ಯಾರಿಗೆ ಒಲಿಯಲಿದೆ ಕಾಳಗಿ ಪಪಂ ಅಧ್ಯಕ್ಷ ಪಟ್ಟ?
ಬಿಜೆಪಿ, ಕಾಂಗ್ರೆಸ್‌ಗೆ ಪ್ರತಿಷ್ಠೆಯ ಪಣ: ಸೆ.30ಕ್ಕೆ ಚುನಾವಣೆ

ಕಾಳಗಿ: ಸ್ಥಳೀಯ ಪಟ್ಟಣ ಪಂಚಾಯಿತಿ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಸೆ.30ರಂದು ನಡೆಯಲಿರುವ ಚುನಾವಣೆ ರಾಜಕೀಯ ಕುತೂಹಲಕ್ಕೆ ಕಾರಣವಾಗಿದೆ.
ಚುನಾವಣೆ ದಿನಾಂಕ ಘೋಷಣೆಯಾದ ಬೆನ್ನಲ್ಲೇ ಕಾಂಗ್ರೆಸ್ ಹಾಗೂ ಬಿಜೆಪಿ ಪಾಳಯದಲ್ಲಿ ರಾಜಕೀಯ ಚಟುವಟಿಕೆಗಳು ಬಿರುಸುಗೊಂಡಿದ್ದು, ಸದಸ್ಯರನ್ನು ತಮ್ಮತ್ತ ಸೆಳೆಯಲು ಎರಡೂ ಪಕ್ಷಗಳು ಕಸರತ್ತು ನಡೆಸುತ್ತಿವೆ.
ಕಾಳಗಿ ಗ್ರಾಪಂನಿಂದ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿ ಸುಮಾರು ಐದು ವರ್ಷಗಳ ಬಳಿಕ ಮೊದಲ ಸಾರ್ವತ್ರಿಕ ಚುನಾವಣೆ ನಡೆದಿತ್ತು. ಸದಸ್ಯರು ಆಯ್ಕೆಯಾಗಿ ವರ್ಷ ಕಳೆದ ಬಳಿಕ ಇದೀಗ ಮೊದಲ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಗೆ ಮುಹೂರ್ತ ನಿಗದಿಯಾಗಿದೆ. ಹೀಗಾಗಿ ಮೊದಲ ಅಧ್ಯಕ್ಷರಾಗಿ ಯಾರು ಆಯ್ಕೆಯಾಗಲಿದ್ದಾರೆ ಎಂಬ ಕುತೂಹಲ ಸಾರ್ವಜನಿಕ ವಲಯದಲ್ಲಿ ಮೂಡಿದೆ.
ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಹಾಗೂ ಬಿಜೆಪಿ ಸದಸ್ಯರ ನಡುವೆ ಪೈಪೋಟಿ ಇದ್ದು, ಎರಡೂ ಪಕ್ಷಗಳು ರಾಜಕೀಯ ತಂತ್ರಗಾರಿಕೆ ರೂಪಿಸುತ್ತಿವೆ. ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯ ಜಗದೇವ ಗುತ್ತೇದಾರ ಅವರ ತವರೂರು ಕಾಳಗಿಯಾಗಿದ್ದು, ಬಿಜೆಪಿ ಶಾಸಕ ಡಾ. ಅವಿನಾಶ್ ಜಾಧವ್ ಕೂಡ ಇದೇ ತಾಲೂಕಿನವರು. ಹೀಗಾಗಿ ಪಪಂ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆ ಎರಡೂ ಪಕ್ಷಗಳಿಗೂ ಪ್ರತಿಷ್ಠೆಯ ವಿಷಯವಾಗಿದೆ.
6-5 ಸದಸ್ಯ ಬಲ
ಕಾಳಗಿ ಪಟ್ಟಣ ಸೇರಿದಂತೆ ಆರು ತಾಂಡಾಗಳನ್ನು ಒಳಗೊಂಡ ಪಟ್ಟಣ ಪಂಚಾಯಿತಿಯಲ್ಲಿ ಒಟ್ಟು 11 ಸದಸ್ಯರಿದ್ದಾರೆ. ಈ ಪೈಕಿ ಕಾಂಗ್ರೆಸ್ 6 ಹಾಗೂ ಬಿಜೆಪಿ 5 ಸದಸ್ಯರನ್ನು ಹೊಂದಿದೆ. ಹೀಗಾಗಿ ಕಾಂಗ್ರೆಸ್‌ಗೆ ಸಂಖ್ಯಾಬಲವಿದ್ದರೂ, ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಸಂದರ್ಭದಲ್ಲಿ ಸದಸ್ಯರ ನಿಲುವು ಮತ್ತು ಅಂತಿಮ ಕ್ಷಣದ ರಾಜಕೀಯ ಬೆಳವಣಿಗೆಗಳು ಕುತೂಹಲ ಮೂಡಿಸಿವೆ.
ಮೊದಲ ಅವಧಿ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳನ್ನು ಪಡೆಯಲು ಎರಡೂ ಪಕ್ಷಗಳ ಮುಖಂಡರು ಹಾಗೂ ಸದ್ಯರು ತೆರೆಮರೆಯಲ್ಲಿ ಚರ್ಚೆ, ಸಮಾಲೋಚನೆ ನಡೆಸುತ್ತಿದ್ದಾರೆ.
ಆಕಾಂಕ್ಷಿಗಳು ಹಲವರು
ಕಾಂಗ್ರೆಸ್‌ನಲ್ಲಿ ಅಧ್ಯಕ್ಷ ಸ್ಥಾನಕ್ಕೆ ಕಮಲಾಬಾಯಿ ಸಿದ್ರಾಮಪ್ಪ ಕಮಲಾಪೂರ, ಉಷಾರಾಣಿ ದತ್ತು ಗುತ್ತೇದಾರ, ಗುರುರಾಜ ಮದ್ದೂರು ಹಾಗೂ ಬಸವರಾಜ ಮಡಿವಾಳ ಆಕಾಂಕ್ಷಿಗಳಾಗಿದ್ದಾರೆ. ಉಪಾಧ್ಯಕ್ಷ ಸ್ಥಾನಕ್ಕೆ ಶರಣಪ್ಪ ಬೆಲೂರ ಆಕಾಂಕ್ಷಿಯಾಗಿದ್ದಾರೆ.
ಬಿಜೆಪಿಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ರಮೇಶ್ ಕಿಟ್ಟದ ಆಕಾಂಕ್ಷಿಯಾಗಿದ್ದು, ಉಪಾಧ್ಯಕ್ಷ ಸ್ಥಾನಕ್ಕೆ ಪಾರ್ವತಿ ವಿಠ್ಠಲ, ಜೀತು ರಾಠೋಡ ಹಾಗೂ ಚಂದ್ರಕಲಾ ಚವ್ಹಾಣ ಅವರ ಹೆಸರುಗಳು ಕೇಳಿಬರುತ್ತಿವೆ.
ಅಂತಿಮ ಹಂತದಲ್ಲಿ ನಡೆಯುವ ಮಾತುಕತೆ, ಸದಸ್ಯರ ನಿಲುವು ಹಾಗೂ ಎರಡೂ ಪಕ್ಷಗಳ ರಾಜಕೀಯ ತಂತ್ರಗಾರಿಕೆಯ ಆಧಾರದ ಮೇಲೆ ಚುನಾವಣೆಯ ಚಿತ್ರಣ ಬದಲಾಗುವ ಸಾಧ್ಯತೆಯೂ ಇದೆ.
ಸೆ.30ರಂದು ಚುನಾವಣೆ
ಕಾಳಗಿ ಪಪಂ ಕಚೇರಿಯಲ್ಲಿ ಸೆ.30ರಂದು ಮಧ್ಯಾಹ್ನ 1 ಗಂಟೆಗೆ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣಾ ಪ್ರಕ್ರಿಯೆ ಆರಂಭವಾಗಲಿದೆ. ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಹಾಗೂ ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿಗೆ ಮೀಸಲಾಗಿದೆ.
ತಹಶೀಲ್ದಾರ್ ಹಾಗೂ ಚುನಾವಣಾಧಿಕಾರಿ ಪೃಥ್ವಿರಾಜ್ ಪಾಟೀಲರ ಸಮ್ಮುಖದಲ್ಲಿ ಚುನಾವಣೆ ನಡೆಯಲಿದೆ.






