ಚುನಾವಣೆ ಬಳಿಕ ದೋಸ್ತಿಗಳು ಬದಲಾಗುವರೇ?

ನವೆಂಬರ್ 14ರಂದು ವಿಧಾನಸಭೆ ಫಲಿತಾಂಶ ಪ್ರಕಟವಾದ ಬಳಿಕ ಎನ್‌ಡಿಎ ಕ್ಯಾಂಪಿನಲ್ಲಿ ನಿತೀಶ್ ಉಳಿಯುವ ಗ್ಯಾರಂಟಿ ಇಲ್ಲ. ಈ ಅನುಮಾನಕ್ಕೆ ಕಾರಣವಿದೆ. ಬಿಜೆಪಿ ಜತೆ ಚುನಾವಣೆ ಪೂರ್ವ ಒಪ್ಪಂದ ಸರಿಯಾಗಿ ಆಗಿಲ್ಲ. ಜೆಡಿಯು ಪ್ರಾಬಲ್ಯ ತಪ್ಪಿಸಲು ತಂತ್ರ ಮಾಡಲಾಗಿದೆ. ಬಿಜೆಪಿ ತನ್ನಷ್ಟೇ ಸೀಟುಗಳನ್ನು ಜೆಡಿಯುಗೂ ಹಂಚಿದೆ. ಚಿರಾಗ್ ಪಾಸ್ವಾನ್‌ರ ಎಲ್‌ಜೆಪಿಗೆ ಇನ್ನಿಲ್ಲದ ಮಹತ್ವ ಕೊಡಲಾಗಿದೆ. ನಿತೀಶ್ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ’ ಎಂದು ಬಿಂಬಿಸದಿರುವುದರಿಂದ ‘ಮಿತ್ರ’ನ (ನಿತೀಶ್) ಮನಸ್ಸು ಒಡೆದಿದೆ. ಪ್ರಚಾರ ಸಭೆಗಳಲ್ಲಿ ದೋಸ್ತಿಗಳು ಒಟ್ಟಿಗೆ ಕಾಣಿಸಿಕೊಂಡರೂ, ಅವಿಶ್ವಾಸ-ಅಪನಂಬಿಕೆ ತುಂಬಿ ತುಳುಕುತ್ತಿದೆ.
ಇದೇನು ಬರೀ ಗೊಂದಲ, ಗೋಜಲು. ಬಿಹಾರ ಚುನಾವಣೆಗಳೇ ಹಾಗೇ. ಯಾರು ಯಾರ ಪರ. ಯಾರು ಯಾರ ವಿರುದ್ಧ; ಶತ್ರುಗಳ್ಯಾರು, ‘ಹಿತ ಶತ್ರು’ಗಳ್ಯಾರೆಂದು ಹೇಳುವುದೇ ಕಷ್ಟ. ಒಳ ಏಟುಗಳೇ ಹೆಚ್ಚು. ಚುನಾವಣೆ ಮುನ್ನವೇ ಇರಬಹುದು. ಆನಂತರ ಆಗಿರಬಹುದು. ‘ಹೀಗೇ ಆಗುತ್ತದೆ’ ಎಂದು ಅಂದಾಜಿಸಲಾಗದು. ಸಂದರ್ಭಕ್ಕೆ ತಕ್ಕಂತೆ ಬದಲಾಗುವ ‘ಪೊಲಿಟಿಕಲ್ ಅಡ್ಜಸ್ಟ್‌ಮೆಂಟ್’ಗೆ ಈ ರಾಜ್ಯ ಪ್ರಯೋಗ ಶಾಲೆ.
ಬಿಹಾರದಲ್ಲಿ ಎರಡು ದಶಕದಿಂದ ನಿತೀಶ್ ಕುಮಾರ್ ನೇತೃತ್ವದ ಎನ್‌ಡಿಎ ಸರಕಾರವಿದೆ. ಮೊದಲು 15 ವರ್ಷ ಲಾಲು, ರಾಬ್ಡಿ ಆಡಳಿತವಿತ್ತು. 1990ರವರೆಗೆ ಕಾಂಗ್ರೆಸ್ ಪರ್ವ. ಒಬಿಸಿ ನಾಯಕ ಕರ್ಪೂರಿ ಠಾಕೂರ್ ಅವರೂ ಮುಖ್ಯಮಂತ್ರಿ ಆಗಿದ್ದರು. ಮೈತ್ರಿ ರಾಜಕಾರಣಕ್ಕೆ ರಾಜ್ಯ ತೆರೆದುಕೊಂಡಿದ್ದರೂ ಸಂದರ್ಭಕ್ಕೆ ಅನುಗುಣವಾಗಿ ಆಗಾಗ ಹೊಂದಾಣಿಕೆಗಳು ಬದಲಾಗಿವೆ. ದೋಸ್ತಿಗಳು ಅದಲು ಬದಲಾಗಿದ್ದಾರೆ.
ದೋಸ್ತಿಗಳನ್ನು ಬದಲಾಯಿಸುವುದರಲ್ಲಿ ನಿತೀಶ್ ನಿಸ್ಸೀಮರು. 2013ರ ಬಳಿಕ ಮೂರು ಸಲ ಎನ್‌ಡಿಎಗೆ ಸೆಡ್ಡು ಹೊಡೆದಿದ್ದಾರೆ. ‘ಮಹಾಘಟಬಂಧನ್’ ಸೇರಿ ‘ಯು ಟರ್ನ್’ ಮಾಡಿದ್ದಾರೆ. ನವೆಂಬರ್ 14ರಂದು ವಿಧಾನಸಭೆ ಫಲಿತಾಂಶ ಪ್ರಕಟವಾದ ಬಳಿಕ ಎನ್‌ಡಿಎ ಕ್ಯಾಂಪಿನಲ್ಲಿ ನಿತೀಶ್ ಉಳಿಯುವ ಗ್ಯಾರಂಟಿ ಇಲ್ಲ. ಈ ಅನುಮಾನಕ್ಕೆ ಕಾರಣವಿದೆ. ಬಿಜೆಪಿ ಜತೆ ಚುನಾವಣೆ ಪೂರ್ವ ಒಪ್ಪಂದ ಸರಿಯಾಗಿ ಆಗಿಲ್ಲ. ಜೆಡಿಯು ಪ್ರಾಬಲ್ಯ ತಪ್ಪಿಸಲು ತಂತ್ರ ಮಾಡಲಾಗಿದೆ. ಬಿಜೆಪಿ ತನ್ನಷ್ಟೇ ಸೀಟುಗಳನ್ನು ಜೆಡಿಯುಗೂ ಹಂಚಿದೆ. ಚಿರಾಗ್ ಪಾಸ್ವಾನ್‌ರ ಎಲ್‌ಜೆಪಿಗೆ ಇನ್ನಿಲ್ಲದ ಮಹತ್ವ ಕೊಡಲಾಗಿದೆ. ನಿತೀಶ್ ಅವರನ್ನು ‘ಮುಖ್ಯಮಂತ್ರಿ ಅಭ್ಯರ್ಥಿ’ ಎಂದು ಬಿಂಬಿಸದಿರುವುದರಿಂದ ‘ಮಿತ್ರ’ನ (ನಿತೀಶ್) ಮನಸ್ಸು ಒಡೆದಿದೆ. ಪ್ರಚಾರ ಸಭೆಗಳಲ್ಲಿ ದೋಸ್ತಿಗಳು ಒಟ್ಟಿಗೆ ಕಾಣಿಸಿಕೊಂಡರೂ, ಅವಿಶ್ವಾಸ-ಅಪನಂಬಿಕೆ ತುಂಬಿ ತುಳುಕುತ್ತಿದೆ.
‘ನಿತೀಶ್ ನೇತೃತ್ವದಲ್ಲೇ ಚುನಾವಣೆ’ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರಕಟಿಸಿದ್ದಾರೆ. ಗೃಹ ಸಚಿವ ಅಮಿತ್ ಶಾ ಅಪಸ್ವರ ತೆಗೆದಿದ್ದಾರೆ. ‘ಮುಖ್ಯಮಂತ್ರಿಯನ್ನು ಶಾಸಕಾಂಗ ಪಕ್ಷ ತೀರ್ಮಾನಿಸಲಿದೆ’ ಎಂದಿದ್ದಾರೆ. ಇದು ಮೋದಿ-ಶಾ ಅವರ ‘ಯೋಜಿತ ಜುಗಲ್ಬಂದಿ’. ಬಿಜೆಪಿ ಹೆಚ್ಚು ಸೀಟುಗಳನ್ನು ಗೆದ್ದು, ಜೆಡಿಯು ಸೀಟುಗಳು ಕಡಿಮೆಯಾದರೆ ನಿತೀಶ್ ಮುಖ್ಯಮಂತ್ರಿ ಆಗುವುದು ಅನುಮಾನ. ಆದರೆ, ನಿತೀಶ್‌ಗೆ ಮುಖ್ಯಮಂತ್ರಿ ಸ್ಥಾನ ತಪ್ಪಿಸುವುದು ಸುಲಭವಲ್ಲ. ಸದ್ಯ, ನಿತೀಶ್ ಸ್ನೇಹ ಬಿಜೆಪಿಗೆ ಅನಿವಾರ್ಯ. ಜೆಡಿಯು ನಾಯಕನನ್ನು ಅಸ್ಥಿರಗೊಳಿಸಲು ಯತ್ನಿಸಿದರೆ ಮೋದಿ ಸರಕಾರದ ಭವಿಷ್ಯಕ್ಕೂ ತೊಂದರೆ. ಲೋಕ ಸಭೆಯಲ್ಲಿರುವ ಜೆಡಿಯುನ ಡಝನ್ ಸದಸ್ಯರನ್ನು ‘ಮ್ಯಾನೇಜ್’ ಮಾಡುವ ತಾಕತ್ತು ಬಿಜೆಪಿ ನಾಯಕರಿಗಿದ್ದರೆ ಮಾತ್ರವೇ ಅಧಿಕಾರ ತಪ್ಪಿಸಬಹುದು. ಹಾಗೇನಾದರೂ ಆದಲ್ಲಿ ನಿತೀಶ್ ತಮ್ಮ ಹಳೆಯ ಮಿತ್ರರ ಜತೆ ಕೈಜೋಡಿಸುವ ಸಾಧ್ಯತೆ ಹೆಚ್ಚು.
ಜೆಡಿಯು 2014ರ ಲೋಕಸಭೆ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸಿತ್ತು. ಆಗ ಸಿಕ್ಕಿದ್ದು ಎರಡು ಸ್ಥಾನ. ಮಾರನೇ ವರ್ಷದ ವಿಧಾನಸಭೆ ಚುನಾವಣೆಯಲ್ಲಿ ಆರ್‌ಜೆಡಿ ಮತ್ತು ಕಾಂಗ್ರೆಸ್ ಒಳಗೊಂಡ ‘ಮಹಾಘಟಬಂಧನ್’ ಸೇರಿ ಜೆಡಿಯು 71 ಸ್ಥಾನ ಪಡೆದಿತ್ತು. ಆರ್‌ಜೆಡಿ 80 ಶಾಸಕರೊಂದಿಗೆ ಮೊದಲ ಸ್ಥಾನದಲ್ಲಿತ್ತು. ಕಾಂಗ್ರೆಸ್ 27 ಕ್ಷೇತ್ರಗಳಲ್ಲಿ ಗೆಲುವು ಪಡೆದಿತ್ತು. ಬಿಜೆಪಿಯ 53 ಅಭ್ಯರ್ಥಿಗಳು ಆಯ್ಕೆ ಆಗಿದ್ದರು. ಪ್ರಾದೇಶಿಕ ಅದರಲ್ಲೂ ಸಮಾಜವಾದಿ ಪಕ್ಷಗಳ ಪರ್ವ ಆರಂಭವಾಗಿ, ರಾಷ್ಟ್ರೀಯ ಪಕ್ಷಗಳು ಮೂಲೆ ಗುಂಪಾಗಿದ್ದವು. ಎರಡೂ ಪಕ್ಷಗಳ ‘ಹನಿಮೂನ್ ಪಿರಿಯಡ್’ ಬಹು ಬೇಗನೆ ಮುಗಿಯಿತು. ಬಳಿಕ ನಿತೀಶ್ ಪುನಃ ಓಡಿದ್ದು ಎನ್‌ಡಿಎಗೆ.
2022ರಲ್ಲಿ ಮಹಾಘಟಬಂಧನ್ ಜತೆ ಪುನಃ ಸಖ್ಯ. ಲೋಕಸಭೆ ಚುನಾವಣೆಗೆ ಸಮಯದಲ್ಲಿ ಬಿಡುಗಡೆ. ಎನ್‌ಡಿಎ ಜತೆ ಮರು ‘ಮದುವೆ’. ಅದೆಷ್ಟು ಸಲ ರಾಜಕೀಯ ಜಿಗಿದಾಟ! ಈ ಕಣ್ಣಾಮುಚ್ಚಾಲೆ ನೋಡಿದರೆ, ‘ಜೆಡಿಯು ನೆರಳಲ್ಲಿ ಬಿಜೆಪಿ ಬೆಳೆಯುತ್ತಿದೆಯೇ ಇಲ್ಲವೇ, ಹೆಬ್ಬಾವಿನಂತೆ ನಿತೀಶ್ ಪಕ್ಷವನ್ನು ಬಿಜೆಪಿ ನುಂಗುತ್ತಿದೆಯೇ’ ಎಂಬ ಪ್ರಶ್ನೆಗಳು ಸಹಜ. ಇದಕ್ಕೆ ನವೆಂಬರ್ ಚುನಾವಣೆ ಉತ್ತರಿಸಲಿದೆ.
ಬಿಹಾರ ವಿಧಾನಸಭೆಗೆ 2020ರಲ್ಲಿ ನಡೆದ ಚುನಾವಣೆಯಲ್ಲಿ ಜೆಡಿಯು ಮಣ್ಣು ಮುಕ್ಕಿದರೂ ಬಿಜೆಪಿಯ ಬೆಂಬಲದಲ್ಲಿ ನಿತೀಶ್ ಮುಖ್ಯಮಂತ್ರಿ ಆಗಿದ್ದಾರೆ. ಮೋದಿ ಅವರ ಪರಮ ಭಂಟ ‘ಹನುಮಾನ್’ (ಚಿರಾಗ್ ಪಾಸ್ವಾನ್) ಜೆಡಿಯುಗೆ ಕಾಟ ಕೊಟ್ಟಿದ್ದಾರೆ. ಆಗ ಎಲ್‌ಜೆಪಿ 135 ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಗೆದ್ದಿದ್ದು ಕೇವಲ 1 ಕಡೆ. ಜೆಡಿಯು ಸ್ಪರ್ಧಿಸಿದ್ದ ಕ್ಷೇತ್ರಗಳಲ್ಲೇ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ, ನಿತೀಶ್ ಹಾದಿಗೆ ಅಡ್ಡಿ ಮಾಡಿದರು. ಈ ಸಲ ನಿತೀಶ್‌ಗೆ ಚಿರಾಗ್ ಕಾಟವಿಲ್ಲ. ಈಗವರು ಎನ್‌ಡಿಎ ಪಾಲುದಾರರು.
2020ರಲ್ಲಿ ಎನ್‌ಡಿಎ ಮತ್ತು ಮಹಾಘಟಬಂಧನ್ ನಡುವೆ ದೊಡ್ಡ ‘ಹೋರಾಟ’ ನಡೆಯಿತು. ಎರಡೂ ಮೈತ್ರಿಕೂಟ ಬಹುತೇಕ ಶೇ. 37ರಷ್ಟು ಮತಗಳನ್ನು ಪಡೆದಿದ್ದವು. ಎರಡೂ ಬಣಗಳ ನಡುವೆ ಬರೀ ಶೇ. 003ರಷ್ಟು ಮತಗಳಷ್ಟೇ ವ್ಯತ್ಯಾಸ. ಸೀಟುಗಳ ಲೆಕ್ಕಾಚಾರದಲ್ಲಿ ಎನ್‌ಡಿಎ 125, ಮಹಾಘಟಬಂದನ್ 110. ಬಿಜೆಪಿ ಪಾಲು 74. ಜೆಡಿಯು 43, ಕಾಂಗ್ರೆಸ್‌ನದ್ದು 19 ಸ್ಥಾನ. ಇದು ಕಳೆದ ಎರಡು ದಶಕಗಳಲ್ಲಿ ನಿತೀಶ್ ಅವರ ಪಕ್ಷ ಕಂಡ ಹೀನಾಯ ಹಿನ್ನಡೆ.
‘2025ರ ಚುನಾವಣೆ ಫಲಿತಾಂಶವೂ ಹಿಂದಿನ ಚುನಾವಣೆಯಂತೆ ಇರಬಹುದೇ’ ಎನ್ನುವ ನಿರೀಕ್ಷೆಗಳಿವೆ. 243 ಸದಸ್ಯ ಬಲದ ವಿಧಾನಸಭೆಯಲ್ಲಿ ಜೆಡಿಯು ಮತ್ತು ಬಿಜೆಪಿ ತಲಾ 101 ಸ್ಥಾನಗಳಲ್ಲಿ ಕಣಕ್ಕಿಳಿದಿವೆ. 29 ಕ್ಷೇತ್ರಗಳನ್ನು ಎಲ್‌ಜೆಪಿಗೆ ಬಿಡಲಾಗಿದೆ. ತಲಾ 6 ಕ್ಷೇತ್ರಗಳಲ್ಲಿ ಮಾಜಿ ಮುಖ್ಯಮಂತ್ರಿ ಜಿತನ್‌ರಾಂ ಮಾಂಝಿ ಅವರ ಎಚ್‌ಎಎಂ ಮತ್ತು ಉಪೇಂದ್ರ ಕುಶ್ವಾಹ ಅವರ ಆರ್‌ಎಲ್‌ಎಂ ಸ್ಪರ್ಧಿಸಿವೆ. ಇನ್ನೊಂದೆಡೆ, ಆರ್‌ಜೆಡಿ, ಕಾಂಗ್ರೆಸ್, ಎಡ ಪಕ್ಷಗಳು, ವಿಐಪಿ ಒಳಗೊಂಡ ಇಂಡಿಯಾ ಬ್ಲಾಕ್ ತೀವ್ರ ಸ್ಪರ್ಧೆಯೊಡ್ಡಿವೆ. ವಿಪರ್ಯಾಸವೆಂದರೆ, ಕೆಲವೆಡೆ ಮಿತ್ರ ಪಕ್ಷಗಳೇ ಪರಸ್ಪರ ಎದುರಾಳಿ. ಇದಕ್ಕೆ ‘ಫ್ರೆಂಡ್ಲಿ ಫೈಟ್’ ಬಣ್ಣ! ಇದು ಎನ್‌ಡಿಎಗೆ ಲಾಭ.
ಬಿಹಾರದಲ್ಲಿ ಆರ್‌ಜೆಡಿ ಬೆನ್ನ ಮೇಲೆ ಕೂತು ಕಾಂಗ್ರೆಸ್ ಸವಾರಿ ಮಾಡಬೇಕು. ಮೂರೂವರೆ ದಶಕಗಳ ಹಿಂದೆ ನೆಲೆ ಕಳೆದುಕೊಂಡಿರುವ ಈ ಹಳೆಯ ಪಕ್ಷ ಇನ್ನೂ ಪುನರ್ಜನ್ಮ ಪಡೆಯಲು ಆಗಿಲ್ಲ. ಕಾರ್ಯಕರ್ತರ ಪಡೆ ಕಟ್ಟಲಾಗಿಲ್ಲ. ಸ್ಥಳೀಯ ಪರಿಸ್ಥಿತಿ ಅರ್ಥ ಮಾಡಿಕೊಳ್ಳುವ ಜಾಯಮಾನ ಕಾಂಗ್ರೆಸ್ ನಾಯಕರಿಗಿಲ್ಲ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಆರ್‌ಜೆಡಿ ಜತೆ ಹೋರಾಡಿ 70 ಕ್ಷೇತ್ರಗಳನ್ನು ಪಡೆದರೂ ಗೆಲ್ಲಲಾಗಿದ್ದು ಕೇವಲ 19 ಕಡೆ. ಈಗ ಕಾಂಗ್ರೆಸ್‌ಗೆ ಹೆಚ್ಚಿನ ಸ್ಥಾನ ಸಿಗದಿದ್ದರೆ ರಾಜಕೀಯವಾಗಿ ಇನ್ನಷ್ಟು ಹಿನ್ನಡೆ ಆಗುವುದು ಖಚಿತ.
ಬಿಹಾರ ವಿಧಾನಸಭೆ ಚುನಾವಣೆ ಫಲಿತಾಂಶ ಏರುಪೇರಾದರೆ ‘ಪೊಲಿಟಿಕಲ್ ಅಲೈನ್‌ಮೆಂಟ್’ ಬದಲಾಗಬಹುದು. ಬಿಜೆಪಿಗಿಂತ ಜೆಡಿಯು ಕಡಿಮೆ ಸ್ಥಾನ ಗೆದ್ದು, ನಿತೀಶ್‌ಗೆ ಮುಖ್ಯಮಂತ್ರಿ ಹುದ್ದೆ ತಪ್ಪಿದರೆ ‘ಇಂಡಿಯಾ’ ಬ್ಲಾಕ್‌ಗೆ ಹೋಗುವ ಸಾಧ್ಯತೆ ಇದ್ದೇ ಇದೆ. ಎದುರಾಳಿ ಬಣದ ಮುಖ್ಯಮಂತ್ರಿ ಅಭ್ಯರ್ಥಿ ತೇಜಸ್ವಿಯೂ ವಿರೋಧ ಪಕ್ಷದ ನಾಯಕನ ಸ್ಥಾನದಲ್ಲಿ ಕೂರುವ ಬದಲು ಉಪ ಮುಖ್ಯಮಂತ್ರಿ ಸ್ಥಾನ ಸಿಕ್ಕರೆ ತೃಪ್ತಿಪಟ್ಟುಕೊಳ್ಳಬಹುದು. ‘ಚುನಾವಣೆ ಬಳಿಕ ಏನಾದರೂ ಆಗಬಹುದು. ಹೀಗೆ ಆಗಲಿದೆ’ ಎಂದು ಅಂದಾಜಿಸುವುದು ಕಷ್ಟ.
ಬಿಹಾರ ಮತದಾರರು, ಅದರಲ್ಲೂ ಮಹಿಳೆಯರು ಹಾಗೂ ಅತೀ ಹಿಂದುಳಿದ ವರ್ಗಗಳು (ಇಬಿಸಿ), ಪಸ್ಮಂದ ಮುಸ್ಲಿಮರು ನಿತೀಶ್ ಅವರನ್ನು ಸುಲಭವಾಗಿ ಬಿಡಲಾರರು. ಬಿಹಾರದ ಸರಕಾರ 2023ರಲ್ಲಿ ನಡೆಸಿದ ಜನಗಣತಿಯಂತೆ ಅತೀ ಹಿಂದುಳಿದ ವರ್ಗಗಳಲ್ಲಿರುವ 112 ಜಾತಿಗಳ ಪ್ರಮಾಣ ಶೇ. 37. ಬಹುತೇಕ ಅತೀ ಹಿಂದುಳಿದವರು ಆರ್‌ಜೆಡಿ ಬೆಂಬಲಿಸಲಾರರು. ಇದಕ್ಕೆ ಕಾರಣವಿದೆ. ಲಾಲು, ರಾಬ್ಡಿ ಅವರ 15 ವರ್ಷದ ಆಡಳಿತದಲ್ಲಿ ಈ ಸಮುದಾಯಗಳಿಗೆ ಆಗಿರುವುದು ಅನುಕೂಲಕ್ಕಿಂತ ಅನನುಕೂಲವೇ ಹೆಚ್ಚು. ಅವರ ಆಡಳಿತದಲ್ಲಿ ಯಾದವರು ‘ಫ್ಯೂಡಲ್’ ಆಗಿ ನಡೆದುಕೊಂಡಿದ್ದಾರೆ. ಅವರ ಅತಿರೇಕದ ವರ್ತನೆಯನ್ನು ಉಳಿದ ಸಮಾಜ ಸಹಿಸಿಕೊಂಡಿದ್ದೇ ದೊಡ್ಡ ವಿಷಯ. ಈಗಲೂ ಬಿಜೆಪಿ, ಆರ್‌ಜೆಡಿ ಮತ್ತು ಮಿತ್ರ ಪಕ್ಷಗಳು ‘ಜಂಗಲ್ ರಾಜ್’ ಬಗ್ಗೆಯೇ ಪ್ರಚಾರ ಮಾಡುತ್ತಿವೆ. ಎರಡು ದಶಕ ಕಳೆದರೂ ಪದೇ ಪದೇ ಕಾಡುವಂತೆ ನೋಡಿಕೊಳ್ಳುತ್ತಿವೆ.
ನಿತೀಶ್ ಕುರ್ಮಿ ಸಮಾಜದವರು. ಸಣ್ಣಪುಟ್ಟ ಸಮುದಾಯಗಳನ್ನು ಗಮನದಲ್ಲಿಟ್ಟುಕೊಂಡು ಕಾರ್ಯಕ್ರಮ ರೂಪಿಸಿದ್ದಾರೆ. ಲಾಲು ಅವರಂತೆ ಕುಟುಂಬ ರಾಜಕಾರಣದ ತಲೆಬೇನೆ ಇಲ್ಲ. ಸ್ವಜನ ಪಕ್ಷಪಾತ ಇದ್ದಂತಿಲ್ಲ. ಆರ್‌ಜೆಡಿ ರಾಜಕಾರಣ ತದ್ವಿರುದ್ಧ. ಲಾಲು ಮನೆಯಲ್ಲಿ ಎಲ್ಲರೂ ರಾಜಕಾರಣಿಗಳೇ. ಮನೆಯೊಂದು ನಾಲ್ಕಾರು ಬಾಗಿಲು ಎಂಬಂತಾಗಿದೆ ಅವರ ಸ್ಥಿತಿ.
ತೇಜಸ್ವಿ ಯಾದವ್ ಈಗ ಅಭಿವೃದ್ಧಿ ಬಗ್ಗೆ ಮಾತಾಡುತ್ತಿದ್ದಾರೆ. ಮನೆಗೊಂದು ಉದ್ಯೋಗದ ಭರವಸೆ ನೀಡಿದ್ದಾರೆ. ಆರ್‌ಜೆಡಿ ತನ್ನ ಸಾಂಪ್ರದಾಯಿಕ ಮತ ಬ್ಯಾಂಕ್ ನೆಚ್ಚಿಕೊಂಡಿದೆ. ಮುಸ್ಲಿಮರು- ಯಾದವರೇ (ಎಂ-ವೈ) ಬೆಂಬಲಿಗರು. ಒಟ್ಟು ಜನಸಂಖ್ಯೆಯಲ್ಲಿ ಮುಸ್ಲಿಮರು ಶೇ. 18 ಮತ್ತು ಯಾದವರು ಶೇ. 14. ಇವೆರಡೂ ಸೇರಿದರೆ ಶೇ. 32. ವಿಕಾಸ್‌ಶೀಲ ಇನ್ಸಾನ್ ಪಕ್ಷಕ್ಕೆ (ವಿಐಪಿ) 15 ಕ್ಷೇತ್ರ ಕೊಟ್ಟಿರುವುದು ಹೊಸ ಬೆಳವಣಿಗೆ. ಶೇ. 10ರಷ್ಟಿರುವ ‘ನಿಶಾದ್’ (ಮೀನುಗಾರರ ಜಾತಿಗಳು) ಸಮುದಾಯದ ಬೆಂಬಲ ಪಡೆಯಲು ಈ ತಂತ್ರ. ಅಷ್ಟೇ ಅಲ್ಲ, ನಿಶಾದ್ ಮುಖಂಡ ಮುಖೇಶ್ ಸಾಹ್ನಿ ಉಪ ಮುಖ್ಯಮಂತ್ರಿ ಅಭ್ಯರ್ಥಿ. ಹಿಂದೆ ವಿಐಪಿ, ಎನ್‌ಡಿಎ ತೆಕ್ಕೆಯಲ್ಲಿತ್ತು.
ಬಿಹಾರದ ಹೊಸ ಬೆಳವಣಿಗೆ ಎಂದರೆ, ಚುನಾವಣಾ ವ್ಯೆಹಕಾರ ಪ್ರಶಾಂತ್ ಕಿಶೋರ್ ಅವರ ರಾಜಕೀಯ ಪ್ರವೇಶ. ವರ್ಷದ ಹಿಂದೆ ಅವರು ಸ್ಥಾಪಿಸಿರುವ ‘ಜನ ಸುರಾಜ್ ಪಕ್ಷ’ ಎನ್‌ಡಿಎ ಮತ್ತು ಇಂಡಿಯಾ ಬ್ಲಾಕ್‌ಗೆ ಪರ್ಯಾಯ ಎಂದು ಬಿಂಬಿತವಾಗುತ್ತಿದೆ. ಬ್ರಾಹ್ಮಣ ಜಾತಿಯ ಪ್ರಶಾಂತ್ ಯಾವ ಬಣಕ್ಕೆ ಹೆಚ್ಚು ಹಾನಿ ಮಾಡುತ್ತಾರೋ? ಅವರ ಪ್ರಕಾರ ಅವರಿಗಿರುವುದು ಎರಡೇ ಆಯ್ಕೆ. ಅತೀ ಹೆಚ್ಚು ಅಥವಾ ಅತೀ ಕಡಿಮೆ ಸ್ಥಾನ ಪಡೆಯುವುದು. ಎಐಎಂಐಎಂ ನಡೆ ನಿಗೂಢ. ಹಾನಿ ಯಾರಿಗೆ? ಬಲ್ಲವರಾರು?







