ಚುನಾವಣಾ ಆಯೋಗದ ಬಗ್ಗೆ ಆರೋಪವೆತ್ತಿದ್ದ ರಾಹುಲ್ ಗಾಂಧಿಯವರಿಗೆ ಪತ್ರ ಬರೆದ ಆ 272 ಮಂದಿ ‘ದೊಡ್ಡವರು’ ಆಯೋಗವನ್ನೇ ಏಕೆ ಪ್ರಶ್ನಿಸಲಿಲ್ಲ?

ಪ್ರಶ್ನಿಸುವವರ ವಿರುದ್ದ, ಸತ್ಯಕ್ಕಾಗಿ ಒತ್ತಾಯಿಸುತ್ತಿರುವವರ ವಿರುದ್ಧ ಮತ್ತೊಂದು ವರಸೆ ಶುರುವಾಗಿದೆ.
ಚುನಾವಣಾ ಆಯೋಗದ ಬಗ್ಗೆ ತಕರಾರು ತೆಗೆದಿರುವುದಕ್ಕೆ 272 ಜನರು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಗೆ ಪತ್ರ ಬರೆದಿದ್ದಾರೆ.
ಈ 272 ಮಂದಿ ಚುನಾವಣಾ ಆಯೋಗ ನಿಜವಾಗಿಯೂ ಏನು ಮಾಡುತ್ತಿದೆ ಎಂದು ಕೇಳಲಿಲ್ಲ.
ನೀವು ಭಾರತೀಯ ಪ್ರಜಾಪ್ರಭುತ್ವದ ಮೇಲೆ ದಾಳಿ ಮಾಡುತ್ತಿದ್ದೀರಿ ಎಂದು ಯಾರ ಬಗ್ಗೆ ತಕರಾರೆತ್ತಬೇಕಿತ್ತೋ ಅದನ್ನು ಈ 272 ಮಂದಿ ಮಾಡಲಿಲ್ಲ.
ಆದರೆ ನಮ್ಮ ಪ್ರಜಾಪ್ರಭುತ್ವ ಮತ್ತು ಅದರ ಸಂಸ್ಥೆಗಳ ಮೇಲೆ ದಾಳಿ ನಡೆಯುತ್ತಿರುವುದನ್ನು ಪ್ರಶ್ನಿಸುತ್ತಿರುವ ರಾಹುಲ್ ಗಾಂಧಿಯನ್ನು ಇವರು ಪ್ರಶ್ನಿಸುತ್ತಿದ್ದಾರೆ.
ರಾಹುಲ್ ಗಾಂಧಿ ಪ್ರಜಾಪ್ರಭುತ್ವಕ್ಕೆ ಬೆದರಿಕೆಯಾಗಿದ್ದಾರೆ ಎಂದು ಆರೋಪಿಸುತ್ತಿದ್ದಾರೆ.
ದೊಡ್ಡ ಮನುಷ್ಯರೆನ್ನಿಕೊಂಡಿರುವ ಈ 272 ಮಂದಿ ಈಗ ಮಾಡಿರುವ ಕೆಲಸವನ್ನು ಬಿಜೆಪಿ ಐಟಿ ಸೆಲ್ ಮಂದಿ ದಿನವೂ ಮಾಡುತ್ತಿದ್ದಾರೆ.
ಈ ಪತ್ರ ಬರೆಸಲು ಈ 272 ಜನರನ್ನು ಏಕೆ ಮುಂದಕ್ಕೆ ತರಬೇಕಾಯಿತು? ಮತ್ತು ಈ ದೊಡ್ಡ ಮನುಷ್ಯರೆಲ್ಲ ನಿಜವಾಗಿಯೂ ಯಾರು?
ಕಾಂಗ್ರೆಸ್ ಪಕ್ಷದ ವಕ್ತಾರೆ ಸುಪ್ರಿಯಾ ಶ್ರಿನೇತ್ ಮತ್ತು ಕೆಲವು ಪತ್ರಕರ್ತರು ಟ್ವಿಟರ್‌ನಲ್ಲಿ ಈ 272 ಮಂದಿ ದೊಡ್ಡ ಮನುಷ್ಯರ ಬಗ್ಗೆ ಮಾಹಿತಿ ಪೋಸ್ಟ್ ಮಾಡಿದ್ದಾರೆ.
ರಾಹುಲ್ ಗಾಂಧಿಗೆ ಪತ್ರ ಬರೆದ 272 ಜನರಲ್ಲಿ ಅನೇಕರ ದಾಖಲೆಗಳು ಬಯಲಾಗಿವೆ.
ಭ್ರಷ್ಟಾಚಾರದಿಂದ ಹಿಡಿದು ತೀರಾ ಆಕ್ಷೇಪಾರ್ಹ ವಿಷಯ ಪೋಸ್ಟ್ ಮಾಡುವವರೆಗೂ ಅವರ ಜಾತಕಗಳು ಬಯಲಿಗೆ ಬಿದ್ದಿವೆ.
ಅವರಲ್ಲಿ ಒಬ್ಬರು ಯೋಗೇಶ್ ಗುಪ್ತಾ. ಅವರ ಟ್ವಿಟರ್ ಹ್ಯಾಂಡಲ್‌ನಿಂದ ಪ್ರಕಟವಾಗಿರುವ ಆಕ್ಷೇಪಾರ್ಹ ಪೋಸ್ಟ್ ಅನ್ನು ಸುಪ್ರಿಯಾ ಶ್ರಿನೇತ್ ಬಹಿರಂಗಪಡಿಸಿದಾಗ, ಯೋಗೇಶ್ ಗುಪ್ತಾ ತಮ್ಮ ಹ್ಯಾಂಡಲ್ ಅನ್ನೇ ಡಿಲೀಟ್ ಮಾಡಿದ್ದಾರೆ.
ಯೋಗೇಶ್ ಗುಪ್ತಾ ಮಾಡಿದ್ದ ಟ್ವೀಟ್‌ಗಳು ತೀರಾ ಕೀಳು ಅಭಿರುಚಿಯದ್ದಾಗಿದ್ದವು.
ಇನ್ನು ಹತ್ತು ಜನರು ನಿವೃತ್ತಿ ನಂತರ ಬಿಜೆಪಿ ಸೇರಿದವರಾಗಿದ್ದಾರೆ.
ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾಯಾಧೀಶ ಆದರ್ಶ್ ಕುಮಾರ್ ಗೋಯೆಲ್, ಮಾಜಿ ರಾ ಮುಖ್ಯಸ್ಥ ಸಂಜೀವ್ ತ್ರಿಪಾಠಿ, ಮಾಜಿ ಐಎಎಸ್ ಅಧಿಕಾರಿ ರಾಜಗೋಪಾಲ್ ನಾಯ್ಡು, ಮಾಜಿ ರಾಯಭಾರಿ ಲಕ್ಷ್ಮಿ ಪುರಿ, ಮಾಜಿ ರಾಯಭಾರಿ ಯೋಗೇಶ್ ಗುಪ್ತಾ ಇವರಲ್ಲದೆ ಕೆಲವು ಅಧಿಕಾರಿಗಳು, ಮಿಲಿಟರಿ ಮತ್ತು ಪೊಲೀಸ್ ಇಲಾಖೆಯ ಹಲವರ ಬಗ್ಗೆ ಮಾಹಿತಿ ಹೊರಬರುತ್ತಿದೆ.
ಕಳಕಳಿಯುಳ್ಳ ನಾಗರಿಕರು, ಬುದ್ಧಿಜೀವಿಗಳು ಮತ್ತು ಸಿವಿಲ್ ಸೊಸೈಟಿ ಮಂದಿ ಎಂದು ನಟಿಸಿ ರಾಹುಲ್ ಗಾಂಧಿಗೆ ಪತ್ರ ಬರೆದಿರುವ ಈ ದೊಡ್ಡ ಮನುಷ್ಯರ ಅಸಲೀ ಕಥೆಗಳನ್ನು ಕಾಂಗ್ರೆಸ್ ಬಯಲು ಮಾಡಿದೆ.
ಪ್ರಶ್ನೆಗಳನ್ನು ಎತ್ತಿರುವ ಬರಹಗಾರರು, ಪತ್ರಕರ್ತರು, ಸಿನೆಮಾ ನಿರ್ಮಾಪಕರು ಮತ್ತು ಇತಿಹಾಸಕಾರರನ್ನು 2014ರಿಂದಲೂ ದೇಶದ್ರೋಹಿಗಳು ಎಂದು ಕರೆಯಲಾಗುತ್ತಿದೆ.
ಮಡಿಲ ಮೀಡಿಯಾದ ಅರಚಾಡುವ ಆಂಕರ್‌ಗಳು ಸಹ ಅಂಥ ಪತ್ರಕರ್ತರು, ಬರಹಗಾರರು ಮತ್ತು ಇತಿಹಾಸಕಾರರಿಗೆ ಸವಾಲು ಹಾಕುತ್ತಿದ್ದಾರೆ.
ಪ್ರಶ್ನೆ ಕೇಳುವ ಪತ್ರಕರ್ತರನ್ನು ದೇಶದ್ರೋಹಿಗಳೆಂದು ಕರೆಯುವುದು ತಪ್ಪು ಎಂದು ಈ 272 ಜನರಲ್ಲಿ ಒಬ್ಬರಾದರೂ ಹೇಳಬಲ್ಲರೇ?
ರಾಹುಲ್ ಗಾಂಧಿಗೆ ಪತ್ರ ಬರೆದ 272 ಜನರಲ್ಲಿ ಒಬ್ಬರಾದ ಬಿ.ಕೆ. ಸಿಂಗ್ ಎನ್ನುವವರ ಬಗ್ಗೆ ವಿಷಯ ಬಯಲಾಗಿದೆ.
ಅವರು ಮಾಜಿ ಭಾರತೀಯ ಅರಣ್ಯ ಸೇವಾ ಅಧಿಕಾರಿ ಮತ್ತು ಅಕ್ರಮ ಆಸ್ತಿ ಆರೋಪ ಎದುರಿಸುತ್ತಿದ್ದವರು.
ಈ ಮಹಿತಿಯನ್ನು ಸುಪ್ರಿಯಾ ಶ್ರಿನೇತ್ ಹಂಚಿಕೊಂಡಿದ್ದಾರೆ.
ಉತ್ತರ ಪ್ರದೇಶದ ಮಾಜಿ ಕಾರ್ಯದರ್ಶಿ ಮತ್ತು 1,500 ಕೋಟಿ ರೂ.ಯ ಗೋಮತಿ ರಿವರ್ ಫ್ರಂಟ್ ಹಗರಣದಲ್ಲಿ ಆರೋಪಿಯಾಗಿರುವ ದೀಪಕ್ ಸಿಂಘಾಲ್ ಬಗ್ಗೆಯೂ ಅವರು ಮಾಹಿತಿ ಹಂಚಿಕೊಂಡಿದ್ದಾರೆ.
ಕೆಲ ಪ್ರಕರಣಗಳಲ್ಲಿ ಹಳೆಯ ಸುದ್ದಿಗಳಿಗೆ ಲಿಂಕ್‌ಗಳನ್ನು ಸಹ ಸುಪ್ರಿಯಾ ಶ್ರಿನೇತ್ ಒದಗಿಸಿದ್ದಾರೆ.
ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಅವರ ಪತ್ನಿ ಲಕ್ಷ್ಮಿ ಪುರಿಯಂತಹ ಜನರ ಸಹಿ ಕೂಡ ಈ ಪತ್ರದಲ್ಲಿದೆ.
ಪತ್ರದ ಹಿಂದೆ ಯಾರಿರಬಹುದು ಎಂಬುದರ ಬಗ್ಗೆಯೂ ಇದು ಸಂದೇಶ ರವಾನಿಸುತ್ತದೆ.
ರಾಹುಲ್ ಗಾಂಧಿಗೆ ಪತ್ರ ಬರೆದ ಈ ಜನರು ಈಗ ಪತ್ರಿಕಾಗೋಷ್ಠಿ ನಡೆಸಿ ತಮ್ಮ ಮೇಲಿನ ಎಲ್ಲಾ ಆರೋಪಗಳ ಬಗ್ಗೆ ಸ್ಪಷ್ಟನೆ ಕೊಡಬಲ್ಲರೇ?
ಅವರೆಲ್ಲ ಸಿವಿಲ್ ಸೊಸೈಟಿ ಮಂದಿಯೆಂಬ ಸೋಗಿನಲ್ಲಿ ರಾಹುಲ್ ಗಾಂಧಿಗೆ ಪತ್ರ ಬರೆದಿದ್ದಾರೆ. ಆದರೆ, ಅವರೆಲ್ಲರೂ ಬಿಜೆಪಿ ಹೇಳಿದಂತೆ ಕೆಲಸ ಮಾಡುವ ಮಂದಿ, ಅವರೆಲ್ಲ ರಾಜಕೀಯ ವ್ಯಕ್ತಿಗಳು ಎಂದು ಕಾಂಗ್ರೆಸ್ ಹೇಳುತ್ತಿದೆ.
ಪತ್ರ ಬರೆದವರು ಯಾರೆಂಬುದನ್ನು ರಾಹುಲ್ ಅವರ ಟೀಂ ಬಯಲಿಗೆಳೆದಿದೆ.
ಅವರ ರಹಸ್ಯಗಳು ಬಹಿರಂಗಗೊಳ್ಳುತ್ತಿವೆ ಮತ್ತು ಇದನ್ನು ಅವರ್ಯಾರೂ ನಿರೀಕ್ಷಿಸಿರಲಿಲ್ಲ.
ಸಿವಿಲ್ ಸೊಸೈಟಿಯ ಮಂದಿಯೆಂದು ನಟಿಸುವ ಇವರು ಭಾರತದ ಪ್ರಜಾಪ್ರಭುತ್ವದ ಮೇಲೆ ದಾಳಿ ನಡೆಯುತ್ತಿದೆ ಎಂದು ಕಳವಳ ವ್ಯಕ್ತಪಡಿಸುತ್ತಿದ್ದಾರೆ.
ಆದರೆ, ಸಿವಿಲ್ ಸೊಸೈಟಿ ಎಂಬ ಸೋಗಿನಲ್ಲಿ ಬರೆಯಬೇಕಾದರೆ, ಯಾವುದೇ ರಾಜಕೀಯ ಪಕ್ಷಕ್ಕೂ ಅವರಿಗೂ ಏನು ಸಂಬಂಧ?
ಅವರು ಅದರ ಬಗ್ಗೆಯೂ ಮಾಹಿತಿ ಕೊಡಬೇಕಿತ್ತು.
ಹೀಗಾಗಿ, ಬಿಜೆಪಿಯೇ ಅವರಿಂದ ಪತ್ರ ಬರೆಸಿತೇ ಎಂಬ ಅನುಮಾನ ಏಳುತ್ತದೆ.
ಇದರ ಬದಲು ಬಿಜೆಪಿಯೇ ನೇರವಾಗಿ ರಾಹುಲ್ ಗಾಂಧಿಯವರಿಗೆ ಪತ್ರ ಬರೆಯಬಹುದಿತ್ತು.
ಸುಪ್ರಿಯಾ ಶ್ರಿನೇತ್ ಹೇಳಿರುವ ಪ್ರಕಾರ, ಸಂಜೀವ್ ತ್ರಿಪಾಠಿ ಮಾಜಿ ಐಪಿಎಸ್ ಅಧಿಕಾರಿ ಮತ್ತು ಮಾಜಿ ರಾ ಮುಖ್ಯಸ್ಥ.
2014ರಲ್ಲಿ ಅವರು ಬಿಜೆಪಿ ಸೇರಿದರು.
ರಿಯಾಸಿಯಿಂದ ಹಿಡಿದು ಪಹಲ್ಗಾಮ್ ದಾಳಿ ಮತ್ತು ದಿಲ್ಲಿ ಬಾಂಬ್ ದಾಳಿಯವರೆಗೆ ಸತತ ಗುಪ್ತಚರ ವೈಫಲ್ಯಗಳ ಬಗ್ಗೆ ಎಂದೂ ಬಾಯ್ಬಿಟ್ಟಿರದ ಈ ಮನುಷ್ಯ ಈಗ ರಾಹುಲ್ ಗಾಂಧಿ ವಿರುದ್ಧ ಟೀಕೆ ಮಾಡಲು ನಿಂತಿದ್ದಾರೆ.
ಗುಪ್ತಚರ ವೈಫಲ್ಯಗಳ ಬಗ್ಗೆ ಎದ್ದಿರುವ ಪ್ರಶ್ನೆಗಳಿಗೆ ಸಂಬಂಧಿಸಿ ಸಂಜೀವ್ ತ್ರಿಪಾಠಿ ಸರಕಾರಕ್ಕೆ ಯಾವತ್ತಾದರೂ ಪತ್ರ ಬರೆದಿದ್ದಾರೆಯೇ?
ರಾಹುಲ್ ಗಾಂಧಿ ವಿಷಕಾರಿ ಹೇಳಿಕೆ ನೀಡುತ್ತಿದ್ದಾರೆ ಎಂದು ಈ 272 ಮಂದಿ ಪತ್ರದಲ್ಲಿ ಆರೋಪಿಸಿದ್ದಾರೆ.
ರಾಹುಲ್ ಗಾಂಧಿ ಮತಗಟ್ಟೆ ವೀಡಿಯೊಗಳನ್ನು ಕೇಳಿದರೆ, ಮೋದಿ ಸರಕಾರ ಅವುಗಳನ್ನು ಒದಗಿಸದಂತೆ ನಿಯಮಗಳನ್ನೇ ಬದಲಾಯಿಸಿತು. ಚುನಾವಣಾ ಆಯುಕ್ತರನ್ನು ಯಾವುದೇ ಕೇಸ್‌ಗಳಿಂದ ರಕ್ಷಿಸಲು ಒಂದು ಕಾನೂನನ್ನೇ ತರಲಾಯಿತು. ಇವಾವುದೂ ಈ 272 ಮಂದಿ ದೊಡ್ಡ ಮನುಷ್ಯರಿಗೆ ಕಾಣಲಿಲ್ಲವೆ?
ಮತಗಟ್ಟೆಯ ಸಿಸಿಟಿವಿ ಫೂಟೇಜ್‌ಗಳಿಗಾಗಿ ಆಗಸ್ಟ್ ನಿಂದಲೂ ರಾಹುಲ್ ಗಾಂಧಿ ಚುನಾವಣಾ ಆಯೋಗವನ್ನು ಕೇಳುತ್ತಿದ್ದಾರೆ.
ಆದರೆ ನಾಲ್ಕು ತಿಂಗಳ ನಂತರ ರಾಹುಲ್ ಗಾಂಧಿಗೆ ಪತ್ರ ಬರೆಯಬೇಕು ಎಂದು ಈ ದೊಡ್ಡ ಮನುಷ್ಯರಿಗೆ ಅನ್ನಿಸಿದ್ದು ಹೇಗೆ?
ಇದೇ ಜನ ಆಯೋಗಕ್ಕೆ ಪತ್ರ ಬರೆದು, ನಿಮ್ಮ ಬಗ್ಗೆ ಹೀಗೆಲ್ಲ ಆರೋಪ ಮಾಡಲಾಗುತ್ತಿರುವಾಗ ಒಂದಕ್ಕಾದರೂ ಉತ್ತರಿಸಿ ಎಂದು ಕೇಳಲಿಲ್ಲ.
ಈ 272 ಮಂದಿಯಲ್ಲಿರುವ ಮತ್ತೊಬ್ಬರೆಂದರೆ, ಎ.ಕೆ. ಮೊನ್ನಪ್ಪ. ಇವರು ಮಾಜಿ ಐಎಎಸ್ ಅಧಿಕಾರಿಯಾಗಿದ್ದಾರೆ.
ಕರ್ನಾಟಕ ಸಾರ್ವಜನಿಕ ಸೇವಾ ಆಯೋಗದ ಪರೀಕ್ಷೆಯಲ್ಲಿ ರಿಗ್ಗಿಂಗ್ ಆರೋಪದ ಮೇಲೆ ಅವರನ್ನು 2003ರಲ್ಲಿ ಕರ್ನಾಟಕ ಸರಕಾರ ಸಸ್ಪೆಂಡ್ ಮಾಡಿತ್ತು. ತನಿಖೆಯನ್ನೂ ನಡೆಸಲಾದ ಬಗ್ಗೆ ಮಾಹಿತಿಯಿದೆ. 1998ರ ಗೆಜೆಟೆಡ್ ಪ್ರೊಬೇಷನರ್ಸ್ ನೇಮಕಾತಿಯಲ್ಲಿ ಅಕ್ರಮ ನಡೆಸಿದ ಆರೋಪ ಅವರ ಮೇಲಿತ್ತು ಎನ್ನಲಾಗಿದೆ. 2004ರಲ್ಲಿ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗಿದೆ ಎಂದು ವರದಿಯಿದೆ. ಇಂಥವರೆಲ್ಲ ರಾಹುಲ್ ಗಾಂಧಿ ವಿರುದ್ಧ ತಕರಾರೆತ್ತಿ ಪತ್ರ ಬರೆಯಲು ಹೇಗೆ ಅರ್ಹರಾದರು?
ಇಲ್ಲಿನ ಅನೇಕರ ಮೇಲೆ ವಿವಿಧ ಹಗರಣಗಳು ಮತ್ತು ಭ್ರಷ್ಟಾಚಾರ ಪ್ರಕರಣಗಳಲ್ಲಿ ಆರೋಪಗಳಿವೆ.
ಮಾಜಿ ಐಎಎಸ್ ಅಧಿಕಾರಿ ಎಲ್.ವಿ. ಸುಬ್ರಮಣಿಯಂ ಮೇಲೆ ಹೈದರಾಬಾದ್‌ನಲ್ಲಿ 535 ಎಕರೆ ಭೂ ವ್ಯವಹಾರದ ಆರೋಪವಿದೆ.
ಸಿಬಿಐ ಈ ಪ್ರಕರಣದ ತನಿಖೆ ನಡೆಸಿತು. 2012ರಲ್ಲಿ ಅವರು ತಮ್ಮ ವಿರುದ್ಧದ ಪ್ರಕರಣ ರದ್ದುಗೊಳಿಸುವಂತೆ ಸಿಬಿಐ ಅನ್ನು ಕೇಳಿಕೊಂಡರು. ಆದರೆ ನ್ಯಾಯಾಲಯ ಅವರ ಅರ್ಜಿಯನ್ನು ತಿರಸ್ಕರಿಸಿತು.
2018ರಲ್ಲಿ ಅವರ ವಿರುದ್ಧದ ಎಲ್ಲಾ ಪ್ರಕರಣಗಳನ್ನು ವಜಾಗೊಳಿಸಲಾಯಿತು. ವಜಾಗೊಳಿಸಲು ಯಾವುದೇ ಕಾರಣ ನೀಡಲಾಗಿಲ್ಲ ಎಂದು ಹಲವಾರು ಪತ್ರಿಕೆಗಳು ವರದಿ ಮಾಡಿವೆ.
ಬಹುಶಃ ಈ 272 ಮಂದಿ ರಾಹುಲ್ ಗಾಂಧಿಯವರ ಬಗ್ಗೆ ದೊಡ್ಡ ತಕರಾರೆತ್ತಿರುವುದು, ಚುನಾವಣಾ ಅಕ್ರಮಗಳಲ್ಲಿ ಭಾಗಿಯಾಗುವ ಅಧಿಕಾರಿಗಳನ್ನು ಸುಮ್ಮನೆ ಬಿಡುವುದಿಲ್ಲ ಎಂದು ರಾಹುಲ್ ಹೇಳಿರುವುದರ ಬಗ್ಗೆ.
ಆಯೋಗದ ನೌಕರರಿಗೆ ರಾಹುಲ್ ಬೆದರಿಕೆ ಹಾಕಿದ್ದಾರೆ. ನಿವೃತ್ತರಾದ ನಂತರವೂ ಅವರನ್ನು ಬಿಡುವುದಿಲ್ಲ ಎಂದಿದ್ದಾರೆ ಎಂಬುದು ಅವರ ಆಕ್ಷೇಪ.
ಆದರೆ ರಾಹುಲ್ ಗಾಂಧಿಯವರ ಸರಕಾರವೇ ಬಂದಿಲ್ಲ. ಹಾಗಿರುವಾಗ ಅವರು ಯಾವುದೇ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವ ಮಾತಾದರೂ ಎಲ್ಲಿ ಬರುತ್ತದೆ?
ಈ ನಿವೃತ್ತರಿಗೆ ಅಷ್ಟು ಭಯವಿದ್ದರೆ, ರಾಹುಲ್ ಗಾಂಧಿಗೆ ಬರೆಯುವ ಬದಲು ಪ್ರಧಾನಿ ಮೋದಿಗೆ ಪತ್ರ ಬರೆಯಬೇಕಿತ್ತಲ್ಲವೆ?
ರಾಹುಲ್ ಗಾಂಧಿಯವರ ಭಾಷಣ ಪ್ರಚೋದನಕಾರಿ ಎಂದು ಈ 272 ಮಂದಿಗೆ ಏಕೆ ಅನ್ನಿಸಿದೆ ಎಂಬುದು ಕೂಡ ಮತ್ತೊಂದು ಪ್ರಶ್ನೆ.
ಸುಪ್ರಿಯಾ ಶ್ರಿನೇತ್ ಅವರು ಉತ್ತರ ಪ್ರದೇಶದ ಡಿಜಿಪಿಯಾಗಿ ನಿವೃತ್ತರಾದ ಐಪಿಎಸ್ ಅಧಿಕಾರಿ ರಾಮನಾರಾಯಣ್ ಸಿಂಗ್ ಬಗ್ಗೆ ಬರೆದಿದ್ದಾರೆ.
ಆದಾಯ ತೆರಿಗೆ ದಾಳಿಯ ಸಮಯದಲ್ಲಿ ಅವರ ಮನೆಯಲ್ಲಿ ರೂ. 3 ಕೋಟಿಗೂ ಹೆಚ್ಚು ನಗದು ಪತ್ತೆಯಾಗಿತ್ತು.
ಇದೇ ಮಾಜಿ ಐಪಿಎಸ್ ಅಧಿಕಾರಿಯ ಮನೆಯ ನೆಲಮಾಳಿಗೆಯಲ್ಲಿ 600 ಕ್ಕೂ ಹೆಚ್ಚು ಲಾಕರ್‌ಗಳು ಪತ್ತೆಯಾಗಿದ್ದರ ಬಗ್ಗೆಯೂ ಸುಪ್ರಿಯಾ ಶ್ರಿನೇತ್ ಬರೆದಿದ್ದಾರೆ. ಈ ದೊಡ್ಡ ಮನುಷ್ಯ ಕೂಡ ರಾಹುಲ್ ಗಾಂಧಿ ವಿರುದ್ಧ ಪತ್ರ ಬರೆದಿದ್ದಾರೆ. ಇವರೆಲ್ಲ ಮೊದಲು ತಮ್ಮ ಮೇಲಿನ ಆರೋಪಗಳ ಬಗ್ಗೆ ಉತ್ತರಿಸಬೇಕಿದೆ.
ಇಲ್ಲದಿದ್ದರೆ, ಇವರೇ ಭ್ರಷ್ಟಾಚಾರ ಪ್ರಕರಣಗಳಲ್ಲಿ ಸಿಲುಕಿಕೊಂಡಿರುವಾಗ, ರಾಹುಲ್ ಗಾಂಧಿಗೆ ಏಕೆ ಪತ್ರ ಬರೆದರು ಎಂಬ ಪ್ರಶ್ನೆ ಸಹಜವಾಗಿಯೇ ಏಳುತ್ತದೆ.
ರಾಹುಲ್ ಗಾಂಧಿಗೆ ಪತ್ರ ಬರೆದು ಒತ್ತಡ ಹೇರುವ ಮೂಲಕ ಮೋದಿ ಸರಕಾರವನ್ನು ಮೆಚ್ಚಿಸಿ ತಮ್ಮನ್ನು ಬಚಾವ್ ಮಾಡಿಕೊಳ್ಳಲು ಇವರೆಲ್ಲ ಯತ್ನಿಸುತ್ತಿದ್ದಾರೆಯೆ?
ರಾಹುಲ್ ಗಾಂಧಿಗೆ ಪತ್ರ ಬರೆಯಲು ಭ್ರಷ್ಟ ಅಧಿಕಾರಿಗಳನ್ನು ಬಳಸಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ಈ 272 ಜನರಲ್ಲಿ ಒಬ್ಬರಾದರೂ ಮಾಜಿ ಚುನಾವಣಾ ಆಯುಕ್ತರಲ್ಲ ಎಂಬುದು ಗಮನಿಸಲೇಬೇಕಾದ ಸಂಗತಿ.
ಚುನಾವಣಾ ಆಯೋಗದ ವಿರುದ್ಧ ರಾಹುಲ್ ಗಾಂಧಿಯವರ ಆರೋಪಗಳು ಅಪಾಯಕಾರಿಯಾಗಿದ್ದರೆ, ಮಾಜಿ ಚುನಾವಣಾ ಆಯುಕ್ತರೇ ಮಧ್ಯಪ್ರವೇಶಿಸುತ್ತಿದ್ದರಲ್ಲವೆ?
ಅಲ್ಲದೆ, ಚುನಾವಣಾ ಆಯೋಗವೇ ಏನೂ ಹೇಳದಿರುವಾಗ, ಈ 272 ಜನರು ಚುನಾವಣಾ ಆಯೋಗದ ಪರವಾಗಿ ರಾಹುಲ್ ಗಾಂಧಿಗೆ ಏಕೆ ಪತ್ರ ಬರೆಯುತ್ತಿದ್ದಾರೆ?
ಚುನಾವಣಾ ಆಯೋಗದಂಥ ಸಂಸ್ಥೆ ತನ್ನ ಕೆಲಸ ಮಾಡಿದ್ದರೆ, ಸಿಬಿಐ, ಈ.ಡಿ. ತಮ್ಮ ಕೆಲಸ ಮಾಡಿದ್ದರೆ ಇದಾವುದೂ ಆಗುತ್ತಿರಲಿಲ್ಲ.
ರಾಹುಲ್ ಗಾಂಧಿ ಪ್ರಶ್ನೆಗಳನ್ನು ಕೇಳುತ್ತಿರುವುದರಿಂದ ಪ್ರಜಾಪ್ರಭುತ್ವ ಅಪಾಯಕ್ಕೆ ಸಿಲುಕಿಲ್ಲ.
ಆದರೆ, ಪ್ರಜಾಪ್ರಭುತ್ವಕ್ಕೆ ಅಪಾಯ ಯಾರಿಂದ ಆಗುತ್ತಿದೆಯೊ ಅವರ ಮಗ್ಗುಲಲ್ಲೇ ಹೋಗಿ ನಿಂತು ಬಚಾವಾಗಲು ಭ್ರಷ್ಟ ಹಿನ್ನೆಲೆಯ ಮಂದಿ ರಾಹುಲ್ ಅಂಥವರ ಮೇಲೆಯೇ ಆರೋಪ ಹೊರಿಸಲು ನೋಡುತ್ತಿರುವುದು ಪ್ರಜಾಪ್ರಭುತ್ವದಲ್ಲಿನ ಅಪಾಯದ ಸಂಕೇತ.







