ವಿಳಾಸ ಬದಲಾವಣೆಗೆ ನಮೂನೆ-8ರ ಬದಲು ನಮೂನೆ-6 ಯಾಕೆ?

ಬೆಂಗಳೂರು : ವಿಶೇಷ ಮತಪಟ್ಟಿ ಪರಿಷ್ಕರಣೆ(ಎಸ್‌ಐಆರ್) ವೇಳೆಯಲ್ಲಿ ‘ಸ್ಥಳಾಂತರ’/’ಗೈರು’ ಆಗಿದ್ದಾರೆಂದು ಗುರುತಿಸಲ್ಪಟ್ಟ ಮತದಾರರು ಪುನಃ ಮತಪಟ್ಟಿಯಲ್ಲಿ ಸೇರ್ಪಡೆಗೊಳ್ಳಬೇಕೆಂದರೆ ಕಡ್ಡಾಯವಾಗಿ ನಮೂನೆ-6ರಲ್ಲಿ ಹೊಸದಾಗಿ ಅರ್ಜಿ ಸಲ್ಲಿಸಬೇಕು ಎಂದು ಕರ್ನಾಟಕದ ಮುಖ್ಯ ಚುನಾವಣಾಧಿಕಾರಿ ಸೇರಿದಂತೆ ಹಲವು ಬಿಎಲ್‌ಒ/ಎಇಆರ್‌ಒಗಳು ವಿವಿಧ ಸಂದರ್ಭಗಳಲ್ಲಿ ಮತದಾರರಿಗೆ ಮಾರ್ಗದರ್ಶನ ನೀಡುತ್ತಿರುವ ಆರೋಪಗಳು ಕೇಳಿ ಬಂದಿವೆ.
ಎಸ್‌ಐಆರ್ ಪೂರ್ವದಲ್ಲಿ ಮತದಾರರ ಪಟ್ಟಿಯಲ್ಲಿ ಈಗಾಗಲೇ ಹೆಸರು ಹೊಂದಿರುವ ವ್ಯಕ್ತಿ ಮತದಾರರ ದಾಖಲೆಯನ್ನು ಹೊಸ ವಿಳಾಸಕ್ಕೆ ವರ್ಗಾಯಿಸಲು ನಮೂನೆ-8ರಲ್ಲಿ ಅವಕಾಶವಿತ್ತು ಮತ್ತು ಹೊಸ ಮತದಾರರ ನೋಂದಣಿಗೆ ನಮೂನೆ-6 ಬಳಸಬಹುದಾಗಿತ್ತು. ಹೀಗಿರುವಾಗ ಈಗಾಗಲೇ ಮತದಾರರಾಗಿ ನೋಂದಾಯಿಸಿಕೊಂಡಿರುವ ವ್ಯಕ್ತಿ ಕೇವಲ ವಿಳಾಸ ಬದಲಾಯಿಸಿದ್ದಾನೆ/ಳೆ ಎಂಬ ಕಾರಣಕ್ಕೆ ಹಳೆಯ ಮತದಾರರ ಪಟ್ಟಿಯಿಂದಲೇ ಹೆಸರನ್ನು ಡಿಲೀಟ್ ಮಾಡುವುದು ಸಮಂಜಸವೇ? ಎನ್ನುವ ಚರ್ಚೆ ಮತದಾರರಲ್ಲಿ ನಡೆಯುತ್ತಿದೆ.
ಈ ಹಿಂದೆ ಯಾವುದೇ ಮತದಾರ ಒಂದು ಮತಕ್ಷೇತ್ರದಿಂದ ಮತ್ತೊಂದು ಮತಕ್ಷೇತ್ರಕ್ಕೆ ವಾಸಸ್ಥಳವನ್ನು ಬದಲಿಸಿಕೊಂಡಾಗ ‘ಹಕ್ಕುಗಳು ಮತ್ತು ಆಕ್ಷೇಪಣೆಗಳು’ (claims and objections) ಅಲ್ಲಿ ಮತದಾರ ಇಂತಹ ನಿರ್ದಿಷ್ಟ ಮತಕ್ಷೇತ್ರ/ಬೂತ್‌ನಲ್ಲಿಯೇ ವಾಸ ಮಾಡಿದ್ದೀನಿ ಎಂದು ಸಾಬೀತು ಮಾಡಿದರೆ ಸಾಕಾಗಿತ್ತು. ಆದರೆ, ಎಸ್‌ಐಆರ್ ಪ್ರಕ್ರಿಯೆಯಲ್ಲಿ ‘ಶಾಶ್ವತ ಸ್ಥಳಾಂತರ, ಗೈರು’ ಎಂದರೆ ಮತಪಟ್ಟಿಯಿಂದಲೇ ‘ಡಿಲೀಟ್’ ಆಗುತ್ತಿರುವುದು ಅಸಾಂವಿಧಾನಿಕ ಹಾಗೂ ಅವೈಜ್ಞಾನಿಕವಾಗಿದೆ.
ಯಾವುದೇ ಅರ್ಹ ಮತದಾರ ಗುರುತಿನ ಚೀಟಿಯಲ್ಲಿರುವ ವಿಳಾಸದಲ್ಲಿರುವುದು ಬಿಟ್ಟು, ಬೇರೆ ಯಾವುದೋ ಮತ್ತೊಂದು ಮತಕ್ಷೇತ್ರದಲ್ಲಿ ವಾಸ ಮಾಡುತ್ತಿರುತ್ತಾರೆ ಎನ್ನುವುದು ‘ವಾಸ್ತವದ ಸಂಗತಿ’ ಮತ್ತು ‘ಆ ಮತದಾರ ಮೃತಪಟ್ಟಿಲ್ಲ, ಬದುಕಿದ್ದಾನೆ’ ಎನ್ನುವುದು ಅಷ್ಟೇ ಸತ್ಯ. ಒಂದು ವೇಳೆ ಸ್ಥಳಾಂತರಗೊಂಡಿರುವ ಮತದಾರ ಈ ಹಿಂದೆ ಇದ್ದ ಮತಕ್ಷೇತ್ರಕ್ಕೆ ಹಿಂತಿರುಗಿ ಬರುವುದಾದರೆ ಪುನಃ ನಮೂನೆ-6ರ ಮೂಲಕ ಹೊಸದಾಗಿ ನೋಂದಾಯಿಸಿಕೊಳ್ಳಬೇಕಾದ ಅನಿವಾರ್ಯತೆ ಎಸ್‌ಐಆರ್ ಪ್ರಕ್ರಿಯೆಯಿಂದ ಉಂಟಾಗಿದೆ.
ಚುನಾವಣಾಧಿಕಾರಿಗಳು ಯಾವುದೇ ಮತದಾರರನ್ನು ‘ಶಾಶ್ವತ ಸ್ಥಳಾಂತರ’ ಎಂದು ತೀರ್ಮಾನ ಮಾಡುವ ಮೊದಲಿಗೆ ಸರಿಯಾದ ಕಾರ್ಯವಿಧಾನವನ್ನು ಅನುಸರಿಸಿದ್ದಾರೆಯೇ? ಆ ಮತದಾರನಿಗೆ ನೋಟಿಸ್ ಕಳುಹಿಸಿಲಾಗಿದೆಯೇ? ಇದು ಯಾವುದು ಮಾಡದೇ ಅರ್ಹ ಮತದಾರ ‘ಮತದಾರನೇ ಅಲ್ಲ’ ಎನ್ನುವುದನ್ನು ಹೇಗೆ ತೀರ್ಮಾನ ಮಾಡುತ್ತೀರಿ? ಶಾಶ್ವತ ಸ್ಥಳಾಂತರ ಎಂದು ನಮೂದಿಸುವ ಮೊದಲು ಮತದಾರರಿಗೆ ನೋಟಿಸ್ ನೀಡಿ ಅಭಿಪ್ರಾಯ ಪಡೆದುಕೊಳ್ಳಬೇಕು. ಅದು ಯಾವುದನ್ನು ಮಾಡದೇ ಇರುವುದನ್ನು ಗಮನಿಸಿದರೆ, ಪ್ರಕ್ರಿಯೆಯ ಹಿಂದೆ ಮತದಾರರ ಹಕ್ಕನ್ನು ಕಸಿದುಕೊಳ್ಳುವುದೇ ಆಗಿದೆ. ‘ಅರ್ಹಮತದಾರರನ್ನು ಮತಪಟ್ಟಿಯಿಂದ ತೆಗೆಯಬೇಕು ಎನ್ನುವ ಉದ್ದೇಶವೇ ಹೊರತು, ಪರಿಶೀಲಿಸಿ ಉಳಿಸಿಕೊಳ್ಳುವುದು ಎಸ್‌ಐಆರ್ ಪ್ರಕ್ರಿಯೆಯಲ್ಲಿ ನಡೆಯುತ್ತಿಲ್ಲ’ ಎನ್ನುವುದು ಸ್ಪಷ್ಟವಾಗುತ್ತಿದೆ ಎಂದು ನಾಗರಿಕ ಮತಕವಾಲು ಸಮಿತಿ ವಕ್ತಾರ ಸರೋವರ್ ಬೆಂಕಿಕೆರೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಾಶ್ವತ ಸ್ಥಳಾಂತರ, ಗೈರು, ಹೊಸ ಮತದಾರರಿಗೆ ನಮೂನೆ-6ರ ಸವಾಲುಗಳು: ಈ ಹಿಂದೆ 18 ವರ್ಷ ಮೇಲ್ಪಟ್ಟ ಯುವಕ/ಯುವತಿಯರು ಮತಪಟ್ಟಿಗೆ ಸೇರ್ಪಡೆಗೊಳ್ಳಬೇಕಿದ್ದರೆ ಅವರು, ಚುನಾವಣಾ ಆಯೋಗದ ನಮೂನೆ-6ರಲ್ಲಿ ವಯಸ್ಸು, ಸಾಮಾನ್ಯ ವಾಸಸ್ಥಳದ ಪುರಾವೆ (ಆಧಾರ್ ಕಾರ್ಡ್, ಎಸೆಸೆಲ್ಸಿ ಅಂಕಪಟ್ಟಿ ಇನ್ನಿತರ ಸುಲಭವಾಗಿ ಸಿಗುವ ಸಾಮಾನ್ಯ ದಾಖಲೆಗಳನ್ನು) ನೀಡಿ ಅರ್ಜಿ ಸಲ್ಲಿಸಬಹುದಾಗಿತ್ತು. ಆದರೆ, ಎಸ್‌ಐಆರ್ ನಂತರದಲ್ಲಿ ನಮೂನೆ-6ರ ಮೂಲಕ ಮತಪಟ್ಟಿಗೆ ಸೇರ್ಪಡೆಗೊಳ್ಳುವುದೆಂದರೆ ಪ್ರತಿಯೊಬ್ಬರೂ ತಮ್ಮ ನಾಗರಿಕತ್ವವನ್ನೇ ಸಾಬೀತು ಪಡಿಸಿಕೊಳ್ಳುವುದು ಎಂಬಂತಾಗಿದೆ.
ಇದೀಗ ಹೊಸದಾಗಿ ಅರ್ಹ ಮತದಾರರು ಮತಪಟ್ಟಿಗೆ ಸೇರ್ಪಡೆಗೊಳ್ಳಲು ಕಡ್ಡಾಯವಾಗಿ ನಮೂನೆ-6ರ ಜೊತೆಗೆ ಘೋಷಣಾ ಪತ್ರ(Declareation Form) ಅನ್ನು ಸಲ್ಲಿಸಬೇಕಿದೆ. ಈ ಘೋಷಣಾ ನಮೂನೆಯಲ್ಲಿ, ಎಸ್‌ಐಆರ್ ಪ್ರಕ್ರಿಯೆಯಲ್ಲಿ ಗಣತಿ ನಮೂನೆ ತುಂಬಿದಂತೆ ಮತದಾರರು ಕಡ್ಡಾಯವಾಗಿ ತಮ್ಮ ತಂದೆ/ತಾಯಿ/ಅಜ್ಜ/ಅಜ್ಜಿ ಅವರೊಂದಿಗೆ ಪ್ರೊಜಿನಿ ಮ್ಯಾಪಿಂಗ್ ಮಾಡಿಕೊಳ್ಳಲೇಬೇಕು. ಅಷ್ಟೇ ಅಲ್ಲದೇ ಎಸ್‌ಐಆರ್‌ನಲ್ಲಿ ಕೇಳಿರುವ 12+1 ದಾಖಲೆಗಳಲ್ಲಿನ ಒಂದನ್ನು ಸಲ್ಲಿಸಲೇ ಬೇಕಿದೆ.
ಎಸ್‌ಐಆರ್ ಪ್ರಕ್ರಿಯೆಯಲ್ಲಿ ಸ್ಥಳಾಂತರಕ್ಕೆ ನಮೂನೆ-8 ಅನ್ನು ಕೊಡಿ ಎಂದು ಮತದಾರರು ಬಿಎಲ್‌ಒಗಳಿಗೆ ಕೇಳುತ್ತಿದ್ದರೂ, ನೀಡುತ್ತಿಲ್ಲ ಎಂಬ ಆರೋಪಗಳು ಪ್ರತಿನಿತ್ಯ ಬರುತ್ತಲೇ ಇವೆ. ಹಿರಿಯ ನಾಗರಿಕರು, ಬಾಡಿಗೆ ಮನೆಗಳಲ್ಲಿ ವಾಸಿಸುವವರು, ವಲಸೆ ಕಾರ್ಮಿಕರು ಹಾಗೂ ಉದ್ಯೋಗದ ಕಾರಣದಿಂದ ಸ್ಥಳ ಬದಲಾಯಿಸುವವರ ಮೇಲೆ ಹೆಚ್ಚಿನ ಪರಿಣಾಮ ಬೀರುವ ಸಾಧ್ಯತೆಯಿದೆ.
ಒಬ್ಬ ಮತದಾರ ನಿಜವಾಗಿಯೂ ಬೇರೆ ಪ್ರದೇಶಕ್ಕೆ ಸ್ಥಳಾಂತರಗೊಂಡಿದ್ದರೆ, ಅವರ ಮತದಾರರ ದಾಖಲೆಯನ್ನು ಹೊಸ ವಿಳಾಸಕ್ಕೆ ವರ್ಗಾಯಿಸುವುದು ಮೂಲ ಉದ್ದೇಶವಾಗಬೇಕು. ಅದು ಬಿಟ್ಟು, ಸ್ಥಳಾಂತರಗೊಂಡ ಮತದಾರರನ್ನು ಮತಪಟ್ಟಿಯಿಂದಲೇ ಡಿಲೀಟ್ ಮಾಡಿ ಪುನಃ ನಮೂನೆ-6 ಜೊತೆಗೆ ಡಿಕ್ಲರೇಷನ್ ಸಲ್ಲಿಸಿ, ದಾಖಲೆಗಳನ್ನು ಕೇಳುತ್ತಿರುವುದು, ಎಸ್‌ಐಆರ್ ಪ್ರಕ್ರಿಯೆ ಪಾರದರ್ಶಕವಾಗಿ ನಡೆಯುತ್ತಿಲ್ಲ ಇದರ ಹಿಂದೆ ದೊಡ್ಡ ಷಡ್ಯಂತ್ರವಿದೆ ಎಂದರ್ಥ.
-ಸರೋವರ್ ಬೆಂಕಿಕೆರೆ,
ವಕ್ತಾರ ನಾಗರಿಕ ಮತಕಾವಲು ಸಮಿತಿ






