ಸೆಪ್ಟಂಬರ್‌ಗೆ 75 ವರ್ಷ ತುಂಬುವ ನರೇಂದ್ರ ಮೋದಿ ಪ್ರಧಾನಿ ಹುದ್ದೆಯಿಂದ ಕೆಳಗಿಳಿಯುತ್ತಾರೆಯೇ?

ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ 75ರ ನಿವೃತ್ತಿ ವಯೋಮಿತಿ ಬಗ್ಗೆ ಮತ್ತೊಮ್ಮೆ ನೆನಪಿಸಿರುವುದು ಬಿಜೆಪಿಯಲ್ಲಿ ಮಹತ್ವ ಪಡೆಯುತ್ತಿದೆ. ಇತರರಿಗೆ ಅವಕಾಶಗಳನ್ನು ನೀಡಲು ಹಿರಿಯರು ಹಿಂದೆ ಸರಿಯಬೇಕೆನ್ನುವ ಅವರ ಮಾತು ಬಹಳ ದೊಡ್ಡ ಸದ್ದು ಮಾಡುತ್ತಿದೆ.
ಭಾಗವತ್ ಹೇಳಿಕೆಯನ್ನಿಟ್ಟುಕೊಂಡು ವಿಪಕ್ಷಗಳು ಮೋದಿಯವರನ್ನು ತಿವಿಯುವುದು ಕೂಡ ನಡೆದಿದೆ.
ಭಾಗವತ್ ಸ್ವತಃ ಪ್ರಧಾನಿ ನರೇಂದ್ರ ಮೋದಿಯವರಿಗಿಂತ ಆರು ದಿನ ದೊಡ್ಡವರು. ಇಬ್ಬರೂ ಈ ವರ್ಷದ ಸೆಪ್ಟಂಬರ್‌ನಲ್ಲಿ 75 ಕ್ಕೆ ಕಾಲಿಡುತ್ತಿದ್ದಾರೆ. ಭಾಗವತ್ 2009ರಲ್ಲಿ ಆರೆಸ್ಸೆಸ್ ನೇತೃತ್ವ ವಹಿಸಿಕೊಂಡರು. ಅಂದರೆ, ಸುಮಾರು 16 ವರ್ಷಗಳ ಕಾಲ ಅವರು ಸಂಘದ ಸಾರಥ್ಯ ವಹಿಸಿದಂತಾಗಿದೆ. ಹಾಗೆಯೇ, ಪ್ರಧಾನಿಯಾಗಿ ಮೋದಿ 11 ವರ್ಷಗಳಿಗೂ ಹೆಚ್ಚು ಸಮಯದಿಂದ ಅಧಿಕಾರದಲ್ಲಿದ್ದಾರೆ. ಬಿಜೆಪಿಯಲ್ಲಿ ಅಗ್ರರೂ, ಪ್ರಬಲರೂ ಆಗಿದ್ದಾರೆ.
ಮುಂದಿನ ಪೀಳಿಗೆಗೆ ದಾರಿ ಮಾಡಿಕೊಡಲು ಅವರಿಬ್ಬರೂ ತಮ್ಮ ಹುದ್ದೆಗಳನ್ನು ಬಿಡಲು ಮುಂದಾದರೆ, ಆರೆಸ್ಸೆಸ್ ಮತ್ತು ಬಿಜೆಪಿಯಲ್ಲಿ ಆ ಹೊಣೆ ಹೊರಬಲ್ಲ ಹೊಸ ನಾಯಕರು ತಯಾರಾಗಿದ್ದಾರೆಯೇ ಎಂಬ ಪ್ರಶ್ನೆಯೂ ಏಳುತ್ತದೆ.
ಈ ಹಿಂದೆ ಅಡ್ವಾಣಿ, ಮುರಳಿ ಮನೋಹರ್ ಜೋಶಿ ಮತ್ತು ಯಶವಂತ್ ಸಿನ್ಹಾ ಅವರಂಥ ಅನುಭವಿಗಳನ್ನು ವಯಸ್ಸಿನ ನೆಪದಲ್ಲಿ ರಾಜಕೀಯದಿಂದ ಬದಿಗೆ ಸರಿಸಲಾಯಿತು. ಅವರ ಜೊತೆಗೆ ಮೋದಿ-ಅಮಿತ್ ಶಾ ಜೋಡಿಗೆ ಸರಿಬರುತ್ತಿರಲಿಲ್ಲ ಎಂಬುದು ಅದರ ನಿಜವಾದ ಕಾರಣವಾಗಿತ್ತು. ಆದರೆ ಅವರ ವಿರುದ್ಧ ವಯೋಮಿತಿಯ ಅಸ್ತ್ರ ಬಳಸಿಯೇ ಹೊರಗೆ ಕಳಿಸಲಾಗಿತ್ತೆಂಬುದು ನಿಜ.
ಈಗ ಮೋದಿಯನ್ನು ಬದಲಿಸಲು ಆರೆಸ್ಸೆಸ್ ಬಯಸಿದ್ದರೆ, ಅಂಥ ಯೋಜನೆ ಅದರೆದುರು ಇದ್ದರೆ, ಅವರ ವಿರುದ್ಧವೂ ಅದೇ ವಯೋಮಿತಿ ಮಾನದಂಡವೇ ಅಸ್ತ್ರವಾಗಿ ಬಳಕೆಯಾಗುವಂತೆ ಕಾಣುತ್ತದೆ.
ಮೋದಿಯವರನ್ನು ಪ್ರಧಾನಿಯಾಗಿ ಉಳಿಸಿಕೊಳ್ಳುವುದಕ್ಕಿಂತ ತನ್ನ ಬಳಿ ಅಧಿಕಾರವನ್ನು ಬಲಪಡಿಸುವುದಕ್ಕೆ ಸಂಘ ಪರಿವಾರ ಹೆಚ್ಚು ಆದ್ಯತೆ ಕೊಡುತ್ತದೆ ಎಂಬುದು ಸ್ಪಷ್ಟ.
ಮೋದಿ ತಮ್ಮ ವರ್ಚಸ್ಸು ಮತ್ತು ನಿಯಂತ್ರಣ ಕಳೆದುಕೊಂಡಿದ್ದಾರೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ.
2024ರ ಸಂಸತ್ ಚುನಾವಣೆಯಲ್ಲಿ ಬಿಜೆಪಿ ಬಹುಮತ ಗಳಿಸುವಲ್ಲಿ ವಿಫಲವಾದದ್ದು ಮೋದಿ ಜನಪ್ರಿಯತೆ ಕುಸಿಯುತ್ತಿರುವುದಕ್ಕೆ ಅತ್ಯಂತ ಸ್ಪಷ್ಟ ಪುರಾವೆ ಮತ್ತು ಅವರು ತಮಗೆ ನಿಷ್ಠರಾಗಿರುವ ನಡ್ಡಾ ಅವರನ್ನು ಪಕ್ಷದ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಸಿರುವುದಕ್ಕೂ ಈಗ ಯಾವುದೇ ಸಮರ್ಥನೆ ಉಳಿದಿಲ್ಲ.
ಒಂದು ಆಂತರಿಕ ಅಸಮಾಧಾನ ಆರೆಸ್ಸೆಸ್ ಮತ್ತು ಮೋದಿ ನಡುವೆ ಇರುವುದು ಹೆಚ್ಚು ಸ್ಪಷ್ಟವಾಗುತ್ತಿದೆ. ಬಿಜೆಪಿ ಮೇಲೆ ಪರೋಕ್ಷವಾಗಿ ಅಮಿತ್ ಶಾ ಹಿಡಿತವೇ ಇರುವಂತೆ ಮಾಡಲು ನಡ್ಡಾ ಥರದ್ದೇ ಮತ್ತೊಬ್ಬರನ್ನು ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಮೋದಿ ಹಾಗೂ ಶಾ ತರಬಯಸಿದ್ದಾರೆ. ಅದಕ್ಕೆ ಅವಕಾಶ ಕೊಡಲು ಆರೆಸ್ಸೆಸ್ ತಯಾರಿಲ್ಲ ಎಂಬುದು ಕೂಡ ಖಚಿತವಾಗಿದೆ.
2014ರ ನಂತರ ಮೋದಿ ಸ್ವತಃ ಜಾರಿಗೆ ತಂದ 75ರ ವಯೋಮಿತಿ ಮಾನದಂಡದ ಬಗ್ಗೆ ಸಂಘ ಪರಿವಾರದಲ್ಲೇ ಗುಸುಗುಸು ಇದೆ. ಆದರೆ ಇದು ತತ್ವಕ್ಕೆ ಅಂಟಿಕೊಳ್ಳುವ ದೃಢನಿಶ್ಚಯಕ್ಕಿಂತ ಮೋದಿಯವರ ಮೇಲೆ ಒತ್ತಡ ಹೇರಲು ಒಂದು ಅಸ್ತ್ರವಾಗಿ ಬಳಕೆಯಾಗುವ ಸಾಧ್ಯತೆ ಕೂಡ ಈಗ ಹೆಚ್ಚಿದೆ. ಇಂಥ ಹೊತ್ತಲ್ಲೇ ಭಾಗವತ್ ಹೇಳಿಕೆ ಬಂದಿದೆ. ಆದರೆ, ಭಾಗವತ್ ಹೇಳಿಕೆ ಮೋದಿಯವರನ್ನೇ ಗುರಿಯಾಗಿಸಿಕೊಂಡಿದೆಯೇ ಎಂಬುದನ್ನು ಬರೀ ಊಹಿಸಬೇಕಾಗಿದೆ.
ಹಿಂದೆ ಕೂಡ, ನೇರವಾಗಿ ಮೋದಿಯವರನ್ನು ಹೆಸರಿಸದೆ, ಅವರನ್ನು ಭಾಗವತ್ ತಿವಿದಿರುವ ಹಲವು ಉದಾಹರಣೆಗಳಿವೆ.
ಬಿಜೆಪಿಯೊಳಗಿನವರು ಹೇಳುವ ಪ್ರಕಾರ, ಯಾರೂ ಮೋದಿಗೆ ಸೂಚನೆ ಕೊಡುವುದು ಸಾಧ್ಯವಿಲ್ಲ. ವಾಸ್ತವವಾಗಿ ಬಿಜೆಪಿಯ ಮೇಲೆ ಹಿಡಿತ ಹೊಂದಿರಲು ಆರೆಸ್ಸೆಸ್ ಬಯಸುತ್ತದಾದರೂ, ಅವೆರಡರ ನಡುವಿನ ಸಂಬಂಧ ಕಾಲಕಾಲಕ್ಕೆ ಭಿನ್ನ ಸ್ವರೂಪ ಪಡೆಯುತ್ತಲೇ ಬಂದಿದೆ.
ವಾಜಪೇಯಿ 1999ರಿಂದ 2004ರವರೆಗೆ ಪೂರ್ಣಾವಧಿ ಪ್ರಧಾನಿಯಾಗಿ ಸೇವೆ ಸಲ್ಲಿಸಿದಾಗಿನಿಂದ, ಬಿಜೆಪಿ ಮತ್ತು ಆರೆಸ್ಸೆಸ್ ನಡುವಿನ ಸಂಬಂಧಗಳು ಮೂಲಭೂತವಾಗಿ ಬದಲಾಗಿವೆ. ಬಿಜೆಪಿಯೇ ಆರೆಸ್ಸೆಸ್ ವಿರುದ್ಧ ತಿರುಗಿ ನಿಲ್ಲುವವರೆಗೂ ಅದು ಹೋಗಿದೆ.
ನಿತಿನ್ ಗಡ್ಕರಿ ಅವರನ್ನು ಪಕ್ಷದ ಅಧ್ಯಕ್ಷರನ್ನಾಗಿ ನೇಮಿಸುವ ಮೂಲಕ ಆರೆಸ್ಸೆಸ್ ಒಂದು ದಿಟ್ಟ ಪ್ರಯೋಗ ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗಿತ್ತು.ಆದರೆ ಅದು ಸಂಪೂರ್ಣವಾಗಿ ಯಶಸ್ವಿಯಾಗಲಿಲ್ಲ. ಗಡ್ಕರಿ ಅಧಿಕಾರಾವಧಿಯಲ್ಲಿ ಪಕ್ಷದೊಳಗೆ ದೊಡ್ಡ ಏರಿಳಿತಗಳು ಕಂಡವು. ಕಡೆಗೆ ಗಡ್ಕರಿ ಪಕ್ಷಾಧ್ಯಕ್ಷ ಹುದ್ದೆಯಿಂದ ಇಳಿದ ನಂತರ, ಬಿಜೆಪಿಯು ಆರೆಸ್ಸೆಸ್ ಲಗಾಮು ಹಿಡಿಯುವುದಕ್ಕೆ ವಿರೋಧಗಳು ಎದ್ದವು. ಆದರೆ ಆರೆಸ್ಸೆಸ್ ಮತ್ತು ಬಿಜೆಪಿ ನಡುವಿನ ಹಗ್ಗ ಜಗ್ಗಾಟ ಮುಂದುವರಿದಿದೆ ಎಂಬುದು ಮಾತ್ರ ನಿಜ.
ಬಿಜೆಪಿ ಸ್ವಾಯತ್ತತೆ ಬಯಸುತ್ತಿದೆ ಎಂಬುದು ಹೇಗೆ ನಿಜವೋ, ಬಿಜೆಪಿಯ ಹಿಂದೆ ತಾನಿರಬೇಕಾದ ಅನಿವಾರ್ಯತೆಯನ್ನು ಸಾಬೀತು ಮಾಡುವ ಯತ್ನದಲ್ಲಿ ಸಂಘವಿರುವುದೂ ನಿಜ.
ಪಕ್ಷದ ಅಧ್ಯಕ್ಷರ ಆಯ್ಕೆಗೆ ಆರೆಸ್ಸೆಸ್ ಅನುಮೋದನೆ ಪಡೆಯಬೇಕಿರುವುದು ಪ್ರತಿಕೂಲ ಪರಿಣಾಮ ಬೀರುತ್ತದೆ ಎಂದು ಬಿಜೆಪಿಗೆ ಚೆನ್ನಾಗಿ ತಿಳಿದಿದೆ.
2024ರ ಲೋಕಸಭಾ ಚುನಾವಣೆ ಹೊತ್ತಲ್ಲಿ ನಡ್ಡಾ, ಪಕ್ಷಕ್ಕೆ ಈಗ ಆರೆಸ್ಸೆಸ್ ಬೆಂಬಲದ ಅಗತ್ಯವಿಲ್ಲ ಎಂದಿದ್ದರು. ಅದು, ಅವೆರಡರ ನಡುವಿನ ಕದಡಿದ ಸಂಬಂಧಗಳಿಗೆ ಸಾಕ್ಷಿಯಂತಿತ್ತು.
ಪದ್ಧತಿಯಂತೆ, ಅಧ್ಯಕ್ಷ ಹುದ್ದೆಗೆ ಬಿಜೆಪಿ ಸಂಭಾವ್ಯ ಹೆಸರುಗಳ ಪಟ್ಟಿಯನ್ನು ಆರೆಸ್ಸೆಸ್ ಜೊತೆ ಹಂಚಿಕೊಳ್ಳುತ್ತದೆ. ಆ ಹೆಸರುಗಳು ಇಷ್ಟವಾಗದಿದ್ದಲ್ಲಿ ಆರೆಸ್ಸೆಸ್ ಇನ್ನಷ್ಟು ಹೆಸರುಗಳನ್ನು ಕೇಳಬಹುದು.
ಈಗ ಹೊಸ ಅಧ್ಯಕ್ಷರ ಆಯ್ಕೆ ವಿಚಾರವಾಗಿ ಅವೆರಡರ ನಡುವೆ ಒಮ್ಮತವಂತೂ ಇಲ್ಲ. ಹಾಗಾಗಿಯೇ, ಈಗ ಭಾಗವತ್ 75ರ ವಯೋಮಿತಿ ನೆನಪಿಸಿರಬಹುದು. ಮುಂದಿನ ಬಿಜೆಪಿ ಅಧ್ಯಕ್ಷರ ಆಯ್ಕೆಯಿಂದ ಮೋದಿ ದೂರವಿರಬೇಕೆಂಬ ಒತ್ತಡವನ್ನು ಅವರ ಮೇಲೆ ಹೇರುವ ತಂತ್ರವೂ ಆಗಿರಬಹುದು ಎನ್ನಲಾಗುತ್ತಿದೆ.
2029ರ ಚುನಾವಣೆ ನಂತರವೂ ಆಯ್ಕೆಗಳನ್ನು ಮುಕ್ತವಾಗಿಡಲು ಆರೆಸ್ಸೆಸ್ ಯೋಜಿಸಿದಂತಿದೆ. ಆ ಚುನಾವಣೆ ಪಕ್ಷದ ಹೊಸ ಅಧ್ಯಕ್ಷರ ನೇತೃತ್ವದಲ್ಲಿ ನಡೆಯಲಿದೆ.
ಈಗ ಚುನಾವಣೆ ನಡೆಯಲಿರುವ ಬಿಹಾರಕ್ಕೆ ಪ್ರಧಾನಿಯಾಗಿ ಮೋದಿ 51 ಬಾರಿ ಭೇಟಿ ನೀಡಿದ್ದಾರೆ. ಮೋದಿಗೆ 75 ತುಂಬಿದ ಎರಡು ತಿಂಗಳ ನಂತರ ಬಿಹಾರ ಚುನಾವಣೆ ನಡೆಯಲಿದೆ.
ಬಿಹಾರದ ನಂತರ, ಬಿಜೆಪಿ 2026ರಲ್ಲಿ ಅಸ್ಸಾಂ, ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ ಮತ್ತು ಅಂತಿಮವಾಗಿ 2027ರಲ್ಲಿ ಉತ್ತರ ಪ್ರದೇಶ ಮತ್ತು ಗುಜರಾತ್‌ನ ಚುನಾವಣೆಗಳಿಗೆ ಸಜ್ಜಾಗಲಿದೆ.
ಹಾಗಾದರೆ, 2029ರ ಸಾರ್ವತ್ರಿಕ ಚುನಾವಣೆ ಬಿಜೆಪಿ ಮೋದಿ ನಾಯಕತ್ವವನ್ನೇ ಅವಲಂಬಿಸುತ್ತದೆಯೆ? ಆದರೆ, ವಯಸ್ಸನ್ನು ಬದಿಗಿಟ್ಟರೂ ಮೋದಿ ಹೆಚ್ಚು ವಿಫಲ ನಾಯಕರಂತೆ ಕಾಣಿಸುತ್ತಿರುವ ಸನ್ನಿವೇಶ ಕೂಡ ಇದೆ.
ಒಂದು ಕಾಲದ ಮೋದಿಯವರ ಮಾತುಗಳು, ಹಲವು ಬಾರಿ ಬಳಸಿ ಬಳಸಿ ಸವಕಲಾಗಿರುವ ಅವರ ತಂತ್ರಗಳು ಈಗ ತಮ್ಮ ಹೊಳಪು, ಹರಿತ ಎರಡನ್ನೂ ಕಳೆದುಕೊಂಡಂತಿವೆ. ಉದ್ಯೋಗಗಳನ್ನು ಸೃಷ್ಟಿಸುವಲ್ಲಿ, ಬೆಲೆಗಳನ್ನು ನಿಯಂತ್ರಿಸುವಲ್ಲಿ, ಕಪ್ಪು ಹಣ ಮರಳಿ ತರುವಲ್ಲಿ ಮತ್ತು ಮಹಿಳೆಯರಿಗೆ ಸುರಕ್ಷಿತ ಸಾಮಾಜಿಕ ವಾತಾವರಣ ಒದಗಿಸುವಲ್ಲಿ ಮೋದಿ ಸಂಪೂರ್ಣ ವಿಫಲರಾಗಿರುವುದು ಎದ್ದು ಕಾಣಿಸಿದೆ. ಈ ಹಿನ್ನೆಲೆಯಲ್ಲಿ, ಅವರ 2047ರ ವಿಕಸಿತ ಭಾರತದ ಭರವಸೆ ದೊಡ್ಡ ಬೋಗಸ್ ಎಂಬಂತೆ ಕಾಣುತ್ತದೆ. ಸಿಬಿಐ ಮತ್ತು ಈ.ಡಿ.ಯಂಥ ತನಿಖಾ ಏಜೆನ್ಸಿಗಳ ಸ್ಪಷ್ಟ ದುರುಪಯೋಗ ಕಾಣಿಸಿದೆ. ಅವುಗಳನ್ನು ರಾಜಕೀಯ ಬೇಟೆಗಾಗಿ ಬಳಸುವ ಕುರಿತ ಆರೋಪಗಳಿಗೆ ಮತ್ತೆ ಮತ್ತೆ ಪುಷ್ಟಿ ಸಿಗುವಂಥ ವಿದ್ಯಮಾನಗಳು ನಡೆದಿವೆ.
ನ್ಯಾಯಾಂಗ, ಚುನಾವಣಾ ಆಯೋಗ ಮತ್ತು ಮಾಧ್ಯಮಗಳ ದಯನೀಯ ಸ್ಥಿತಿ ಕೂಡ ಪ್ರಜಾಪ್ರಭುತ್ವದ ಕತ್ತು ಹಿಸುಕಲಾಗುತ್ತಿರುವ ಕುರಿತ ಆರೋಪಗಳಲ್ಲಿ ನಿಜವಿದೆ ಎನ್ನಿಸಲು ಕಾರಣವಾಗಿದೆ.
ಮೋದಿ ತಮ್ಮ ಸುತ್ತಲಿನ ಶಾ, ಅಜಿತ್ ಧೋವಲ್, ಜೈಶಂಕರ್ ಮತ್ತು ನಿರ್ಮಲಾ ಸೀತಾರಾಮನ್ ಅವರಂಥ ಸಣ್ಣ ಗುಂಪಿನ ಮೇಲೆ ಅವಲಂಬಿತರಾಗಿರುವುದರಿಂದ ಆಡಳಿತ ದುರ್ಬಲವಾಗಿದೆ ಎಂಬ ವಾದಗಳೆದ್ದಿವೆ.
ರಾಜ್ಯಗಳಲ್ಲಿಯೂ ಪ್ರಾದೇಶಿಕ ನಾಯಕತ್ವವನ್ನು ಕಡೆಗಣಿಸಿ, ತಮ್ಮ ಪ್ರಭಾವ ಬೀರತೊಡಗಿದ್ದರಿಂದ ಆಂತರಿಕ ಅಸಮಾಧಾನ ಹೆಚ್ಚಿದೆ. ಆದರೆ ಅವರು ಈಗಲೂ ಭಿನ್ನ ಧ್ವನಿಗಳನ್ನು ನಿಗ್ರಹಿಸುವಲ್ಲಿ ಮತ್ತು ಪ್ರಶ್ನಿಸಲಾರದ ಸ್ಥಿತಿಯನ್ನು ಉಂಟುಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ತಾವು ವಿದೇಶದಲ್ಲಿ ಬಹಳ ಗೌರವಾನ್ವಿತರೆಂಬ ಭ್ರಮೆಯನ್ನು ಹರಡುವಲ್ಲಿಯೂ ಅವರು ಯಶಸ್ವಿಯಾಗಿದ್ದರು.
ಆದರೆ, ಟ್ರಂಪ್ ಕಾಲದಲ್ಲಿ ಅದೆಲ್ಲದಕ್ಕೂ ದೊಡ್ಡ ಹೊಡೆತ ಬಿದ್ದಿದೆ. ಟ್ರಂಪ್, ಭಾರತೀಯರನ್ನು ಸರಪಳಿಯಲ್ಲಿ ಕಟ್ಟಿ, ಅವಮಾನಿಸಿ ಮಿಲಿಟರಿ ವಿಮಾನಗಳಲ್ಲಿ ವಾಪಸ್ ಕಳಿಸಿದಾಗ, ಮೋದಿಯವರ ‘ವಿಶ್ವಗುರು’ ಮಿಥ್‌ಗೆ ಬಲವಾದ ಪೆಟ್ಟು ಬೀಳುವಂತಾಯಿತು. ಟ್ರಂಪ್ ಭಾರತದ ಮೇಲೆ ಸುಂಕದ ಅಸ್ತ್ರ ಬಳಸಿದಾಗಲೂ ಮೋದಿ ಸರಕಾರ ಮೌನವಾಗಿದ್ದುದು ಅದರ ದೌರ್ಬಲ್ಯವನ್ನು ದೊಡ್ಡದಾಗಿ ತೋರಿಸಿತು.
ಮೋದಿ ವಿದೇಶಾಂಗ ನೀತಿಯ ದೌರ್ಬಲ್ಯ ಇಷ್ಟಕ್ಕೇ ನಿಲ್ಲುವುದಿಲ್ಲ. ಅವರು ಚೀನಾದ ಹೆಸರೆತ್ತುವುದಕ್ಕೂ ಹೆದರುತ್ತಾರೆ ಎಂಬ ಆರೋಪಗಳಿವೆ.ಗಾಝಾದಲ್ಲಿ ಇಸ್ರೇಲ್ ನರಮೇಧದ ವಿರುದ್ಧ ಮಾತಾಡದೆ ಇರುವ ಮೂಲಕ ಭಾರತದ ಪ್ರತಿಷ್ಠೆ ಹಾಳು ಮಾಡಿದರು ಎಂಬ ಕಳಂಕವೂ ಮೆತ್ತಿಕೊಂಡಿದೆ.
ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಪಾಕಿಸ್ತಾನ ಭಾಗಿಯಾಗಿದೆ ಎಂಬ ಭಾರತದ ಹೇಳಿಕೆಯನ್ನು ಯಾವುದೇ ದೇಶ ಒಪ್ಪದಿದ್ದಾಗ ಮೋದಿ ವಿದೇಶಾಂಗ ನೀತಿ ಇನ್ನಷ್ಟು ದುರ್ಬಲವಾಗಿ ಕಂಡಿತು. ಭಾರತ ಮತ್ತು ಪಾಕಿಸ್ತಾನದ ನಡುವೆ ಕದನ ವಿರಾಮಕ್ಕೆ ತಾನು ಕಾರಣ ಎಂದು ಟ್ರಂಪ್ ಪದೇ ಪದೇ ಹೇಳುವ ಮೂಲಕ ಈ ಅವಮಾನವನ್ನು ಇನ್ನೂ ಹೆಚ್ಚಿಸಿದರು. ಆದರೆ ಟ್ರಂಪ್ ಸುಳ್ಳು ಹೇಳುತ್ತಿದ್ದಾರೆ ಎಂದು ಬಹಿರಂಗವಾಗಿ ಹೇಳುವ ಧೈರ್ಯವನ್ನು ಮೋದಿ ತೋರಿಸದೆ ಹೋದರು.
ಅಮೆರಿಕದಲ್ಲಿ ಅದಾನಿ ಗ್ರೂಪ್ ವಿರುದ್ಧ ಕಾನೂನು ಅಸ್ತ್ರ ಪ್ರಯೋಗಿಸಲಾಗುತ್ತಿರುವುದು ಮೋದಿ ಕೈಗಳನ್ನು ಕಟ್ಟಿಹಾಕಿವೆ ಎಂಬ ಊಹಾಪೋಹ ಕೂಡ ಎದ್ದಿದೆ.
ಹೀಗೆ ವಿಶ್ವಗುರು ಎಂದು ಭ್ರಮೆ ಸೃಷ್ಟಿಸಿದ್ದವರ ಅಸಲಿಯತ್ತು ಬಯಲಾಗಿರುವ ಹೊತ್ತಲ್ಲಿಯೇ ಆರೆಸ್ಸೆಸ್ ತನ್ನ ಹಿಡಿತವನ್ನು ಮತ್ತೊಮ್ಮೆ ಬಿಜೆಪಿ ಮೇಲೆ ಸಾಧಿಸಲು ಹೊರಟಂತಿದೆ.
ಮೋದಿಯವರ ಇಮೇಜ್ ಈಗ ದುರಸ್ತಿಯಾಗದ ಹಂತದಲ್ಲಿರುವುದು ಕೂಡ ಆರೆಸ್ಸೆಸ್ ಪ್ರಾಬಲ್ಯಕ್ಕೆ ಅವಕಾಶವಾಗುವ ಸಾಧ್ಯತೆಯನ್ನು ತೋರಿಸುತ್ತಿದೆ.
ಮೋದಿಯವರನ್ನು ತೆಗೆದುಹಾಕಬೇಕಾದರೆ ಅದಕ್ಕೆ ಹಲವಾರು ಕಾರಣಗಳಿವೆ. ಮೋದಿ ತಮ್ಮ ಭರವಸೆಗಳನ್ನು ಈಡೇರಿಸುವಲ್ಲಿ ವಿಫಲರಾಗಿದ್ದಾರೆ. ಜಾಗತಿಕ ಸಮುದಾಯದಲ್ಲಿ ಮೋದಿ ಭಾರತದ ಪ್ರತಿಷ್ಠೆಗೆ ಹಾನಿ ಉಂಟುಮಾಡಿದ್ದಾರೆ. ಹೀಗೆ ಹಲವಾರು ಕಾರಣಗಳನ್ನು ಅದು ಮೋದಿ ವಿರುದ್ಧವಾಗಿ ಮುಂದಿಡಬಹುದು. ಹಾಗಾಗಿ ಇಲ್ಲಿ ವಯಸ್ಸಿನ ಕಾರಣ ಎಂಬುದು ಒಂದು ನೆಪ ಮಾತ್ರ.
ಅವರಿಗೆ ವಯಸ್ಸಾಯಿತು ಎಂದು ಹಿಂದಕ್ಕೆ ಕಳಿಸುವುದಾದರೆ, ಅವರಿಗಿಂತ ಕಿರಿಯರಾದ ಅಮಿತ್ ಶಾ, ಅನುರಾಗ್ ಠಾಕೂರ್ ಉತ್ತಮ ಪ್ರಧಾನಿಯಾಗುತ್ತಾರೆಯೇ? ಹಾಗಾಗಿ ಕಾರಣ ವಯಸ್ಸು ಖಂಡಿತ ಅಲ್ಲ.
ಬದಲಾಗಿ ಅಸಮರ್ಥತೆ ಮತ್ತು ವೈಫಲ್ಯವೇ ಮುಖ್ಯ ಕಾರಣಗಳು.
ಮೋದಿ ಅಂತರ್‌ರಾಷ್ಟ್ರೀಯವಾಗಿ ಮತ್ತು ಕಾರ್ಪೊರೇಟ್ ಮಟ್ಟದಲ್ಲಿ ಇನ್ನೂ ವಿಶ್ವಗುರು ಮಿಥ್ ಉಳಿಸಿಕೊಂಡಿದ್ದರೆ, ಅವರ ಪದಚ್ಯುತಿ ಕುರಿತ ಗುಸುಗುಸು ಏಳಲು ಅವಕಾಶವೇ ಇರುತ್ತಿರಲಿಲ್ಲ. ಆದರೆ ಅದರಲ್ಲಿ ಅವರು ಸಂಪೂರ್ಣ ವಿಫಲರಾಗಿದ್ದಾರೆ.
ಹಾಗಾಗಿಯೇ ಈ ಸಂದರ್ಭವನ್ನು ಬಳಸಿಕೊಂಡು, ವಯೋಮಿತಿಯ ಅಸ್ತ್ರವನ್ನು ತೋರಿಸುತ್ತ, ಅವರ ವೈಫಲ್ಯದ ಕಾರಣಕ್ಕಾಗಿ ಕೆಳಗಿಳಿಸುವ ಲೆಕ್ಕಾಚಾರವನ್ನು ಮೋದಿ ವಿರುದ್ಧ ಆರೆಸ್ಸೆಸ್ ಮಾಡುತ್ತಿರುವ ಹಾಗಿದೆ.







