ ಪರಿಸರ ಇಲಾಖೆಗೆ ಕಳುಹಿಸಿದ್ದರೂ, ಈವರೆಗೆ ಅನುಮೋದನೆ ದೊರೆತಿಲ್ಲ ಎಂದು ಹೇಳಲಾಗಿದೆ. ಈ ವಿಳಂಬದಿಂದಾಗಿ ಆನೆ–ಮಾನವ ಸಂಘರ್ಷ ತಡೆಗಟ್ಟುವ ಕಾಮಗಾರಿಗಳಿಗೆ ಅಡ್ಡಿಯಾಗುತ್ತಿದೆ ಎಂಬುದು ಸ್ಥಳೀಯರ ಆರೋಪವಾಗಿದೆ.
ಇದೇ ಸಂದರ್ಭದಲ್ಲಿ ಸುಪ್ರೀಂಕೋರ್ಟ್ ನೀಡಿರುವ ಆನೆಗಳ ಸಾಂಪ್ರದಾಯಿಕ ಸಂಚಾರ ಮಾರ್ಗಗಳಿಗೆ ಸಂಬಂಧಿಸಿದ ಆದೇಶದ ಬಗ್ಗೆಯೂ ಚರ್ಚೆ ಆರಂಭವಾಗಿದೆ. ಆನೆಗಳ ಸಂಚಾರ ಮಾರ್ಗಗಳಿಗೆ ಅಡ್ಡಿಪಡಿಸಬಾರದು ಎಂಬ ನ್ಯಾಯಾಲಯದ ನಿಲುವಿನ ಅನುಷ್ಠಾನದಿಂದ ಮಾನವ–ಆನೆ ಸಂಘರ್ಷ ತಡೆಗಟ್ಟುವ ಕ್ರಮಗಳಿಗೆ ಎದುರಾಗಬಹುದಾದ ಪರಿಣಾಮಗಳ ಬಗ್ಗೆ ಸೂಕ್ತ ಪರಿಶೀಲನೆ ಅಗತ್ಯವಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ನ್ಯಾಯಾಲಯದ ಆದೇಶದ ಅನುಷ್ಠಾನಕ್ಕೆ ಸಂಬಂಧಿಸಿದ ಅಡೆತಡೆಗಳು ಹಾಗೂ ದೇಶಾದ್ಯಂತದ ಪರಿಸ್ಥಿತಿಗಳ ಕುರಿತು ವರದಿ ಸಲ್ಲಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿರುವ ವಿಚಾರವನ್ನೂ ಹೋರಾಟಗಾರರು ಪ್ರಸ್ತಾಪಿಸಿದ್ದಾರೆ. ಆದರೆ, ಆನೆಗಳ ಸಂರಕ್ಷಣೆಯ ಜೊತೆಗೆ ಮಾನವ ಜೀವಗಳ ರಕ್ಷಣೆಯೂ ಸಮಾನ ಆದ್ಯತೆಯಾಗಬೇಕು ಎಂಬುದು ಅವರ ಒತ್ತಾಯವಾಗಿದೆ.
ರಾಜ್ಯ ಸರ್ಕಾರ ಕೂಡಲೇ ವೈಜ್ಞಾನಿಕವಾಗಿ ಆನೆಗಳ ಚಲನವಲನವನ್ನು ಗುರುತಿಸಿ ರೈತರಿಗೆ ಮುನ್ನೆಚ್ಚರಿಕೆ ಮಾಹಿತಿ ನೀಡುವ ವ್ಯವಸ್ಥೆ ಕಲ್ಪಿಸಬೇಕು. ಇದಕ್ಕಾಗಿ ಅಗತ್ಯ ಸಿಬ್ಬಂದಿ ನೇಮಿಸಿ, ಗ್ರಾಮೀಣ ಪ್ರದೇಶಗಳಲ್ಲಿ ನಿರಂತರ ನಿಗಾ ವ್ಯವಸ್ಥೆ ಜಾರಿಗೊಳಿಸಬೇಕು. ರೈಲ್ವೆ ಬ್ಯಾರಿಕೇಡ್, ಆನೆ ಕಂದಕ ಸೇರಿದಂತೆ ವೈಜ್ಞಾನಿಕವಾಗಿ ಸೂಕ್ತವೆನಿಸುವ ಸಂಘರ್ಷ ತಡೆಗಟ್ಟುವ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಲಾಗಿದೆ.
ಕೃಷ್ಣಮೂರ್ತಿ ಅವರ ಸಾವಿಗೆ ನ್ಯಾಯ ದೊರಕಿಸಿಕೊಡಬೇಕಾದರೆ ಕೇವಲ ಪರಿಹಾರ ನೀಡುವುದರಿಂದ ಸಮಸ್ಯೆ ಬಗೆಹರಿಯುವುದಿಲ್ಲ. ಸುಪ್ರೀಂಕೋರ್ಟ್ ಆದೇಶದ ಅನುಷ್ಠಾನದಿಂದ ಎದುರಾಗಬಹುದಾದ ಸಮಸ್ಯೆಗಳ ಕುರಿತು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನ್ಯಾಯಾಲಯದ ಗಮನಕ್ಕೆ ತಂದು ಅಗತ್ಯ ಮರುಪರಿಶೀಲನೆಗೆ ಮನವಿ ಮಾಡಬೇಕು. ಬಫರ್ಝೋನ್ ವ್ಯಾಪ್ತಿಯ ಗೊಂದಲವನ್ನು ಕೂಡಲೇ ಪರಿಹರಿಸಬೇಕು ಎಂದು ಒತ್ತಾಯಿಸಲಾಗಿದೆ.
ಸಂಸದರು ಈ ವಿಚಾರದಲ್ಲಿ ತಮ್ಮ ಜವಾಬ್ದಾರಿಯನ್ನು ಅರಿತು ಕೇಂದ್ರ ಪರಿಸರ ಇಲಾಖೆಯೊಂದಿಗೆ ಚರ್ಚಿಸಿ, ವನ್ಯಜೀವಿ ಸಂರಕ್ಷಣೆಯ ಜೊತೆಗೆ ಮಾನವ ಜೀವಗಳ ರಕ್ಷಣೆಗೆ ಆದ್ಯತೆ ನೀಡುವಂತೆ ಸಂಬಂಧಿತ ಕಾಯ್ದೆ ಮತ್ತು ನಿಯಮಗಳಲ್ಲಿ ಅಗತ್ಯ ಬದಲಾವಣೆ ತರಲು ಪ್ರಯತ್ನಿಸಬೇಕು ಎಂಬ ಆಗ್ರಹವೂ ಕೇಳಿಬಂದಿದೆ.
ಭದ್ರ ಅಭಯಾರಣ್ಯ ಕೇವಲ ಹುಲಿ ಸಂರಕ್ಷಿತ ಅರಣ್ಯವಾಗಿತ್ತು. ಆದರೆ ಕೇಂದ್ರ ಸರ್ಕಾರ.... 2023ರಲ್ಲಿ ಹುಲಿ ಸಂರಕ್ಷಿತ ಪ್ರದೇಶ ಮತ್ತು ಆನೆ ಸಂರಕ್ಷಿತ ಪ್ರದೇಶಗಳನ್ನ ವಿಲಿನಗೊಳಿಸಿದ ಪರಿಣಾಮ.., ಇವತ್ತು ಅದು 'ಹುಲಿ ಮತ್ತು ಆನೆ ಸಂರಕ್ಷಿತ ಅಭಯಾರಣ್ಯ' ಎಂದು ಮರುನಾಮಕರಣವಾಗಿದೆ. ಇಲ್ಲಿ ಕೇಂದ್ರ ಸರ್ಕಾರದ ನಾಜೂಕಿನ ಆಟ ಗಮನಿಸಬೇಕಿದೆ ಯಾಕೆಂದರೆ... ಈ ಯೋಜನೆಗಳಿಗೆ 500 ಕೋಟಿಯ ಬೃಹತ್ ಮೊತ್ತ ವಾರ್ಷಿಕ ಅನುದಾನ ನೀಡುತ್ತಿದೆ ಮತ್ತು ಅಂತರಾಷ್ಟ್ರೀಯ ಅನುದಾನದ ಮಾಹಿತಿನೇ ಕೇಂದ್ರ ಸರ್ಕಾರ ಇದುವರೆಗೂ ಸಾರ್ವಜನಿಕವಾಗಿ ಹಂಚಿಕೊಂಡಿಲ್ಲ...!!
ಇವೆಲ್ಲದರ ಪರಿಣಾಮ ಭದ್ರಾ ಅಭಯಾರಣ್ಯದಲ್ಲಿ ಅನೆಗಳ ಸಂಖ್ಯೆ 700ಕ್ಕೂ ಅಧಿಕವಾಗಿವೆ...!!!






