ರಾಹುಲ್ ಗಾಂಧಿಯವರ ಪ್ರಶ್ನೆಗಳಿಗೆ ಚುನಾವಣಾ ಆಯೋಗಕ್ಕೆ ಅಧಿಕೃತವಾಗಿ ಯಾಕೆ ಉತ್ತರಿಸಲಾಗುತ್ತಿಲ್ಲ?

ಜೂನ್ 7ರಂದು ರಾಹುಲ್ ಗಾಂಧಿ ಮಹಾರಾಷ್ಟ್ರ ಚುನಾವಣೆ ಬಗ್ಗೆ ಒಂದು ಲೇಖನ ಬರೆದರು. ಹಿಂದಿ, ಇಂಗ್ಲಿಷ್ ಮಾತ್ರವಲ್ಲದೆ ಕನ್ನಡ ಸಹಿತ ಇತರ ಭಾಷೆಗಳ ಪತ್ರಿಕೆಗಳಲ್ಲೂ ಅವರ ಆ ಲೇಖನ ಪ್ರಕಟವಾಯಿತು.
ಅವರು ಅಂಕಿಅಂಶಗಳನ್ನು ನೀಡಿ ತಮ್ಮ ವಾದ ಮಂಡಿಸಿದರು ಮತ್ತು ಚುನಾವಣಾ ಆಯೋಗಕ್ಕೆ ಪ್ರಶ್ನೆಗಳನ್ನು ಕೇಳಿದರು.
ಇಂಡಿಯನ್ ಎಕ್ಸ್‌ಪ್ರೆಸ್‌ನಲ್ಲಿ ಲೇಖನದ ಶೀರ್ಷಿಕೆ ‘ಮ್ಯಾಚ್ ಫಿಕ್ಸಿಂಗ್ ಮಹಾರಾಷ್ಟ್ರ’ ಎಂದಿತ್ತು.
ಇದಕ್ಕೆ ಪ್ರತಿಕ್ರಿಯೆಯಾಗಿ, ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಇಂಡಿಯನ್ ಎಕ್ಸ್‌ಪ್ರೆಸ್‌ನಲ್ಲಿಯೇ ಬರೆದಿದ್ದಾರೆ. ಆದರೆ, ಚುನಾವಣಾ ಆಯೋಗ ಉತ್ತರ ನೀಡಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ.
ಆಯೋಗ ಉತ್ತರ ನೀಡಬೇಕಿರುವಾಗ, ಬಿಜೆಪಿ ಅದನ್ನು ಏಕೆ ನೀಡುತ್ತಿದೆ? ಆಯೋಗ ತನ್ನ ವೆಬ್‌ಸೈಟ್ ಮೂಲಕ ಹೇಳಿಕೆ ಬಿಡುಗಡೆ ಮಾಡಬೇಕು. ಪತ್ರಿಕಾಗೋಷ್ಠಿ ನಡೆಸಬೇಕು. ಕನಿಷ್ಠಪಕ್ಷ, ಸಮಯ ಬಂದಾಗ ಅಧಿಕೃತ ಹೇಳಿಕೆ ನೀಡುತ್ತೇವೆ ಎಂದು ಟ್ವೀಟ್ ಅನ್ನಾದರೂ ಮಾಡಬಹುದಿತ್ತು. ಅಲ್ಲದೆ, ಎಎನ್‌ಐ ಮೂಲಕ ಬಿಡುಗಡೆಯಾದ ಆಯೋಗದ ಪ್ರತಿಕ್ರಿಯೆ, ಆಯೋಗದ ಟ್ವಿಟರ್ ಹ್ಯಾಂಡಲ್‌ನಲ್ಲಿಲ್ಲ.
ರಾಹುಲ್ ಗಾಂಧಿಯವರ ಪ್ರಶ್ನೆಗಳಿಗೆ ಅಧಿಕೃತ ಪ್ರತಿಕ್ರಿಯೆ ನೀಡುವಲ್ಲಿ ಯಾರಿಗಾದರೂ ಸಮಸ್ಯೆ ಇದೆಯೆ? ದೇಶದ ಎರಡನೇ ಅತಿದೊಡ್ಡ ಪಕ್ಷದ ನಾಯಕನಿಗೆ, ವಿರೋಧ ಪಕ್ಷದ ನಾಯಕನಿಗೆ ಉತ್ತರಿಸುವುದು ಅಗತ್ಯ ಎಂದು ಆಯೋಗ ಪರಿಗಣಿಸುವುದಿಲ್ಲವೇ? ಪ್ರಧಾನಿ ಮೋದಿ ಅಥವಾ ಬಿಜೆಪಿ ಅಧ್ಯಕ್ಷ ನಡ್ಡಾ ಅವರ ವಿಷಯದಲ್ಲಾದರೆ ಆಯೋಗ ಹೀಗೆ ನಡೆದುಕೊಳ್ಳುವುದೆ?
ರಾಹುಲ್ ಗಾಂಧಿ ಬರೆದದ್ದು ದಾಖಲೆಯಲ್ಲಿದೆ. ಆದರೆ ಚುನಾವಣಾ ಆಯೋಗ ಏಕೆ ಅಧಿಕೃತವಾಗಿ ಮಾತನಾಡುತ್ತಿಲ್ಲ? ಅನಾಮಧೇಯ ಉತ್ತರಕ್ಕೆ ಯಾವುದೇ ಪ್ರಾಮುಖ್ಯತೆ ಇದೆಯೆ?
ಕಿರಿಯ ಅಧಿಕಾರಿಯ ಉತ್ತರವನ್ನು ಸಹ ನ್ಯಾಯಾಲಯದಲ್ಲಿ ಸ್ವೀಕರಿಸಲಾಗುವುದಿಲ್ಲ. ಅಕ್ಟೋಬರ್ 2020ರ ಪ್ರಕರಣವೊಂದರಲ್ಲಿ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಕಿರಿಯ ಅಧಿಕಾರಿಯ ಮೂಲಕ ಅಫಿಡವಿಟ್ ಸಲ್ಲಿಸಿದ್ದಾಗ, ಆಗಿನ ಮುಖ್ಯ ನ್ಯಾಯಮೂರ್ತಿ ಬೊಬ್ಡೆ ತೀವ್ರವಾಗಿ ಆಕ್ಷೇಪಿಸಿದ್ದರು.
ಅಂತಹ ಹಲವು ಉದಾಹರಣೆಗಳು ಸಿಗುತ್ತವೆ.
ಆದರೆ ಇಲ್ಲಿ, ಚುನಾವಣಾ ಆಯೋಗದ ಉತ್ತರದಲ್ಲಿ ಯಾರ ಸಹಿಯೂ ಇಲ್ಲ. ದೇಶದ ಅತಿದೊಡ್ಡ ಸಾಂವಿಧಾನಿಕ ಮತ್ತು ಸ್ವಾಯತ್ತ ಸಂಸ್ಥೆ ಹೆಸರು ಮತ್ತು ಸಹಿ ಇಲ್ಲದೆ ಹೇಳಿಕೆ ನೀಡುತ್ತದೆ ಮತ್ತು ಆ ಹೇಳಿಕೆಯನ್ನು ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿಯೂ ಹಾಕುವುದಿಲ್ಲ.
ಈ ಪತ್ರ ಎಲ್ಲಿಂದ ಬಂತು ಎಂದು ನಮಗೆ ತಿಳಿದಿಲ್ಲ. ತನ್ನದೇ ಆದ ಪತ್ರಕ್ಕೆ ಸಹಿ ಹಾಕಲು ಸಾಧ್ಯವಾಗದ ಸಂಸ್ಥೆಯ ಸತ್ಯಾಸತ್ಯತೆಯನ್ನು ನಾವು ಹೇಗೆ ನಂಬಬಹುದು? ಎಂದು ಕಾಂಗ್ರೆಸ್ ವಕ್ತಾರ ಪವನ್ ಖೇರಾ ಪ್ರಶ್ನಿಸಿದ್ದಾರೆ.
ಸಂವಿಧಾನದ 324ನೇ ವಿಧಿ ಚುನಾವಣಾ ಆಯೋಗದ ಸ್ವಾಯತ್ತತೆಯನ್ನು ರಕ್ಷಿಸುವ ಉದ್ದೇಶ ಹೊಂದಿದೆ. ಅದಕ್ಕಾಗಿಯೇ ಆಯುಕ್ತರ ಅಧಿಕಾರಾವಧಿಯನ್ನು ನಿಗದಿಪಡಿಸಲಾಗಿದೆ. ಈ ಸಂಸ್ಥೆಯ ಸ್ವಾಯತ್ತತೆ ಭಾರತದ ಪ್ರಜಾಪ್ರಭುತ್ವದ ಅತಿದೊಡ್ಡ ಖಾತರಿಯಾಗಿದೆ.ಅಂತಹ ಸಂಸ್ಥೆ ತನ್ನದೇ ಆದ ಸಾಮಾಜಿಕ ಮಾಧ್ಯಮ ಖಾತೆಯಿಂದ ಆ ಹೇಳಿಕೆಯನ್ನು ಏಕೆ ನೀಡಲಿಲ್ಲ?
ಆ ಉತ್ತರ ಚುನಾವಣಾ ಆಯೋಗದಿಂದಲೇ ಬಂದಿದೆ ಎಂದು ಹೇಗೆ ನಂಬಬಹುದು? ಸಾಂವಿಧಾನಿಕ ಮತ್ತು ಸ್ವಾಯತ್ತ ಸಂಸ್ಥೆ ಹೀಗೆ ಮಾಡಿದರೆ ಸರಿಯೆ?
ಸಹಿ ಮಾಡದ ಉತ್ತರವನ್ನು ರಾಹುಲ್ ಗಾಂಧಿ ಪ್ರಶ್ನಿಸಿದಾಗ, ಅದಕ್ಕೆ ಪ್ರತಿಕ್ರಿಯೆಯಾಗಿ ಚುನಾವಣಾ ಆಯೋಗದ ಮೂಲಗಳು ಪತ್ರಿಕೆಗಳೊಂದಿಗೆ ಮಾತನಾಡಲು ಪ್ರಾರಂಭಿಸಿದವು.
ಆಯೋಗ ಮಧ್ಯವರ್ತಿಗಳ ಮೂಲಕ ಏಕೆ ಹೇಳಿಕೆ ನೀಡುತ್ತಿದೆ ಎಂಬ ಪ್ರಶ್ನೆಯನ್ನು ರಾಹುಲ್ ಎತ್ತಿದ್ದಾರೆ.
ನೀವು ಮರೆಮಾಡಲು ಏನೂ ಇಲ್ಲದಿದ್ದರೆ, ನನ್ನ ಲೇಖನದಲ್ಲಿ ನಾನು ಎತ್ತಿರುವ ಪ್ರಶ್ನೆಗಳಿಗೆ ಉತ್ತರಿಸಿ ಮತ್ತು ಅದನ್ನು ಸಾಬೀತುಪಡಿಸಿ ಎಂದಿದ್ದಾರೆ.
ಮಹಾರಾಷ್ಟ್ರದ ಲೋಕಸಭೆ ಮತ್ತು ವಿಧಾನಸಭಾ ಚುನಾವಣೆಗಳ ಮತದಾರರ ಪಟ್ಟಿಯನ್ನು ಪ್ರಕಟಿಸಿ ಮತ್ತು ಸಂಜೆ 5 ಗಂಟೆಯ ನಂತರ ಮತಗಟ್ಟೆಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಬಿಡುಗಡೆ ಮಾಡಿ. ಪ್ರಶ್ನೆಗಳಿಂದ ತಪ್ಪಿಸಿಕೊಳ್ಳುವುದು ನಿಮ್ಮ ವಿಶ್ವಾಸಾರ್ಹತೆಯನ್ನು ಉಳಿಸಲು ಸಾಧ್ಯವಿಲ್ಲ. ಸತ್ಯವನ್ನು ಮಾತನಾಡುವುದು ನಿಮ್ಮನ್ನು ಉಳಿಸುತ್ತದೆ ಎಂದಿದ್ದಾರೆ.
ರಾಹುಲ್ ಗಾಂಧಿಯವರ ಈ ಟ್ವೀಟ್ ಬಗ್ಗೆ, ಚುನಾವಣಾ ಆಯೋಗವು ಎಎನ್‌ಐ, ಇಂಡಿಯನ್ ಎಕ್ಸ್‌ಪ್ರೆಸ್, ಹಿಂದೂಸ್ಥಾನ್ ಟೈಮ್ಸ್ ಮತ್ತು ಇತರ ಹಲವೆಡೆ ಪ್ರಕಟವಾದ ಮೂಲಗಳನ್ನು ಉಲ್ಲೇಖಿಸಿ ಹೇಳಿಕೆ ನೀಡಿತು.
ನಿಯಮಗಳ ಪ್ರಕಾರ, ರಾಹುಲ್ ಗಾಂಧಿ ಅವರಿಗೆ ಪತ್ರ ಬರೆದಾಗ ಮಾತ್ರ ಆಯೋಗ ಅಧಿಕೃತವಾಗಿ ಹೇಳಿಕೆ ನೀಡಿದಂತಾಗುತ್ತದೆ.
ಆರೋಪ ಮಾಡಿದ 24 ಗಂಟೆಗಳ ನಂತರವೂ, ರಾಹುಲ್ ಸಭೆಗೆ ಸಮಯ ಕೇಳಿಲ್ಲ ಎಂದು ಆಯೋಗದ ಮೂಲವನ್ನು ಉಲ್ಲೇಖಿಸಿ ಹೇಳಲಾಗಿದೆ. ಈ ಮೂಲ ಯಾರು? ಮೂಲಗಳು ಇಷ್ಟೊಂದು ಹೇಳುತ್ತಿದ್ದರೆ, ಅವರು ಆಯೋಗದ ಹೇಳಿಕೆಯಲ್ಲಿ ತಮ್ಮ ಹೆಸರು ಮತ್ತು ಸಹಿಯನ್ನು ಏಕೆ ಹಾಕುವುದಿಲ್ಲ?
ಮೇ 15ರಂದು ಆಯೋಗ ಕಾಂಗ್ರೆಸ್ ಅನ್ನು ಸಭೆಗೆ ಕರೆದಾಗ, ಪಕ್ಷ ಹೆಚ್ಚಿನ ಸಮಯ ಕೇಳಿದೆ ಎಂದು ಈ ಮೂಲಗಳು ತಿಳಿಸಿವೆ.ಆದರೆ ಸಭೆ ಇನ್ನೂ ನಡೆದಿಲ್ಲ.
ರಾಹುಲ್ ಗಾಂಧಿಯವರ ಆರೋಪಗಳಿಂದ ದೇಶದ 10 ಲಕ್ಷ ಬೂತ್ ಮಟ್ಟದ ಅಧಿಕಾರಿಗಳು, 50 ಲಕ್ಷ ಮತಗಟ್ಟೆ ಅಧಿಕಾರಿಗಳು ಮತ್ತು 1 ಲಕ್ಷ ಎಣಿಕೆ ಮೇಲ್ವಿಚಾರಕರು ನಿರಾಶೆಗೊಂಡಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಮೂಲ ಇದನ್ನು ಹೇಗೆ ದೃಢಪಡಿಸುತ್ತಿದೆ?
ಆಯೋಗದೊಂದಿಗೆ ಕೆಲಸ ಮಾಡುವ ಲಕ್ಷಾಂತರ ಜನರು ನಿರಾಶೆಗೊಂಡಿದ್ದರೆ, ಚುನಾವಣಾ ಆಯೋಗ ಏಕೆ ಆ ಬಗ್ಗೆ ನೇರವಾಗಿ ಹೇಳಿಕೆ ನೀಡುವುದಿಲ್ಲ? ಕನಿಷ್ಠಪಕ್ಷ ಆಯೋಗ ತನ್ನ ಲೆಟರ್‌ಹೆಡ್‌ನಲ್ಲಿ ಹೇಳಿಕೆ ನೀಡಬಹುದಿತ್ತು.
ನವೆಂಬರ್ 20, 2024ರಂದು ಮಹಾರಾಷ್ಟ್ರದಲ್ಲಿ ಒಂದೇ ಹಂತದಲ್ಲಿ ಚುನಾವಣೆಗಳು ನಡೆದವು. ಫಲಿತಾಂಶ ನವೆಂಬರ್ 23ರಂದು ಬಂತು. ಅಂದಿನಿಂದ ರಾಹುಲ್ ಗಾಂಧಿ ನಿರಂತರವಾಗಿ ಮಹಾರಾಷ್ಟ್ರ ಚುನಾವಣೆಯ ವಿಷಯ ಎತ್ತುತ್ತಿದ್ದಾರೆ.
2024ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸ್ಪರ್ಧಿಸಿದ 149 ಸ್ಥಾನಗಳಲ್ಲಿ 132 ಸ್ಥಾನಗಳನ್ನು ಗೆದ್ದಿದೆ. ಅಂದರೆ, ಶೇ. 89 ಸ್ಟ್ರೈಕ್ ದರ. ಆದರೆ ಕೇವಲ 5 ತಿಂಗಳ ಹಿಂದೆ ನಡೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಸ್ಟ್ರೈಕ್ ದರ ಕೇವಲ ಶೇ. 32 ಆಗಿತ್ತು.
ಈ ವಿಷಯ ಮರೆತುಹೋಗುತ್ತಿದೆ ಎನ್ನಿಸಿದಾಗೆಲ್ಲ ರಾಹುಲ್ ಗಾಂಧಿ ಅದನ್ನು ಮತ್ತೆ ಪ್ರಸ್ತಾಪಿಸುತ್ತಾರೆ. ಅವರು ಈ ವಿಷಯದ ಬಗ್ಗೆ ಗಂಭೀರವಾಗಿರುವುದು ಸ್ಪಷ್ಟವಾಗಿದೆ. ಅವರು ಇದನ್ನು ಅನುಮಾನಾಸ್ಪದ ಎಂದು ಭಾವಿಸುತ್ತಾರೆ. ಉತ್ತರದ ಅಗತ್ಯವಿದೆ ಎಂಬುದು ಅವರ ಪ್ರತಿಪಾದನೆ. ಹಾಗಾದರೆ ಇಂತಹ ಪರಿಸ್ಥಿತಿಯಲ್ಲಿ ಚುನಾವಣಾ ಆಯೋಗ ಏನು ಮಾಡಬೇಕು? ಸಂಜೆ 5 ಗಂಟೆಯ ನಂತರ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲು ಚುನಾವಣಾ ಆಯೋಗ ಏಕೆ ಒಪ್ಪುವುದಿಲ್ಲ?
ಲೇಖನದಲ್ಲಿ ರಾಹುಲ್ ಗಾಂಧಿ 2024ರ ನವೆಂಬರ್ 20ರ ಸಂಜೆ 5 ಗಂಟೆಯ ನಂತರ ಮತದಾನದ ಶೇಕಡಾವಾರು ಹೆಚ್ಚಳದ ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತಾರೆ.
ಸಂಜೆ 5 ಗಂಟೆಯವರೆಗೆ ಮತದಾನ ಪ್ರಮಾಣ ಶೇ. 58.22 ಎಂದು ಅವರು ಬರೆಯುತ್ತಾರೆ. ಮರುದಿನ ಬೆಳಗ್ಗೆ ಅಂತಿಮ ಅಂಕಿ ಅಂಶ ಬಂದಾಗ ಅದು ಶೇ. 66.05 ಆಯಿತು. ಅಂದರೆ, ಶೇ. 7.83ರಷ್ಟು ಭಾರೀ ಹೆಚ್ಚಳ ಕಂಡುಬಂದಿದೆ. ಈ ಸಂಖ್ಯೆಯಲ್ಲಿನ ಹೆಚ್ಚಳ 76 ಲಕ್ಷ ಮತದಾರರಿಗೆ ಸಮಾನವಾಗಿದೆ. ಇದು ಮಹಾರಾಷ್ಟ್ರದ ಹಿಂದಿನ ವಿಧಾನಸಭಾ ಚುನಾವಣೆಗಳಿಗಿಂತ ದೊಡ್ಡ ಹೆಚ್ಚಳ.
2009ರಲ್ಲಿ ತಾತ್ಕಾಲಿಕ ಮತ್ತು ಅಂತಿಮ ಮತದಾನದ ಶೇಕಡಾವಾರು ನಡುವೆ ಶೇ. 0.50 ವ್ಯತ್ಯಾಸ, 2014ರ ವಿಧಾನಸಭಾ ಚುನಾವಣೆಯಲ್ಲಿ ಶೇ. 1.08 ವ್ಯತ್ಯಾಸ, 2019ರ ವಿಧಾನಸಭಾ ಚುನಾವಣೆಯಲ್ಲಿ ಕೇವಲ ಶೇ. 0.64 ವ್ಯತ್ಯಾಸವಿತ್ತು.
2024ರಲ್ಲಿ, ಅದು ಹಲವು ಪಟ್ಟು ಹೆಚ್ಚು, ಅಂದರೆ ಶೇ. 7.83 ಆಯಿತು. ಸಂಜೆಯಿಂದ ಮರುದಿನ ಬೆಳಗ್ಗೆಯವರೆಗೆ ಮತಗಳು ಹೇಗೆ ಇಷ್ಟೊಂದು ಹೆಚ್ಚಾದವು?
ರಾಹುಲ್ ಗಾಂಧಿ ಫೆಬ್ರವರಿ 3ರಂದು ಲೋಕಸಭೆಯಲ್ಲಿ ಮಹಾರಾಷ್ಟ್ರ ಚುನಾವಣೆಯ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದರು. ಅದರ ನಂತರ, ಫೆಬ್ರವರಿ 7ರಂದು ದಿಲ್ಲಿಯಲ್ಲಿ ದೊಡ್ಡ ಪತ್ರಿಕಾಗೋಷ್ಠಿ ನಡೆಸಿದರು.
‘‘ನಾನು ಈ ಡೇಟಾವನ್ನು ಭಾರತದ ಯುವಜನರಿಗೆ ತೋರಿಸಲು ಬಯಸುತ್ತೇನೆ. ಮಹಾರಾಷ್ಟ್ರದಲ್ಲಿ 5 ವರ್ಷಗಳಲ್ಲಿ ಮತದಾರರ ಪಟ್ಟಿಯಲ್ಲಿ ಸೇರಿಸಲಾದ ಮತದಾರರ ಸಂಖ್ಯೆಗಿಂತ ಐದು ತಿಂಗಳಲ್ಲಿ ಹೆಚ್ಚಿನ ಮತದಾರರು ಸೇರ್ಪಡೆಯಾಗಿದ್ದಾರೆ.
2019ರ ವಿಧಾನಸಭೆ ಮತ್ತು 2024ರ ವಿಧಾನ ಸಭೆ ಚುನಾವಣೆ ನಡುವೆ 32 ಲಕ್ಷ ಮತದಾರರು. 2024ರ ಲೋಕಸಭೆ ಮತ್ತು 2024 ರ ವಿಧಾನಸಭೆ ಚುನಾವಣೆಯ ನಡುವೆ 39 ಲಕ್ಷ ಮತದಾರರು.
ಅಂದರೆ ಹಿಮಾಚಲ ಪ್ರದೇಶದ ಜನಸಂಖ್ಯೆಯಷ್ಟು ಮತದಾರರ ಸೇರ್ಪಡೆಯಾಗಿದೆ. ಸೇರ್ಪಡೆಗೊಂಡಿರುವ ಈ ಹೆಚ್ಚುವರಿ ಮತದಾರರು ಯಾರು? ಅವರು ಎಲ್ಲಿದ್ದರು ಮತ್ತು ಅವರು ಎಲ್ಲಿಂದ ಬಂದರು?’’ ಇದು ಮೊದಲ ಪ್ರಶ್ನೆ.
ಎರಡನೇ ಪ್ರಶ್ನೆ ಮತ್ತು ಬಹಳ ಮುಖ್ಯವಾದ ಪ್ರಶ್ನೆ,
ಸರಕಾರದ ಪ್ರಕಾರ, ಮಹಾರಾಷ್ಟ್ರದ ವಯಸ್ಕ ಜನಸಂಖ್ಯೆ 9.54 ಕೋಟಿ. ಚುನಾವಣಾ ಆಯೋಗದ ಪ್ರಕಾರ, ಮಹಾರಾಷ್ಟ್ರದಲ್ಲಿ 9.7 ಕೋಟಿ ಮತದಾರರಿದ್ದಾರೆ. ಇದರರ್ಥ ಮಹಾರಾಷ್ಟ್ರದಲ್ಲಿ ವಯಸ್ಕ ಜನಸಂಖ್ಯೆಗಿಂತ ಹೆಚ್ಚಿನ ಮತದಾರರಿದ್ದಾರೆ ಎಂದು ಆಯೋಗ ಹೇಳುತ್ತಿದೆ. ಇದು ಹೇಗೆ ಸಾಧ್ಯ? ಎಂದು ಅವರು ಕೇಳಿದ್ದರು.
ಅವರು ತಮ್ಮ ಲೇಖನದಲ್ಲಿ ಬರೆದಿರುವುದು ಇದನ್ನೇ.
ಆದರೆ ರಾಹುಲ್ ಅವರ ಪ್ರಶ್ನೆಗಳನ್ನು ಹಗುರವಾಗಿ ಪರಿಗಣಿಸಲಾಗುತ್ತಿದ್ದು, ಚುನಾವಣಾ ಆಯೋಗ ತನ್ನ ಸಹಿ ಇಲ್ಲದೆ ಆಕ್ರಮಣಕಾರಿ ಉತ್ತರಗಳನ್ನು ನೀಡುತ್ತಿದೆ.







