Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ‘ಅವರು’ ‘ಗೌರಿ’ಯನ್ನು ಯಾಕೆ ಕೊಂದರು?

‘ಅವರು’ ‘ಗೌರಿ’ಯನ್ನು ಯಾಕೆ ಕೊಂದರು?

ಗಿರೀಶ್ ತಾಳಿಕಟ್ಟೆಗಿರೀಶ್ ತಾಳಿಕಟ್ಟೆ29 Jan 2026 11:57 AM IST
share
‘ಅವರು’ ‘ಗೌರಿ’ಯನ್ನು ಯಾಕೆ ಕೊಂದರು?
ಇಂದು ಗೌರಿ ಲಂಕೇಶ್ ಜನ್ಮದಿನ

ಸೆಪ್ಟಂಬರ್ 5, 2017. ಸಂಜೆ ಏಳು ಗಂಟೆಯ ಸಮಯ. ನಾಳೆಯ ಎಡಿಷನ್ಗೆ ಸಿನೆಮಾ ಪುಟದ ಸುದ್ದಿಗಳನ್ನು ಎಡಿಟ್ ಮಾಡುತ್ತಾ ಕುಳಿತಿದ್ದೆ. ಕಂಪ್ಯೂಟರ್ ಕ್ಯಾಬಿನ್ ಸೆಕ್ಷನ್ನೊಳಗೆ ಇಣುಕಿನೋಡಿ, ‘‘ಓಹ್ ಗಿರೀಶ್! ನೀವಿನ್ನೂ ಹೊರಟಿಲ್ವಾ? ನಾನು ಇವತ್ತು ಬೇಗ ಹೋಗಿ, ರಾತ್ರಿ ಮನೆಯಲ್ಲೆ ಆರ್ಟಿಕಲ್ ಎಡಿಟ್ ಮಾಡಿಕೊಂಡು ತರ್ತೀನಿ. ಸ್ವಲ್ಪ tired ಅನ್ನಿಸ್ತಿದೆ’’ ಎಂದರು ಗೌರಿ ಮೇಡಂ. ಪ್ರೂಫ್ ರೀಡಿಂಗ್ಗೆ ಒಂದಷ್ಟು ಲೇಖನಗಳ ಪ್ರಿಂಟ್ಔಟ್ ತೆಗೆದಿಡಲು ಪೆನ್ಡ್ರೈವನ್ನು ಪ್ರಸಾದ್ ಕೈಗಿತ್ತು ಹೊರಟುಹೋದರು. ಸ್ವಲ್ಪ ಸಮಯ ಕಳೆದು ನಾನೂ ಮನೆಯತ್ತ ಹೊರಟೆ. ಮನೆಗೆ ಬಂದು ತಲುಪುವುದರೊಳಗೆ ಮೇಡಂ ಹತ್ಯೆಯಾದ ಸುದ್ದಿ ಟಿ.ವಿ. ಪರದೆಗೆ ಅಪ್ಪಳಿಸಿತ್ತು.

ಅವತ್ತಿನಿಂದಲೂ ನಾನು ಯೋಚಿಸುತ್ತಲೇ ಇದ್ದೇನೆ, ಆ ಹಂತಕರು ಗೌರಿ ಮೇಡಂ ಅವರನ್ನು ಯಾಕೆ ಕೊಂದರು? ಪನ್ಸಾರೆ, ದಾಭೋಲ್ಕರ್, ಕಲಬುರ್ಗಿ ತರಹದ ಚಿಂತಕರ ಹತ್ಯಾ ಸರಣಿಯ ಭಾಗವಾಗಿ ನಡೆದ ಕಗ್ಗೊಲೆ ಅದು ಎನ್ನುವುದರಲ್ಲಿ ಅನುಮಾನವಿಲ್ಲ. ಪೊಲೀಸರ ತನಿಖೆಯೂ ಅದನ್ನು ದೃಢಪಡಿಸಿದೆ. ಆದರೆ ಆ ಕೊಲೆಗೆ ಗೌರಿಯವರನ್ನು ಯಾಕೆ ಆಯ್ಕೆ ಮಾಡಿಕೊಂಡರು? ಈ ಪ್ರಶ್ನೆ ಕಾಡಲು ಕಾರಣವಿದೆ, ಗೌರಿಯವರಿಗಿಂತ ತೀಕ್ಷ್ಣವಾಗಿ ಮನುವಾದದ ಜಾತಿವ್ಯವಸ್ಥೆಯನ್ನು ಟೀಕಿಸುತ್ತಿದ್ದವರು, ಕೋಮುವಾದವನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದವರು, ಕೋಮುಸಾಮರಸ್ಯಕ್ಕೆ ಹೋರಾಡುತ್ತಿದ್ದವರು ಬಹಳಷ್ಟು ಚಿಂತಕರಿದ್ದರು. ಅಂತಹವರ ಪಟ್ಟಿಯೂ ಹಂತಕರ ಬಳಿ ಇತ್ತೆಂದು ತನಿಖೆ ತಿಳಿಸಿದೆ. ಅವರೆಲ್ಲರನ್ನು ಪಕ್ಕಕ್ಕೆ ಸರಿಸಿ, ತಮ್ಮ ಹತ್ಯಾಕಾಂಡಕ್ಕೆ ಗೌರಿಯನ್ನೇ ಆಯ್ಕೆ ಮಾಡಿಕೊಳ್ಳಲು, ಅಂತದ್ಯಾವ ಬೆದರಿಕೆ ಗೌರಿಯವರಿಂದ ಹಂತಕರಿಗೆ ಎದುರಾಗಿತ್ತು? ಇದು ನನ್ನನ್ನು ಕಾಡುತ್ತಿದ್ದ ಪ್ರಶ್ನೆ.

ಧರ್ಮ ಮತ್ತು ಸೈದ್ಧಾಂತಿಕ ವಿರೋಧದ ಹೆಸರಿನಲ್ಲಿ ನಡೆದ ಹತ್ಯೆಗಳಾದರೂ ಇವುಗಳ ಹಿಂದೆ ಒಂದು ಯೋಜಿತ political motivation ಇರುವುದನ್ನು ನಾವು ಗ್ರಹಿಸಬಹುದು. ಬಲಪಂಥೀಯ ರಾಜಕಾರಣದ ವಿಸ್ತರಣೆಗೆ ಪನ್ಸಾರೆ, ದಾಭೋಲ್ಕರ್, ಕಲಬುರ್ಗಿಯವರು ತಮ್ಮ ಕೆಲಸಗಳ ಮೂಲಕ ಒಂದಿಲ್ಲೊಂದು ರೀತಿಯಲ್ಲಿ ಅಡ್ಡಿಯಾಗುತ್ತಾ ಬಂದಿದ್ದರು. ಧರ್ಮವನ್ನು ತನ್ನ ರಾಜಕೀಯ ಅಡಿಪಾಯವಾಗಿಸಿಕೊಂಡಿರುವ ಬಲಪಂಥೀಯ ರಾಜಕಾರಣ, ಅದನ್ನು ವಿಸ್ತರಿಸಲು ಬಳಸಿಕೊಳ್ಳುತ್ತಾ ಬಂದಿರೋದು ಸೋ-ಕಾಲ್ಡ್ ದೇವಮಾನವರು ಮತ್ತು ಕೆಲವು ಸ್ವಾಮೀಜಿಗಳನ್ನು. ದಾಬೋಲ್ಕರ್ ಇಂತಹ ದೇವಮಾನವರ ಮೌಢ್ಯಗಳ ವಿರುದ್ಧ ಸಮರಕ್ಕೆ ನಿಂತಿದ್ದರು. ಮೌಢ್ಯ ಪ್ರತಿಬಂಧಕ ಕಾಯ್ದೆಯ ಜಾರಿಗೆ ಜನಾಭಿಪ್ರಾಯ ರೂಪಿಸಿ, ಇಂತಹ ಸ್ವಘೋಷಿತ ‘ದೇವರು’ಗಳ ಪ್ರಭಾವವನ್ನು ಸಮಾಜದಲ್ಲಿ ತಗ್ಗಿಸಲು ಮುಂದಾಗಿದ್ದರು. ಪರೋಕ್ಷವಾಗಿ ಇದು ಬಲಪಂಥೀಯ ರಾಜಕಾರಣದ ಬುಡವನ್ನೇ ಅಲ್ಲಾಡಿಸಲಿತ್ತು. ಅಷ್ಟರಲ್ಲಿ ಅವರು ಕೊಲೆಯಾಗಿ ಹೋದರು. ಅವರ ಹತ್ಯೆಯಾದ ನಂತರ ಮಸೂದೆ ಕಾಯ್ದೆಯಾಗಿ ಜಾರಿಗೆ ತರಲಾಯಿತಾದರೂ, ಅಷ್ಟರಲ್ಲಾಗಲೇ ಅದನ್ನು ಸಾಕಷ್ಟು ತಿದ್ದುಪಡಿಗಳೊಂದಿಗೆ ದುರ್ಬಲಗೊಳಿಸಲಾಗಿತ್ತು.

ಇನ್ನು, ಕಾರ್ಮಿಕ ಸಂಘಟನೆಯ ನೇತಾರರಾಗಿದ್ದ ಗೋವಿಂದ ಪನ್ಸಾರೆಯವರು ‘ಶಿವಾಜಿ ಕೋನ್ ಹೋತಾ?’ ಎಂಬ ಕೃತಿಯ ಮೂಲಕ ಶಿವಾಜಿ ಮಹಾರಾಜರ ನೈಜ ಜಾತ್ಯತೀತ ರೂಪವನ್ನು ಜನರ ಮುಂದಿಡಲು ಆಂದೋಲನಶೀಲರಾಗಿದ್ದರು. ಶಿವಾಜಿಯನ್ನು ‘ಹಿಂದುತ್ವದ ಐಕಾನ್’ (ಹಿಂದೂ ಧರ್ಮದ ಅಲ್ಲ) ರೀತಿ ಬಿಂಬಿಸಿ, ಸಮಾಜದಲ್ಲಿ ಮುಸ್ಲಿಮ್ ದ್ವೇಷವನ್ನು ಬಿತ್ತಲು ಒಂದು ಅಸ್ತ್ರವಾಗಿ ಬಳಸಿಕೊಳ್ಳಲು ಬಲಪಂಥೀಯ ರಾಜಕಾರಣ ಮುಂದಾಗಿತ್ತು. ಅದಕ್ಕೆ ಪನ್ಸಾರೆ ತಡೆಗೋಡೆಯಾಗಿ ನಿಂತಿದ್ದರು. ತಮ್ಮ ಕಾಯಕದಲ್ಲಿ ಯಶಸ್ವಿಯಾಗುವ ಮೊದಲೇ ಪನ್ಸಾರೆಯವರ ಹತ್ಯೆಯಾಯಿತು.

ಅದೇ ರೀತಿ ಎಂ.ಎಂ. ಕಲಬುರ್ಗಿಯವರು ವಚನ ಚಳವಳಿ ಮತ್ತು ಲಿಂಗಾಯತ ಧರ್ಮದ ಸಂಶೋಧನೆಯ ಮೂಲಕ ಕನ್ನಡದ ಹೊಸಪೀಳಿಗೆಯವರಲ್ಲಿ ಬಸವಣ್ಣನವರ ನಿಜ ಆಶಯಗಳನ್ನು ಮರುಸ್ಥಾಪಿಲು ಕಾರ್ಯಮಗ್ನರಾಗಿದ್ದರು. ಕರ್ನಾಟಕದ ಮಟ್ಟಿಗೆ ಪ್ರಭಾವಿ ಎನ್ನಬಹುದಾದ ‘ಲಿಂಗಾಯತ ಜಾತಿ ರಾಜಕಾರಣವನ್ನು’ ತಮ್ಮ ಅಡಿಪಾಯವಾಗಿಸಿಕೊಂಡಿದ್ದ ಬಲಪಂಥೀಯ ರಾಜಕಾರಣಕ್ಕೆ ಕಲಬುರ್ಗಿಯವರ ಸಂಶೋಧನೆ ದೊಡ್ಡ ಹಾನಿ ಉಂಟುಮಾಡುವ ಸಾಧ್ಯತೆಗಳಿದ್ದವು. ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ನಡೆದಿದ್ದ ಹೋರಾಟದ ಕೂಗಿಗೆ ಅವರ ಸಂಶೋಧನಾ ಸಾಕ್ಷ್ಯಗಳು ಬಲ ತುಂಬಲಿವೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಅವರು ಕೂಡಾ ಹತ್ಯೆಯಾದರು.

ಆದರೆ ಗೌರಿ ಮೇಡಂ, ಬಲಪಂಥೀಯ ರಾಜಕಾರಣಕ್ಕೆ ತತ್ಕ್ಷಣದಲ್ಲಿ ಅಪಾಯವನ್ನು ಉಂಟುಮಾಡ ಬಲ್ಲಂತಹ ಯಾವುದೇ ನಿರ್ದಿಷ್ಟ ಕಾರ್ಯಸೂಚಿಯನ್ನು ಕೈಗೆತ್ತಿಕೊಂಡಿರಲಿಲ್ಲ. ತಂದೆಯ ಪರಂಪರೆಯನ್ನು ಮುಂದುವರಿಸಲು ಒಂದು ಪತ್ರಿಕೆ ನಡೆಸುತ್ತಿದ್ದರು. ಸೈದ್ಧಾಂತಿಕವಾಗಿ ಬಲಿಷ್ಠವಾಗಿದ್ದರೂ, ವ್ಯಾವಹಾರಿಕವಾಗಿ ಪತ್ರಿಕೆ ಸೊರಗಿತ್ತು. ಸರ್ಕ್ಯುಲೇಷನ್ ಸಂಖ್ಯೆ ಕುಸಿದಿತ್ತು. ವರಮಾನ ಇಳಿಕೆಯಾಗಿತ್ತು. ನಮ್ಮಂತಹ ಸಿಬ್ಬಂದಿಗೆ ಸಂಬಳ ಕೊಡಲು ತಮ್ಮ ಎಲ್ಐಸಿ ನಿಧಿಯ ಮೊರೆ ಹೋಗಬೇಕಾದ ಅನಿವಾರ್ಯತೆ ಅವರಿಗೆ ಬಂದಿತ್ತು. ಅಬ್ಬರಿಸಿ ಬೊಬ್ಬಿರಿಯುತ್ತಿದ್ದ ಬಲಪಂಥೀಯ ತೆಕ್ಕೆಯ ಮೀಡಿಯಾಗಳಿಗೆ ಹೋಲಿಸಿದರೆ ‘ಗೌರಿ ಲಂಕೇಶ್ ಪತ್ರಿಕೆ’ ತಲುಪಬಹುದಿದ್ದ ಜನಪ್ರಮಾಣ ಸಣ್ಣದು. ಇನ್ನು ಬೀದಿ ಹೋರಾಟಗಳು ಕೂಡಾ ತಮ್ಮ ಪ್ರಭಾವ ಕಳೆದುಕೊಳ್ಳಲಾರಂಭಿಸಿದ್ದವು. ಪ್ರಗತಿಪರ ವಲಯದ ಪರಸ್ಪರ ಮುನಿಸುಗಳು, ಪ್ರತಿಷ್ಠೆಗಳು, ಸಂಘಟನೆಗಳ ವಿಘಟನೆಗಳು ಇದಕ್ಕೆ ಕಾರಣ. ಪ್ರತಿಭಟನೆಗಳ ಮೌಲ್ಯ ಉಳಿದಿತ್ತಾದರೂ ಗಾತ್ರ ಮತ್ತು ತಾರ್ಕಿಕ ಅಂತ್ಯಕಾಣಿಸುವ ಬದ್ಧತೆ ಕ್ಷೀಣಿಸಿತ್ತು. ‘ಟೌನ್ಹಾಲ್ ಪ್ರತಿಭಟನಾಕಾರರು’ ಎಂದು ಸ್ವತಃ ತಾವೇ ಲೇವಡಿ ಮಾಡುತ್ತಿದ್ದ ಬಲಪಂಥೀಯರು ಆ ಹೋರಾಟಗಳ ಕಾರಣಕ್ಕೆ ಗೌರಿಯವರನ್ನು ಟಾರ್ಗೆಟ್ ಮಾಡಿಕೊಂಡರು ಎಂದು ಅನ್ನಿಸುವುದಿಲ್ಲ.

ಹಾಗಾದರೆ, ಗೌರಿಯವರನ್ನು ‘ಅವರು’ ಯಾಕೆ ಆಯ್ದುಕೊಂಡರು?

ಭಿತ್ತಿಪತ್ರ ಹಿಡಿದು ಘೋಷಣೆ ಕೂಗುವ ಹೋರಾಟಗಾರ್ತಿಯಾಗಿ ಅಥವಾ ತೀಕ್ಷ್ಣ ವಿಶ್ಲೇಷಣೆಗಳನ್ನು ಪ್ರಕಟಿಸುವ ಒಬ್ಬ ಸಂಪಾದಕಿಯಾಗಿ ತನ್ನನ್ನು ತೆತ್ತುಕೊಳ್ಳುವುದಕ್ಕಿಂತ ಹೆಚ್ಚಾಗಿ ತಾನು ಮಾಡಬೇಕಿರುವ ಕೆಲಸ ಯಾವುದು ಅನ್ನುವುದನ್ನು ಅವರು ಅರ್ಥ ಮಾಡಿಕೊಂಡಿದ್ದರು. ಅದು ಬೆಸೆಯುವ ಕೆಲಸ!

ಧರ್ಮದ ಹೆಸರಿನಲ್ಲಿ ಬಲಪಂಥೀಯ ರಾಜಕಾರಣ ಇಷ್ಟು ಪ್ರಬಲವಾಗಿ ಬೆಳೆಯಲು ಜನರ ‘ಬ್ರೈನ್ವಾಶ್’ ಮಾತ್ರ ಕಾರಣವಲ್ಲ; ಅದಕ್ಕೆ ಪ್ರತಿರೋಧ ಒಡ್ಡಬೇಕಿದ್ದ ಪ್ರಗತಿಪರ ವಲಯದಲ್ಲಿನ ಒಗ್ಗಟ್ಟಿನ ಕೊರತೆಯೂ ಪ್ರಮುಖ ಲೋಪ ಎಂದು ಗೌರಿ ಮನಗಂಡಿದ್ದರು. ವ್ಯಕ್ತಿ ಭಿನ್ನಾಭಿಪ್ರಾಯದ ಕಾರಣಕ್ಕೋ, ಪರಸ್ಪರ ಪ್ರತಿಷ್ಠೆಗಳ ಕಾರಣಕ್ಕೋ, ವಿಚಾರ ಸಂಘರ್ಷಗಳ ಕಾರಣಕ್ಕೋ ಒಡೆದು ಛಿದ್ರಛಿದ್ರಗೊಳ್ಳುತ್ತಿರುವ ಪ್ರಜ್ಞಾವಂತ ಸಮಾಜ ಮತ್ತು ಸಂಘಟನೆಗಳನ್ನು ಬೆಸೆದು ಹೊಸೆಯದ ಹೊರತು ಕೋಮುವಾದವನ್ನು ಹಿಮ್ಮೆಟ್ಟಿಸಲು ಸಾಧ್ಯವಿಲ್ಲ ಎಂದು ಅರಿತುಕೊಂಡಿದ್ದರು. ತಮ್ಮ ಸಂಪಾದಕೀಯವೊಂದರಲ್ಲಿ ‘‘ಹಸಿರು (ರೈತ ಚಳವಳಿ), ನೀಲಿ (ದಲಿತ ಚಳವಳಿ) ಮತ್ತು ಕೆಂಪು (ಶ್ರಮಿಕ ಚಳವಳಿ) ಬಣ್ಣಗಳು ಒಗ್ಗೂಡಿ ಹೋರಾಟಕ್ಕೆ ಇಳಿಯದಿದ್ದರೆ ಈ ದೇಶಕ್ಕೆ ಭವಿಷ್ಯವಿಲ್ಲ’’ ಎಂದು ಅಭಿಪ್ರಾಯಿಸಿದ್ದ ಅವರು, ಅದನ್ನು ಸಾಧಿಸಲು ಏನೆಲ್ಲಾ ಮಾಡಬಹುದೋ ಅದನ್ನು ಮಾಡಲು ಮುಂದಾಗಿದ್ದರು. ಸಾಮುದಾಯಿಕ ಒಳಿತಿಗಾಗಿ ತಮ್ಮ ವೈಯಕ್ತಿಕ ಮನಸ್ತಾಪಗಳನ್ನು ಬದಿಗಿರಿಸಿ ಒಗ್ಗೂಡೋಣ ಎಂಬ ಆಶಯದೊಂದಿಗೆ ಎಲ್ಲರನ್ನು ಎಡತಾಕುವ ಪ್ರಯತ್ನಕ್ಕೆ ಮುಂದಾದರು. ಹೊಸ ಪೀಳಿಗೆಯ ಯುವಕರಲ್ಲಿ ಅವರಿಗೆ ಅತೀವ ಭರವಸೆಯಿತ್ತು. ಎಲ್ಲಾ ಧಾರೆಯವರಿಗೆ ಅವಕಾಶ ಕೊಟ್ಟು ಪ್ರೋತ್ಸಾಹಿಸುವ ಮೂಲಕ, ಅವರನ್ನು ಪರಸ್ಪರ ಬೆಸೆಯುವ ಕಾಯಕದಲ್ಲಿ ತೊಡಗಿಸಿಕೊಂಡರು. ಇವತ್ತಿಗೂ ಅವರ ಫೇಸ್ಬುಕ್ ಅಕೌಂಟ್ನತ್ತ ಕಣ್ಣುಹಾಯಿಸಿದರೆ, ಅಲ್ಲಿ ತಾವು ಬರೆದು ಪೋಸ್ಟಿಸಿದ್ದಕ್ಕಿಂತಲೂ ಬೇರೆಯವರು ಬರೆದ ವೈಚಾರಿಕ ಮತ್ತು ಆಸಕ್ತಿಕರ ಪೋಸ್ಟ್ಗಳನ್ನು ಅವರು ಶೇರ್ ಮಾಡಿರುವುದು ನಮಗೆ ಗೋಚರಿಸುತ್ತದೆ. ಅವರಲ್ಲಿ ಬಹುತೇಕರು ಯುವ ಬರಹಗಾರ/ಗಾರ್ತಿಯರು. ಗಣ್ಯಸ್ಥಾನಕ್ಕೆ ಏರಿದ ಬಹಳಷ್ಟು ಹಿರಿಯರು ಬೇರೆಯವರ ಪೋಸ್ಟ್ಗಳಿಗೆ (ಅದೂ ತಮಗಿಂತ ಕಿರಿಯರ) ಒಂದು ಲೈಕ್ ಕೊಡುವುದೂ ಕಷ್ಟ. ಅಂತಹದ್ದರಲ್ಲಿ ಸೋಷಿಯಲ್ ಮೀಡಿಯಾದಲ್ಲಿ ತೊಡಗಿಸಿಕೊಳ್ಳಲು ತನಗೆ ಸಿಗುತ್ತಿದ್ದ ಅತ್ಯಲ್ಪ ಅವಧಿಯನ್ನು ಹೀಗೆ ಬೇರೆಯವರ ಪೋಸ್ಟ್ ಶೇರ್ ಮಾಡಿ ಪ್ರೋತ್ಸಾಹಿಸುವುದಕ್ಕೆ ಮೀಸಲಿಡುತ್ತಿದ್ದರು. ಇದು ಕೇವಲ ನಿದರ್ಶನವಷ್ಟೆ. ಇದೊಂದೇ ಅವರ ಬೆಸುಗೆಯ ಅಥವಾ ಒಗ್ಗೂಡಿಸುವ ಗುಣದ ಮಾನದಂಡವಲ್ಲ.

ಬಹುಶಃ ಅವರ ಹತ್ಯೆಯನ್ನು ಪ್ರತಿರೋಧಿಸಿ ಬೀದಿಗಿಳಿದ ಜನಸಮೂಹದ ವೈವಿಧ್ಯತೆಯನ್ನು ಗಮನಿಸಿದವರಿಗೆ ಗೌರಿ ಹೇಗೆ ಎಲ್ಲರನ್ನೂ ತಾಕಿ, ಬೆಸೆಯುವ ಕಾಯಕದಲ್ಲಿ ಸದ್ದಿಲ್ಲದೆ ತೊಡಗಿಸಿಕೊಂಡಿದ್ದರು ಎಂಬುದು ಅರ್ಥವಾಗುತ್ತದೆ. ಉತ್ತರ ಭಾರತದಲ್ಲಿ ಸದ್ದು ಮಾಡುತ್ತಿದ್ದ ಜಿಗ್ನೇಶ್ ಮೇವಾನಿ, ಕನ್ಹಯ್ಯ ಕುಮಾರ್ ತರಹದವರನ್ನು ತನ್ನ ದತ್ತು ಮಕ್ಕಳೆಂದು ಕರ್ನಾಟಕಕ್ಕೆ ಕರೆತಂದು ಅವರ ಮೂಲಕ ಇಲ್ಲಿನ ಯುವ ಪರಿಸರದಲ್ಲಿ ಸಂಚಲನ ಮೂಡಿಸಲು ಯತ್ನಿಸಿದ್ದಾಗಲಿ; ತನ್ನ ತಂದೆ ಲಂಕೇಶರ ಜೊತೆ ಬೇರೆಬೇರೆ ಕಾರಣಗಳಿಂದ ಮನಸ್ತಾಪ ಹೊಂದಿದ್ದ ಯು.ಆರ್. ಅನಂತಮೂರ್ತಿ, ಚಂಪಾ, ಪೂರ್ಣಚಂದ್ರ ತೇಜಸ್ವಿಯವರಂತಹ ಮೇರು ಚಿಂತಕರ ಬಳಿ ಸಾರಿ ಅವರನ್ನು ಮತ್ತೆ ಪತ್ರಿಕೆಯತ್ತ ಸೆಳೆಯಲು, ಅವರ ಹಿರಿತನದ ಅನುಭವವನ್ನು ಗೌರವಿಸಲು ಮುಂದಾಗಿದ್ದಾಗಲಿ; ಸಶಸ್ತ್ರ ಹೋರಾಟ ತ್ಯಜಿಸಿ ಮುಖ್ಯವಾಹಿನಿ ಹೋರಾಟಕ್ಕೆ ಮರಳಲು ಮುಂದಾಗಿದ್ದ ನಕ್ಸಲರ ಪುನರ್ವಸತಿಗೆ ಕಾಳಜಿ ವಹಿಸಿದ್ದಾಗಲಿ ಎಲ್ಲವೂ ಅವರ ಬೆಸೆಯುವಿಕೆ ಗುಣದ ಗೋಚರ ಲಕ್ಷಣಗಳು.

ಯಾವುದೇ ನಿರ್ದಿಷ್ಟ ನೀಲನಕ್ಷೆ ಇಲ್ಲದೆ, ಒಂದು ಸದಾಶಯದೊಂದಿಗೆ ಶುರುವಾದ ಅವರ ಬೆಸೆಯುವಿಕೆಯ ಪ್ರಯತ್ನ ಕನ್ನಡದ ಪ್ರಗತಿಪರ ವಲಯದಲ್ಲಿ, ಅದರಲ್ಲೂ ಯುವಸಮೂಹದಲ್ಲಿ ಒಗ್ಗೂಡುವಿಕೆಗೆ ಸಾಕ್ಷಿಯಾಯಿತು. ಬಹುಶಃ ಹತ್ಯಾವಾದಿಗಳಿಗೆ ಗೌರಿಯವರಲ್ಲಿ ಕಂಡ Threat ಇದೇ ಇರಬಹುದು. ಪ್ರಜ್ಞಾವಂತ ಪ್ರಗತಿಪರ ಸಮುದಾಯ ತಮ್ಮ ಭಿನ್ನಾಭಿಪ್ರಾಯಗಳನ್ನು ಬದಿಗಿರಿಸಿ ಒಂದುಗೂಡಿದರೆ ತಮ್ಮ ತಂತ್ರಗಾರಿಕೆಗಳು ಫಲಿಸದು ಎಂಬ ಆತಂಕ ಬಲಪಂಥೀಯ ರಾಜಕಾರಣವನ್ನು ಕಾಡಿದ್ದರಿಂದಲೇ, ಆ ಕಾಯಕದಲ್ಲಿ ತೊಡಗಿಸಿಕೊಂಡಿದ್ದ ಗೌರಿಯವರನ್ನು ಹಂತಕರು ಟಾರ್ಗೆಟ್ ಮಾಡಿಕೊಂಡಿದ್ದಿರಬಹುದು.

ಗೌರಿಯವರ ಬಗ್ಗೆ ಯಾರ್ಯಾರಿಗೆ ಏನೇನು ಅಭಿಪ್ರಾಯವಿದೆಯೋ? ಎಷ್ಟೆಷ್ಟು ಮಾತ್ರ ಗೌರವ- ಅಭಿಮಾನ-ಟೀಕೆಗಳಿವೆಯೋ? ಎಂಬುದು ನಮಗೆ ಮುಖ್ಯವಾಗಬಾರದು. ಯಾಕೆಂದರೆ ಈ ಕ್ಷಣಕ್ಕೆ ಗೌರಿ ಒಂದು ನೆಪ ಮಾತ್ರ. ಆದರೆ ಪ್ರಗತಿಪರ ಸಮು ದಾಯದ ಪ್ರಜ್ಞಾವಂತ ಸದಸ್ಯನಾಗಿ/ಸದಸ್ಯೆಯಾಗಿ ಗೌರಿ ಯೋಚಿಸಿದಂತೆ ನಾನೂ ಯೋಚಿಸುವುದು ಎಷ್ಟು ಅಗತ್ಯ? ನಮ್ಮ ಪ್ರಗತಿಪರ ವಲಯದಲ್ಲಿನ ಒಗ್ಗಟ್ಟಿನ ತುರ್ತೇನು? ಎಂಬ ಪ್ರಶ್ನೆಯನ್ನು ನಮ್ಮ ಮುಂದಿರಿಸಿಕೊಳ್ಳಬೇಕಿದೆ. ಸಿಗುವ ಉತ್ತರದಲ್ಲಿ ಗೌರಿಯವರ ಆಶಯ ಉಸಿರಾಡುತ್ತಿರುತ್ತದೆ.

Tags

Gauri Lankesh
share
ಗಿರೀಶ್ ತಾಳಿಕಟ್ಟೆ
ಗಿರೀಶ್ ತಾಳಿಕಟ್ಟೆ
Next Story
X