ಬಿಹಾರ ಚುನಾವಣೆಯಲ್ಲೂ ಬಿಜೆಪಿಯ ಹಿಂದುತ್ವ ರಾಜಕೀಯ ನಡೆಯಲಿದೆಯೇ?

2025ರ ಬಿಹಾರ ವಿಧಾನಸಭಾ ಚುನಾವಣೆ ಬಿಜೆಪಿಗೆ ನಿರ್ಣಾಯಕ ಪರೀಕ್ಷೆಯಾಗುವಂತೆ ಕಾಣುತ್ತಿದೆ.
ಒಂದೆಡೆ ಅದು ನಿತೀಶ್ ಕುಮಾರ್ ಮೇಲೆ ಅವಲಂಬಿಸಿರುವಾಗಲೇ, ಇನ್ನೊಂದೆಡೆ ಹಿಂದುತ್ವದ ಮೂಲಕವೂ ಆಟವಾಡಲು ನೋಡುತ್ತಿದೆ.
ನಿತೀಶ್ ಅವರ ಜೆಡಿಯು ಜೊತೆಗಿನ ಅದರ ಮರುಮೈತ್ರಿ ಬಿಹಾರದ ಸಂಕೀರ್ಣ ಜಾತಿ ಸಮೀಕರಣವನ್ನು ಗಮನದಲ್ಲಿ ಇಟ್ಟುಕೊಂಡದ್ದಾಗಿದೆ. ಆದರೂ, ಈ ಮೈತ್ರಿಯಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಕೂಡ ರಹಸ್ಯವಾಗಿಯೇನೂ ಇಲ್ಲ.
ನಿತೀಶ್ ತನ್ನ ಜಾತ್ಯತೀತ, ಅಭಿವೃದ್ಧಿ ಕೇಂದ್ರಿತ ಸರಕಾರದಲ್ಲಿ ಬಿಜೆಪಿಯ ಹಿಂದುತ್ವದ ಮಹತ್ವಾಕಾಂಕ್ಷೆಗಳನ್ನು ಎಚ್ಚರಿಕೆಯಿಂದ ನಿಯಂತ್ರಿಸುತ್ತಿದ್ದಾರೆ. ಧರ್ಮ ರಾಜಕಾರಣವನ್ನು ಹಿಂದಿಕ್ಕುವ ಜಾತಿ ಸಮೀಕರಣ ಅಲ್ಲಿನದು. ಹಾಗಾಗಿ ಬೇರೆ ರಾಜ್ಯಗಳಲ್ಲಿ ಪ್ರಬಲವಾಗಿರುವ ಬಿಜೆಪಿ ಅಜೆಂಡಾ ಬಿಹಾರದಲ್ಲಿ ಅಷ್ಟಾಗಿ ನಡೆಯುವುದಿಲ್ಲ. ಇದು ಒಳಗೊಳಗೇ ಬಿಜೆಪಿ ಮತ್ತು ಜೆಡಿಯು ನಡುವಿನ ಗುದ್ದಾಟಕ್ಕೆ ಕಾರಣವಾಗಿದೆ.
ಬಿಹಾರದಲ್ಲಿ ತನ್ನದೇ ಸ್ವಂತ ಸರಕಾರ ರಚಿಸಬೇಕೆಂಬುದು ಬಿಜೆಪಿಯ ಬಹು ಕಾಲದ ಕನಸು. ಅದನ್ನಷ್ಟೇ ಗಮನದಲ್ಲಿಟ್ಟುಕೊಂಡು ಬಿಜೆಪಿ ಮೈತ್ರಿಕೂಟದ ಅನಿವಾರ್ಯತೆಗಳನ್ನು ಬ್ಯಾಲೆನ್ಸ್ ಮಾಡುತ್ತಿದೆ.
2025ರ ವಿಧಾನಸಭಾ ಚುನಾವಣೆಯಲ್ಲಿ ಗೆದ್ದು, ನಿತೀಶ್ ಅವರನ್ನು ನಿಯಂತ್ರಣದಲ್ಲಿಡುವ ಉದ್ದೇಶವೂ ಅದಕ್ಕಿದೆ. ನಿತೀಶ್ ಕುಮಾರ್ ನಾಯಕತ್ವದಲ್ಲೇ ಚುನಾವಣೆಗೆ ಹೋಗಲು ಬಿಜೆಪಿ ಒಪ್ಪಿರುವುದರಲ್ಲೂ ಇದೇ ಜಾಣತನವಿದೆ.
ಬಿಜೆಪಿ ಸದ್ದಿಲ್ಲದೆ ಎಲ್ಲವನ್ನೂ ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳಲು ನೋಡುತ್ತಿದೆ. ತನ್ನ ಹತೋಟಿಯನ್ನು ಬಿಗಿಗೊಳಿಸುತ್ತಿದೆ.
2025ರಲ್ಲಿ ಬಿಹಾರದ 243 ವಿಧಾನಸಭಾ ಸ್ಥಾನಗಳಲ್ಲಿ ಸುಮಾರು 100 ಸ್ಥಾನಗಳಲ್ಲಿ ಸ್ಪರ್ಧಿಸುವ ಗುರಿ ಬಿಜೆಪಿಯದ್ದಾಗಿದೆ ಎಂದು ವರದಿಗಳು ಹೇಳುತ್ತವೆ. 2020ರಲ್ಲಿ ಅದು 74 ಸ್ಥಾನಗಳಿಗೆ ಮಾತ್ರ ಸ್ಪರ್ಧಿಸಿದ್ದನ್ನು ಗಮನಿಸಿದರೆ, ಇದು ಗಮನಾರ್ಹ ಜಿಗಿತವಾಗಲಿದೆ.
ಇದು ಕೇವಲ ಮಹತ್ವಾಕಾಂಕ್ಷೆಯ ಪ್ರಶ್ನೆಯಲ್ಲ, ಬದಲಾಗಿ, ಅಧಿಕಾರದ ಆಟ. ಫೆಬ್ರವರಿ 27ರಂದು ನಿತೀಶ್ ಅವರ ಸಂಪುಟಕ್ಕೆ ಏಳು ಹೊಸ ಬಿಜೆಪಿ ಸಚಿವರ ಸೇರ್ಪಡೆಯಾದದ್ದು ಏಕೆ ಎಂಬುದನ್ನು ಕೂಡ ಈ ದೃಷ್ಟಿಯಿಂದ ನೊಡಬೇಕು. ಬಿಜೆಪಿಯ ಉದ್ದೇಶ ಏನೆಂಬುದು ಆ ನಡೆಯಲ್ಲಿ ಮತ್ತಷ್ಟು ಸ್ಪಷ್ಟವಾಗುತ್ತದೆ.
ರಾಜಕೀಯ ವಿಶ್ಲೇಷಕರು ಹೇಳುವ ಪ್ರಕಾರ, ಬಿಜೆಪಿಗೆ ತನ್ನ ಮಿತ್ರಪಕ್ಷಗಳ ದೌರ್ಬಲ್ಯಗಳನ್ನು ಬಂಡವಾಳ ಮಾಡಿಕೊಳ್ಳುವ ಕೌಶಲ್ಯವಿದೆ. ಆ ತಂತ್ರವನ್ನು ಬಿಹಾರದಲ್ಲಿಯೂ ಬಳಸಲು ಅದು ನೋಡುತ್ತಿದೆ ಮತ್ತು ಅದಕ್ಕೆ ಬಿಹಾರ ಕೂಡ ಪಕ್ವವಾಗಿರುವ ಹಾಗೆ ಕಾಣುತ್ತದೆ.
ನಿತೀಶ್ ಒತ್ತಡದಲ್ಲಿದ್ದಾರೆ. ಬಿಜೆಪಿ ನಿಯಂತ್ರಣ ಸಾಧಿಸುತ್ತಿರುವಾಗ, ಅವರ ಪ್ರಭಾವ ಕಡಿಮೆಯಾಗುತ್ತಿದೆ. ಅವರ ಆಟ ನಡೆಯದಂತಾಗಿದೆಯೇ ಎಂಬ ಪ್ರಶ್ನೆ ಎದ್ದಿದೆ.
ಜಾತಿ ಸಮೀಕರಣವೇ ಪ್ರಮುಖವಾಗಿರುವ ಬಿಹಾರದ ರಾಜಕೀಯದಲ್ಲಿ ಬಿಜೆಪಿಯ ಹಿಂದೂ ರಾಷ್ಟ್ರೀಯತಾವಾದಿ ಅಜೆಂಡಾ ಪದೇ ಪದೇ ತಿರಸ್ಕೃತವಾಗಿದೆ. ಅಲ್ಲಿ ಸೈದ್ಧಾಂತಿಕತೆಗೆ ಕಡಿಮೆ ಜಾಗ. ಪ್ರಾಯೋಗಿಕತೆಯೇ ನಿರ್ಣಾಯಕ.
ಅಲ್ಲಿ ಮೇಲ್ಜಾತಿಯ ಮತದಾರರು ಶೇ.15ರಷ್ಟು ಮಾತ್ರ ಇದ್ದಾರೆ. ಒಬಿಸಿ ಮತ್ತು ದಲಿತ ಮತದಾರರೇ ಶೇ. 60ಕ್ಕಿಂತ ಹೆಚ್ಚು. ಹೀಗಾಗಿ ಬಿಜೆಪಿಯ ಹಿಂದೂ ಏಕತೆ ವಿಷಯ ಅಲ್ಲಿ ಬಹಳ ದುರ್ಬಲ ಅಂಶವಾಗಿದೆ.
ಬಿಜೆಪಿಗೆ 2015ರ ವಿಧಾನಸಭಾ ಚುನಾವಣೆಯಲ್ಲಿ ಏಕೆ ಸೋಲಾಯಿತು ಎಂಬುದನ್ನು ನೋಡಿದರೆ ಇದು ಅರ್ಥವಾಗುತ್ತದೆ.
ಹಿಂದುತ್ವ ಅಲೆಯ ಮೇಲೆ ಚುನಾವಣೆ ಎದುರಿಸಲು ಬಿಜೆಪಿ ನೋಡಿತ್ತು. ಗೋಮಾಂಸ ನಿಷೇಧದಂತಹ ವಿಭಜಕ ವಿಷಯಗಳನ್ನು ಮುಂದಿಟ್ಟುಕೊಂಡು ಹೋಗಿತ್ತು.
ಆದರೆ, ನಿತೀಶ್ ಅವರ ಜೆಡಿಯು-ಆರ್‌ಜೆಡಿ ಮೈತ್ರಿಕೂಟದ ಎದುರು ಆಟ ಸಾಗಲಿಲ್ಲ. ಸೋತಿತು.
ಕಡೆಗೆ ಬಿಜೆಪಿ, ನಿತೀಶ್ ಅವರ ಬೆಂಬಲವನ್ನು ಉಳಿಸಿಕೊಳ್ಳಲು ತನ್ನ ಮಾತುಗಳನ್ನು ಕಡಿಮೆ ಮಾಡಿ, ತನ್ನ ಮೂಲ ಸಿದ್ಧಾಂತವನ್ನು ಬದಿಗೆ ಸರಿಸಿತು.
ಇಂದಿಗೂ, ಹಿಂದುತ್ವದ ಆಟ ಅಲ್ಲಿ ನಡೆಯುತ್ತಿಲ್ಲ.
ಬಿಹಾರವನ್ನು ಆ ಮೂಲಕ ಒಡೆಯುವುದು ಸಾಧ್ಯವಾಗಿಲ್ಲ.
ಭಾಗಲ್ಪುರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಮಹಾ ಕುಂಭ ಮೇಳದ ತಂತ್ರಗಾರಿಕೆ ಕೂಡ ಫಲ ಕೊಡಲಿಲ್ಲ. ದೈವತ್ವಕ್ಕಿಂತ ಬದುಕುಳಿಯುವುದು ಮುಖ್ಯ ಎಂದು ನಂಬುವ ಮತದಾರರು ಕುಂಭ ಮೇಳದ ವಿಚಾರದಲ್ಲಿ ಮುಳುಗುವವರಲ್ಲ.
ಶೇ. 45ರಷ್ಟು ಮಂದಿ ನಿರುದ್ಯೋಗ ವಿಚಾರಕ್ಕೆ ಕಳವಳ ವ್ಯಕ್ತಪಡಿಸಿದ್ದಾರೆ. ಅದರ ಎದುರಲ್ಲಿ ಮಂದಿರ ರಾಜಕೀಯ ಗೌಣವಾಗಿದೆ ಎಂಬುದನ್ನು ಸಮೀಕ್ಷೆಗಳು ಹೇಳಿವೆ.
ನಿತೀಶ್ ಅವರ ಜೆಡಿಯು ಮತ್ತು ತೇಜಸ್ವಿ ಯಾದವ್ ಅವರ ಆರ್‌ಜೆಡಿ ಇದರ ಲಾಭ ಮಾಡಿಕೊಳ್ಳುತ್ತವೆ.
ಬಿಜೆಪಿಯ ಮೇಲ್ಜಾತಿ ಇಮೇಜ್ ಅದರ ವ್ಯಾಪ್ತಿಯನ್ನು ಸಂಕುಚಿತಗೊಳಿಸಿರುವಾಗಲೂ, ಜೆಡಿಯು ಮತ್ತು ಆರ್‌ಜೆಡಿ ಉದ್ಯೋಗಗಳು ಮತ್ತು ಜಾತಿ ಆಧರಿತ ಕೋಟಾಗಳನ್ನು ನೀಡುತ್ತಿವೆ.
2020ರ ಚುನಾವಣೆಯಲ್ಲಿ, ರಾಮಮಂದಿರ ನಿರ್ಮಾಣ ಪ್ರಮುಖ ವಿಷಯವಾಗಿದ್ದ ಹೊತ್ತಿನಲ್ಲೂ ಎನ್‌ಡಿಎ ಗೆದ್ದದ್ದು ಬಹಳ ಕಡಿಮೆ ಅಂತರದಿಂದ. ಅದು ಹಿಂದುತ್ವ ವಿಚಾರ ಅಲ್ಲಿ ದುರ್ಬಲವಾಗಿರುವುದನ್ನು ಎತ್ತಿ ತೋರಿಸಿತು.
ಬಿಹಾರದಲ್ಲಿ ಬಿಜೆಪಿ ಆಟಕ್ಕಿಂತಲೂ ಮುಖ್ಯವಾಗಿ ಕೆಲಸ ಮಾಡುವುದು ನಿತೀಶ್ ಅವರ ಜಾತಿ ಲೆಕ್ಕಾಚಾರ.
ಈ ವಾಸ್ತವಕ್ಕೆ ಅನುಗುಣವಾಗಿ ಬಿಜೆಪಿ ತನ್ನ ಆಟ ಬದಲಿಸಿಕೊಳ್ಳದೆ ಹೋದರೆ, 2025 ರಲ್ಲಿ ಅದರ ಸೈದ್ಧಾಂತಿಕ ದಾಳ ಮತ್ತೊಮ್ಮೆ ವ್ಯರ್ಥವಾಗಬಹುದು.
2025ರ ಬಿಹಾರ ಚುನಾವಣೆ ಸಮೀಪಿಸುತ್ತಿದ್ದಂತೆ, ನಿತೀಶ್ ಕುಮಾರ್ ಅನಿವಾರ್ಯತೆಯೂ ಬಿಜೆಪಿಗೆ ಅರ್ಥವಾಗದೇ ಇಲ್ಲ. ಅವರ ಬಲದ ಮೂಲಕವೇ ಎನ್‌ಡಿಎಗೆ ಜಾತಿ ಸಮೀಕರಣದ ಬಲ ಸಿಗಲು ಸಾಧ್ಯ. ಅದನ್ನು ಬಿಜೆಪಿಯ ಮೇಲ್ಜಾತಿಯ ಮೂಲಕ ಮಾತ್ರ ಒಟ್ಟುಗೂಡಿಸಲು ಸಾಧ್ಯವಿಲ್ಲ.
ಇದರ ಹೊರತಾಗಿಯೂ, ನಿತೀಶ್ ಅವರ 20 ವರ್ಷಗಳ ಸುದೀರ್ಘ ಆಳ್ವಿಕೆ ಕುಂಠಿತಗೊಳ್ಳಲು ಪ್ರಾರಂಭಿಸಿದೆ ಎಂಬುದು ಮತ್ತೊಂದು ವಾಸ್ತವ.
ಇತ್ತೀಚಿನ ಸಮೀಕ್ಷೆಗಳು ಇಂತಹ ಸುಳಿವನ್ನು ಕೊಟ್ಟಿವೆ.
ಶೇ. 41ರಷ್ಟು ಮತದಾರರು ಆರ್‌ಜೆಡಿಯ ತೇಜಸ್ವಿ ಯಾದವ್ ಅವರನ್ನು ಮುಖ್ಯಮಂತ್ರಿಯಾಗಿ ಕಾಣಲು ಬಯಸುತ್ತಿದ್ದಾರೆ.
ಮಹಾರಾಷ್ಟ್ರದಲ್ಲಿ ಏನಾಯಿತು ಎಂದು ನೋಡಿದ್ದೇವೆ.ಅಲ್ಲಿ ಬಿಜೆಪಿ ಗೆದ್ದ ನಂತರ ಏಕನಾಥ್ ಶಿಂದೆಯನ್ನು ಬದಿಗಿಡಲಾಯಿತು. ಶಿಂದೆ ಜಾಗವನ್ನು ಬಿಜೆಪಿಯದ್ದೇ ಮುಖ್ಯಮಂತ್ರಿ ಆಕ್ರಮಿಸಿಕೊಂಡರು.
2025ರಲ್ಲಿ ಬಿಜೆಪಿ ಒಂದು ವೇಳೆ ಜೆಡಿಯುಗಿಂತ ಮೇಲುಗೈ ಸಾಧಿಸುವಲ್ಲಿ ಯಶಸ್ವಿಯಾದರೆ ಬಿಹಾರದಲ್ಲೂ ಇದೇ ರೀತಿಯಾಗಲೂಬಹುದು.
ಹಿಂದುತ್ವಕ್ಕೆ ಹೆಚ್ಚಿನ ಒತ್ತು ನೀಡುವುದರಿಂದ ಬಿಜೆಪಿಯ ಮೂಲ ನೆಲೆಗೆ ಶಕ್ತಿ ಬರಬಹುದಾದರೂ, ನಿತೀಶ್ ಅವರ ಮತದಾರರನ್ನು ದೂರ ಮಾಡಿಕೊಳ್ಳುವ ಅಪಾಯವಿದೆ ಎಂಬುದು ಬಿಜೆಪಿಗೆ ಗೊತ್ತಿದೆ. ಹೀಗಾಗಿ ಸೂಕ್ಷ್ಮ ಮೈತ್ರಿ ಲೆಕ್ಕಾಚಾರವನ್ನು ಅದು ಮಾಡತೊಡಗಿದೆ.
ಸಾಮ್ರಾಟ್ ಚೌಧರಿ ಮತ್ತು ವಿಜಯ್ ಸಿನ್ಹಾ ಅವರಂತಹ ನಾಯಕರ ಮೂಲಕ ಬಿಹಾರದಲ್ಲಿ ಪ್ರಚಾರವನ್ನು ಮುನ್ನಡೆಸುವುದು ಬಿಜೆಪಿಯ ಉದ್ದೇಶ.
ಆದರೂ, ಹಿಂದುತ್ವದ ಶಕ್ತಿ ಬಿಹಾರದ ಜಾತಿ ನಿಷ್ಠೆ ಮತ್ತು ಆರ್ಥಿಕತೆ ಕುರಿತ ಸಮಸ್ಯೆಗಳ ವಿರುದ್ಧ ಎಷ್ಟು ಫಲ ಕೊಡಬಹುದು ಎಂಬುದನ್ನು ಇನ್ನೂ ಪರೀಕ್ಷೆಗೆ ಒಳಪಡಿಸಿ ಅರ್ಥ ಮಾಡಿಕೊಳ್ಳಬೇಕಿದೆ.
2015ರಲ್ಲಿ ಆದಂತೆ ಅದು ವಿಫಲವಾದರೆ, ಆರ್‌ಜೆಡಿ ಮತ್ತು ಹೊಸದಾಗಿ ರೂಪುಗೊಂಡ ಜನ ಸುರಾಜ್ ಪಕ್ಷದ ಪ್ರಶಾಂತ್ ಕಿಶೋರ್ ಲಾಭ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚು.
ನಿತೀಶ್ ಅವರ ವರ್ಚಸ್ಸನ್ನು ಬಳಸಿಕೊಂಡೇ ತನ್ನ ಹಿಂದುತ್ವ ಅಜೆಂಡಾದ ಶಕ್ತಿಯೊಂದಿಗೆ ಚುನಾವಣೆಗೆ ಹೋದರಷ್ಟೇ ಎನ್‌ಡಿಎ ಯಶಸ್ವಿಯಾಗಬಹುದು.
ಅಂತೂ ಬಿಹಾರದಲ್ಲಿನ 2025ರ ಚುನಾವಣೆ ಬಹಳ ಸವಾಲಿನ ಪರಿಸ್ಥಿತಿಯನ್ನು ತೋರಿಸುತ್ತಿದೆ.
ಬಿಜೆಪಿ ತನ್ನ ಸಿದ್ಧಾಂತದ ಮೂಲಕ ಯಶಸ್ಸು ಕಾಣಲೂಬಹುದು ಅಥವಾ ಮುಗ್ಗರಿಸಲೂ ಬಹುದು.
2025ರ ಬಿಹಾರ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ, ಬಿಜೆಪಿ-ನಿತೀಶ್ ಮೈತ್ರಿಕೂಟದ ಎದುರಲ್ಲಿ ನಿಜವಾಗಿಯೂ ಸವಾಲಾಗಿ ಇರುವವರು ತೇಜಸ್ವಿ ಯಾದವ್ ಮತ್ತು ಪ್ರಶಾಂತ್ ಕಿಶೋರ್.
ಯುವಕರ ಆಕರ್ಷಣೆ ಮತ್ತು ವೈಯಕ್ತಿಕ ವರ್ಚಸ್ಸು ಅವರ ಪ್ರಾಬಲ್ಯವನ್ನು ಹೆಚ್ಚಿಸುವ ಹಾಗೆ ಕಾಣಿಸುತ್ತಿದೆ.
ಇತ್ತೀಚಿನ ಸಮೀಕ್ಷೆಗಳ ಪ್ರಕಾರ ಶೇ. 45ರಷ್ಟು ಮತದಾರರು ನಿರುದ್ಯೋಗವನ್ನು ತಮ್ಮ ಪ್ರಮುಖ ಸಮಸ್ಯೆಯೆಂದು ಹೇಳಿರುವುದರಿಂದ ಇಂತಹ ಸನ್ನಿವೇಶದಲ್ಲಿ ತೇಜಸ್ವಿ ಯಾದವ್ ಈಗಾಗಲೇ ಉದ್ಯೋಗಗಳ ಬಗ್ಗೆ ಗಮನ ಕೊಟ್ಟವರಾಗಿ ಬಿಹಾರದ ಯುವಕರ ಕಣ್ಮಣಿಯಂತಾಗಿದ್ದಾರೆ.
ಹೀಗಾಗಿ, ಶೇ. 41ರಷ್ಟು ಜನರು ತೇಜಸ್ವಿ ಯಾದವ್ ಸಿಎಂ ಆಗಬೇಕು ಎಂದಿದ್ದಾರೆ.
ತೇಜಸ್ವಿ ಅವರು ಲಾಲು ಯಾದವ್ ಅವರ ಜಾತಿ ಪರಂಪರೆ ಮತ್ತು ಆಧುನಿಕ, ಪ್ರಾಯೋಗಿಕ ದೃಷ್ಟಿಕೋನವೆರಡನ್ನೂ ಅಳವಡಿಸಿಕೊಂಡ ನಾಯಕ. ಅವರ ಈ ರಾಜಕೀಯ ವ್ಯಕ್ತಿತ್ವ ಮುಸ್ಲಿಮರು, ಯಾದವರು ಮತ್ತು ಯುವ ಮತದಾರರನ್ನು ಹೆಚ್ಚಾಗಿ ಸೆಳೆಯುತ್ತದೆ. ಇದರಿಂದಾಗಿ, ಬಿಜೆಪಿ ಮತ್ತು ಜೆಡಿಯು ಮತ ಬ್ಯಾಂಕ್‌ಗೆ ಅವರು ನೇರ ಬೆದರಿಕೆಯಾಗಿದ್ದಾರೆ.
ಯುವ ಮತದಾರರು, ಮಹಿಳೆಯರು ಹಾಗೂ ಸಣ್ಣ ಪುಟ್ಟ ಜಾತಿಗಳ ಮತದಾರರನ್ನು ಸೆಳೆಯಲು ಸರಿಯಾದ ಸ್ಟ್ರಾಟಜಿ ಮಾಡಿಕೊಂಡರೆ ತೇಜಸ್ವಿಯನ್ನು ತಡೆಯೋದು ಬಿಜೆಪಿ ಹಾಗೂ ನಿತೀಶ್‌ಗೆ ಕಷ್ಟವಾಗಬಹುದು
ಆದರೆ ಯಾದವರು, ಮುಸ್ಲಿಮರ ಬೆಂಬಲವನ್ನೇ ನೆಚ್ಚಿಕೊಂಡು ಕೂತರೆ ತೇಜಸ್ವಿ ಕೂಡ ಸಿಎಂ ಕುರ್ಚಿಯ ಹತ್ತಿರ ಹೋಗಿ ವಾಪಸ್ ಬರಬೇಕಾಗಬಹುದು
ತಂತ್ರಜ್ಞರಾಗಿದ್ದು, ಈಗ ರಾಜಕಾರಣಿಯಾಗಿ ಬದಲಾದ ಪ್ರಶಾಂತ್ ಕಿಶೋರ್ ಕೂಡ ಬಿಜೆಪಿ ಹಾಗೂ ನಿತೀಶ್‌ಗೆ ಸವಾಲನ್ನು ಒಡ್ಡಬಹುದು.
ಸಮೀಕ್ಷೆಗಳಲ್ಲಿ ಅವರು ಸಿಎಂ ಆಗಬೇಕೆಂದು ಬಯಸಿರುವವರು ಶೇ. 15ರಷ್ಟು ಮತದಾರರು ಮಾತ್ರ. ಅವರ 3,000 ಕಿ.ಮೀ. ಪಾದಯಾತ್ರೆ ಮತ್ತು ಜಾತಿ ಸಮತೋಲಿತ ಟಿಕೆಟ್ ಹಂಚಿಕೆ ವಿಭಿನ್ನವಾಗಿದೆ.
ನಿತೀಶ್ ಅವರು ರಾಜಕೀಯವಾಗಿ ದಣಿದಂತಿದೆ. ಬಿಜೆಪಿ ಈ ಅವಕಾಶವನ್ನು ಪೂರ್ತಿಯಾಗಿ ಬಳಸಲು ಹವಣಿಸುತ್ತಿದೆ.
ನಿತೀಶ್ ರನ್ನು ಬಿಟ್ಟು ಬಿಹಾರವನ್ನು ಗೆಲ್ಲಲಾಗದು ಎಂದು ಬಿಜೆಪಿಗೆ ಚೆನ್ನಾಗಿ ಗೊತ್ತಿದೆ.
ಈ ಹಂತದಲ್ಲಿ ಬಿಜೆಪಿಯನ್ನು ಬಿಟ್ಟು ಚುನಾವಣೆ ಎದುರಿಸುವ ಆತ್ಮ ವಿಶ್ವಾಸ ನಿತೀಶ್‌ರಲ್ಲೂ ಇಲ್ಲ.
ಆದರೆ ನಿತೀಶ್‌ರನ್ನು ಬದಿಗೆ ಸರಿಸಿ ಬಿಜೆಪಿ ಸಿಎಂ ಅನ್ನು ಕೂರಿಸುವ ಆಸೆ ಬಿಜೆಪಿಯನ್ನು ಇನ್ನೂ ಬಿಟ್ಟಿಲ್ಲ
ಬಿಹಾರ ರಾಜಕೀಯ ಬದಲಾಗುವುದೇ?
ಬದಲಾದರೆ ಹೇಗೆ ಎಂಬ ಕುತೂಹಲ ಮೂಡಿದೆ.