1,800 ರೂ. ಕೋಟಿ ಮೌಲ್ಯದ ಸರಕಾರಿ ಭೂಮಿ ಕೇವಲ ರೂ. 300 ಕೋಟಿಗೆ ಮಾರಾಟ!

ಈ ಹಗರಣ, ವ್ಯವಸ್ಥೆಯೇ ಕಪಟವಾಗಿರುವುದನ್ನು ತೋರಿಸುತ್ತದೆ. ಒಂದೆಡೆ ಸಾಮಾನ್ಯ ಜನರು ನಿಯಮಗಳು, ತೆರಿಗೆಗಳು ಮತ್ತು ಅಧಿಕಾರಶಾಹಿಯ ಬಲೆಯಲ್ಲಿ ಸಿಕ್ಕು ಹೈರಾಣಾಗಬೇಕಿರುವಾಗ, ದೊಡ್ಡ ಜನರು ಸರಕಾರಿ ಭೂಮಿಯನ್ನೂ ಬಿಡಿಗಾಸು ಕೊಟ್ಟು ಖರೀದಿಸಬಹುದಾದ ಕಪಟತನವನ್ನು ಇದು ತೋರಿಸುತ್ತಿದೆ.
ಫಡ್ನವೀಸ್ ತನಿಖೆಗೆ ಆದೇಶಿಸಿದ್ದು, ತನಿಖೆ ಔಪಚಾರಿಕತೆ ಮೀರಿ ಮತ್ತೇನನ್ನಾದರೂ ಸಾಧಿಸುವುದೇ ಎಂಬ ಪ್ರಶ್ನೆ ಉಳಿಯುತ್ತದೆ.
ಪುಣೆ ಭೂ ಹಗರಣ ದೊಡ್ಡ ಬಿರುಗಾಳಿಯನ್ನೇ ಎಬ್ಬಿಸಿದೆ.
ಡಿಸಿಎಂ ಅಜಿತ್ ಪವಾರ್ ಪುತ್ರ ಪಾರ್ಥ ಪವಾರ್‌ಗೆ ಸಂಬಂಧಿಸಿದ ಕಂಪೆನಿಯ ಜೊತೆ ನಂಟು ಹೊಂದಿರುವ ವ್ಯವಹಾರ ಇದಾಗಿದೆ. ಅಜಿತ್ ಪವಾರ್ ಇದರಲ್ಲಿ ತಮ್ಮ ಪಾತ್ರವಿರುವುದನ್ನು ನಿರಾಕರಿಸಿದ್ದಾರೆ.
ಪಾರ್ಥ ಪವಾರ್ ಮತ್ತು ಅವರ ಸಂಬಂಧಿ ದಿಗ್ವಿಜಯ್‌ಪಾಟೀಲ್ 40 ಎಕರೆ ಭೂಮಿಯನ್ನು 300 ಕೋಟಿ ರೂ. ಗೆ ಖರೀದಿಸಿದ್ದರು. ಈ ಭೂಮಿ ದಲಿತ ಭೂರಹಿತ ರೈತರಿಗಾಗಿ ಮೀಸಲಾಗಿತ್ತು ಎನ್ನಲಾಗಿದೆ.
ಕೋರೆಗಾಂವ್ ಪಾರ್ಕ್ ಬಳಿ, ಪುಣೆಯ ಮುಂಡ್ವಾ ಪ್ರದೇಶದಲ್ಲಿನ ಈ ಸರಕಾರಿ ಭೂಮಿಯ ಮಾರುಕಟ್ಟೆ ಮೌಲ್ಯ 1,800 ಕೋಟಿ ರೂ. ಎಂದು ಅಂದಾಜಿಸಲಾಗಿದೆ.
ಈ ಭೂಮಿಯನ್ನು ಪಾರ್ಥ ಪವಾರ್ ಪಾಲುದಾರಿಕೆಯ ಅಮೀಡಿಯಾ ಹೋಲ್ಡಿಂಗ್ಸ್ ಎಲ್‌ಎಲ್‌ಪಿ ಎಂಬ ಕಂಪೆನಿಗೆ ಕೇವಲ 300 ಕೋಟಿ ರೂ.ಗೆ ಮಾರಾಟ ಮಾಡಲಾಗಿದೆ ಎಂದು ವರದಿಯಾಗಿದೆ. ಹೀಗೆ ಪ್ರಭಾವಿಗಳಿಗೆ ಭೂಮಿ ಕೊಡುವಾಗ ಸರಕಾರದಿಂದಲೇ 1,500 ಕೋಟಿ ರೂ. ವಂಚನೆಯಾಗಿದೆ ಎಂದು ಹೇಳಲಾಗುತ್ತಿದೆ.
ಇಲ್ಲಿ ಇನ್ನೂ ಒಂದು ಗಮನಿಸಬೇಕಾದ ಸಂಗತಿಯಿದೆ.
ಈ 300 ಕೋಟಿ ರೂ. ವ್ಯವಹಾರಕ್ಕಾಗಿ ಪಾವತಿಸಿದ ಸ್ಟ್ಯಾಂಪ್ ಡ್ಯೂಟಿ ಬರೀ 500 ರೂ. ಕಾನೂನುಬದ್ಧವಾಗಿ ಇದು ರೂ. 15ರಿಂದ 20 ಕೋಟಿಯಾಗಿರಬೇಕಿತ್ತು.
ಸಾಧಾರಣ ಫ್ಲ್ಯಾಟ್‌ಗೆ ಸಾಮಾನ್ಯರು ಲಕ್ಷಗಟ್ಟಲೆ ಸುಂಕಗಳನ್ನು ಪಾವತಿಸುವಾಗ, ದೊಡ್ಡ ಜನರ ಕೋಟ್ಯಂತರ ವ್ಯವಹಾರಕ್ಕೆ ಕೇವಲ 500 ರೂ. ಸ್ಟ್ಯಾಂಪ್ ಡ್ಯೂಟಿ ಎಂಬುದೇ ವಿಚಿತ್ರವಾಗಿದೆ.
ತಹಶೀಲ್ದಾರ್ ಸೂರ್ಯಕಾಂತ್ ಯೆವ್ಲೆ ಮತ್ತು ಸಬ್ ರಿಜಿಸ್ಟ್ರಾರ್ ಆರ್.ಬಿ. ತರು ಅವರನ್ನು ಅಮಾನತುಗೊಳಿಸಲಾಗಿದೆ. ಸಬ್ ರಿಜಿಸ್ಟ್ರಾರ್ ಮತ್ತು ಪಾರ್ಥ್ ಪವಾರ್ ಅವರ ಪಾಲುದಾರ ದಿಗ್ವಿಜಯ್ ಪಾಟೀಲ್ ವಿರುದ್ಧ ಮಾತ್ರವಲ್ಲದೆ, ಮೂಲ ಮಾಲಕರಿಗೆ ಪವರ್ ಆಫ್ ಅಟಾರ್ನಿ ಹೊಂದಿರುವವರ ವಿರುದ್ಧವೂ ಎಫ್‌ಐಆರ್ ದಾಖಲಿಸಲಾಗಿದೆ.
ಆದರೆ ಪುಣೆ ಕಲೆಕ್ಟರ್ ಜಿತೇಂದ್ರ ದುಡಿ ಅವರ ಹೇಳಿಕೆ ಸ್ಫೋಟಕವಾಗಿದೆ. ಇದು ಸರಕಾರಿ ಭೂಮಿ ಎಂದು ಅವರು ಹೇಳಿದ್ದಾರೆ. ಮತ್ತದನ್ನು ಮಾರಾಟ ಮಾಡಲು ಸಾಧ್ಯವಿಲ್ಲ ಎಂದಿದ್ದಾರೆ.
ಕಲೆಕ್ಟರ್ ಹೇಳಿಕೆ ಸರಿಯಾಗಿದ್ದರೆ, 40 ಎಕರೆ ಸಾರ್ವಜನಿಕ ಭೂಮಿಯ ಸಂಪೂರ್ಣ ಕಳ್ಳತನವಾಗಿದೆ. ಇದನ್ನು ರಕ್ಷಿಸಬೇಕಿದ್ದ ಅಧಿಕಾರಿಗಳೇ ಇದಕ್ಕೆ ಅನುವು ಮಾಡಿಕೊಟ್ಟಿದ್ದಾರೆ.
ಕಲೆಕ್ಟರ್ ಪ್ರಕಾರ, ಕಂದಾಯ ಇಲಾಖೆಗೆ ಈ ವಿಷಯವೇ ಗೊತ್ತಿಲ್ಲ. ಇದು ಇನ್ನೂ ದೊಡ್ಡ ಅನುಮಾನವನ್ನು ಹುಟ್ಟುಹಾಕುತ್ತದೆ. ಕಂದಾಯ ಇಲಾಖೆಗೆ ತಿಳಿಯದೆ 40 ಎಕರೆ ಸರಕಾರಿ ಭೂಮಿಯನ್ನು ಸಹಿ ಮಾಡಿ, ನೋಂದಾಯಿಸಿ ಮಾರಾಟ ಮಾಡಲು ಸಾಧ್ಯವಾದರೆ ಸರಕಾರ ಏನು ಮಾಡುತ್ತಿದೆ?
ಇಡೀ ವ್ಯವಹಾರದಲ್ಲಿ ಮುಖ್ಯ ಹೆಸರು ಪಾರ್ಥ ಪವಾರ್.
2019ರ ಮಾವಲ್ ಲೋಕಸಭಾ ಚುನಾವಣೆಯಲ್ಲಿನ ಸೋಲಿನ ಬಳಿಕ ರಾಜಕೀಯದಿಂದ ವ್ಯವಹಾರಕ್ಕೆ ಇಳಿದವರು ಅವರು. ಈ ಹಿಂದೆಯೂ ಅಕ್ರಮಗಳ ಆರೋಪಗಳು ಅವರ ವಿರುದ್ಧ ಕೇಳಿಬಂದದ್ದಿದೆ.
ರೂ. 25,000 ಕೋಟಿಯ ಮಹಾರಾಷ್ಟ್ರ ರಾಜ್ಯ ಸಹಕಾರಿ ಬ್ಯಾಂಕ್ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ಮತ್ತು ಈ.ಡಿ. ಅವರನ್ನು ತನಿಖೆಗೆ ಒಳಪಡಿಸಿತ್ತು.
ಆದರೆ ಈ ಭೂ ವ್ಯವಹಾರವಂತೂ ಸಣ್ಣದಲ್ಲ.
ಇನ್ನು ಅವರ ತಂದೆ, ಡಿಸಿಎಂ ಅಜಿತ್ ಪವಾರ್ ತಾವು ಈ ವಿಷಯದಲ್ಲಿ ನೇರವಾಗಿ ಸಂಪರ್ಕ ಹೊಂದಿಲ್ಲ ಎಂದಿದ್ದಾರೆ. ‘‘ನಾನು ಇದರ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯುತ್ತಿದ್ದೇನೆ’’ ಎಂದು ಜಾರಿಕೊಂಡಿದ್ದಾರೆ.
ಆದರೆ ಅವರ ಮಾತನ್ನು ನಂಬಲು ಹೇಗೆ ಸಾಧ್ಯ?
ರಾಜ್ಯದ ಡಿಸಿಎಂಗೆ ತನ್ನ ಮಗನ ಕಂಪೆನಿ ಇಷ್ಟು ದೊಡ್ಡ ಭೂ ಹಗರಣದಲ್ಲಿ ಭಾಗಿಯಾಗಿದೆ ಎಂಬುದೇ ಗೊತ್ತಿಲ್ಲವೆ?
ಸ್ಟ್ಯಾಂಪ್ ಡ್ಯೂಟಿಯಲ್ಲಿ ಶೇ. 99.99 ರಿಯಾಯಿತಿ ಹೇಗೆ ಸಿಕ್ಕಿತು? ಒಬ್ಬ ನಾಯಕ ತನ್ನ ಕುಟುಂಬದ ಹೆಸರಿನಲ್ಲಿ ನಡೆಯುತ್ತಿರುವ ಬಹುಕೋಟಿ ಹಗರಣದ ಬಗ್ಗೆ ತಿಳಿದೇ ಇಲ್ಲ ಎನ್ನುವುದು ಎಷ್ಟು ಸಮರ್ಥನೀಯ?
ಇನ್ನು, ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಸರಕಾರದ ಪ್ರತಿಕ್ರಿಯೆ ಕೂಡ ಎಲ್ಲವನ್ನೂ ಅಡಗಿಸುವ ಹಾಗಿದೆ.
ಇದನ್ನು ಗಂಭೀರ ಪ್ರಕರಣ ಎಂದಿರುವ ಅವರು, ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಿಂದ ಉನ್ನತ ಮಟ್ಟದ ತನಿಖೆಗೆ ಆದೇಶಿಸಿದ್ದಾರೆ. ಎಂಟು ದಿನಗಳಲ್ಲಿ ವರದಿ ನೀಡುವಂತೆ ಸೂಚಿಸಿದ್ದಾರೆ.
ಆದರೆ ಇದೆಲ್ಲವೂ ಹೆಡ್‌ಲೈನ್‌ಗೆ ಸೀಮಿತವಾಗುವ ನಾಟಕ ಎಂಬುದು ಹೊಸತೇನೂ ಅಲ್ಲ. ಇಂಥ ಕ್ರಮದ ಮೂಲಕ ನ್ಯಾಯ ಸಿಗುವುದು ಅಷ್ಟರಲ್ಲೇ ಇದೆ.
ಫಡ್ನವೀಸ್ ಅವರಿಗೆ ಇದು ಇಕ್ಕಟ್ಟಿನ ಸ್ಥಿತಿಯೂ ಆಗಿದೆ.
ಫಡ್ನವಿಸ್ ಸರಕಾರದ ಸ್ಥಿರತೆಗೆ ಅಜಿತ್ ಪವಾರ್ ಅಗತ್ಯವಾಗಿದ್ದಾರೆ. ಹಾಗಿರುವ ಅಂಥವರ ಮಗನ ವಿರುದ್ಧ ಯಾವುದೇ ಕಠಿಣ ತನಿಖೆ ನಡೆಯುವುದು ಸಾಧ್ಯವೇ?
ಈಗಾಗಲೇ ವರದಿಗಳು ಹೇಳಿರುವಂತೆ, ಈ ಹಗರಣದಲ್ಲಿ ಭಾಗಿಯಾಗಿರುವವರ ವಿರುದ್ಧ ಪೊಲೀಸರು ಎಫ್‌ಐಆರ್ ಹಾಕಿದ್ದರೂ, ವಿವಾದಿತ ಭೂಮಿಯ ಶೇ. 99 ಮಾಲಕರಾಗಿರುವ ಪಾರ್ಥ ಪವಾರ್ ಹೆಸರು ಸೇರಿಸಿಲ್ಲ.
ಆದರೆ ಭೂಮಿ ಖರೀದಿಸಿದ ಅಮೇಡಿಯಾ ಕಂಪೆನಿಯಲ್ಲಿ ಕೇವಲ ಶೇ. 1ರಷ್ಟು ಮಾಲಕತ್ವ ಹೊಂದಿರುವ ದಿಗ್ವಿಜಯ್ ಪಾಟೀಲ್ ಅವರನ್ನು ಎಫ್‌ಐಆರ್‌ನಲ್ಲಿ ಹೆಸರಿಸಲಾಗಿದೆ.
ಇದು ನಿಜವಾದ ಶುದ್ಧೀಕರಣವಾಗುತ್ತದೆಯೇ ಅಥವಾ ಕಡೆಯಲ್ಲಿ ಕೆಲವು ಕೆಳ ಹಂತದ ಅಧಿಕಾರಿಗಳಿಗೆ ಮಾತ್ರ ಶಿಕ್ಷೆಯಾಗಿ, ಪ್ರಭಾವಿಗಳನ್ನು ರಕ್ಷಿಸಲಾಗುತ್ತದೆಯೇ?
ಅಜಿತ್ ಪವಾರ್ ಅವರ ಸೋದರಸಂಬಂಧಿ ಸುಪ್ರಿಯಾ ಸುಳೆ ಅವರ ಪ್ರತಿಕ್ರಿಯೆ ಮತ್ತೊಂದು ಆಯಾಮವನ್ನು ತೋರಿಸುತ್ತದೆ.
ಅದು ಸರಕಾರಿ ಭೂಮಿಯಾಗಿದ್ದರೆ, ಮಾರಾಟ ಹೇಗೆ ನಡೆಯಿತು? ತಹಶೀಲ್ದಾರ್‌ಗೆ ತಿಳಿದಿರಲಿಲ್ಲವೆ? ಸರಕಾರವನ್ನು ಯಾರು ನಡೆಸುತ್ತಿದ್ದಾರೆ ಎಂದು ಅವರು ಕೇಳಿದ್ದಾರೆ.
ಇದು ಅವರ ಸೋದರಸಂಬಂಧಿ ಭಾಗವಾಗಿರುವ ಮಹಾರಾಷ್ಟ್ರ ಬಿಜೆಪಿ ಸರಕಾರವನ್ನೇ ಗುರಿಯಾಗಿರಿಸಿಕೊಂಡು ನಡೆಸಲಾದ ವಾಗ್ದಾಳಿ. ಆಡಳಿತಾತ್ಮಕ ಅವ್ಯವಸ್ಥೆ ಮತ್ತು ಆಂತರಿಕ ವಿರೋಧಾಭಾಸಗಳನ್ನು ಜಾಣತನದಿಂದ ಅವರು ಎತ್ತಿ ತೋರಿಸುತ್ತಾರೆ.
ಈ ಹಗರಣ, ವ್ಯವಸ್ಥೆಯೇ ಕಪಟವಾಗಿರುವುದನ್ನು ತೋರಿಸುತ್ತದೆ. ಒಂದೆಡೆ ಸಾಮಾನ್ಯ ಜನರು ನಿಯಮಗಳು, ತೆರಿಗೆಗಳು ಮತ್ತು ಅಧಿಕಾರಶಾಹಿಯ ಬಲೆಯಲ್ಲಿ ಸಿಕ್ಕು ಹೈರಾಣಾಗಬೇಕಿರುವಾಗ, ದೊಡ್ಡ ಜನರು ಸರಕಾರಿ ಭೂಮಿಯನ್ನೂ ಬಿಡಿಗಾಸು ಕೊಟ್ಟು ಖರೀದಿಸಬಹುದಾದ ಕಪಟತನವನ್ನು ಇದು ತೋರಿಸುತ್ತಿದೆ.
ಫಡ್ನವೀಸ್ ತನಿಖೆಗೆ ಆದೇಶಿಸಿದ್ದು, ತನಿಖೆ ಔಪಚಾರಿಕತೆ ಮೀರಿ ಮತ್ತೇನನ್ನಾದರೂ ಸಾಧಿಸುವುದೇ ಎಂಬ ಪ್ರಶ್ನೆ ಉಳಿಯುತ್ತದೆ.
ಭ್ರಷ್ಟಾಚಾರದ ಬಗ್ಗೆ ಪ್ರಧಾನಿ ಮೋದಿ ಹಾಗೂ ಅವರ ಪಕ್ಷದ ದ್ವಂದ್ವ ಎಲ್ಲ ಎಲ್ಲೆಗಳನ್ನು ಮೀರಿದೆ.
ಪ್ರಧಾನಿ ಮೋದಿಯವರ ‘‘ನಾ ಖಾವೂಂಗ ನಾ ಖಾನೇ ದೂಂಗ’’ ಎಂಬುದೆಲ್ಲ ಈಗ ಕರ್ಕಶ ಹಾರ್ನ್‌ನಂತೆ ಕೇಳಿಸುತ್ತದೆ. ಅದಕ್ಕೆ ಯಾವ ಅರ್ಥವೂ ಉಳಿದಿಲ್ಲ
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಈ ಹಗರಣವನ್ನು ಮತಗಳ್ಳತನದ ನಂತರ ಈಗ ಪುಣೆಯಲ್ಲಿ ಭೂಗಳ್ಳತನ ಎಂದು ಟೀಕಿಸಿದ್ದಾರೆ. ಅಲ್ಲದೆ ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರ ಮೌನವನ್ನು ರಾಹುಲ್ ಪ್ರಶ್ನಿಸಿದ್ದಾರೆ.
ಸ್ಟ್ಯಾಂಪ್ ಡ್ಯೂಟಿ ಮನ್ನಾ ಮಾಡಿರುವುದರ ಬಗ್ಗೆಯೂ ಆಕ್ಷೇಪವೆತ್ತಿರುವ ಅವರು, ಇದು ದರೋಡೆ ಮಾತ್ರವಲ್ಲ, ಕಳ್ಳತನದ ಮೇಲೆ ಕಾನೂನುಬದ್ಧ ಅನುಮೋದನೆಯ ಮುದ್ರೆಯೂ ಬಿದ್ದಿದೆ ಎಂದು ಎಕ್ಸ್ ಪೋಸ್ಟ್‌ನಲ್ಲಿ ಬರೆದಿದ್ದಾರೆ.
ದಲಿತರು ಮತ್ತು ವಂಚಿತರ ಹಕ್ಕುಗಳನ್ನು ಕಸಿದುಕೊಳ್ಳುವ ಲೂಟಿಕೋರರೇ ನಿಮ್ಮ ಸರಕಾರಕ್ಕೆ ಬೆಂಬಲವಾಗಿ ನಿಂತಿರುವುದರಿಂದ ನೀವು ಮೌನವಾಗಿದ್ದೀರಾ ಎಂದು ರಾಹುಲ್ ಗಾಂಧಿ ಮೋದಿಯವರನ್ನು ಪ್ರಶ್ನಿಸಿದ್ದಾರೆ.
ಈ ದೇಶದ ಪ್ರಧಾನಿ ನರೇಂದ್ರ ಮೋದಿಯವರು 2023 ರ ಜೂನ್‌ನಲ್ಲಿ ಭೋಪಾಲ್‌ನಲ್ಲಿ ಇದೇ ಅಜಿತ್ ಪವಾರ್ ಅವರ ಪಕ್ಷದ ಬಗ್ಗೆ 70 ಸಾವಿರ ಕೋಟಿ ರೂ. ಹಗರಣಗಳ ಸರಮಾಲೆಯೇ ಮಾಡಿದೆ ಎಂದು ಸಾರ್ವಜನಿಕ ಸಭೆಯಲ್ಲೇ ಗಂಭೀರ ಆರೋಪ ಮಾಡುತ್ತಾರೆ.
‘‘ಈ ಎಲ್ಲ ಆರೋಪಗಳ ವಿರುದ್ಧ ಸಮಗ್ರ ತನಿಖೆಯ ಗ್ಯಾರಂಟಿ ನನ್ನದು’’ ಅಂತ ಆರ್ಭಟಿಸುತ್ತಾರೆ ಪ್ರಧಾನಿ ಮೋದಿ..
ಅದಕ್ಕೆ ನೆರೆದಿದ್ದ ಸಾವಿರಾರು ಬಿಜೆಪಿ ಕಾರ್ಯಕರ್ತರು, ಬೆಂಬಲಿಗರು, ಸಾರ್ವಜನಿಕರಿಂದ ಭಾರೀ ಹರ್ಷೋದ್ಗಾರ, ಘೋಷಣೆ, ಕರತಾಡನ ಮಾಡಿದ್ದರು.
ಇದೆಲ್ಲ ಆಗಿ ಐದನೇ ದಿನಕ್ಕೆ... ಹೌದು ಕೇವಲ ಐದನೇ ದಿನಕ್ಕೆ ಅದೇ ಪಕ್ಷದ, ಅದೇ ಬೃಹತ್ ಹಗರಣ ಸರಣಿಯ ರೂವಾರಿ ಎನ್ನಲಾದ ಅಜಿತ್ ಪವಾರ್ ಬಿಜೆಪಿ ಮೈತ್ರಿಕೂಟದ ಸರಕಾರದಲ್ಲಿ ಉಪಮುಖ್ಯಮಂತ್ರಿಯಾಗುತ್ತಾರೆ. ಅವರ ಜೊತೆ ಅವರದೇ ಪಕ್ಷದ ಇನ್ನೂ ಎಂಟು ಮಂದಿ ಕೂಡ ಸಚಿವರಾಗುತ್ತಾರೆ.
ಇವತ್ತಿಗೂ ಅದೇ ಅಜಿತ್ ಪವಾರ್ ಬಿಜೆಪಿ ನೇತೃತ್ವದ ಸರಕಾರದಲ್ಲಿ ಡಿಸಿಎಂ ಆಗಿದ್ದಾರೆ.
ಈಗ ಸಿಎಂ ಆಗಿರುವ ದೇವೇಂದ್ರ ಫಡ್ನವೀಸ್ ಅವರೂ ಇದೇ ಅಜಿತ್ ಪವಾರ್ ಬಗ್ಗೆ ‘‘ಜೈಲಿನಲ್ಲಿ ಹಿಟ್ಟು ರುಬ್ಬುತ್ತಾ ಕೂರಬೇಕಾಗುತ್ತದೆ’’ ಎಂದು ಹೇಳಿದ್ದರು
ಆದರೆ ಈಗ ಅದೇ ಅಜಿತ್ ಪವಾರ್ ಅದೇ ಫಡ್ನವೀಸ್ ಅವರ ಸರಕಾರದಲ್ಲಿ ಡಿಸಿಎಂ ಆಗಿ ಅಧಿಕಾರ ಅನುಭವಿಸುತ್ತಿದ್ದಾರೆ
ಅವರ ಮಗನಿಗೆ ದಲಿತರಿಗೆ ಸಿಗಬೇಕಾದ ಎಕರೆಗಟ್ಟಲೆ ಸರಕಾರಿ ಭೂಮಿ ಐನೂರು ರೂಪಾಯಿ ಸ್ಟ್ಯಾಂಪ್ ಡ್ಯೂಟಿಗೆ ಸಿಗುತ್ತಾ ಇದೆ.
ಈಗ ಪ್ರಧಾನಿ ಮೋದಿ ಎನ್‌ಸಿಪಿ ಬಗ್ಗೆ ಒಂದೇ ಒಂದು ಮಾತೂ ಆಡುವುದಿಲ್ಲ.
ಎಪ್ಪತ್ತು ಸಾವಿರ ಕೋಟಿ ರೂಪಾಯ ಭ್ರಷ್ಟಾಚಾರದ ತನಿಖೆ ಏನಾಯಿತು? ಅದರಲ್ಲಿ ಯಾರನ್ನೆಲ್ಲ ಜೈಲಿಗೆ ಕಳಿಸಿದಿರಿ? ಎಂದು ಈಗ ಯಾವುದಾದರೂ ಮಡಿಲ ಮೀಡಿಯಾ ಪ್ರಧಾನಿ ಮೋದಿಯನ್ನು ಕೇಳುತ್ತದೆಯೇ?
ಯಾರಾದರೂ ಕೇಳಿದರೂ ಉತ್ತರ ಬಹುಶಃ ಬರಲಾರದು.
ಯಾಕೆಂದರೆ, ಬಿಜೆಪಿಯ ವಾಷಿಂಗ್ ಮೆಷಿನ್ ಜೋರಾಗಿ ಕೊಳೆ ತೊಳೆಯುತ್ತಿದೆ.







