ಶಿಕ್ಷಣ ಹಕ್ಕು ಕಾಯ್ದೆ ಜಾರಿಯಾಗದಿದ್ದರೆ ಹೊಣೆ ಯಾರು?

ಭಾರತದ ಪ್ರತಿಯೊಂದು ಮಗುವಿಗೂ ಉಚಿತ ಮತ್ತು ಕಡ್ಡಾಯ ಶಿಕ್ಷಣ ಒದಗಿಸುವ ಉದ್ದೇಶದಿಂದ 2009ರಲ್ಲಿ ಶಿಕ್ಷಣ ಹಕ್ಕು ಕಾಯ್ದೆ ಜಾರಿಗೆ ಬಂತು. 2010ರ ಎಪ್ರಿಲ್ 1ರಿಂದ ಈ ಕಾಯ್ದೆ ಅನುಷ್ಠಾನಕ್ಕೆ ಬಂದಿದೆ. ಶಿಕ್ಷಣವು ದಯೆ, ದಾನ ಅಥವಾ ಸರಕಾರದ ಕೊಡುಗೆಯಲ್ಲ; ಅದು ಪ್ರತಿಯೊಂದು ಮಗುವಿನ ಹಕ್ಕು ಎಂಬ ಮಹತ್ವದ ಆಶಯವನ್ನು ಈ ಕಾಯ್ದೆ ಹೊಂದಿದೆ. ಆದರೆ ಕಾಯ್ದೆ ಜಾರಿಗೆ ಬಂದು 16 ವರ್ಷಗಳಾದರೂ ಅದರಲ್ಲಿರುವ ಮೂಲಭೂತ ಮಾನದಂಡಗಳು ರಾಜ್ಯದ ಪ್ರತಿಯೊಂದು ಸರಕಾರಿ ಶಾಲೆಯಲ್ಲಿ ಸಮರ್ಪಕವಾಗಿ ಅನುಷ್ಠಾನಗೊಂಡಿವೆಯೇ ಎಂಬ ಪ್ರಶ್ನೆಗೆ ಸರಕಾರ ಉತ್ತರಿಸಬೇಕಾಗಿದೆ.
ಶಿಕ್ಷಣ ಹಕ್ಕು ಎಂದರೆ ಮಕ್ಕಳನ್ನು ಶಾಲೆಗೆ ದಾಖಲಿಸುವುದಷ್ಟೇ ಅಲ್ಲ. ಪ್ರತಿಯೊಂದು ಮಗುವಿಗೂ ಸಮಾನ ಅವಕಾಶ, ಗುಣಮಟ್ಟದ ಬೋಧನೆ, ಸುರಕ್ಷಿತ ಶಾಲಾ ವಾತಾವರಣ, ಅಗತ್ಯ ಮೂಲಸೌಕರ್ಯ ಮತ್ತು ಸಮಗ್ರ ಕಲಿಕೆಗೆ ಪೂರಕವಾದ ವ್ಯವಸ್ಥೆ ಕಲ್ಪಿಸುವುದು ಸರಕಾರದ ಕಡ್ಡಾಯ ಜವಾಬ್ದಾರಿಯಾಗಿದೆ.
ಶಾಲೆ ಇದೆ, ಆದರೆ ಸೌಲಭ್ಯಗಳಿವೆಯೇ?
ಶಿಕ್ಷಣ ಹಕ್ಕು ಕಾಯ್ದೆಯ ಪ್ರಕಾರ ಪ್ರತಿಯೊಂದು ಶಾಲೆಯೂ ಸುಸಜ್ಜಿತ ಕಟ್ಟಡವನ್ನು ಹೊಂದಿರಬೇಕು. ಪ್ರತಿ ಶಿಕ್ಷಕರಿಗೂ ಕನಿಷ್ಠ ಒಂದು ತರಗತಿ ಕೊಠಡಿ, ಕಚೇರಿ ಮತ್ತು ಮುಖ್ಯಶಿಕ್ಷಕರ ಕೊಠಡಿ ಇರಬೇಕು. ಬಾಲಕ ಮತ್ತು ಬಾಲಕಿಯರಿಗೆ ಪ್ರತ್ಯೇಕ ಶೌಚಾಲಯ, ಸುರಕ್ಷಿತ ಕುಡಿಯುವ ನೀರು, ಅಡುಗೆಮನೆ, ಆಟದ ಮೈದಾನ ಹಾಗೂ ಶಾಲೆಯ ಸುರಕ್ಷತೆಗೆ ಆವರಣ ಗೋಡೆ ಅಥವಾ ಬೇಲಿ ಇರಬೇಕು. ಅಂಗವಿಕಲ ಮಕ್ಕಳಿಗೂ ಯಾವುದೇ ಅಡೆತಡೆಯಿಲ್ಲದೆ ಶಾಲೆಗೆ ಪ್ರವೇಶಿಸಲು ಅನುಕೂಲವಾಗುವ ವ್ಯವಸ್ಥೆ ಇರಬೇಕು.
ಆದರೆ ಈ ಮಾನದಂಡಗಳನ್ನು ರಾಜ್ಯದ ಎಲ್ಲ ಸರಕಾರಿ ಶಾಲೆಗಳಲ್ಲಿ ಪೂರೈಸಲಾಗಿದೆಯೇ? ಎಷ್ಟು ಶಾಲೆಗಳಲ್ಲಿ ಶೌಚಾಲಯಗಳಿವೆ? ಎಷ್ಟು ಶಾಲೆಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಸಮರ್ಪಕವಾಗಿದೆ? ಎಷ್ಟು ಶಾಲೆಗಳಲ್ಲಿ ಆಟದ ಮೈದಾನ ಮತ್ತು ಸುರಕ್ಷಿತ ಕಟ್ಟಡಗಳಿವೆ? ಎಂಬುದರ ಕುರಿತು ಸಮಗ್ರ ಶಾಲಾವಾರು ಪರಿಶೀಲನೆ ನಡೆಸುವುದು ಇಂದಿನ ಅಗತ್ಯವಾಗಿದೆ.
ಶಿಕ್ಷಕರಿಲ್ಲದೆ ಗುಣಮಟ್ಟದ ಶಿಕ್ಷಣ ಸಾಧ್ಯವೇ?
ಶಿಕ್ಷಣದ ಗುಣಮಟ್ಟವನ್ನು ನಿರ್ಧರಿಸುವ ಪ್ರಮುಖ ಅಂಶ ಶಿಕ್ಷಕರ ಲಭ್ಯತೆ. ಶಿಕ್ಷಣ ಹಕ್ಕು ಕಾಯ್ದೆಯು ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಶಿಕ್ಷಕರ ನೇಮಕಾತಿಗೆ ಸ್ಪಷ್ಟ ಮಾನದಂಡಗಳನ್ನು ನಿಗದಿಪಡಿಸಿದೆ.
1ರಿಂದ 5ನೇ ತರಗತಿಯವರೆಗೆ 60 ಮಕ್ಕಳಿಗೆ ಕನಿಷ್ಠ ಇಬ್ಬರು, 61ರಿಂದ 90 ಮಕ್ಕಳಿಗೆ ಮೂವರು, 91ರಿಂದ 120 ಮಕ್ಕಳಿಗೆ ನಾಲ್ವರು ಹಾಗೂ 121ರಿಂದ 200 ಮಕ್ಕಳಿಗೆ ಐವರು ಶಿಕ್ಷಕರು ಇರಬೇಕು. 6ರಿಂದ 8ನೇ ತರಗತಿಗಳಿಗೆ ಪ್ರತೀ ತರಗತಿಗೆ ಕನಿಷ್ಠ ಒಬ್ಬ ಶಿಕ್ಷಕರ ಜೊತೆಗೆ ಗಣಿತ ಮತ್ತು ವಿಜ್ಞಾನ, ಸಮಾಜ ವಿಜ್ಞಾನ ಹಾಗೂ ಭಾಷಾ ಬೋಧನೆಗೆ ಅಗತ್ಯ ಶಿಕ್ಷಕರಿರಬೇಕು. ಪ್ರತೀ 35 ಮಕ್ಕಳಿಗೆ ಕನಿಷ್ಠ ಒಬ್ಬ ಶಿಕ್ಷಕರಿರಬೇಕು. ವಿಶೇಷ ಅಗತ್ಯವುಳ್ಳ ಮಕ್ಕಳಿಗೆ ಅವರ ಅಗತ್ಯಕ್ಕೆ ಅನುಗುಣವಾಗಿ ವಿಶೇಷ ಶಿಕ್ಷಕರ ವ್ಯವಸ್ಥೆಯೂ ಇರಬೇಕು.
ಆದರೆ ವಾಸ್ತವದಲ್ಲಿ ಶಿಕ್ಷಕರ ಖಾಲಿ ಹುದ್ದೆಗಳು, ಏಕೋಪಾಧ್ಯಾಯ ಶಾಲೆಗಳು, ಅತಿಥಿ ಶಿಕ್ಷಕರ ಅವಲಂಬನೆ ಮತ್ತು ಶಿಕ್ಷಕರ ಮೇಲಿನ ಬೋಧನೇತರ ಕೆಲಸಗಳ ಹೊರೆ ಮಕ್ಕಳ ಕಲಿಕೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಈ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳದೆ ಗುಣಮಟ್ಟದ ಶಿಕ್ಷಣದ ಬಗ್ಗೆ ಮಾತನಾಡುವುದು ಹೇಗೆ?
ಮಕ್ಕಳ ಕಲಿಕೆಯ ಸಮಯವನ್ನೇ ಖಚಿತಪಡಿಸದಿದ್ದರೆ ಶಿಕ್ಷಣದ ಹಕ್ಕು ಹೇಗೆ?
ಶಿಕ್ಷಣ ಹಕ್ಕು ಕಾಯ್ದೆಯು ಮಕ್ಕಳ ಕಲಿಕೆಗೆ ಅಗತ್ಯವಾದ ಕನಿಷ್ಠ ಕೆಲಸದ ದಿನಗಳು ಮತ್ತು ಬೋಧನಾ ಗಂಟೆಗಳನ್ನು ನಿಗದಿಪಡಿಸಿದೆ. 1ರಿಂದ 5ನೇ ತರಗತಿಗಳಿಗೆ ವರ್ಷದಲ್ಲಿ ಕನಿಷ್ಠ 200 ಕೆಲಸದ ದಿನಗಳು ಮತ್ತು 800 ಬೋಧನಾ ಗಂಟೆಗಳು ಇರಬೇಕು. 6ರಿಂದ 8ನೇ ತರಗತಿಗಳಿಗೆ ಕನಿಷ್ಠ 220 ಕೆಲಸದ ದಿನಗಳು ಮತ್ತು 1,000 ಬೋಧನಾ ಗಂಟೆಗಳು ಕಡ್ಡಾಯವಾಗಿವೆ. ಪ್ರತಿಯೊಬ್ಬ ಶಿಕ್ಷಕರಿಗೂ ಬೋಧನೆ, ಪಾಠದ ಸಿದ್ಧತೆ ಸೇರಿದಂತೆ ವಾರಕ್ಕೆ ಕನಿಷ್ಠ 45 ಕೆಲಸದ ಗಂಟೆಗಳಿರಬೇಕು. ಇದರ ಜೊತೆಗೆ ಪ್ರತಿಯೊಂದು ತರಗತಿಗೂ ಅಗತ್ಯವಾದ ಬೋಧನಾ ಮತ್ತು ಕಲಿಕಾ ಸಾಮಗ್ರಿಗಳನ್ನು ಒದಗಿಸಬೇಕು. ಮಕ್ಕಳಿಗೆ ಪಠ್ಯಪುಸ್ತಕ ನೀಡಿದ ಮಾತ್ರಕ್ಕೆ ಗುಣಮಟ್ಟದ ಶಿಕ್ಷಣ ದೊರೆತಂತಾಗುವುದಿಲ್ಲ. ಕಲಿಕೆಗೆ ಪೂರಕವಾದ ಸಂಪನ್ಮೂಲಗಳು ಮತ್ತು ಸೂಕ್ತ ಬೋಧನಾ ವಾತಾವರಣವೂ ಅಗತ್ಯ.
ಗ್ರಂಥಾಲಯ ಮತ್ತು ಕ್ರೀಡೆ ಐಷಾರಾಮಿ ಸೌಲಭ್ಯಗಳಲ್ಲ
ಶಾಲಾ ಗ್ರಂಥಾಲಯದಲ್ಲಿ ದಿನಪತ್ರಿಕೆಗಳು, ನಿಯತಕಾಲಿಕೆಗಳು, ವಿವಿಧ ವಿಷಯಗಳ ಪುಸ್ತಕಗಳು ಮತ್ತು ಮಕ್ಕಳ ಸಾಹಿತ್ಯ ಲಭ್ಯವಿರಬೇಕು. ಪ್ರತಿಯೊಂದು ತರಗತಿಗೂ ಅಗತ್ಯವಾದ ಆಟದ ಸಾಮಗ್ರಿ ಮತ್ತು ಕ್ರೀಡಾ ಉಪಕರಣಗಳನ್ನು ಒದಗಿಸಬೇಕು.
ಮಕ್ಕಳ ಶಿಕ್ಷಣವೆಂದರೆ ಕೇವಲ ಪರೀಕ್ಷೆಗಳಲ್ಲಿ ಅಂಕ ಗಳಿಸುವುದಲ್ಲ. ಓದುವ ಅಭ್ಯಾಸ, ವೈಜ್ಞಾನಿಕ ಚಿಂತನೆ, ಸೃಜನಶೀಲತೆ, ದೈಹಿಕ ಬೆಳವಣಿಗೆ ಮತ್ತು ಸಾಮಾಜಿಕ ಜವಾಬ್ದಾರಿಯನ್ನು ಬೆಳೆಸುವುದೂ ಶಿಕ್ಷಣದ ಭಾಗವಾಗಿದೆ. ಆದ್ದರಿಂದ ಗ್ರಂಥಾಲಯ ಮತ್ತು ಆಟದ ಮೈದಾನಗಳು ಶಾಲೆಯ ಹೆಚ್ಚುವರಿ ಸೌಲಭ್ಯಗಳಲ್ಲ; ಅವು ಮಕ್ಕಳ ಸಮಗ್ರ ಬೆಳವಣಿಗೆಯ ಅವಿಭಾಜ್ಯ ಅಂಗಗಳಾಗಿವೆ.
ಶಾಲೆಗಳನ್ನು ಬಲಪಡಿಸುವ ಬದಲು ದುರ್ಬಲಗೊಳಿಸುವುದೇಕೆ?
ಇಂದು ಸರಕಾರಿ ಶಾಲೆಗಳ ಉಳಿವು ಮತ್ತು ಬಲವರ್ಧನೆ ದೊಡ್ಡ ಸವಾಲಾಗಿದೆ. ಸರಕಾರಿ ಶಾಲೆಗಳಲ್ಲಿ ಅಗತ್ಯ ಸೌಲಭ್ಯಗಳನ್ನು ಒದಗಿಸಿ, ಶಿಕ್ಷಕರನ್ನು ನೇಮಿಸಿ, ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಜನರ ವಿಶ್ವಾಸವನ್ನು ಹೆಚ್ಚಿಸಬೇಕಾದ ಸರಕಾರ, ಶಾಲೆಗಳ ವಿಲೀನ, ಮುಚ್ಚುವಿಕೆ ಮತ್ತು ಖಾಸಗೀಕರಣಕ್ಕೆ ಪೂರಕವಾಗುವ ನೀತಿಗಳ ಬಗ್ಗೆ ಗಂಭೀರವಾಗಿ ಮರುಚಿಂತನೆ ಮಾಡಬೇಕಾಗಿದೆ.
ಬಡವರು, ದಲಿತರು, ಅಲ್ಪಸಂಖ್ಯಾತರು, ವಲಸೆ ಕಾರ್ಮಿಕರು, ಅಸಂಘಟಿತ ವಲಯದ ಕಾರ್ಮಿಕರು ಹಾಗೂ ದುರ್ಬಲ ವರ್ಗಗಳ ಮಕ್ಕಳಿಗೆ ಸರಕಾರಿ ಶಾಲೆಗಳೇ ಶಿಕ್ಷಣದ ಪ್ರಮುಖ ಆಸರೆಯಾಗಿವೆ.ಸರಕಾರಿ ಶಾಲೆಗಳು ದುರ್ಬಲಗೊಂಡರೆ ಅದರ ನೇರ ಪರಿಣಾಮ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಮಕ್ಕಳ ಮೇಲೆ ಬೀಳುತ್ತದೆ. ಶಿಕ್ಷಣದಲ್ಲಿ ಸಮಾನ ಅವಕಾಶ ಕಲ್ಪಿಸುವ ಸಂವಿಧಾನದ ಆಶಯಕ್ಕೂ ಧಕ್ಕೆಯಾಗುತ್ತದೆ.
ಶಾಲಾಭಿವೃದ್ಧಿ ಸಮಿತಿಗಳಿಗೆ ಪ್ರಮುಖ ಪಾತ್ರ
ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳು (ಎಸ್‌ಡಿಎಂಸಿ) ಶಾಲೆಗಳ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಬೇಕಾಗಿದೆ. ಪೋಷಕರು, ಶಿಕ್ಷಕರು ಮತ್ತು ಸ್ಥಳೀಯ ಸಮುದಾಯದ ಸಹಭಾಗಿತ್ವದಲ್ಲಿ ಶಾಲೆಯ ಅಗತ್ಯಗಳನ್ನು ಗುರುತಿಸಿ, ಅವುಗಳ ಪರಿಹಾರಕ್ಕೆ ಕ್ರಮ ಕೈಗೊಳ್ಳಬೇಕು.
ಆದರೆ ಸಮಿತಿಗಳನ್ನು ಕೇವಲ ಸಭೆಗಳಿಗೆ ಸೀಮಿತಗೊಳಿಸದೆ, ಅವುಗಳಿಗೆ ಅಗತ್ಯ ಮಾಹಿತಿ, ಅಧಿಕಾರ ಮತ್ತು ನಿರ್ಧಾರ ಪ್ರಕ್ರಿಯೆಯಲ್ಲಿ ಸೂಕ್ತ ಪಾತ್ರ ನೀಡಬೇಕು.
ಪ್ರತಿಯೊಂದು ಸರಕಾರಿ ಶಾಲೆಯಲ್ಲಿಯೂ ಶಿಕ್ಷಣ ಹಕ್ಕು ಕಾಯ್ದೆಯ ಮಾನದಂಡಗಳ ಅನುಷ್ಠಾನವನ್ನು ಪರಿಶೀಲಿಸುವ ವ್ಯವಸ್ಥೆ ರೂಪಿಸಬೇಕು.
ಸರಕಾರಕ್ಕೆ ಪ್ರಶ್ನೆಗಳು
1. ಶಿಕ್ಷಣ ಹಕ್ಕು ಕಾಯ್ದೆಯ ಎಲ್ಲ ಮಾನದಂಡಗಳನ್ನು ರಾಜ್ಯದ ಪ್ರತಿಯೊಂದು ಸರಕಾರಿ ಶಾಲೆಯಲ್ಲಿ ಅನುಷ್ಠಾನಗೊಳಿಸಲಾಗಿದೆಯೇ?
2. ರಾಜ್ಯದ ಎಲ್ಲ ಸರಕಾರಿ ಶಾಲೆಗಳ ಮೂಲಸೌಕರ್ಯ ಮತ್ತು ಶಿಕ್ಷಕರ ಲಭ್ಯತೆಯ ಕುರಿತು ಶಾಲಾವಾರು ಸಮಗ್ರ ಸಮೀಕ್ಷೆ ನಡೆಸಲಾಗಿದೆಯೇ?
3. ಖಾಲಿ ಇರುವ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಲು ಸರಕಾರದ ಕಾಲಮಿತಿಯ ಯೋಜನೆ ಏನು?
4. ಎಲ್ಲ ಶಾಲೆಗಳಲ್ಲೂ ಶೌಚಾಲಯ, ಕುಡಿಯುವ ನೀರು, ಗ್ರಂಥಾಲಯ, ಆಟದ ಮೈದಾನ ಮತ್ತು ಸುರಕ್ಷಿತ ಕಟ್ಟಡದ ವ್ಯವಸ್ಥೆ ಕಲ್ಪಿಸಲಾಗಿದೆಯೇ?
5. ವಿಶೇಷ ಅಗತ್ಯವುಳ್ಳ ಮಕ್ಕಳಿಗೆ ಅಗತ್ಯ ಸೌಲಭ್ಯ ಮತ್ತು ವಿಶೇಷ ಶಿಕ್ಷಕರನ್ನು ಒದಗಿಸಲಾಗಿದೆಯೇ?
6. ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳಿಗೆ ಕಾಯ್ದೆಯ ಆಶಯದಂತೆ ಅಧಿಕಾರ ಮತ್ತು ಜವಾಬ್ದಾರಿ ನೀಡಲಾಗಿದೆಯೇ?
7. ಶಿಕ್ಷಣ ಹಕ್ಕು ಕಾಯ್ದೆಯ ಅನುಷ್ಠಾನದ ಕುರಿತು ಸರಕಾರ ಸಾರ್ವಜನಿಕ ವರದಿ ಬಿಡುಗಡೆ ಮಾಡುತ್ತದೆಯೇ?
ಪ್ರಮುಖ ಆಗ್ರಹಗಳು
- ಶಿಕ್ಷಣ ಹಕ್ಕು ಕಾಯ್ದೆಯ ಸಮಗ್ರ ಅನುಷ್ಠಾನಕ್ಕೆ ಸರಕಾರ ಕಾಲಮಿತಿಯ ಕ್ರಿಯಾ ಯೋಜನೆ ರೂಪಿಸಬೇಕು.
- ರಾಜ್ಯದ ಪ್ರತಿಯೊಂದು ಸರಕಾರಿ ಶಾಲೆಯಲ್ಲೂ ಕಾಯ್ದೆಯ ಮಾನದಂಡಗಳ ಅನುಷ್ಠಾನದ ಸಾಮಾಜಿಕ ಲೆಕ್ಕಪರಿಶೋಧನೆ ನಡೆಸಬೇಕು.
- ಶಿಕ್ಷಕರ ಖಾಲಿ ಹುದ್ದೆಗಳನ್ನು ತಕ್ಷಣ ಭರ್ತಿ ಮಾಡಬೇಕು.
- ಮೂಲಸೌಕರ್ಯಗಳ ಕೊರತೆಯನ್ನು ಆದ್ಯತೆಯ ಮೇರೆಗೆ ನಿವಾರಿಸಬೇಕು.
- ಶಾಲೆಗಳನ್ನು ಮುಚ್ಚುವ ಅಥವಾ ವಿಲೀನಗೊಳಿಸುವ ಬದಲು ಬಲಪಡಿಸುವ ನೀತಿಯನ್ನು ಅನುಸರಿಸಬೇಕು.
- ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳನ್ನು ಸಬಲೀಕರಣಗೊಳಿಸಬೇಕು.
ಶಿಕ್ಷಣ ಹಕ್ಕು ಕಾಯ್ದೆಯ ಅನುಷ್ಠಾನವು ಕೇವಲ ಶಿಕ್ಷಣ ಇಲಾಖೆಯ ಆಡಳಿತಾತ್ಮಕ ವಿಚಾರವಲ್ಲ. ಇದು ಮಕ್ಕಳ ಭವಿಷ್ಯ, ಸಾಮಾಜಿಕ ನ್ಯಾಯ, ಸಮಾನತೆ ಮತ್ತು ಪ್ರಜಾಪ್ರಭುತ್ವದ ಬಲವರ್ಧನೆಗೆ ಸಂಬಂಧಿಸಿದ ಪ್ರಶ್ನೆಯಾಗಿದೆ. ಸರಕಾರಗಳು ಬದಲಾದರೂ ಮಕ್ಕಳ ಶಿಕ್ಷಣದ ಹಕ್ಕು ಬದಲಾಗುವುದಿಲ್ಲ. ಪ್ರತಿಯೊಂದು ಮಗುವಿಗೂ ಗುಣಮಟ್ಟದ ಶಿಕ್ಷಣ ಒದಗಿಸುವ ಜವಾಬ್ದಾರಿ ಸರಕಾರದಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ.
ಶಾಲೆಗಳನ್ನು ಉಳಿಸುವುದು ಎಂದರೆ ಕೇವಲ ಕಟ್ಟಡಗಳನ್ನು ಉಳಿಸು ವುದಲ್ಲ; ಬಡ ಮಕ್ಕಳ ಭವಿಷ್ಯವನ್ನು, ಸಾಮಾಜಿಕ ಸಮಾನತೆಯನ್ನು ಮತ್ತು ಸಂವಿಧಾನದ ಆಶಯವನ್ನು ಉಳಿಸುವುದಾಗಿದೆ.
ಸರಕಾರಿ ಶಾಲೆ ಉಳಿಯಲಿ ಸಮಾನ ಶಿಕ್ಷಣ ಎಲ್ಲರಿಗೂ ಸಿಗಲಿ!






