ಖಾಲಿ ಹುದ್ದೆಗಳ ಭರ್ತಿಗೆ ರಾಜ್ಯ ಸರಕಾರದ ಹಿಂದೇಟು ಯಾಕೆ?

ಕಳೆದ ವಾರ ಯಾದಗಿರಿಯಲ್ಲಿ ನಡೆದ ಸರಕಾರಿ ಕಾರ್ಯಕ್ರಮದಲ್ಲಿ ರಾಜ್ಯ ಸಭೆಯಲ್ಲಿ ವಿರೋಧ ಪಕ್ಷದ ನಾಯಕರೂ, ಕಾಂಗ್ರೆಸ್ ಪಕ್ಷದ ಅಧ್ಯಕ್ಷರೂ ಆಗಿರುವ ಮಲ್ಲಿಕಾರ್ಜುನ ಖರ್ಗೆಯವರು ಕಲ್ಯಾಣ ಕರ್ನಾಟಕ ಭಾಗದಲ್ಲಿ ಖಾಲಿ ಬಿದ್ದಿರುವ ಶಿಕ್ಷಕರ ಮತ್ತು ಬ್ಯಾಕ್‌ಲಾಗ್ ಹುದ್ದೆಗಳು ಖಾಲಿ ಬಿದ್ದಿರುವ ಬಗ್ಗೆ ವೇದಿಕೆಯಲ್ಲಿ ಉಪಸ್ಥಿತರಿದ್ದ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಯವರ ಗಮನ ಸಳೆದರು. ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳ ಪರೀಕ್ಷಾ ಫಲಿತಾಂಶ ಕುಸಿತ ಕಾಣುತ್ತಿರುವುದಕ್ಕೆ ಶಿಕ್ಷಕರ ಹುದ್ದೆಗಳು ಖಾಲಿ ಬಿದ್ದಿರುವುದೂ ಕಾರಣವೆಂಬ ಆಕ್ಷೇಪದೊಂದಿಗೆ ಈ ಹುದ್ದೆಗಳನ್ನು ತುಂಬುವಂತೆ ಸರಕಾರಕ್ಕೆ ಸಲಹೆ ನೀಡಿದರು.
ಕಲ್ಯಾಣ ಕರ್ನಾಟಕಕ್ಕೆ ಸಂವಿಧಾನದಡಿ ವಿಶೇಷ ಸ್ಥಾನಮಾನ ದೊರಕಿಸಲು ಖರ್ಗೆಯವರು ವಹಿಸಿದ್ದ ಪಾತ್ರವನ್ನು ನೆನಪಿಸಿ ಕೊಂಡರೆ ಅವರ ಸಲಹೆಯನ್ನು ಸರಕಾರ ಕಡೆಗಣಿಸಲಿಕ್ಕಿಲ್ಲ. ವಿಶೇಷ ಸ್ಥಾನಮಾನ ಪಡೆದು ಸಾಕಷ್ಟು ವರ್ಷಗಳಾಗಿದ್ದರೂ ಈ ಭಾಗದ ಜಿಲ್ಲೆಗಳು ನಿರೀಕ್ಷಿತ ಪ್ರಗತಿ ಸಾಧಿಸಿಲ್ಲ ಎಂಬುದು ನಿಜ. ಇದಕ್ಕೆ ಹಲವಾರು ಕಾರಣಗಳಿರಬಹುದು. ಆದರೆ ಸರಕಾರದ ವಿವಿಧ ಇಲಾಖೆಗಳು ಕ್ರಮಬದ್ಧವಾಗಿ ದಕ್ಷತೆಯಿಂದ ಕಾರ್ಯ ನಿರ್ವಹಿಸಲು ಸಿಬ್ಬಂದಿ ಬಲ ಕೂಡ ಅಗತ್ಯ. ಖಾಯಂ ನೆಲೆಯ ಯೋಗ್ಯ ಶಿಕ್ಷಕರಿಲ್ಲದಿದ್ದರೆ ವಿದ್ಯಾರ್ಥಿಗಳು ಶೈಕ್ಷಣಿಕ ಪ್ರಗತಿ, ಸಾಧಿಸುವುದಾದರೂ ಹೇಗೆ? 371(ಜೆ) ಕಾಯ್ದೆಯ ಪ್ರಕಾರ ಈ ಪ್ರದೇಶದ ಖಾಲಿ ಹುದ್ದೆಗಳನ್ನು ತುಂಬಲು ಸರಕಾರದ ಹಣಕಾಸು ಇಲಾಖೆಯ ಅನುಮೋದನೆ ಅಗತ್ಯವೇನಿಲ್ಲ. ಆದರೂ ಖಾಲಿ ಹುದ್ದೆಗಳನ್ನು ಭರ್ತಿಗೊಳಿಸಲು ಉಂಟಾಗಿರುವ ತೊಡಕು ಏನೆಂಬುದು ಗೊತ್ತಾಗುತ್ತಿಲ್ಲ.
ವಿಶೇಷ ಸ್ಥಾನಮಾನ ಹೊಂದಿರುವ ಕಲ್ಯಾಣ ಕರ್ನಾಟಕದಲ್ಲಿಯೇ ಹುದ್ದೆಗಳನ್ನು ಭರ್ತಿಗೊಳಿಸಲು ಸಮಸ್ಯೆಯಾಗಿದೆ ಎನ್ನುವುದನ್ನು ನೋಡಿದರೆ ರಾಜ್ಯದ ಉಳಿದ ಜಿಲ್ಲೆಗಳಲ್ಲಿ ಯಾವ ಪರಿಸ್ಥಿತಿಯಿದೆ ಎನ್ನುವುದನ್ನು ಊಹಿಸಬಹುದಾಗಿದೆ. ಹಾಗೆ ನೋಡಿದರೆ ಸರಕಾರದ ವಿವಿಧ ಇಲಾಖೆಗಳಲ್ಲಿ ಮತ್ತು ಅದರ ಅಧೀನ ಸಂಸ್ಥೆಗಳಲ್ಲಿ ಪೂರ್ಣಪ್ರಮಾಣದ ನೇಮಕಾತಿ ನಡೆಯದೆ ಹಲವಾರು ವರ್ಷಗಳೇ ಕಳೆದಿವೆ ಎನ್ನಬಹುದು. ರಾಜ್ಯದಲ್ಲಿ ಬಹುಶ: ಪೊಲೀಸ್ ಇಲಾಖೆಯಲ್ಲಿ ಮಾತ್ರ ಕ್ರಮಬದ್ಧವಾಗಿ ನೇಮಕಾತಿ ನಡೆದಿರ ಬಹುದು. ಇನ್ನುಳಿದ ಕೆಲವು ಇಲಾಖೆಗಳಲ್ಲಿ ಕೆಲವು ಆಯ್ದ ಹುದ್ದೆಗಳಿಗೆ ಸೀಮಿತ ಪ್ರಮಾಣದ ಖಾಯಂ ನೇಮಕಾತಿ ನಡೆದಿರಬಹುದಷ್ಟೆ.
ಸರಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಅಂಕಿ-ಅಂಶಗಳ ಪ್ರಕಾರ ರಾಜ್ಯದಲ್ಲಿ ಒಟ್ಟು 7,80,748 ಮಂಜೂರಾದ ಹುದ್ದೆಗಳಿದ್ದು ಅದರಲ್ಲಿ 2,76,386 ಹುದ್ದೆಗಳು ಖಾಲಿ ಬಿದ್ದಿವೆ ಎನ್ನಲಾಗಿದೆ. ಅಂದರೆ ಶೇ. 35ರಷ್ಟು ಹುದ್ದೆಗಳು ತುಂಬಲು ಬಾಕಿಯಿದ್ದು ಸರಕಾರಿ ಯಂತ್ರ ಹೆಚ್ಚು ಕಡಿಮೆ ಮೂರನೇ ಎರಡರ ಸಂಖ್ಯಾಬಲ ಮತ್ತು ತಾತ್ಕಾಲಿಕ ಸಿಬ್ಬಂದಿಯ ಅತಂತ್ರ ಬಲದ ಸಹಾಯದಿಂದ ಕಾರ್ಯನಿರ್ವಹಿಸುತ್ತಿದೆ ಎನ್ನಬಹುದು. ನಿಜ, ಈ ಖಾಲಿ ಹುದ್ದೆಗಳ ಜಾಗದಲ್ಲಿ ತಾತ್ಕಾಲಿಕ, ಹೊರಗುತ್ತಿಗೆ, ಒಪ್ಪಂದ ಮುಂತಾದವುಗಳ ಆಧಾರದಲ್ಲಿ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಆದರೆ ಆಡಳಿತ ಶಿಸ್ತು, ದಕ್ಷತೆ, ಉತ್ತರದಾಯಿತ್ವ ಇತ್ಯಾದಿಗಳನ್ನು ಈ ವ್ಯವಸ್ಥೆಯಡಿ ಎಷ್ಟರ ಮಟ್ಟಿಗೆ ನಿರೀಕ್ಷಿಸಲು ಸಾಧ್ಯ? ಅಷ್ಟಕ್ಕೂ ಖಾಯಂ ಸಿಬ್ಬಂದಿಯ ಹೊಣೆಗಾರಿಕೆ, ಉತ್ತರದಾಯಿತ್ವವನ್ನು ತಾತ್ಕಾಲಿಕ ಸಿಬ್ಬಂದಿಯಿಂದ ಅಪೇಕ್ಷಿಸುವುದು ಉಚಿತವೂ ಅಲ್ಲ, ಕಾರ್ಯಸಾಧುವೂ ಅಲ್ಲ. ಇಂತಹ ಪರಿಸ್ಥಿತಿಯಲ್ಲಿ ಸರಕಾರಿ ಯೋಜನೆಗಳ ಅನುಷ್ಠಾನ ಕಾಲ ಮಿತಿಯಲ್ಲಿ ಜನರ ನಿರೀಕ್ಷೆಗಳಿಗೆ ಅನುಗುಣವಾಗಿ ನಡೆದೀತೇ? ರಾಜ್ಯದ ಜನತೆಯ ಕೆಲಸ ಕಾರ್ಯಗಳು ವಿಳಂಬಕ್ಕೆ ಆಸ್ಪದವಿಲ್ಲದಂತೆ ಸುಸೂತ್ರವಾಗಿ ಜರುಗೀತೇ?
ರಾಜ್ಯದ ಬಹುತೇಕ ಇಲಾಖೆಗಳು ಬಹುಶಃ ಸಿಬ್ಬಂದಿ ಕೊರತೆಯಿಂದ ಬಳಲುತ್ತಿದೆ. ಜನರು ತಮ್ಮ ಅವಶ್ಯಕತೆಗಾಗಿ ಕೆಲವು ಸರಕಾರಿ ಕಚೇರಿಗಳಿಗೆ ಭೇಟಿ ನೀಡುವಾಗ ಅಲ್ಲಿಯ ನೌಕರರು, ‘ಸ್ಟಾಫ್‌ಗಳಿಲ್ಲದೆ ನಾವು ಒದ್ದಾಡುತ್ತಿದ್ದೇವೆ. ಒಂದಷ್ಟು ದಿನ ಬಿಟ್ಟು ಬನ್ನಿ’ ಎಂದು ತಮ್ಮ ಅಳಲು ತೋಡಿ ಕೊಳ್ಳುವಂತಹ ವಾತಾವರಣವಿದೆ. ಇದರಿಂದ ಜನ ಸಾಮಾನ್ಯರು ಅನಗತ್ಯ ವಿಳಂಬ, ಅನನುಕೂಲತೆಗಳಿಗೆ ಗುರಿಯಾಗ ಬೇಕಾಗಿದೆ. ರಾಜ್ಯದ ವಿಶ್ವವಿದ್ಯಾನಿಲಯಗಳಲ್ಲಿ ಅಧ್ಯಾಪಕರ ಹುದ್ದೆಗಳಂತೂ ವರ್ಷಗಳಿಂದ ಖಾಲಿ ಬೀಳ ತೊಡಗಿ ಪರಿಸ್ಥಿತಿ ಶೋಚನೀಯವಾಗಿದೆ. ಪಾಠ, ಪ್ರವಚನಗಳಿಗೆ ಬಹುತೇಕ ಅತಿಥಿ ಉಪನ್ಯಾಸಕರನ್ನು ಅವಲಂಬಿಸಿರುವ ವಿಶ್ವವಿದ್ಯಾನಿಲಯಗಳು ವಿದ್ಯಾರ್ಥಿಗಳ ಕೊರತೆಯನ್ನು ಎದುರಿಸುತ್ತಿವೆ. ಇದರಿಂದ ಇವುಗಳ ಆಂತರಿಕ ಸಂಪನ್ಮೂಲ ತೀವ್ರವಾದ ಕುಸಿತ ಕಂಡು ಆರ್ಥಿಕ ಬಿಕ್ಕಟ್ಟು ತಲೆದೋರಿದೆ. ಮುಂಬರುವ ವರ್ಷಗಳಲ್ಲಿ ಕೆಲವು ವಿಶ್ವವಿದ್ಯಾನಿಲಯಗಳು ಬಾಗಿಲು ಮುಚ್ಚಿದರೂ ಆಶ್ಚರ್ಯವಿಲ್ಲ.
ದೇಶದಲ್ಲಿ ದಶಕಗಳ ಹಿಂದೆ ಸರಕಾರಿ ನೇಮಕಾತಿಗಳು ನಿಯಮಿತವಾಗಿ ನಡೆಯುತ್ತಿತ್ತು. ಇದರಿಂದ ಯುವಜನರ ಸರಕಾರಿ ಉದ್ಯೋಗದ ಕನಸು ಹಾಗೂ ಇಲಾಖೆಗಳ ಕೆಲಸ ಕಾರ್ಯಗಳು ಯಾವುದೇ ಸಮಸ್ಯೆಗಳಿಲ್ಲದೆ ಕೈಗೂಡುವಂತಿತ್ತು. ಯಾವಾಗ ದೇಶವು ಜಾಗತೀಕರಣ, ಉದಾರೀಕರಣ ಹಾಗೂ ಖಾಸಗೀಕರಣ ನೀತಿಯನ್ನು ಅನಸರಿಸತೊಡಗಿತೋ ಅಂದಿನಿಂದ ಸರಕಾರಗಳು ಮಧ್ಯಮ ಮತ್ತು ಕೆಳಹಂತದ ಸರಕಾರಿ ಹುದ್ದೆಗಳನ್ನು ಕಾಲ ಕಾಲಕ್ಕೆ ತುಂಬುವ ಪ್ರಕ್ರಿಯೆಗೆ ಹಿಂದೇಟು ಹಾಕತೊಡಗಿದವು. ಯಾವಾಗ ಉನ್ನತ ಶಿಕ್ಷಣದಲ್ಲಿ ಖಾಸಗಿ ವಿಶ್ವವಿದ್ಯಾನಿಲಯಗಳು, ಖಾಸಗಿ ಕಾಲೇಜುಗಳಿಗೆ ಮುಕ್ತ ಅವಕಾಶ ಲಭಿಸಿತೋ ಅಲ್ಲಿಂದ ಸರಕಾರಿ ವಿಶ್ವವಿದ್ಯಾನಿಲಯಗಳಲ್ಲಿ ಖಾಲಿ ಹುದ್ದೆಗಳ ಭರ್ತಿ ಎಂಬುದು ಸರಕಾರಕ್ಕೆ ಆದ್ಯತೆ ವಿಷಯವಾಗಿ ಉಳಿಯದೇ ಹೋಯಿತು. ಇದು ಹೊಸ ನೀತಿಗೆ ಅನುಗುಣವಾದ ಉದ್ದೇಶಪೂರ್ವಕವಾದ ನಡೆ ಎಂಬುದರಲ್ಲಿ ಸಂದೇಹ ಉಳಿದಿಲ್ಲ.
ಈ ನೀತಿಗೆ ಅನುಗುಣವಾಗಿ ರಾಜ್ಯ ಸರಕಾರ ಅಂದಾಜು ಹತ್ತು ಹದಿನೈದು ವರ್ಷಗಳ ಹಿಂದೆ ಜಾರಿಗೆ ತಂದಿರುವ ‘ಆರ್ಥಿಕ ಮಿತವ್ಯಯ ನೀತಿ’ ಎಂಬ ಪದ್ಧತಿ ಇಂದಿಗೂ ಖಾಲಿ ಹುದ್ದೆಗಳ ತುಂಬುವಿಕೆಗೆ ತಡೆಯಾಗಿ ನಿಂತಂತಿದೆ. ಮೂಲತಃ ಸರಕಾರಿ ವೆಚ್ಚದ ನಿಯಂತ್ರಣಕ್ಕೆ ಬಳಸ ಬೇಕಾದ ಈ ನೀತಿಯನ್ನು ನೇಮಕಾತಿಗೆ ಮಾತ್ರ ಬಳಸುತ್ತಿರುವುದು ಅತಾರ್ಕಿಕವೂ ಪ್ರತಿಗಾಮಿತನವೂ ಆಗಿರುವ ಕ್ರಮವೆಂದೇ ಹೇಳಬಹುದು. ನೌಕರರ ವೇತನ ಮತ್ತಿತರ ಸಂಬಂಧಿತ ವೆಚ್ಚದ ಉಳಿತಾಯವನ್ನು ಅದೆಷ್ಟು ಪರಿಣಾಮಕಾರಿಯಾಗಿ ಜನೋಪಯೋಗಿ ಕಾರ್ಯಗಳಿಗೆ ಬಳಸಿ ಕೊಳ್ಳಲಾಯಿತೋ ಗೊತ್ತಿಲ್ಲ. ಆದರೆ ನೌಕರರ ಗಮನಾರ್ಹ ಕೊರತೆಯಿಂದ ಸರಕಾರಿ ಇಲಾಖೆಗಳಲ್ಲಿ ಶಿಸ್ತು, ಬದ್ಧತೆ, ದಕ್ಷತೆ, ಉತ್ತರದಾಯಿತ್ವ ಇತ್ಯಾದಿಗಳೆಲ್ಲ ಕಡಿಮೆಯಾಗಿರುವುದು ಎದ್ದು ಕಾಣುವಂತಿದೆ. ಜೊತೆಗೆ ವಿಳಂಬ, ಭ್ರಷ್ಟತೆ, ಪಲಾಯನವಾದದ ದೂರುಗಳು ಹೆಚ್ಚಾಗಿರುವುದಂತೂ ಸತ್ಯ.
ಹುದ್ದೆಗಳಿಗೆ ನೇಮಕಾತಿ ಎಂಬುದನ್ನು ವೇತನ, ಭತ್ತೆ, ಪಿಂಚಣಿಗಳ ಅಧಿಕ ಹೊರೆಗಳುಳ್ಳ ಪುನರಾವರ್ತಿತ ಅನುತ್ಪಾದಿತ ವೆಚ್ಚವೆಂದು ಪರಿಗಣಿಸುವುದು ಸಲ್ಲದು. ಯಾಕೆಂದರೆ ಇದರಲ್ಲಿ ಆರ್ಥಿಕ ಪ್ರಶ್ನೆಗಿಂತ ಹೆಚ್ಚಾಗಿ ಇಡೀ ರಾಜ್ಯದ ಸಮಗ್ರ ಏಳಿಗೆಯ ಹಿತಾಸಕ್ತಿ, ಪ್ರಗತಿಯ ಆಶಯ ಒಳಗೊಂಡಿದೆ. ಸರಕಾರಿ ಯಂತ್ರ ಸಮರ್ಪಕವಾಗಿ ಕಾರ್ಯನಿರ್ವಹಿಸಲು ಅಗತ್ಯ ಅಧಿಕಾರಿ ಮತ್ತು ಸಿಬ್ಬಂದಿ ಬಲ ಅತ್ಯಂತ ಅನಿವಾರ್ಯ. ಆದರೆ ನಿರ್ಣಯ, ನೀತಿ-ನಿರ್ಧಾರ ಕೈಗೊಳ್ಳುವ ಶಾಸಕರು, ಸಚಿವರು, ಉನ್ನತ ಅಧಿಕಾರಿಗಳು ಈ ನಿಟ್ಟಿನಲ್ಲಿ ನಿರ್ಲಕ್ಷ್ಯ, ನಿರಾಸಕ್ತಿ ಧೋರಣೆ ತಾಳಿದರೆ ಏನು ಮಾಡಲು ಸಾಧ್ಯ? ಇರಲಿ, ನಂತರ 2006ರ ಬಳಿಕ ರಾಜ್ಯ ಸರಕಾರಕ್ಕೆ ವೆಚ್ಚದ ದೃಷ್ಟಿಯಿಂದ ಕೊಂಚ ಅನುಕೂಲಕರ ಪರಿಸ್ಥಿತಿಯೂ ಸೃಷ್ಟಿಯಾಯಿತು. ದೇಶದಾದ್ಯಂತ ಹೊಸ ಪಿಂಚಣಿ ನೀತಿಯನ್ನು ಜಾರಿಗೊಳಿಸಲಾಗಿರುವುದರಿಂದ ಇಲ್ಲಿಯೂ 01.04.2006ರಿಂದ ಅನ್ವಯವಾಗುವಂತೆ ಹೊಸ ಪಿಂಚಣಿ ಯೋಜನೆಯನ್ನು ಜಾರಿ ಗೊಳಿಸಲಾಯಿತು. ಇದರಿಂದ ಸರಕಾರದ ಪಿಂಚಣಿ ಸಂಬಂಧಿತ ಆರ್ಥಿಕ ವೆಚ್ಚ ಕಡಿಮೆಯಾಗಿದೆ. ಈ ಕಾರಣದಿಂದಾದರೂ ಒಂದು ಹಂತದ ಗಣನೀಯ ನೇಮಕಾತಿಗೆ ಸರಕಾರ ಮನಸ್ಸು ಮಾಡ ಬಹುದಿತ್ತು. ಆದರೆ ಸರಕಾರದ ನೀತಿಯಲ್ಲಿ ಯಾವುದೇ ಬದಲಾವಣೆಯಾಗಿಲ್ಲದಿರುವುದು ಖೇದಕರ.
2023ರಲ್ಲಿ ಹೊಸ ಸರಕಾರ ರಚನೆಯಾಗಿ ಅನೇಕ ಹೊಸ ನೇಮಕಾತಿ ಅಧಿಸೂಚನೆಗಳು ಪ್ರಕಟವಾಗಿ ಭರವಸೆ ಗರಿ ಕೆದರಿದ್ದವು. ವಾಣಿಜ್ಯ ತೆರಿಗೆ ನಿರೀಕ್ಷಕ, ಪಿಡಿಒ, ಕಿರಿಯ ಅಭಿಯಂತರ ಸಹಿತ ಇತರ ತಾಂತ್ರಿಕ ಹುದ್ದೆ, ಗಜೆಟೆಡ್ ಪ್ರೊಬೆಷನರಿ ಹುದ್ದೆ, ಗ್ರಾಮ ಆಡಳಿತ ಅಧಿಕಾರಿ ಮುಂತಾದ ಹಲವಾರು ಹುದ್ದೆಗಳ ಭರ್ತಿ ಪ್ರಕ್ರಿಯೆಗೆ ಚಾಲನೆ ಸಿಕ್ಕಿತ್ತು. ಇದರಲ್ಲಿ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳ ನೇಮಕಾತಿ ಮಾತ್ರ ಯಾವುದೇ ತೊಡಕಿಲ್ಲದೆ ಯಶಸ್ವಿಯಾಗಿ ನಡೆಯಿತು. 384 ಗಜೆಟೆಡ್ ಪ್ರೊಬೆಷನರಿ ಹುದ್ದೆಗಳಿಗೆ ನಡೆದ ನೇಮಕಾತಿ ಪ್ರಕ್ರಿಯೆ ಅಡೆತಡೆಗಳಿಗೆ ಸಿಲುಕಿ ಇದೀಗ ಕರ್ನಾಟಕ ಆಡಳಿತ ನ್ಯಾಯ ಮಂಡಳಿಯು ನೇಮಕಾತಿ ಅಧಿಸೂಚನೆಯನ್ನೇ ರದ್ದು ಗೊಳಿಸುವಲ್ಲಿ ಬಂದು ನಿಂತಿದೆ. ಇನ್ನುಳಿದ ಹುದ್ದೆಗಳ ನೇಮಕಾತಿಗಳು ಅಂತಿಮ ಹಂತದಲ್ಲಿ ಕೆಪಿಎಸ್‌ಸಿ ಸದಸ್ಯರ ಭಿನ್ನಾಭಿಪ್ರಾಯದಿಂದ ಹಿನ್ನಡೆ ಕಂಡಿದೆ.
ಸರಕಾರಿ ಹುದ್ದೆಗಳ ಖಾಯಂ ನೇಮಕಾತಿಯಲ್ಲಿ ವೇತನ, ಪಿಂಚಣಿ ಮತ್ತು ಇನ್ನಿತರ ವೆಚ್ಚಗಳು ರಾಜ್ಯದ ಬೊಕ್ಕಸಕ್ಕೆ ಹೊರೆಯಾಗುತ್ತದೆ ಎನ್ನುವುದು ನೇಮಕಾತಿಗೆ ಅಡ್ಡಿಯಾಗ ಬಾರದು. ಸರಕಾರ ಬೇಕಿದ್ದರೆ ಸೂಕ್ತ ಪರಿಶೀಲನೆ, ಅಧ್ಯಯನ ನಡೆಸಿ ಅನಗತ್ಯ ಹೆಚ್ಚುವರಿ ಹುದ್ದೆಗಳನ್ನು ರದ್ದುಗೊಳಿಸಬಹುದು. ಈ ನಿಟ್ಟಿನಲ್ಲಿ ರಾಜ್ಯ ಆಡಳಿತ ಸುಧಾರಣಾ ಆಯೋಗದ ವರದಿಯೂ ಸರಕಾರದ ನೆರವಿಗೆ ಬರಬಹುದು. ಆದರೆ ಸರಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಬೀಳುತ್ತಿರುವಂತಹ ಹುದ್ದೆಗಳನ್ನು ಕಾಲ ಮಿತಿಯಲ್ಲಿ ತುಂಬಲು ಕ್ರಮ ತೆಗೆದು ಕೊಳ್ಳುವುದು ಅಗತ್ಯ. ಇದಕ್ಕೆ ತಾತ್ಕಾಲಿಕ ನೆಲೆಯ ನೇಮಕಾತಿಗಳು ಎಂದಿಗೂ ಪರ್ಯಾಯವಾಗಲಾರದು. ರಾಜ್ಯದ ಸರ್ವಾಂಗೀಣ, ಸಮತೋಲಿತ ಅಭಿವೃದ್ಧಿಗಾಗಿ ಖಾಯಂ ನೆಲೆಯ ನೇಮಕಾತಿಯೇ ದೂರದೃಷ್ಟಿಯ ಹೆಜ್ಜೆ. ಇದರಿಂದ ದ್ವಿಮುಖವಾದ ಫಲಿತಾಂಶ ಕಾಣಲು ಸಾಧ್ಯ. ಆಡಳಿತ ಯಂತ್ರ ಬದ್ಧತೆ, ದಕ್ಷತೆ, ಉತ್ತರದಾಯಿತ್ವದಿಂದ ಚುರುಕು ಗೊಳ್ಳುವುದು ಒಂದು ಸಾಧ್ಯತೆಯಾದರೆ ದೊಡ್ಡ ಸಂಖ್ಯೆಯಲ್ಲಿರುವ ಅರ್ಹ ಯುವಜನರಿಗೆ ಸೇವಾ ಭದ್ರತೆಯುಳ್ಳ ಭರವಸೆಯ ನೌಕರಿ ದೊರಕುವಂತಹ ಅವಕಾಶ ಇನ್ನೊಂದು ಸಾಧ್ಯತೆ. ಇವುಗಳ ಒಟ್ಟು ಪ್ರಯೋಜನ ನಾಡಿಗೆ ಲಭ್ಯವಾಗುವುದು ನಿಶ್ಚಿತ.







