ಭಾರತೀಯರೇಕೆ ಡಾ. ಬಿ.ಆರ್. ಅಂಬೇಡ್ಕರ್‌ರ ಆರ್ಥಿಕ ಚಿಂತನೆಗಳನ್ನು ಪುರಸ್ಕರಿಸುತ್ತಿಲ್ಲ?

ಅಂಬೇಡ್ಕರ್ ತಮ್ಮ ಮೂರು ಪುಸ್ತಕಗಳಲ್ಲಿ ಭಾರತೀಯ ಆರ್ಥಿಕತೆಯನ್ನು ದೇಶೀಯ ಪರಿಸರಕ್ಕೆ ಅನುಗುಣವಾಗಿ ವಿಶ್ಲೇಷಿಸಿದ ನಿಪುಣ ಅರ್ಥಶಾಸ್ತ್ರಜ್ಞರಾಗಿ ಹೊರಹೊಮ್ಮಿದವರು. ಪ್ರೊ. ಜೆ.ಎಂ ಕೀನ್ಸ್ ಅವರ ಸಾಮಾನ್ಯ ಉದ್ಯೋಗ ಸಿದ್ಧಾಂತದ ಪರಿಕಲ್ಪನೆಗಳನ್ನು ಸಹ ಟೀಕಿಸಿದ್ದ ಅಂಬೇಡ್ಕರ್ ಅವರ ಸುವರ್ಣ ಪ್ರಮಿತಿ ವಿನಿಮಯ ಗರಿಷ್ಠತೆಯನ್ನು ಒಪ್ಪಲಿಲ್ಲ. ಅದರ ಬದಲು ಭಾರತೀಯ ಆರ್ಥಿಕ ಸ್ಥಿತಿಗೆ ಅನುಗುಣವಾದ ನೀತಿಗಳಿಗೆ ಪ್ರೋತ್ಸಾಹ ನೀಡಿದವರು. ಸುವರ್ಣ ಪ್ರಮಿತಿ ಸ್ಥಿರವಾಗಿರಲು ಅಥವಾ ವಿನಿಮಯ ದರ ಸ್ಥಿರವಾಗಿರಬೇಕಾದರೆ ಆದ್ಯತೆ ಮೇರೆಗೆ ಬೆಲೆಗಳನ್ನು ಸ್ಥಿರವಾಗಿಡಬೇಕು. ಶ್ರಮಿಕರ ಕಾನೂನುಗಳನ್ನು ಪರಿಷ್ಕರಣೆ ಮಾಡಬೇಕು ಮತ್ತು ಕೈಗಾರಿಕೀಕರಣವನ್ನು ಉತ್ತೇಜಿಸಬೇಕೆಂದು ಪ್ರತಿಪಾದಿಸಿದವರು.
ಡಾ. ಬಿ.ಆರ್. ಅಂಬೇಡ್ಕರ್ ಅವರ ‘ರೂಪಾಯಿ ಸಮಸ್ಯೆ’ (The Problem of the Rupee) ಪುಸ್ತಕ ಪ್ರಕಟಣೆ ನೂರು ವಸಂತಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಈ ಲೇಖನ ಸಾದರಗೊಂಡಿದೆ. ಅರ್ಥಶಾಸ್ತ್ರಜ್ಞ ಡಾ. ಬಿ.ಆರ್. ಅಂಬೇಡ್ಕರ್‌ರನ್ನು ಸದಾ ಮೀಸಲಾತಿ ಮತ್ತು ವಿಭಿನ್ನ ಸಾಮಾಜಿಕ ಹೋರಾಟಗಳ ಮೂಲಕ ನೋಡುವ ಪರಿಪಾಠವೇ ಸಮಾಜದೊಳಗೆ ಜಾಸ್ತಿಯಿದೆ. ಆದರೆ, ಅವರು ಮೂಲತಃ ಅರ್ಥಶಾಸ್ತ್ರಜ್ಞರಾಗಿದ್ದು, ಅವರ ಮೂಸೆಯಲ್ಲಿ ಒಡಮೂಡಿದ ವಿಚಾರಧಾರೆಗಳೆಲ್ಲವೂ ಬಡತನ, ಹಸಿವು, ನಿರುದ್ಯೋಗ, ಆರ್ಥಿಕ ಅಸಮಾನತೆ, ರಾಷ್ಟ್ರಾಭಿವೃದ್ಧಿ, ಇತ್ಯಾದಿಗಳ ಸುತ್ತಲೂ ಬೆಸೆದುಕೊಳ್ಳುತ್ತಲೇ ಬಂದಿವೆ. ಅಂಬೇಡ್ಕರ್ ಪೂರ್ವಜರು ರತ್ನಗಿರಿ ಜಿಲ್ಲೆಯ ಅಂಬೇವಾಡದವರು. ಆದರೆ ಅಂಬೇಡ್ಕರ್ ಹುಟ್ಟಿದ್ದು (1891-1956) ಮಧ್ಯಪ್ರದೇಶದ ಇಂದೋರ್ ಬಳಿಯ ಮಹವೋ(MHOW- Military Head Quarters of War) ಎಂಬ ಸೈನಿಕ ಕೇಂದ್ರ ಸ್ಥಾನದಲ್ಲಿ. ಅವರು ಹುಟ್ಟಿದಾಗ ಜಾತಿ ವಿನಾಶ ಆಗಿರಲಿಲ್ಲ. ಅದರ ನೋವಿನಲ್ಲೇ ಬೆಳೆದು ಹಂತ ಹಂತವಾಗಿ ವಿದ್ಯಾಭ್ಯಾಸ ಪೂರೈಸಿದ ಮೇರು ವಿದ್ವಾಂಸರಾದರು. ಅಂಬೇಡ್ಕರ್ ಶೈಕ್ಷಣಿಕ ಉನ್ನತಿಗೇರಿ 1913-1927ರಲ್ಲಿ ಅನೇಕ ತಿರುವುಗಳೊಂದಿಗೆ ಜಾಗತಿಕ ವಿಶ್ವವಿದ್ಯಾಲಯಗಳಿಂದ ಅತ್ಯುನ್ನತ ಪದವಿಗಳನ್ನು ಮುಡಿಗೇರಿಸಿದವರು.
1912ರಲ್ಲಿ ಬಾಂಬೆ ವಿಶ್ವವಿದ್ಯಾನಿಲಯದಿಂದ ಅರ್ಥಶಾಸ್ತ್ರ ಮತ್ತು ರಾಜ್ಯಶಾಸ್ತ್ರ ಪದವಿ ಪೂರೈಸಿ ಬರೋಡಾ ಮಹಾರಾಜರ ಶೀಷ್ಯವೇತನ ಪಡೆದು 1913ರಲ್ಲಿ ನ್ಯೂಯಾರ್ಕ್‌ನ ಕೊಲಂಬಿಯಾ ವಿಶ್ವವಿದ್ಯಾನಿಲಯ ಪ್ರವೇಶ ಪಡೆದರು. ಅಲ್ಲಿ ಸ್ನಾತಕೋತ್ತರ ಪದವಿ (ಎಂ.ಎ.) ಪಡೆಯಲು 1915ರಲ್ಲಿ ‘Administration and Finance of the East India Company’ ಎಂಬ ಮಹಾಪ್ರಬಂಧವನ್ನು ಮಂಡಿಸಿದರು. ಇದರ ಜೊತೆಯಲ್ಲೇ ಅಂಬೇಡ್ಕರ್ ಪ್ರಾಚೀನ ಭಾರತದ ವಾಣಿಜ್ಯ (Ancient Indian Commerce) ಮತ್ತು ‘National Dividend: A Historical and Analytical Study’ ಬಹುಶಃ ಇವೆರಡೂ ಮಹಾ ಪ್ರಬಂಧಗಳು ಸ್ನಾತಕೋತ್ತರ ಪದವಿ ಮತ್ತು ಡಾಕ್ಟರೇಟ್ ಪದವಿಗಳ ಭಾಗವಾಗಿ ಸಲ್ಲಿಸಿದ್ದರು (ಮೂನ್, ಖೀರ್ ದಾಖಲೆ). ಮೂಲತಃ ಅರ್ಥಶಾಸ್ತ್ರ ವಿದ್ಯಾರ್ಥಿಯಾಗಿ ಡಾಕ್ಟರೇಟ್ ಪದವಿಯನ್ನು 1917ರಲ್ಲಿ ಕೊಲಂಬಿಯಾ ವಿಶ್ವವಿದ್ಯಾನಿಲಯದಿಂದ ಸ್ವೀಕರಿಸುತ್ತಾರೆ. ಅದಕ್ಕೂ ಹಿಂದೆಯೇ ಅಂಬೇಡ್ಕರ್ ಭಾರತದ ಹಣಕಾಸು ಚರಿತ್ರೆ ಸಂಬಂಧವಾಗಿ ಮಾಹಿತಿ ಕ್ರೋಡೀಕರಿಸಲು ಗುರುಗಳಾದ ಪ್ರೊ.ಸೆಲಿಂಗ್ಮನ್ ಅವರ ನಿರ್ದೇಶನದಂತೆ ಲಂಡನ್ ಸ್ಕೂಲ್ ಆಫ್ ಇಕನಾಮಿಕ್ಸ್ ಪ್ರೊ. ಸಿಡ್ನಿವೆಬ್‌ಭೇಟಿ ಮಾಡಿ (1916) ಹಿಂದಿರುಗುತ್ತಾರೆ. ಬರೋಡಾ ಮಹಾರಾಜರ ಶಿಷ್ಯವೇತನ ಮುಗಿದ ಕಾರಣ ಭಾರತಕ್ಕೆ ಮರಳುತ್ತಾರೆ (1917). ಅಷ್ಟಕೇ ಅವರ ವಿದ್ಯಾರ್ಜನೆಯ ದಾಹ ಇಂಗಲಿಲ್ಲ. ಪುನಃ ಕೊಲ್ಹಾಪುರ ಮಹಾರಾಜರ ಸಹಾಯ ಪಡೆದು 1920ರಲ್ಲಿ ಲಂಡನ್ ಸ್ಕೂಲ್ ಆಫ್ ಇಕನಾಮಿಕ್ಸ್ ಪ್ರವೇಶ ಪಡೆಯಲು ಸೆಲ್ಲಿಂಗ್ಮನ್ ಅವರು ಪ್ರೊ. ಎಡ್ವಿನ್‌ಕ್ಯಾನನ್‌ಗೆ ಹೀಗೆ ಶಿಫಾರಸು ಮಾಡುತ್ತಾರೆ:
‘‘Ambedkar was a student with us for several years in Colombia and passed his examination for the Doctor’s degree with considerable distinction. He has been filling the chair of Commerce and Economics at the Sydenham College of Commerce in Bombay, and he is now proposing to spend about two years in Great Britain to finish a piece of research work in which he is interested’’ ಅಂಬೇಡ್ಕರ್ ಈಗಾಗಲೆ ಡಾಕ್ಟರೇಟ್ ಪದವಿಗಳಿಸಿದ್ದಾರೆ; ಇನ್ನೇನು ಸಂಶೋಧನೆ ಮಾಡುವರೆಂದು ಅಲ್ಲಿ ಸ್ವಲ್ಪ ಗೊಂದಲವಾಗಿದ್ದವು. ಆದರೆ ಪ್ರೊ. ಎಡ್ವಿನ್ ಕ್ಯಾನನ್ ಅವರನ್ನು ಎಂ.ಎಸ್ಸಿ. ಮತ್ತು ಡಿ.ಎಸ್ಸಿ. ಪದವಿಗಳ ಅಧ್ಯಯನಕ್ಕೆ ಸಹಕಾರ ನೀಡುತ್ತಾರೆ. 1921ರಲ್ಲಿ ಅಂಬೇಡ್ಕರ್ ‘Provincial decentralization of imperial finance in India’ ಎಂಬ ಮಹಾಪ್ರಬಂಧವನ್ನು ಎಂ.ಎಸ್ಸಿ. ಪದವಿಗಾಗಿ ಸಲ್ಲಿಸುತ್ತಾರೆ. ಅದರಲ್ಲೂ ಸಹ ಉತ್ತೀರ್ಣರಾಗುತ್ತಾರೆ. ಪುನಃ ಮಾರ್ಚ್ ೧೯೨೩ರಲ್ಲಿ ಅಂಬೇಡ್ಕರ್ ಡಿ.ಎಸ್ಸಿ. ಪದವಿಗಾಗಿ ‘Stablisation of the Indian exchange: Problem of the rupee’ ಎಂಬ ಮಹಾಪ್ರಬಂಧವನ್ನು ಸಲ್ಲಿಸುತ್ತಾರೆ. ಅದರ ಪರೀಕ್ಷಕರು ಕೆಲವೊಂದು ವಿಚಾರಗಳ ಮೇಲೆ ಸ್ಪಷ್ಟನೆ ಕೋರಿದರು. ಅದನ್ನು ಅಂಬೇಡ್ಕರ್ ಪೂರೈಸಿದರು; ಅಂತಿಮವಾಗಿ 1923ರ ಅಗಸ್ಟ್‌ನಲ್ಲಿ ಮಹಾಪ್ರಬಂಧವನ್ನು ಮರು ಸಲ್ಲಿಸುತ್ತಾರೆ. 1923 ನವೆಂಬರ್‌ನಲ್ಲಿ ಅವರಿಗೆ ಡಿ.ಎಸ್ಸಿ. ಪದವಿ ಪ್ರದಾನವಾಗುತ್ತದೆ. ಇದು ಪುಸ್ತಕ ರೂಪದಲ್ಲಿ ‘ರೂಪಾಯಿ ಸಮಸ್ಯೆ’ (The Problem of the Rupee) ಎಂಬ ಶೀರ್ಷಿಕೆ ಬದಲಿಸಿ ಲಂಡನ್‌ನ ಪಿ.ಎಸ್. ಕಿಂಗ್ ಮತ್ತು ಸನ್ ಲಿ. ಕಂಪೆನಿ 1923ರ ಡಿಸೆಂಬರ್‌ನಲ್ಲಿ ಪ್ರಕಟಿಸುತ್ತದೆ. ಈ ಪುಸ್ತಕ ಅನೇಕ ಓದುಗರ ಪ್ರೀತಿಯ ಗ್ರಂಥವಾಯಿತು. ದ್ವಿತೀಯ ಮುದ್ರಣ 1947ರಲ್ಲಾಯಿತು
1923ರಲ್ಲೇ ಅಂಬೇಡ್ಕರ್ ‘The Evolution of Provincial Finance in British India: A Study in the Provincial Decentralisation of Imperial Finance’ ಎಂಬ ಮಹತ್ವದ ಪುಸ್ತಕ ಪ್ರಕಟಿಸಿದ್ದರು. ಈ ಪುಸ್ತಕಕ್ಕೆ ಡಾ. ಎಡ್ವರ್ಡ್ ಎ. ಸೆಲಿಂಗ್ಮನ್ ಮನೋಜ್ಞವಾದ ಮುನ್ನುಡಿ ಬರೆದಿದ್ದಾರೆ. ಅಂಬೇಡ್ಕರ್ ಬಗ್ಗೆ ಮೊದಲು ಧನಂಜಯ ಖೀರ್ ಜೀವನ ಮತ್ತು ಸಾಧನೆ ಶೀರ್ಷಿಕೆಯಡಿ ಬಂದ ಪುಸ್ತಕದಲ್ಲಿ ಅವರು ಹೇಗೆ ಕೊಲಂಬಿಯಾ ಮತ್ತು ಲಂಡನ್‌ನ ವಿವಿಧ ಗ್ರಂಥಾಲಯಗಳಲ್ಲಿ ಮಧ್ಯರಾತ್ರಿಯಲ್ಲಿಯೂ ಓದುತ್ತಿದ್ದರೆಂಬ ಉಲ್ಲೇಖಗಳಿವೆ(ಪುಟ-46). ಪ್ರೊ. ಎಡ್ವಿನ್ ಕ್ಯಾನನ್ ಮೂಲತಃ ಸಾರ್ವಜನಿಕ ಹಣಕಾಸು ಅರ್ಥಶಾಸ್ತ್ರಜ್ಞರಾಗಿ ಸರಕಾರಗಳು ಹೇಗೆ ಆದಾಯ ಗಳಿಸಿ ಅದನ್ನು ಸಾಮಾಜಿಕ ಔನತ್ಯಕ್ಕಾಗಿ ಖರ್ಚು ಮಾಡಬೇಕೆಂಬ ತತ್ವಗಳನ್ನು ಬೋಧಿಸಿದವರು. ಒಟ್ಟಾರೆ, ಡಾ. ಎಡ್ವರ್ಡ್ ಎ. ಸೆಲಿಂಗ್ಮನ್ ಮತ್ತು ಪ್ರೊ. ಎಡ್ವಿನ್ ಕ್ಯಾನನ್ ಅವರ ಶೈಕ್ಷಣಿಕ ಗರಡಿಯಲ್ಲಿ ಪಳಗಿದವರು.
ಸ್ವಾತಂತ್ರ್ಯ ಪೂರ್ವ ರೂಪಾಯಿ ಸಮಸ್ಯೆ
ಭಾರತದಲ್ಲಿ ಕಾಗದ ನೋಟುಗಳು ಮತ್ತು ಬೆಳ್ಳಿ ನಾಣ್ಯಗಳು 1860ರಿಂದ ಕಾನೂನುಬದ್ಧವಾಗಿ ಚಾಲ್ತಿಯಲ್ಲಿದ್ದವು. ಅದರಲ್ಲೂ ಬೆಳ್ಳಿ ನಾಣ್ಯಗಳ ಬೇಡಿಕೆ ಹೆಚ್ಚಿದಂತೆಲ್ಲಾ ಸರಕಾರದಿಂದ ಪೂರೈಸಲು ಆಗಲಿಲ್ಲ. 1893ರಲ್ಲಿ ನೋಟುಗಳ ಸಂಪೂರ್ಣ ಚಲಾವಣೆಗೆ ಕಾನೂನು ಮಾನ್ಯತೆ ನೀಡಲಾಯಿತು. 1898-1916 ನಡುವೆ ಸುವರ್ಣ ಪ್ರಮಿತಿ ವಿನಿಮಯ ಅಳವಡಿಸಿದಾಗ ವಿನಿಮಯ ದರದ ಸ್ಥಿರತೆ ಅತಿಮುಖ್ಯ ದಶಮಾನ ಪದ್ಧತಿಯಾಯಿತು. ಆದರೂ 1914-15ರಲ್ಲಿ ವಿನಿಮಯ ದರ ತೀರ ಕ್ಷೀಣಿಸಿತು. ಆದುದರಿಂದ ಭಾರತದಲ್ಲಿ ಮರುಪಾವತಿ ಪಡೆಯಲು ಚಿನ್ನಕ್ಕಾಗಿ ಪರದಾಡುವ ಸ್ಥಿತಿಯುಂಟಾಯಿತು. ಈ ಕೃತಕ ಅಭಾವದಿಂದ ಹೊರಬರಲು ಸರಕಾರ ಅಧಿಕ ನೋಟುಗಳನ್ನು ಮುದ್ರಿಸಿತು. ಇದು ಮತ್ತಷ್ಟು ಹಣದುಬ್ಬರಕ್ಕೆ ನಾಂದಿಯಾಯಿತು. ಇದನ್ನು ಗಮನಿಸಿದ ಅಂಬೇಡ್ಕರ್ ವಿನಿಮಯ ದರದ ಸ್ಥಿರತೆ ಬಗ್ಗೆ ಧ್ವನಿಗೂಡಿಸಿದರು. ಇದು ವರ್ತಕರಿಗೆ ಅನುಕೂಲವಾದರೆ, ಬಡವರಿಗೆ ಲಾಭದಾಯಕವಲ್ಲವೆಂದು ಟೀಕಿಸಿದರು. ‘ರೂಪಾಯಿ ಸಮಸ್ಯೆ’ ಪುಸ್ತಕದಲ್ಲಿ ಮೊದಲಿಗೆ ಅವರು ಬೆಲೆಗಳ ನಿಯಂತ್ರಣ ಇಲ್ಲದಿದ್ದಾಗ ಅಧಿಕ ಚಿನ್ನ ನೀಡಿ ದವಸ ಧಾನ್ಯಗಳನ್ನು ಖರೀದಿಸುವ ಸಂಕಷ್ಟ ಬರಬಹುದೆಂದು ಪ್ರತಿಪಾದಿಸಿದ್ದರು. ಅದಕ್ಕಾಗಿ ಅಂಬೇಡ್ಕರ್ ಬೆಲೆಗಳ ನಿಯಂತ್ರಣವಿದ್ದಾಗ ಮಾತ್ರ ಹಣದ ಮೌಲ್ಯ ವರ್ಧಿಸುತ್ತದೆ ಎಂದರು. ಹಾಗೆಯೇ ಹಣದ ನೀಡಿಕೆಗೆ ಚಿನ್ನದ ಜೊತೆ ತಳುಕು ಹಾಕುವುದನ್ನು ವಿರೋಧಿಸಿದರು. ಸುವರ್ಣ ಪ್ರಮಿತಿ (ಗೋಲ್ಡ್ ಸ್ಟ್ಯಾಂಡರ್ಡ್) ವಿನಿಮಯ ದರಗಳು ಹಣದ ಮೌಲ್ಯ ಸಮಸ್ಯೆಗಳನ್ನು ಹೆಚ್ಚಿಸುವುದೆಂದು ಪರ್ಯಾಯವಾಗಿ ಪರಿಮಾಣಾತ್ಮಕ ಹಣದ ಸಿದ್ಧಾಂತವನ್ನು (Quantity theory of Money) ಬೆಂಬಲಿಸಿದರು. ರಾಷ್ಟ್ರೀಯ ಉತ್ಪಾದಕತೆ ಹೆಚ್ಚಿಸದೆ ಹಣದ ಪೂರೈಕೆಯನ್ನು (Money Supply) ದ್ವಿಗುಣಗೊಳಿಸುತ್ತಾ ಹೋದರೆ ಕರೆನ್ಸಿಯು ಅಸ್ಥಿರವಾಗುವುದರಿಂದ ವಿನಮಯ ದರಗಳ ಎದುರು ಬೆಲೆಗಳ ಸ್ಥಿರತೆ ಸಾಧಿಸುವುದು ಅತಿಮುಖ್ಯವಾಗುತ್ತದೆ ಎಂದು ಅಭಿಮತಿಸಿದರು. ಈ ನಿಟ್ಟಿನಲ್ಲಿ ಅಂಬೇಡ್ಕರ್ ಹಿಲ್ಟನ್ ಯಂಗ್ ಆಯೋಗದ ಮುಂದೆ ಸಾಕ್ಷಿ ನೀಡಿದರು. ಕೇಂದ್ರೀಯ ಬ್ಯಾಂಕ್‌ನ ಅವಶ್ಯಕತೆ ಮನವರಿಕೆ ಮಾಡಿದರು. ಈ ನಿಟ್ಟಿನಲ್ಲಿ Reserve Bank of India Act 1934 ಜಾರಿಯಾಯಿತು. 1935ರಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಸ್ಥಾಪನೆಗೆ ಡಾ.ಅಂಬೇಡ್ಕರ್ ಕಾರಣೀಭೂತರಾದರು.
ಸಾರ್ವಜನಿಕ ಹಣಕಾಸಿನ ಬಗ್ಗೆ
ಬ್ರಿಟಿಷ್ ಇಂಡಿಯಾದಲ್ಲಿ ಪ್ರಾಂತೀಯ ಹಣಕಾಸಿನ ವಿಕಾಸ ಎಂಬ ಪುಸ್ತಕವೊಂದನ್ನು ಡಾ. ಅಂಬೇಡ್ಕರ್ ಬರೆದರು. ಇದರಲ್ಲಿ ಭಾರತ ಸರಕಾರದ ಪ್ರಾಂತೀಯ ಹಣಕಾಸಿನ ಸಂಬಂಧಗಳನ್ನು ಮೆಲುಕು ಹಾಕಿದ್ದಾರೆ. ಆ ಕಾಲದ ಕೇಂದ್ರ ಮತ್ತು ರಾಜ್ಯಗಳ ವಿತ್ತೀಯ ಸಂಬಂಧಗಳನ್ನು ವಿಶ್ಲೇಷಣೆಮಾಡಿ 1833-1871 ನಡುವಿನ ದೋಷಪೂರಿತ ವಿತ್ತೀಯ ನೀತಿಗಳತ್ತ ಗಮನ ಸೆಳೆದಿದ್ದಾರೆ. ಅದರಲ್ಲೂ ರಚನಾತ್ಮಕವಲ್ಲದ ತೆರಿಗೆ ಪದ್ಧತಿ ಮತ್ತು ಅನುತ್ಪಾದಕ ವೆಚ್ಚಗಳನ್ನು ಟೀಕಿಸಿದ್ದರು. 1871 ತರುವಾಯ ಕೇಂದ್ರ ರಾಜ್ಯಗಳ ನಡುವಿನ ಬಿಕ್ಕಟ್ಟುಗಳಲ್ಲಿ ತೆರಿಗೆ ಹಂಚಿಕೆಗಳ ಸಂಕಟಗಳನ್ನು ಸಹ ವಿವರಿಸಿದ್ದಾರೆ. 1919 ವಿತ್ತೀಯ ನೀತಿ ದ್ವಂದ್ವಗಳನ್ನು ವಿಮರ್ಶಿಸಿದರು. ಅವರ ಈ ಅಧ್ಯಯನ ಫಲಶೃತಿಯಿಂದ 1921 ವಿತ್ತೀಯ ನೀತಿ ಪ್ರಕಟಣೆಯಾಯಿತು. ಇತರ ಆರ್ಥಿಕ ವಿದ್ವಾಂಸರಂತೆ ಅಂಬೇಡ್ಕರ್ ಸಹ 3 ವೆಚ್ಚ ನೀತಿಗಳನ್ನು ಪ್ರತಿಪಾದಿಸಿದರು. ಅವುಗಳೆಂದರೆ: ವಿಧೇಯತೆ (Faithfulness), ಬೌದ್ಧಿಕತೆ (Wisdom) ಮತ್ತು ಆರ್ಥಿಕತೆಯನ್ನು (Economy) ಪ್ರತಿಪಾದಿಸಿದರು. ಅಂದರೆ ಸರಕಾರಿ ಆಡಳಿತ ಯಂತ್ರದಲ್ಲಿರುವವರು ಸಾರ್ವಜನಿಕರ ಹಣವನ್ನು ವಿನಿಯೋಗಿಸುವಾಗ ವಿಧೇಯರಾಗಿರಬೇಕು. ಅದರ ಜೊತೆ ಸಾರ್ವಜನಿಕರ ಹಣವನ್ನು ವಿನಿಯೋಗಿಸುವ ಬೌದ್ಧಿಕತೆಯ ವಿಕಸನವಿದ್ದಾಗ ಅದರ ಬಳಕೆ ಮೌಲ್ಯ ತಿಳಿಯುತ್ತದೆ. ಆ ಮೂಲಕ ಆರ್ಥಿಕತೆ ತನ್ನ ಗರಿಷ್ಠಮಟ್ಟ ಮೀರಿ ದೇಶಾಭಿವೃದ್ಧಿ ಕ್ರೋಡೀಕರಣವಾಗುತ್ತದೆ ಎಂಬ ಅಭಿಮತಗಳಿದ್ದವು. ಇವುಗಳು ರಾಷ್ಟ್ರೀಯ ಸಮಗ್ರ ಪ್ರಾಮಾಣಿಕ ಜನಜೀವನ ಶಿಸ್ತಿನ ಪ್ರತಿ ರೂಪದ ಮೇರು ಚಿಂತನೆಗಳಾಗಿವೆ.
ಕೃಷಿ ಅರ್ಥಶಾಸ್ತ್ರದ ಬಗ್ಗೆ
ಕೃಷಿ ಚಟುವಟಿಕೆಗಳಲ್ಲಿ ಅಧಿಕ ಶ್ರಮಿಕರ ನಿಯೋಜನೆಯಿರುತ್ತದೆ. ಭಾರತದ ತುಂಡು ಕೃಷಿ ಭೂಮಿಗಳ ಕ್ರೋಡೀಕರಣದಿಂದ ರಾಷ್ಟ್ರೀಯ ಉತ್ಪಾದಕತೆಯನ್ನು ಹೆಚ್ಚಿಸಲು ಪ್ರತಿಪಾದಿಸಿದರು. 1918ರಲ್ಲಿ ಈ ಬಗ್ಗೆ ‘ಭಾರತದಲ್ಲಿನ ಸಣ್ಣ ಹಿಡುವಳಿಗಳು ಮತ್ತು ಅವುಗಳಿಗೆ ಪರಿಹಾರ’ ಎಂಬ ಲೇಖನ ಪ್ರಕಟಿಸಿದರು. ಭೂಮಿಯ ರಾಷ್ಟ್ರೀಕರಣವನ್ನು ಪ್ರತಿಪಾದಿಸಿ, ಯಾವುದೇ ಜಾತಿ, ಧರ್ಮ, ವರ್ಗ ಮತ್ತು ವರ್ಣಗಳ ತಾರತಮ್ಯಗಳನ್ನು ಅನುಸರಿಸದೆ ಹಂಚಿಕೆ ಮಾಡಬೇಕೆಂದಿದ್ದರು. ಈ ನಿಟ್ಟಿನಲ್ಲಿ ರಾಜ್ಯ ಮಾಲಕತ್ವದ ಸಹಕಾರ ಹಿಡುವಳಿ ಪದ್ಧತಿ ಜೊತೆ ನಿರುದ್ಯೋಗ ಸಮಸ್ಯೆ ನೀಗಲು ಕೈಗಾರಿಕೀಕರಣ ಉತ್ತೇಜಿಸಲು ತಮ್ಮ ಬೌದ್ಧಿಕ ಚಿಂತನೆಗಳನ್ನು ಪ್ರತಿಪಾದಿಸಿದ್ದರು. 1937ರಲ್ಲಿ ಪ್ರಕಟಿಸಿದ ಜಾತಿ ವಿನಾಶ ಕೃತಿಯಲ್ಲಿ ಜಾತಿ ಪದ್ಧತಿಯಿಂದ ಶ್ರಮಿಕರ ಚಲನೆ ನಿಯಂತ್ರಿತವಾಗುವುದು; ಜಾತಿ ನಿಯಂತ್ರಣ ವಂಶವಾಹಿನಿ ಗೌಡಿಕೆಗಳಿಂದ ಬಂದಿರುವ ಕಾರಣ ಬಂಡವಾಳ ಸೃಷ್ಟಿಯಾಗದೆಂದರು. ಈ ಕಾರಣಕ್ಕಾಗಿ ಮಹಾರ್ ವತನ್ ಪದ್ಧತಿಯನ್ನು (ಇನಾಂತಿ ಭೂಮಿ) ರದ್ಧತಿ ಮಾಡಿಸಿದರು.
ಜಲ ಮತ್ತು ಇಂಧನ ನೀತಿ
ಡಾ. ಅಂಬೇಡ್ಕರ್ 1942-46ರ ತನಕ ವೈಸರಾಯ್ ಮಂತ್ರಿ ಪರಿಷತ್ತಿನಲ್ಲಿ ಲೋಕೋಪಯೋಗಿ ಮತ್ತು ಕಾರ್ಮಿಕ ಖಾತೆಗಳಿಗೆ ಮಂತ್ರಿಗಳಾಗಿದ್ದರು. ಮೊದಲು ಬಹು ಉಪಯೋಗಿ ದಾಮೋದರ ಕಣಿವೆ ಯೋಜನೆ ಜಾರಿಗೆ ತಂದರು. ಕೇಂದ್ರ ಜಲ ಆಯೋಗ, ಕೇಂದ್ರ ವಿದ್ಯುಚ್ಛಕ್ತಿ ಪ್ರಾಧಿಕಾರ ತೆರೆದರು. ಉತ್ತರ ನದಿಗಳನ್ನು ದಕ್ಷಿಣಕ್ಕೆ ಜೋಡಿಸುವ ಪ್ರಸ್ತಾವನೆ ಸಹ ಮಂಡಿಸಿದರು. ನ್ಯಾಷನಲ್ ಪವರ್‌ಗ್ರಿಡ್‌ಗಳ ಸ್ಥಾಪನೆ ಮಾಡುವಲ್ಲಿ ಅವರ ಶ್ರಮ ಹಿರಿದಾಗಿದೆ.
ಕಾರ್ಮಿಕ ಕಾಯ್ದೆಗಳಿಗೆ ಮರು ಜೀವ
ಡಾ. ಅಂಬೇಡ್ಕರ್ ಕಾರ್ಖಾನೆಗಳಲ್ಲಿ ದುಡಿಯುವ ಕಾರ್ಮಿಕರ ಕೆಲಸದ ಅವಧಿಯನ್ನು 1942ರಲ್ಲಿ 12ರಿಂದ 8 ಗಂಟೆಗೆ ಇಳಿಸಿದರು. ಉದ್ಯೋಗ ವಿನಿಮಯ ಕೇಂದ್ರಗಳನ್ನು ಸ್ಥಾಪಿಸಿದರು. ಕೈಗಾರಿಕಾ ಸಾಂಖ್ಯಿಕ ಕಾಯ್ದೆ ಮೂಲಕ ಅಂಕಿ-ಅಂಶಗಳನ್ನು ಸಂಗ್ರಹಿಸುವ ಕಾರ್ಯಕ್ರಮ ಜಾರಿಗೊಳಿಸಿದರು. ಬಾಂಬೆ ಶಾಸನ ಪರಿಷತ್ತಿನ ಸದಸ್ಯರಾಗಿದ್ದಾಗ ಗರ್ಭಿಣಿಯರಿಗೆ ಹೆರಿಗೆ ರಜೆ ಮಂಜೂರು ಮಾಡಿಸಿದ್ದರು. ಮಹಿಳಾ ಮತ್ತು ಬಾಲ ಕಾರ್ಮಿಕರ ಸುರಕ್ಷತಾ ಕಾಯ್ದೆ, ಮಹಿಳಾ ಗಣಿಗಾರಿಕೆ ಕಾರ್ಮಿಕರ ಹೆರಿಗೆ ಭತ್ತೆ ಕಾಯ್ದೆ, ಟ್ರೇಡ್ ಯುನಿಯನ್ ಕಾಯ್ದೆ 1926ಕ್ಕೆ ತಿದ್ದುಪಡಿ ತಂದು ಕಾರ್ಮಿಕ ಸಂಘಟನೆಗಳನ್ನು ಕಡ್ಡಾಯವಾಗಿ ಸಂಯೋಜಿಸಲು ಅವಕಾಶ ನೀಡಿದರು. ಇವುಗಳ ಜೊತೆಗೆ ದೇಶಾದ್ಯಂತ ನೌಕರರಿಗೆ ವಿಮಾ ಯೋಜನೆ ತಂದರು.
ರಾಜ್ಯ ಸಮಾಜವಾದಿ ಚಿಂತನೆ
ಡಾ. ಅಂಬೇಡ್ಕರ್ ಖಾಸಗಿ ಉದ್ದಿಮೆಗಳ ವಿರುದ್ಧವಿರಲಿಲ್ಲ. ಜಾತಿ ಆಧಾರಿತ ಭಾರತದಲ್ಲಿ ಸಾರ್ವಜನಿಕ ಉದ್ಧಿಮೆಗಳನ್ನು ಆರಂಭಿಸಿ ದೇಶದ ಸಂಪತ್ತಿನ ವಿಕೇಂದ್ರೀಕರಣವಾಗಬೇಕು. ಅವರು ರಾಜ್ಯಗಳಿಂದ ಒಂದು ಯೋಜನಾ ಕಾರ್ಯಕ್ರಮಗಳನ್ನು ಆಯೋಜಿಸಿ ಜನರ ಆರ್ಥಿಕತೆ ಸುಧಾರಿಸಬೇಕೆಂದು ಅಭಿಮತಿಸಿದ್ದರು. ಆರ್ಥಿಕಾಭಿವೃದ್ಧಿಯಲ್ಲಿ ಸಾರ್ವಜನಿಕ ಉದ್ದಿಮೆಗಳ ಪಾತ್ರವನ್ನು ಮನಗಂಡು ಖಾಸಗಿ ಉದ್ದಿಮೆಗಳನ್ನು ದೇಶಾಭಿವೃದ್ಧಿಯಲ್ಲಿ Passive Player ಸ್ವರೂಪಗಳಲ್ಲಿ ಅವುಗಳನ್ನು ಪ್ರೋತ್ಸಾಹಿಸಬೇಕು. ಖಾಸಗೀಕರಣ ಜಾಸ್ತಿಯಾದಷ್ಟು ಜಾತಿ ಭಾರತದಲ್ಲಿ ಸಂಪತ್ತಿನ ಹಂಚಿಕೆಯಲ್ಲಿ ಅಸಮಾನತೆ ಸೃಷ್ಟಿಸುತ್ತದೆ ಎಂದು ನಂಬಿದ್ದರು
ಸಂವಿಧಾನ ರಚನೆಯ ಸಂದರ್ಭದಲ್ಲಿ ರಾಜ್ಯ-ಕೇಂದ್ರ ಸರಕಾರಗಳ ನಡುವಿನ ಅಧಿಕಾರ ಹಂಚಿಕೆ ಮತ್ತು ಸಂಪನ್ಮೂಲಗಳ ಹಂಚಿಕೆ, ತೆರಿಗೆ ವಿಧಿಸುವ ಅಧಿಕಾರ ವ್ಯಾಪ್ತಿಗಳನ್ನು ಸಾದರಪಡಿಸಿದರು. ರಾಜ್ಯ ನಿರ್ದೇಶಕ ತತ್ವಗಳ ಮೂಲಕ ಸರಕಾರಗಳು ಜನ ಕಲ್ಯಾಣ ಆದ್ಯತೆ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡುವ ಶಾಸನಬದ್ಧ ಹೊಣೆಗಾರಿಕೆ ನೀಡಿದರು. ಇಂತಹ ಉತ್ಕೃಷ್ಟ ವಿಚಾರಧಾರೆಯುಳ್ಳ ಅಂಬೇಡ್ಕರ್ ಅವರ ಹುಟ್ಟಿನ ಹಿನ್ನೆಲೆಯಿಂದ ಜಾತಿ ಚೌಕಟ್ಟಿನೊಳಗೆ ಸೇರಿರುವುದು ಈ ದೇಶದ ದೌರ್ಭಾಗ್ಯವೇ ಸರಿ. ಭಾರತೀಯರ ಆರ್ಥಿಕ ಚಿಂತನೆಗಳನ್ನು ಸಂಗ್ರಹಿಸಲು ಪ್ರೊ. ಬಿ.ಎನ್. ಗಂಗುಲಿ (1977) ಮತ್ತು ಪ್ರೊ. ಬಿ.ಕೆ. ಮದನ್(1966) ಒಂದು ಸ್ವಾಗತಾರ್ಹ ಕೆಲಸ ಮಾಡಿದ್ದರು. ಆದರೆ ಇವರ ಸ್ಮತಿಯೊಳಗೆ ಅಂಬೇಡ್ಕರ್ ಆರ್ಥಿಕ ವಿಚಾರಧಾರೆಗಳು ನುಸುಳದಿರುವುದು ಇಂದಿಗೂ ಆಶ್ಚರ್ಯಕರವಾಗಿದೆ. ಬಹುಶಃ ಅವರನ್ನು ಕೇವಲ ಮೀಸಲಾತಿ ತಕ್ಕಡಿಯಲ್ಲಿ ತೂಗಿದ ಮನಸ್ಸುಗಳೇ ಇಂದಿಗೂ ಅತ್ಯಧಿಕವಾಗಿವೆ. ಸ್ವತಂತ್ರ ಭಾರತದಲ್ಲಿ ಕಾನೂನು ಮಂತ್ರಿ ಪದವಿ ಜೊತೆ ಯೋಜನಾ ಖಾತೆ ಬಯಸಿದ್ದರು. ಒಂದುವೇಳೆ ಈ ಖಾತೆ ಸಿಕ್ಕಿದ್ದರೆ ಭಾರತದ ಆರ್ಥಿಕಾಭಿವೃದ್ಧಿ ನೀಲ ನಕಾಶೆ ಬೇರೊಂದಾಗಿರುತ್ತಿತ್ತು. ಹಿಂದೂ ಕೋಡ್ ಬಿಲ್ಲಿನಲ್ಲಿ ವಿಚ್ಚೇಧನ ಹಕ್ಕು ಮಾತ್ರ ಹೊಸದಾಗಿತ್ತು. ಉಳಿದವು ದೇಶೀಯ ಸಂಸ್ಕೃತಿಯಲ್ಲಿದ್ದ ಅಂಶಗಳಾಗಿದ್ದವು. ಡಾ. ಅಂಬೇಡ್ಕರ್ ಮಹಿಳೆಯರ ಸಬಲೀಕರಣಕ್ಕಾಗಿ ದುಡಿದವರು ಸಂಸತ್ತಿನಿಂದ ಹೊರ ಬಂದರು.
ಅಂಬೇಡ್ಕರ್ ತಮ್ಮ ಮೂರು ಪುಸ್ತಕಗಳಲ್ಲಿ ಭಾರತೀಯ ಆರ್ಥಿಕತೆಯನ್ನು ದೇಶೀಯ ಪರಿಸರಕ್ಕೆ ಅನುಗುಣವಾಗಿ ವಿಶ್ಲೇಷಿಸಿದ ನಿಪುಣ ಅರ್ಥಶಾಸ್ತ್ರಜ್ಞರಾಗಿ ಹೊರಹೊಮ್ಮಿದವರು. ಪ್ರೊ. ಜೆ.ಎಂ ಕೀನ್ಸ್ ಅವರ ಸಾಮಾನ್ಯ ಉದ್ಯೋಗ ಸಿದ್ಧಾಂತದ ಪರಿಕಲ್ಪನೆಗಳನ್ನು ಸಹ ಟೀಕಿಸಿದ್ದ ಅಂಬೇಡ್ಕರ್ ಅವರ ಸುವರ್ಣ ಪ್ರಮಿತಿ ವಿನಿಮಯ ಗರಿಷ್ಠತೆಯನ್ನು ಒಪ್ಪಲಿಲ್ಲ. ಅದರ ಬದಲು ಭಾರತೀಯ ಆರ್ಥಿಕ ಸ್ಥಿತಿಗೆ ಅನುಗುಣವಾದ ನೀತಿಗಳಿಗೆ ಪ್ರೋತ್ಸಾಹ ನೀಡಿದವರು. ಸುವರ್ಣ ಪ್ರಮಿತಿ ಸ್ಥಿರವಾಗಿರಲು ಅಥವಾ ವಿನಿಮಯ ದರ ಸ್ಥಿರವಾಗಿರಬೇಕಾದರೆ ಆದ್ಯತೆ ಮೇರೆಗೆ ಬೆಲೆಗಳನ್ನು ಸ್ಥಿರವಾಗಿಡಬೇಕು. ಶ್ರಮಿಕರ ಕಾನೂನುಗಳನ್ನು ಪರಿಷ್ಕರಣೆ ಮಾಡಬೇಕು ಮತ್ತು ಕೈಗಾರಿಕೀಕರಣವನ್ನು ಉತ್ತೇಜಿಸಬೇಕೆಂದು ಪ್ರತಿಪಾದಿಸಿದವರು. ಒಟ್ಟಾರೆ, ಡಾ. ಅಂಬೇಡ್ಕರ್ ಮಹಾನ್ ರಾಷ್ಟ್ರೀಯವಾದಿಗಳಾಗಿ ಸರ್ವ ಸಮುದಾಯಗಳ ಅಭಿವೃದ್ಧಿಗೆ ಚಿಂತಿಸಿದವರು. ಸಿದ್ಧಾಂತಿಯಾಗದೆ ಬಹುಶಾಸ್ತ್ರೀಯ ಪ್ರಾಯೋಗಿಕ ಶಾಸ್ತ್ರಜ್ಞರಾಗಿದ್ದಾರೆ.
(‘ಭಾರತೀಯ ರೂಪಾಯಿ ಸಮಸ್ಯೆ’ ಪುಸ್ತಕ ಪ್ರಕಟಣೆಗೆ ನೂರು ವರ್ಷ ತುಂಬಿರುವ ಹಿನ್ನೆಲೆಯಲ್ಲಿ ದಿ: 23-09-2023ರಂದು ಡಾ. ಬಿ.ಆರ್. ಅಂಬೇಡ್ಕರ್ ಸಂಶೋಧನಾ ಸಂಸ್ಥೆ ಸಹಯೋಗದಲ್ಲಿ ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆ ಅಧ್ಯಯನ ಸಂಸ್ಥೆ, ನಾಗರಬಾವಿ ಇಲ್ಲಿ ಒಂದು ದಿನದ ವಿಚಾರ ಮಂಥನ ಕಾರ್ಯ ಆಯೋಜಿಸಿದೆ)







