ಎಸ್‌ಐಆರ್ ಪ್ರಕ್ರಿಯೆ ತಂದಿಟ್ಟಿರುವ ಅವಾಂತರಗಳಿಗೆ ಹೊಣೆ ಯಾರು?

ಎಸ್‌ಐಆರ್ ಪ್ರಕ್ರಿಯೆ ಮೂಲಕ ಈ ದೇಶವನ್ನು ಎಲ್ಲಿಗೆ ಮುಟ್ಟಿಸಲಾಗುತ್ತಿದೆ ಎಂಬುದು ಆತಂಕ ಮೂಡಿಸುತ್ತಿದೆ.
ಅಮರ್ತ್ಯ ಸೇನ್ ಅವರಂಥ, ನೊಬೆಲ್ ಪ್ರಶಸ್ತಿ ಪುರಸ್ಕೃತರು, ಸ್ವಾತಂತ್ರ್ಯಪೂರ್ವದಲ್ಲಿ ಜನಿಸಿದ 92 ವರ್ಷದ ವ್ಯಕ್ತಿ ಕೂಡ ತಮ್ಮ ಪೌರತ್ವ ಸಾಬೀತುಪಡಿಸುವ ಸ್ಥಿತಿ ಬಂದಿದೆ.
ಅಮರ್ತ್ಯ ಸೇನ್ ಅವರಿಗೆ ತಮ್ಮ ಪೌರತ್ವ ಸಾಬೀತುಪಡಿಸಲು ನೋಟಿಸ್ ನೀಡಲಾಗಿದೆ. ಇದು ಚುನಾವಣಾ ಆಯೋಗದ ಎಸ್‌ಐಆರ್ ಪ್ರಕ್ರಿಯೆಯ ಆಘಾತಕಾರಿ ಆಟದ ಪರಿಣಾಮ. ಇದೊಂದು ದೊಡ್ಡ ತಮಾಷೆಯಂತೆಯೂ ಅತಿ ಕಳವಳಕಾರಿಯಾಗಿಯೂ ಕಾಣಿಸುತ್ತಿದೆ.
ಭಾರತದ ಅತಿದೊಡ್ಡ ರಾಜ್ಯ ಮತ್ತು ರಾಜಕೀಯವಾಗಿ ಅತ್ಯಂತ ಪ್ರಮುಖ ರಾಜ್ಯವಾದ ಉತ್ತರ ಪ್ರದೇಶದಲ್ಲಿ ಬಿಡುಗಡೆ ಮಾಡಲಾದ ಮತದಾರರ ಕರಡು ಪಟ್ಟಿಯಲ್ಲಿ ಸುಮಾರು 3 ಕೋಟಿ ಹೆಸರುಗಳು ಇಲ್ಲವಾಗಿವೆ.
2.89 ಕೋಟಿ, ಅಂದರೆ ಪ್ರತೀ ಐವರಲ್ಲಿ ಕನಿಷ್ಠ ಒಬ್ಬ ವ್ಯಕ್ತಿಯ ಮತ ರದ್ದಾಗಿದೆ. ಕೆಲ ಕುಟುಂಬಗಳೇ ಮತದಾನದ ಪಟ್ಟಿಯಿಂದ ಕಾಣೆಯಾಗಿವೆ. ಪ್ರತೀ ಐದು ಜನರಲ್ಲಿ ಒಬ್ಬರನ್ನು ಈ ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗಿದೆ. ಕರಡು ಪಟ್ಟಿಯಲ್ಲಿ 46 ಲಕ್ಷ ಜನರು ಸತ್ತಿದ್ದಾರೆ ಎಂದು ಪಟ್ಟಿ ಮಾಡಲಾಗಿದೆ. 2 ಕೋಟಿಗಿಂತಲೂ ಹೆಚ್ಚು ಜನರು ವಲಸೆ ಹೋಗಿದ್ದಾರೆ ಮತ್ತು 25 ಲಕ್ಷಕ್ಕಿಂತಲೂ ಹೆಚ್ಚು ಜನರು ನಕಲಿ ಮತದಾರರು ಎನ್ನಲಾಗಿದೆ.
ಹಿಂದೆ 15.44 ಕೋಟಿ ಮತದಾರರಿದ್ದರು. ಅಂದರೆ ಸುಮಾರು 16 ಕೋಟಿ. ಈಗ ಸುಮಾರು 12 ಕೋಟಿ ಮತದಾರರು ಉಳಿದಿದ್ದಾರೆ.
ಉತ್ತರ ಪ್ರದೇಶದಲ್ಲಿ ಸುಮಾರು 4 ಕೋಟಿ ಮತದಾರರು ಕಣ್ಮರೆಯಾಗುತ್ತಿದ್ದಾರೆ ಎಂದು ಕೆಲ ದಿನಗಳ ಹಿಂದೆ ಸಿಎಂ ಆದಿತ್ಯನಾಥ್ ಹೇಳಿದ್ದರು.
ಈಗ, ಲಕ್ನೊದಲ್ಲಿ ಅತಿ ಹೆಚ್ಚು ಹೆಸರುಗಳು, 12 ಲಕ್ಷ ಮತದಾರರ ಪಟ್ಟಿಯಿಂದ ಡಿಲೀಟ್ ಆಗಿವೆ.
ಇದಕ್ಕೆ ವಿರೋಧ ಪಕ್ಷಗಳ ನಾಯಕರು ಏನು ಹೇಳುತ್ತಾರೆ?
‘ದಿ ವೈರ್’ಗಾಗಿ ಅರ್ಫಾ ಖಾನಮ್ ಶೆರ್ವಾನಿ ಕಾಂಗ್ರೆಸ್ ನಾಯಕ ಗುರುದೀಪ್ ಸಿಂಗ್ ಸಪ್ಪಲ್ ಅವರೊಂದಿಗೆ ಮಾತಾಡಿದ್ದಾರೆ.
ಗುರುದೀಪ್ ಸಿಂಗ್ ಸಪ್ಪಲ್ ಅವರು ಟ್ವೀಟ್ ಮೂಲಕ ಹೇಳಿರುವ ಒಂದು ಆಘಾತಕಾರಿ ವಿಷಯವನ್ನು ಕೂಡ ಅವರು ಉಲ್ಲೇಖಿಸಿದ್ದಾರೆ.
ಪ್ರಭಾವಿ ಕಾಂಗ್ರೆಸ್ ನಾಯಕನ ಇಡೀ ಕುಟುಂಬವನ್ನು ಮತದಾರರ ಪಟ್ಟಿಯಿಂದ ಹೇಗೆ ತೆಗೆದುಹಾಕಲಾಗಿದೆ ಎಂಬುದನ್ನು ಆ ಟ್ವೀಟ್ ಹೇಳುತ್ತದೆ.
ತಮ್ಮ ಕುಟುಂಬದವರ, ಪೋಷಕರ ಹೆಸರುಗಳು 2003ರ ಮತದಾರರ ಪಟ್ಟಿಯಲ್ಲಿ ಸೇರಿರುವ ಬಗ್ಗೆ ಅವರು ಹೇಳುತ್ತಾರೆ. ಚುನಾವಣಾ ಆಯೋಗದ ನಿಯಮಗಳ ಪ್ರಕಾರ ಎಲ್ಲಾ ಅಗತ್ಯ ದಾಖಲೆಗಳನ್ನು ಸಲ್ಲಿಸಲಾಗಿದೆ. ತಾವು ಸ್ವತಃ ಭಾರತದ ಉಪ ರಾಷ್ಟ್ರಪತಿಗಳೊಡನೆ ಸೇವೆ ಸಲ್ಲಿಸಿದ್ದು, ರಾಜ್ಯಸಭಾ ಸಚಿವಾಲಯದಲ್ಲಿ ಜಂಟಿ ಕಾರ್ಯದರ್ಶಿಯೂ ಆಗಿರುವ ಬಗ್ಗೆ, ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಸದಸ್ಯರಾಗಿರುವ ಬಗ್ಗೆಯೂ ಹೇಳುತ್ತಾರೆ.
ಅಷ್ಟು ಮಾತ್ರವಲ್ಲದೆ, ಅವರು ಎಸ್‌ಐಆರ್ ಮತ್ತು ಇತರ ವಿಷಯಗಳ ಕುರಿತು ಚುನಾವಣಾ ಆಯೋಗಕ್ಕೆ ಕಾಂಗ್ರೆಸ್ ನಿಯೋಗದ ಭಾಗವಾಗಿದ್ದಾರೆ.
ಹೀಗಿದ್ದೂ ಅವರ ಹೆಸರುಗಳು ಪಟ್ಟಿಯಿಂದ ಕಣ್ಮರೆಯಾಗಿವೆ.
ಅದಕ್ಕೆ ಕಾರಣವೆಂದರೆ, ಅವರು ಸಾಹಿಬಾಬಾದ್‌ನಿಂದ ನೊಯ್ಡಾ ವಿಧಾನಸಭಾ ಕ್ಷೇತ್ರಕ್ಕೆ ಮನೆಯನ್ನು ಸ್ಥಳಾಂತರಿಸಿರುವುದು.
ಇದು ಎಸ್‌ಐಆರ್ ಪ್ರಕ್ರಿಯೆ ತಂದಿಟ್ಟಿರುವ ಅವಾಂತರ.
ಈ ನಡುವೆ, ಎಎಪಿ ನಾಯಕ ಸಂಜಯ್ ಸಿಂಗ್ ಒಂದು ಅಂಶದ ಬಗ್ಗೆ ಗಮನ ಸೆಳೆದಿದ್ದಾರೆ.
ಉತ್ತರ ಪ್ರದೇಶ ರಾಜ್ಯ ಚುನಾವಣಾ ಆಯೋಗ ಡಿಸೆಂಬರ್‌ನಲ್ಲಿ ಪಂಚಾಯತ್ ಚುನಾವಣೆಗೆ ಬಿಡುಗಡೆ ಮಾಡಿರುವ ಪಟ್ಟಿಯಂತೆ ಮತದಾರರ ಸಂಖ್ಯೆ 12.7 ಕೋಟಿ. ಅಂದರೆ ಇವರು ಗ್ರಾಮೀಣ ಮತದಾರರು. ಆದರೆ ಈಗ ಬಿಡುಗಡೆಯಾದ ಪಟ್ಟಿ ಗ್ರಾಮೀಣ ಮತ್ತು ನಗರ ಎರಡೂ ಸೇರಿ ಒಟ್ಟು 12.55 ಕೋಟಿ ಮತದಾರರನ್ನು ತೋರಿಸುತ್ತದೆ.
ಅಂದರೆ, ಈಗಿನ ಒಟ್ಟು ಮತದಾರರ ಸಂಖ್ಯೆ ಗ್ರಾಮೀಣ ಮತದಾರರ ಸಂಖ್ಯೆಗಿಂತ ಕಡಿಮೆಯಾಗಿದೆ.
ಇದನ್ನು ದೊಡ್ಡ ತಮಾಷೆ ಎಂದು ಸಂಜಯ್ ಸಿಂಗ್ ಕರೆಯುತ್ತಾರೆ. ಸುಮಾರು 4 ಕೋಟಿ ನಗರ ಮತದಾರರು ಎಲ್ಲಿಗೆ ಹೋದರು? ಎಂಬುದು ಅವರ ಪ್ರಶ್ನೆ.
‘‘ತಮ್ಮ ಮತಗಳನ್ನು ರದ್ದುಮಾಡಿ ಎಂದು ಯಾದವರು, ಮುಸ್ಲಿಮರು, ಹಿಂದುಳಿದ ಜಾತಿಗಳು ಮತ್ತು ದಲಿತರು ಹೇಳಿರಬೇಕು’’ ಎಂದು ಸಂಜಯ್ ಸಿಂಗ್ ವ್ಯಂಗ್ಯವಾಡಿದ್ದಾರೆ.
ಈಗಾಗಲೇ ಗಮನಿಸಿದಂತೆ, ಕಾಂಗ್ರೆಸ್‌ನ ಪ್ರಮುಖ ನಾಯಕ ಸಪ್ಪಲ್ ಕುಟುಂಬದವರ ಹೆಸರೇ ಮನೆ ಸ್ಥಳಾಂತರಿಸಿದ ಕಾರಣಕ್ಕೆ ಪಟ್ಟಿಯಿಂದ ಇಲ್ಲವಾಗಿದೆ ಎಂದರೆ, ಇನ್ನು ಜನಸಾಮಾನ್ಯರ ಕಥೆ ಏನಾಗಬಹುದು ಎಂಬ ಪ್ರಶ್ನೆ ಸಹಜ.
ಚುನಾವಣಾ ಆಯೋಗವೇ ಕೊಡುವ ಮಾಹಿತಿಯ ಪ್ರಕಾರ, ದೇಶಾದ್ಯಂತ ಸುಮಾರು 4.64 ಕೋಟಿ ಜನರು ಸ್ಥಳಾಂತರಗೊಂಡಿದ್ದಾರೆ.
ತಮ್ಮ ಕುಟುಂಬಕ್ಕಿಂತ ಹೆಚ್ಚಾಗಿ, ಇವರೆಲ್ಲರ ಕಥೆಯೇನಿರಬಹುದು ಎಂದು ಸಪ್ಪಲ್ ಕಳವಳ ವ್ಯಕ್ತಪಡಿಸುತ್ತಾರೆ.
ಹೀಗೆ ಸ್ಥಳಾಂತರವಾದವರ ಹೆಸರನ್ನು ಹಳೆಯ ಸ್ಥಳದಿಂದ ಅಳಿಸಲಾಗುತ್ತದೆ ಮತ್ತು ಹೊಸ ಸ್ಥಳದಲ್ಲಿ ಸೇರಿಸಲಾಗುತ್ತಿಲ್ಲ. ಅವರು ಮತ್ತೆ ಹೊಸದಾಗಿ ಮತದಾರರೆಂದು ನೋಂದಾಯಿಸಿಕೊಳ್ಳಬೇಕಾಗುತ್ತದೆ. ಇದು ದೊಡ್ಡ ಸಮಸ್ಯೆ.
ಈಗಿನ ಸಂದರ್ಭ ನೋಡುವುದಾದರೆ, ಚುನಾವಣಾ ಆಯೋಗ ಉತ್ತರ ಪ್ರದೇಶದ 1.4 ಕೋಟಿ ಜನರಿಗೆ ಮ್ಯಾಪಿಂಗ್ ಮಾಡದ ಕಾರಣ ನೋಟಿಸ್ ನೀಡಿದೆ.
ಅಂದರೆ ಅವರು 2003ರ ಪಟ್ಟಿಯಲ್ಲಿ ತಮ್ಮ ಹೆಸರಿತ್ತು ಎನ್ನಲು ಸಾಧ್ಯವಿಲ್ಲ ಮತ್ತು ಎಸ್‌ಐಆರ್ ನಡೆದಾಗೆಲ್ಲ, ಜೀವನದುದ್ದಕ್ಕೂ ಇದೇ ಬಿಕ್ಕಟ್ಟನ್ನು ಎದುರಿಸಬೇಕಾಗುತ್ತದೆ.
ಪ್ರತೀ ಬಾರಿಯೂ ಪೌರತ್ವ ಮತ್ತು ಮತದಾನದ ಹಕ್ಕನ್ನು ಸಾಬೀತುಪಡಿಸಬೇಕಾದ ಬಿಕ್ಕಟ್ಟನ್ನು ಸೃಷ್ಟಿಸಲಾಗಿದೆ.
ಫಾರಂ 6ನ್ನು ಭರ್ತಿ ಮಾಡಿದರೆ ಹೆಸರುಗಳನ್ನು ಪುನಃ ಸೇರ್ಪಡೆ ಮಾಡಲಾಗುತ್ತದೆ ಎಂದು ಸಪ್ಪಲ್ ಅವರಿಗೆ ಸ್ಪಷ್ಟನೆ ಕೊಡಲಾಗಿದೆ.
ಆದರೆ, ಪ್ರಶ್ನೆ, ಎಲ್ಲಾ 4.64 ಕೋಟಿ ಜನರ ವಿಷಯದಲ್ಲೂ ಇದೇ ಆಗಿದೆ.
ಫಾರಂ 6 ಅನ್ನು ಭರ್ತಿ ಮಾಡಬೇಕೆಂದು ಎಷ್ಟು ಜನರಿಗೆ ತಿಳಿಯುತ್ತದೆ?
ಈಗಿನವರೆಗೆ, ಯಾರಾದರೂ ಮನೆ ಬದಲಾಯಿಸಿದರೆ ಅವರು ಫಾರಂ 8 ಅನ್ನು ಭರ್ತಿ ಮಾಡಬೇಕಿತ್ತು. ಅದನ್ನು ಚುನಾವಣಾ ಆಯೋಗ ಪರಿಶೀಲನೆಯ ನಂತರ ಸ್ವೀಕರಿಸುತ್ತದೆ. ಆದರೆ ಅದನ್ನು ಎಸ್‌ಐಆರ್‌ನಲ್ಲಿ ಏಕೆ ನಿಲ್ಲಿಸಲಾಗಿದೆ ಎಂಬ ಪ್ರಶ್ನೆಯನ್ನು ಸಪ್ಪಲ್ ಎತ್ತಿದ್ದಾರೆ.
ವರ್ಷಗಳಿಂದ ಜಾರಿಯಲ್ಲಿದ್ದ ವ್ಯವಸ್ಥೆಯನ್ನು ನಿಲ್ಲಿಸುವ ಮೂಲಕ, 4 ಕೋಟಿಗೂ ಹೆಚ್ಚು ಜನರನ್ನು ಗೊಂದಲದಲ್ಲಿ ಕೆಡವಲಾಗಿದೆ.
ಇಡೀ ಚುನಾವಣಾ ಆಯೋಗದ ವ್ಯವಸ್ಥೆಯೇ ರಾಜಿ ಮಾಡಿಕೊಂಡಂತೆ ಕಾಣುತ್ತಿರುವ ಪರಿಸ್ಥಿತಿ ಏಕೆ ಉಂಟಾಗಿದೆ ಎಂಬುದು ಪ್ರಶ್ನೆ.
ಕೆಲ ಸಮಯದಿಂದ, ಪರಿಷ್ಕರಣೆಗಳು ವರ್ಷಕ್ಕೆ ನಾಲ್ಕು ಬಾರಿ ನಡೆಯುತ್ತಿವೆ. ಅದನ್ನು ಸಾರಾಂಶ ಪರಿಷ್ಕರಣೆಗಳು ಎಂದು ಕರೆಯಲಾಗುತ್ತದೆ. ಯಾರೂ ಅದನ್ನು ಎಂದಿಗೂ ಆಕ್ಷೇಪಿಸಲಿಲ್ಲ.
ಆಕ್ಷೇಪಣೆಗಳು ಎರಡು ಕಾರಣಗಳಿಗಾಗಿ ಉದ್ಭವಿಸುತ್ತಿವೆ.
ಮೊದಲನೆಯದಾಗಿ, ಇದನ್ನು ಏಕೆ ಇಷ್ಟು ತರಾತುರಿಯಲ್ಲಿ ಮಾಡಲಾಗುತ್ತಿದೆ ಎನ್ನುವುದು. ಎರಡನೆಯದಾಗಿ, ಅದನ್ನು ಪೌರತ್ವಕ್ಕೆ ಲಿಂಕ್ ಮಾಡಿರುವುದು.
ಪ್ರಶ್ನೆ ಏನೆಂದರೆ, ಚುನಾವಣಾ ಆಯೋಗ ಇಡೀ ದೇಶದ ಪೌರತ್ವವನ್ನು ಏಕೆ ತನಿಖೆ ಮಾಡಲು ಬಯಸುತ್ತದೆ ಎಂಬುದು.
ಅದಕ್ಕೆ ಈ ಸಾಂವಿಧಾನಿಕ ಹಕ್ಕಿಲ್ಲ, ಕಾನೂನೂ ಇಲ್ಲ.
ದೇಶದ ಎಲ್ಲಾ ನಾಗರಿಕರನ್ನೂ ಅಪರಾಧಿಗಳೆಂಬಂತೆ ನೋಡುತ್ತ, ಅವರಿಗೆ ತಮ್ಮ ಪೌರತ್ವ ಸಾಬೀತುಪಡಿಸುವ ಜವಾಬ್ದಾರಿಯನ್ನು ಏಕೆ ಹೊರಿಸಲಾಗುತ್ತಿದೆ ಎಂಬುದು ಬಗೆಹರಿಯದ ಪ್ರಶ್ನೆಯಾಗಿದೆ.
ಗೃಹ ಸಚಿವಾಲಯ ಅದಕ್ಕಾಗಿ ಒಂದು ಪ್ರಕ್ರಿಯೆಯನ್ನು ಹೊಂದಿದೆ.
ನೀವು ನಾಗರಿಕರಲ್ಲ ಎಂದಾದರೆ, ಮೇಲ್ಮನವಿ ಸಲ್ಲಿಸುವ ಪ್ರಕ್ರಿಯೆಯೂ ಇದೆ.ಆದರೆ ಚುನಾವಣಾ ಆಯೋಗ ಅದನ್ನೆಲ್ಲಾ ಬದಿಗಿಟ್ಟಿದೆ. ಅದು ರಾಷ್ಟ್ರವ್ಯಾಪಿ ಪೌರತ್ವ ಪರಿಶೀಲನೆ ನಡೆಸಲು ಬಯಸುತ್ತದೆ.
ಚುನಾವಣಾ ಆಯೋಗದ ಕೆಲಸವೆಂದರೆ ನಾಗರಿಕರಿಗೆ ಮಾತ್ರ ಮತದಾನದ ಹಕ್ಕು ಇದೆ ಎಂದು ಖಚಿತಪಡಿಸಿಕೊಳ್ಳುವುದು.
ಇದಕ್ಕಾಗಿ, ಆರಂಭದಿಂದಲೂ ಒಂದು ಸರಳ ವ್ಯವಸ್ಥೆಯಿದೆ.
ಹೊಸ ಮತದಾರರು ದಾಖಲೆಗಳನ್ನು ಸಲ್ಲಿಸುತ್ತಿದ್ದರು. ಚುನಾವಣಾ ಆಯೋಗ ಅವುಗಳನ್ನು ಪರಿಶೀಲಿಸಿ, ಸರಿಯೋ ಅಲ್ಲವೋ ಎಂದು ನಿರ್ಧರಿಸುತ್ತದೆ.
ಆದರೆ ಈಗ ಅದು ಇಡೀ ದೇಶದ ಎಲ್ಲರ ಪೌರತ್ವ ಪರಿಶೀಲನೆ ನಡೆಸುವ ಬಗ್ಗೆ ಹೇಳುತ್ತಿದೆ.
ಚುನಾವಣಾ ಆಯೋಗ ಯಾರದೇ ಪೌರತ್ವ ಕಸಿದುಕೊಳ್ಳುವುದು ತನ್ನ ಗುರಿಯಲ್ಲ ಎಂದು ಸುಪ್ರೀಂ ಕೋರ್ಟ್‌ಗೆ ಹೇಳಿದೆ. ನಾವು ಇದನ್ನು ಮತದಾನದ ಅಧಿಕಾರದ ಮೂಲಕ ಮಾತ್ರ ಮಾಡುತ್ತಿದ್ದೇವೆ ಎನ್ನುತ್ತಿದೆ.
ಆದರೆ ಈ ದೇಶದ ವಾತಾವರಣವನ್ನು ಗಮನಿಸಿದರೆ, ಯಾರದೇ ಪೌರತ್ವವನ್ನು ಪ್ರಶ್ನಿಸಿದರೆ, ನಾಳೆ ಇನ್ನೊಂದು ಸಂಸ್ಥೆ ಅಥವಾ ಮೂರನೇ ಸಂಸ್ಥೆ ಇದನ್ನು ಕೈಗೆತ್ತಿಕೊಂಡು ವಿಚಾರಣೆಗೆ ಒಳಪಡಿಸುವುದಿಲ್ಲ ಎಂಬುದಕ್ಕೆ ಏನು ಗ್ಯಾರಂಟಿ?
ಸಪ್ಪಲ್ ಎತ್ತುವ ಈ ಪ್ರಶ್ನೆ ನಿಜಕ್ಕೂ ಗಂಭೀರವಾದುದಾಗಿದೆ.







