Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ನೆಲದನಿ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಮಾಹಿತಿ ಮಾರ್ಗದರ್ಶನ
    • ಆರೋಗ್ಯ
    • ಓ ಮೆಣಸೇ
    • ಕೃತಿ ಪರಿಚಯ
    • ಝಲಕ್
    • ಬುಡಬುಡಿಕೆ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ತುಂಡು ಪರದೆ ದೇಶದ ಮಾನ ಕಾಪಾಡೀತೇ?

ತುಂಡು ಪರದೆ ದೇಶದ ಮಾನ ಕಾಪಾಡೀತೇ?

ಸುರೇಂದ್ರ ಪೈ ಭಟ್ಕಳಸುರೇಂದ್ರ ಪೈ ಭಟ್ಕಳ17 Sept 2026 12:24 PM IST
share
ತುಂಡು ಪರದೆ ದೇಶದ ಮಾನ ಕಾಪಾಡೀತೇ?

ಒಂದು ಕಡೆ ಭಾರತವು ಶೇ. 7.8ರಷ್ಟು ಗಣನೀಯ ಜಿಡಿಪಿ ಬೆಳವಣಿಗೆಯನ್ನು ಸಾಧಿಸಿದೆ ಮತ್ತು ಜಾಗತಿಕ ಆರ್ಥಿಕತೆಯಲ್ಲಿ ತೃತೀಯ ಸ್ಥಾನದತ್ತ ಹೆಜ್ಜೆ ಇಡುತ್ತಿದೆ ಎಂದು ಹೆಮ್ಮೆಯಿಂದ ಬಿಂಬಿಸಿಕೊಳ್ಳುವ ಸಂದರ್ಭದಲ್ಲಿ, ಅದೇ ದೇಶದ ಬಡವರ ಬದುಕನ್ನು, ಕೊಳೆಗೇರಿ ಪ್ರದೇಶದ ಜನರ ನಿತ್ಯ ನೋವಿನ ಬದುಕಿನ ಹೊರಾಟದ ಕರಾಳ ಮುಖವನ್ನು ಮುಚ್ಚಿಡಲು ಆಡಳಿತ ವ್ಯವಸ್ಥೆಯು ಪರದೆಗಳ ಮೊರೆ ಹೋಗಿದೆ. ಆದರೆ ದೇಶದ ಕೋಟ್ಯಂತರ ಬಡ ಕೊಳೇಗೇರಿ ನಿವಾಸಿಗಳ ಬದುಕಿನ ವಾಸ್ತವತೆಯನ್ನು ಮುಚ್ಚಲು ಪರದೆಗಳಿಂದ ಸಾಧ್ಯವೇ?

ನವದೆಹಲಿಯಲ್ಲಿ ನಡೆದ 18ನೇ ಬ್ರಿಕ್ಸ್ (BRICS) ಸಮ್ಮೇಳನದ ವೇಳೆ ಕೊಳೆಗೇರಿಗಳನ್ನು (ಪ್ರಮುಖವಾಗಿ ವಸಂತ್ ವಿಹಾರ್‌ನ ಕೂಲಿ ಕ್ಯಾಂಪ್ ಪ್ರದೇಶ) ನೀಲಿ ಮತ್ತು ಬಿಳಿ ಬಣ್ಣದ ಪರದೆಗಳು ಹಾಗೂ ಬ್ಯಾನರ್‌ಗಳಿಂದ ಮುಚ್ಚಲಾಗಿತ್ತು. ಅಂತರ್‌ರಾಷ್ಟ್ರೀಯ ಮಟ್ಟದ ಪ್ರಮುಖ ಶೃಂಗಸಭೆಗಳು ಅಥವಾ ಇನ್ನಿತರ ಕಾರ್ಯಕ್ರಮ, ಸ್ಪರ್ಧೆಗಳಿಗಾಗಿ ವಿವಿಧ ದೇಶದ ನಾಯಕರು, ಅತಿಥಿಗಳ ಆಗಮನದ ಸಂದರ್ಭದಲ್ಲಿ ನಗರದ ಕೊಳೆಗೇರಿಗಳು ಮತ್ತು ಬಡವರ ಮನೆಗಳನ್ನು ಪರದೆಗಳು ಅಥವಾ ತಾತ್ಕಾಲಿಕ ತಡೆಗೋಡೆಗಳು ಮರೆಮಾಚುವ ವಿದ್ಯಮಾನವು ಇತ್ತೀಚಿನ ವರ್ಷಗಳಲ್ಲಿ ದೇಶದ ಪ್ರಮುಖ ನಗರಗಳಲ್ಲಿ ಒಂದು ನಿರಂತರ ಆಚರಣೆಯಂತೆ ರೂಪುಗೊಳ್ಳುತ್ತಿದೆ. ಇಂತಹ ಆಡಳಿತಾತ್ಮಕ ಪರಿಪಾಠ ಹೊಸದೇನಲ್ಲ. ಇದು ದಶಕಗಳಿಂದ ವಿವಿಧ ಸರಕಾರಗಳ ಆಡಳಿತದಲ್ಲಿ ಬೇರೆ ಬೇರೆ ರೂಪಗಳಲ್ಲಿ ನಡೆಯುತ್ತಲೇ ಬಂದಿದೆ.

ಫೆಬ್ರವರಿ 2020 ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್‌ನ ಅಹಮದಾಬಾದ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ, ವಿಮಾನ ನಿಲ್ದಾಣದಿಂದ ಮೊಟೇರಾ ಕ್ರೀಡಾಂಗಣದವರೆಗೆ ಸಾಗುವ ರಸ್ತೆಯ ಬಲಬದಿಯಲ್ಲಿದ್ದ ‘ಶರಣ್ಯಾವಾಸ್’ ಕೊಳೆಗೇರಿಯನ್ನು ಮುಚ್ಚಲು ಅಹಮದಾಬಾದ್ ಮುನ್ಸಿಪಲ್ ಕಾರ್ಪೊರೇಷನ್ ಸುಮಾರು 700 ಮೀಟರ್ ಉದ್ದ ಮತ್ತು 4 ಅಡಿ ಎತ್ತರದ ಶಾಶ್ವತ ಇಟ್ಟಿಗೆಯ ಗೋಡೆಯನ್ನು ರಾತ್ರೋರಾತ್ರಿ ನಿರ್ಮಿಸಿತ್ತು. ಅದಕ್ಕೂ ಮುನ್ನ ಜಪಾನ್ ಪ್ರಧಾನಿ ಶಿಂಜೋ ಅಬೆ (2017) ಮತ್ತು ಚೀನಾದ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಹಾಗೂ ‘ವೈಬ್ರಂಟ್ ಗುಜರಾತ್’ ಸಮಾವೇಶಗಳ ಸಂದರ್ಭದಲ್ಲೂ ಟಾರ್ಪಾಲಿನ್ ಪರದೆಗಳನ್ನು ಬಳಸಿ ಕೊಳೆಗೇರಿಗಳನ್ನು ಮರೆಮಾಚಲಾಗಿತ್ತು.

ಸೆಪ್ಟಂಬರ್ 2023 ಹೊಸದಿಲ್ಲಿಯಲ್ಲಿ ಜಿ-20 ಶೃಂಗಸಭೆ ನಡೆದಾಗ ದಿಲ್ಲಿಯ ವಸಂತ್ ಕುಂಜ್ ಮತ್ತು ಇಂದಿರಾಗಾಂಧಿ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದ ಸುತ್ತಮುತ್ತಲಿನ ಮಾರ್ಗಗಳಲ್ಲಿ ಬರುವ ಕೂಲಿ ಕ್ಯಾಂಪ್ ಸೇರಿದಂತೆ ಹಲವು ಬಡ ಸ್ಲಮ್ ಪ್ರದೇಶಗಳು ಅತಿಥಿಗಳ ಕಣ್ಣಿಗೆ ಬೀಳದಂತೆ ಇದೇ ರೀತಿಯ ದಪ್ಪ ಹಸಿರು ಹಾಗೂ ನೀಲಿ-ಬಿಳಿ ಬಣ್ಣದ ಬಟ್ಟೆಯ ಪರದೆಗಳನ್ನು ಅಳವಡಿಸಲಾಗಿತ್ತು.

ಅಕ್ಟೋಬರ್ 2010ರಲ್ಲಿ ಕಾಮನ್‌ವೆಲ್ತ್ ಗೇಮ್ಸ್ ಕ್ರೀಡಾಕೂಟಕ್ಕಾಗಿ ಹೊಸದಿಲ್ಲಿಗೆ ವಿದೇಶಿ ಅತ್ಲೀಟ್‌ಗಳು ಮತ್ತು ಗಣ್ಯರು ಆಗಮಿಸಿದಾಗ, ನಗರದ ಸುಂದರೀಕರಣದ ಹೆಸರಿನಲ್ಲಿ ರಸ್ತೆ ಬದಿಯ ಕೊಳೆಗೇರಿಗಳನ್ನು ಮತ್ತು ತಾತ್ಕಾಲಿಕ ಗುಡಿಸಲುಗಳನ್ನು ಮರೆಮಾಚಲು ದೊಡ್ಡ ದೊಡ್ಡ ಹಸಿರು ಬಟ್ಟೆಯ ಪರದೆಗಳು ಹಾಗೂ ತಡೆಗೋಡೆಗಳನ್ನು ಹಾಕಲಾಗಿತ್ತು. ಜೊತೆಗೆ ಸಾವಿರಾರು ಬೀದಿಬದಿ ವ್ಯಾಪಾರಿಗಳನ್ನು ಮತ್ತು ಬಡವರನ್ನು ಅಲ್ಲಿಂದ ಒಕ್ಕಲೆಬ್ಬಿಸಲಾಗಿತ್ತು.

ಅಮೆರಿಕದ ಅಧ್ಯಕ್ಷರು ಅಥವಾ ಬ್ರಿಟನ್ ಪ್ರಧಾನಿಗಳಂತಹ ಉನ್ನತ ನಾಯಕರು ದಿಲ್ಲಿ ಅಥವಾ ಮುಂಬೈನಂತಹ ಮಹಾನಗರಗಳಿಗೆ ಭೇಟಿ ನೀಡಿದಾಗಲೆಲ್ಲ, ವಿವಿಐಪಿ ಕಾರು ಸಂಚರಿಸುವ ಮಾರ್ಗಗಳಲ್ಲಿರುವ ಬಡಾವಣೆಗಳಿಗೆ ಸುಣ್ಣ-ಬಣ್ಣ ಬಳಿಯುವುದು, ಪರದೆ ಹಾಕುವುದು ಅಥವಾ ಅಂತಹ ಜನರನ್ನು ಆ ರಸ್ತೆಗಳಿಂದ ತಾತ್ಕಾಲಿಕವಾಗಿ ದೂರವಿಡುವ ಕ್ರಮಗಳು ದೀರ್ಘಕಾಲದಿಂದ ಭಾರತದಲ್ಲಿ ಆಳವಾಗಿ ಬೇರೂರಿರುವ ‘ಪ್ರತಿಷ್ಠಿತ ಅತಿಥಿಗಳಿಗಾಗಿ ವಾಸ್ತವತೆಯನ್ನು ಮರೆಮಾಚುವ’ ವ್ಯವಸ್ಥಿತ ಧೋರಣೆಯ ಭಾಗವಾಗಿ ಮುಂದುವರಿದುಕೊಂಡು ಬಂದಿದೆ.

ಈ ರೀತಿಯ ಚಿತ್ರಣಗಳು ದೇಶದ ಆರ್ಥಿಕ ಮತ್ತು ಸಾಮಾಜಿಕ ವಾಸ್ತವತೆಯ ಬಗ್ಗೆ ಗಂಭೀರ ಚರ್ಚೆಯನ್ನು ಹುಟ್ಟುಹಾಕುವ ವಿಷಯವಾಗಿದೆ. ಜಾಗತಿಕ ನಾಯಕರು ನಗರಕ್ಕೆ ಕಾಲಿಟ್ಟಾಗ ರಾಷ್ಟ್ರದ ಕಲಾತ್ಮಕ ಮತ್ತು ಆಧುನಿಕ ಮುಖವನ್ನು ಜಗತ್ತಿಗೆ ಪರಿಚಯಿಸುವುದು ಯಾವುದೇ ಸರಕಾರದ ಆದ್ಯತೆಯಾಗಿರಬಹುದು. ಆದರೆ ಈ ಅಭಿವೃದ್ಧಿಯ ಪರಿಕಲ್ಪನೆಯು ಕೇವಲ ಮೇಲ್ಮೈ ಸೌಂದರ್ಯಕ್ಕೆ ಸೀಮಿತಗೊಂಡಾಗ ಮೂಲ ಸಮಸ್ಯೆಗಳು ಮುಚ್ಚಿಹೋಗುತ್ತವೆ. ನಗರೀಕರಣದ ಪ್ರಕ್ರಿಯೆಯಲ್ಲಿ ಕೊಳೆಗೇರಿಗಳು ಸಹ ಒಂದು ಅವಿಭಾಜ್ಯ ಅಂಗವಾಗಿ ಬೆಳೆದುಬಂದಿವೆ. ದಶಕಗಳಿಂದ ನಗರದ ಆರ್ಥಿಕ ಚಕ್ರವನ್ನು ಜೀವಂತವಾಗಿರಿಸಲು ಶ್ರಮಿಸುತ್ತಿರುವ ದೈನಂದಿನ ಕೂಲಿ ಕಾರ್ಮಿಕರು, ಬೀದಿಬದಿ ವ್ಯಾಪಾರಿಗಳು ಮತ್ತು ಬಡ ವರ್ಗದ ಜನರನ್ನು ಅತಿಥಿಗಳ ಕಣ್ಣಿಗೆ ಬೀಳದಂತೆ ತಾತ್ಕಾಲಿಕ ಗೋಡೆಗಳು ಅಥವಾ ಬಟ್ಟೆಯ ಪರದೆಗಳಿಂದ ಮುಚ್ಚುವುದು ಮಾನವೀಯ ಮೌಲ್ಯಗಳ ಗಂಭೀರ ಉಲ್ಲಂಘನೆಯಲ್ಲವೇ? ಇದು ಅವರ ಬದುಕನ್ನು ಅಪಹಾಸ್ಯ ಮಾಡಿದಂತಾಗುವುದಿಲ್ಲವೇ?

ಇದು ಕೇವಲ ಕಣ್ಣಿಗೆ ಕಾಣದಂತೆ ಮಾಡುವ ಯತ್ನ ಮಾತ್ರವಲ್ಲ, ಬಡತನದ ಅಸ್ತಿತ್ವವನ್ನೇ ನಿರಾಕರಿಸುವ ಮಾನಸಿಕತೆಯ ಪ್ರತೀಕವಾಗಿದೆ. ಅತಿಥಿಗಳು ಬಂದಾಗ ಕೊಳೆಗೇರಿಗಳನ್ನು ಮರೆಮಾಚುವುದರಿಂದ ಆ ಕೊಳೆಗೇರಿಯಲ್ಲಿ ವಾಸಿಸುವ ಜನರ ಬಡತನವು ಮಾಯವಾಗುವುದಿಲ್ಲ. ಬದಲಿಗೆ, ಇದು ಆಡಳಿತ ವ್ಯವಸ್ಥೆಯು ತನ್ನ ವೈಫಲ್ಯಗಳನ್ನು ಸಾರ್ವಜನಿಕವಾಗಿ ಒಪ್ಪಿಕೊಳ್ಳಲು ಮತ್ತು ಸಮಸ್ಯೆಗಳ ಮೂಲ ಬೇರನ್ನು ಬಗೆಹರಿಸುವ ಬದಲು ಮುಚ್ಚಿಹಾಕುವ ಸುಲಭ ದಾರಿಯನ್ನು ಹಿಡಿದಿರುವುದನ್ನು ಸ್ಪಷ್ಟಪಡಿಸುತ್ತದೆ.

ಬಡತನ ಮುಚ್ಚುವ ಈ ಪರಿಪಾಠವು ನಮ್ಮ ಆರ್ಥಿಕ ನೀತಿಗಳ ಆದ್ಯತೆಯನ್ನು ಪ್ರಶ್ನಿಸುವಂತೆ ಮಾಡುತ್ತದೆ. ದೇಶದ ಜಿಡಿಪಿ ಹೆಚ್ಚಳವಾಗಿದೆ ಎಂದು ಬಿಂಬಿಸಿಕೊಂಡರೂ ಬಡವರ ಹೊಟ್ಟೆಪಾಡಿಗೆ ಖಾತರಿ ಸಿಗುತ್ತಿಲ್ಲವಾದರೆ, ಆರ್ಥಿಕ ಪ್ರಗತಿಯ ನಿಜವಾದ ಅರ್ಥವೇನು? ಭಾರತದ ಯಶಸ್ಸು ಎಂದರೆ ಅದು ಕೇವಲ ಹೈಟೆಕ್ ಕಾರಿಡಾರ್‌ಗಳು, ಗಗನಚುಂಬಿ ಕಟ್ಟಡಗಳು ಮತ್ತು ಜಾಗತಿಕ ಶೃಂಗಸಭೆಗಳಲ್ಲಿ ಭಾಗವಹಿಸುವುದಷ್ಟೇ ಅಲ್ಲ; ಬದಲಿಗೆ ಸಮಾಜದ ಕಟ್ಟಕಡೆಯ ಮನುಷ್ಯನಿಗೆ ಒಂದು ಹೊತ್ತಿನ ಊಟ, ಸುರಕ್ಷಿತ ನೆಲೆ ಮತ್ತು ಘನತೆಯ ಬದುಕು ದೊರೆಯುವುದೇ ನಿಜವಾದ ಪ್ರಗತಿ.

ಸರಕಾರಗಳು ಮತ್ತು ನೀತಿ ನಿರೂಪಕರು ದೀರ್ಘಕಾಲೀನ ಪರಿಹಾರಗಳನ್ನು ಹುಡುಕುವ ಬದಲು ತಾತ್ಕಾಲಿಕ ಮತ್ತು ಮೇಲ್ಮೈ ಮಟ್ಟದ ಕ್ರಮಗಳಿಗೆ ಹೆಚ್ಚು ಮೊರೆ ಹೋಗುತ್ತಿರುವುದು ದುರದೃಷ್ಟಕರ. ಬಡವರ ಕಷ್ಟವನ್ನು ಶಾಶ್ವತವಾಗಿ ನಿವಾರಿಸಬೇಕೆಂಬ ಬದ್ಧತೆ ಮತ್ತು ರಾಜಕೀಯ ಇಚ್ಛಾಶಕ್ತಿಯ ಕೊರತೆಯು ಈ ರೀತಿಯ ಘಟನೆಗಳಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ. ಬಡತನ ನಿರ್ಮೂಲನ ಎಂದರೆ ಬಡವರನ್ನು ಕಣ್ಣಿಗೆ ಬೀಳದಂತೆ ಮಾಡುವುದಲ್ಲ. ಅಥವಾ ಅವರನ್ನು ನಗರದ ಕೇಂದ್ರ ಭಾಗದಿಂದ ದೂರದ ಅಂಚಿಗೆ ಬಲವಂತವಾಗಿ ಸ್ಥಳಾಂತರಿಸುವುದಲ್ಲ.

ಬಡವರ ಕಷ್ಟ ನಿವಾರಣೆಗೆ ಗುಣಮಟ್ಟದ ಶಿಕ್ಷಣ, ಕೈಗೆಟಕುವ ಆರೋಗ್ಯ ಸೇವೆ, ಶಾಶ್ವತ ಉದ್ಯೋಗಾವಕಾಶಗಳು ಮತ್ತು ಸಾರ್ವಜನಿಕ ವಸತಿ ವ್ಯವಸ್ಥೆಯ ಬಲವರ್ಧನೆ ಅತ್ಯಗತ್ಯ. ಆದರೆ ಇಂತಹ ರಚನಾತ್ಮಕ ಸುಧಾರಣೆಗಳಿಗೆ ದೀರ್ಘಾವಧಿಯ ಶ್ರಮ, ಬಂಡವಾಳ ಹೂಡಿಕೆ ಮತ್ತು ದೃಢ ರಾಜಕೀಯ ನಿರ್ಧಾರಗಳ ಅಗತ್ಯವಿರುತ್ತದೆ. ಇದಕ್ಕೆ ವ್ಯತಿರಿಕ್ತವಾಗಿ, ಸಮ್ಮೇಳನಗಳು ನಡೆಯುವ ಕೆಲವೇ ದಿನಗಳ ಮುಂಚೆ ಬಟ್ಟೆಯ ಪರದೆಗಳನ್ನು ಕಟ್ಟುವುದು ಅಥವಾ ಬಡಾವಣೆಗಳನ್ನು ಮರೆಮಾಚುವುದು ಆಡಳಿತದ ದೃಷ್ಟಿಯಿಂದ ಅತ್ಯಂತ ಸುಲಭವಾದ ಮಾರ್ಗವಾಗಿದೆ. ಇದು ಸರಕಾರದ ಆದ್ಯತೆಗಳು ಜನಪರತೆಗಿಂತ ಹೆಚ್ಚಾಗಿ ಪ್ರಚಾರ ಮತ್ತು ಪ್ರತಿಷ್ಠೆಯ ಕಡೆಗೆ ವಾಲುತ್ತಿರುವುದನ್ನು ತೋರಿಸುತ್ತದೆ.

ಭಾರತದಂತಹ ಬೃಹತ್ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಪ್ರತಿಯೊಬ್ಬ ನಾಗರಿಕನಿಗೂ ಸಮಾನತೆಯಿಂದ ಬದುಕುವ ಹಕ್ಕಿದೆ. ಸಂವಿಧಾನವು ನೀಡಿರುವ ಘನತೆಯ ಬದುಕಿನ ಆಶಯಕ್ಕೆ ಇಂತಹ ಆಚರಣೆಗಳು ಧಕ್ಕೆ ತರುತ್ತವೆ. ಅತಿಥಿಗಳು ಬರುವಾಗ ದೇಶದ ದೌರ್ಬಲ್ಯಗಳನ್ನು ಮುಚ್ಚಿಡುವುದು ನಮ್ಮ ನಿಜವಾದ ಸಂಸ್ಕೃತಿಯಲ್ಲ. ಅತಿಥಿಗಳಿಗೆ ಭಾರತದ ಶ್ರೀಮಂತ ಇತಿಹಾಸದ ಜೊತೆಗೆ, ನಮ್ಮ ಸವಾಲುಗಳನ್ನು ಮತ್ತು ಅವುಗಳನ್ನು ಎದುರಿಸಲು ನಾವು ನಡೆಸುತ್ತಿರುವ ಪ್ರಾಮಾಣಿಕ ಪ್ರಯತ್ನಗಳನ್ನು ಮುಕ್ತವಾಗಿ ತೋರಿಕೊಳ್ಳುವ ಆತ್ಮವಿಶ್ವಾಸವಿರಬೇಕು.

ಬಡತನವನ್ನು ಮರೆಮಾಚುವ ಬದಲು, ಆ ಬಡತನವನ್ನು ಹೋಗಲಾಡಿಸಲು ಸಂಪನ್ಮೂಲಗಳನ್ನು ವಿನಿಯೋಗಿಸುವುದು ಸರಕಾರದ ಪ್ರಥಮ ಕರ್ತವ್ಯವಾಗಬೇಕು. ಜಾಗತಿಕ ವೇದಿಕೆಗಳಲ್ಲಿ ದೇಶದ ಅಭಿವೃದ್ಧಿಯ ಬಗ್ಗೆ ಭಾಷಣ ಮಾಡುವಾಗ, ಅದೇ ದೇಶದ ನೆಲದ ಮೇಲೆ ಬದುಕುತ್ತಿರುವ ಕೋಟ್ಯಂತರ ಬಡವರ ವಾಸ್ತವ ಸ್ಥಿತಿಯನ್ನು ಮರೆಯಬಾರದು. ಪರದೆಗಳನ್ನು ಹಾಕಿ ಮುಚ್ಚಬಹುದಾದ್ದು ಕೇವಲ ದೃಶ್ಯಗಳನ್ನು ಮಾತ್ರ; ಆದರೆ ವಾಸ್ತವತೆಯನ್ನು, ಹಸಿವನ್ನು ಮತ್ತು ನೋವನ್ನು ಯಾವ ಪರದೆಯೂ ಶಾಶ್ವತವಾಗಿ ಮುಚ್ಚಿಡಲಾರದು.

ಕೊನೆಯದಾಗಿ, ಬ್ರಿಕ್ಸ್ ಸಮ್ಮೇಳನವಾಗಲಿ ಅಥವಾ ಇನ್ನಿತರ ಯಾವುದೇ ಜಾಗತಿಕ ಆಯೋಜನೆ ಗಳಾಗಲಿ, ಅವು ದೇಶದ ಆರ್ಥಿಕ ಬೆಳವಣಿಗೆಯನ್ನು ಪ್ರದರ್ಶಿಸುವ ವೇದಿಕೆಗಳಾಗುವ ಜೊತೆಗೆ, ದೇಶದ ಪ್ರತಿಯೊಬ್ಬ ನಾಗರಿಕನ ಕಷ್ಟಗಳಿಗೆ ಸ್ಪಂದಿಸುವ ಮಾನವೀಯತೆಯ ದರ್ಪಣವಾಗಬೇಕು. ಕಣ್ಣಿಗೆ ಕಾಣದಂತೆ ಗೋಡೆ ಕಟ್ಟುವುದು ಸಮಸ್ಯೆಗೆ ಪರಿಹಾರವಲ್ಲ, ಬದಲಿಗೆ ಗೋಡೆಯಾಚೆಗಿನ ಸತ್ಯವನ್ನು ಒಪ್ಪಿಕೊಂಡು ಅದನ್ನು ಸರಿಪಡಿಸುವ ದಿಟ್ಟ ಹೆಜ್ಜೆಗಳೇ ಇಂದಿನ ತುರ್ತು ಅಗತ್ಯ.

(ಲೇಖಕರು: ಶಿಕ್ಷಕರು, ಹವ್ಯಾಸಿ ಬರಹಗಾರರು)

Tags

nation
share
ಸುರೇಂದ್ರ ಪೈ ಭಟ್ಕಳ
ಸುರೇಂದ್ರ ಪೈ ಭಟ್ಕಳ
Next Story
X