ಮದ್ದೂರು ಕೋಮು ಸಂಘರ್ಷಕ್ಕೆ ಹೊಣೆ ಯಾರು?

ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ಗಣಪತಿ ವಿಸರ್ಜನೆ ವೇಳೆ ನಡೆದ ಕೋಮು ಸಂಘರ್ಷಕ್ಕೆ ಸಂಬಂಧಿಸಿದಂತೆ ತನಿಖೆ ನಡೆಯುತ್ತಿದೆ. ಎಲ್ಲ ಘಟನೆಗಳಂತೆ ಯಾವತ್ತೋ ಒಂದು ದಿನ ತನಿಖಾ ವರದಿ ಬರುತ್ತದೆ. ಅಷ್ಟೊತ್ತಿಗೆ ಜನರ ನೆನಪಿನಿಂದ ಘಟನೆ ಮಾಯವಾಗಿರುತ್ತದೆ. ಮುಂದೊಂದು ದಿನ ಇಲ್ಲೋ ಅಥವಾ ಮತ್ತೆಲ್ಲೋ ಇಂಥದ್ದೇ ಘಟನೆ ನಡೆಯುತ್ತದೆ. ಇದು ನಮ್ಮ ಪೊಲೀಸ್ ಮತ್ತು ತನಿಖಾ ವ್ಯವಸ್ಥೆ. ಇದೇ ಕಾರಣಕ್ಕೆ ಮದ್ದೂರಿನಲ್ಲಿ ಕೋಮು ಸಂಘರ್ಷ ಉಂಟಾಗಿದ್ದು.
ಮದ್ದೂರಿನ ನೆರೆಯ ನಾಗಮಂಗಲದಲ್ಲಿ ಕಳೆದ ವರ್ಷ ದುರಂತ ಸಂಭವಿಸಿದಾಗಲೇ ಎಚ್ಚೆತ್ತುಕೊಂಡಿದ್ದರೆ ಮದ್ದೂರಿನಲ್ಲಿ ಕೋಮು ದಳ್ಳುರಿ ಕಾಣಿಸಿಕೊಳ್ಳುತ್ತಿರಲಿಲ್ಲ. ನಾಗಮಂಗಲ ಕೋಮು ಸಂಘರ್ಷಕ್ಕೆ ಪೊಲೀಸರ ವೈಫಲ್ಯವೇ ಕಾರಣ ಎನ್ನುವುದನ್ನು ತನಿಖಾ ವರದಿ ಬಹಳ ಸ್ಪಷ್ಟ ವಾಗಿ ಹೇಳಿದೆ. ಮಂಡ್ಯ ಜಿಲ್ಲಾ ಪೊಲೀಸರು ಸೂಕ್ತ ಕ್ರಮ ಕೈಗೊಂಡಿರಲಿಲ್ಲ ಎಂದು ತಿಳಿದು ಬಂದಿದೆ.
ಕೋಮು ಸಂಘರ್ಷವಾಗಿರುವ ನಾಗಮಂಗಲ ತಾಲೂಕಿನ ಬದ್ರಿಕೊಪ್ಪಲು ಗ್ರಾಮದಲ್ಲಿ ಪ್ರತಿ ವರ್ಷವೂ ಗಣಪತಿ ಹಬ್ಬದ ವೇಳೆ ಗಂಭೀರ ಪರಿಸ್ಥಿತಿ ನಿರ್ಮಾಣವಾಗುತ್ತಿತ್ತು. ಇದು ಸೂಕ್ಷ್ಮ ಪ್ರದೇಶ ಎನ್ನುವ ಕಾರಣಕ್ಕಾಗಿಯೇ ಕೆಎಸ್‌ಆರ್‌ಪಿ ತುಕಡಿಯನ್ನು ಕರೆಸಲಾಗಿತ್ತು. ಕಾಟಾಚಾರಕ್ಕೆ ಶಾಂತಿ ಸಭೆ ನಡೆಸಲಾಗಿದೆ. ಆದರೂ ಎರಡೂ ಸಮುದಾಯದ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡಿರಲಿಲ್ಲ. ಅಲ್ಲದೆ ನಾಗಮಂಗಲ ಉಪ ವಿಭಾಗದ ಡಿವೈಎಸ್ಪಿ ಡಾ.ಸುಮಿತ್, ನಾಗಮಂಗಲ ಠಾಣೆ ಪೊಲೀಸ್ ಇನ್‌ಸ್ಪೆಕ್ಟರ್ ಅಶೋಕ್ ಕುಮಾರ್ ಸ್ಥಳದಲ್ಲಿ ಇರಲಿಲ್ಲ. ಅದೂ ಅಲ್ಲದೆ ಸ್ಥಳದಲ್ಲೇ ಇದ್ದ ಕೆಎಸ್‌ಆರ್‌ಪಿ ತುಕಡಿಯನ್ನು ಗಣಪತಿ ಮೆರವಣಿಗೆ ಬರುವ ವೇಳೆಯೇ ಬೇರೆಡೆಗೆ ಸ್ಥಳಾಂತರ ಮಾಡಿ ತಡೆಯಬಹುದಾಗಿದ್ದ ಘಟನೆಯನ್ನು ನಡೆಯುವಂತೆ ಮಾಡಿದ್ದಾರೆ ಎನ್ನಲಾಗಿದೆ.
ಸ್ಥಳದಲ್ಲಿ ಪೊಲೀಸರು ಇಲ್ಲದ ಕಾರಣಕ್ಕಾಗಿ ಗಣೇಶ ಮೆರವಣಿಗೆಗೆ ಅನುಮತಿ ಪಡೆದಿದ್ದ ರಸ್ತೆಯನ್ನು ಬಿಟ್ಟು ಮಸೀದಿ ಬಳಿ ಹೋಗಿದೆ. ಅಲ್ಲಿ ಸುಮ್ಮನಿದ್ದ ಜನರನ್ನು ಪ್ರಚೋದಿಸಲಾಗಿದೆ. ಆಗ ಗಲಾಟೆಯಾಗಿದೆ. ಎರಡೂ ಸಮುದಾಯದ ಅಂಗಡಿ-ಮುಂಗಟ್ಟುಗಳಿಗೆ ಬೆಂಕಿ ಹಾಕಲಾಗಿದೆ. ಇದರಿಂದ ಸುಮಾರು ಮೂರೂವರೆ ಕೋಟಿ ರೂಪಾಯಿಗಳಷ್ಟು ನಷ್ಟವಾಗಿದೆ ಎನ್ನುವ ಮಾಹಿತಿಗಳು ಪೊಲೀಸರ ತನಿಖೆ ವೇಳೆ ತಿಳಿದು ಬಂದಿದೆ.
ಕಳೆದ ವರ್ಷದ ನಾಗಮಂಗಲ ಕೋಮುಸಂಘರ್ಷಕ್ಕೆ ಸಂಬಂಧಿಸಿದಂತೆ ಮೇಲ್ನೋಟಕ್ಕೆ ಡಾ.ಸುಮಿತ್ ಮತ್ತು ಅಶೋಕ್ ಕುಮಾರ್ ಅವರು ಕರ್ತವ್ಯ ಲೋಪ ಮಾಡಿದ್ದಾರೆ. ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮತ್ತು ದಕ್ಷಿಣ ವಲಯ ಡೆಪ್ಯುಟಿ ಇನ್‌ಸ್ಪೆಕ್ಟರ್ ಆಫ್ ಜನರಲ್ ಅವರಿಗೆ 2024ರ ಸೆಪ್ಟಂಬರ್ 14ರಂದು ಮಂಡ್ಯ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಪ್ರಾಥಮಿಕ ವರದಿ ಸಲ್ಲಿಸಿದ್ದಾರೆ(ವರದಿಯ ಪ್ರತಿ ವಾರ್ತಾಭಾರತಿ ಬಳಿ ಇದೆ). ಆದರೂ ಪೊಲೀಸ್ ಇಲಾಖೆ ಇಂತಹ ಗಂಭೀರ ಸ್ವರೂಪದ ಕರ್ತವ್ಯ ಲೋಪ ಎಸಗಿದ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಸುಮ್ಮನಾಗಿದೆ.
ಘಟನೆ ನಡೆದ ದಿನ ತಾನು ಹಿರಿಯ ಅಧಿಕಾರಿಗಳಿಗೂ ಮಾಹಿತಿ ನೀಡದೆ ಅನಧಿಕೃತವಾಗಿ ರಜೆ ತೆಗೆದುಕೊಂಡು ಜಿಲ್ಲೆಯಿಂದ ಹೊರಗೆ ಹೋಗಿದ್ದೆ ಎಂದು ಡಾ.ಸುಮಿತ್ ಮತ್ತು ತಾನು ಕೆಎಸ್‌ಆರ್‌ಪಿ ತುಕಡಿಯನ್ನು ಸ್ಥಳಾಂತರ ಮಾಡಿದೆ ಎಂದು ಅಶೋಕ್ ಕುಮಾರ್ ತನಿಖೆಯಲ್ಲಿ ತಪ್ಪೊಪ್ಪಿಕೊಂಡಿದ್ದಾರೆ. ಆದರೂ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳದೇ ಇರುವುದು ಅನುಮಾನಗಳಿಗೆ ಎಡೆ ಮಾಡಿಕೊಡುತ್ತದೆ. ಅಷ್ಟೇ ಅಲ್ಲದೆ, ಒಂದೊಮ್ಮೆ ನಾಗಮಂಗಲ ಘಟನೆಯಲ್ಲಿ ಜಿಲ್ಲಾ ಪೊಲೀಸ್ ವ್ಯವಸ್ಥೆ ಸೂಕ್ತ ಕ್ರಮ ಕೈಗೊಂಡಿದ್ದರೆ ಮದ್ದೂರಿನಲ್ಲಿ ಕೋಮು ಸಂಘರ್ಷ ನಡೆಯುತ್ತಿರಲಿಲ್ಲ ಎಂಬ ಅಭಿಪ್ರಾಯವೂ ಇದೆ.
ಜಿಲ್ಲಾ ಪೊಲೀಸ್ ವ್ಯವಸ್ಥೆ ಮಾತ್ರವಲ್ಲ. ರಾಜ್ಯ ಸರಕಾರವೂ ಇಂತಹ ವಿಷಯಗಳಲ್ಲಿ ಪೊಲೀಸ್ ಹಾಗೂ ಸಂಬಂಧಪಟ್ಟ ಹಿರಿಯ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳದೆ ಕೇವಲ ಎಚ್ಚರಿಕೆ ನೀಡಿ ಅಥವಾ ವರ್ಗಾವಣೆ ಮಾಡಿ ಕೈ ತೊಳೆದುಕೊಂಡರೆ ಅಧಿಕಾರಿಗಳಲ್ಲಿ ಭಯ ಅಥವಾ ಉತ್ತರದಾಯಿತ್ವ ಮೂಡುವುದಿಲ್ಲ. ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಂಡರೆ ಮಾತ್ರ ಅಧಿಕಾರಿಗಳು ಎಚ್ಚೆತ್ತುಕೊಳ್ಳುತ್ತಾರೆ ಎನ್ನುವುದು ಗುಟ್ಟಿನ ವಿಷಯವಲ್ಲ. ಹಾಗಾಗಿ ಇದರಲ್ಲಿ ಸರಕಾರದ ಲೋಪವೂ ಎದ್ದು ಕಾಣಿಸುತ್ತದೆ.







