Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ನಾಡು ಮಾತು ಬಯಸಿದಾಗ ನಾಯಕ ಮೌನಕ್ಕೆ...

ನಾಡು ಮಾತು ಬಯಸಿದಾಗ ನಾಯಕ ಮೌನಕ್ಕೆ ಶರಣಾಗುವುದು ಯಾಕೆ?

ಹರೀಶ್ ಕುಮಾರ್ ಕುಡ್ತಡ್ಕಹರೀಶ್ ಕುಮಾರ್ ಕುಡ್ತಡ್ಕ22 July 2026 11:18 AM IST
share
ನಾಡು ಮಾತು ಬಯಸಿದಾಗ ನಾಯಕ ಮೌನಕ್ಕೆ ಶರಣಾಗುವುದು ಯಾಕೆ?

ರಾಜಕೀಯ ನಾಯಕರು ಮಾತು ಮತ್ತು ಕೃತಿಗಳೆರಡರಲ್ಲಿಯೂ ಪ್ರಾಮಾಣಿಕವಾಗಿದ್ದರೆ ಜನರು ಪಕ್ಷಾತೀತವಾಗಿ ಅಂಥವರನ್ನು ಮೆಚ್ಚದಿರಲು ಸಾಧ್ಯವಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ನಾಯಕರೆಸಿಕೊಂಡವರು ಮಾತು, ಚರ್ಚೆ ಹಾಗೂ ಸಂವಾದಗಳನ್ನು ಜೀವಂತವಾಗಿ ಇಟ್ಟುಕೊಳ್ಳುವುದು ಪ್ರಜಾತಂತ್ರ ವ್ಯವಸ್ಥೆಯಲ್ಲಿ ಒಂದು ನೈತಿಕ ಮೌಲ್ಯವೆಂದೇ ಪರಿಗಣಿತವಾಗುತ್ತದೆ.

‘ಮಾತು ಬೆಳ್ಳಿ, ಮೌನ ಬಂಗಾರ’. ನಿಜ, ಇದು ಎಲ್ಲಾ ಸಂದರ್ಭ, ಎಲ್ಲಾ ಪರಿಸ್ಥಿತಿಯಲ್ಲಿಯೂ ಅಲ್ಲ. ಮಾತು ಅಗತ್ಯವಿದ್ದಾಗ ಮೌನಕ್ಕೆ ಶರಣಾಗುವುದು ಸಮಂಜಸವಾಗಲಾರದು. ಈ ಅಸಹನೀಯ ಮೌನ ಅನಗತ್ಯ ಸಂದೇಹ, ಅನುಮಾನಗಳಿಗೆ ಎಡೆ ಮಾಡಿ ಕೊಡುತ್ತದೆ. ನಾಡಿನ ನಾಯಕರಾದವರು ಅವರಿಗೆ ಅಗತ್ಯವಿದ್ದಾಗ ಅಭಿಪ್ರಾಯ ವ್ಯಕ್ತ ಪಡಿಸಲು ಸ್ವತಂತ್ರರಿದ್ದಾರೆ. ಹಾಗೆ ಜನತೆಯೂ ನಾಯಕನ ಹೊಣೆಗಾರಿಕೆಯ ಧ್ವನಿ ಆಲಿಸ ಬಯಸಿದಾಗ ಸೂಕ್ತ ಪ್ರತಿಕ್ರಿಯೆ ನೀಡಲು ಹಿಂಜರಿಯುವುದು ಸಮಂಜಸವಲ್ಲ. ಏಕಮುಖ ಸಂವಹನಕ್ಕಿಂತ ದ್ವಿಮುಖ ಸಂವಹನ ಯಾವತ್ತೂ ಅರ್ಥಪೂರ್ಣ.

ಪ್ರಧಾನಿ ನರೇಂದ್ರ ಮೋದಿಯವರು ಮಾತುಗಳ ಸರದಾರ. ಅವರು ಮಾತಿನ ಶಕ್ತಿಯಲ್ಲಿ ನಂಬಿಕೆ ಇಟ್ಟವರು. ಸಾರ್ವಜನಿಕ ವೇದಿಕೆಗಳು, ವಿದ್ಯುನ್ಮಾನ ಮಾಧ್ಯಮಗಳಲ್ಲಿ ಅವರು ನಿರರ್ಗಳ ಭಾಷಣಗಳನ್ನು ಮಾಡುತ್ತಾರೆ. ಆಕಾಶವಾಣಿಯಲ್ಲಿ ಅವರ ‘ಮನ್‌ಕಿ ಬಾತ್’ ಕಾರ್ಯಕ್ರಮ ತುಂಬಾ ಸಮಯದಿಂದ ನಿಯಮಿತವಾಗಿ ಮೂಡಿ ಬರುತ್ತಿದೆ. ಆದರೆ ಮೋದಿಯವರು ಕೆಲವೊಮ್ಮೆ ಮಾತನಾಡಲೇ ಬೇಕಾದ ಸಂದರ್ಭಗಳಲ್ಲಿ ಮೌನಕ್ಕೆ ಶರಣಾಗುವುದು ಮಾತ್ರ ಆಶ್ಚರ್ಯ ಹುಟ್ಟಿಸುತ್ತದೆ. ಅವರ ಈ ಧೋರಣೆ ಜನರಿಗೆ ಹಿತಾನುಭವ ನೀಡಲಾರದು.

ದೇಶದಾದ್ಯಂತ ರಾಮ ಮಂದಿರ ಟ್ರಸ್ಟ್ ಒಳಗಡೆ ಅಂದಾಜು ರೂ. 200 ಕೋಟಿಗಿಂತಲೂ ಹೆಚ್ಚು ಅವ್ಯವಹಾರ ಮತ್ತು ದೇಣಿಗೆ ಕಳವು ಹಗರಣ ಭಾರೀ ಸುದ್ದಿ ಮಾಡಿದೆ. ಜನರು ಇಂತಹ ಶ್ರದ್ಧಾ ಕೇಂದ್ರದಲ್ಲಿಯೂ ಈ ರೀತಿ ನಡೆದು ಹೋಯಿತೇ ಎಂದು ಆಶ್ಚರ್ಯ ಪಡುತ್ತಿದ್ದಾರೆ. ತನಿಖೆ, ವಿಚಾರಣೆ ಇತ್ಯಾದಿ ಅದರ ಪಾಡಿಗೆ ಸಾಗುತ್ತವೆ, ಬಿಡಿ. ಪ್ರಧಾನಿ ಮೋದಿಯವರು ಈ ಬಗ್ಗೆ ಈ ವರೆಗೆ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ. ಮೋದಿಯವರಿಗೆ ಮತ್ತು ಅವರ ಪಕ್ಷಕ್ಕೆ ರಾಮ ಮಂದಿರ ಅತ್ಯಂತ ಮಹತ್ವದ ವಿಷಯಗಳಲ್ಲೊಂದು. ಆದರೂ ಈ ರೀತಿಯ ಅನಪೇಕ್ಷಿತ ಬೆಳವಣಿಗೆಯೊಂದು ನಡೆದಾಗ ಮೋದಿಯವರೇಕೆ ಮೌನಕ್ಕೆ ಶರಣಾಗಿದ್ದಾರೆ?

ನಿಜ, ಕೇಂದ್ರ ಸರಕಾರದ ಮುಖ್ಯಸ್ಥನ ನೆಲೆಯಲ್ಲಿ ಅವರು ಹೇಳಿಕೆಯನ್ನು ನೀಡುವಂತಹ ಅಗತ್ಯವಿರಲಾದು. ಜೊತೆಗೆ ಆಂತರಿಕ ವಲಯದಲ್ಲಿ ಪರಿಶೀಲನೆ, ಚರ್ಚೆ ಹಾಗೂ ಕ್ರಮಕ್ಕೆ ಮುಂದಾಗಿರಬಹುದು. ಅದು ಬೇರೆ ವಿಚಾರ. ದೇಶದ ಜನತೆಗೆ ಮೋದಿಯವರ ಬಹಿರಂಗ ಪ್ರತಿಕ್ರಿಯೆಯೆಂಬುದು ಅನೇಕ ಕಾರಣಗಳಿಗೆ ಮುಖ್ಯವಾಗುತ್ತದೆ. ಮೊದಲನೆಯದಾಗಿ ಅನೇಕ ದಶಕಗಳಿಂದ ಬಿಜೆಪಿಯ ಕಾರ್ಯಸೂಚಿಯಾಗಿ ಚಲಾವಣೆಯಲ್ಲಿದ್ದ ರಾಮ ಮಂದಿರದಿಂದಾಗಿ ಬಿಜೆಪಿ ಬಲ ವೃದ್ಧಿಸಿಕೊಂಡು ಅಧಿಕಾರ ಹಿಡಿಯಲು ಸಾಧ್ಯವಾಯಿತೆಂಬುದು ನಿರಾಕರಿಸಲಾಗದ ಸತ್ಯ. ರಾಮ ಮಂದಿರದ ಭೂಮಿ ಪೂಜೆಯಿಂದ ಹಿಡಿದು ಪ್ರಾಣ ಪ್ರತಿಷ್ಠಾ ಕಾರ್ಯಕ್ರಮದವರೆಗೆ ಮೋದಿಯವರೇ ಎಲ್ಲಾ ಕಡೆ ಪ್ರಧಾನ ಭೂಮಿಕೆಯನ್ನು ನಿರ್ವಹಿಸಿದರು. ಈ ಕಾರಣಗಳೆಲ್ಲ ಒಂದು ಕಡೆಗಿದ್ದರೆ ಇದಕ್ಕೆ ಇನ್ನೊಂದು ರಾಜಕೀಯ ಆಯಾಮವೂ ಇದೆ. ಕೇರಳ ವಿಧಾನಸಭಾ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಮೋದಿಯವರು ಶಬರಿ ಮಲೆ ದೇವಳದ ಚಿನ್ನ ವಂಚನೆ ಪ್ರಕರಣವನ್ನು ಪ್ರಸ್ತಾಪಿಸುತ್ತಾ ಪಕ್ಷವು ಅಧಿಕಾರಕ್ಕೆ ಬಂದರೆ ಅಪರಾಧಿಗಳನ್ನು ಕಠಿಣ ಶಿಕ್ಷೆಗೆ ಗುರಿ ಪಡಿಸಲಾಗುವುದೆಂದು ಬಹಿರಂಗವಾಗಿ ಘೋಷಣೆ ಮಾಡಿದ್ದರು. ಹೀಗಿರುವಾಗ ಇಲ್ಲಿ ರಾಮ ಮಂದಿರದ ಅವ್ಯವಹಾರದಲ್ಲಿ ಅವರ ಮೌನ ಎಷ್ಟರ ಮಟ್ಟಿಗೆ ಸಮಂಜಸ?

ರಾಜಕಾರಣಿಗಳಾದವರು ಮಾತು ಮತ್ತು ಮೌನವನ್ನು ಬಹಳ ಜಾಣತನದಿಂದ ಬಳಸುತ್ತಾರೆ. ಸಾಮಾನ್ಯವಾಗಿ ಅವರಿಗೆ ಮಾತೇ ಬಂಡವಾಳ. ಚುನಾವಣಾ ಸಂದರ್ಭಗಳಲ್ಲಿ ಹುಸಿ ಭರವಸೆಗಳು, ಭಾವನಾತ್ಮಕ ಸಂದೇಶಗಳು, ಪ್ರಚೋದನಾತ್ಮಕ ಮಾತುಗಳು ಇತ್ಯಾದಿ ರಾಜಕಾರಣಿಗಳ ಬತ್ತಳಿಕೆಯಲ್ಲಿ ಸದಾ ಸಿದ್ಧವಾಗಿರುತ್ತವೆ. ಆದರೆ ಪರಿಸ್ಥಿತಿ ಪ್ರತಿಕೂಲವಾದಾಗ ಅವರಿಂದ ಮಾತುಗಳೇ ಬರುವುದಿಲ್ಲ. ಮಾತು ಬೆಳ್ಳಿ ಮೌನ ಬಂಗಾರ ಎಂಬ ಮಾತು ಒಪ್ಪತಕ್ಕದ್ದೇ, ಆದರೆ ಕೆಲವೊಮ್ಮೆ ಮೌನ ಅಸಹನೀಯವಾಗಿ ಮಾತಿಗೆ ಚಿನ್ನದ ಸ್ಥಾನಮಾನ ಪ್ರಾಪ್ತಿಯಾಗುವುದಿದೆ. ಅದು ಪರಿಸ್ಥಿತಿಯನ್ನು ಅವಲಂಬಿಸಿರುವಂತಹದ್ದು. ಮಾತು ಆಡಲೇ ಬೇಕಾದ ಸಂದರ್ಭಗಳಲ್ಲಿ ಮೌನವನ್ನು ನೆಚ್ಚಿಕೊಂಡರೆ ಅದು ಆತ್ಮ ವಂಚನೆಯಾದೀತು. ಈ ನಡೆ ನೈತಿಕವಾಗಿ ಎಂದಿಗೂ ಸಮರ್ಥನೀಯವಲ್ಲ. ಖಾಸಗಿ ಮತ್ತು ಸಾರ್ವಜನಿಕ ಜೀವನಗಳೆರಡಲ್ಲೂ ಮುಖ್ಯವಾಗಿರುವ ಈ ನಿಲುವಿಗೆ ಸಾರ್ವಜನಿಕವಾಗಿ ಹೆಚ್ಚು ಮಹತ್ವವಿದೆ. ಸಾರ್ವಜನಿಕ ಬದುಕಿನಲ್ಲಿ ವ್ಯಕ್ತಿಯೊಬ್ಬ ಪ್ರಾಮಾಣಿಕನಾಗಿದ್ದರಷ್ಟೇ ಸಾಲದು. ಅದು ಆತನ ನಡೆ ನುಡಿಗಳೆರಡಲ್ಲೂ ವ್ಯಕ್ತವಾಗುವುದೂ ಅಗತ್ಯ.

ಪ್ರಧಾನಿ ಮೋದಿಯವರು ಹೇಳಿಕೆ ನೀಡುವ ಅಗತ್ಯವಿದ್ದಲ್ಲಿ ಮೌನಕ್ಕೆ ಶರಣಾಗಿರುವುದು ಇದು ಮೊದಲನೇ ಬಾರಿಯೇನಲ್ಲ. ಅನೇಕ ಬಾರಿ ಈ ರೀತಿ ಆಗಿದ್ದಿದೆ. ಈ ಬಾರಿಯ ನೀಟ್ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಬಹಿರಂಗವಾದಾಗಲೂ ಹಾಗೇ ಆಯಿತು. ದೇಶದಲ್ಲಿ ಲಕ್ಷಾಂತರ ಮಂದಿ ವಿದ್ಯಾರ್ಥಿಗಳು ಅತಂತ್ರರಾಗಿದ್ದ ಸಂದರ್ಭದಲ್ಲಿ ಮೋದಿಯವರು ಯಾವುದೇ ಹೇಳಿಕೆ ನೀಡಲು ಮನಸ್ಸು ಮಾಡಲಿಲ್ಲ. ಈ ನಡುವೆ ದೇಶದಾದ್ಯಂತ ಕೆಲವು ಮಂದಿ ಪರೀಕ್ಷಾಕಾಂಕ್ಷಿಗಳು ಒತ್ತಡ, ಹತಾಶೆಗಳಿಂದ ಆತ್ಮಹತ್ಯೆ ಮಾಡಿಕೊಂಡರು. ದೇಶದ ಅಂತಃಕರಣವನ್ನು ಕಲಕಿರುವಂತಹ ಈ ಘಟನೆಗೆ ಸರಕಾರ ಮತ್ತು ಸಂಬಂಧ ಪಟ್ಟವರು ಹೊಣೆಗಾರಿಕೆ ವಹಿಸುವುದು ಅಪೇಕ್ಷಣೀಯ. ಇದರ ಭಾಗವಾಗಿ ಸರಕಾರದ ಮುಖ್ಯಸ್ಥನಿಂದ ಪ್ರತಿಕ್ರಿಯೆಯೂ ಒಂದು ಮಹತ್ವದ ಅಂಶ. ಮೋದಿಯವರು ‘ಪರೀಕ್ಷಾ ಪೆ ಚರ್ಚಾ’ ಕಾರ್ಯಕ್ರಮಗಳಂಥವುಗಳನ್ನು ವಿದ್ಯಾರ್ಥಿಗಳಿಗಾಗಿ ರೂಪಿಸಿ ನಡೆಸಿ ಕೊಟ್ಟವರು. ಪರೀಕ್ಷಾ ವ್ಯವಸ್ಥೆಯ ಭಾಗವಾಗಿರುವ ಪ್ರಶ್ನೆ ಪತ್ರಿಕೆಗಳು ಬಹಿರಂಗಗೊಂಡು ವಿದ್ಯಾರ್ಥಿಗಳು ಹತಾಶರಾದ ಸಂದರ್ಭದಲ್ಲಿ ಕನಿಷ್ಠ ಸಾಂತ್ವನದ ಮಾತುಗಳನ್ನಾದರೂ ಅವರು ಆಡಬಹುದಿತ್ತು. ಜೊತೆಗೆ ಭರವಸೆ, ಧೈರ್ಯ ತುಂಬುವ ಮಾತುಗಳನ್ನೂ ಆಡ ಬಹುದಿತ್ತು. ಇದೊಂದು ನೈತಿಕ ಹೊಣೆಗಾರಿಕೆಯಾಗಿತ್ತು.

ಈಗ ಈ ವಿಚಾರದಲ್ಲಿ ಸೋನಂ ವಾಂಗ್ಚುಕ್ ಉಪವಾಸ ಸತ್ಯಾಗ್ರಹ ಕೈ ಗೊಂಡು ಪರಿಸ್ಥಿತಿ ವಿಪರೀತಕ್ಕೆ ತಲುಪಿದೆ. ವಾಂಗ್ಚುಕ್ ಮತ್ತು ಅವರ ಜೊತೆಗಾರರ ಪ್ರತಿಭಟನೆಗೆ ಸಂಬಂಧಿಸಿದ ವಿಚಾರದಲ್ಲಿ ಸರಕಾರಕ್ಕೆ ಭಿನ್ನಾಭಿಪ್ರಾಯವಿರ ಬಹುದು. ಆದರೆ ಶಾಂತಿಯುತವಾಗಿ ಉಪವಾಸಕ್ಕೆ ಕೂತವರನ್ನು ಕರೆದು ಮಾತನಾಡಿಸಿ, ಅಗತ್ಯವಿದ್ದರೆ ವಿಷಯ ಮನವರಿಕೆ ಮಾಡಿಕೊಳ್ಳಲು ಪ್ರಯತ್ನಿಸ ಬಹುದಿತ್ತು. ಇದು ಸರಕಾರವೊಂದರ ಸಂವೇದನಾತ್ಮಕ ಸೌಜನ್ಯಯುತ ನಿಲುವು ಆಗಿ ಬಿಡುತ್ತಿತ್ತು. ಇದು ಯಾರ ಸೋಲು ಗೆಲುವಿನ ಪ್ರಶ್ನೆಯಂತೂ ಅಲ್ಲ. ಇಲ್ಲಿಯೂ ಮತ್ತದೇ ಮೌನ!

ನರೇಂದ್ರ ಮೋದಿಯವರು ಬಿಕ್ಕಟ್ಟಿನ ಸಂದರ್ಭಗಳಲ್ಲಿ ಮೌನ ವಹಿಸುವಂತಹ ಈ ಧೋರಣೆಯನ್ನು ಕಾಂಗ್ರೆಸ್ ಪಕ್ಷ ಟೀಕಿಸುತ್ತಾ ಬಂದಿದೆ. ಹಾಗೆ ನೋಡಿದರೆ ರಾಜಕೀಯ ನಾಯಕರ ಈ ಮೌನ ವ್ರತದ ಪರಂಪರೆಯಲ್ಲಿ ಮೋದಿಯವರೇನೂ ಮೊದಲಿಗರೇನಲ್ಲ. ಬಹುಶ: ಕೊನೆಯವರೂ ಆಗಲಾರರು. ಹಿಂದೆ ಕಾಂಗ್ರೆಸ್ ಪಕ್ಷದ ನಾಯಕರೂ ಅಗತ್ಯ ಸಂದರ್ಭಗಳಲ್ಲಿ ಮೌನಾಚರಣೆಗೆ ಶರಣಾದವರೇ. ಮನಮೋಹನ್‌ಸಿಂಗ್ ಅವರಂತಹ ನಾಯಕರು ಸಹ ಹೇಳಿಕೆ ಅಗತ್ಯವೆಂದು ಭಾವಿಸಲಾದ ಅನೇಕ ಸಂದರ್ಭಗಳಲ್ಲಿ ಮೌನ ವಹಿಸಿದ್ದಿದೆ. ಅವರೇನೂ ವಾಗ್ಮಿಯಾಗಿರಲಿಲ್ಲ. ಅವರು ಮೆಲು ಮಾತಿನ ಮಿತ ಭಾಷಿ ವ್ಯಕ್ತಿ. ಅದೇನಿದ್ದರೂ ದೇಶದ ನಾಯಕನಾಗಿ ಅಭಿಪ್ರಾಯಗಳು ಅಗತ್ಯವಿದ್ದಾಗ ಅವರು ಮೌನ ವಹಿಸಿರುವುದನ್ನು ಸಮರ್ಥಿಸಲು ಸಾಧ್ಯವಾಗಲಾರದು. ಮನಮೋಹನ್‌ಸಿಂಗ್ ಅವರನ್ನು ಈ ಕಾರಣಕ್ಕಾಗಿ ‘ಮೌನಿ ಬಾಬಾ’ ಎಂದು ಮೋದಿಯವರು ಅಂದು ಲೇವಡಿ ಮಾಡಿದ್ದರು. ಇಂದು ಮೋದಿಯವರೇ ಸ್ವತಃ ಮೌನದ ಮೊರೆ ಹೋಗುತ್ತಿರುವುದು ವಿಪರ್ಯಾಸವೇ ಸರಿ.

ರಾಜಕಾರಣಿಗಳು ಮಾತುಗಳನ್ನು ಬಂಡವಾಳವನ್ನಾಗಿ ಮಾಡಿಕೊಂಡವರು. ಜನರನ್ನು ಮಾತಿನಲ್ಲಿ ಮರುಳುಗೊಳಿಸಿ ಬೆಂಬಲಿಗರು ಅಭಿಮಾನಿಗಳ ಸಂಖ್ಯೆಯನ್ನು ಹೆಚ್ಚಿಸಿ ಕೊಂಡು ಅವುಗಳನ್ನು ಮತಗಳನ್ನಾಗಿ ಪರಿವರ್ತಿಸುವಂತಹ ಕಲೆ ಅವರಿಗೆ ಕರಗತ. ಆದರೆ ವಿವೇಕ, ಸ್ವತಂತ್ರ ಮನೋಭಾವವುಳ್ಳ ಜನರು ರಾಜಕಾರಣಿಗಳ ನಡೆ ನುಡಿಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿರುತ್ತಾರೆ. ಜೊತೆಗೆ ನೈತಿಕತೆ, ಮೌಲ್ಯಗಳಲ್ಲಿ ನಂಬಿಕೆಯಿಟ್ಟವರೂ ರಾಜಕಾರಣಿಗಳನ್ನು ಅವರ ನಿಲುವುಗಳ ಆಧಾರದಲ್ಲಿ ಅಳೆದು ತೂಗಿ ಬೆಲೆ ಕಟ್ಟುತ್ತಾರೆ. ರಾಜಕೀಯ ತಂತ್ರಗಾರಿಕೆಯ ಭಾಗವಾಗಿ ಬರುವಂತಹ ಮಾತು ಹಾಗೂ ಮೌನಗಳೆರಡೂ ಒಂದು ಮಿತಿಯಲ್ಲಿದ್ದರೆ ಚೆನ್ನ. ಜನರಲ್ಲಿ ವಿಶ್ವಾಸ ಹುಟ್ಟಿಸುವಂತಹ ನಾಯಕನ ಪ್ರಾಮಾಣಿಕ ನುಡಿಗಳಿಗೆ ಜನರ ಮನವೊಲಿಕೆ ಅಥವಾ ಮನವರಿಕೆಯ ಗುಣವಿದೆ. ಆದ್ದರಿಂದ ಸಮಸ್ಯೆಗಳು ಎದುರಾದಾಗ ಕೇವಲ ರಾಜಕೀಯ ತಂತ್ರಗಾರಿಕೆಯ ಭಾಗವಾಗಿ ತುಟಿ ಬಿಚ್ಚದೆ ಸುಮ್ಮನಾಗುವುದು ಸರಿಯಲ್ಲ. ರಾಜಕೀಯ ನಾಯಕರು ಮಾತು ಮತ್ತು ಕೃತಿಗಳೆರಡರಲ್ಲಿಯೂ ಪ್ರಾಮಾಣಿಕವಾಗಿದ್ದರೆ ಜನರು ಪಕ್ಷಾತೀತವಾಗಿ ಅಂಥವರನ್ನು ಮೆಚ್ಚದಿರಲು ಸಾಧ್ಯವಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ನಾಯಕರೆಸಿಕೊಂಡವರು ಮಾತು, ಚರ್ಚೆ ಹಾಗೂ ಸಂವಾದಗಳನ್ನು ಜೀವಂತವಾಗಿ ಇಟ್ಟುಕೊಳ್ಳುವುದು ಪ್ರಜಾತಂತ್ರ ವ್ಯವಸ್ಥೆಯಲ್ಲಿ ಒಂದು ನೈತಿಕ ಮೌಲ್ಯವೆಂದೇ ಪರಿಗಣಿತವಾಗುತ್ತದೆ.

Tags

leadersilenceSpeech
share
ಹರೀಶ್ ಕುಮಾರ್ ಕುಡ್ತಡ್ಕ
ಹರೀಶ್ ಕುಮಾರ್ ಕುಡ್ತಡ್ಕ
Next Story
X